ಓ ಎಲ್ ಎನ್ ಓದಿದ ‘ಮತ್ತೆ ಮತ್ತೆ ಮರ್ತ್ಯಕ್ಕಿಳಿಯುತ್ತೇನೆ’

ಭುವನಾ ಹಿರೇಮಠ ಅವರ ಹೊಸ ಕವನ ಸಂಕಲನ – ಮತ್ತೆ ಮತ್ತೆ ಮರ್ತ್ಯಕ್ಕಿಳಿಯುತ್ತೇನೆ

ಈ ಕೃತಿಗೆ ಖ್ಯಾತ ವಿಮರ್ಶಕರಾದ ಓ ಎಲ್ ನಾಗಭೂಷಣಸ್ವಾಮಿ ಅವರುಬರೆದ ಮುನ್ನುಡಿ ಇಲ್ಲಿದೆ-

ಓ ಎಲ್ ನಾಗಭೂಷಣ ಸ್ವಾಮಿ

ನನಗೆ ವಯಸ್ಸಾಗುತ್ತಿರುವ ಕಾರಣಕ್ಕೇ ಇರಬೇಕು, ಕನ್ನಡ ಕವಿತೆ ದಣಿದಿದೆ ಅನಿಸುತ್ತದೆ. ನೋಡುವುದಕ್ಕೆ ಪದ್ಯದ ಹಾಗೆ ಕಾಣುವ ಆದರೆ ಕವಿತೆಯ ಸ್ಪರ್ಶವಿರದ ಬರವಣಿಗೆಯೇ ಹೆಚ್ಚಾಗಿ ಕಾಣುತ್ತದೆ. ನಿತ್ಯವೂ ಎದುರಾಗರುವ ನೂರಾರು ಶುಷ್ಕ ಬರವಣಿಗೆಯಲ್ಲಿ ಜೀವಂತವಾದದ್ದು ತಪ್ಪಿ ಹೋಗುವ ಸಂದರ್ಭವೇ ಹೆಚ್ಚು. ನಿಲುವನ್ನು ತಾಳುವುದು, ಹೇಳುವುದು, ವಾದಮಾಡುವುದು ಇವೆಲ್ಲ ಕವಿತೆಯಲ್ಲ ಅನ್ನುವುದು ನನ್ನ ರುಚಿ. ನಾವು ನೀವು ಎಲ್ಲರೂ ಬದುಕುವ ಲೋಕವನ್ನು ಒಂದಿಷ್ಟು ಹೊಸ ಕೋನದಿಂದ ನೋಡುವ ಹಾಗೆ ಮಾಡಬೇಕು ಕವಿತೆ.

ಭುವನಾ ಅವರ ಎರಡನೆಯ ಸಂಕಲನದ ಕವಿತೆಗಳನ್ನು ಓದುತ್ತ ಹೊಸ ತಲೆಮಾರಿನ ಕವಿಗಳಲ್ಲಿ ಇವರೊಬ್ಬರು ಗಮನಿಸಬೇಕಾದ ಕವಿ ಅನ್ನಿಸಿತು. ಅವರ ‘ಟ್ರಯಲ್ ರೂಮಿನ ಅಪ್ಸರೆಯರು’ ಸಂಕಲನದ ರಚನೆಗಳನ್ನು ನೋಡಿದಾಗ ಮೂಡಿದ್ದ ಭರವಸೆ ಈ ಸಂಕಲನದ ಕವಿತೆಗಳಲ್ಲಿ ನಿಜವಾಗುತ್ತಿರುವುದು ಕಾಣುತ್ತದೆ. ಮುಖ್ಯವಾಗಿ ಆ ಮೊದಲ ಸಂಕಲನದಲ್ಲಿ ಬರವಣಿಗೆಯ ಉತ್ಸಾಹದ್ದು ಮೇಲುಗೈಯಾಗಿತ್ತು, ಈ ಸಂಕಲನದ ರಚನೆಗಳಲ್ಲಿ ಬರವಣಿಗೆಯ ಕೌಶಲಕ್ಕೆ ಗಮನ ಸಲ್ಲುತ್ತಿರುವುದು ತಿಳಿಯುತ್ತದೆ.

ಆ ಸಂಕಲನದಲ್ಲಿ ಅಸ್ಪಷ್ಟವೆನಿಸುವಂಥ ಹಲವು ರಚನೆಗಳಿದ್ದವು. ಏನು ಹೇಳಬೇಕೆಂದು ಕವಿಗೆ ತಿಳಿದಿದ್ದರೂ ಅದು ಓದುಗರಿಗೆ ಅಸ್ಪಷ್ಟವಾಗಿಯೇ ಉಳಿಯುವಂಥ ಬರವಣಿಗೆ ಅದರಲ್ಲಿದ್ದವು. ಹೇಳಬೇಕಾದ ಮಾತಿಗೆ ಇನ್ನೂ ಯಾವ ಯಾವ ರೂಪಕೊಡಬಹುದು ಅನ್ನುವ ಹುಡುಕಾಟದಲ್ಲಿ ಕವಿಗಳು ತೊಡಗದೆ ಇರುವಾಗ ಇಂಥ ರಚನೆಗಳು ಮೂಡುತ್ತವೆ. ಕವಿತೆಯಲ್ಲಿ ಅತಿ ಸ್ಪಷ್ಟತೆ ಅಸ್ಪಷ್ಟತೆ ಎರಡೂ ದೋಷಗಳೇ ಆಗುತ್ತವೆ ಎಂದು ಕುವೆಂಪು ಹೇಳಿದ್ದ ಮಾತು ನೆನಪಾಗುತ್ತಿದೆ.

ಈ ಸಂಕಲದನ ಕವಿತೆಗಳಲ್ಲಿ ಭುವನಾ ಅವರು ತಮ್ಮ ಉಕ್ತಿಗೆ ವೈವಿಧ್ಯವನ್ನು ತರಲು ಪ್ರಯತ್ನಿಸಿರುವುದು ಕಾಣುತ್ತದೆ. ಕವಿತೆಯ ದನಿಯಲ್ಲೂ ಸೂಕ್ಷ್ಮವಾದ ಪಲುಕು ತರುವುದಕ್ಕೆ ಗಮನ ಕೊಟ್ಟಿದ್ದಾರೆ. ಆಯ್ದುಕೊಂಡ ವಿಷಯವನ್ನು ಹಲವು ರಚನೆಗಳಲ್ಲಿ ಬೇರೆ ಬೇರೆ ಕೋನಗಳಿಂದ ನೋಡುವ, ಒಂದೇ ಭಾವದ ಬೇರೆ ಬೇರೆ ಛಾಯೆಗಳನ್ನು ಪರಿಶೀಲಿಸುವ ತಾಳ್ಮೆಯೂ ಇಲ್ಲಿ ನನಗೆ ಕಂಡಿತು. ಹಾಗೆಯೇ ಹೇಳಬೇಕಾದ ಸಂಗತಿಗೆ ಬೇರೆ ಬೇರೆಯ ರೂಪಗಳನ್ನು ಕೊಟ್ಟು ನೋಡುವ ಪ್ರಯೋಗವೂ ನಡೆದಿದೆ. ಅಂದರೆ, ಭುವನಾ ಅವರ ಈ ಎರಡನೆಯ ಸಂಕಲನದಿಂದ ಅವರು ಕವಿತೆಯನ್ನು ತಮ್ಮ ‘ಭಾಷೆ’ಯಾಗಿ ಮಾಡಿಕೊಳ್ಳುವುದರಲ್ಲಿ ಮಗ್ನರಾಗಿರುವುದು ತಿಳಿಯುತ್ತದೆ, ಅವರ ಮುಂದಿನ ರಚನೆಗಳ ಬಗ್ಗೆ ನಿರೀಕ್ಷೆ ಮೂಡುತ್ತದೆ.

ಸಂಕಲನವೋದರ ಕವಿತೆಗಳನ್ನು ಓದುಗರು ತಮಗೆ ಇಷ್ಟ ಬಂದ ಕ್ರಮದಲ್ಲಿ ಓದುತ್ತಾರೆ ಅನ್ನುವುದು ನಿಜ. ಹಾಗಿದ್ದರೂ ಕವಿಯೇ ಕವಿತೆಗಳನ್ನು ಜೋಡಿಸುವಾಗ ಯಾವುದೋ ವಿನ್ಯಾಸ ಕವಿ ಮನಸಿನಲ್ಲಿ ಇದ್ದೀತು. ಹಾಗೆ ಈ ಸಂಕಲನದ ಮೊದಲ ಮತ್ತು ಕೊನೆಯ ರಚನೆಗಳು ರೂಪದ ದೃಷ್ಟಿಯಿಂದ ಮಿಕ್ಕೆಲ್ಲ ಕವಿತೆಗಳಿಗೆ ಚೌಕಟ್ಟು ಹಾಕಿಟ್ಟ ಹಾಗೆ ತೋರುತ್ತದೆ. ಸಕಲ ಸಂಪತ್ತುಗಳು ನಿಶ್ಚಯವಿದೆಂದು ಎಂಬ ಹೆಸರಿನ ಮೊದಲ ರಚನೆ ಮತ್ತು ತತ್ರಾಣಿ ಎಂಬ ಕೊನೆಯ ರಚನೆಗಳನ್ನು ನೋಡಿ. ಮೊದಲ ಕವಿತೆಯ ಆರಂಭದ ಸಾಲು ನನ್ನ ಮನಸಿಗೆ ನಿಜಗುಣ ಶಿವಯೋಗಿಯ ರಚನೆಯನ್ನು ನೆನಪಿಗೆ ತಂದಿತ್ತು. ತತ್ರಾಣಿ ಒಂದು ಥರದಲ್ಲಿ ತತ್ವಪದದ ನೆರಳಿನಲ್ಲಿ ಸಾಗುವ ರಚನೆ.

ಈ ಎರಡರಲ್ಲೂ ಇರುವುದು ಬಿರುಕಿನ ಅನುಭವ. ಸಕಲ ಸಂಪತ್ತುಗಳು ನಿಶ್ಚಯ ಅನ್ನುವ ಮಾತನ್ನು ಹೇಳಿ ಹೇಳಿ, ಕೇಳಿ ಕೇಳಿ ಪವಿತ್ರತೆ ವೈರಾಗ್ಯ ಭಕ್ತಿ ಇತ್ಯಾದಿಗಳು ‘ನಿಶ್ಚಯ’ವೆಂಬ ಕಲ್ಪನೆ ಮೂಡಿದ್ದಕ್ಕೂ ವೈರಾಗ್ಯವು ಈಗ ‘ಹುರಿಗಟ್ಟೆ’ಯನ್ನೂ ದಾಟದಿರುವ, ವೈರಾಗ್ಯವೇ ನೀರಗುಳ್ಳೆಯಾಗಿರುವ ವಾಸ್ತವಕ್ಕೂ ಇರುವ ಬಿರುಕು ಕವಿಯ ಗಮನಕ್ಕೆ ಬಂದಿದೆ. ‘ತತ್ರಾಣಿ’ಯಲ್ಲಿ ‘ನೂರು ತೂತಿನ ಕೊಡ’ದ ರೂಪಕವಿದೆ, ತತ್ರಾಣಿ ಒಡೆದು ನೀರೆಲ್ಲ ಚೆಲ್ಲಾಡಿ ಹೋಗುವ ಮೊದಲು ‘ನಿನ್ನೊಳಗಿನ ಪರಿಧಿಯ ಕೇಂದ್ರದೊಳಗೆ’ ಕೂಡಿಟ್ಟುಕೋ ಅನ್ನುವ ಎಚ್ಚರಿಕೆ ಇದೆ. ಕವಿತೆಯೆಂಬುದು ಹಾಗೆ ವಿಚಾರಗಳನ್ನು, ವಿಚಾರಗಳಿಗಿಂತ ಮಿಗಿಲಾಗಿ ಭಾವ ತೀವ್ರತೆಯ ಕ್ಷಣಗಳನ್ನು ಕಾಪಾಡಿ ಕೂಡಿಟ್ಟುಕೊಂಡದ್ದರ ದಾಖಲೆಗಳಾಗಿ ಉಳಿಯುತ್ತವೆ. ಭಾವಗಳೆಂಬ ನೀರ ಬೊಬ್ಬುಳಿಗೆ ಮಾತಿನ ಕಟ್ಟು!

ಕವಿತೆಯೆಂಬುದು ‘ಇದು ಈ ಕವಿಗೆ ವಿಶಿಷ್ಟ’ವಾದ ರಚನೆ ಅಂತಲೂ ಅನಿಸುತ್ತಿರಬೇಕು ಪ್ರತಿ ಓದುಗರೂ ‘ಇದು ನಮ್ಮ ಮನಸಿನದೇ ಭಾವಕ್ಕೆ ದೊರೆತಿರುವ ನುಡಿ ರೂಪ’ ಅನ್ನುವ ಹಾಗೂ ಇರಬೇಕು. ಅಂಥ ರಚನೆಗಳು ತೀರ ಅಪರೂಪ. ಜಾನಪದದ ರಚನೆಗಳಲ್ಲಿ ಪ್ರಾಚೀನ ಚೀನದ, ಸಂಗ ಯುಗದ ತಮಿಳು ರಚನೆಗಳಲ್ಲಿ ಅಂಥವು ಕಂಡಾವು. ಆಧುನಿಕತೆಯ ಒತ್ತಡದಲ್ಲಿ ರೂಪುಗೊಂಡ ಕವಿ ಮನಸ್ಸು ಲೋಕಕ್ಕೆ ತೋರುವ ಪ್ರತಿಕ್ರಿಯೆಯನ್ನು ಹಾಗೆ ಎಲ್ಲರಿಗೂ ಸಲ್ಲುವ ಹಾಗೆ ಹೇಳುವುದು ಬಲು ಕಷ್ಟವಾಗುತ್ತದೆ. ಹಾಗಾಗಿ ಅನಿಸಿದ್ದಕ್ಕೂ ಹೇಳುವುದಕ್ಕೂ, ಕವಿತೆಯ ರೂಪಕ್ಕೂ ಕವಿತೆಯ ಆಶಯಕ್ಕೂ, ಕವಿ ತಾಳುವ ನಿಲುವಿಗೂ ಕವಿತೆ ಕಟ್ಟಿಕೊಡುವ ವಾಸ್ತವಕ್ಕೂ ಬಿರುಕುಗಳು ಮೂಡುತ್ತವೆ. ಅಂಥ ಬಿರುಕನ್ನೇ ಶೋಧಿಸುವುದು ಕೂಡ ಕವಿಯ ಕೆಲಸ. ಭುವನಾ ಅವರು ಈ ಸಂಕಲನದಲ್ಲಿ ಅಂಥ ಪ್ರಯೋಗಕ್ಕೆ ಕೈ ಹಾಕಿದ್ದಾರೆ ಅನಿಸುತ್ತದೆ.

ತತ್ವಪದದಂಥ, ಜಾನಪದದ ಅಂಶಗಳ ನೆರಳು ಇರುವಂಥ ರೂಪದ ಹಲವು ರಚನೆಗಳು ಈ ಸಂಕಲನದಲ್ಲಿವೆ. ಅಂಥ ಎರಡು ರಚನೆಗಳನ್ನು ಮೇಲೆ ಉದಾಹರಿಸಿದ್ದೇನೆ. ಅವಲ್ಲದೆ ಈ ಸಂಕಲನದ ಮೊದಲ ಹತ್ತು ರಚನೆಗಳು ಪಾರಂಪರಿಕವೆನ್ನಬಹುದಾದ ರೂಪ ಮತ್ತು ಆಧುನಿಕವೆನ್ನಬಹುದಾದ ಸಂವೇದನೆಗಳ ಮಿಶ್ರಣದ ಪ್ರಯೋಗಗಳಾಗಿ ಕಾಣುತ್ತವೆ. ಹಾಗೆಯೇ ದೇವರು, ಹೆಣ್ಣಿನ ಸ್ಥಿತಿ, ಗಂಡು ಹೆಣ್ಣುಗಳ ಆಪ್ತಲೋಕ, ಸಹಿಸಲು ಆಗದು ಅನಿಸುವ ವಾಸ್ತವಲೋಕ, ಸಾವು, ಕಾಮ, ಸ್ವಪ್ನಸ್ಥಿತಿ ಈ ವಿಷಯ ವಸ್ತುಗಳು, ಸಂಕಲನದಲ್ಲಿ ಮತ್ತೆ ಶೋಧನೆಗೆ ಒಳಪಡುವಂಥವುಗಳ ಹಕ್ಕಿ ನೋಟವೂ ಈ ಹತ್ತು ರಚನೆಗಳಲ್ಲಿ ಓದುಗರಿಗೆ ದೊರೆಯುತ್ತದೆ. ಸರಳಗೊಳಿಸಿ ಹೇಳಬಹುದಾದ ಮಾತೆಂದರೆ ಆಪ್ತಲೋಕ, ವಾಸ್ತವಲೋಕ, ಸ್ವಪ್ನಸ್ಥಿತಿ, ಸಾವು ಮತ್ತು ಕಾಮ, ದೇವರು ಇವು ಈ ಸಂಕಲನದ ರಚನೆಗಳಲ್ಲಿ ಮತ್ತೆ ಮತ್ತೆ ಶೋಧಕ್ಕೆ ಒಳಗಾಗುತ್ತವೆ. ಅದೇ ಕಾರಣಕ್ಕೆ ಭುವನಾ ಅವರ ಕಾವ್ಯಾಸಕ್ತಿ ಗಹನವಾದದ್ದು ಅನಿಸುತ್ತದೆ.

‘ಸಕಲ ಸಂಪತ್ತು…’ ಕವಿತೆ ತೋರಿಕೆಗೆ ತತ್ವಪದದ ಹಾಗಿದ್ದರೂ ‘ಸಂಪತ್ತು ಅಪ್ಪುದು ಊರಂತೆ’ ಅನ್ನುವ ಮಾತು ಬರಿಯ ಮಾತಾಗಿ ಉಳಿದ ಆದರ್ಶಗಳ ಅದಕ್ಕಿಂತ ತೀರ ಬೇರೆಯದೇ ಆದ ಲೋಕದ ಚಿತ್ರಗಳ ವೈರುಧ್ಯವನ್ನು ಬಿಡಿಸುತ್ತದೆ. ಇದು ಮುಂದುವರೆದು ‘ಕತ್ತಲೆ ಕನ್ನಡಿ’ಯಲ್ಲಿ ನಾನು ಮತ್ತು ನೀನು ಅದಲು ಬದಲಾಗುವ ಅರ್ಧ ಸ್ವಪ್ನ, ಅರ್ಧ ಎಚ್ಚರದ ಸ್ಥಿತಿಯ ಚಿತ್ರಣವಿದೆ.

‘ಎರಡೆರಡು ಗೋರಿಗಳಲ್ಲಿ’ ಪ್ರತ್ಯೇಕ ನೈವೇದ್ಯಕ್ಕಾಗಿ ಹಟ ಹಿಡಿಯುವ ದೇವತೆಗಳಾಗಿಬಿಟ್ಟಿರುವ ಆಪ್ತ ಜೀವಗಳ ಚಿತ್ರಣ ಇಂಗ್ಲಿಶ್ ಕವಿ ಜಾನ್ ಡನ್ ಕವಿತೆಯ ರೀತಿಯನ್ನು ನೆನಪಿಸಿತು. ಎಷ್ಟೇ ಆಪ್ತಜೀವವಾದರೂ ಶಾಶ್ವತವಾಗಿ ಅಗಲಲೇಬೇಕಾದ ಸತ್ಯ ಒಂದಿಷ್ಟೆ ಲಘುವಾದ ದಾಟಿಯಲ್ಲಿ ಮೈತಳೆಯುತ್ತದೆ. ‘ಅನುದಿನದ ಮೊಹರಮ್’ನ ಚಿತ್ರಕಶಕ್ತಿ ಇಷ್ಟವಾಯಿತು. ಅಂಥ ಸಶಕ್ತ ಚಿತ್ರ ಇರುವುದರಿಂದಲೇ ‘ದೇವರು ಮನುಷ್ಯನಾಗಲಾರ’ ಅನ್ನುವ ತೀರ್ಮಾನ ಹೌದು ಅನಿಸಿಬಿಡುತ್ತದೆ.

ಧರ್ಮ ಅರ್ಥ ಕಾಮ ಮೋಕ್ಷಕ್ಕೆ: ಅರ್ಧ ಸ್ವಪ್ನ ಸ್ಥಿತಿ: ತಳಮಳ ಮನಸ್ಸು ಮುಟ್ಟುತ್ತದೆ. ಸ್ಟೇಷನ್ನಿನಲ್ಲಿ ಮಲಗಿರುವ ಯಾತ್ರಿಕರ ಕನಸು ಎದ್ದು ನಡೆಯುವ ಚಿತ್ರ ಇಷ್ಟವಾಯಿತು. ಕರೋನ ಕಾಲದ ದುಡಿವ ಜನರ ನಡಿಗೆ ನೆನಪಾಗುತ್ತದೆ. ‘ಅರ್ಥ ಕಾಮ ಮೋಕ್ಷ…’ ರಚನೆಯಲ್ಲಿ ರೇಲ್ವೆ ನಿಲ್ದಾಣದ ಪಡಸಾಲೆಯಲ್ಲಿ ಅಡ್ಡಾದಿಡ್ಡಿ ನಿದ್ದೆ ಹೋದ ಯಾತ್ರಿಕರ ಹಿಂಡಿನಲ್ಲಿ ಎದ್ದು ನಡೆದು ಹೋಗುವ ಕನಸಿನ ಚಿತ್ರವೂ ಅರ್ಧಸ್ವಪ್ನ ಸ್ಥಿತಿಯದು. ತೀರ ಇತ್ತೀಚೆಗೆ ಕಂಡು ಆಘಾತಪಟ್ಟ ಹಾಗೆ ಎಲ್ಲರೂ ನಟಿಸಿ ಮರೆತೇ ಹೋದ ಗುಳೆ ಎದ್ದು ಸಾವಿರಾರು ಕಿಲೋಮೀಟರ್ ನಡೆದ ಬಡಕೂಲಿಕಾರರ ಚಿತ್ರ ಮನಸಿಗೆ ಬರುತ್ತದೆ.

ವಾಸ್ತವದ ಚಿತ್ರ ಇದು ಅನ್ನುವುದು ಓದುಗರಿಗೆ ಹೊಳೆಯಬೇಕೇ ಹೊರತು ಇಂದಿನ ಬಹಳಷ್ಟು ಕವಿತೆಗಳ ಹಾಗೆ ಈ ರಚನೆ ವರದಿ ಮಾಡುವುದಿಲ್ಲ, ಬದಲಾಗಿ ಮನಸಲ್ಲಿ ಉಳಿಯುವ ಚಿತ್ರವನ್ನು ರೂಪಿಸಿದೆ. ‘ಸೋಲ್ ಮೇಟ್’ ಬರವಣಿಗೆಯಲ್ಲಿ ಮಾತು ಹೆಚ್ಚಾಯಿತು, ಬಿಗಿ ಕಡಮೆಯಾಯಿತು ಅನಿಸಿತು ನನಗೆ. ಸೋಲ್ ಮೇಟ್ ಎಂಬ ಇಂಗ್ಲಿಶ್ ಪದ ಹೊಳೆಯಿಸುವ ವ್ಯಂಗ್ಯ ಇನ್ನಷ್ಟ್ಟು ಮೊನಚಾಗಿ ಮೂಡಬೇಕಾಗಿತ್ತು ಅನಿಸಿತು. ಆತ್ಮವೂ ಕೂಡ ಪ್ರತಿ ಕ್ಷಣವೂ ರೂಪತಳೆದು ಆಕಾರ ಪಡೆಯುತ್ತಿರುತ್ತದೆಯೇ ಹೊರತು ಅದು ಸ್ಥಿರವಾದ ನಿರ್ಮಿತಿ ಅಲ್ಲ ಅನ್ನುವ ಆರೋಗ್ಯಪೂರ್ಣ ನಿಲುವು ಕವಿತೆಯಲ್ಲಿ ಹೊಳೆಯುವಷ್ಟು ಶಾರ್ಪ್ ಆಗಿರಬೇಕಾಗಿತ್ತು ಅನಿಸಿತು. ‘ಆತ್ಮಗಳ ಚಪ್ಪಾಳೆ’ ಯೇಟ್ಸ್ ಕವಿತೆಯ ಸಂಬಂಧಿ ಅನ್ನಿಸಿತು.

ದೇಹ-ಆತ್ಮ, ನಾನು-ನೀನು, ಬುದ್ಧಿ-ಭಾವ ಇವುಗಳ ಬಿರುಕು, ಆಪ್ತಲೋಕದಲ್ಲೂ ನೆಮ್ಮದಿ ಇಲ್ಲದ ಹಾಗೆ ಮಾಡುವುದು, ಆಪ್ತತೆಗೆ ಕಾಯುವುದು, ಬೇಯುವುದು ಈ ಸಂಕಲನದ ಒಂದು ಮುಖ್ಯ ಆಶಯದ ಚಿತ್ರಣವಾಗಿದೆ. ‘ತಬ್ಬಲಿ ನೀರಕ್ಕಿ’ ಬೇಂದ್ರೆ ಕವಿತೆಯ ಹಕ್ಕಿಯ ಹಾಗೆ ಇನ್ನೊಂದು ಸಶಕ್ತ ರೂಪಕ. ಕವಿತೆಯನ್ನು ಕುರಿತು ಭುವನಾ ಅವರ ಮ್ಯಾನಿಫೆಸ್ಟೋದ ಒಂದು ಮಗ್ಗುಲು ಅನ್ನಿಸುವ ಹಾಗಿದೆ. ‘ಆತ್ಮವ ತಡವಿ ನೋಡು,’ ‘ಧ್ಯಾನಕ್ಕೆ ಕೂರುತ್ತೇನೆ,’ ಇವು ಕುಶಲಕರ್ಮದ ರಚನೆಗಳು ಅನಿಸಿ ಇಷ್ಟವಾದವು. ಈ ಸಂಕಲನದ ಲೋಕಕ್ಕೆ ಪ್ರವೇಶ ಒದಗಿಸುವ ಈ ಮೊದಲ ಭಾಗದ ಕವಿತೆಗಳು ದೇವರು ಮನುಷ್ಯನಾಗಲಾರ, ವೈರುಧ್ಯಗಳ ಮರ್ತ್ಯವೇ ನಮ್ಮ ನೆಲೆ, ಇಲ್ಲಿ ಇರುವ ನಾನು-ನೀನು-ನಾವುಗಳ ಹೆಣಿಗೆ ಹೇಗೆ ಇದ್ದೀತು ಅನ್ನುವ ಕುತೂಹಲ ಕೆರಳಿಸಿದವು.

ಇಡೀ ಸಂಕಲನದಲ್ಲಿ ನನಗೆ ಬಹಳ ಇಷ್ಟವಾದ ಕೆಲವು ಕವಿತೆಗಳನ್ನು ಕುರಿತು ಹೇಳಬೇಕು. ‘ನಿಮ್ಮ ದೇವರುಗಳ ಮುಚ್ಚಿಕೊಳ್ಳಿ’ ರಚನೆಯಲ್ಲಿ ಕಣ್ಣಾಮುಚ್ಚಾಲೆ ಆಟದ ರೂಪಕ ಬಚ್ಚಿಟ್ಟುಕೊಂಡಿದೆ. ಲೋಕ ಕಲ್ಪಿಸಿಕೊಂಡಿರುವ ಗಂಡು ದೇವರುಗಳಿಗೆ ಅಡಗಲು ನಿಜವಾಗಿ ಜಾಗವೂ ಇಲ್ಲ. ಅಡಗಿದರೂ ಯೋನಿಬಯಲಲ್ಲೇ ಅಡಗಬೇಕು. ಹೆಣ್ಣು ಮುಖ್ಯ ನಿಲುವಿಗೆ ತಾತ್ವಿಕ ರೂಪ ಸಮರ್ಥವಾಗಿ ದೊರೆತಿದೆ ಅನ್ನಿಸಿತು. ‘ಅಕ್ಕಿ ಆರಿಸಬೇಕು’ ರಚನೆಯ ಖಚಿತ ಚಿತ್ರಗಳು ಹಲವು ಧ್ವನಿಗಳನ್ನು ಹೊರಡಿಸುವಷ್ಟು ಶಕ್ತವಾಗಿವೆ, ಅಕ್ಕಿ ಆರಿಸುವಾಗ ಕೆ.ಎಸ್.ನ ಅವರಿಗೆ ಕಾಣದ ಕೆಲವು ಸಂಗತಿಗಳು ಇಲ್ಲಿವೆ. ಮೂರು ಬಣ್ಣದ ನಗು ಜನಪ್ರಿಯ ಗೀತೆಯ ರೂಪದಲ್ಲಿದೆ. ಆಧುನಿಕ ಹೆಣ್ಣು ಮನಸ್ಸು ಪರಂಪರೆಯ ರಚನೆಯನ್ನು ಹೀಗೆ ಬಳಸಬಹುದಲ್ಲ ಅನ್ನಿಸಿತು.

ಪುನರಪಿ ಜನನಂ ಸಮರ್ಥವಾದೊಂದು ರಚನೆ. ನೋಡು, ಕೇಳು ಎಂದು ಮತ್ತೆ ಮತ್ತೆ ಹೇಳುತ್ತಾ ಈ ಲೋಕದ ವಾಸ್ತವದಲ್ಲಿ ಹೆಣ್ಣು ತಾನೇ ತಾನಾಗುವುದಕ್ಕೆ ಎಷ್ಟು ಜನ್ಮ ಎತ್ತಬೇಕೋ ಅನ್ನುವ ವಿಷಾದವನ್ನು ಓದುಗರಿಗೂ ದಾಟಿಸುತ್ತದೆ.
ಸಖಿ,
ಬರಿ ಕೇಳುತ್ತ ಸಾಗು
ಬರಿ ನೋಡುತ್ತ ಸಾಗು
ಹೆಚ್ಚೆಂದರೆ ಬರಿ ಸ್ಪರ್ಶಿಸುತ್ತಾ ಸಾಗು
ನೀರೊಳು ನೀನು ಮುಳುಗಿದರು
ನಿನ್ನೊಳಗೆ ಮುಳುಗದ ಜಲದ ಆಳದಲ್ಲಿ
ಸಾವಿರ ರಹಸ್ಯಗಳಿವೆ
ಮತ್ತೆ ಮತ್ತೆ ಜನಿಸುತ್ತಲೇ ಇರು
ಕವಿತೆಯ ಮೊದಲ ಭಾಗದಲ್ಲಿ ನೋಡುವುದು, ಕೇಳುವುದು ಏನನ್ನು ಅನ್ನುವ ಚಿತ್ರಗಳು ಸ್ಪಷ್ಟವಾಗಿ ಖಚಿತವಾಗಿ ರೂಪುಗೊಂಡಿವೆ.
‘ಅವನಿಗೆ’, ‘ಹಣೆ ಮುತ್ತಿನ ಆಧ್ಯಾತ್ಮ’, ‘ನಸೀಬು’, ಇವು ಒಂದಕ್ಕೊಂದು ಹೆಣೆದುಕೊಂಡಂಥ ರಚನೆಗಳಾಗಿ ಕಂಡವು. ಆಪ್ತ ಲೋಕದ ಅನುಭವ ಹೇಳಲಾಗದು, ಹೇಳದೆ ಇರಲಾಗದು; ಹೇಳಿದರೆ ಅನುಭವ ಹಾಳಾದೀತು, ಹೇಳದಿದ್ದರೆ ಸಮಾಧಾನವಿರದು. ಹಾಗಾಗಿ ಚಿತ್ರಗಳನ್ನು ರೇಖಿಸಿ ಓದುಗರು ಊಹಿಸಿಕೊಳ್ಳಲಿ ಅನ್ನುವ ಹಾಗೆ ಈ ರಚನೆಗಳಿವೆ.

ಉದಾಹರಣೆಗೆ ‘ಅವನಿಗೆ’ಯಲ್ಲಿ ಆರು ಚಿತ್ರಗಳಿವೆ. ಒಂದೊಂದರಲ್ಲೂ ಅನುಭವವನ್ನು ಅರ್ಧರ್ಧವಾಗಿ ಅನುಭವಿಸಿದ್ದನ್ನು ಹೇಳುವ ಹನಿಕವಿತೆಗಳಿವೆ. ಅವುಗಳ ಜೋಡಣೆಯ ಕ್ರಮದಿಂದ ‘ಅವನಿಗೆ’ ಹೇಳುವ ತಮ್ಮ ಆಪ್ತಸಂಬಂಧದ ಮಾತುಗಳಿಗೆ ಅರ್ಥವಂತಿಕೆ ದೊರೆಯುತ್ತದೆ. ಇದರ ಕ್ಲೈಮ್ಯಾಕ್ಸ್ ಐದನೆಯ ಹನಿಯಲ್ಲಿದೆ:
ಈ ಜಾಕೆಟಿನಲ್ಲಿ
ಥೇಟು ಕವಿಯಂತೆ ಕಾಣುತ್ತಿ
ಎನ್ನುತ್ತ ನಡುಬೀದಿಯಲ್ಲಿ ತಬ್ಬಿಕೊಂಡ,
ಮರುಕ್ಷಣ ಕಣ್ಣು ಕದಲಿಸಿದೆ
ಮಾಲ್ನಲ್ಲಿ ಡೆಮೊಗೆಂದು ಇಟ್ಟ ಟಿವಿಗಳಲ್ಲಿ
ಶಾರ್ಕ್ ಡೈವ್ ಹೊಡೆಯಿತು
ಹಾಗೇ ‘ನಸೀಬು’ ಕವಿತೆಯಲ್ಲಿ ಬರುವ ಹಳೆಯ ಚಪ್ಪಲಿ ಮಹಾ ಭಾರತ, ನೀನು, ಅರ್ಧ ಕುಡಿದಿಟ್ಟ ಕಾಫಿ-ಈ ರಚನೆಗಳಲ್ಲೂ ಬರುತ್ತದೆ. ಕವಿಯೊಬ್ಬರು ಒಂದೇ ಚಿತ್ರವನ್ನು ಹಲವು ಬಾರಿ ಬಳಸುತ್ತ ತಮ್ಮದೇ ರೂಪಕ ಲೋಕವನ್ನು, ಕಾವ್ಯ ಭಾಷೆಯನ್ನು ಕಟ್ಟಿಕೊಳ್ಳುವುದಕ್ಕೆ ಇದೊಂದು ಉದಾಹರಣೆ. ‘ನೀನು’ ಎಂಬ ರಚನೆಯಲ್ಲಿಯೂ ಹನಿಕವನಗಳಂತ ರಚನೆಗಳಿವೆ. ಕತ್ತಲು ಬೆಳಕು ಕೂಡ ಭುವನ ಅವರ ಕಾವ್ಯಲೋಕದ ಇನ್ನೊಂದು ರೂಪಕ ಪರಿಕರ. ಈ ಎಲ್ಲ ಕವಿತೆಗಳಲ್ಲಿ ಚಪ್ಪಲಿ, ಕತ್ತಲು-ಬೆಳಕು ಇಂಥವು ಯಾವ ಯಾವ ಭಾವಗಳನ್ನು ಮನಸಿಗೆ ತರುತ್ತದೆ ಅನ್ನುವುದನ್ನು ಓದುಗರು ಗಮನಿಸಿಕೊಂಡರೆ ಭುವನಾ ಅವರ ಕಾವ್ಯಲೋಕದ ಒಂದು ಪುಟ್ಟ ಅಂಶ ಅರ್ಥವಾಗಿ ಮುಂದಕ್ಕೆ ನಮ್ಮನ್ನು ಕರೆದೊಯುತ್ತದೆ.

‘ಮಗನ ಅನುಭಾವ’, ‘ಎರಡನೆಯ ದಿನ’, ‘ಮೂರನೇ ಕನಸು’, ‘ಕಟ್ಟಕಡೆಯ ಸೂರ್ಯಾಸ್ತ’, ‘ಸೂರ್ಯನಿಂದ ಬಲುದೂರವೇ’ ಇವು ಮತ್ತೆ ಪರಸ್ಪರ ಹೆಣೆದುಕೊಂಡಿರುವ ರಚನೆಗಳು. ಸಂಕಲದ ಆರಂಭದಲ್ಲಿ ಬಂದಿದ್ದ ‘ಎರಡೆರಡು ಗೋರಿ…’ ರಚನೆಯ ಥೀಮು ಇಲ್ಲಿ ಮತ್ತಷ್ಟು ಬೇರೆ ಬಗೆಗಳಲ್ಲಿ ಪರಿಶೀಲನೆಗೊಂಡಿದೆ. ಅದು ಸಾವಿನ ವಿಷಯ. ಆಪ್ತಲೋಕದಲ್ಲಿ ಸಂಭವಿಸುವ ಸಾವು.

ಆಪ್ತತೆಯೊಳಗಿನ ಸಾವು, ಸಾವು. ಆದರೆ ಈ ಎಲ್ಲ ರಚನೆಗಳೂ ಯಶಸ್ವಿ ಅನಿಸುವುದಿಲ್ಲ. ಉದಾಹರಣೆಗೆ, ‘ಕಟ್ಟ ಕಡೆಯ ಸೂರ್ಯಾಸ್ತ’ದಲ್ಲಿ ಭಾವಗಳು, ಚಿತ್ರಗಳು ತಟ್ಟನೆ ಹೊರಳುತ್ತವೆ, ಸ್ಪಷ್ಟವಾಗುವುದಿಲ್ಲ ಅನಿಸಿತು.

‘ಯುಗಮೌನ’, ‘ಜೊಕಮಾರ ಚಿಟಚೂರ’, ‘ನನ ಚಿಟ್ಟಿ ಬಹುರಂಗಿ’. ‘ಚಿತ್ತದ ಜಳಕ ನಿನಭಾಗ್ಯ’, ‘ಚಿಂತ್ಯಾಕ ಚೆಲಿವಿಯ ಗುಂಗ್ಯಾಕ’. ಈ ರಚನೆಗಳಲ್ಲಿ ಭುವನಾ ಜಾನಪದ ಮಟ್ಟು, ಧಾಟಿಗಳನ್ನು ಬಳಸಿಕೊಂಡು ಆಧುನಿಕ ಹೆಣ್ಣು ಮನಸು ಲೋಕದ ವಾಸ್ತವಕ್ಕೆ ತೋರುವ ಪ್ರತಿಕ್ರಿಯೆಯನ್ನು ಮುಖ್ಯವಾಗಿ ವ್ಯಂಗ್ಯದ ಮೂಲಕ ವ್ಯಕ್ತಪಡಿಸುವ ಪ್ರಯತ್ನ ನಡೆಸಿದ್ದಾರೆ.

ಕೇವಲ ಜಾಣತನವಷ್ಟೇ ಮುಖ್ಯವೆಂದು ತೋರುವ ‘ಮೌನ’, ಮೊದಲ ಎರಡು ಸ್ಟಾಂಜಾಗಳಲ್ಲಿ ಹೇಳಿದ್ದನ್ನೆ ಮತ್ತೆ ಬೇರೆಯ ರೀತಿಯಲ್ಲಿ ವಿವರಿಸುವ ‘ಪಾಪದ ಭೂಮಿ,’ ಮಾತು ಹೆಚ್ಚಾದ ಕಾರಣದಿಂದ ಶಿಥಿಲವೆನಿಸುವ ‘ಸುಟ್ಟ ಹೂಗಳ ಪೋಸ್ಟ್ ಮಾರ್ಟಂ’, ಇವು ಅಷ್ಟು ಇಷ್ಟವಾಗಲಿಲ್ಲ. ಮಹಾಭಾರತ ಕೂಡ ಅಂಥದೇ ರಚನೆ. ಸಮಕಾಲೀನ ಬದುಕಿಗೆ ಕವಿ ತೋರಿದ ಪ್ರತಿಕ್ರಿಯೆ ಇಲ್ಲಿದೆ, ನಿಜ. ಆದರೆ ಸಮಕಾಲೀನವಾದ ಸಂಗತಿಗಳ ಬಗ್ಗೆಯೆಲ್ಲ ಬರೆಯಲೇಬೇಕು ಅನ್ನುವ ಒತ್ತಡವನ್ನು ಹೇರಿಕೊಳ್ಳುವುದೂ ಸರಿಯಲ್ಲ. ಅಂಥ ಒತ್ತಡ ಬರವಣಿಗೆಯನ್ನು ಅಳ್ಳಕ ಮಾಡಬಹುದು. ಈ ರಚನೆಯಲ್ಲಿ
ಅಪ್ಪನ ಹೆಗಲೇರಿ ಕುಳಿತ ಕಂದಮ್ಮಗಳೇ
ನಿಮ್ಮ ಪುಟ್ಟ ಪಾದಗಳು
ದೇಶದ ಚರಿತ್ರೆ ಬರೆದಿವೆ ಪದಗಳೆ ನಾಚುವಂತೆ
ನಿಜರಾಮಾಯಣವ ಮತ್ತೆ ಮತ್ತೆ ಮುರಿದು ಕಟ್ಟುತ್ತಲೇ ಇರಲಿ
ಎಂಬ ಆಶಯ ವ್ಯಕ್ತವಾಗಿದೆ. ರಾಮಾಯಣವೇ ಆಗಲಿ ಮಹಾಭಾರತವೇ ಆಗಲಿ-ಅವು ರೂಪಪಡೆಯುವುದು ಆಲಿಸುವ ಕಿವಿ, ಮನಸುಗಳಲ್ಲಿ. ಮೂರು ತಿಂಗಳ ಒಳಗೇ ಈ ಕರೋನಾ ಅವಧಿಯ ಮಹಾ ದುರಂತವಾದ ಈ ಮಹಾನಡಿಗೆ ಮರವೆಗೆ ಸಲ್ಲುವ ಹಾಗೆ ಆಗಿರುವ ದುರಂತ ಇರುವಾಗ ‘ನಿಜರಾಮಾಯಣ’ ಬರೆಯುವುದು ಇನ್ನು ಹೇಗೆ? ಬೇಡವಾದ ಶಬ್ದ, ಬೇಡವಾದ ನೋಟ, ಬೇಡವಾದ ಆಲೋಚನೆಗಳನ್ನು ಬಳಸಿ ಒಂದೊಂದು ಮನಸಿನಲ್ಲೂ ಗೋಡೆ ಕಟ್ಟಿ ಎಲ್ಲವೂ ಬಾಯುಪಚಾರದ ಮಾತು ಮಾತ್ರ ಆಗುತ್ತಿರುವಾಗ ನಿಜರಾಮಾಯಣ ಬರೆದಾವು ಪುಟ್ಟ ಪಾದ ಅನ್ನುವುದು ಸುಂದರ ಭ್ರಮೆ, ನಿಶ್ಶಕ್ತ ಹಳಹಳಿಕೆ ಮಾತ್ರವೋ ಅನಿಸುತ್ತದೆ. ಇದೇ ಸಂಕಲನದ ಮೊದಲಲ್ಲಿ ಬಂದ ‘ಅರ್ಥ, ಕಾಮ ಮತ್ತು ಮೋಕ್ಷಕ್ಕಾಗಿ’ ಕವಿತೆಗೂ ವಾಚ್ಯವೆಂಬಂತೆ ತೋರುವ ಈ ರಚನೆಗಳು ಅಗಾಧ ವ್ಯತ್ಯಾಸವಿದೆ, ಅಲ್ಲವೇ.

ಕನ್ನಡದ ಹಿರಿಯ ಕವಿ ಪುತಿನ ಅವರು ಸಹೃದಯರ ಕಿವಿ, ಬುದ್ಧಿ, ಮನಸು, ಕಾವಲುಗಾರರನ್ನು ನಾದ, ವಿಚಾರ, ಭಾವಗಳ ಮೂಲಕ ಒಲಿಸಿಕೊಂಡು ಹೃದಯಸ್ಥನಾಗಿರುವ ಜೀವವನ್ನು ಕವಿ ತಲುಪಬೇಕು ಅನ್ನುವ ಮಾತನ್ನು ಒಂದೆಡೆಯಲ್ಲಿ ಹೇಳಿದ್ದು ನೆನಪಾಗುತ್ತಿದೆ. ಹಾಗೆಯೇ ವಾಲ್ಟರ್ ಬೆಂಜಮಿನ್ ಎಂಬ ಚಿಂತಕ ಕವಿತೆಯ ಸಂಯೋಜನೆಯ ಪಾತಳಿಯಲ್ಲಿ ನಾದ, ರಚನೆಯ ಪಾತಳಿಯಲ್ಲಿ ಶಿಲ್ಪ, ಪದ ವಾಕ್ಯಗಳ ಹೆಣಿಗೆಯ ಪಾತಳಿಯಲ್ಲಿ ನೇಯ್ಗೆ ಇರುತ್ತವೆ ಅನ್ನುತ್ತಾನೆ.

ಹೀಗೆ ಅಖಂಡವಾದ ಕವಿತೆ ಜೀವ ತಳೆಯುವುದು ಕವಿಯ ಪುಣ್ಯಮಾತ್ರವಲ್ಲ, ಭಾಷೆೆಯ ಪುಣ್ಯವೂ ಹೌದು. ಇಂದು ಬರೆಯುತ್ತಿರುವ ಕನ್ನಡದ ಕವಿಗಳೆಲ್ಲರೂ ಹಾಗೆ ಕನ್ನಡದ ಕವಿತೆಯನ್ನು ಜೀವಂತಗೊಳಿಸಲು ತಮ್ಮ ತಮ್ಮದೇ ರೀತಿಯಲ್ಲಿ ಪ್ರಯತ್ನಪಡುತ್ತಿದ್ದಾರೆ. ಅಂಥ ಹೊಸ ಕವಿಗಳಲ್ಲಿ ಭುವನಾ ಅವರು ಗಮನಾರ್ಹರೆಂದು ನನಗೆ ತೋರಿದೆ. ಅವರ ಕಾವ್ಯ ನಿರ್ಮಾಣ ಮತ್ತಷ್ಟು ಉನ್ನತ, ಮತ್ತಷ್ಟು ಗಹನವಾಗಿ ಕನ್ನಡ ಕವಿತೆಗಳಾಗಲಿ ಎಂದು ಹಾರೈಸುತ್ತೇನೆ.

‍ಲೇಖಕರು Admin

July 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: