ಒಂದು ಸಾವಿನ ಸುತ್ತ…

ರೇವಣಸಿದ್ದಪ್ಪ ಜಿ ಆರ್

ಸೋದರಮಾವ ಗತಿಸಿ ಇಂದಿಗೆ ಬರೋಬ್ಬರಿ ಮುವತ್ತು ವರ್ಷ. ಕಾಕತಾಳೀಯವೆಂಬಂತೆ ನಿನ್ನೆ ಕನಸಿನಲ್ಲಿ ಬಂದು ಮಾತನಾಡಿದಂತೆ ಭಾಸವಾಯಿತು. ಇಷ್ಟು ವರ್ಷಗಳ ನಂತರ ಈಗೇಕೆ ಹೀಗೆ ಕಾಣಿಸಿಕೊಂಡರು? ಗೊತ್ತಿಲ್ಲ.

ಮದುವೆಯಾಗಿ ಮೂರೇ ತಿಂಗಳಿಗೆ ಅವರ ಇಹದ ಬದುಕಿಗೆ ವಿಧಿ ಮಂಗಳ ಹಾಡಿತ್ತು. ಬಹಳ ಹಚ್ಚಿಕೊಂಡಿದ್ದ ಮಾವ ಇನ್ನಿಲ್ಲವಾದಾಗ ವಯಸ್ಸಿಗೆ ಮೀರಿದ್ದೊಂದು ವಿಲಕ್ಷಣ ಚಡಪಡಿಕೆ, ಸಹಿಸಲಸಾಧ್ಯವಾದ ಜುಗುಪ್ಸೆ,ಒಂದು ಬಗೆಯ ನಿರ್ವಾತ ಆವರಿಸಿತು.

ಸೋದರಮಾವನ ಊರಿನಲ್ಲಿ ಸುಡುಗಾಡು ಊರಿನಿಂದ ಬಹಳ ಸನಿಹದಲ್ಲಿದೆ. ಮಾವ ಹೋಗಿ ದಿನಗಳು ಕಳೆದರೂ ಮಾವನನ್ನು ಹೂತಿದ್ದ ಗುದ್ದಿನ ಬಳಿ ಪದೇಪದೇ ಹೋಗಿ ಕಂಬನಿಗರೆದು ಶರಣೆಂದು ಬರುತ್ತಿದ್ದೆ. ಅದು ಎಲ್ಲಿಯತನಕ ಅಂದರೆ ವಿಷಕುಡಿದು ಮಡಿದ ಹೆಣ್ಣುಮಗಳೊಬ್ಬಳನ್ನು ಮಾವನನ್ನು ಹೂತಿದ್ದ ಜಾಗದಲ್ಲಿ ಸಮಾಧಿ ಮಾಡುವತನಕ. ಹೊಸದಾದ ಶವಕ್ಕೆ ವಸತಿ ಕಲ್ಪಿಸುವ ಭರದಲ್ಲಿ ಮಾವನ ತಲೆಬುರುಡೆ, ಕೈಕಾಲುಗಳ ಎಲುಬು ಇತ್ಯಾದಿಗಳನ್ನು ಕಿತ್ತೆಸೆಯಲಾಗಿತ್ತು.ಮಾವನ ಪಳೆಯುಳಿಕೆಗಳನ್ನು ಒಟ್ಟುಗೂಡಿಸಿ ನಮ್ಮ ತಾತ(ತಾಯಿಯ ತಂದೆ)ಇನ್ನೊಂದು ಕಡೆ ಸ್ವತಃ ಹೂತು ಬಂದು “ನಿನ್ನ ಮಾವನನ್ನು ಇನ್ನು ಮುಂದೆ ಫೋಟೋದಲ್ಲಷ್ಟೇ ನೋಡು” ಎಂದು ಆಜ್ಞಾಪಿಸಿದ್ದರು.

ಮಾವನ ಸಾವು ಕೇವಲ ಒಂದು ಸಾವು ಮಾತ್ರ ಆಗದೆ ಇಡೀ ಮನುಕುಲದ ಸಾವುನೋವಿನ ಬಗ್ಗೆ ಆ ಎಳವೆಯಲ್ಲೇ ಯೋಚಿಸುವಂತೆ ಮಾಡಿತು. ಎಮ್ಮೆಗೆ ನಲವತ್ತೈದು ವರ್ಷ,ಒಂಟೆಗೆ ನಲವತ್ತು ವರ್ಷ, ಬೆಕ್ಕಿಗೆ ಮುವತ್ತು ವರ್ಷ, ಚಿಂಪಾಂಜಿಗೆ ಐವತ್ತು ವರ್ಷ, ನಾಯಿಗೆ ಇಪ್ಪತ್ತು ವರ್ಷ, ಕತ್ತೆಗೆ ಐವತ್ತು ವರ್ಷ, ಆನೆಗೆ ಎಪ್ಪತ್ತು ವರ್ಷ, ನರಿಗೆ ಹದಿನಾಲ್ಕು ವರ್ಷ, ಜಿರಾಫೆಗೆ ಇಪ್ಪಂತೆಂಟು ವರ್ಷ, ಕುದುರೆಗೆ ಐವತ್ತು ವರ್ಷ, ಸಿಂಹಕ್ಕೆ ಮುವತ್ತೈದು ವರ್ಷ, ಮೊಲಕ್ಕೆ ಹತ್ತು ವರ್ಷ, ಹುಲಿಗೆ ಇಪ್ಪತ್ತೈದು ವರ್ಷ, ತೋಳಕ್ಕೆ ಹದಿನಾರು ವರ್ಷ, ನಮ್ಮಂಥ ಮನುಷ್ಯರಿಗೆ ನೂರು ವರ್ಷ ಆಯಸ್ಸು ಎಂದು ನಮಗೆ ಹೇಳಲಾಗಿತ್ತು. ವರ್ಷಕ್ಕೆ ೩೬೫ ದಿನಗಳಂತೆ ನೂರು ವರ್ಷಗಳಿಗೆ ೩೬೫೦೦ ದಿನಗಳು. ಇಪ್ಪತ್ತೈದು ಅಧಿಕ ವರ್ಷಗಳಿಂದ ೨೫ ಅಧಿಕ ದಿನಗಳು ಸೇರಿದರೆ ೩೬೫೨೫ ದಿನಗಳು. ಅಷ್ಟು ದಿನಗಳು ಅಂದು ನನಗೆ ಇಷ್ಟೇನಾ ಅನಿಸಿತ್ತು.

ತಾಯಿಯ ಊರಿನ ಗ್ರಾಮದೇವತೆ ಹೊನ್ನಾಂಬಿಕಾದೇವಿ. ಆ ತಾಯಿಯ ದೇಗುಲದ ಜಗುಲಿಯ ಮೇಲೆ ರಾತ್ರಿ ಊಟದ ಬಳಿಕ ಊರಿನ ಕೆಲವು ವಿದ್ಯಾವಂತ ಹಿರಿತಲೆಗಳು ಸೇರುತ್ತಿದ್ದರು. ವಿಷ್ಣುಪುರಾಣ, ಭಾಗವತ ಪುರಾಣ, ಗರುಡಪುರಾಣ ಇತ್ಯಾದಿ ಪುರಾಣಗಳನ್ನು, ಲಕ್ಷ್ಮೀಶನ ಜೈಮಿನಿ ಭಾರತ, ಹರಿಹರನ ರಗಳೆಗಳು, ರಾಘವಾಂಕನ ಹರಿಶ್ಚಂದ್ರ ಕಾವ್ಯ, ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ, ಚಾಮರಸನ ಪ್ರಭುಲಿಂಲೀಲೆ ಮುಂತಾದವುಗಳನ್ನು ವಾಚಿಸುತ್ತಾ, ಚರ್ಚಿಸುತ್ತಾ, ವಿಶ್ಲೇಷಿಸುತ್ತಾ ತಮ್ಮ ಸಮಯದ ಸದುಪಯೋಗಪಡಿಸಿಕೊಳ್ಳುತ್ತಿದ್ದರು. ಅವರ ಸಭೆಯಲ್ಲಿ ನಾನೋರ್ವ ಪುಟ್ಟ ಸಭಿಕನಾಗಿ ಕೆಲದಿನ ಭಾಗವಹಿಸಿದ್ದೆ.ಅವರ ಮಾತಿನ ಮಧ್ಯೆ ಬಾಯಿಹಾಕುತ್ತಿದ್ದೆ. ಸೋವುನೋವಿನ ಬಗ್ಗೆ ಪದೇಪದೇ ಕೇಳಿದಾಗ “ನೀನಿನ್ನೂ ಚಿಕ್ಕ ಹುಡುಗ; ದೊಡ್ಡವನಾದ ಮೇಲೆ ನಿನಗೇ ತಿಳಿಯುತ್ತದೆ” ಎಂದು ಸಮಾಧಾನಿಸಲು ಯತ್ನಿಸಿದ್ದರು.

ಮರುವರ್ಷ ನಾನು ವ್ಯಾಸಂಗ ಮಾಡುತ್ತಿದ್ದ ನಗರದಲ್ಲಿ ವಿದ್ಯಾರ್ಥಿಗಳ ವಸತಿನಿಲಯವೊಂದಕ್ಕೆ ನನಗೆ ಗೊತ್ತಿರುವ ಜಗದ್ಗುರುಗಳು ಆಗಮಿಸಿದ್ದರು. ವಸತಿನಿಲಯದ ಪ್ರಾಂಗಣದಲ್ಲಿ ಸಮಾಜದ ಮುಖಂಡರ ಸಭೆಯನ್ನುದ್ದೇಶಿಸಿ ಪೂಜ್ಯರು ಯಾವುದೋ ಗಹನ ವಿಷಯದ ಬಗ್ಗೆ ಹೇಳುತ್ತಿದ್ದರು. ಗುರುಗಳು ಬಿಡುವಾದಾಗ ಅವರಿಗೆ ನನ್ನೆರಡು ಕವಿತೆಗಳನ್ನು ತೋರಿಸಿದೆ. ಸಭೆಯಲ್ಲಿ ಸ್ವತಃ ಆ ಕವಿತೆಗಳನ್ನು ವಾಚಿಸಿದ ಪರಮ ಪೂಜ್ಯರು ನನ್ನನ್ನು ಬಹಳ ಮೆಚ್ಚಿ ಮಾತನಾಡಿದರು. ಅದನ್ನೇ ನೆಪ ಮಾಡಿಕೊಂಡು ಪುನರ್ಜನ್ಮದ ಬಗ್ಗೆ ನನಗಿದ್ದ ‌ಸಂದೇಹದ ಬಗ್ಗೆ ಪ್ರಸ್ತಾಪಿಸಿದೆ. ಭಗವದ್ಗೀತೆಯ ಶ್ಲೋಕವೊಂದನ್ನು ಉಚ್ಛರಿಸಿದ ಗುರುಗಳು “ಮನುಷ್ಯ ತನ್ನ ಹಳೆಯ ಬಟ್ಟೆ ಬಿಟ್ಟು ಹೊಸ ಬಟ್ಟೆ ಧರಿಸುವಂತೆ, ಆತ್ಮ ತನ್ನ ಹಳೆಯ ದೇಹವನ್ನು ಬಿಟ್ಟು ಹೊಸ ದೇಹವನ್ನು ಪ್ರವೇಶಿಸುತ್ತದೆ ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ” ಅಂದರು.ಮುಂದುವರಿದು “ಈ ಜನ್ಮದಲ್ಲಿ ಏನು ಮಾಡಬೇಕೆಂದಿರುವೆಯೋ ಅದರ ಕಡೆ ಗಮನ ಹರಿಸು. ನೀನಿನ್ನೂ ವಿದ್ಯಾರ್ಥಿ. ಚೆನ್ನಾಗಿ ಓದಿ,ಬರೆದು ಮುಂದೆ ಬಾ” ಎಂದು ಆಶೀರ್ವದಿಸಿದರು.

ಇದೆಲ್ಲಾ ಆಗಿ ಮೂರು ದಶಕಗಳು ಕಳೆದಿವೆ. ಆಗಿನ ಕುತೂಹಲ, ಆತಂಕ, ಆಶ್ಚರ್ಯ ಅದೇ ತೀವ್ರತೆಯನ್ನು ಕಾಯ್ದುಕೊಂಡಿಲ್ಲ.ಪ್ರಶ್ನೆಗಳಂತೂ ತಮ್ಮ ಸಂತತಿಯನ್ನು ಹೆಚ್ಚಿಸಿಕೊಂಡು ಸದಾ ಬೆನ್ನುಬಿಡದೆ ಬೇಟೆಯಾಡುತ್ತಾ ಬಂದಿವೆ. ಕೆಲವಕ್ಕೆ ಸ್ವತಃ ಉತ್ತರ ಕಂಡುಕೊಂಡಿದ್ದೇನೆ; ಹಲವಕ್ಕೆ ಉತ್ತರ ಕಂಡುಕೊಳ್ಳಬೇಕಿದೆ. ಅರಿವಿನ ಹಾದಿಯಲ್ಲಿ ಬಹಳ ಬಹಳ ದೂರ ಸಾಗಬೇಕಿದೆ‌.ಅದು ಬದುಕಿನ ದಾರಿಯೂ ಆಗಿದೆ.

ಇಲ್ಲಿ ಯಾರೂ ಕೇಳಿಕೊಂಡು ಬಂದಿಲ್ಲ; ಹೇಳಿಬಿಟ್ಟು ಹೋಗುವುದೂ ಇಲ್ಲ. ಈ ಜೀವ ಮತ್ತು ಜೀವನ ಮೇಲಿನವನ ಅಣತಿಯಂತೆ ನಡೆಯುತ್ತಿವೆ. ಇವಾವೂ ನಮ್ಮವಲ್ಲದ ಕಾರಣ ಮಾಲೀಕನಿಗೆ ಸಾಕೆನಿಸುವತನಕ ಸಾಗಬೇಕು. ಪಂಚಭೂತಗಳಿಂದ ಬಂದ ದೇಹ ಪಂಚಭೂತಗಳಲ್ಲಿ ಒಂದು ದಿನ ಸೇರುತ್ತದೆ. ಇದರಲ್ಲಿ ಕಳೆದುಕೊಳ್ಳುವುದಾಗಲೀ ಪಡೆದುಕೊಳ್ಳುವುದಾಗಲೀ ಏನೂ ಇಲ್ಲ. ಯಾವುದಕ್ಕೆ ಹುಟ್ಟು ಇದೆಯೋ ಅದಕ್ಕೆ ಸಾವು ಇದ್ದೇ ಇದೆ. ಸಾವೆಂದರೆ ಬರಿ ಸಾವಲ್ಲ; ಅದು ರೂಪಾಂತರಗಳಿಗೆ ರಹದಾರಿ; ವಿಮೋಚನೆಯೆಡೆಗೆ ತೆರೆದುಕೊಳ್ಳುವ ಸಂಭ್ರಮದ ಬಾಗಿಲು.

ಬದುಕಿನ ಎಲ್ಲ ವೈರುಧ್ಯಗಳಿಗೆ ಸಾಕ್ಷಿಯಾದ ಮೇಲೆ ಚಿಕ್ಕಂದಿನಲ್ಲಿ ಲೆಕ್ಕಿಸಿದ್ದ ೩೬೫೨೫ ದಿನಗಳು ದೀರ್ಘವಾಯಿತೇನೋ ಎಂದು ಅನಿಸಿದ್ದೂ ಇದೆ.

ಈ ಜೀವನ ಕಲ್ಲು, ಮುಳ್ಳು, ತಗ್ಗು, ದಿಣ್ಣೆ,ಬಯಲು, ಮರುಭೂಮಿ, ಸಮೃದ್ಧ ಹಸಿರು-ಎಲ್ಲವನ್ನೂ ಒಳಗೊಂಡಿದೆ.ಇವೆಲ್ಲವನ್ನು ಒಂದು ನಿರ್ಲಿಪ್ತ ಭಾವವನ್ನು ಮೈಗೂಡಿಸಿಕೊಂಡು ದಿವ್ಯ ಶಕ್ತಿಗೆ ಶರಣಾಗುವುದರೊಂದಿಗೆ ಸಾಗಬೇಕಿದೆ.

ಸೋದರಮಾವನನ್ನು ನೆನೆದು ಮೂರು ದಶಕಗಳ ಹಿಂದೆ ರಚಿಸಿದ್ದ ಕವಿತೆಯಂಥ ರಚನೆ:

ಕಳೆದುಹೋದವನನ್ನು ನೆನೆದು

ಡಿಸೆಂಬರಿನ ಒಂದು ದಿನ,
ಸೂರ್ಯ ನೆತ್ತಿಯ ಮೇಲಿದ್ದ ಹೊತ್ತು,
ನಿನ್ನ ಹೊತ್ತಿದ್ದ ವಾಹನ ಚಲಿಸುತ್ತಿತ್ತು;
ವಿಧಿ ಸೆಳೆದತ್ತ ನೀನು ಸಾಗುತ್ತಿದ್ದೆ.
ಆ ದಿನ, ಸರಿಸುಮಾರು ಅದೇ ಹೊತ್ತು
ದೂರದ ಊರಿನಲ್ಲಿ ಗೆಳೆಯರ ದಂಡಿನಲ್ಲಿ
ಆಟದಲ್ಲಿ ಮೈಮರೆತಿದ್ದೆ ನಾನು.
ನೀ ಹೋದ ವಾರ್ತೆ ತಿಳಿದು,
ನೊಂದರೂ, ಒಳಗೊಳಗೆ ಬೆಂದರೂ,
ಆಟ ಮಾತ್ರ ನಿಲ್ಲಲಿಲ್ಲ.
ನೀ ಸತ್ತಂತೆ ನಟಿಸಿ, ಎನ್ನ ಅಳಿಸಿ, ನಕ್ಕಿದ್ದು,
ಆಲದ ಬೀಳಲಿಗೆ ಜೋತು ಬೀಳುವ ತೆರದಿ
ನಿನ್ನ ಕಾಲ್ಗಳಿಗೆ ಜೋತುಬಿದ್ದಿದ್ದು,
ಮರೆಯಾಗದ ಮರೆಯಲಾಗದ ಚಿತ್ರಗಳು.
ಇಂದಿಗೂ ನಿನ್ನ ನೆನಪು ಒತ್ತೊತ್ತಿ ಬರುವಾಗ
ಭವ್ಯ ನಾಗರೀಕತೆಯೊಂದರ ಅವಶೇಷಗಳ
ನಡುವೆ ನಿಂತಾಗಿನ ಅನುಭವ.
ಅವರಿವರ ನಗುವಲ್ಲಿ, ನಡೆಯಲ್ಲಿ, ನುಡಿಯಲ್ಲಿ
ನೀ ಇಣುಕಿ ಹಾಕಿದಾಗ
ಹೃದಯಕ್ಕೆ ತಂಪೆರೆದಂತಾಗಿ
ಆಟದಲ್ಲಿ ತನ್ಮಯನಾಗುತ್ತೇನೆ
ರೂಢಿಯಂತೆ.

‍ಲೇಖಕರು avadhi

March 18, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: