ಒಂದು ಜೀವಮಾನಕ್ಕಾಗುವಷ್ಟು ತೇವ ಎದೆಗಿಳಿಯಿತು

ಉದಯ ಗಾಂವಕಾರ

ಕೊರೋನಾ ಕಾಲದ ಟಿಪ್ಪಣಿಗಳು

ಲಾಕ್ ಡೌನ್‍ನ ಮೊದಲ ಎರಡು ದಿನಗಳು ಹೇಗೋ ಕಳೆದವು. ಕುಟುಂಬಿಕರೆಲ್ಲ ಬಹಳ ಸಮಯದ ಮೇಲೆ ಒಟ್ಟಿಗೆ ಊಟಮಾಡುತ್ತಿದ್ದಾರೆಂದೂ, ಇಂತದ್ದೊಂದು ಬ್ರೇಕ್ ಅಗತ್ಯವಾಗಿತ್ತೆಂದೂ ಅಲ್ಲಲ್ಲಿ ಮಾತನಾಡಿಕೊಳ್ಳುವುದು ಅಷ್ಟೇನೂ ಅಸಮಂಜಸ ಮತ್ತು ಅಸೂಕ್ಷ್ಮ ಅಂತ ಅನ್ನಿಸುತ್ತಿರಲಿಲ್ಲ. ಮಡಿ-ಮೈಲಿಗೆ ಸುಮ್ಮನೇ ಅಲ್ಲ ಅಂತಲೂ, ಹೊರಗೆ ಹೋಗಿ ಬಂದ ಗಂಡಸರ ಕಾಯಿಲೆ ಮನೆಯ ಹೆಂಗಸರಿಗೆ ಬರಬಾರದಂತ ಪರ್ದಾ ಧರಿಸುವುದೆಂತಲೂ ತಮ್ಮ ಧರ್ಮಗಳ ಹಿರಿಮೆಯನ್ನು ಎತ್ತಿಹಿಡಿಯುವ ವಿಫಲ ಪ್ರಯತ್ನಗಳೂ ಹಾಸ್ಯಾಸ್ಪದ ಅನ್ನಿಸುತ್ತಿರಲಿಲ್ಲ ಆಗ.

ಆ ಒಂದು ದಿನ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟಿ ಕೊರೋನಾದೆದುರು ದೇಶವೇ ಒಂದಾಗಿದೆ ಎಂಬ ಸಂದೇಶವನ್ನು ನೀಡುವ ಹುಮ್ಮಸ್ಸಿನಲ್ಲಿರುವಾಗ ಕುಂದಾಪುರದ ಕೆ.ಎಸ್.ಆರ್.ಟಿ.ಸಿ ಬಸ್‍ಸ್ಟ್ಯಾಂಡಿನ ಎದುರು ರಸ್ತೆಯ ಪುಟ್ಟ ಟೆಂಟಿನಲ್ಲಿ ವಾಸವಾಗಿದ್ದ ಭೀಮವ್ವ ನೆನಪಾದಳು. ಆಕೆ ಪುಟ್ಟ ಮಗುವಾಗಿದ್ದಾಗಿಂದಲೂ ಪರಿಚಿತಳು. ಕಾಗದ ಮತ್ತು ಕ್ರೇಯಾನು ಕೊಟ್ಟರೆ ಚೆಂದದ ಚಿತ್ರ ಬಿಡಿಸುವುದರಲ್ಲಿ ಮಗ್ನಳಾಗುವ ಭೀಮವ್ವ ಮತ್ತು ಆಕೆಯ ತಂಗಿ ಅಕ್ಷತಾ ಈಗ ಆರನೇ ಅಥವಾ ಏಳನೆಯ ತರಗತಿಯಲ್ಲಿರಬಹುದು.

ಬಾಲ್ಕನಿಯಲ್ಲಿ ನಿಂತು ಈ ದೇಶ ಒಂದಾಗುವುದಾದರೆ ಅಲ್ಲಿ ಭೀಮವ್ವ ಮತ್ತು ಅಕ್ಷತಾ ಎಲ್ಲಿರುತ್ತಾರೆ ಎಂಬ ಪ್ರಶ್ನೆ ಅನಾಯಾಸವಾಗಿ ಒಳತೂರಿಬಂತು. ಬಾಲ್ಕನಿ, ಕಿಟಕಿಗಳಿರಲಿ, ಬಾಗಿಲು ಕೂಡಾ ಇಲ್ಲದ ಪುಟ್ಟ ಟೆಂಟಿನಲ್ಲಿ ಕುಳಿತು ಈ ವಿಚಿತ್ರ ವಿದ್ಯಮಾನವನ್ನು ಅವರು ಹೇಗೆ ಸ್ವೀಕರಿಸಿರಬಹುದು? ನಿಜ ಬದುಕಿನ ಜೊತೆ ಜೋಡಿಸಿಕೊಳ್ಳುವುದು ಅಗತ್ಯ ಎನಿಸಿ ವರ್ಚುವಲ್ ಜಗತ್ತಿನಿಂದ ಕಳಚಿಕೊಂಡು ಬೆಳಿಗ್ಗೆದ್ದು ಟೆಂಟಿನ ಕಡೆ ಹೋದೆ. ಇಲ್ಲಿಂದ ಲಾಕ್ ಡೌನ್ ಎಂಬುದು ವಿಚಿತ್ರ ತಳಮಳ ಎನ್ನಿಸತೊಡಗಿತು. ಮನೆಯೊಳಗೇ ಇರಿ ಎಂಬ ಮಾತು ಅಸಹನೀಯ ಎನ್ನಿಸತೊಡಗಿತು.

******

ಊಟಕ್ಕೇನು ಮಾಡ್ತೀರಿ ಎಂಬ ಇರಿಯುವಂತಹ ಪ್ರಶ್ನೆಯನ್ನು ಕೇಳುವ ಮನಸ್ಸಾಗಲಿಲ್ಲ. ಕೆಲಸವಿಲ್ಲದಿದ್ದರೆ ಅನ್ನವಷ್ಟೇ ಅಲ್ಲ ನೀರು, ಶೌಚಾಲಯ ಕೂಡಾ ಇಲ್ಲಿರುವವರಿಗೆ ಸಿಗುವುದಿಲ್ಲ ಎಂಬುದು ಗೊತ್ತಿತ್ತು. ಹೀಗೆ, ಜನ ಹಸಿದು ಕುಳಿತಾಗ ಕೊರೋನಾ ಕಲಿಸಿದ ಪಾಠಗಳ ಕುರಿತು ಬರೆಯುತ್ತಲೋ, ಚೀನಾ ಹೇಗೆ ವೈರಸ್ ಕಂಡುಹಿಡಿಯಿತು ಎಂಬ ಪತ್ತೆದಾರಿ ಲೇಖನ ಓದುತ್ತಲೋ ಸಮಯ ಕಳೆಯಲು ಸಾಧ್ಯವೇ ಇಲ್ಲವೆಂದು ಅನ್ನಿಸಿ ಚಡಪಡಿಸುತ್ತಿದ್ದ ಅನೇಕ ಸ್ನೇಹಿತರು ತಾವು ಕಂಡ ಸಂಕಟಗಳನ್ನು ಹೇಳಿಕೊಳ್ಳಲಾರಂಭಿಸಿದರು.

ನಾಲ್ಕು ದಿನಗಳ ಹಿಂದೆಯೇ ಮಂಗಳೂರಿನ ವಾಮಂಜೂರಿನಿಂದ ಹೊರಟ ಎಂಟು ಜನರ ತಂಡ ಕೋಟೇಶ್ವರದಲ್ಲಿ ಆ ಸಂಜೆ ಎದುರಾಯಿತು. ಇನ್ನೂ ನಾಲ್ಕುನೂರು ಕಿಲೋಮೀಟರುಗಳ ಪ್ರಯಾಣವನ್ನು ಅವರು ಕಾಲ್ನಡಿಗೆಯಲ್ಲೇ ಮುಂದುವರಿಸುವ ವಿಶ್ವಾಸವನ್ನಿಟ್ಟುಕೊಂಡು ನಡೆಯುತ್ತಿದ್ದರು.

ಹತ್ತು ದಿನಗಳ ಹಿಂದಷ್ಟೇ ಕೆಲಸ ಹುಡುಕಿಕೊಂಡು ಮಂಗಳೂರಿಗೆ ಹೋಗಿದ್ದ ರೋಣದ ಈ ಯುವಕರು ಮೊದಲ ವಾರದ ಸಂಬಳವನ್ನು ಬಾಡಿಗೆ ಮನೆಯ ಮುಂಗಡ ಹಣವಾಗಿ ಕೊಟ್ಟು ಕೈಬರಿದಾಗಿಸಿಕೊಂಡಿದ್ದರು. ಬರುವಾಗ ಮನೆ ಮಾಲಿಕರಲ್ಲಿ ಸ್ವಲ್ಪ ಹಣ ಮರಳಿಸಲು ಕೇಳಬಹುದಿತ್ತಲ್ಲ ಎಂದೆ.

ನಾವಾದರೂ ನಡೆದು ಊರಿಗೆ ತಲುಪಬಹುದು ಅವರೆಲ್ಲಿ ಹೋಗ್ತಾರೆ ಪಾಪ ಎಂದ ಮಹಾಂತೇಶ. ಬಾಡಿಗೆಯಿಲ್ಲದೆ ಪಟ್ಟಣದ ಆ ವೃದ್ಧ ದಂಪತಿಗಳು ಬದುಕುವುದು ಕಷ್ಟ ಎಂಬುದು ಅವನ ಕಾಳಜಿ. ಒಂದೆರಡು ದಿನ ಅಲ್ಲೇ ಇದ್ದು ನೋಡಬಹುದಿತ್ತಲ್ಲ ಎಂದೆ. ಸಾಯುವುದಾದರೆ ಊರಲ್ಲೇ ಸಾಯುತ್ತೇವೆ ಎಂದ.

*****

ವಾಪಸು ಹೋಗುತ್ತಿರುವ ಖಾಲಿ ಟ್ರಕ್ಕುಗಳಿಗೆ ಕೈಮಾಡಿ ನಿಲ್ಲಿಸುವ ಪ್ರಯತ್ನ ಮಾಡಿದೆವು. ಒಂದು ಘಂಟೆಯ ಪ್ರಯತ್ನದ ನಂತರ ಒಂದು ಲಾರಿಯವ ನಿಂತು “ಪೋಲೀಸರು ಚೆಕ್ ಪೋಸ್ಟಿನಲ್ಲಿ ನಿಲ್ಲಿಸಿ ನಿಮ್ಮ ಜೊತೆ ನನ್ನನ್ನೂ ಗಂಜಿ ಕೇಂದ್ರಕ್ಕೆ ಸೇರಿಸುತ್ತಾರೆ’’ ಎಂದು ಭಯ ಮತ್ತು ಅನುಕಂಪವನ್ನು ಒಟ್ಟಿಗೆ ತೋರಿಸಿದ. ಹಾವೇರಿಯ ಪೋಲೀಸ್ ಸಹಾಯವಾಣಿಗೆ ಕರೆಮಾಡಿ “ನಿಮ್ಮೂರಿನ ಜನ ನಡದೇ ಬರುತ್ತಿದ್ದಾರೆ ನೀವೇನಾದರೂ ಸಹಾಯ ಮಾಡಿದರೆ ಯಾವುದಾದರೂ ಟ್ರಕ್ ಏರಿಕೊಂಡು ಬರುತ್ತಾರೆ’’ ಎಂದೆ.

`ಇಲ್ಲಿ ಕರೋನಾ ಇಲ್ಲ. ಅವರು ಅಲ್ಲೇ ಇರಲಿ’’ ಎಂದರು. ಜೊತೆಗೆ“ ಅವರೂರ ಜನರೂ ಅವರನ್ನು ಊರೊಳಗೆ ತೆಗೆದುಕೊಳ್ಳಲಾರರು’ ಎಂದು ಫೋನ್ ಇಟ್ಟರು.  ರೋಣದ ಹುಡುಗರು ನಡಿಗೆಯನ್ನು ಮುಂದುವರಿಸಿದರು. ಮಹಾಂತೇಶ ಮತ್ತವರ ತಂಡ ಬರಿಗಾಲಲ್ಲಿ ನಡೆಯುತ್ತಿರಲಿಲ್ಲ. ಆದರೆ, ಕಿಸೆ ಬರಿದಾಗಿತ್ತು. ಸದ್ಯಕ್ಕೆ ಹಣ ಕೆಲಸ ಮಾಡುತ್ತಿರಲಿಲ್ಲ ಕೂಡಾ.

ನೀರು, ಬಿಸ್ಕತ್ತು, ಸ್ವಲ್ಪ ದುಡ್ಡು ಕೊಟ್ಟು ಊರಿಗೆ ತಲುಪಿದ ಮೇಲೆ ಫೊನ್ ಮಾಡಿ ಎನ್ನುತ್ತಾ ಅವರನ್ನು ಬೀಳ್ಕೊಡುವಾಗ ಅವರ ಮೊಬೈಲ್ ಫೋನ್‍ಗಳ ಬ್ಯಾಟರಿ ಇನ್ನೂ ಏಳೆಂಟು ದಿನ ಬರಬಹುದೇ ಎಂಬ ಅನುಮಾನ ಬಂದು ಕೇಳಿದೆ- ಒಮ್ಮೆಗೆ ಒಬ್ಬರ ಫೋನ್ ಮಾತ್ರ ಸ್ವಿಚ್ ಆನ್ ಮಾಡಿ ಪಾಳಿಯಂತೆ ಒಂದೊಂದೇ ಮೊಬೈಲ್ ಬಳಸುತ್ತಿದ್ದೇವೆ ಎಂದ ಮಹಾಂತೇಶ. ಸಾಯುವುದಾದರೆ ಊರಲ್ಲೇ ಎಂಬ ಮಹಾಂತೇಶನ ಮಾತನ್ನು ಬದುಕುವುದಾದರೆ ಊರಲ್ಲೇ ಎಂದು ತಿದ್ದುಪಡಿ ಮಾಡಿಕೊಂಡೆ.

*****

ತಮ್ಮ ಊರಲ್ಲಿಯೂ ಸ್ವಂತದ ಮನೆ, ಭೂಮಿ ಅಥವಾ ಇನ್ನಿತರ ಆದಾಯದ ಮೂಲಗಳಿಲ್ಲದಿದ್ದರೂ `ಸಾಯುವುದಾದರೆ ಊರಲ್ಲೇ’ ಎಂದುಕೊಂಡು ನಡೆಯುವ ಬಹಳ ಜನ ಆ ನಂತರ ಭೇಟಿಯಾದರು. ಚಿಕ್ಕ ಮಕ್ಕಳನ್ನು ಭುಜದ ಮೇಲೆ ಎತ್ತಿಕೊಂಡು ನಡೆಯುವವರು, ಗರ್ಭಿಣಿಯರು, ವಯಸ್ಸಾದವರು ಹೀಗೆ ತಂಡೋಪತಂಡಗಳು ಮೆರವಣಿಗೆ ಹೋರಟವರಂತೆ ರಾತ್ರಿಯ ತಂಪಿನಲ್ಲಿ ನಡೆಯುತ್ತಿದ್ದರು.

ಕೆಲವರಂತೂ ಉಡುಪಿ, ಮಂಗಳೂರಿಗೆ ಬಂದು, ಅಲ್ಲಿನ ಗುಡಿಸಲುಗಳಲ್ಲಿ ವಾಸವಾಗಿ ಆರೇಳು ವರ್ಷಗಳೆ ಕಳೆದು ಹೋಗಿತ್ತು. ಇಂತಹ ಸಮಯದಲ್ಲೂ ಊರು ಅವರಿಗೆ ಭದ್ರತೆಯನ್ನು ನೀಡುವುದಾದರೆ ಇಲ್ಲಿ ಅವರು ಹೇಗೆ ಬದುಕುತ್ತಿದ್ದರು ಇಷ್ಟು ಸಮಯ? ನಮ್ಮಿಂದ ಹೆಚ್ಚಿಗೆ ಸಹಾಯ ಮಾಡಲು ಸಾಧ್ಯವಿಲ್ಲ ಎಂಬುದು ಅಷ್ಟೊತ್ತಿಗೆ ತಿಳಿದುಹೋಗಿತ್ತು.

ಪುಟ್ಟ ನರ್ಸರಿ ಇಟ್ಟುಕೊಂಡು ಹೂಗಿಡಗಳನ್ನು ಮಾರುತ್ತಿದ್ದ ರಾಜೇಶರು ತಮ್ಮ ಮನೆಯಲ್ಲಿಯೇ ಅಡುಗೆ ತಯಾರಿಸಿ ಹೀಗೆ ಕಾಲ್ನಡಿಗೆಯಲ್ಲಿ ಊರು ತಲಪುವ ಹಂಬಲದಲ್ಲಿರುವವರ ಒಂದು ರಾತ್ರಿಯ ಊಟಕ್ಕಾದರೂ ಆಧಾರವಾಗೋಣ ಎಂದರು. ಅಂದಿನಿಂದ ಮುಂದಿನ ಮೂವತ್ತೇಳು ದಿನಗಳ ವರೆಗೆ ರಾಜೇಶರ ಮನೆ ಅಡುಗೆ ಮನೆಯಾಯಿತು. ಹಸಿದ ಹೊಟ್ಟೆಯಲ್ಲಿ ಹೀಗೆ ಜನ ನಡೆದುಕೊಂಡು ಹೋಗುವ ಹೊತ್ತಲ್ಲಿ ನೀವೇನು ಮಾಡಿದಿರಿ ಎಂದು ಮುಂದೆ ನಮ್ಮ ಮೊಮ್ಮಕ್ಕಳು ಪ್ರಶ್ನೆ ಮಾಡಬಹುದು, ಆಗ ತಲೆತಗ್ಗಿಸದೆ ಇರಲು ಈಗ ಏನಾದರೂ ಮಾಡಬೇಕು ಎನಿಸಿ ಬಹಳ ಜನ ಸಹಾಯಕ್ಕೆ ಬಂದರು.

ಅನೇಕ ಸಂಘ ಸಂಸ್ಥೆಗಳು ಊಟ ವಿತರಿಸುವ ಕೆಲಸದಲ್ಲಿ ತೊಡಗಿದವು. ಕೋಟದ ಒಂದು ಬಿರಿಯಾನಿ ಅಂಗಡಿಯವರು ತಮ್ಮ ವ್ಯವಹಾರ ಸ್ಥಗಿತಗೊಂಡಿದ್ದರೂ ಬಿರಿಯಾನಿ ಮಾಡುವುದನ್ನು ನಿಲ್ಲಿಸಿರಲಿಲ್ಲ. ಮೊಟ್ಟೆಯ ಬಿರಿಯಾನಿ ಮತ್ತು ಒಂದು ಬಾಟಲಿ ನೀರನ್ನು ರಸ್ತೆಯಲ್ಲಿ ನಡೆಯುವ ಜನರಿಗೆ ಹಂಚುವ ಕಾಯಕದಲ್ಲಿ ನಿರತರಾಗಿದ್ದರು.  “ನನ್ನಿಂದ ಎಷ್ಟು ದಿನ ಸಾಧ್ಯವೋ ಅಷ್ಟು ದಿನ ಮಾಡುವೆ, ಬಹಳ ದಿನ ಇದೇ ಸ್ಥಿತಿ ಮುಂದುವರಿದರೆ ನನಗೂ ಅನ್ನದ ಸಮಸ್ಯೆ ಕಾಡಬಹುದು’’ ಎನ್ನುತ್ತಿದ್ದರು.

*****

ವಲಸೆ ಕಾರ್ಮಿಕರ ಮಹಾ ಮರುಪಯಣ ನಿಧಾನವಾಗಿ ಕಡಿಮೆಯಾಗುವ ಕಾಲಕ್ಕೆ ಊರಲ್ಲೇ ಇರುವ ದಿನಗೂಲಿಯವರು, ಮನೆಗೆಲಸಕ್ಕೆ ಹೋಗುವ ಹೆಂಗಸರು, ರಿಕ್ಷಾ ಚಾಲಕರು ಮತ್ತಿತರ ದಿನದ ದುಡಿಮೆಯನ್ನು ದಿನದ ಬದುಕಿಗಾಗಿ ವಿನಿಯೋಗಿಸುವವರ ಒಲೆಯಲ್ಲಿ ಬೆಂಕಿ ಆರಲು ಶುರುವಾಗಿತ್ತು. ಬೇಳೆ, ಎಣ್ಣೆ, ಸಾಂಬಾರು ಪುಡಿ, ಸೋಪು, ಪೇಸ್ಟು ಹೀಗೆ ಅವಶ್ಯಕ ವಸ್ತುಗಳ ಪೊಟ್ಟಣ ಸಿದ್ಧಪಡಿಸಿ ಹಂಚುವ ಕೆಲಸ ಶುರುಮಾಡಿಕೊಂಡೆವು.

ಸಾಕಷ್ಟು ಜನ ಹಣ ನೀಡುತ್ತಿರುವುದರಿಂದ ಲೆಕ್ಕ ಪಾರದರ್ಶಕವಾಗಿರಲು ಪೊಟ್ಟಣ ಪಡೆದವರ ಒಂದು ಫೋಟೋ ತೆಗೆದುಕೊಳ್ಳಲಾಗುತಿತ್ತು. ಅನುಕೂಲವಿದ್ದ ಮನೆ ಎಂದು  ತೀರ್ಮಾನಿಸಿ ಪೊಟ್ಟಣ ಕೊಡದೆ ಮುಂದೆ ಸಾಗಿದ ಮನೆಯಿಂದ ಹೆಂಗಸೊಬ್ಬಳು ಬಂದು ನನಗೂ ಅಡುಗೆಗೆ ಸಾಮಗ್ರಿಗಳಿಲ್ಲ.. ಮನೆಯಲ್ಲಿ ದುಡ್ಡಿಲ್ಲ ಎಂದು ಕೈಯೊಡ್ಡಿದರು. ಫೋಟೋ ಬೇಡ ಪ್ಲೀಸ್ ಎಂದರು.

ಅಂದಿನಿಂದ ಪೊಟ್ಟಣದ ಜೊತೆ ಫೋಟೋ ತೆಗೆದುಕೊಳ್ಳುವುದನ್ನು ನಿಲ್ಲಿಸಿದೆವು. ಸಾವಿರಾರು ಕುಟುಂಬಗಳಿಗೆ ಪೊಟ್ಟಣ ಹಂಚಿದ ಹುಡುಗರ ಇಂತಹ ಅನುಭವಗಳು ಒಂದು ಜೀವಮಾನಕ್ಕಾಗುವಷ್ಟು ತೇವವನ್ನು ಎದೆಗಿಳಿಸಿರಬಹುದು.

****

ಬರಬರುತ್ತಾ ಸಹಾಯ ಮಾಡುವ ಸ್ನೆಹಿತರ ಸಂಖ್ಯೆ ಹೆಚ್ಚಿತು. ಸಹಾಯ ಕೇಳುವವರ ಸಂಖ್ಯೆಯೂ ಹೆಚ್ಚಿತು. ಆದರೆ, ಈ ಕೆಲಸ ಯಾಂತ್ರಿಕವಾಗಿ ಮುಂದುವರಿಯುತ್ತಿದೆ ಅಂತ ಅನ್ನಿಸಿದ್ದು ನಮ್ಮ ಜೊತೆಯೇ ಇದ್ದ ಕೆಲವರ ಮನೆಯಲ್ಲೂ ಅಡುಗೆಗೆ ಸಾಮಗ್ರಿಗಳಿಲ್ಲ ಎಂದು ನಮಗೆ ಬಹಳ ತಡವಾಗಿ ಗೊತ್ತಾದಾಗ. ನಮಗೆ ಏಕೆ ಈ ವಿಚಾರ ಹೊಳೆಯಲಿಲ್ಲ? ಅವರಾಗೇ ಹೇಳಿಕೊಳ್ಳಲಾಗದ್ದನ್ನು ಅರ್ಥಮಾಡಿಕೊಳ್ಳಬಹುದು. ನಮಗೆ ಅರ್ಥವಾಗದೇ ಇದ್ದದ್ದು ಹೇಗೆ? ನಾವು ಈ ಕೆಲಸದಲ್ಲಿ ದೇಹವನ್ನಷ್ಟೇ ತೊಡಗಿಸುತ್ತಿದ್ದೇವೆಯೇ ಎಂಬ ಆತಂಕ ಉಂಟಾದ ಕ್ಷಣವದು.

****

ನಲವತ್ತು ದಿನಗಳ ನಂತರ ಮತ್ತೆ ಫೇಸ್ ಬುಕ್, ವಾಟ್ಸಾಪಿಗೆ ಬಂದಾಗ ನಿಯಮ ಮೀರಿ ತರಕಾರಿ ವ್ಯಾಪಾರ ಮಾಡುತ್ತಿರುವವರಿಗೆ ಪೋಲೀಸರು ಏಟು ಬಾರಿಸುತ್ತಿದ್ದ ಚಿತ್ರಗಳು ಹರಿದಾಡುತ್ತಿದ್ದವು. ಕೋವಿಡ್‍ಗೆ ಮನೆಯಲ್ಲೇ ಔಷದಿ ತಯಾರಿಸುವ ವಿಧಾನವನ್ನು ವಿವರಿಸುವ ವಿಡಿಯೋ ಹಂಚಿಕೆಯಾಗುತ್ತಿತ್ತು.

ಒಂದು ಧರ್ಮದವರು ಕೋರೋನಾ ವೈರಸ್ಸನ್ನು ದೇಶಕ್ಕೆ ಹಂಚುತ್ತಿದ್ದಾರೆ ಎಂದು ಇನ್ನೊಂದು ಧರ್ಮದವರು ದೂರುತ್ತಿದ್ದರು. ಮುಂದಿನ ತಲೆಮಾರು ಯಾವುದನ್ನು ನಂಬಬಹುದು? ಫೇಸ್‍ಬುಕ್‍ನಲ್ಲಿ ಬಂದದ್ದನ್ನೋ ಅಥವಾ ತಮ್ಮ ಅಜ್ಜಂದಿರ ಅನುಭವವನ್ನೋ?

****

ಹೇಳಲು ಮರೆತೆ. ರೋಣ ತಲುಪಿದ ಮಹಾಂತೇಶ ಫೋನ್ ಮಾಡಿ ತಾವೆಲ್ಲರೂ ಕ್ಷೇಮವಾಗಿ ಊರು ತಲುಪಿದ ಸುದ್ದಿ ನೀಡಿದ್ದ.  ನಮ್ಮ ಸಹಾಯ ನೆನೆದ. ಮುಂದಿನ ಬಾರಿ ಕೆಲಸಕ್ಕೆಂದು ಮಂಗಳೂರಿಗೆ ಬರುವಾಗ ಕುಂದಾಪುರದಲ್ಲಿ ಭೇಟಿಯಾಗುವೆ ಎಂದ.

ಉದಯ ಗಾಂವಕಾರ- ಶಿಕ್ಷಕರು, ಸಮುದಾಯ ಕುಂದಾಪುರದ  ಅಧ್ಯಕ್ಷರು. ಕಥೆ, ಕವನ, ವಿಜ್ಞಾನ ಲೇಖನಗಳನ್ನು ಬರೆಯುತ್ತಾರೆ. ರಾಜ್ಯ ವಿಜ್ಞಾನ ಪರಿಷತ್ ನ ಚಟುವಟಿಕೆಗಳಲ್ಲಿ ಸಹಭಾಗಿ.

‍ಲೇಖಕರು Avadhi

October 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ಕೊರೋನಾ ಕರಾಳತೆಯ ಒಂದು ಮುಖದ ದರ್ಶನ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: