ಓಟಿಟಿ ಮಾದ್ಯಮವೂ ಮತ್ತು ಹೊಸಹುಟ್ಟು ಪಡೆಯುತ್ತಿರುವ ಘಟನೆಗಳು

ಸಂತೋಷಕುಮಾರ್ ಪಾಟೀಲ್

—-

ಹಿಂದೆ ನಡೆದ ಘಟನೆಗಳನ್ನು ಆಧರಿಸಿ ವೆಬ್ ಸರಣಿ ನಿರ್ಮಿಸುವುದು ಇತ್ತೀಚೆಗೆ ಜನಪ್ರಿಯ ಮಾದರಿಯಾಗಿದೆ.. ಉದಾಹರಣೆಗೆ ವೀಕ್ಷಕರ ಪ್ರಶಂಸೆಗೆ ಪಾತ್ರವಾಗುತ್ತಿರುವ Railway men ಕೂಡಾ ಇದೇ ಸಿದ್ದ ಮಾದರಿಯ ಪಡಿಯಚ್ಚಿನಲ್ಲಿ ನಿರ್ಮಿಸಿದ ಹೊಸ ಸರಣಿ..‌

ನನಗೆ ತಿಳಿದಂತೆ ಈ ಥರದ ಹಿಂದೆ ಘಟಿಸಿದ ಘಟನೆ, ವ್ಯಕ್ತಿಗಳನ್ನು ಆಧರಿಸಿ ಪ್ರಮುಖವಾಗಿ ಮೂರು ಪ್ರಕಾರದಲ್ಲಿ ಕೃತಿಯನ್ನು ನಿರ್ಮಿಸಲಾಗುತ್ತಿದೆ.. ಮೊದಲನೆಯದು ನೇರವಾಗಿ ಡಾಕ್ಯುಮೆಂಟರಿ ತರಹದವುಗಳು, ಎರಡನೆಯವು ಫಟನೆ ಅಥವಾ ವ್ಯಕ್ತಿ ಕೇಂದ್ರಿತ ಸರಣಿಗಳು, ಮೂರನೆಯದಾಗಿ ಕೇಂದ್ರದಲ್ಲಿ ಒಂದು ಜನಪ್ರಿಯ/ ವಿವಾದಾತ್ಮಕ ಘಟನೆ ಅಥವಾ ವ್ಯಕ್ತಿಯನ್ನಿಟ್ಟುಕೊಂಡು ಅದರ ಇತರ ಪರಿಧಿಯ ವಿಷಯ, ವ್ಯಕ್ತಿಗಳ ಬಗೆಗಿನ ಸರಣಿಗಳು.. ‌

ಮೊದಲನೆಯ ಪ್ರಕಾರದಲ್ಲಿ ನೇರವಾಗಿ ಆ ಘಟನೆಯ ಎಲ್ಲಾ ಆಯಾಮಗಳ ವಸ್ತುನಿಷ್ಠ ವಿವರಗಳನ್ನು ಬಿಚ್ಚಿಡುವುದು.. ಇವು ಬಹುತೇಕ ಸಾಕ್ಷ್ಯಚಿತ್ರ ಮಾದರಿಯವು.‌ ಇವುಗಳಲ್ಲಿ ಸೃಜನಶೀಲ ಅಭಿವ್ಯಕ್ತಿಗೆ ಅತ್ಯಗತ್ಯವಾದ “Dramatization”(ನಾಟಕೀಯತೆ) ಮತ್ತು fiction (ಕಲ್ಪನೆ) ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ, ವಸ್ತುನಿಷ್ಠತೆಗೆ ಆದ್ಯತೆ ಹೆಚ್ಚು.. ವಸ್ತು, ವಿಷಯದ ಬಗ್ಗೆ ಆಳವಾದ ಸಂಶೋಧನೆ ಮಾಡಿ ಇದುವರೆಗೂ ವೀಕ್ಷಕರಿಗೆ ಗೊತ್ತಿರದ ಅಂಶಗಳನ್ನು ಪ್ರೇಕ್ಷಕರ ಮುಂದಿರಿಸಿ ವೀಕ್ಷಕರನ್ನು ಅಚ್ಚರಿಗೆ ದೂಡಿ, ಕುತೂಹಲ ತಣಿಸುವುದು ಇವುಗಳ ಸಿದ್ಧ ಮಾದರಿ.. ಈ ಮಾದರಿಯಲ್ಲಿ ಸಂಕಲನ ಮತ್ತು ಹಿನ್ನೆಲೆಯ ದ್ವನಿಗೆ ಹೆಚ್ಚು ಪ್ರಾಮುಖ್ಯತೆ.. ಈ ಪ್ರಕಾರಕ್ಕೆ ವೀರಪ್ಪನ್ ಕುರಿತಾದ Netflix ನ “The hunt for Veerappan”, ಬುರಾರಿ ಕುಟುಂಬದ ಕುರಿತಾದ ” House of secret ” ಮತ್ತು Indian predators, Bad boy billionaires ಗಳಂತಹುಗಳನ್ನು ಹೆಸರಿಸಬಹುದು.. ಬಹುತೇಕ ಇವು ಪ್ರೇಕ್ಷಕರ ಆಸಕ್ತಿಯ ಮತ್ತು ಹಿಂದೆ ಕುಖ್ಯಾತರಾದ ವ್ಯಕ್ತಿ, ವಿಷಯಗಳು, ಕ್ರೈಂ, ಮಾಫಿಯಾ, ಕೆಲವೊಮ್ಮೆ ವೈಜ್ಞಾನಿಕ thrillerಗಳ ಕುರಿತಾದ ವಿಷಯಗಳನ್ನೇ ಆಯ್ದುಕೊಂಡಿರುವುದನ್ನು ಕಾಣಬಹುದು..

ಎರಡನೇ ಪ್ರಕಾರದಲ್ಲಿ ಹಿಂದಿನ ಘಟನೆ ಅಥವಾ ವ್ಯಕ್ತಿಯನ್ನು ಕೇಂದ್ರವಾಗಿಟ್ಟುಕೊಂಡು ಸಾಕಷ್ಟು ಮಸಾಲೆ ಸೇರಿಸಿದ ಜನಪ್ರಿಯ ಸಿದ್ದ ಮಾದರಿಯಲ್ಲಿ ಚಲನಚಿತ್ರ ಮತ್ತು ವೆಬ್ ಸರಣಿ ನಿರ್ಮಿಸುವುದು.. ಇವುಗಳಲ್ಲಿ ವಸ್ತುನಿಷ್ಠತೆ ಹಿನ್ನೆಲೆಗೆ ಸರಿದು Dramatization (ನಾಟಕೀಯತೆ) ಮತ್ತು fiction ( ಕಲ್ಪನೆ) ಗಳೇ ಮುನ್ನೆಲೆಗೆ ಬರುತ್ತವೆ.. ಆದರೆ ಇವುಗಳಿಗಿರುವ ರಿಸ್ಕ್ ಎಂದರೆ ಸತ್ಯ ಘಟನೆಯಾಧರಿತ ಎಂದಿರುವದರಿಂದ ಚೂರು ಆಚೀಚೆ ಆದರೂ ವಿವಾದವಾಗುವ ಸಾದ್ಯತೆ ಹೆಚ್ಚು..

ಇಲ್ಲಿ ಚಿತ್ರಕಥೆ ಮತ್ತು ನಿರ್ದೇಶಕನೇ ನಾಯಕ..‌ ಮುಖ್ಯವಾಗಿ ಕ್ರೈಂ ( Netflix ನ Delhi Crime 1, 2 , ಅಮೇಜಾನ್ ಪ್ರೈಂ ನ ಸೈನೆಡ್ ಮೋಹನ ಕ್ರೈಂ ಪ್ರೇರಿತ ರಾಜಸ್ತಾನ ಹಿನ್ನೆಲೆಯಲ್ಲಿ ನಿರ್ಮಿಸಿದ ದಹಾದ್) ಭಯೋತ್ಪಾದಕ ದಾಳಿ, ಮಿಲಿಟರಿ ಆಪರೇಶನ್ ಆಧರಿತ ( 26/11 ದಾಳಿ, ಕಾರ್ಗಿಲ್ ಆಪರೇಶನ್ ಕುರಿತು ಸಾಕಷ್ಟು ಚಿತ್ರಗಳು, ಸರಣಿಗಳು ) ಮತ್ತು ಇತ್ತಿಚೆಗೆ financial fraud ಆಧರಿಸಿದ ಕತೆಗಳು ( ಉದಾ/ SonyLiv ನ ಹರ್ಷದ ಮೇಹ್ತಾ ಜೀವನಾಧರಿತ Scam 92 ಮತ್ತು ಕರಿಂ ತೆಲಗಿ ಆಧರಿಸಿದ scam 2003 ಮತ್ತು Netflixನ Phisherಗಳ ಕುರಿತಾದ ಸರಣಿ Jamtara apna number ayega) ಹೆಸರಿಸಬಹುದು ಮತ್ತು ಇವುಗಳ ವಸ್ತು, ವಿಷಯ ಮತ್ತು ಕುತೂಹಲಕರ ಪ್ರಸ್ತುತಿಯ ಕಾರಣಗಳಿಂದ ಇವು ಸಾಕಷ್ಟು ಜನಪ್ರಿಯತೆಯನ್ನು ಪಡೆದಿವೆ.. ಈ ಪ್ರಕಾರದಲ್ಲಿ ಸಾಕಷ್ಟು ವೆಬ್ ಸರಣಿಗಳನ್ನು ಮತ್ತು ಚಲನಚಿತ್ರಗಳನ್ನು ಕಾಣಬಹುದು..‌ ಇವುಗಳಲ್ಲಿ ಚರ್ನೊಬಿಲ್ ದುರಂತ ಆಧರಿಸಿದ HBO ನ Chernobyl ಮತ್ತು ಥೈಲ್ಯಾಂಡನ ಗುಹೆಗಳಲ್ಲಿ ಸಿಕ್ಕಿ ಬಿದ್ದ ಪುಟಬಾಲ್ ಆಟಗಾರರನ್ನು ರಕ್ಷಿಸುವ Netflixನ‌ Thai Cave Rescue ನ್ನು ಹೆಸರಿಸಬಹುದು.. ಮಲೆಯಾಳಂನಲ್ಲಂತೂ ನಿಫಾ ನಿರ್ವಹಣೆ, 2018 ರ ನೆರೆ ನಿರ್ವಹಣೆಯ ಕುರಿತು ಚಲನಚಿತ್ರಗಳೂ ಬಂದಿವೆ ಮತ್ತು ಸಾಕಷ್ಟು ಜನಪ್ರಿಯತೆಯನ್ನೂ ಪಡೆದಿವೆ.

ಇದೇ ಮಾದರಿಯಲ್ಲಿ ಐತಿಹಾಸಿಕ ಜನಪ್ರಿಯ ವ್ಯಕ್ತಿಗಳು ಮತ್ತು ವಿವಾದಿತ ವ್ಯಕ್ತಿತ್ವಗಳ ಬಗ್ಗೆ ಉದಾ/ ಸುಭಾಷ್ ಚಂದ್ರ ಬೋಸ್, ನೆಹರೂ, ಅಕ್ಬರ್ ಬಗ್ಗೆ ಮತ್ತು ಸ್ವಾತಂತ್ರ್ಯ ಹೋರಾಟದ ಘಟನೆಗಳ ಕುರಿತಾಗಿಯೂ ಸಾಕಷ್ಟು ಕೃತಿಗಳಿವೆ.. ಇವುಗಳಲ್ಲಿನ ಮತ್ತೊಂದು ಕೂತುಹಲಕರ ಅಂಶವೆಂದರೆ ತಮ್ಮ ಸಿದ್ದಾಂತ ಪ್ರಚಾರಕ್ಕೆ ಪೂರಕವಾಗುವ ಘಟನೆ, ವ್ಯಕ್ತಿಯನ್ನು ಹೆಕ್ಕಿ ಅದಕ್ಕೆ ಸಾಕಷ್ಟು ಮಸಾಲೆ ಸೇರಿಸಿ ಕೃತಿಯೊಂದನ್ನು ಕಟ್ಟಿಕೊಡುವುದು.. ಇವುಗಳು ಸತ್ಯಘಟನೆಯಾಧರಿತವೇ ಆಗಿದ್ದರೂ ನಿರ್ದೇಶಕನ ಅಗತ್ಯ, ಜಾಣ್ಮೆಗನುಸಾರವಾಗಿ ಸಾಕಷ್ಟು ನಾಟಕೀಯತೆ, ಕಲ್ಪನೆಯ ಸ್ವಾತಂತ್ರ್ಯದಿಂದ ಬೇಕಾದವರನ್ನು ಹೀರೋ ಮತ್ತು ಬೇಡವಾದವರನ್ನು ಹಿನ್ನೆಲೆಗೂ ಸರಿಸಬಹುದು ಮತ್ತು ಬೇಕಾದುದನ್ನು ರಂಜನೀಯವಾಗಿ ಪ್ರೇಕ್ಷಕನ‌ ಮನೋಭಿತ್ತಿಯಲ್ಲಿ ಬಿತ್ತಬಹುದು.. ಇಂತಹ ಮಾದರಿಯಲ್ಲಿ ಕೆಲವೊಮ್ಮೆ ಮನೊರಂಜನೆಯೇ ಹಿನ್ನೆಲೆಗೆ ಸರಿದು, ನಿರ್ದೇಶಕ ಮತ್ತು ನಿರ್ಮಾತೃಗಳ ಬಿತ್ತನೆಯೇ ಮುನ್ನಲೆಗೆ ಬಂದು ಬಿಡುತ್ತದೆ.. ಈ ಮಾದರಿಯಲ್ಲಿ ಸಾಕಷ್ಟು ಚಲನಚಿತ್ರಗಳನ್ನು ಕಾಣಬಹುದು.. ಈ ವಿವರಗಳಿಂದ ಡೈರಿ ಸರಣಿಯ ಸಾಕಷ್ಟು ಉದಾಹರಣೆಗಳು ತಮಗೆ ಹೊಳೆದಿರಬಹುದು..‌

ಇನ್ನು ಕೊನೆಯದಾಗಿ ಮತ್ತು ಇತ್ತೀಚಿನ ಹೊಸ ಮಾದರಿ ಎಂದರೆ ಐತಿಹಾಸಿಕ ಫಟನೆ, ವ್ಯಕ್ತಿಯನ್ನು ಕೇಂದ್ರ ಭಿತ್ತಿಯಾಗಿಟ್ಟುಕೊಂಡು ಆದರೆ ಇದುವರೆಗೆ ಹೇಳದ ಅಥವಾ ಹಿನ್ನೆಲೆಯಲ್ಲಿದ್ದ ವಸ್ತು ಮತ್ತು unsung hero ಗಳ ಬಗ್ಗೆ ಸರಣಿ ನಿರ್ಮಿಸುವುದು.‌.. ಇದಕ್ಕೆ ಮುಂಬೈ ಮೇಲಿನ ಭಯೋತ್ಪಾದಕ 26/11 ದಾಳಿಯ ಘಟನೆಯನ್ನು ಕೇಂದ್ರವಾಗಿಟ್ಟುಕೊಂಡು ವೈದ್ಯರ ವೃತ್ತಿ ಬದ್ಧತೆಯ ಕತೆ ಹೇಳುವ ಅಮೇಜಾನ್ ಪ್ರೈಂ ನ‌ಲ್ಲಿನ Mumbai Dairies 1 ಮತ್ತು ಮುಂಬೈ ನೆರೆಯನ್ನು ಆಧಾರವಾಗಿಟ್ಟುಕೊಂಡ Mumbai Dairies 2 ಮತ್ತು ಇತ್ತಿಚಿನ Netflix ನ ಭೂಪಾಲ್ ಅನಿಲ ದುರಂತ ಕೇಂದ್ರವಾಗಿಟ್ಟುಕೊಂಡು ರೇಲ್ವೇ ಉದ್ಯೋಗಿಗಳ ಧೈರ್ಯ ಸಾಹಸ ಆಧರಿಸಿದ Railway men ಗಳನ್ನು ಉದಾಹರಿಸಬಹುದು.. ಇಲ್ಲಿ ಮೊದಲಿನ ಎರಡು ಪ್ರಕಾರಗಳಿಗಿಂತ ನಾಟಕೀಯತೆ,ಕಲ್ಪನೆಗೆ ಜಾಗೆ ಮತ್ತು ನಿರ್ದೇಶಕನಿಗೆ ಸ್ವಾತಂತ್ರವೂ ಹೆಚ್ಚು.. ಅಲ್ಲದೇ ಹೆಚ್ಚಿನ ಸಂಶೋಧನೆ, ವಸ್ತು ನಿಷ್ಟತೆಯ ಅಗತ್ಯತೆಯೂ ಇರುವುದಿಲ್ಲವಾದ್ದರಿಂದ ಈ ಮಾದರಿ ಇತ್ತಿಚೆಗೆ ಜನಪ್ರಿಯವಾಗುತ್ತಿವೆ ..

ಇನ್ನೂ ಸ್ವಾರಸ್ಯವೆಂದರೆ ಒಂದೇ ವಸ್ತು,ವಿಷಯದ ಮೇಲೆ ಡಾಕ್ಯುಮೆಂಟರಿ ಮತ್ತು ಸರಣಿ ಅಥವಾ ಚಲನಚಿತ್ರ ಕೂಡಾ ಬಂದಿವೆ..‌ ಉದಾಹರಣೆಗೆ: ಬುರಾರಿ ಕುಟುಂಬದವರ ಆತ್ಮಹತ್ಯೆ ಕುರಿತು Netflix ನಲ್ಲಿ ಡಾಕ್ಯುಮೆಂಟರಿ ಇದ್ದರೆ Hotstar ನಲ್ಲಿ ಅದೇ ಫಟನೆಯ ಪ್ರೇರಣೆಯ ವೆಬ್ ಸರಣಿ ಇದೆ.. ಇನ್ನು ಮುಂಬೈನ 26/11 ರ ಭಯೋತ್ಪಾದಕ ದಾಳಿ, ಮುಂಬೈ ಮಾಫಿಯಾ ಕುರಿತು ಎಲ್ಲಾ ಪ್ರಕಾರಗಳಲ್ಲಿ ಸಾಕಷ್ಟು ಚಿತ್ರ/ಸರಣಿಗಳನ್ನು ಕಾಣಬಹುದು..‌ ಸರಣಿ ಹಂತಕ ಡೆಹ್ಮರ ಕುರಿತಾಗಿ Netflix ನಲ್ಲಿ ಡಾಕ್ಯುಮೆಂಟರಿಯೂ ಇದೆ ಮತ್ತು ವೆಬ್ ಸರಣಿಯೂ ಇದೆ.. ಅದೇ ರೀತಿ ಥೈಲಾಂಡ್ ಗುಹೆ ಸಿಲುಕಿದವರ ರಕ್ಷಣೆ ಕುರಿತು Netflix , Amazon ಎರಡರಲ್ಲೂ ವೆಬ್ ಸರಣಿಗಳಿವೆ, ಸೈನೆಡ್ ಮೋಹನ ಬಗ್ಗೆ Netflix ನಲ್ಲಿ ಡಾಕ್ಯುಮೆಂಟರಿ ಇದ್ದರೆ, Prime ನಲ್ಲಿ ವೆಬ್ ಸೆರಿಸ್ ಇದೆ.. ಆಶ್ಚರ್ಯಕರ ಸಂಗತಿ ಎಂದರೆ ಎಲ್ಲಾ ಮಾದರಿಗಳ ಬಹುತೇಕ ಸರಣಿಗಳು ಪ್ರೇಕ್ಷಕರ ಗಮನ ಸೆಳೆದಿರುವುದು..‌

ಒಂದು ಕಾಲದಲ್ಲಿ ಸಾಕಷ್ಟು ಚರ್ಚಿತ ಮತ್ತು ಈಗ ಕಾಲಗರ್ಭದಲ್ಲಿ ಹುದುಗಿದ ಮತ್ತು ಸಾಮಾನ್ಯರ ನೆನಪಿನಿಂದ ಮರೆಯಾದ ಸಾಕಷ್ಟು ವಸ್ತು, ವಿಷಯಗಳು ಹೊಸ ರೂಪ ಧರಿಸಿ ಮರುಹುಟ್ಟು ಪಡೆಯುತ್ತಿರುವುದು ಮತ್ತು ಪ್ರೇಕಕರನ್ನು ರಂಜಿಸುತ್ತಿರುವುದು OTT ಎಂಬ ಅನಂತ ಸಾದ್ಯತೆಯ ಮಾದ್ಯಮದ ಕೊಡುಗೆ ಎಂದು ನಿಸ್ಸಂದೇಹವಾಗಿ ಹೇಳಬಹುದು.. ಈ ಮಾಯಾಪೆಟ್ಟಿಗೆಯಲ್ಲಿ ಇನ್ನೂ ಏನೇನಿದೆಯೋ ಕಾಲವೇ ಉತ್ತರಿಸಬೇಕು..‌

‍ಲೇಖಕರು avadhi

November 25, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: