ಓ! ಅಂದ್ರೆ ನನ್ನ ಮದ್ವೆ, ಮದ್ವೇನೇ ಅಲ್ವ..?

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ.. 

| ಕಳೆದ ಸಂಚಿಕೆಯಿಂದ |

‘ಓ! ಅಂದ್ರೆ ನನ್ನ ಮದ್ವೆ ಮದ್ವೇನೇ ಅಲ್ವ…?ʼ

ಇದು ಮೊದಲನೆಯ ದರ್ಶನ. ‘ನಿಜವಾಗ್ಲೂನಾ… ಮದ್ವೇನೇ ಅಲ್ಲ ಅಂದ್ರೆ ನನಗೆ ಆ ಮದುವೆಯ ಜವಾಬ್ದಾರಿಗಳಾವುದೂ ಇಲ್ಲ ಅಲ್ವಾ?ʼ

ಬಾಲ್ಯವಿವಾಹದ ಬಂಧನಕ್ಕೆ ದೂಡಲ್ಪಟ್ಟಂತಹ ಹೆಣ್ಣುಮಕ್ಕಳೊಡನೆ (ನಿಜವಾಗಿಯೂ ಮಕ್ಕಳು. ಅಂದರೆ ೧೮ ವರ್ಷದೊಳಗಿನವರು) ನಡೆದ ಮಾತು ಕತೆಗಳ ಮಧ್ಯ ಬರುತ್ತಿದ್ದಂತಹ ವಿವಿಧ ಉದ್ಗಾರಗಳು, ಪ್ರಶ್ನೆಗಳಲ್ಲಿನ ಕೆಲವು ಉದಾಹರಣೆಗಳು ಇವು. ಸದ್ಯದ ಸಾಮಾಜಿಕ ವ್ಯವಸ್ಥೆಗಳು, ಕಾನೂನು ಕುರಿತು ಮಾತು ಕತೆ ನಡೆದಂತೆ ಹಿಂದಿನ ಸಂಚಿಕೆಯ ಶೀರ್ಷಿಕೆಯಾಗಿದ್ದ, ‘ಅಂದ್ರೆ… ಮದ್ವೆ ಆಗಲೇಬೇಕೂಂತಾ ಏನೂ ಇಲ್ವಾ?’ ಕೂಡಾ ಪ್ರಮುಖವಾಗಿ ಬಂದು ಹೋಗಿತ್ತು. 

ಬಾಲ್ಯವಿವಾಹವೆಂದರೆ ನಿಜವಾದ ಅರ್ಥದಲ್ಲಿ ಅದು ‘ಬಾವಿ’ಯೇ ಆಗಿದೆ. 

ಬಾಲ್ಯವಿವಾಹವೆಂದರೆ ನಿಜವಾದ ಅರ್ಥದಲ್ಲಿ ಅದು ‘ಬಾವಿ’ಯೇ ಆಗಿದೆ. 

ನಮ್ಮ ಸಮುದಾಯದಲ್ಲಿ ಅದೆಷ್ಟರ ಮಟ್ಟಿಗೆ ‘ಮದುವೆ’ಯ ವ್ಯವಸ್ಥೆ ಹಾಸುಹೊಕ್ಕಾಗಿದೆಯೆಂದರೆ, ಅದು ಏನು ಎತ್ತ ಎಂದು ಅರಿತು ಯಾಕೆ ಬೇಕು ಮದುವೆ ಎಂದು ಪ್ರಶ್ನಿಸುವ ಮೊದಲೇ ಶೇ. ೯೯ರಷ್ಟು ಗಂಡು ಹೆಣ್ಣುಗಳು ಮದುವೆಯ ಚೌಕಟ್ಟಿನಲ್ಲಿ ಸೇರಿಯಾಗಿರುತ್ತದೆ. ನನ್ನ ಮಗಳ ಸಹಪಾಠಿಯೊಬ್ಬಳು ಒಂದು ದಿನ ಯಾವುದೋ ಚರ್ಚೆಯಲ್ಲಿ ‘ಮದ್ವೆ ಆಗಲೇಬೇಕಾ? ಹಾಗಂತೇನಾದರೂ ರೂಲ್ಸ್‌ ಇದೆಯಾ?ʼ ಅಂತ ಪ್ರಶ್ನೆ ಎತ್ತಿದ್ದಳು. ನಾನದನ್ನ ವಿಸ್ತರಿಸಿ ನಾಲ್ಕು ಸಾಲು ಸೇರಿಸಿದ್ದೆ. 

ಅದೇ ಕೊನೆ, ಅದೇ ಜಾಡು…

ನೆನ್ನೆ ನೋಡಿದ ಸಿನೆಮಾ
ಇಂದು ನಡೆದ ನಾಟಕ
ಎದುರು ಇರುವ ಅರ್ಧ ಓದಿದ ಕತೆ
ಮತ್ತೆ
ವಾರ್ತಾ ವಾಚಕ ವರ್ಣಿಸಿದ ಆ ಅಪಹರಣ ಕೊಲೆ ಸುದ್ದಿ
ಎಲ್ಲ ಎಲ್ಲವೂ ಒಂದೇ ಸೂತ್ರ ಸಿದ್ಧ
ಅದೇ ಚೌಕಟ್ಟು ಅದೇ ಪಟ್ಟು…
‘ಒಂದು ಹೆಣ್ಣಿಗೊಂದು ಗಂಡು, ಹೇಗೋ ಏನೋ ಹೊಂದಿಕೊಂಡು…’
ಕಾಳಿದಾಸನಿತ್ತ ಕಥಾ ಹಂದರ ಹರಿಯಬಾರದು
ಮೀರಬಾರದು ‘ಮಾನಿಷಾಧ’ ಘೋಷವಾಕ್ಯ
ವ್ಯಾಸ ವಾಲ್ಮೀಕಿಯರಿಗಾಗಬಾರದವಮಾನ
ಕತೆಯೋ ಕತೆಯಾಗುವ  ಜೀವನವೋ
ಕತ್ತು ಬಗ್ಗಿಸಿ ಹಿಡಿಯಬೇಕು ಒಂದೇ ಜಾಡು!
ಮೊನ್ನೆ ಸಭೆಯಲ್ಲಿ ಗೆಳತಿಯೊಬ್ಬಳು ಕೇಳಿದ್ದಳು,
‘ಭಾರತದಲ್ಲಿ ಕಡ್ಡಾಯ ವಿವಾಹ ಕಾಯಿದೆಯಿದೆಯೇನು?’

* * *

ಹೆಚ್ಚೂ ಕಡಿಮೆ ಎಲ್ಲರಿಗೂ ಒಂದೇ ಗುರಿಯೆಂಬಂತೆ… ಬೆಳೆಯುತ್ತಿದ್ದಂತೆ ಮದುವೆಯಾಗಲೇಬೇಕು. ಮದುವೆಯಾದವರಿಗೆ ವರ್ಷದಲ್ಲಿ ಮಕ್ಕಳಾಗಬೇಕು! (‘ಶ್ರಾವಣ ಬಂತು’ ಸಿನೆಮಾದಲ್ಲಿ ಡಾ. ರಾಜ್‌ಕುಮಾರ್‌ ಅವರಿಂದ ಹಾಡಿಸಿರುವ ‘ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ… ಹಾಡಿನ ಕೆಲವು ಸಾಲುಗಳನ್ನು ತೆಗೆಯಲೇಬೇಕು. ಅದರಲ್ಲಿ ಗಟ್ಟಿಯಾಗಿ ಕೇಳುವುದು, ʼಒಂದೇ ವರುಷದ ಅವಧಿಯಲಿ ಹಸುಕಂದನು… ಇದು ಈಗ ತಪ್ಪು ಸಂದೇಶ). 

ವಯಸ್ಸಿಗೆ ಬಂದ ಕೂಡಲೇ ಮದುವೆ ಆಗಲೇಬೇಕು ಎನ್ನುವ ಭಾವನೆಯನ್ನು ತಪ್ಪಿಸಲು ದೊಡ್ಡ ಮಟ್ಟದಲ್ಲಿ ‘ಮದುವೆ ಕಡ್ಡಾಯವಲ್ಲ. ಮದುವೆಯಾಗಲು ಆರ್ಥಿಕ, ಮಾನಸಿಕ ಮತ್ತು ಶಾರೀರಿಕ ಶಕ್ತಿ ಬರುವವರೆಗೂ ಯಾರ ಒತ್ತಡಕ್ಕೂ ಮಣಿಯಬೇಕಿಲ್ಲ. ಮಕ್ಕಳನ್ನು ಮಾಡಿಕೊಳ್ಳುವ ಆಯ್ಕೆ ನಿಮ್ಮದೇ. ಅದಕ್ಕೆ ಅವಸರ ಬೇಕಿಲ್ಲ’ ಎಂಬ ವಿಚಾರ ಕ್ರಾಂತಿ, ಪ್ರಚಾರ ಕ್ರಾಂತಿ ಮತ್ತು ಆಚಾರ ಕ್ರಾಂತಿಯಾಗಲೇಬೇಕು. 

ಕಳೆದ ವರ್ಷ (೨೦೨೦) ಕೇಂದ್ರದ ಬಜೆಟ್‌ ಮಂಡಿಸುತ್ತಾ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ನೀಡಿದ ಒಂದು ಹೇಳಿಕೆ ಇಡೀ ವರ್ಷ ವಿಧವಿಧವಾದ ಕೋನಗಳಲ್ಲಿ ಚರ್ಚೆಗೆ ಕಾರಣವಾಗಿತ್ತು, ‘ಭಾರತದ ಮಹಿಳೆಯರಿಗೆ ತಾಯಂದಿರಾಗಲು ಸೂಕ್ತ ವಯಸ್ಸನ್ನು ಸೂಚಿಸಲು ಒಂದು ಕಾರ್ಯಪಡೆಯನ್ನು ನೇಮಿಸಲಾಗುತ್ತದೆ.

ನಮ್ಮ ದೇಶದಲ್ಲಿ ತಾಯಂದಿರು ಪ್ರಸವದ ಸಮಯದಲ್ಲಿ ಮರಣಿಸುವ ಅನುಪಾತವನ್ನು (Maternal Mortality Ratio (MMR) ತಗ್ಗಿಸಲು ಇದು ಅತ್ಯಗತ್ಯವಾಗಿದೆ’. ಇದರೊಂದಿಗೆ ಸಚಿವರು ಇನ್ನೊಂದು ಮಾತನ್ನೂ ಹೇಳಿದ್ದಾರೆ. ‘ಶಾರದಾ ಕಾಯಿದೆ ೧೯೨೯ರಲ್ಲಿ ಸೂಚಿಸಿದ್ದಂತೆ ಬಾಲಕಿಯರ ವಿವಾಹದ ವಯಸ್ಸು ೧೪ ಇದ್ದದ್ದು ೧೯೭೮ರಲ್ಲಿ ೧೮ಕ್ಕೆ ಏರಿಸಲಾಯಿತು. ಇದೆಲ್ಲದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಶಿಕ್ಷಣ ಮತ್ತು ವೃತ್ತಿಯ ಅವಕಾಶಗಳು ಹೆಚ್ಚುತ್ತಿದೆ’ ಎಂದಿದ್ದಾರೆ. (ಬಾಲ್ಯವಿವಾಹ ನಿಷೇಧ ಕಾಯಿದೆ ೨೦೦೬ರಂತೆ ವಿವಾಹವಾಗಲು ಹೆಣ್ಣಿಗೆ ೧೮ ಮತ್ತು ಗಂಡಿಗೆ ೨೧ ವರ್ಷ ಪೂರ್ತಿಯಾಗಿರಬೇಕು).

ಈ ಮೇಲಿನ ವಾಕ್ಯಗಳನ್ನು ಗಮನಿಸಿದಾಗ ಎಲ್ಲರ ಮನಸ್ಸಿನಲ್ಲಿ ಬರುವುದು ಏನು? ಹಲವಾರು ಸಾಮಾಜಿಕ ಹಾಗೂ ಕೌಟುಂಬಿಕ ಕಟ್ಟುಪಾಡುಗಳನ್ನು ಹೊಂದಿರುವ ಭಾರತದಲ್ಲಿ ಸಾಮಾನ್ಯವಾಗಿ ತಾಯಂದಿರಾಗುವುದು ವಿವಾಹದ ನಂತರವೇ ಆಗಿರುವುದರಿಂದ, ವಿತ್ತ ಸಚಿವರು ಏನು ಹೇಳಿದರು ಎಂದು ದೊಡ್ಡ ಚರ್ಚೆ ನಡೆಯಿತು. ಇಲ್ಲಿ ಎರಡು ವಿಚಾರಗಳನ್ನು ಜೊತೆಜೊತೆಯಾಗಿ ಗಮನಿಸಬೇಕಿದೆ – ಭಾರತದಲ್ಲಿ ವಿವಾಹದ ವಯಸ್ಸು ಮತ್ತು ಹೆರಿಗೆ ಸಮಯದಲ್ಲಿ ತಾಯಂದಿರ ಮರಣ ಅನುಪಾತ. ಈ ಎರಡೂ ಈಗ ಅಭಿವೃದ್ಧಿಯ ಮಾಪಕಗಳೇ ಆಗಿವೆ.

ಭಾರತದಲ್ಲಿ ತಾಯಂದಿರ ಮರಣ ಅನುಪಾತ ೨೦೦೪-೦೬ರಲ್ಲಿ ೨೫೪ ಇದ್ದದ್ದು ಕಳೆದ ಹತ್ತು ವರ್ಷಗಳಲ್ಲಿ ಸತತವಾಗಿ ಇಳಿಯುತ್ತಾ ಬಂದಿದೆ. ತೀರಾ ಇತ್ತೀಚೆಗೆ, ಅಂದರೆ ೨೦೧೫-೧೭ರ ಮೂರು ವರ್ಷಗಳ ಘಟಕದಲ್ಲಿ ರಾಷ್ಟ್ರೀಯ ಮಟ್ಟದ ತಾಯಂದಿರ ಮರಣ ಅನುಪಾತ ೧೨೨ ಇದ್ದದ್ದು ಈಗ ೨೦೧೬-೧೮ರ ಮೂರು ವರ್ಷಗಳ ಘಟಕದಲ್ಲಿ ೧೧೩ಕ್ಕೆ ಇಳಿದಿದೆ ಎಂದು ಎನ್.ಎಸ್.ಎಸ್ (ರಾಷ್ಟ್ರೀಯ ಮಾದರಿ ಸರ್ವೇಕ್ಷಣೆ) ತಿಳಿಸಿದೆ.

ಇದೊಂದು ಅಮೋಘವಾದ ಬೆಳವಣಿಗೆ ಎನ್ನಬಹುದು. ರಾಷ್ಟ್ರೀಯ ಮಟ್ಟದಲ್ಲಿ ತಾಯಂದಿರ ಮರಣ ಅನುಪಾತವನ್ನು ನಾವು ೧೧೩ಕ್ಕೆ ಇಳಿಸಿದ್ದೇವೆ ಎಂದರೂ ಅಸ್ಸಾಂನಲ್ಲಿ ಈ ಅನುಪಾತ ೨೧೫ ಎಂಬುದು ಕಟುಸತ್ಯ (ಕರ್ನಾಟಕದಲ್ಲಿ ೯೨ ಮತ್ತು ಕೇರಳದಲ್ಲಿ ೪೨).

ಆದರೆ ಈ ಒಟ್ಟಾರೆ ಇಳಿಕೆ ಅನುಪಾತ ಜಾಗತಿಕ ಮಾಪಕಗಳೆದುರು ಏನೇನೂ ಅಲ್ಲ. ಏಕೆಂದರೆ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಂತೆ ನಾವು ರಾಷ್ಟ್ರೀಯ ಮಟ್ಟದಲ್ಲಿ ೨೦೩೦ರೊಳಗೆ ತಾಯಂದಿರ ಮರಣ ಅನುಪಾತವನ್ನು ೭೦ಕ್ಕಿಂತಲೂ ಕಡಿಮೆಗೊಳಿಸಬೇಕಿದೆ (ಗುರಿ ೩).

ಈ ಹಿಂದೆ ನಮ್ಮ ದೇಶ ೨೦೧೭ರೊಳಗೆ ತಾಯಂದಿರ ಮರಣವನ್ನು ೧೦೦ಕ್ಕಾದರೂ ಇಳಿಸಬೇಕೆಂದು ಹಾಕಿಕೊಂಡಿದ್ದ ತನ್ನದೇ ರಾಷ್ಟ್ರೀಯ ಆರೋಗ್ಯ ನೀತಿಯ ಗುರಿಯನ್ನು ಭಾರತದಿಂದ ಮುಟ್ಟಲಾಗಲೇ ಇಲ್ಲ. ಹೀಗಾಗಿ ತಾಯಂದಿರ ಮರಣ ಅನುಪಾತವನ್ನು ೭೦ಕ್ಕೆ ಇಳಿಸಬೇಕೆಂಬುದು ದೊಡ್ಡ ಸವಾಲು ಎನ್ನಲೇಬೇಕು. ಕಾರಣ, ರಾಷ್ಟ್ರೀಯ ಮಟ್ಟದಲ್ಲಿ ಅತಿ ಹೆಚ್ಚು ತಾಯಂದಿರ ಸಾವುಗಳು ಸಂಭವಿಸುತ್ತಿರುವುದು ಉತ್ತರ ಭಾರತದ ಅಸ್ಸಾಂ ಒಳಗೊಂಡು ಹತ್ತು ರಾಜ್ಯಗಳಲ್ಲಿ: ಉತ್ತರ ಪ್ರದೇಶ (೧೯೭), ಮಧ್ಯಪ್ರದೇಶ (೧೭೩), ರಾಜಾಸ್ತಾನ್ (೧೬೪), ಚತ್ತೀಸ್‌ಗಢ್ (೧೫೯), ಒರಿಸ್ಸಾ (೧೫೦), ಬಿಹಾರ್ (೧೪೯), ಪಂಜಾಬ್ (೧೨೯), ಉತ್ತರಖಂಡ್ (೯೯) ಮತ್ತು ಪಶ್ಚಿಮ ಬಂಗಾಳ (೯೮) ರಾಜ್ಯಗಳಲ್ಲಿ.

ಈಗ ತುರ್ತಾಗಿ ಆಗಬೇಕಿರುವುದು ಈ ಎಲ್ಲ ರಾಜ್ಯಗಳಲ್ಲಿ ಸಂತಾನೋತ್ಪತ್ತಿ ಆರೋಗ್ಯ ಯೋಜನೆ ಮತ್ತು ಕಾರ್ಯಕ್ರಮಗಳ ಸಮರ್ಪಕ ನಿರ್ವಹಣೆ. ಅದಕ್ಕೆ ದೊಡ್ಡ ಪ್ರಮಾಣದಲ್ಲಿ ಧನ ವಿನಿಯೋಗವಾಗಬೇಕು. ಪ್ರಚಾರ, ಶಿಕ್ಷಣ ಮತ್ತು ಮುಖ್ಯವಾಗಿ ಮಹಿಳಾ ಸಶಕ್ತತೆ ಹಾಗೂ ಯುವಕರಲ್ಲಿ ಜಾಗೃತಿ ಮೂಡಬೇಕಿದೆ.

ಕರ್ನಾಟಕದಲ್ಲೂ ಒಟ್ಟಾರೆ ತಾಯಂದಿರ ಮರಣ ಅನುಪಾತ ೯೨ಕ್ಕೆ ಇಳಿದಿದೆ ಎಂದರೂ ನಮ್ಮ ಮೂವತ್ತೂ ಜಿಲ್ಲೆಗಳು, ೧೭೫ ತಾಲೂಕುಗಳು ಮತ್ತು ಐದು ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳಲ್ಲಿನ ತಾಯಂದಿರ ಮರಣ ಅನುಪಾತವನ್ನು ವಿಂಗಡಿಸಿಟ್ಟರೆ ನಮ್ಮ ಸಾಧನೆ ಎಲ್ಲಿ ಮುರುಟುಕೊಂಡಿದೆ ಎನ್ನುವುದು ವ್ಯಕ್ತವಾಗುತ್ತದೆ. ಉತ್ತರ ಕರ್ನಾಟಕದ ಕಲಬುರಗಿ, ರಾಯಚೂರು, ಕೊಪ್ಪಳ, ಯಾದ್ಗೀರ್, ಬೀದರ್, ಬಳ್ಳಾರಿ, ಗದಗ್, ವಿಜಯಪುರ ಮತ್ತು ಬಾಗಲಕೋಟೆ ಹಾಗೂ ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ರಾಜ್ಯದ ಸರಾಸರಿಗಿಂತಲೂ ಹೆಚ್ಚಿನ ಅನುಪಾತದಲ್ಲಿ ತಾಯಂದಿರ ಮರಣ ಸಂಭವಿಸುತ್ತಿದೆ.  

ಪ್ರತಿ ಗರ್ಭ ಧರಿಸುವಿಕೆ ಸುಸೂತ್ರವಾಗಿ ಹೆರಿಗೆಯಾಗಿ ತಾಯಿ ಮಗು ಆರೋಗ್ಯವಾಗಿರುವುದರಲ್ಲಿ ಮುಗಿಯಬೇಕೆಂದು ಎಲ್ಲ ಬಯಸುತ್ತೇವೆ. ಆದರೆ ಅಪೌಷ್ಟಿಕತೆ, ಸೋಂಕುಗಳು, ಅತ್ಯಧಿಕ ರಕ್ತದೊತ್ತಡ, ಕೆಲವೆಡೆ ಅಸಮರ್ಪಕ ಮತ್ತು ಅವೈಜ್ಞಾನಿಕ ಗರ್ಭಪಾತದ ಪ್ರಯತ್ನಗಳು, ಹೆರಿಗೆ ಸಮಯದಲ್ಲಿ ಸಮರ್ಪಕವಾದ ಸೇವೆ ದೊರಕದಿರುವುದು, ಹೆರಿಗೆಗೆ ಮೊದಲು ಕನಿಷ್ಟ ಮೂರು ಬಾರಿ ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡದಿರುವುದು ಮುಖ್ಯವಾಗಿದೆ. ಇಷ್ಟಲ್ಲದೆ ಹೆರಿಗೆ ಸಮಯದಲ್ಲಿ ತೀರ್ವವಾದ ರಕ್ತಸ್ರಾವ ಮತ್ತು ಅದರಿಂದಾಗಿ ಎಕ್ಲಾಂಪ್ಸಿಯಾ (ಬಸಿರು ನಂಜು ಅಥವಾ ಪ್ರಸವಾಪಸ್ಮಾರ) ಸಾಕಷ್ಟು ಸಂಖ್ಯೆಯಲ್ಲಿ ತಾಯಂದಿರನ್ನು ಕೊಲ್ಲುತ್ತಿದೆ. ಈ ಎಲ್ಲವನ್ನೂ ತಡೆಗಟ್ಟಬಹುದಾದ ಕಾರಣಗಳು ಎಂದೇ ಗುರುತಿಸಲಾಗಿದೆ.

ನಮ್ಮಲ್ಲಿ ಆರೋಗ್ಯ ಸೇವೆ ವ್ಯವಸ್ಥೆ ಮೂಲೆಮೂಲೆಗಳಿಗೆ ಸಮರ್ಪಕವಾಗಿ ತಲುಪಿಲ್ಲ ಅಥವಾ ಇದ್ದರೂ ಅದರ ಗುಣಮಟ್ಟ ಪ್ರಶ್ನಾರ್ಹವಾಗಿರುವುದರಿಂದಲೇ ನಮ್ಮ ತಾಯಂದಿರು ಮರಣಿಸುತ್ತಿರುವುದು ಎಂದು ವಿಶ್ಲೇಷಿಸಲಾಗುತ್ತದೆ. ಜೊತೆಗೆ ಸಮುದಾಯಗಳಲ್ಲೂ ಆರೋಗ್ಯ ವ್ಯವಸ್ಥೆಗಳನ್ನು ಕುರಿತು ವ್ಯಾಪಕವಾದ ಅಪನಂಬಿಕೆ ಅಥವಾ ಮೂಢನಂಬಿಕೆ, ಬಾಲ್ಯವಿವಾಹಗಳು ಮತ್ತು ಚಿಕ್ಕವಯಸ್ಸಿನಲ್ಲೇ ಗರ್ಭಧರಿಸುವಂತೆ ಒತ್ತಡ ಹೇರಿ ಅಪಾಯಕಾರಿ ಪರಿಸ್ಥಿತಿಗೆ ದೂಡಲ್ಪಟ್ಟ ಹೆಣ್ಣುಮಕ್ಕಳು ನಮ್ಮ ತಾಯಂದಿರ ಸಾವಿಗೆ ದೊಡ್ಡ ಕಾರಣಗಳಾಗಿವೆ.

ಬಾಲ್ಯವಿವಾಹಗಳಾದ ಲಕ್ಷಾಂತರ ಹೆಣ್ಣುಮಕ್ಕಳು ೧೮ಕ್ಕೆ ಮೊದಲೇ ಗರ್ಭ ಧರಿಸುತ್ತಾರೆ. ಅದೊಂದು ವಾಸ್ತವ. ಅವರು ವೈದ್ಯಕೀಯ ಪರೀಕ್ಷೆಗಳಿಗೆ ಬಂದಾಗ ಅವರ ವಯಸ್ಸನ್ನು ಯಾವುದೇ ಪ್ರಶ್ನೆಗಳನ್ನು ಕೇಳದೆ ಪರಿಶೀಲನೆ ನಡೆಸದೆ ಸಂಬಂಧಿಸಿದವರು ತಾಯಿ ಕಾರ್ಡಿನಲ್ಲಿ ೧೯ ಎಂದು ಬರೆದು, ಮುಖ್ಯವಾಗಿ ಸರ್ಕಾರದ ಅಂಕಿಸಂಖ್ಯೆಗಳಿಗೆ, ವಿಶ್ಲೇಷಣೆಗಳಿಗೆ ಮೋಸ ಮಾಡಲಾಗುತ್ತಿದೆ. (ಸರ್ಕಾರದ ಪ್ರತಿನಿಧಿಗಳು ಇದನ್ನು ಒಪ್ಪದಿದ್ದರೂ ತಳಮಟ್ಟದಲ್ಲಿ ಕ್ಷೇತ್ರಕಾರ್ಯ ಮಾಡುವವರ ಬಳಿ ಇರುವ ದಾಖಲೆಗಳು ಸತ್ಯ ಹೇಳುತ್ತವೆ).

ಈ ಗರ್ಭಿಣಿಯರು ಹೆರಿಗೆಯಲ್ಲಿ ನಿಧನರಾದರೆ ಯಾವ ಲೆಕ್ಕಕ್ಕೆ ಬರುತ್ತಾರೆ ಎನ್ನುವುದು ಸಾಮಾನ್ಯ ಜ್ಞಾನ. ಇಲ್ಲಿ ಮುಖ್ಯವಾಗಿ ಆಗಬೇಕಿರುವುದು ಬಾಲ್ಯವಿವಾಹಗಳನ್ನು ತಡೆಯುವುದು ಮತ್ತು ಅಥವಾ ೧೯ ಅಥವಾ ೨೦ ದಾಟುವ ತನಕ ಗರ್ಭಿಣಿಯರಾಗಬೇಡಿ ಎಂದು ಅವರಿಗೆ (ಬಾಲಕಿಗೆ, ಅವಳ ಗಂಡನಿಗೆ, ಮನೆಯ ಹಿರಿಯರಿಗೆ, ಸುತ್ತಮುತ್ತಲಿನವರಿಗೆ ಒಟ್ಟು ಸಮಾಜಕ್ಕೆ) ಮಾಹಿತಿ, ಶಿಕ್ಷಣ, ಅರಿವು, ತಾಯಂದಿರ ಸಾವಿನ ಕುರಿತು ಎಚ್ಚರಿಕೆ(!)) ನೀಡಬೇಕಿರುವುದು. ಆದರೆ ಇದರೆಲ್ಲದರ ನಡುವೆ ‘ಲೈಂಗಿಕ ಸಂಪರ್ಕಕ್ಕೆ ಒಪ್ಪಿಗೆ ನೀಡಲು ೧೮ ವರ್ಷ ದಾಟಿರಬೇಕು’ ಎನ್ನುವ ಈಗಿನ ನಿರ್ಬಂಧವನ್ನು ಸಡಲಿಸಬೇಕು ಎನ್ನುವ ಮಾತುಗಳು, ಆಗ್ರಹಗಳೂ ಇವೆ.  

ಹೀಗಾಗಿಯೇ, ಕೇಂದ್ರ ಸರ್ಕಾರದ ಆಯವ್ಯಯದಲ್ಲಿ (ರಾಷ್ಟ್ರೀಯ ಯೋಜನೆಯ ಸೂಚನೆಯಲ್ಲಿ) ಗರ್ಭ ಧರಿಸುವ ವಯಸ್ಸನ್ನು ಮುಂದೂಡುವ ವಿಚಾರ ಮುನ್ನೆಲೆಗೆ ಬಂದಿದೆ ಎನ್ನಬಹುದು. ಗರ್ಭ ಧರಿಸುವುದು ತಡ ಮಾಡಬೇಕು ಎಂದರೆ (ಈಗಾಗಲೇ ಚರ್ಚೆ ಮಾಡಿರುವಂತೆ ಭಾರತದಲ್ಲಿ ವಿವಾಹದ ನಂತರವೇ ಬಹುತೇಕ ಗರ್ಭಧಾರಣೆಯಾಗುತ್ತಿರುವುದರಿಂದ) ವೈವಾಹಿಕ ಸಂಬಂಧವನ್ನೇ ಮುಂದೂಡಬೇಕು (!) ಎನ್ನುವ ವಾದ ಮುಂದಿಡುತ್ತಿರುವುದೇ ಎಂಬ ಪ್ರಶ್ನೆ ಮೂಡಿದೆ.

ಇತ್ತೀಚೆಗೆ ಭಾರತ ಸರ್ಕಾರದ ಅಂಕಿಸಂಖ್ಯೆ ಇಲಾಖೆ ಬಿಡುಗಡೆ ಮಾಡಿರುವ ವರದಿಯಂತೆ ೨೦೧೬ರಲ್ಲಿ ಒಟ್ಟಾರೆ ವಿವಾಹದ ಸರಾಸರಿ ವಯಸ್ಸು ೨೨.೨ ವರ್ಷ ಆಗಿದೆ ಎಂದು. ಕುಟುಂಬಗಳು ಮಕ್ಕಳನ್ನು ಮಾಡಿಕೊಳ್ಳುವ ವಯಸ್ಸನ್ನು ಮುಂದೆ ಹಾಕಬೇಕೆಂದರೆ ವಿವಾಹಗಳನ್ನೂ ಮುಂದೆ ಹಾಕಬೇಕು ಎನ್ನುವ ಮಾತಿಗೆ ಇದರಲ್ಲೂ ಕಾರಣ ಹುಡುಕಬೇಕಿದೆ. ಏಕೆಂದರೆ ಲಕ್ಷಾಂತರ ಬಾಲ್ಯವಿವಾಹಗಳು ೧೮ ಮತ್ತು ೨೧ ದಾಟಿದವರ ವಿವಾಹಗಳೆಂದು ಹೇಗೋ ಕದ್ದೂ ಮುಚ್ಚಿ ದಾಟಿಸಿಬಿಡುವುದು ನಡೆಯುತ್ತದೆ.

* * *

ಚಿಕ್ಕವಯಸ್ಸಿನಲ್ಲೇ ಮದುವೆಗೆ ನೂರಾರು ಕಾರಣಗಳು. ಅಥವಾ ಅಕಾರಣಗಳು! ಬಹಳ ಮುಖ್ಯ ಕಾರಣ ‘ನಮ್ಮೂರಿನಲ್ಲಿ ಹೈಸ್ಕೂಲ್‌ ಇಲ್ಲ. ನಾವು ಸುಮಾರು ೧೦ ಕಿಮೀ ದೂರಕ್ಕೆ ಹೋಗಬೇಕುʼ ಬೀದರ್‌ನ ವಿವಾಹಿತ ಬಾಲಕಿಯರ ಅಳಲು. ಹೈಸ್ಕೂಲ್‌ ದೂರ ಹೋದಂತೆ ಹೆಣ್ಣುಮಕ್ಕಳ ರಕ್ಷಣೆಯ ಚಿಂತೆ ಕುಟುಂಬಗಳಲ್ಲಿ. ಅದಕ್ಕೆ ಬಹಳ ಸುಲಭ ಉಪಾಯ ಮದುವೆ. 

ʼವಯಸ್ಸು ಇನ್ನೂ ಚಿಕ್ಕದು. ಮದುವೆ ಬೇಡ ಅಂತ ಯಾರು ಹೇಳಿದರೂ ಕೇಳಲ್ಲ. ನನ್ನ ಹತ್ತಿರಾನೂ ಎರಡು ʼಆಧಾರ್‌ʼ ಕಾರ್ಡ್‌ ಇದೆ. ಒಂದ್ರಲ್ಲಿ ವಯಸ್ಸು ಜಾಸ್ತಿ ತೋರಿಸಿರೋದು. ನನ್ನ ಹೆಸರಲ್ಲಿ ಓಟರ್‌ ಕಾರ್ಡ್‌ ಕೂಡಾ ಇದೆ. ಯಾರಾದರೂ ಕೇಳಿದ್ರೆ ಅದ್ನೇ ತೋರಿಸೋದುʼ ಚಾಮರಾಜನಗರದ ವಿವಾಹಿತ ಬಾಲಕಿಯರ ಮಾತು. (ವಾಸ್ತವವಾಗಿ ಇದು ವಯಸ್ಸಿನ ದೃಢೀಕರಣ ದಾಖಲೆ ಅಲ್ಲ. ಜನ್ಮ ದಾಖಲೆ ಪ್ರಮಾಣ ಪತ್ರವೇ ಅಧಿಕೃತ. ಅದಿಲ್ಲದಿದ್ದರೆ, ಶಾಲಾ ಮುಖ್ಯಸ್ಥರು ಕೊಡುವ ದಾಖಲೆಯನ್ನು ಮಾತ್ರ ನಿಜ ವಯಸ್ಸಿನ ದಾಖಲೆ ಎಂದು ಪರಿಗಣಿಸಲಾಗುತ್ತದೆ. ಜಿಲ್ಲಾ ವೈದ್ಯಾಧಿಕಾರಿಗಳು ನೀಡಿದ ಪ್ರಮಾಣಪತ್ರ ಮತ್ತು ಪೋಷಕರು ನೀಡುವ ಅಫಿಡವಿಟ್‌ ಜೊತೆಯಲ್ಲಿದ್ದರೆ ಮಾತ್ರ ಅದಕ್ಕೆ ಕಿಮ್ಮತ್ತು. ಯಾರೋ ವೈದ್ಯರು ಕೊಡುವ ವಯಸ್ಸಿನ ದೃಢೀಕರಣ ಪತ್ರಕ್ಕೆ ಬೆಲೆಯಿಲ್ಲ).

ಇನ್ನೊಂದು ಪ್ರಮುಖ ಕಾರಣ, ಈ ಹುಡುಗಿಯರು ಹೈಸ್ಕೂಲ್‌ಗೆ ಹೋಗುತ್ತಿದ್ದರೆ ಅವರ ಹಿಂದೆ ಸುತ್ತಾಡುವ ಕಾಮಣ್ಣಗಳು. ನಮ್ಮ ಎಲ್ಲ ಹೀರೋಗಳು ಸಿನೆಮಾಗಳಲ್ಲಿ ಮಾಡಿರುವ ‘ಸಮೂಹ ಪಾಠ’ ಅದೇ ಅಲ್ಲವೆ. ಹಿಂದೆಲ್ಲಾ ಈ ಹೀರೋಗಳು ನಡೆದು ಬರುತ್ತಿದ್ದರು, ಆಮೇಲೆ ಸೈಕಲ್‌ ಹತ್ತಿದರು, ಬಸ್‌ನಲ್ಲಿ ಹಿಂದೆ ಹಿಂದೆ ಬಂದರು, ಈಗೀಗ ಬೈಕು, ಕಾರು ತಂದು ನಿಲ್ಲುತ್ತಾರೆ, ಹಿಂಬಾಲಿಸುತ್ತಾರೆ. ಮೊಬೈಲ್‌ನಲ್ಲಿ ತಡವುತ್ತಾರೆ.

ಇವು ಸ್ನೇಹ, ಪ್ರೀತಿ ಎಂದೆದಷ್ಟೇ ಹೇಳಿದರೂ, ದೊಡ್ಡ ಪ್ರಮಾಣದಲ್ಲಿ ಹೆಣ್ಣುಮಕ್ಕಳು ಲೈಂಗಿಕ ದುರುಪಯೋಗ, ಸಾಗಣೆ, ಮಾರಾಟಕ್ಕೆ ಈಡಾಗಿರುವುದು, ಕೊಲೆಯಾಗಿರುವುದನ್ನು ಅಲ್ಲಗಳೆಯಲಾಗದು. ಇದನ್ನೆಲ್ಲಾ ತಡೆಯಬೇಕೆ? ಹುಡುಗಿ ಓಡಿ ಹೋಗುವುದನ್ನು ನಮ್ಮ ಕಣ್ಣಿನಿಂದ ನೋಡಬೇಕೆ? ಬೇಡ. ಹಾಗಾದರೆ, ಮಾಡಿಬಿಡಿ ‘ಮದುವೆʼ! ಸಿದ್ಧ ಉತ್ತರ ಮತ್ತು ಪರಿಹಾರ. ಚಿಕ್ಕಬಳ್ಳಾಪುರದ ಹಳ್ಳಿಗಳಲ್ಲಿ ನಡೆಸಿದ ಸಮಾಲೋಚನೆಯಲ್ಲಿ ಕಂಡು ಬಂದ ನಿತ್ಯ ಸತ್ಯ.

ಒಮ್ಮೆ ಮದುವೆಯಾಯಿತೆಂದರೆ, ಹುಡುಗಿ ವರ್ಷದೊಳಗೆ ಗರ್ಭ ಧರಿಸಬೇಕು, ಬೇಗ ಹೆರಬೇಕು. ಆದರೆ ೧೮ರೊಳಗೆ ಗರ್ಭ ಧರಿಸಿದರೆ ಅದನ್ನು ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೇಗೆ ಸುಧಾರಿಸುವುದು. ಪೊಲೀಸರು ಹೇಗೆ ಸುಮ್ಮನಿರುವುದು. ಹೀಗಾಗಿ ಮತ್ತೆ ಆಧಾರ್‌ ಕಾರ್ಡ್‌ ಪ್ರಯೋಗಿಸುವುದು! ವಯಸ್ಸು ಹೆಚ್ಚು ಹೇಳುವುದು. ಸರ್ಕಾರದ ಸಂಬಂಧಿತ ಇಲಾಖೆ ‘ತಾಯಿ ಮಗು ಕಾರ್ಡ್‌ನಲ್ಲಿ ವಯಸ್ಸನ್ನು ೧೮ ಎಂದು ಹೆಚ್ಚಿಸಿ ಬರೆಯುವುದುʼ ಬಾಗಲಕೋಟೆ ಮತ್ತು ಬೆಳಗಾವಿಯಲ್ಲಿ ವಿವಾಹಿತ ಹೆಣ್ಣುಮಕ್ಕಳೇ ಹಂಚಿಕೊಂಡ ವಿಚಾರ.  

೨೦೧೭ರಲ್ಲಿ ದೆಹಲಿಯ ಇಂಡಿಪೆಂಡೆಂಟ್‌ ಥಾಟ್‌ ಮತ್ತು ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ ಜಂಟಿಯಾಗಿ ಹಾಕಿದ್ದ ದಾವೆಯನ್ನು ಇತ್ಯರ್ಥ ಮಾಡಿದ್ದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಲೋಕೂರ್‌ ಅವರು ‘ಅಪ್ರಾಪ್ತ ವಯಸ್ಸಿನ ಹೆಂಡತಿಯೊಡನೆ ಲೈಂಗಿಕ ಸಂಪರ್ಕ ಅತ್ಯಾಚಾರ’ ಎಂದು ಘೋಷಿಸಿದರು. ಆ ಮೂಲಕ ಭಾರತ ದಂಡ ಸಂಹಿತೆಯ ಸೆಕ್ಷನ್‌ ೩೭೫ರಲ್ಲಿದ್ದ ಒಂದು ವಿನಾಯಿತಿಯನ್ನು ರದ್ದು ಮಾಡಿದೆ (೧೧ ಅಕ್ಟೋಬರ್‌ ೨೦೧೭). (೧೫ ವರ್ಷ ದಾಟಿದ ವಿವಾಹಿತ ಹೆಂಡತಿಯೊಡನೆ ಲೈಂಗಿಕ ಸಂಪರ್ಕ ಈ ಮೊದಲು ಅತ್ಯಾಚಾರವೆಂದು ಪರಿಗಣಿಸುತ್ತಿರಲಿಲ್ಲ).

ಈ ಪ್ರಕರಣವನ್ನು ಬಹಳ ಕಾಳಜಿಯಿಂದ ಕೈಗೆತ್ತಿಕೊಂಡಿದ್ದ ವಕೀಲರಾದ ಬೆಂಗಳೂರಿನ ಜೈನಾ ಕೊಥಾರಿ ಬಾಲ್ಯವಿವಾಹಗಳನ್ನು ಕೊನೆಗಾಳಿಸಲೇಬೇಕು, ವಿವಾಹದ ಸಂಬಂಧದಲ್ಲಿ ವಿವಾಹಿತ ಬಾಲಕಿಯರ ಶೋಷಣೆ ತಪ್ಪಲೇಬೇಕೆಂದು ಆಂದೋಲನದಲ್ಲಿ ತೊಡಗಿದ್ದಾರೆ. 

ಆದರೂ ಇನ್ನೂ ಅನೇಕ ವಕೀಲರು ೨೦೧೭ರಲ್ಲಿ ಆಗಿರುವ ತಿದ್ದುಪಡಿಯನ್ನು ಗಮನಿಸುವ ಗೋಜಿಗೇ ಹೋಗಿಲ್ಲ. 

zಕರ್ನಾಟಕ ಸರ್ಕಾರ ೨೦೧೭ರಲ್ಲೇ ಹೊರಡಿಸಿರುವ ತಿದ್ದುಪಡಿಯಂತೆ ೧೮ ವರ್ಷದೊಳಗಿನ ಹುಡುಗಿಗೆ ಮದುವೆ ಮಾಡಿದರೆ ಅದನ್ನು ಮದುವೆ/ವಿವಾಹ ಎನ್ನುವುದೇ ಇಲ್ಲ. ಅಂತಹ ಮದುವೆಗಳು ತಾವೇತಾವಾಗಿ ಅನೂರ್ಜಿತ. ಮದುವೆ ಮಾಡಿಕೊಂಡವರು ಪರಸ್ಪರರ ಮೇಲೆ ‘ಮದುವೆʼ ಸಂಬಂಧದ ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಳ್ಳಬಾರದು. ಜೊತೆಗೆ ಮದುವೆ ಮಾಡಿದವರು, ಮದುವೆಗೆ ಹಾಜರಾದವರು, ಸಹಾಯ ಮಾಡಿದವರು, ೧೮ ವರ್ಷ ದಾಟಿದ ಗಂಡನ್ನು ಪೊಲೀಸರು ಬಂಧಿಸುತ್ತಾರೆ.

ಇಂತಹ ಪ್ರಕರಣಗಳು ಕಂಡುಬಂದಾಗ ಪೊಲೀಸರು ತಾವೇ ತಾವಾಗಿ ಜಾಮೀನು ರಹಿತ ಆಪರಾಧಿಕ ಕೃತ್ಯ ಎಂದು ಪ್ರಕರಣ ದಾಖಲು ಮಾಡಿಕೊಳ್ಳಲೇಬೇಕು. ಈ ವಿಚಾರಗಳನ್ನು ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಕಾಯಿದೆಯನ್ನು ಉಲ್ಲಂಘಿಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಕರ್ನಾಟಕ ರಾಜ್ಯ ಸರ್ಕಾರ ಹೊರಡಿಸಿರುವ ನಿಯಮದಂತೆ ರಾಜ್ಯದುದ್ದಕ್ಕೂ ಹೆಜ್ಜೆಹೆಜ್ಜೆಗೂ ಬಾಲ್ಯವಿವಾಹ ನಿಷೇಧಾಧಿಕಾರಿಗಳಿದ್ದಾರೆ (ಒಂದು ಲೆಕ್ಕದ ಪ್ರಕಾರ ಸುಮಾರು ೪೮,೦೦೦).

* * *

 ‘ಓ! ಅಂದ್ರೆ ನನ್ನ ಮದ್ವೆ ಮದ್ವೇನೇ ಅಲ್ವ…?ʼ

ʼನಿಜವಾಗ್ಲೂನಾ… ಮದ್ವೇನೇ ಅಲ್ಲ ಅಂದ್ರೆ ನನಗೆ ಆ ಮದುವೆಯ ಜವಾಬ್ದಾರಿಗಳಾವುದೂ ಇಲ್ಲ ಅಲ್ವಾ?ʼ

ʼನನಗೆ ೧೮ ವರ್ಷ ದಾಟುವವರೆಗೆ ನನ್ನ ಗಂಡ ನನ್ನೊಡನೆ ಲೈಂಗಿಕವಾಗಿ ವರ್ತಿಸಬಾರದು ಅಲ್ವಾ?ʼ

ʼಅಂದ್ರೆ ನಾನು ನಿರ್ಧರಿಸುವವರೆಗೆ ಮಕ್ಕಳನ್ನು ಮಾಡಿಕೊಳ್ಳಲೇಬೇಕು ಅಂತ ಯಾರೂ ಬಲವಂತ ಮಾಡಬಾರದುʼ

ʼನಾನು ಮತ್ತೆ ಸ್ಕೂಲ್‌ಗೆ ಹೋಗಬಹುದಾ?ʼ

ಇಮೇಜ್‌ ಯೋಜನೆಯೊಡನೆ ಸಂಪರ್ಕದಲ್ಲಿರುವ ವಿವಾಹಿತ ಬಾಲಕಿಯರೊಡನೆ ನಡೆಸುತ್ತಿರುವ ಸಮಾಲೋಚನೆಗಳಲ್ಲಿ ಕೇಳಿಬರುವ ಕೆಲವು ಪ್ರಶ್ನೆಗಳು, ಉದ್ಗಾರಗಳು ಇವು. ಈ ಪ್ರಶ್ನೆಗಳು ಬರುವ ಮೊದಲೇ ನಾವು ಈ ಹೆಣ್ಣು ಮಕ್ಕಳನ್ನು ಬಾಲ್ಯವಿವಾಹದ ʼಬಾವಿʼಗೆ ಬೀಳುವುದನ್ನು ತಪ್ಪಿಸಿದ್ದೇ ಆದಲ್ಲಿ…

| ಮುಂದಿನ ಸಂಚಿಕೆಯಲ್ಲಿ |

‍ಲೇಖಕರು ವಾಸುದೇವ ಶರ್ಮ

March 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: