ಅಪಾರ
ಒಂದು ಕಾಲದಲ್ಲಿ ನನ್ನ ಫೇಸ್‌ಬುಕ್ ಹೀಗಿರಲಿಲ್ಲ ಎಂದು ಬರೆಯುವಾಗ ನನಗೆ ೧೨೦ ವರ್ಷ ವಯಸ್ಸಾಗಿರುವಂತೆ ಭಾಸವಾಗುತ್ತಿದೆ.
ಹೌದು ಆಗ ಗೆಳೆಯರು ಸ್ವಂತದ ಸಣ್ಣ ಸಣ್ಣ ಖುಷಿ, ಸಾಧನೆ ಹಾಗೂ ಸಣ್ಣ ವೇದನೆಗಳನ್ನು ಹಂಚಿಕೊಳ್ಳುತ್ತಿದ್ದರು. ಹೊಸ ಬೈಕು, ಮಡಿಕೇರಿ ಟ್ರಿಪ್ಪು. ಮಗಳ ಬರ್ತ್‌ಡೆ, ಮಗನ ಮಾರ್ಕ್ಸು, ಊರಿನ ನೆನಪು, ಹೊಸ ಸಿನಿಮಾ ವಿಮರ್ಶೆ, ತಮಾಷೆ, ಅರೆಬೆಂದ ಕವನ, ಔಟಾಫ್ ಫೋಕಸ್ ಫೋಟೊ ಎಲ್ಲ ಇರುತ್ತಿದ್ದವು.
ಯಾವುದೋ ಒಂದು ದಿನ ಇದೆಲ್ಲ ಬದಲಾಯಿತು.
ನೋಡುತ್ತಿರುವಂತೆಯೇ ಒಲವಿನ ಜಾಗದಲ್ಲಿ ನಿಲುವು ಬಂದು ಕೂತವು. ಹಾಳೆಯ ಎಡ ಅಥವಾ ಬಲಮಗ್ಗುಲಲ್ಲಿ ಮಾತ್ರ ಬರೆಯತೊಡಗಿದೆವು.
ಕವನ, ರೇಖಾಚಿತ್ರ, ಪನ್ನು, ವಿನೋದ, ವಿಜ್ಞಾನ ಲೇಖನ, ಪ್ರವಾಸದ ಫೋಟೊ, ಕಾಡಿದ ಹಾಡುಗಳ ಪೋಸ್ಟುಗಳಿರುತ್ತಿದ್ದ ಜಾಗದಲ್ಲಿ ಮತ್ತೆ ಮತ್ತೆ ದಿನಕ್ಕೆ ಮೂರು ಬಾರಿಯಂತೆ ಊಟದ ಮೊದಲು ಊಟದ ನಂತರ ಅವವೇ ನಿಲುವಿನ, ಲೇವಡಿ ತುಂಬಿದ, ದ್ವೇಷ ಕಾರುವ ಕೆಂಡದಂತಹ ಜಗಳಕೋರ ಪೋಸ್ಟುಗಳು ಬಂದವು. ಕಾಮೆಂಟುಗಳಲ್ಲಿ ಇನ್ನಷ್ಟು ಕಹಿ ಕಕ್ಕಿದೆವು.
ಈಗ ನಾನೆಷ್ಟು ಕಣ್ಣು ತಪ್ಪಿಸಿದರೂ, ಹಾರಿಸಿ ಮುಂದೆ ಹೋದರೂ ಇಂಥವೇ ಪೋಸ್ಟು ಕಂಗೆಡಿಸುತ್ತಿವೆ. ಹೀಗೆಲ್ಲಾ ಮಾಡಿದವರು ಯಾರೋ ಹೊರಗಿನವರಲ್ಲ. ನಾವೇ ಯಾಕೆ ಹಾಗೆ ಬದಲಾದೆವು?
ಜೂಮ್ ಔಟ್ ಮಾಡಿ ನೋಡಿದರೆ ಎಷ್ಟೆಲ್ಲಾ ಇದೆ ಲೈಫಿನಲ್ಲಿ ಅಂತ ಯಾಕೆ ಅರಿಯುತ್ತಿಲ್ಲ ಯಾರೂ. ಕೆಂಪಾದ ಹೂವು, ಗಿಡಮರಗಳನ್ನು ಮತ್ತೆ ಬೆಳ್ಳಗೆ ಹಾಗೂ ಹಸುರಾಗಿ ಮಾಡಲಾಗುವುದೆ? ಮತ್ತೆ ಅದೇ ಅನಿಸುತ್ತಿದೆ:
ನಿಲುವಿಗೆ ಅದರದ್ದೇ ಜಾಗವಿದೆ. ಒಲವಿದ್ದ ಜಾಗದಲ್ಲಿ ಅದು ಬಂದು ಕೂರಬಾರದು… ಯಾವತ್ತೂ.
ಸರ್,
ಸುಮಾರು ಒಂದು ತಿಂಗಳಿಂದ ನಾನು ಪೇಸ್ ಬುಕ್ ಬಳಸುವುದನ್ನು ಬಿಟ್ಟಿದ್ದೇನೆ. ಇವಗ ನನ್ ಕಣ್ಣಿಗೆ ಹೇಗೆ ಕಾಣುತ್ತೆ ಎಂದರೆ ಸಾರ್ವಜನಿಕ ಶೌಚಾಲಯದ ತರಾ…. ಅಷ್ಟು ಗಬ್ಬೆದ್ದು ಹೋಗಿದೆ.
ಊಟಾ ಮಾಡ್ತಾರೋ ಇಲ್ಲೋ ಗೊತ್ತಿಲ್ಲ…ಆದ್ರೆ ಇದರಲ್ಲಿ ಬಂದು ಇಟ್ಟು ಹೋಗ್ತಾರೆ.
ಅದರ ಪ್ರಭಾವಿತ ವಾಗಿ ನಾನು ಅಂತವನೆ ಆಗಿದ್ದೆ. ಇವಾಗ ಬಳಸುವುದನ್ನೆ ಬಿಟ್ಟಿದ್ದೆ.
Facebook ಒಳಗೆ ಎಲ್ಲಾ ಬದಲಾಗುತ್ತಿದೆ.ದೃಷ್ಟಿಕೋನಗಳು ಕೈ ಬಿಟ್ಟು ಯಾವುದೊ ನಿಲುವಿನ ಗುಂಪಿನಲ್ಲಿ ಹೊಸ ಕುರಿಗಳಂತೆ ಸೇರಿಕೊಳ್ಳುತ್ತಿವೆ .
ತುಂಬಾ ಚೆನ್ನಾಗಿದೆ ಸರ್ ಕವನ
Like · Reply · Delete · Just no