ಓದಲೇಬೇಕಾದ ಎಸ್ಥರ್ ದುಫ್ಲೋ ಮಕ್ಕಳ ಪುಸ್ತಕ ಸರಣಿ

ಮೂಲಭೂತ ವಿಚಾರಗಳ ಬಗ್ಗೆ ಮೂಲಭೂತ ಪ್ರಶ್ನೆಗಳು

ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞೆ ಎಸ್ಥರ್ ದುಫ್ಲೋ ರೂಪಿಸಿರುವ ಮಕ್ಕಳ ಪುಸ್ತಕ ಸರಣಿ

– ವಿಕಾಸ ಹೊಸಮನಿ

ಜೀವನ ನಿರ್ವಹಣೆ ಕಷ್ಟವಾಗಿದ್ದರೂ ಕೆಲವರು ಬೇರೆ ಊರಿಗೆ ಕೆಲಸಕ್ಕೇಕೆ ಹೋಗುವುದಿಲ್ಲ? ಐದನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೊದಲೇ ಎಷ್ಟು ಮಕ್ಕಳು ಸಾಯುತ್ತಾರೆ? ಸರಿಯಾದ ಲಸಿಕೆ ಅಥವಾ ಸೊಳ್ಳೆ ಪರದೆಗಳಿಗೆ ಹಣವಿದ್ದಿದ್ದರೆ ಅವರಲ್ಲಿ ಎಷ್ಟೊಂದು ಮಕ್ಕಳನ್ನು ರಕ್ಷಿಸಬಹುದಿತ್ತು. ದುರ್ಬಲರು ಹಿಂಸೆಗೆ ಒಳಗಾದಾಗ ಅವರ ಪರವಾಗಿ ನಿಲ್ಲುವಿರಾ? ಎಸ್ಥರ್ ದುಫ್ಲೋ ಅವರ ಕಾಳಜಿ ಹಾಗೂ ಮೂಲಭೂತ ಪ್ರಶ್ನೆಗಳಿವು.

ಎಸ್ಥರ್ ದುಫ್ಲೋ ಫ್ರೆಂಚ್-ಅಮೆರಿಕನ್ ಅರ್ಥಶಾಸ್ತ್ರಜ್ಞೆ. ಸಮಕಾಲೀನ ಅರ್ಥಶಾಸ್ತ್ರಜ್ಞರಲ್ಲಿ ಪ್ರಸಿದ್ಧರು. ಜಾಗತಿಕ ಬಡತನ ನಿರ್ಮೂಲನೆ ಮತ್ತು ಅಭಿವೃದ್ಧಿ ಅರ್ಥಶಾಸ್ತ್ರದ ವಿಷಯದಲ್ಲಿ ಎಸ್ಥರ್ ನೀಡಿದ ಅಮೂಲ್ಯ ಕೊಡುಗೆಗಾಗಿ; 2019ನೇ ಸಾಲಿನ ನೊಬೆಲ್ ಪ್ರಶಸ್ತಿಯನ್ನು ಪತಿ ಅಭಿಜಿತ್ ಬ್ಯಾನರ್ಜಿ ಮತ್ತು ಮೈಕೆಲ್ ಕ್ರೆಮರ್ ಅವರ ಜೊತೆ ಜಂಟಿಯಾಗಿ ಪಡೆದಿದ್ದಾರೆ.

ಎಸ್ಥರ್ ದುಫ್ಲೋ ಅವರು ಹಲವು ವಿಷಯಗಳಲ್ಲಿ ತಮ್ಮ ಸಮಕಾಲೀನ ಅರ್ಥಶಾಸ್ತ್ರಜ್ಞರಿಗಿಂತ ತುಂಬ ಭಿನ್ನರಾಗಿದ್ದಾರೆ. Poor Economics (ಬಡತನದ ಅರ್ಥಶಾಸ್ತ್ರ) ಎಂಬ ವಿಷಯದಲ್ಲಿ ಅವರು ನಡೆಸಿದ ಆಳವಾದ ಅಧ್ಯಯನ ಮತ್ತು ಅದರ ಕುರಿತು ನೀಡಿರುವ ಒಳನೋಟಗಳು ಜಗತ್ತಿನ ಗಮನ ಸೆಳೆದಿವೆ.

“ಜಾಗತಿಕ ಪಿಡುಗಾದ ಬಡತನದ ನಿರ್ಮೂಲನೆಯ ವಿಷಯದಲ್ಲಿ ಎಸ್ಥರ್ ಅವರು ಕಂಡುಕೊಂಡ ಪರಿಹಾರೋಪಾಯಗಳು ತುಂಬ ವಾಸ್ತವಿಕ ಮತ್ತು ಪ್ರಯೋಗಶೀಲತೆಯಿಂದ ಕೂಡಿದ್ದು, ಜಾಗತಿಕ ಬಡತನ ನಿರ್ಮೂಲನೆಯಲ್ಲಿ ಮುಖ್ಯ ಪಾತ್ರ ವಹಿಸಬಲ್ಲವು,” ಎಂದು ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಹೇಳಿರುವುದು ಎಸ್ಥರ್ ಅವರ ಕಾರ್ಯದ ಮಹತ್ವವನ್ನು ಸಾರುತ್ತದೆ.

ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಂತಹ ದೊಡ್ಡ ರಾಷ್ಟ್ರಗಳಲ್ಲಿ Microfinance (ಸೂಕ್ಷ್ಮ ಹಣಕಾಸು) ಯೋಜನೆ ಬಡ ಮತ್ತು ಕೆಳ ಮಧ್ಯಮವರ್ಗದ ಜನರ ಜೀವನಶೈಲಿಯ ಸುಧಾರಣೆಯಲ್ಲಿ ವಹಿಸುವ ಪಾತ್ರದ ಕುರಿತ ಎಸ್ಥರ್ ಅವರ ಅಧ್ಯಯನ ಮಹತ್ವದ ಒಳನೋಟಗಳಿಂದ ಕೂಡಿದ್ದು, ಸೂಕ್ಷ್ಮ ಹಣಕಾಸು ಯೋಜನೆಗಳ ಕುರಿತು ಮರುಚಿಂತನೆ ನಡೆಸಲು ಆಗ್ರಹಿಸುವಷ್ಟು ಪ್ರಭಾವಶಾಲಿಯಾಗಿದೆ.

ವಿಶಾಲ ವ್ಯಾಪ್ತಿ ಹೊಂದಿರುವ ಅರ್ಥಶಾಸ್ತ್ರದ ನಂಟಿನಲ್ಲಿದ್ದುಕೊಂಡು, ಮಕ್ಕಳಿಗಾಗಿ ಬರೆಯುವುದು ಸವಾಲಿನ ಕೆಲಸ. ಆದರೆ, ಎಸ್ಥರ್ ಇದನ್ನು ಮಟ್ಟಸವಾಗಿ ಮಾಡಿದ್ದಾರೆ. ಮಕ್ಕಳಿಗಾಗಿ ಆರ್ಥಿಕ ವಿಕಾಸ ಮತ್ತು ಮೂಲಭೂತ ಅಧಿಕಾರಗಳನ್ನು ಪಡೆಯುವ ಬಗೆಗಿನ ಐದು ಚಿತ್ರಪುಸ್ತಕಗಳ ಸರಣಿಯನ್ನು ರೂಪಿಸಿದ್ದು, ಇದಕ್ಕೆ ಶಾಯೆನ್ ಒಲೀವ್ಹಿಯೆ ಇಲ್ಲಸ್ಟ್ರೇಟ್ ಮಾಡಿದ್ದಾರೆ.

ಎಲ್ಲೇ ಇರಲಿ, ಮಕ್ಕಳು ಮಕ್ಕಳೇ, ಅವರಿಗೆ ಯಾವೆಲ್ಲ ತರಹದ ಅನುಭವಗಳಾಗಿದ್ದರೂ, ಅವರು ಸದಾ ಮುಕ್ತ ಮನಸ್ಸಿನವರೇ ಆಗಿರುತ್ತಾರೆ. ನಾವಿಲ್ಲಿ ನಮ್ಮದೇ ಸಿದ್ಧಾಂತಗಳನ್ನು, ಅಭಿಪ್ರಾಯಗಳನ್ನು ತಿಳಿಸಲು ಪ್ರಯತ್ನಿಸುತ್ತಿಲ್ಲ. ಮಕ್ಕಳು ಹೆಚ್ಚೆಚ್ಚು ಪ್ರಶ್ನೆಗಳನ್ನು ಕೇಳಲಿ ಎಂಬುದೇ ನಮ್ಮ ಆಶಯ.

– ಎಸ್ಥರ್ ದುಪ್ಲೋ

ಅಫಿಯಾ
ಅವಳನ್ನು ಗುಣಪಡಿಸುವವರು ಯಾರು?
ಅನುವಾದ
: ಎಚ್ ಎಸ್ ರಾಘವೇಂದ್ರ ರಾವ್

ಊಲಾ
ಚುನಾವಣಾ ಸಮಯ
ಅನುವಾದ
: ಎಸ್ ದಿವಾಕರ್

ನೆಸೊ ಮತ್ತು ನಾಜೆ
ದೊಡ್ಡ ಸಿಟಿಯ ಭಯವಿಲ್ಲ
ಅನುವಾದ
: ಓ ಎಲ್ ನಾಗಭೂಷಣಸ್ವಾಮಿ

ನೀಲೂ
ಇನ್ನು ಶಾಲೆ ತಪ್ಪಿಸುವುದಿಲ್ಲ!
ಅನುವಾದ
: ಜೆ ವಿ ಕಾರ್ಲೊ

ಬಿಬಿರ್
ಮಾಟಗಾತಿಗೊಂದು ಪುಟ್ಟ ಸಹಾಯ
ಅನುವಾದ
: ಎಲ್ ಸಿ ನಾಗರಾಜ್

ಪುಸ್ತಕ ಪರಿಚಯ:

ಅಫಿಯಾ
ಅವಳನ್ನು ಗುಣಪಡಿಸುವವರು ಯಾರು?
ಅನುವಾದ
: ಎಚ್ ಎಸ್ ರಾಘವೇಂದ್ರ ರಾವ್

ಅಫಿಯಾಗೆ ಆರೋಗ್ಯ ಚೆನ್ನಾಗಿಲ್ಲ. ರಾತ್ರಿಯೆಲ್ಲ ಮೈ ನಡುಕ. ನಿದ್ದೆಯಿಲ್ಲದೆ ಬಳಲಿದ್ದಾಳೆ. ಸ್ವತಃ ಔಷಧಿ ಅಂಗಡಿ ಮಾಲಿಕನಾದ ಅವಳ ಅಪ್ಪ ಹಳ್ಳಿಯ ವೈದ್ಯ ದಾದಾಸ್ ಹತ್ತಿರ ಚಿಕಿತ್ಸೆ ಕೊಡಿಸಿದರೂ ಅಫಿಯಾಳಿಗೆ ಗುಣವಾಗುವುದಿಲ್ಲ. ಹಳ್ಳಿಯ ವೈದ್ಯ ದಾದಾಸ್ ಭೂಗೋಳದಲ್ಲಿ ಡಿಪ್ಲೋಮಾ ಪದವಿ ಪಡೆದವನು! ಅವನಿಂದ ಯಾವುದೇ ಪ್ರಯೋಜನವಿಲ್ಲ ಎಂದು ತಿಳಿದಾಗ ಹಳ್ಳಿಯ ಮಂತ್ರವಾದಿ ಬಕಾಲಾನ ಹತ್ತಿರ ಹೋಗುತ್ತಾರೆ. ಅಲ್ಲೂ ಅಫಿಯಾಳ ರೋಗ ಗುಣವಾಗದೇ ಹೋದಾಗ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ಓಡುತ್ತಾರೆ. ಈ ಹೊತ್ತಿಗೆ ಅಫಿಯಾ ಸಾಕಷ್ಟು ನಿಶ್ಶಕ್ತಳಾಗಿರುತ್ತಾಳೆ. ಆರೋಗ್ಯ ಕೇಂದ್ರದಲ್ಲಿ ಅಫಿಯಾಳಿಗೆ ಬಂದಿರುವುದು ಮಲೇರಿಯಾ ಕಾಯಿಲೆಯೆಂದು ಗುರುತಿಸಿ, ಸೂಕ್ತ ಚಿಕಿತ್ಸೆ ನೀಡುತ್ತಾರೆ. ಆರೋಗ್ಯ ಕೇಂದ್ರದಲ್ಲಿ ಲಸಿಕೆ ಖಾಲಿಯಾಗಿದ್ದರಿಂದ ನೀಲೂಳ ತಂದೆ ದೊಡ್ಡ ನಗರಕ್ಕೆ ಹೋಗಿ ಲಸಿಕೆ ತಂದು ಕೊಡುತ್ತಾರೆ. ಲಸಿಕೆ ಪಡೆದ ನಂತರ ಅಫಿಯಾಳ ಆರೋಗ್ಯ ಸುಧಾರಿಸುತ್ತದೆ. ಮುಂದೆ ಸರ್ಕಾರದಿಂದ ಅಫಿಯಾಳ ಹಳ್ಳಿಯವರಿಗೆಲ್ಲಾ ಉಚಿತವಾಗಿ ಲಸಿಕೆ ನೀಡಲಾಗುತ್ತದೆ ಮತ್ತು ಸೊಳ್ಳೆ ಪರದೆಗಳನ್ನು ಹಂಚಲಾಗುತ್ತದೆ.

ದಡಾರ ಮತ್ತು ಮಲೇರಿಯಾದಂತಹ ರೋಗಗಳಿಂದ ಸೊಳ್ಳೆ ಪರದೆ ಉಪಯೋಗಿಸುವ ಮೂಲಕ ಮತ್ತು ಲಸಿಕೆ ಪಡೆದುಕೊಳ್ಳುವ ಮೂಲಕ ಯಾವ ರೀತಿ ಪಾರಾಗಬಹುದು ಎಂಬುದನ್ನು ತುಂಬ ಚೆನ್ನಾಗಿ ನಿರೂಪಿಸಿದೆ.

ಊಲಾ
ಚುನಾವಣಾ ಸಮಯ
ಅನುವಾದ
: ಎಸ್ ದಿವಾಕರ್

ಈಗಾಗಲೇ ಗ್ರಾಮ ಪಂಚಾಯತಿ ಅಧ್ಯಕ್ಷೆಯಾದ ನೂರ್ ಮತ್ತೆ ಚುನಾವಣೆಗೆ ನಿಲ್ಲುವಂತಿಲ್ಲ ಎಂಬ ವಿಷಯದಿಂದ ಆರಂಭವಾಗಿ ನೀಲೂಳ ತಾಯಿ ಶೋನಾ ಚುನಾವಣೆಯಲ್ಲಿ ಗೆಲ್ಲುವುದರೊಂದಿಗೆ ಸುಖಾಂತ್ಯ ಕಾಣುತ್ತದೆ. ಊರ ಜನರ ಹಿತದೃಷ್ಟಿಯಿಂದ ಕೆಲಸ ಮಾಡುವ ನೂರ್ ಮತ್ತೆ ಅಧ್ಯಕ್ಷೆಯಾಗುವುದು ಮಾಗೂಗೆ ಇಷ್ಟವಿಲ್ಲ. ಅದೇ ರೀತಿ ಊರ ಜನರ ಹಿತಚಿಂತನೆ ಮಾಡದ ಮಾಗೂ ಚುನಾವಣೆಯಲ್ಲಿ ಗೆಲ್ಲುವುದು ತುಂಬ ಜನರಿಗೆ ಇಷ್ಟವಿಲ್ಲ. ಆದ್ದರಿಂದ ಶೋನಾ ಚುನಾವಣೆಗೆ ನಿಂತು ಗೆಲ್ಲುತ್ತಾಳೆ.

ಸ್ಥಳೀಯ ಸಂಸ್ಥೆಗಳು, ಚುನಾವಣೆಗಳು, ಊರ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣದ ಅಗತ್ಯವನ್ನು ತುಂಬ ಸರಳವಾಗಿ, ಮಕ್ಕಳಿಗೆ ಅರ್ಥವಾಗುವಂತೆ ಹೇಳುವಲ್ಲಿ ಯಶಸ್ವಿಯಾಗಿದೆ.

ನೆಸೊ ಮತ್ತು ನಾಜೆ
ದೊಡ್ಡ ಸಿಟಿಯ ಭಯವಿಲ್ಲ
ಅನುವಾದ
: ಓ ಎಲ್ ನಾಗಭೂಷಣಸ್ವಾಮಿ

ಬಡತನದಿಂದ ಕಂಗೆಟ್ಟ ನೆಸೊ ಮತ್ತು ನಾಜೆ ದೊಡ್ಡ ಸಿಟಿಗೆ ಹೋಗಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುವ ಮೂಲಕ ಹಣ ಸಂಪಾದಿಸುತ್ತಾರೆ. ತಾವು ಸಂಪಾದಿಸಿದ ಹಣವನ್ನು ಹಳ್ಳಿಯಲ್ಲಿರುವ ತಮ್ಮ ಕುಟುಂಬಗಳಿಗೆ ಕಳಿಸುತ್ತಾರೆ. ಅವರು ಕಳಿಸುವ ಹಣದಿಂದ ಅವರ ಕುಟುಂಬಗಳು ನೆಮ್ಮದಿಯಾಗಿ ಬಾಳುವಂತಾಗುತ್ತದೆ. ಆದರೆ, ಇದ್ದಕ್ಕಿದ್ದಂತೆ ಬಂದ ಸಾಂಕ್ರಾಮಿಕ ರೋಗದ ಕಾರಣ ಲಾಕ್ಡೌನ್ ಆಗಿ ಕೆಲಸಗಳು ನಿಂತು ಬಿಡುತ್ತವೆ. ಮುಂದೆ ನಿಧಾನವಾಗಿ ಎಲ್ಲ ಸರಿಯಾದಾಗ ನೆಸೊ ಮತ್ತು ನಾಜೆ ಪುನಃ ಸಿಟಿಗೆ ಮರಳಿ, ಯಜಮಾನನ ಮನವೋಲಿಸಿ ತಮಗೆ ಬೇಕಾದ ಕೆಲವು ಸೌಲಭ್ಯಗಳನ್ನು ಪಡೆಯುತ್ತಾರೆ.

ಬಡತನ, ಸಾಂಕ್ರಾಮಿಕ ರೋಗಗಳ ಪರಿಣಾಮಗಳು, ಕಾರ್ಮಿಕರ ಕಷ್ಟಗಳು ಮತ್ತು ಕಾರ್ಮಿಕರ ಮೂಲಭೂತ ಹಕ್ಕುಗಳಾದ ಊಟ, ವಸತಿ ಮತ್ತು ವೇತನದ ಕುರಿತ ಜಾಗೃತಿಯನ್ನು ಮಕ್ಕಳಿಗೆ ತುಂಬ ಸರಳವಾಗಿ ತಿಳಿಯುವಂತೆ ಹೇಳಲಾಗಿದೆ.

ನೀಲೂ
ಇನ್ನು ಶಾಲೆ ತಪ್ಪಿಸುವುದಿಲ್ಲ!
ಅನುವಾದ
: ಜೆ ವಿ ಕಾರ್ಲೊ

ಶಾಲೆಯೆಂದರೆ ಇಷ್ಟವಿಲ್ಲದ ನೀಲೂ ಎಂಬ ಪುಟ್ಟ ಬಾಲಕಿಯ ಕತೆ. ಶಾಲೆಯ ಪಾಠಗಳು, ಸೊಸ್ಸಾ ಮಿಸ್ಸಿನ ಬಯ್ಗುಳಗಳಿಂದ ಬೇಸತ್ತಿರುವ ನೀಲೂಗೆ ಶಾಲೆಯೆಂದರೆ ಅಲರ್ಜಿ. ಹೀಗಾಗಿ ಅವಳು ಶಾಲೆಗೆ ಚಕ್ಕರ್ ಹಾಕಿ ಬಿಬಿರ್, ಥುಂಪಾ ಮತ್ತು ಊಲಾರ ಜೊತೆ ಆರಾಮಾಗಿ ಆಟವಾಡಿಕೊಂಡಿರುತ್ತಾಳೆ. ಕೊನೆಗೆ ಅವಳ ಅಮ್ಮ ಇದನ್ನು ಪತ್ತೆ ಹಚ್ಚಿ ಅವಳನ್ನು ಪುನಃ ಶಾಲೆಗೆ ಕರೆದೊಯ್ಯುತ್ತಾಳೆ. ಆನಂತರವೂ ಭಾರೀ ಸುಧಾರಣೆ ಕಾಣದೇ, ಪೋಷಕರೆಲ್ಲ ಬೇಸರದಲ್ಲಿ ಇದ್ದಾಗ, ಪಟ್ಟಣದಿಂದ ಒಬ್ಬ ಅಕ್ಕ ಸಾಕಷ್ಟು ಪುಸ್ತಕಗಳ ಸಮೇತ ಊರಿಗೆ ಬರುವುದರೊಂದಿಗೆ, ಸಿಟಿಗೆ ಹೋಗಿ ನವೀನ ಕಲಿಕಾ ವಿಧಾನಗಳನ್ನು ಕಲಿತು ಬಂದ ದೊಡ್ಡ ಮಕ್ಕಳು, ಚಿಕ್ಕ ಮಕ್ಕಳಿಗೆ ಪಾಠ ಹೇಳಿ ಕೊಡಲು ಆರಂಭಿಸಿದ ನಂತರ ನೀಲೂ ಸೇರಿದಂತೆ ಎಲ್ಲ ಮಕ್ಕಳಿಗೆ ಕಲಿಕೆ ಸುಲಭವಾಗುತ್ತದೆ.

ಶಿಕ್ಷಣದ ಮಹತ್ವ ಮತ್ತು ಹೊಸ ಕಲಿಕಾ ವಿಧಾನಗಳ ಕುರಿತು ಮಕ್ಕಳ ಗಮನ ಸೆಳೆಯುತ್ತದೆ. ಕಲಿಕೆ ಮಕ್ಕಳಿಗೆ ಭಾರವೆನಿಸದೇ, ಇಷ್ಟಪಟ್ಟು ಕಲಿಯುವಂತಾಗಬೇಕೆಂದು ತಿಳಿಸುವಲ್ಲಿ ಈ ಕತೆ ಸಫಲವಾಗಿದೆ.

ಬಿಬಿರ್
ಮಾಟಗಾತಿಗೊಂದು ಪುಟ್ಟ ಸಹಾಯ
ಅನುವಾದ
: ಎಲ್ ಸಿ ನಾಗರಾಜ್

ಒಬ್ಬ ಮುದುಕಿ ಊರ ಜನರಿಂದ ತಿರಸ್ಕೃತಳಾಗಿ ಊರಾಚೆ ಒಬ್ಬಂಟಿಯಾಗಿ ಬದುಕುತ್ತಿದ್ದಾಳೆ. ಅವಳಿಗೆ ಮಾಟಗಾತಿ ಎಂಬ ಕುಖ್ಯಾತಿಯಿದೆ. ಆದರೆ, ಅವಳು ಮಾಟಗಾತಿಯಲ್ಲ. ಬಡತನದಿಂದ ಬಳಲುತ್ತಿರುವ ಅವಳ ಕೈಯಲ್ಲಿ ಯಾವುದೇ ಕೆಲಸ ಇಲ್ಲ, ಹೊಟ್ಟೆಗೆ ಅನ್ನವೂ ಇಲ್ಲ. ಇದನ್ನು ಮೊದಲು ಗುರುತಿಸುವವ ಪುಟ್ಟ ಬಾಲಕ ಬಿಬಿರ್. ಮುಂದೆ ಸರ್ಕಾರಿ ಯೋಜನೆಯೊಂದರಲ್ಲಿ ಮುದುಕಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಹೊಲಿಗೆ ಯಂತ್ರ ನೀಡಲಾಗುತ್ತದೆ. ಹೊಲಿಗೆಯಲ್ಲಿ ನುರಿತವಳಾದ ಅಜ್ಜಿ ಊರ ಜನರಿಗೆ ಒಳ್ಳೊಳ್ಳೆಯ ಬಟ್ಟೆ ಹೊಲಿದು ಕೊಡುತ್ತಾಳೆ. ಮುಂದೆ ಕೊರೋನಾ ಸಮಯದಲ್ಲಿ ಮಾಸ್ಕ್ ಗಳಿಗೆ ತುಂಬ ಬೇಡಿಕೆ ಬರುತ್ತದೆ. ಆ ಸಮಯದಲ್ಲಿ ಸಾಕಷ್ಟು ಮಾಸ್ಕ್ ಹೊಲಿದು ಕೊಡುವ ಮೂಲಕ ಸಂಪಾದನೆ ಕೂಡ ಮಾಡುತ್ತಾಳೆ. ಮುಂದೆ ಅವಳ ಹೊಲಿಗೆಯ ಕೆಲಸಕ್ಕೆ ಹೆಚ್ಚಿನ ಬೇಡಿಕೆ ಬಂದಾಗ ಊರ ಜನರಲ್ಲಿ ಕೆಲವರನ್ನು ಸೇರಿಸಿಕೊಳ್ಳುತ್ತಾಳೆ.

ಸ್ವಾವಲಂಬನೆ ಮತ್ತು ಸ್ವಯಂ ಉದ್ಯೋಗದ ಮಹತ್ವವನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡುತ್ತದೆ. ಅದೇ ರೀತಿ ಬಡವರು ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆದು ಹೇಗೆ ಬದುಕು ರೂಪಿಸಿಕೊಳ್ಳಬಹುದು ಎಂಬುದನ್ನು ಸಹ ಸೊಗಸಾಗಿ ಹೇಳಿದ ಕತೆ.

===

ದೃಷ್ಟಿಕೋನ ಬದಲಿಸಲು ಪ್ರಯತ್ನಿಸಿದ್ದಾರೆ..

ಅಭಿಜಿತ್ ಬ್ಯಾನರ್ಜಿ ಹೇಳೋದು ಸರಿ. ಬಡತನವನ್ನು ಕುರಿತು ಇಂದು ನಡೆಯುತ್ತಿರುವ ಚರ್ಚೆಯಲ್ಲೇ ಸಮಸ್ಯೆಯಿದೆ. ಬಡವರಾಗಿರೋದು ಎಷ್ಟು ಕಷ್ಟ ಅನ್ನೋದನ್ನು ಅದು ಗಮನಿಸೋದೆ ಇಲ್ಲ. ಅವರು ಬದುಕೋದಕ್ಕೆ ನಡೆಸುತ್ತಿರುವ ಹೆಣಗಾಟಕ್ಕೆ ಅವರೇ ಕಾರಣ ಅನ್ನೋ ತರ ಮಾತನಾಡುತ್ತಿವೆ.

ಎಸ್ಥರ್ ದುಫ್ಲೋ ಮಕ್ಕಳಿಗಾಗಿ ರೂಪಿಸಿರುವ ಈ ಚಿತ್ರಪುಸ್ತಕಗಳ ಸರಣಿಯಲ್ಲಿ ಬಡತನವನ್ನು ನೋಡುವ ಈ ದೃಷ್ಟಿಯನ್ನು ಬದಲಿಸಲು ಪ್ರಯತ್ನಿಸಿದ್ದಾರೆ. ಸರಣಿಯಲ್ಲಿ ಅವರು ಬಡತನದ ಚಿತ್ರವನ್ನು ಕಟ್ಟಿಕೊಡುವುದಕ್ಕೆ ಪುಸ್ತಕದ ಉದ್ದಕ್ಕೂ ವಾಸ್ತವ ಬದುಕಿನ ಹಲವು ಘಟನೆಗಳನ್ನು ಬಳಸಿಕೊಂಡಿದ್ದಾರೆ. ಆ ಘಟನೆಗಳು ನಮ್ಮನ್ನು ಕಾಡುತ್ತವೆ. ಅವರ ಕತೆ ಹೇಳುವ ಆ ಗುಣ ಈ ಚಿತ್ರಪುಸ್ತಕಗಳನ್ನು ಮಕ್ಕಳ ಜೊತೆಗೆ ದೊಡ್ಡವರನ್ನೂ ಆತ್ಮೀಯವಾಗಿ ಓದುವುದಕ್ಕೆ ಒತ್ತಾಯಿಸುತ್ತವೆ.

ಆ ಘಟನೆಗಳು ಬರವಣಿಗೆಯನ್ನು ಹೆಚ್ಚು ಆಕರ್ಷವಾಗಿಸುತ್ತವೆ. ಆದರೆ, ಅಷ್ಟೇ ಅಲ್ಲ ಅವು ಬಡತನದ ಹಲವು ಆಯಾಮಗಳನ್ನು ನಮಗೆ ಪರಿಚಯಿಸುತ್ತವೆ. ಕತೆಯ ರೂಪ ತಾಳಿಕೊಂಡು ಅದರೊಳಗಿನ ಪಾತ್ರಗಳೇ ತಮ್ಮ ಬದುಕನ್ನು ಹೇಳ ಹೊರಟಾಗ ನಮ್ಮ ಮುಂದೆ ಇಡೀ ಬಡತನದ ಒಂದು ಚಿತ್ರ ಅನಾವರಣಗೊಳ್ಳುತ್ತದೆ. ಅವು ಯಾರನ್ನೂ ಮುಟ್ಟಬಲ್ಲವು. ಮಕ್ಕಳ ಮನಸ್ಸನ್ನು ಮುಟ್ಟುವುದರಲ್ಲಿ ಅನುಮಾನವೇ ಇಲ್ಲ. ಹಾಗೆಯೇ ಅವರನ್ನು ಯೋಚನೆಗೂ ಹಚ್ಚಬಲ್ಲವು. ದುಫ್ಲೋ ಅಂತಹ ಘಟನೆಗಳನ್ನು ಕತೆಯಾಗಿಸಿ, ಜೊತೆಗೆ ಚಿತ್ರಗಳನ್ನೂ ಸೇರಿಸಿ ಸೊಗಸಾದ ಮಕ್ಕಳ ಪುಸ್ತಕವನ್ನು ರಚಿಸಿದ್ದಾರೆ. ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದಿರುವ ಎಸ್ಥರ್ ದುಫ್ಲೋ ‘ಪೂರ್ ಇಕನಾಮಿಕ್ಸ್’ ಪುಸ್ತಕ ಬರೆದಾಗಲೇ ಮಕ್ಕಳಿಗಾಗಿಯೂ ಅದನ್ನು ರಚಿಸಬೇಕು ಅಂತ ಅಂದುಕೊಂಡಿದ್ದರಂತೆ.

ದುಫ್ಲೋ ಅವರು ಬಡತನವನ್ನು ಅರ್ಥ ಮಾಡಿಕೊಳ್ಳುವ ಕ್ರಮ ಈ ಕೆಲಸವನ್ನು ಇನ್ನಷ್ಟು ಸಲೀಸು ಮಾಡಿದೆ. ಬಡತನ ನಿವಾರಣೆಯ ಸಮಸ್ಯೆಯನ್ನು ಹಲವು ಸಣ್ಣ ಸಣ್ಣ ಸಮಸ್ಯೆಗಳ ಗುಚ್ಛವಾಗಿ ನೋಡುತ್ತಾರೆ. ಆ ಚಿಕ್ಕ ಚಿಕ್ಕ ನಿರ್ದಿಷ್ಟ ಸಮಸ್ಯೆಗಳನ್ನು ಬಿಡಿಸಿಕೊಳ್ಳುತ್ತಾ ದೊಡ್ಡ ವಿಶಾಲವಾದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಹೀಗೆ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ತಾವು ನೆರವಾಗಬೇಕು ಅಂದುಕೊಂಡಿರುವ ಜನರ ಬದುಕಿನ ಸೂಕ್ಷ್ಮಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಹಾಗಾಗಿ ದುಫ್ಲೋ ಅವರಿಗೆ ಬಡತನದ ಚಿತ್ರವನ್ನು ಮಕ್ಕಳಿಗೆ ಕಟ್ಟಿಕೊಡಬೇಕು ಅಂದುಕೊಂಡಾಗ ಅದನ್ನು ಐದು ಚಿಕ್ಕ ಚಿಕ್ಕ ಕತೆಗಳಾಗಿ ಒಡೆಯುವುದಕ್ಕೆ ಸಾಧ್ಯವಾಗಿದೆ. ಅದರ ಫಲವೇ ಈ ಸರಣಿ.

ಈ ಸರಣಿ ಪುಸ್ತಕಗಳ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸಿರುವುದು ಅವುಗಳ ಚಿತ್ರಗಳು. ಇದು ದುಫ್ಲೋ ಹಾಗೂ ಶಾಯೆನ್ ಒಲೀವ್ಹಿಯೆ ಅವರು ಒಟ್ಟಿಗೆ ಸೇರಿ ರಚಿಸಿರುವ ಸರಣಿ ಅನ್ನುವಷ್ಟರ ಮಟ್ಟಿಗೆ ಇದಕ್ಕೆ ಪೂರಕವಾಗಿವೆ. ದುಫ್ಲೋ ಹೇಳುವಂತೆ ಕತೆ ಮುಖ್ಯ. ಆದರೆ, ಅದು ಕೇವಲ ಚಿತ್ರಕ್ಕೆ ಹಿನ್ನಲೆಯಲ್ಲ. ಚಿತ್ರಗಳೂ ತುಂಬಾ ಮುಖ್ಯ. ಆದರೆ, ಅದು ಕೇವಲ ಕತೆಯ ಇಲ್ಲಸ್ಟ್ರೇಷನ್ ಅಲ್ಲ. ಇಬ್ಬರೂ ಸೇರಿ ಒಟ್ಟಿಗೆ ಕಟ್ಟಿರುವ ಸರಣಿ ಇದು.

ಬಡತನ ಒಂದು ದೇಶಕ್ಕೆ, ಒಂದು ಸಮುದಾಯಕ್ಕೆ ಸೀಮಿತವಾದ ಸಮಸ್ಯೆಯಲ್ಲ. ಹಾಗಾಗಿಯೇ ಚಿತ್ರದಲ್ಲಿ ಮೂಡಿರುವ ಪಾತ್ರಗಳು ಕೀನ್ಯಾದವರಾಗಿರಬಹುದು, ಭಾರತೀಯರೂ ಆಗಿರಬಹುದು. ಹಿನ್ನೆಲೆಯೂ ಹಾಗೆ. ಚಿತ್ರಗಳು ಸರಳವಾದ ಜ್ಯಾಮಿತಿಯ ಆಕಾರಗಳನ್ನು ಬಳಸಿಕೊಂಡು ಸೃಷ್ಟಿಯಾಗಿವೆ. ಸಾಮಾನ್ಯವಾಗಿ ಬಡತನವನ್ನು ಪ್ರತಿನಿಧಿಸಲು S (ಎಸ್) ಮತ್ತು I (ಐ) ಆಕಾರದ ರೇಖೆಗಳನ್ನು ಬಳಸಿಕೊಂಡಿದ್ದಾರೆ. ಜೊತೆಗೆ ಪ್ರಾಣಿಗಳು, ಮರಗಳು, ಹಣ್ಣು, ತರಕಾರಿ, ಕಲ್ಲು, ಬಂಡೆ, ಸೊಳ್ಳೆ ಹೀಗೆ ಇಡೀ ವಿಶ್ವವೇ ಮೂಡಿಬಂದಿದೆ.

ಮಕ್ಕಳು ಹೊಸ ಚಿಂತನೆಗಳಿಗೆ ಹೆಚ್ಚು ಮುಕ್ತವಾಗಿ ತೆರೆದುಕೊಳ್ಳುತ್ತಾರೆ. ಜೊತೆಗೆ ಅವರು ಜಾಣರೂ ಕೂಡ. ಅವರಿಗೆ ಏನು ಹೇಳಿದರೂ ಗ್ರಹಿಸಿಕೊಳ್ಳುತ್ತಾರೆ. ತನ್ನ ಜೊತೆಯ ಅರ್ಥಶಾಸ್ತ್ರಜ್ಞರ ಜೊತೆ ಚರ್ಚಿಸುವಂತೆಯೇ ಮಕ್ಕಳೊಂದಿಗೂ ಸಂಶೋಧನೆಗಳನ್ನು ಕುರಿತು ಮಾತನಾಡಬೇಕು, ಅವರಿಗೂ ಬಡತನ, ನಿರುದ್ಯೋಗ ಇತ್ಯಾದಿ ವಿಷಯಗಳು ತಿಳಿದಿರಬೇಕು ಅನ್ನುವ ಕಾಳಜಿ ದುಫ್ಲೋಗೆ ಇದೆ. ಮಕ್ಕಳೂ ಆ ಬಗ್ಗೆ ಯೋಚಿಸಬೇಕು. ಪರಿಹಾರವನ್ನು ಕುರಿತು ಚಿಂತಿಸಬೇಕು. ಆ ನಿಟ್ಟಿನಲ್ಲಿ ಭೌದ್ಧಿಕವಾಗಿ ಮಕ್ಕಳನ್ನು ಪ್ರೇರೇಪಿಸಬಲ್ಲ ಸಾಮರ್ಥ್ಯ ಈ ಪುಸ್ತಕಗಳಿಗಿದೆ. ಇಂತಹ ಗಹನವಾದ ಚಿಂತನೆಯಲ್ಲಿ ಮಕ್ಕಳನ್ನು ಸೇರಿಸಿಕೊಳ್ಳುವ ಕೆಲಸ ದುಫ್ಲೋ ಅಂತಹವರಿಂದ ಮಾತ್ರ ಸಾಧ್ಯ.

– ಟಿ ಎಸ್ ವೇಣುಗೋಪಾಲ್

‍ಲೇಖಕರು avadhi

July 16, 2024

ನಿಮಗೆ ಇವೂ ಇಷ್ಟವಾಗಬಹುದು…

‘ವೀರಲೋಕ’ದಿಂದ ಉತ್ತರಪರ್ವ

‘ವೀರಲೋಕ’ದಿಂದ ಉತ್ತರಪರ್ವ

ಸಾಮಾನ್ಯವಾಗಿ ಸಾಹಿತ್ಯಲೋಕದಲ್ಲಿ ಕೇಳಿಬರುವ ಮಾತು… ಎಲ್ಲಾ ಪ್ರಶಸ್ತಿಗಳು, ವೇದಿಕೆಗಳು, ಅಧಿಕಾರ, ಅವಕಾಶಗಳು ಒಂದು ಭಾಗದ ಜನರಿಗೇ ದಕ್ಕುತ್ತವೆ....

ಬೆಂಬಿಡದ ದಾಹ

ಬೆಂಬಿಡದ ದಾಹ

** ಎದ್ದೆ. ಕಣ್ಬಿಟ್ಟಾಗ ರೂಮು ಅರೆ ಕತ್ತಲಾಗಿತ್ತು, ಫ್ಯಾನ್ ಎರಡರ ಸ್ಪೀಡಿನಲ್ಲಿ ತಿರುಗುತ್ತಿತ್ತು, ಮೊಬೈಲ್ ಚಾರ್ಜ್ ಆಗುತ್ತಿತ್ತು,...

ಶ್ರೀನಿವಾಸ ಪ್ರಭು ಅಂಕಣ: ಅಂತೂ ನಾಟಕ ಅಕಾಡೆಮಿ ಪ್ರಶಸ್ತಿ ಹುಡುಕಿಕೊಂಡು ಬಂತು!

ಶ್ರೀನಿವಾಸ ಪ್ರಭು ಅಂಕಣ: ಅಂತೂ ನಾಟಕ ಅಕಾಡೆಮಿ ಪ್ರಶಸ್ತಿ ಹುಡುಕಿಕೊಂಡು ಬಂತು!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ...

0 Comments

Submit a Comment

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This