ಸದಾಶಿವ ಸೊರಟೂರು
**
ಕಾದ ನೆಲ ತನ್ನೆಲ್ಲಾ ದುಗುಡಗಳಿಂದ ಬಿಡಿಸಿಕೊಳ್ಳುವ ತಹತಹಿಕೆಯಲ್ಲಿದೆ. ಅದರ ಮೌನವೊಂದು ಯಾವುದೊ ಟ್ರಾಫಿಕ್ಕಿನ ಮಧ್ಯೆ ಸಿಕ್ಕಿ ಹಾಕಿಕೊಂಡಿರಬೇಕು, ಇಲ್ಲವೆ ಹೊಲದ ಕಾದ ಮಣ್ಣಿನ ಹೆಂಟೆಯಲ್ಲಿ ಬೆಂದು ಹೋಗಿರಬೇಕು. ಸೂತ್ರವನ್ನು ಹಿಡಿದವನ ಕೈಯಲ್ಲಿ ಗುರುತು ಬಿಟ್ಟು ಆಕಾಶಕ್ಕೆ ಹಾರಿದ ಗಾಳಿಪಟದಂತೆ ಮನೆಯ ಮುದ್ದು ಮಕ್ಕಳು ಯಾವುದೊ ಬೇಸಿಗೆ ಶಿಬಿರದೊಳಗೆ ಸಿಕ್ಕಿಹಾಕಿಕೊಂಡು ಮತ್ತು ಮರಳಿದ್ದಾರೆ. ವರ್ಷವಿಡೀ ಓದಿದ ಮಕ್ಕಳು ಸುಡುವ ಬಿಸಿಲಲ್ಲೆ ಗಿರಗಿರ ತಿರುಗುವ ಫ್ಯಾನಿನ ಕೆಳಗೆ ಸುರಿವ ಭಯದ ಬೆವರು ಒರೆಸಿಕೊಳ್ಳುತ್ತಾ ಪರೀಕ್ಷೆ ಬರೆದು ಮುಗಿಸಿ, ಬೇಸಿಗೆಯ ಬಿಸಿಲಿಗಿಂತಲೂ ಅವರ ಫಲಿತಾಂಶದ ಬಿಸಿಗೆ ಕಾದು ಮೊನ್ನೆಯಷ್ಟೆ ಅದನ್ನು ಪಡೆದು ಇನ್ನೂ ನಿಟ್ಟುಸಿರು ಬಿಡುತ್ತಿದ್ದಾರೆ. ಅಂಕದ ದಾಹವಿನ್ನೂ ತೀರಿದಂತೆ ಕಾಣುತ್ತಿಲ್ಲ. ಅವರ ಪೋಷಕರು ಅಂಕಪಟ್ಟಿ ಹಿಡಿದು ದೊಡ್ಡ ದೊಡ್ಡ ಕಾಲೇಜುಗಳ ಎದುರಿಗೆ ಸಾಲು ನಿಲ್ಲುತ್ತಿದ್ದಾರೆ. ರಸ್ತೆಯ ಮೇಲಿನ ವಾಹನಗಳಿಗಿಂತ ಹೆಚ್ಚು ಅವರ ಮನಸಿನಲ್ಲಿ ಗೊಂದಲಗಳಿವೆ. ಕಾಲೇಜುಗಳ ಫೀಜಿಗೆ, ಅವರ ನಿಬಂಧನೆಗಳಿಗೆ ಇವರು ಕಂಗಾಲಾಗಿದ್ದಾರೆ.
ನೀಟ್ ಪರೀಕ್ಷೆಗೆ ಕೂತಿದ್ದ ಮಕ್ಕಳ ಎದೆಯೊಳಗೆ ಇನ್ನೇನು ಸಣ್ಣ ಸುಳಿಗಾಳಿ ಏಳುವ ಲಕ್ಷಣಗಳು ಕಾಣಿಸುತ್ತಿವೆ. ಸಿಇಟಿಗಾಗಿ ಮಕ್ಕಳು ತಮ್ಮ ನಿದ್ದೆಯನ್ನು ಇಂಧನವಾಗಿ ಉರಿಸುತ್ತಿದ್ದಾರೆ. ಅದರ ಝಳಕ್ಕೆ ಗಾಳಿ ಇನ್ನಷ್ಟು ಬಿಸಿಯಾಗಿದೆ. ರಜೆದ ನೆವಕ್ಕೆ ಅಮ್ಮನೊಂದಿಗೆ ದೂರದ ಹಳ್ಳಿಗೆ ಹೋದ ಎಳೆಯ ಪೋರರ ಅಪ್ಪ ಹಗಲು ದುಡಿದು ರಸ್ತೆ ಬದಿಯಲ್ಲಿ ಎರಡು ಇಡ್ಲಿ ತಿಂದು ನಡುರಾತ್ರಿ ಒಂಟಿತನದಲ್ಲಿ ಮಗ್ಗಲು ಬದಲಿಸುತ್ತಿದ್ದಾನೆ. ಬಿಸಿಲಿಗೆ ನೆಲದ ಮುಖ ಕಂದಿಹೋಗಿದೆ. ದಟ್ಟವಾದ ಬಿಸಿಲು ಸುರಿಯುತಿದೆ. ಜನರೆಲ್ಲಾ ಒಂದು ಹಿಡಿ ತಣ್ಣನೆಯ ಗಾಳಿಗೆ ಹಸಿದಿದ್ದಾರೆ. ತಂಪು ಪಾನೀಯ ಮಾರಾಟಗಾರರಿಗೆ ಬಿಸಿಲೇ ಬಂಡವಾಳ. ಬಿಸಿಲು ನಿಖರವಾದಷ್ಟು ಅವರ ಜೇಬು ಝಣಝಣ. ಅಳುವ ಮಗುವಿನ ಕೈಗೆ ಗಿಲಕಿಕೊಟ್ಟು ಸುಮ್ಮನಿರುಸುವಂತೆ ನಾಲ್ಕು ಹನಿ ಮಳೆ ಮೊನ್ನೆಯಷ್ಟೆ ಸುರಿವ ಬೆವರಿಗೆ ಸಮಾಧಾನ ಹೇಳಿ ಹೋಗಿದೆ. ಇನ್ನೂ ಬರುತ್ತದೊ, ಬಾರದೊ!
ಈ ಎಲ್ಲಾ ಅಬ್ಬರಗಳಿಗಿಂತ ಮೊನೆಯಷ್ಟೇ ಒಂದು ಅಬ್ಬರ ತಣ್ಣಗೆ ಮುಗಿದುಹೋಯಿತು. ಈ ಬಾರಿ ಬಿಸಿಲಿಗಿಂತ ಜೋರಾದದ್ದು ಈ ಅಬ್ಬರ. ನಮಗೆಲ್ಲಾ ಬೇಕಾದ ಒಂದು ಸರ್ಕಾರದ ಆಯ್ಕೆಯ ಅಬ್ಬರ ಅದು. ಚುನಾವಣೆಯ ಜೋರು ಬಿಸಿಲು. ಇಡೀ ನಾಡಿನದು ಒಂದು ಅಬ್ಬರವಾದರೆ ಪ್ಲಾಸ್ಟಿಕ್ಕಿನಂತಹ ನಗರಗಳದ್ದೆ ಒಂದು ಅಬ್ಬರ. ಬೆಂಗಳೂರಿನ ರಸ್ತೆಗಳು ಎಷ್ಟೊಂದು ರೋಡ್ ಶೋಗಳಿಗೆ ಗೆಳೆಯನಾಯಿತು. ಎಷ್ಟೊಂದು ಹೂವುಗಳಿಗೆ ಹಾಸಿಗೆಯಾಯಿತು. ಎಷ್ಟೊಂದು ಜನ ರಸ್ತೆಯಲ್ಲಿ ತಮ್ಮ ದಿನ ಕಳೆದರು. ಎಷ್ಟೊ ಜನ ಟ್ರಾಫಿಕ್ ನಲ್ಲೆ ಹಸಿದು ಕೂತರು. ಭಾಷಣಗಳು ಮನಕ್ಕೆ ನಾಟಿದಕ್ಕಿಂತ ಕಟ್ಟಡಗಳಿಗೆ ಹೋಗಿ ಬಡಿದು ಬಿದ್ದದ್ದೆ ಹೆಚ್ಚು. ಮನೆ ಮನೆಗಳಲ್ಲೂ ಇದೇ ಚರ್ಚೆ. ಯಾರು ಸೋಲಬಹುದು? ಯಾರು ಗೆಲ್ಲಬಹುದು? ವೋಟಿಗೆಷ್ಟು ಎನ್ನುವ ಆಸೆ. ಮತದಾನಕ್ಕೆ ಸಿಕ್ಕ ರಜೆಯನ್ನು ಅದರಲ್ಲಿ ಖರ್ಚು ಮಾಡಬೇಕೆಂಬ ದುರಾಸೆ. ಗುಪ್ತ ಸಭೆಗಳು, ಕ್ಲುಪ್ತ ಯೋಜನೆಗಳು, ಮನೆ ಬಾಗಿಲು ತಟ್ಟುವ ಕೈಗಳು, ಹಂಚುವ ಉಡುಗೊರೆಗಳು. ಓಹ್ ಎಷ್ಟೊಂದು ಕವಲುಗಳಿದ್ದವು ಈ ಅಬ್ಬರಕ್ಕೆ. ಏರಿದಷ್ಟೇ ವೇಗವಾಗಿ ಇಳಿದುಹೊಯಿತಲ್ಲ. ಮಳೆ ನಿಂತರೂ ಹನಿ ನಿಲ್ಲದು ಎಂಬಂತೆ ಇನ್ನೂ ಏನೇನೊ ಚಕಾಮಕಿ ನಡೆದಿವೆಯಲ್ಲಾ.
ಅಲೆ ಬಂದು ಹೋದ ಮೇಲೆ ಕಿನಾರೆಯಲ್ಲಿ ಉಳಿಯುವ ಒಂದು ನಿರಾಳತೆಗೆ ನಾಡು ಕಾದಿದೆ. ಮಕ್ಕಳ ಸಂಕಟದಿಂದ ನಾಯಕರ ಪರದಾಟದವರೆಗೂ ಉಬ್ಬಿದ ಅಬ್ಬರ ಕಳೆದುಕೊಳ್ಳಲು ಹೊಂಚುಹಾಕುತ್ತಿದೆ. ಸುರಿವ ಬಿಸಿಲಿಗೆ ಹಿಡಿಯಲು ಒಂದು ಕೊಡೆ ಹುಡುಕುತಿದೆ. ದೂರದಿಂದ ಯಾವುದಾದರೂ ಒಂದು ಅಲೆಬಂದು ಎಲ್ಲವನ್ನೂ ಸಾಫು ಮಾಡಲಿ ಎಂದು ಹಂಬಲಿಸಿದೆ. ಮುಂಗಾರಿಗೂ ಮುನ್ನ ಒಂದು ಜೋರು ಮಳೆ ಸರಿಯಲಿ ನಾಡಿನ ಒಡಲಿಗೆ. ಎಲ್ಲಾ ದುಗುಡಗಳು ಅದರಲ್ಲಿ ಕೊಚ್ಚಿ ಹೋಗಲಿ. ರಜೆ ಮುಗಿಸಿ ಬಂದ ಪೋರ ಪೋರಿಯರು ಯೂನಿಫಾರಂ ತೊಟ್ಟು ಹೊಸ ಹುರುಪಿನೊಂದಿಗೆ ರಸ್ತೆಗೆ ತಮ್ಮ ಪುಟ್ಟ ಪಾದವಿಡಲಿ. ಮಕ್ಕಳನ್ನು ಶಾಲೆಗೆ ಸೇರಿಸಿದ ನಿರಾಳತೆಯಲ್ಲಿ ಪೋಷಕರು ನಿದ್ದೆ ಹೋಗಲಿ. ದೊಡ್ಡ ಕನಸುಗಳ ಕಾಲೇಜು ಮಕ್ಕಳು ಹೊಸ ಭರವಸೆಯಲ್ಲಿ ಎದ್ದು ಹೊರಡಲಿ. ಗಿರಗಿರ ಸುತ್ತಿ ಸುತ್ತಿ ಸಾಕಾದ ಫ್ಯಾನ್ ಗಳು ವಿಶ್ರಾಂತಿ ಪಡೆಯಲಿ. ಬೆಳ್ ಬೆಳಗ್ಗಿನ ಮಂಜು ಬೇಸಿಗೆಯ ಎಲ್ಲರ ದಣಿವನ್ನು ತೊಳೆಯಲಿ. ಎಲ್ಲಕ್ಕೂ ಮುಗಿಲಾಗಿ ಗೆದ್ದು ಬಂದ ಜನ. ಈ ನಗರವನ್ನು, ಈ ನಾಡನ್ನು ಪೊರೆಯಲಿ. ಈ ಎಲ್ಲವನ್ನೂ ಸಾಧ್ಯ ಮಾಡುವಂಥಹ ಒಂದು ಜೋರು ಮಳೆ ಸುರಿಯಲಿ.
0 ಪ್ರತಿಕ್ರಿಯೆಗಳು