‘ಒಂದು ಪ್ಲೇಟ್ ಕತೆ ಪ್ಲೀಸ್…’

ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ಜಗತ್ತಿನ ಎಲ್ಲಾ ಸಂಗತಿಗಳಂತೆ ಆಹಾರದ ಬಗ್ಗೆಯೂ ಸ್ವಾರಸ್ಯಕರ ಜೋಕುಗಳು ನಮ್ಮ ನಡುವೆ ಹರಿದಾಡುತ್ತಿರುತ್ತವೆ.

ಅಲ್ಲೊಂದು ಚಿತ್ರ: ಅದು ಕಾರ್ನ್‍ಫ್ಲೇಕ್ಸ್ ಉತ್ಪಾದನಾ ಮಾರುಕಟ್ಟೆಯಲ್ಲಿ ಜನಪ್ರಿಯ ಬ್ರಾಂಡ್ ಆಗಿರುವ, ಕೆಲೋಗ್ಸ್ ಕಂಪೆನಿಯ ‘ರೆಡಿ ಟು ಕುಕ್’ ಉಪಮಾ ಉತ್ಪನ್ನದ ಪ್ಯಾಕೆಟ್ಟು. ‘ಕೆಲೋಗ್ಸ್ ಸಂಸ್ಥೆಯು ಭಾರತೀಯರ ಬೆಳಗ್ಗಿನ ಉಪಾಹಾರದ ಅಭ್ಯಾಸವನ್ನು ಹೊಸದಾಗಿ ಬದಲಿಸಲು ಹೊರಟಿತ್ತು. ಈಗ ಸ್ವತಃ ಕೆಲೋಗ್ಸ್ ಸಂಸ್ಥೆಯೇ ಭಾರತೀಯರ ದಾರಿಗೆ ಬಂದಿದೆ ನೋಡಿ!’, ಎನ್ನುವ ಒಂದು ಸಾಲಿನ ನಗೆಚಟಾಕಿಯದು.
ಸೂಕ್ಷ್ಮವಾಗಿ ನೋಡಿದರೆ ಇದೊಂಥರಾ ಹತ್ತಿಪ್ಪತ್ತು ವರ್ಷಗಳ ಹಿಂದೆ ಲಾಲೂ-ಕ್ಲಿಂಟನ್ ಜೋಡಿಯ ಬಗ್ಗೆ ಹರಿದಾಡುತ್ತಿದ್ದ ನಗೆಚಟಾಕಿಯೊಂದರ ಮಾದರಿಯಲ್ಲಿ ಹುಟ್ಟಿರುವಂಥದ್ದು.

ಒಮ್ಮೆ ಇಂಗ್ಲಿಷ್ ಕಲಿಯಲೆಂದು ಲಾಲೂ ಅಮೆರಿಕಾಗೆ ಹೋಗಿದ್ದರಂತೆ. ವಾರದ ನಂತರ ಲಾಲೂರವರ ಪತ್ನಿ ಅಮೆರಿಕಾದ ಅಧ್ಯಕ್ಷ ಬಿಲ್ ಕ್ಲಿಂಟನ್ ರವರಿಗೆ ಕರೆ ಮಾಡಿ ನಮ್ಮ ಯಜಮಾನರ ಇಂಗ್ಲಿಷ್ ತರಗತಿಗಳು ಹೇಗೆ ನಡೆಯುತ್ತಿವೆ ಸಾರ್ ಎಂದು ವಿಚಾರಿಸಿದರಂತೆ. ಆಗ ಕ್ಲಿಂಟನ್ ಸ್ವತಃ ಬಿಹಾರಿ ಭಾಷೆಯಲ್ಲಿ ಮಾತನಾಡುತ್ತಾ “ಅವರಿಗೆ ನಾನು ಇಂಗ್ಲಿಷ್ ಕಲಿಸುವುದೇನು, ಅವರೇ ನನಗೆ ಬಿಹಾರಿ ಭಾಷೆ ಕಲಿಸಿಬಿಟ್ಟರು” ಎಂದರಂತೆ.
ನಾವೆಲ್ಲರೂ ತಿಳಿದಿರುವಂತೆ ಕೆಲೋಗ್ಸ್ ಕಂಪೆನಿಯು ಬೆಳಗ್ಗಿನ ಉಪಾಹಾರಕ್ಕೆ ಸಾಮಾನ್ಯವಾಗಿ ಬಳಸಲಾಗುವ ಕಾರ್ನ್‍ಫ್ಲೇಕ್ಸ್ ಉತ್ಪನ್ನಗಳಿಗೆ ಜನಪ್ರಿಯ. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಕಾರ್ನ್‍ಫ್ಲೇಕ್ಸ್ ಅಷ್ಟಾಗಿ ಜನಪ್ರಿಯವಾಗದೆ, ಭಾರತೀಯ ಸಾಂಪ್ರದಾಯಿಕ ಉಪಾಹಾರಗಳಾದ ಉಪಮಾದಂತಹ ಉತ್ಪನ್ನಗಳತ್ತ ವಿದೇಶಿ ಸಂಸ್ಥೆಯು ಸ್ವತಃ ವಾಲಿದೆ ಎಂಬುದು ಜೋಕಿನ ತಿರುಳು.

ಬ್ರಾಂಡ್ ಗಳಿಂದ ಉತ್ಪನ್ನಗಳು ಮನೆಮಾತಾಗುತ್ತವೆಯೋ ಅಥವಾ ಉತ್ಪನ್ನಗಳಿಂದ ಬ್ರಾಂಡ್ ಗಳು ಜನಪ್ರಿಯವಾಗುತ್ತವೆಯೋ ಎಂಬುದು ಕುತೂಹಲಕಾರಿ ಪ್ರಶ್ನೆ. ಏಕೆಂದರೆ ಯಶಸ್ಸನ್ನು ಗಳಿಸಿದ ಕೆಲವು ಸಂಗತಿಗಳು ಅದೆಷ್ಟು ವರ್ಷಗಳು ಕಳೆದುಹೋದರೂ ಬದಲಾಗುವುದಿಲ್ಲ. ಅಸಲಿಗೆ ಸ್ಥಳೀಯರ ಮಧ್ಯೆ ಇರುವ ಕೆಲ ಅಂಗಡಿಗಳು, ಉದ್ಯಮಗಳು ಅದೆಷ್ಟು ಖ್ಯಾತಿಯನ್ನು ಗಳಿಸಿರುತ್ತವೆಯೆಂದರೆ, ಪ್ರಸಕ್ತ ಮಾರುಕಟ್ಟೆಯ ಸಾಂಪ್ರದಾಯಿಕ ನೋಟದಲ್ಲಿ ಅವುಗಳಿಗೆ ಬ್ರಾಂಡ್ ಹಣೆಪಟ್ಟಿಯನ್ನು ಅಂಟಿಸುವುದು ಸಾಧ್ಯವಾಗದಿದ್ದರೂ, ಸ್ಥಳೀಯ ಜನಸಾಮಾನ್ಯರ ಮನದಲ್ಲಿ ಮಾತ್ರ ಬ್ರಾಂಡ್ ರೂಪದಲ್ಲೇ ತಮ್ಮ ಛಾಪನ್ನೊತ್ತಿರುತ್ತವೆ.

ಒಂದೆರಡು ವರ್ಷಗಳ ಹಿಂದೆ ನನ್ನ ಹಿರಿಯ ಮಿತ್ರರೊಬ್ಬರು ಮಂಗಳೂರಿನ ಹಂಪನಕಟ್ಟೆ ಭಾಗದ ಆಸುಪಾಸಿನಲ್ಲಿ ‘ಅಕ್ಕಮ್ಮಯ್ಯ ಹೋಟೇಲ್’ ಎಂಬ ಹೆಸರಿನಲ್ಲಿ ಖ್ಯಾತಿಯನ್ನು ಗಳಿಸಿರುವ ಪುಟ್ಟ ಹೋಟೇಲ್ ಒಂದಕ್ಕೆ ಕರೆದೊಯ್ದಿದ್ದರು. ಅವರು ತಮ್ಮ ಕಾಲೇಜು ದಿನಗಳ ಅವಧಿಯಲ್ಲಿ ಈ ಹೋಟೇಲಿಗೆ ಬಂದು ತಿಂಡಿ ತಿನ್ನುತ್ತಿದ್ದರಂತೆ. ಈ ನನ್ನ ಹಿರಿಯ ಮಿತ್ರರು ಸರಕಾರಿ ಇಲಾಖೆಯೊಂದರಲ್ಲಿ ಒಳ್ಳೆಯ ಹುದ್ದೆಯನ್ನು ನಿರ್ವಹಿಸಿ ಸದ್ಯ ನಿವೃತ್ತ ಜೀವನವನ್ನು ನಡೆಸುತ್ತಿದ್ದಾರೆ. ಅವರ ಗಂಡು ಮಕ್ಕಳಿಬ್ಬರೂ ಇಂದು ವಿವಾಹದ ವಯಸ್ಸಿಗೆ ಬಂದಾಗಿದೆ. ಅದೇನೇ ಇರಲಿ. ಅವರಿಗೆ ಆ ದಿನಗಳಲ್ಲಿ ಪ್ರಿಯವಾಗಿದ್ದ ಹೋಟೇಲು ಮಾತ್ರ ಇಂದಿಗೂ ನಡೆಯುತ್ತಿದೆ. ಇವರೂ ಕೂಡ ಸಮಯ ಸಿಕ್ಕಿದಾಗಲೆಲ್ಲಾ ಅತ್ತ ಹೋಗಿ ಬರುತ್ತಿರುತ್ತಾರೆ.

ಮೂರು ತಲೆಮಾರುಗಳಿಂದ ಸಾಗಿ ಬರುತ್ತಿರುವ ಈ ಹೋಟೇಲು ಇಂದಿಗೂ ಮಂಗಳೂರು ಆಸುಪಾಸಿನವರ ಮೆಚ್ಚಿನ ಹೋಟೇಲುಗಳಲ್ಲೊಂದು. ಸಾಮಾನ್ಯವಾಗಿ ಮದುವೆಗಳಲ್ಲಿ ಕಾಣಸಿಗುವ ಪಂಕ್ತಿಭೋಜನದ ಸಾಲುಗಳಂತೆ ಇಲ್ಲೂ ಪಂಕ್ತಿಭೋಜನದ ಮಾದರಿಯಲ್ಲೇ ಮಧ್ಯಾಹ್ನದ ಊಟಗಳು ಗ್ರಾಹಕರಿಗಾಗಿ ನೀಡಲ್ಪಡುತ್ತವೆ. ಹೆಚ್ಚು ದುಬಾರಿಯಲ್ಲದ ದರದಲ್ಲಿ ಗ್ರಾಹಕರಿಗೆ ದಕ್ಕುವ ಇಲ್ಲಿಯ ಮೀನೂಟವು ಪೀಳಿಗೆಯ ಸೀಮೆಗಳನ್ನೂ ದಾಟಿ ಅರ್ಹ ಖ್ಯಾತಿಯನ್ನು ಗಳಿಸಿಕೊಂಡಿದೆ.

ದಿಲ್ಲಿಯ ಕನ್ನಾಟ್ ಪ್ಲೇಸಿನಲ್ಲಿರುವ ಖ್ಯಾತ ಬೇಕರಿ “ವೆಂಗರ್ಸ್” ಆಸುಪಾಸಿನಲ್ಲಿ ಓಡಾಡುವ ಸಂದರ್ಭಗಳಲ್ಲಿ ನನಗೆ ಅಕ್ಕಮ್ಮಯ್ಯ ಹೋಟೇಲ್ ಸುಮ್ಮನೆ ನೆನಪಾಗುತ್ತದೆ. ಬ್ರೆಡ್, ಕೇಕ್, ಐಸ್ ಕ್ರೀಂ, ಪಡ್ಡಿಂಗ್ಸ್, ಬಿಸ್ಕತ್ತು ಇತ್ಯಾದಿಗಳಿಗೆ ಭಾರೀ ಖ್ಯಾತಿಯನ್ನು ಗಳಿಸಿರುವ ವೆಂಗರ್ಸ್ ಗೆ 2024 ರಲ್ಲಿ ಇನ್ನೇನು ಭರ್ತಿ ನೂರು ವರ್ಷಗಳು ತುಂಬಲಿವೆ. ದಿಲ್ಲಿಯಲ್ಲಿ ನಿಯೋಜನೆಗೊಂಡಿದ್ದ ಬ್ರಿಟಿಷ್ ಸೈನಿಕರ ಊಟದ ವ್ಯವಸ್ಥೆಗೆಂದು ಚಿಕ್ಕ ಮಟ್ಟದಲ್ಲಿ ಶುರುವಾಗಿದ್ದ ಕ್ಯಾಟರಿಂಗ್ ಸಂಸ್ಥೆಯೊಂದು ಈಗ ಬರೋಬ್ಬರಿ ನೂರು ವರ್ಷದ ಮೈಲಿಗಲ್ಲನ್ನು ನೆಡುವ ಹಂತದವರೆಗೆ ಬೆಳೆದಿದೆ. ನಿಸ್ಸಂದೇಹವಾಗಿ ವೆಂಗರ್ಸ್ ಎಂಬುದು ಇಂದು ದಿಲ್ಲಿಯ ಜನಮಾನಸದಲ್ಲೊಂದು ಬ್ರಾಂಡ್ ಇದ್ದಂತೆ.

1930 ರ ಆರಂಭದಲ್ಲಿ ದಿಲ್ಲಿಯ ಕಶ್ಮೀರಿ ಗೇಟ್ ಪ್ರದೇಶದಿಂದ ಕನ್ನಾಟ್ ಪ್ಲೇಸಿಗೆ ವರ್ಗಾವಣೆಯಾಗಿದ್ದ ವೆಂಗರ್ಸ್ ಅಂದಿನಿಂದ ಇಂದಿನವರೆಗೂ ಕನ್ನಾಟ್ ಪ್ಲೇಸಿನಲ್ಲೇ ನೆಲೆಯೂರಿದೆ. ಉದ್ಯಮವು ಬೆಳೆಯುತ್ತಾ ಹೋದಂತೆ ಶಿಮ್ಲಾ ಸೇರಿದಂತೆ ದಿಲ್ಲಿಯ ಇತರ ಭಾಗಗಳಲ್ಲೂ ವೆಂಗರ್ಸ್ ಶಾಖೆಗಳು ಬೆಳೆಯುತ್ತಾ ಸಾಗಿದವು. 2011 ರಲ್ಲಿ ದಿಲ್ಲಿ ಶೈಲಿಯ ಆಹಾರವನ್ನು ಗ್ರಾಹಕರಿಗೆ ನೀಡುವ ನಿಟ್ಟಿನಲ್ಲಿ “ವೆಂಗರ್ಸ್ ಡೆಲಿ” ಎಂಬ ಹೊಸ ಪ್ರಯತ್ನವೊಂದು ಆರಂಭವಾಗಿತ್ತು. ನಿರೀಕ್ಷೆಯಂತೆ ವೆಂಗರ್ಸ್ ಡೆಲಿ ಒಳ್ಳೆಯ ಜನಪ್ರಿಯತೆಯನ್ನು ಗಳಿಸಿಕೊಂಡಿತು.

ಇಂದು ದಿಲ್ಲಿಯಲ್ಲಿರುವ ಹಲವು ರಾಯಭಾಯ ಕಚೇರಿಗಳಿಗೆ ಮತ್ತು ಪ್ರಮುಖ ಸರಕಾರಿ ಕಾರ್ಯಾಲಯಗಳಿಗೆ ವೆಂಗರ್ಸ್ ಕ್ಯಾಟರಿಂಗ್ ಸೇವೆಯನ್ನು ನೀಡುತ್ತಿದೆ. ಕನ್ನಾಟ್ ಪ್ಲೇಸಿನಲ್ಲಿರುವ ವೆಂಗರ್ಸ್ ಬೇಕರಿಗೆ ಹೋದರೆ ಎಂದೆಂದಿಗೂ ಜನಜಾತ್ರೆಯದ್ದೇ ದೃಶ್ಯ. ಅದರ ಜನಪ್ರಿಯತೆ ಆ ಮಟ್ಟಿನದ್ದು. ಕನ್ನಾಟ್ ಪ್ಲೇಸಿನಲ್ಲಿರುವ ಅತ್ಯಂತ ಹಳೆಯ ಬೇಕರಿಗಳಲ್ಲಿ ಇಂದು ವೆಂಗರ್ಸ್ ಕೂಡ ಒಂದು.

ವಿಶೇಷವೆಂದರೆ ದಿಲ್ಲಿಯ ಕನ್ನಾಟ್ ಪ್ಲೇಸಿನಲ್ಲಿ ಇಂತಹ ಹಲವು ಫುಡ್ ಜಾಯಿಂಟ್ ಗಳು ತಮ್ಮದೇ ಆದ ಆತಿಥ್ಯದ ಶೈಲಿ, ಗುಣಮಟ್ಟದ ಆಹಾರ, ತಲೆಮಾರುಗಳ ಹಿನ್ನೆಲೆ… ಹೀಗೆ ಹತ್ತಾರು ಕಾರಣಗಳಿಂದ ಜನಮನ್ನಣೆಯನ್ನು ಗಳಿಸಿಕೊಂಡಿವೆ.

ಈಗಿನ ಜಾಗತಿಕ ಮಟ್ಟದ ದೈತ್ಯ ಬ್ರಾಂಡುಗಳು ಕೋಟಿಗಟ್ಟಲೆ ಖರ್ಚು ಮಾಡಿ ಆರಂಭಿಸುವ ಭವ್ಯ, ಐಷಾರಾಮಿ ರೆಸ್ಟೊರೆಂಟುಗಳಿಗೆ ಹೋಲಿಸಿದರೆ ಇವುಗಳಿಗೆ ಯಾವುದೇ ಚಮಕ್-ಧಮಕ್ಕಿನ ಬಾಹ್ಯರೂಪಗಳಿಲ್ಲ. ಬಹಳಷ್ಟು ಬಾರಿ ಈ ಫುಡ್ ಜಾಯಿಂಟ್ ಒಂದಕ್ಕೆ ಇಂಥದ್ದೊಂದು ವಿಶೇಷ ಹಿನ್ನೆಲೆಯಿದೆ ಎಂಬುದು ನಮಗೆ ತಿಳಿಯುವುದೇ ಇತರರ ಶಿಫಾರಸ್ಸುಗಳಿಂದ ಅಥವಾ ಇನ್ಯಾವುದೋ ಅಂತರ್ಜಾಲದ ಹುಡುಕಾಟಗಳಲ್ಲಿ ಎಡತಾಕುವ ಆಕಸ್ಮಿಕ ಮಾಹಿತಿಗಳಿಂದ.

ದಿಲ್ಲಿಯಲ್ಲಿರುವ ಈ ಬಗೆಯ ಫುಡ್ ಜಾಯಿಂಟ್ ಗಳ ಅಸಲಿ ಜನಪ್ರಿಯತೆಯ ಬಗ್ಗೆ ನಮಗೆ ಮನದಟ್ಟಾಗಲು ಅಲ್ಲಿಗೆ ಬರುವ ಅಪಾರ ಜನಸಂದಣಿಯನ್ನು ನೋಡಿದರೆ ಸಾಕು. ಉದಾಹರಣೆಗೆ ದಿಲ್ಲಿಯ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಕನ್ನಾಟ್ ಪ್ಲೇಸಿನಲ್ಲಿ ಹೆಜ್ಜೆಗೊಂದರಂತೆ ಫುಡ್ ಜಾಯಿಂಟ್ ಗಳಿವೆ, ದೇಶವಿದೇಶಗಳ ಖ್ಯಾತ ಬ್ರಾಂಡುಗಳ ರೆಸ್ಟೊರೆಂಟುಗಳಿವೆ. ಅಷ್ಟಿದ್ದರೂ ವೆಂಗರ್ಸ್ ನಂತಹ ಒಂದು ಶತಮಾನದಷ್ಟು ಹಳೆಯ ಬೇಕರಿಗಳಲ್ಲಿ ಕಾಣಸಿಗುವ ಗ್ರಾಹಕರ ಸಂಖ್ಯೆಯು ಎಲ್ಲರ ಹುಬ್ಬೇರಿಸುವಂಥದ್ದು. ಬಹುಷಃ ಯಶಸ್ವಿ ಬ್ರಾಂಡುಗಳು ಸೃಷ್ಟಿಯಾಗುವುದು ಹೀಗೆ.

ಇತ್ತ ವೆಂಗರ್ಸ್ ಆಸುಪಾಸಿನಲ್ಲೇ ಇರುವ ಒಂದು ಪುಟ್ಟ ಜ್ಯೂಸ್ ಸೆಂಟರ್ ತನ್ನ ಮಿಲ್ಕ್ ಶೇಕ್ ಗಳಿಗಾಗಿಯೇ ಫೇಮಸ್ಸು. ಮೇಲ್ನೋಟಕ್ಕೆ ಪುಟ್ಟ ಗೂಡಿನಂತಿರುವ ಈ ಮಿಲ್ಕ್ ಶೇಕ್ ಸೆಂಟರ್ ಅದೆಷ್ಟು ಜನಪ್ರಿಯವೆಂದರೆ ಕುರಿಮಂದೆಯಂತಿರುವ ಜನರ ಸಾಲಿನಲ್ಲಿ ನಿಂತುಕೊಂಡು ಇಲ್ಲಿನ ವಿಶೇಷ ಮಿಲ್ಕ್ ಶೇಕನ್ನು ಸವಿಯಬೇಕು. ವಾರಾಂತ್ಯದ ಪೀಕ್ ಅವಧಿಗಳನ್ನು ಸೇರಿಸಿ ಹೇಳುವುದಾದರೆ ಅದೆಂಥಾ ಜನಸಂದಣಿಯನ್ನೂ ನಿಮಿಷಾರ್ಧದಲ್ಲಿ ಸಲೀಸಾಗಿ ನಿಭಾಯಿಸುವ ಕಲೆಯು ಇಲ್ಲಿನ ಉದ್ಯಮಿಗಳಿಗೆ ಸಿದ್ಧಿಸಿರುವುದರಿಂದ, ಗ್ರಾಹಕರ ಗುಂಪುಗಳು ಸೃಷ್ಟಿಯಾಗುವ ವೇಗದಲ್ಲೇ ಕರಗಿಹೋಗುತ್ತವೆ ಕೂಡ. ಉದ್ದದ ಕಾಗದದ ಲೋಟಗಳಲ್ಲಿ ನೀಡಲಾಗುವ ಇಲ್ಲಿನ ಮಿಲ್ಕ್ ಶೇಕ್ ನಾನು ಕಂಡಿರುವಂತೆ ಇಡೀ ದಿಲ್ಲಿಯಲ್ಲೇ ಬೆಸ್ಟ್!

ಇದೇ ಮಾದರಿಯಲ್ಲಿ ಕನ್ನಾಟ್ ಪ್ಲೇಸಿನಲ್ಲಿರುವ “ಕಾಕೇ ದಾ ಹೋಟೇಲ್” ಕೂಡ ಇಂತಹ ವಿಶಿಷ್ಟ ಪರಂಪರೆಯೊಂದಿಗೆ, ಯಶಸ್ವಿಯಾಗಿ ಮುಂದುವರೆಯುತ್ತಿರುವ ದಿಲ್ಲಿಯ ಖ್ಯಾತ ಫುಡ್ ಜಾಯಿಂಟ್ ಗಳಲ್ಲೊಂದು. ಅದು 1931 ರ ಮಾತು. ಅಮೋಲಕ್ ರಾಮ್ ಛೋಪ್ರಾ ಎಂಬವರೊಬ್ಬರು ಪಾಕಿಸ್ತಾನದ ಲಾಹೋರಿನಲ್ಲಿ ಕಾಕೇ ದಾ ಹೋಟೇಲ್ ಎಂಬ ಹೆಸರಿನಲ್ಲಿ ಪುಟ್ಟ ಕ್ಯಾಂಟೀನ್ ಒಂದನ್ನು ನಡೆಸುತ್ತಿದ್ದರಂತೆ. ಮುಂದೆ ನಲವತ್ತೇಳರಲ್ಲಿ ನಡೆದ ದೇಶ ವಿಭಜನೆಯಿಂದಾಗಿ ಛೋಪ್ರಾ ಲಾಹೋರ್ ನಗರವನ್ನು ಬಿಟ್ಟು ದಿಲ್ಲಿಯಲ್ಲಿ ನೆಲೆಯೂರಿದರು. ಇಂದು ಕನ್ನಾಟ್ ಪ್ಲೇಸ್ ಖ್ಯಾತಿಯ ಕಾಕೇ ದಾ ಹೋಟೇಲ್ ಎಂದರೆ ಇಡೀ ದಿಲ್ಲಿಯಲ್ಲಿ ಮನೆಮಾತು. ಹೀಗೆ ಕೆ.ಡಿ.ಎಚ್ ಎಂದು ಸರಳವಾಗಿ ಕರೆಯಲಾಗುವ ಈ ಹೋಟೇಲು ಅಟಲ್ ಬಿಹಾರಿ ವಾಜಪೇಯಿಯವರಿಂದ ಹಿಡಿದು ಚೇತನ್ ಆನಂದ್, ದಾರಾ ಸಿಂಗ್ ರಂತಹ ಖ್ಯಾತನಾಮರಿಂದಲೂ ಮೆಚ್ಚುಗೆಯನ್ನು ಗಳಿಸಿದೆ.

ದಿಲ್ಲಿಗೂ, ಮೊಘಲ್ ಸಾಮ್ರಾಜ್ಯಶಾಹಿಗೂ ಇರುವ ಐತಿಹಾಸಿಕ ನಂಟು ಎಲ್ಲರಿಗೂ ತಿಳಿದಿದ್ದೇ. ಭೋಜನದ ವಿಚಾರಕ್ಕೆ ಬಂದರೆ ಮುಘಲಾಯಿ ಶೈಲಿಯ ಆಹಾರವು ದೇಶದಾದ್ಯಂತ ಎಲ್ಲರ ಮೆಚ್ಚುಗೆಯನ್ನು ಗಳಿಸಿರುವಂಥದ್ದು. ಹೀಗಿರುವಾಗ ದಿಲ್ಲಿಯಲ್ಲಿದ್ದುಕೊಂಡು ಅಥೆಂಟಿಕ್ ಎನ್ನಬಹುದಾದ ಮುಘಲಾಯಿ ಶೈಲಿಯ ಆಹಾರವನ್ನು ಸವಿಯುವ ಅನುಭವವೇ ಬೇರೆ. ಇಂದು ದಿಲ್ಲಿಯಲ್ಲಿ ಮುಘಲಾಯಿ ಆಹಾರಶೈಲಿ ಎಂದ ಕೂಡಲೇ ಥಟ್ಟನೆ ನೆನಪಿಗೆ ಬರುವುದು ಕರೀಮ್ಸ್. 1913 ರಲ್ಲಿ ಆರಂಭವಾಗಿದ್ದ ಕರೀಮ್ಸ್ ಇಂದು ಶಹರದಾದ್ಯಂತ ಮೂವತ್ತಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಕರೀಮ್ಸ್ ಎಂಬ ಹೆಸರು ಮುಘಲಾಯಿ ಆಹಾರಕ್ಕೆ ಅನ್ವರ್ಥನಾಮವೇನೋ ಎಂಬಂತೆ ದಿಲ್ಲಿಯ ಹೊರಗಿನವರಿಗೂ ತಿಳಿದಿರುವುದು ಇಲ್ಲಿನ ಹೆಗ್ಗಳಿಕೆ.

ಹಾಗೆ ನೋಡಿದರೆ ದಿಲ್ಲಿಯಲ್ಲಿರುವ ಪ್ರಮುಖ ದರ್ಗಾಗಳು ಮತ್ತು ಮಸೀದಿಗಳ ಆಸುಪಾಸಿನಲ್ಲೂ ಮುಘಲಾಯಿ ಶೈಲಿಯ ಮತ್ತು ದಿಲ್ಲಿ ಶೈಲಿಯ ಆಹಾರವನ್ನು ಸವಿಯಬಹುದು. ಜಾಮಾ ಮಸೀದಿ, ಹಝರತ್ ನಿಜಾಮುದ್ದೀನ್ ದರ್ಗಾ, ಮೆಹರೋಲಿ ಬಳಿಯ ಹಝರತ್ ಖ್ವಾಜಾ ಕುತುಬುದ್ದೀನ್ ಬಖ್ತಿಯಾರ್ ಕಾಕಿ ಪ್ರದೇಶಗಳ ಇಕ್ಕಟ್ಟಿನ ಗಲ್ಲಿಗಳಲ್ಲಿ ಸಿಗುವ ಕೋರ್ಮಾ, ಬಿರಿಯಾನಿ ಸೇರಿದಂತೆ ವಿವಿಧ ಸ್ಥಳೀಯ, ಮಾಂಸಾಹಾರದ ಖಾದ್ಯಗಳು ಬಹಳ ಜನಪ್ರಿಯ. ಇನ್ನು ಈ ಭಾಗಗಳಲ್ಲಿ ಖೀರ್ ಎಂಬ ಹೆಸರಿನಲ್ಲಿ ಸಿಗುವ ವಿಶೇಷ ಪಾಯಸವು ಸಿಹಿ ಪ್ರಿಯರಿಗೊಂದು ಒಳ್ಳೆಯ ಬೋನಸ್.

ಕೆಲವೊಮ್ಮೆ ಯಾವುದೇ ಘನವಾದ ಉದ್ದೇಶಗಳಿಲ್ಲದ ಅಡ್ಡಾಡುವಿಕೆಯಲ್ಲೂ ಕೆಲ ವಿಶಿಷ್ಟ ಖಾದ್ಯಗಳು ಆಕಸ್ಮಿಕವಾಗಿ ಸಿಕ್ಕಿ ಮನಸ್ಸಿಗೂ, ನಾಲಗೆಗೂ ಆಹ್ಲಾದವನ್ನು ತರುವುದುಂಟು. ಆಹಾರಪ್ರಿಯರಿಗೆ ನಿಜಕ್ಕೂ ಇದೊಂದು “ಯುರೇಕಾ” ಕ್ಷಣ! ದಿಲ್ಲಿಯ ಲಾಜಪತ್ ನಗರದ ಹೋಟೇಲೊಂದರಲ್ಲಿ ನನಗೆ ಸವಿಯಲು ಸಿಕ್ಕ ಚಿಕನ್ ಬರ್ರಾ ಅಂತಹ ಖಾದ್ಯಗಳಲ್ಲೊಂದು. ಅತ್ತ ಚಿಕನ್ ತಂದೂರಿಯೂ ಅಲ್ಲದ, ಇತ್ತ ಚಿಕನ್ ಮಸಾಲಾ ವಿಭಾಗಕ್ಕೂ ಸೇರದ ನಾಜೂಕಿನ ಪ್ರಯೋಗವೊಂದರಲ್ಲಿ ಚಿಕನ್ ಬರ್ರಾ ಹುಟ್ಟಿಕೊಂಡಿದೆ. ಇಂದು ಹುಡುಕಿಕೊಂಡು ಹೋಗಬೇಕಾಗಿರುವ ಚಿಕನ್ ಬರ್ರಾ ಖಾದ್ಯವು ಮುಂದೆ ಮುಖ್ಯವಾಹಿನಿಯ ಜನಪ್ರಿಯ ಖಾದ್ಯಗಳ ಪಟ್ಟಿಯಲ್ಲಿ ಸೇರಿಕೊಂಡರೆ ಅಚ್ಚರಿಯ ಮಾತೇನೂ ಇಲ್ಲ.

ಒಟ್ಟಿನಲ್ಲಿ ದಿಲ್ಲಿಯ ಆಹಾರ ಸಂಸ್ಕøತಿಯ ಬಗ್ಗೆ ದಾಖಲಿಸುವುದೆಂದರೆ ಓಶೋ ರಜನೀಶ್ ಹೇಳಿರುವ ಸಾವಿರಾರು ಕತೆಗಳಿಂದ ಅಲ್ಲೊಂದು ಇಲ್ಲೊಂದು ಸ್ವಾರಸ್ಯಕರ ಸಂಗತಿಗಳನ್ನು ಹೆಕ್ಕಿ ತೆಗೆದಂತೆ. ಎಷ್ಟು ಮೊಗೆದರೂ ಅದು ಸಾಗರದಿಂದ ಒಂದು ಚೊಂಬು ನೀರನ್ನು ತೆಗೆದಷ್ಟೇ ಕಮ್ಮಿ. ಅದರಲ್ಲೂ ದಿಲ್ಲಿಯ ಮಟ್ಟಿಗೆ ಆಹಾರ ಸಂಸ್ಕøತಿಯೆಂದರೆ, ಅಲ್ಲಿ ಯಥಾವತ್ ಪದಗಳಲ್ಲಿರುವಂತೆ ಆಹಾರವೂ ಇದೆ, ಸಂಸ್ಕøತಿಯೂ ಇದೆ. ದಿಲ್ಲಿ ಗಲ್ಲಿಗಳ ಕತೆಗಳು, ಸ್ಥಳೀಯ ಸಂಸ್ಕøತಿಯ ಶ್ರೀಮಂತ ವೈವಿಧ್ಯ ಮತ್ತು ಶಹರದ ಒಟ್ಟಾರೆ ವಿಕಾಸದಂತಹ ಬ್ರಹ್ಮಾಂಡಗಳನ್ನು ತಿನ್ನುವ ಪುಟ್ಟ ತಟ್ಟೆಯಲ್ಲೂ ಅರಿಯುವ ಅವಕಾಶವನ್ನು ಕಾಣಬೇಕಿದ್ದರೆ ಬಹುಷಃ ದಿಲ್ಲಿಯಂತಹ ವಿಶಿಷ್ಟ, ಐತಿಹಾಸಿಕ ಶಹರಕ್ಕಷ್ಟೇ ಬರಬೇಕು.

“ಒಳ್ಳೆಯ ಆಹಾರವನ್ನು ಸವಿಯಲು ಬೆಳ್ಳಿಯ ಚಮಚವೇ ಬೇಕೆಂದಿಲ್ಲ”, ಎನ್ನುತ್ತಾರೆ ಖ್ಯಾತ ಅಮೆರಿಕನ್ ಬಾಣಸಿಗರಾಗಿರುವ ಪೌಲ್ ಪ್ರಡ್ಹೋಮ್ಮ್. ದಿಲ್ಲಿಯ ಆಹಾರ ವೈವಿಧ್ಯದ ಮಟ್ಟಿಗಂತೂ ಇದು ಅಕ್ಷರಶಃ ನಿಜ.

‍ಲೇಖಕರು Admin

August 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: