‘ಒಡ್ಡೋಲಗ’ದಲ್ಲಿ ..

ಗಣಪತಿ ಹೆಗ್ಡೆ

ರಂಗಭೂಮಿಯಲ್ಲಿ ಮೂರು ದಶಕಗಳಿಗಿಂತಲೂ ಹೆಚ್ಚು ದುಡಿಮೆಗೈದ ಗಣಪತಿ ಹಿತ್ತಲಕೈ ಅವರು ಬಿ.ವಿ.ಕಾರಂತರ ನಿರ್ದೇಶನದ ‘ಗೋಕುಲ ನಿರ್ಗಮನ’ದ ಮೂಲಕ ವಿಖ್ಯಾತಿ ಪಡೆದರು. ಕಾಸರವಳ್ಳಿಯವರ ‘ಗೃಹಭಂಗ’ ಧಾರಾವಾಹಿಯ ಅಪ್ಪಣ ಪಾತ್ರ ಅವರ ಇನ್ನೊಂದು ಹೆಜ್ಜೆ. ನೀನಾಸಮ್ ತಿರುಗಾಟದ ಆರು ವರ್ಷದ ರಂಗಾನುಭವವನ್ನು ಹಿನ್ನೆಲೆಯಲ್ಲಿಟ್ಟುಕೊಂಡು ‘ಒಡ್ಡೋಲಗ (ರಿ.)ಹಿತ್ತಲಕೈ’ ಕಟ್ಟಿ ಸಿರ್ಸಿ ಪರಿಸರವನ್ನು ರಂಗಶ್ರೀಮಂತಗೊಳಿಸಿದರು.

ಇಪ್ಪತ್ತೊಂದು ವರ್ಷಗಳ ಹಿಂದೆ ಒಡ್ಡೋಲಗ (ರಿ) ಹಿತ್ತಲಕೈ ಅಂತಾ ನಾಮಧೇಯ ಮಾಡಿಕೊಂಡು ರಂಗ ಚಟುವಟಿಕೆ ನಡೆಸುತ್ತಿದ್ದ ನಾವು ಅನೇಕ ವಿಚಿತ್ರ ಅನುಭವಗಳ ಸಂಚಿಯನ್ನು ಹೊತ್ತು ಸಾಗುತ್ತಿದ್ದೇವೆ. ‘ಮಕ್ಕಳ ಶಿಬಿರ’ದಿಂದ ಪ್ರಾರಂಭಿಸಿ ಶ್ರಾವಣ ಸಂಜೆ ಸಂಸ್ಕೃತಿ ಉತ್ಸವದ ಅಂಗವಾಗಿ ಗಾಯನ, ನಾಟ್ಯ, ಯಕ್ಷಗಾನ, ನಾಟಕ, ಜಾದು, ಜಾನಪದ ಕಲಾಪ್ರಕಾರಗಳನ್ನು ಎರಡು ಮೂರು ದಿನಗಳ ಕಾಲ ದಿನಾ ಸಂಜೆ ಹಿತ್ತಲಕೈ ಸಮೀಪದ ಕವಲಕೊಪ್ಪ ದೇವಸ್ಥಾನದಲ್ಲಿ ಪ್ರಾರಂಭಿಸಿದ್ದು ನಾಡಿನ ಅನೇಕ ಪ್ರಸಿದ್ಧ ಕಲಾವಿದರು ವೇದಿಕೆಯಲ್ಲಿ ಮಿಂಚಿದ್ದಾರೆ.

2019 ರಲ್ಲಿ ಹೊಸ ನಾಟಕ ಹುಡುಕಾಟದಲ್ಲಿದ್ದಾಗ ‘ಉದ್ಧಾರ’ ಎಂಬ ನಾಟಕ ಕಣ್ಣಿಗೆ ಬಿತ್ತು, ಓದಿದೆ. ಅದು ದಿವಾಕರ ಹೆಗಡೆ ಕೆರೆಹೊಂಡ ರಚಿಸಿರುವುದು. ಇಲ್ಲಿಂದ ಶುರುವಾಯಿತು ನೋಡಿ ನಮ್ಮ ತವಕ, ತಲ್ಲಣ ಯಾಕೆ? ಅಂತ ಕೇಳಿ. ಈ ನಾಟಕ ನಮ್ಮ ಪ್ರೊಸೀನಿಯಂ ಥಿಯೇಟರ್ ಮಾದರಿಗಾಗಿ ಬರೆದಿರುವುದಲ್ಲ. ಇತ್ತೀಚೆಗೆ ನಮ್ಮನ್ನಗಲಿದ ರಂಗ ಚೇತನ ಶ್ರೀ ಕೆ.ಆರ್ ಪ್ರಕಾಶ್‍ರವರು ಪರಿಸರದಲ್ಲಿ ನಾಟಕ ಮಾಡುವ ಉದ್ದೇಶಕ್ಕಾಗಿ ರಚಿಸಿದ್ದರು. ಒಂದು ಪ್ರಪಾತ (ಕೊಡ್ಲು ಅಂತಾನೂ ಕರಿತಾರೆ ನಮ್ಮಲ್ಲಿ) ಅದನ್ನೇ ಬ್ಯಾಕ್‍ಗ್ರೌಂಡ್ ಮಾಡಿಕೊಂಡು ಬರೆದು ಪ್ರದರ್ಶನಗೊಂಡದ್ದು.

ಶಿರಸಿ ತಾಲೂಕಿನ ಕಕ್ಕಳ್ಳಿಯೆಂಬ ಊರು. ಅಲ್ಲಿನ “ಸೂಸಬ್ಬಿಕೊಡ್ಲು” ಅಂತಾ ಒಂದು ಜಾಗ. ಪಕ್ಕದಲ್ಲೇ ಹೊಳೆ ಹರಿಯುತ್ತಿದ್ದು ಒಂದು ಸಣ್ಣ ಜಲಪಾತದ ಹಾಗೆ ಕಾಣಬಹುದಾದ ಜಾಗ ಉಂಟು. ಇದೆಲ್ಲಾ ನಾಟಕದ ಕಥೆಯೊಳಗೆ ಜೀವ ಪಡೆದಿವೆ. ಓದಿದಾಗ ತುಂಬಾ ಆಪ್ತವೆನಿಸಿತು ಹಾಗೂ ತೀರಾ ಇವತ್ತಿನ ಎಲ್ಲಾ ಹಳ್ಳಿಗಳ ಕನಸುಗಳಿಂದ ಕಕ್ಕಳ್ಳಿ ಹೊರತಲ್ಲ. ಪ್ರಕಾಶ್ ಪರಿಸರದಲ್ಲಿ ಕಲಾವಿದರನ್ನು ಪಳಗಿಸಿ ಒಗ್ಗಿಸಿಕೊಂಡು ನಾಟಕ ಮಾಡಿದ್ದರಂತೆ. ನಾನು ಅದನ್ನು ನೋಡಿರಲಿಲ್ಲ. ನಾನೀಗ ನನ್ನ ರಂಗ ಮಂದಿರದಲ್ಲಿ ಆ ಪರಿಸರ ಸೃಷ್ಟಿ ಮಾಡುವುದು ಹೇಗೆ?

ಒಂದು ದಿನ ನಮ್ಮ ತಂಡದ ತಂತ್ರಜ್ಞರಾದ ಗಣಪತಿ ವಡ್ಡಿನಗದ್ದೆಯವರನ್ನು ಕರೆದುಕೊಂಡು ಒಂದು ಕ್ಯಾಮೆರಾ ತಗೊಂಡು ಕಕ್ಕಳ್ಳಿ ಊರಿಗೆ ಹೋಗಿ ವೈದ್ಯರ ಮನೆಯಲ್ಲಿ “ಸೂಸಬ್ಬಿಕೊಡ್ಲು ಎಲ್ಲಿ ಬರುತ್ತದೆ? ಅಲ್ಲಿ ನಾಟಕ ಆಡಿದ್ರಂತಲ್ಲಾ?” ಅಂತ ಕೇಳಿಕೊಂಡೆ. “ಅಯ್ಯೋ ಆ ಜಾಗಕ್ಕೆ ಹೋಗೋಕೆ ಸಾಧ್ಯವಿಲ್ಲ. ನಾಲ್ಕು ವರ್ಷದ ಹಿಂದೆ ಆ ಎತ್ತರದ ಗುಡ್ಡದಲ್ಲಿ ಕಾಡು ಸವರಿ ಸ್ವಚ್ಛ ಮಾಡಿಕೊಂಡು ನಾಟಕ ಮಾಡಿದ್ದಾರೆ. ಈಗ ಮತ್ತೆ ಅದು ಕಾಡಾಗಿದೆ. ಬೇಕಾದರೆ ಕೊಡ್ಲು ಜಲಪಾತ ತೋರಿಸುತ್ತೇವೆ, ಬನ್ನಿ” ಎಂದು ಕರೆದುಕೊಂಡು ಹೋದರು.

ನಾವು ಆ ಕೊಡ್ಲಿನ ಬುಡದಿಂದ ಕಷ್ಟವಾದರೂ ಕುತೂಹಲಕ್ಕಾಗಿ ಒಂದೊಂದೆ ಸ್ಟೆಪ್ ಏರುತ್ತಾ ಸುಮಾರು ನೂರು ಮೀಟರ್ ಅಷ್ಟು ಹತ್ತಿಕೊಂಡು ನೋಡಿದೆವು. ಇನ್ನೂ ಮುಂದೆ ಹೋದರೆ ನಾಟಕ ಮಾಡಿದ ಜಾಗ ಇದೇ ಅಂದರು. ಅಲ್ಲಿ ಕೆಲವು ಸ್ಟಿಲ್ ಫೋಟೋ ತೆಗೆದುಕೊಂಡೆವು. ನಂತರ ಅಲ್ಲೆ ಪಕ್ಕದಲ್ಲೇ ಹರಿಯುವ ಹೊಳೆಯತ್ತ ಗಮನ ಹರಿಸಿ ಸಾಗಿದೆವು. ಅಗಲವಾಗಿ ಹರಿಯುವ ಹೊಳೆ ಒಂದು ಜಾಗದಲ್ಲಿ ವಿಚಿತ್ರ ಬಂಡೆಗಳ ಸಂದುಗಳಲ್ಲಿ ಆಚೆ ಈಚೆ ಹರಿದು ಒಂದು ಜಲಪಾತವಾಗಿ ಕಂಡಿತು. ಅಲ್ಲಿ ವೀಡಿಯೋ ಮಾಡಿದ್ದೆವು.

ಕೆಲವು ಕಡೆ ಚಪ್ಪಲಿ ಬದಿಗಿಟ್ಟು ಹೋಗಬೇಕಾಯ್ತು. ಇನ್ನು ಕೆಲವೆಡೆ ಅಂಬೆಗಾಲಿಕ್ಕಿ ನಡೆಯಬೇಕಾಯ್ತು. ಅಂತೂ ಉದ್ಧಾರ ನಾಟಕದಲ್ಲಿ ಬರೆದ ಕಥಾ ಜಾಗಕ್ಕೆ ಒಗ್ಗುವ ಎಲ್ಲಾ ಚಿತ್ರಗಳನ್ನೂ ಕ್ಯಾಮೆರಾದಲ್ಲಿ ಸೆರೆ ಹಿಡಿದೆವು. ಮುಂದೇನು ಮಾಡುವುದು? ತಂಡದ ಜೊತೆ ನಾಟಕ ಓದಿದೆ. ನಾಲ್ಕೈದು ಪಾತ್ರಗಳು ಹಳ್ಳಿಯ ಹವ್ಯಕರು ಒಬ್ಬ ಮಾಸ್ತರರು, ಒಂಟಿ ಜೀವ ಸುಬ್ಬಜ್ಜ, ಶಿವಸಿದ್ದ ಹೀಗೆ ತೀರಾ ನಮ್ಮ ಊರುಗಳಲ್ಲಿ ನಿತ್ಯ ನೋಡುತ್ತಿರುವ ಟಿಪಿಕಲ್ ಪಾತ್ರಗಳಿದ್ದವು.

ಪಾತ್ರ ಹಂಚಿಕೆಯಾಗಿ ರಿಹರ್ಸಲ್ ಶುರುವಾದಾಗ ಕೊಡ್ಲು ಜಲಪಾತವನ್ನೆಲ್ಲಾ ಚಿತ್ರ ಬಿಡಿಸಿ ಹಿಂದಿನ ಪರದೆಯಲ್ಲಿ ತೋರಿಸುವಾ! ಅಂತಾ ಮಾತು ಬಂತು. ಆಗ ನಾವು ರೆಕಾರ್ಡ್ ಮಾಡಿ ತಂದ ಎಲ್ಲಾ ವೀಡಿಯೋ ನಟರಿಗೆ ತೋರಿಸಿದಾಗ ದಂಗಾದರು. ನಾವೆಲ್ಲಾ ಒಂದಿನ ಅಲ್ಲಿಗೆ ಹೋಗಿ ಬರುವ ಅಂದರು. ಬೇಡ ಆ ಜಾಗವೇ ನಮ್ಮ ಜೊತೆ ಕಾಣುವಂತೆ ಸಹಜವಾಗಿಸುತ್ತೇನೆ ಅಂದೆ. ಹರಿಯುತ್ತಿರುವ ಜಲಪಾತವನ್ನು ನಾಂದಿ ಪದ್ಯದ ಜೊತೆಗೆ ಪ್ರೊಜೆಕ್ಟರ್ ಮೂಲಕ ಚಿತ್ರಗಳು ಬರತೊಡಗಿದಾಗ ರೋಮಾಂಚನಕಾರಿ ಅನುಭವ ಸಿಕ್ಕಿದ್ದು ಪ್ರೇಕ್ಷಕರಿಗೆ.

ಸೂಸಬ್ಬಿಕೊಡ್ಲನ್ನು ಪ್ರವಾಸಿ ತಾಣ ಮಾಡಿ ಇಲ್ಲಿಗೆ ಜನ ಬಂದು ಹೋಗುವಂತೆ ಪ್ರಚಾರ ನಡೆಸಿ ಜಗತ್ತಿಗೆ ಇದರ ಪರಿಚಯ ಮಾಡಿಸುವ ಹೊಸ ಯೋಜನೆಯ ಕನಸನ್ನು ಹೊತ್ತ ನೌಕರಿ ಇಲ್ಲದ ಮಾಸ್ತರರ ಪ್ಲಾನಿಗೆ ಸಹಮತ, ವಿರೋಧ, ಎಲ್ಲವೂ ಬರತೊಡಗುತ್ತವೆ. ಮಂತ್ರಿಗಳು ಬಂದು ಊರಿನ ಉದ್ಧಾರಕ್ಕೆ ಕರೆಂಟು, ಮೊಬೈಲ್‍ ಟವರ್ ಮತ್ತು ಜಲಪಾತಕ್ಕೆ ಬರಲು ಅನುಕೂಲವಾಗುವಂತೆ ಒಂದು ಕಡೆ ಮೆಟ್ಟಿಲು ಕಟ್ಟಿಸಿ ಕೊಡುವುದಾಗಿ ಘೋಷಣೆ ಮಾಡುವುದು, ಪರಿಸರವಾದಿಗಳ ವಿರೋಧ ಇದ್ದರೂ ಟವರ್ ಸ್ಥಾಪನೆಯಾಗುತ್ತೆ.

ಒಟ್ಟಾರೆ ಕಕ್ಕಳ್ಳಿ ಉದ್ಧಾರದ ಹಾದಿ ಹಿಡಿಯಿತು ಅನ್ನುವಾಗ ನಕ್ಸಲರು ಟವರ್ ಬ್ಲಾಸ್ಟ್ ಮಾಡಿರುವುದು, ಪೋಲೀಸ್ ಎನ್‍ಕ್ವೈರಿ ಇತ್ಯಾದಿ. ರಿಸರ್ಚ್‍ಗೆ ಬಂದ ಸಹನಾ ಹಳ್ಳಿಯಲ್ಲಿ ಮದುವೆಯಾಗದೆ ಇದ್ದ ಗಣೇಶ ವೈದ್ಯನೊಂದಿಗೆ ಮದುವೆಗೆ ಮನಸ್ಸು ಮಾಡುತ್ತಾಳೆ. ಆದರೆ ಅದೇ ಹೊತ್ತಿಗೆ ಅವಳಿಗೆ ಮೈಸೂರಿನಲ್ಲಿ ನೌಕರಿ ಸಿಕ್ಕಿ ಬಿಡುತ್ತದೆ. ಊರು ಬಿಡುವುದು ಅನಿವಾರ್ಯ. ಸುಬ್ಬಜ್ಜ ಹೇಳುತ್ತಾನೆ: “ಇದು ಮೇಲಿಂದ ನೋಡಿದರೆ ಪ್ರಪಾತ, ಕೆಳಗಿಳಿದು ನೋಡಿದರೆ ಪರ್ವತ. ನಮ್ಮ ಬದುಕು ಸಮತಟ್ಟಾಗಿಲ್ಲ, ಏರುತಗ್ಗುಗಳಿಂದ ಕೂಡಿದೆ. ಅನುಭವಿಸುವುದೇ ಬದುಕು ಹೋಗಿಬನ್ನಿ’’ ಎಂದು ಆಶೀರ್ವದಿಸುತ್ತಾನೆ.

 ನಾಟಕವೇನೋ ಯಶಸ್ವಿಯಾಯಿತು. ಆದರೆ ಪ್ರೊಜೆಕ್ಟರ್ ಅನ್ನು ಬ್ಯಾಕ್‍ಡ್ರೋಪ್ ಬಿಳಿ ಪರದೆಯ ಹಿಂದೆ 12 ಅಥವಾ 15 Foot ಇಡಬೇಕು. ಆಗ ಮಾತ್ರ effect ಕೊಡಲು ಸಾಧ್ಯ. ಸಿದ್ದಾಪುರ ಶಂಕರಮಠದಲ್ಲಿ ಮೊದಲ ಪ್ರದರ್ಶನವಾದ್ದರಿಂದ ಅರ್ಧ ಭಾಗ stage,, ಇನ್ನರ್ಧ ಪ್ರೇಕ್ಷಕರಿಗೆ. ಸುಮಾರು ಎಂಟು ಹಾಡುಗಳನ್ನು ಪಂ.ಶ್ರೀಪಾದ ಹೆಗಡೆ ಸೋಮನಮನೆ ಅವರ ನಿರ್ದೇಶನದಲ್ಲಿ ರೆಕಾರ್ಡ್ ಮಾಡಿ ಹಾಡು, ವೀಡಿಯೋ ಎರಡೂ ಒಟ್ಟಿಗೆ operate ಮಾಡಿದ್ದು ಹೊಸ ಒಂದು ಅನುಭವಕ್ಕೆ ಸಾಕ್ಷಿ ಆಯಿತು. ಹಾರ್ಸಿಕಟ್ಟಾದಲ್ಲಿ ರಂಗಮಂದಿರ ಇಲ್ಲ, ಗಣೇಶ ಮಂಟಪ, tage ಹಾಕಿದರೆ ರಂಗ ಮಂದಿರದ ಮುಕ್ಕಾಲು ಪಾಲು ನಮಗೇ ಬೇಕು. ಆದರೆ ಅಕ್ಕ-ಪಕ್ಕ ಗೋಡೆ ಇಲ್ಲದ್ದರಿಂದ ರಸ್ತೆ, ಪಕ್ಕದ ಮೈದಾನ, ಸ್ವಲ್ಪ ಜನ ರಂಗಮಂದಿರದ ಒಳಗೆ ಹೀಗೆ ಪ್ರೇಕ್ಷಕರೂ ನಾಟಕದ ಒಂದು ಭಾಗವಾಗಿ ಸಹಕರಿಸಿದರು.

ನಾಟಕದಲ್ಲಿ ವಿಶೇಷವೆಂದರೆ ಸುಬ್ಬಜ್ಜನ ಪಾತ್ರ ನಕ್ಸಲರ ಬಗ್ಗೆ ಆಡುವ ಮಾತುಗಳು ಮಾರ್ಮಿಕವಾಗಿದ್ದವು. ನಾಟಕದ ಬಗ್ಗೆ ಎಲ್ಲಾ ಪತ್ರಿಕೆಗಳಲ್ಲೂ ಒಳ್ಳೆಯ ಅಭಿಪ್ರಾಯ ಬಂತು. ಆದರೆ ಒಂದು ಪತ್ರಿಕೆ ಮಾತ್ರ ನಕ್ಸಲರನ್ನು ಬಯ್ದ ನಾಟಕಕ್ಕೆ ತಮ್ಮ ಬೈಗುಳ ಸೇರಿಸಿ ಬರೆದು ಮಿಶ್ರ ಪ್ರತಿಕ್ರಿಯೆ ನೀಡಿದರು. ಏನೇ ಇರಲಿ ಇಂಥದ್ದೊಂದು ರಂಗ ತಂತ್ರ ಈ ನಾಟಕಕ್ಕೆ ಹೊಂದುವಷ್ಟು ಇನ್ಯಾವುದಕ್ಕೂ ಹೊಂದುವುದಿಲ್ಲ ಅನ್ನಿಸಿತು. ಹಿಂದೆ ಪ್ರಕಾಶ್ ಪರಿಸರದಲ್ಲಿ ನಡೆಸಿದ ನಾಟಕ ನೋಡಿದ ಪ್ರೇಕ್ಷಕರು ಈ ಪ್ರಯೋಗದಲ್ಲಿ ಪರಿಸರವೇ ತಮ್ಮ ಎದುರಿಗೆ ಬರುವುದನ್ನು ಕಂಡು ಬೆರಗಾದರು ಎಂಬುದು ನಮ್ಮ ಹೆಮ್ಮೆ.

‍ಲೇಖಕರು Avadhi

December 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

ದೊರೆ..

ದೊರೆ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: