’ಒಂದು ಅನಂತಮೂರ್ತಿಯವರ ಘರಾನಾ, ಇನ್ನೊಂದು ತೇಜಸ್ವಿ ಘರಾನ..’ – ಕುಂ ವೀ ಬರೀತಾರೆ

‘ಭವ ಎನಗೆ ಹಿಂಗದು’

ಕುಂ ವೀ

ಎರಡು ದಿವಸಗಳ ಹಿಂದಿನ ಮಾತು, ಯಾವುದೋ ಚುನಾವಣೆಗೆ ಸಂಬಂಧಿಸಿದಂತೆ ಬಳ್ಳಾರಿಯಲ್ಲಿದ್ದೆ, ಬೆಳಗಿನ ಸಮಯ, ಭೆಟ್ಟಿಯಾದಾಗ ಅಕಸ್ಮಿಕವೆಂಬಂತೆ ಡಾ ಬಸವನಗೌಡ್ ಅನಂತಮೂರ್ತಿಯವರನ್ನು ನೆನಪಿಸಿಕೊಂಡರು. ಕೆಲವು ದಿವಸಗಳಿಂದ ಮೂತರ್ಿಯವರ ಆರೋಗ್ಯ ಕುರಿತು ಯೋಚಿಸುತ್ತಿದ್ದರಂತೆ. ಆಯಾ ವೃತ್ತಿಯವರು ತಮ್ಮತಮ್ಮ ಫಲಾನುಭವಿಗಳ ಚಲನವಲನದ ಮೇಲೆ ನಿಗಾ ಇಡುವುದು ಸಹಜ. ಡಯಾಲಿಸಿಸ್ ಕುರಿತಂತೆ ಕೇಳಿದ ಹಲವು ಪ್ರಶ್ನೆಗಳಿಗೆ ತಜ್ಞವೈದ್ಯರಾದ ಅವರು ವಿವರಿಸಿದರು, ಕಾರಣ ಅವರ ಶಕ್ತಿನಸರ್ಸಿಂಗ್ ಹೋಂನಲ್ಲಿದ್ದ ಡಯಾಲಿಸಿಸ್ ಯಂತ್ರವೋ ತುಂಬಾ ಬ್ಯುಜಿ. ಅದರ ಫಲಾನುಭವಿಗಳು ಚಿಕ್ಕವರಿಂದ ಹಿಡಿದು ಹಿರಿಯನಾಗರಿಕರವರಿಗೆ, ಯಾಕೆ ಹೀಗೆ? ಕೇಳಿದ್ದಕ್ಕೆ ಮಾತ್ರೆಗಳ ದುರುಪಯೋಗ ಮತ್ತು ಆಧುನಿಕ ಜೀವನಶೈಲಿ ಕುರಿತಂತೆ.
ಅವರೋ ಅನಂತಮೂರ್ತಿಯವರ ಆಂಶಿಕ ಅಭಿಮಾನಿ. ನೆಹುರು ನಿವೃತ್ತರಾಗುವುದಿಲ್ಲ ಎಂದು ಬರೆದಿರುವುದೇನೋ ಸರಿ, ಆದರೆ ಮೂರ್ತಿಯವರ ವಿವಿಧ ಹುದ್ದೆಗಳ ಫಲಾನುಭವಕ್ಕೂ ಅವರ ಮೂತ್ರಪಿಂಡಗಳಿಗೂ ನೇರಸಂಬಂಧವಿರುವುದಾಗಿ ವಾದಿಸಿದರು. ಅವರ ಸೃಜನಶೀಲತೆ ಸಾರ್ವಜನಿಕ ಕ್ರಿಯಾಶೀಲತೆ ವರ್ತಮಾನ ಸಂದರ್ಭದಲ್ಲಿ ಅಗತ್ಯವಿರುವುದಾಗಿ ವಾದಿಸಿದಕ್ಕೆ ಅವರು ನಕ್ಕರು, ಕಾರಣ ನಮ್ಮ ಗೌಡರು ನಗುವುದೇ ಅಪರೂಪ. ಕಥೆ ಕಾದಂಬರಿ ಮತ್ತು ಚಿಂತನಾ ಬರಹಗಳು ಹೀಗೆ ಅವರ ಬಹುಮುಖೀಯ ವ್ಯಕ್ತಿತ್ವ ಕುರಿತಂತೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುವಂಥ ಸದಭಿರುಚಿ ವ್ಯಕ್ತಿ. ಅಲ್ಲದೆ ಅವರು ಒಳ್ಳೆಯ ಸಮಾಜಮುಖಿ ಓದುಗರಾಗಿ ವೈದ್ಯರಾಗಿ ಮೂರ್ತಿಯವರಂಥ ಲೇಖಕರ ಚಲನವಲನಗಳ ಮೇಲೆ ನಿಗಾ ಇರಿಸಿದ್ದರು. ವಾದೋಪವಾದಗಳ ಬಳಿಕ ಅವರು ಮೂರ್ತಿಯವರು ತಮ್ಮ ಅಂತಿಮ ದಿವಸಗಳನ್ನು ಎಣೆಸುತ್ತಿರುವರೆಂದು ಷರಾ ಬರೆದರು, ಮೂರ್ತಿಯವರ ಕಟ್ಟಾಭಿಮಾನಿಯಾದ ನನಗೆ ಅದರಿಂದ ಶಾಕ್ ಆಯಿತು, ಕಾರಣ ಗೌಡರ ಮಾತೆಂದರೆ ಮಾತು ಮಾತು. ವೈದ್ಯರ ಮಾತು ಸುಳ್ಳಾಗಲಿ, ನಮ್ಮ ನೆಚ್ಚಿನ ಲೇಖಕ ಪ್ರಖರ ಚಿಂತಕ ಮೂರ್ತಿಯವರು ನಮ್ಮೊಂದಿಗೆ ನೂರ್ಕಾಲ ಬದುಕಿರಲಿ ಎಂದು ಮನಸ್ಸಿನಲ್ಲಿ ಶುಭಕೋರಿದೆ, ದೂರದ ಹುಮ್ನಾಬಾದಿಗೆ ಹೊರಡಬೇಕಿದ್ದುದರಿಂದ ನಿರ್ಗಮಿಸಿದೆ.
ಹುಮ್ನಾಬಾದಿನ ಯುವಲೇಖಕ ಕೊಪ್ಪಳದ ಗವಿಸಿದ್ದಪ್ಪ ತನ್ನ ನಲವತ್ತನೇ ಸಂಭ್ರಮವನ್ನು ಅಲ್ಲಿನ ವಿರಕ್ತ ಮಠಶ್ರೀಗಳ ಸಮ್ಮುಖದಲ್ಲಿ ಆಚರಿಸಿಕೊಳ್ಳುತ್ತಿದ್ದ, ನಲವತ್ತಾರನೇ ಕೃತಿಯ ಬಿಡುಗಡೆ ಕಾರ್ಯಕ್ರಮ ಅದಾಗಿತ್ತು. ಉಪನ್ಯಾಸದ ಅವಧಿಯಲ್ಲಿ ನನ್ನ ಮೊಬೈಲ್ ಹತ್ತುಹಲವು ತುರ್ತುಸಂದೇಶಗಳಿಂದ ಕಿರಿಕಿರಿ ಹುಟ್ಟಿಸುತ್ತಿತ್ತು. ಹಲಕೋಡ್ ಶ್ರೀಗಳು ಉಪನ್ಯಾಸ ಆರಂಭಿಸಿದ ಅವಧಿಯಲ್ಲಿ ಮೊಬೈಲನ್ನು ತೆರೆದುನೋಡಿದೆ. ಅವುಗಳಲ್ಲಿ ಬಹುಪಾಲು ಅನಂತಮೂರ್ತಿಯವರಿಗೆ ಸಂಬಂಧಿಸಿದವುಗಳಾಗಿದ್ದವು. ಕೆಲವು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ, ಕೃತಕ ಉಸಿರಾಟ. ಇನ್ನು ಸ್ವಲ್ಪ ಹೊತ್ತಿಗೆ ಮಾಧ್ಯಮಮಿತ್ರರಿಂದ ಕರೆಗಳು ಬರಲಾರಂಭಿಸಿದವು. ಅಲ್ಲಿಂದ ಅವಸರಬವಸರದಿಂದ ಹೊರಟು ಪ್ರವಾಸಿ ಬಂಗಲೆ ಸೇರಿಕೊಂಡೆ, ಬೆಂಗಳೂರಿನ ಕೆಲ ಮಿತ್ರರನ್ನು ಸಂಪರ್ಕಿಸಿ ಮೂರ್ತಿಯವರ ಕ್ಷೇಮಲಾಭ ವಿಚಾರಿಸಲಾರಂಭಿಸಿದೆ. ಆತಂಕಕ್ಕೊಳಗಾದೆ. ನಂತರದ ತಲೆಮಾರಿನ ನನ್ನಂಥ ನೂರಾರು ಲೇಖಕರು ಅನಂತಮೂರ್ತಿಯವರ ಹತ್ತುಹಲವು ಕೃತಿಗಳಿಂದ ಪ್ರಭಾವಿತರಾದವರೆ, ಅನಾರೋಗ್ಯವನ್ನು ಲೆಕ್ಕಿಸದೆ ದಿನಕ್ಕೊಂದಾದರೂ ಸಭೆಸಮಾರಂಭಗಳಲ್ಲಿ ಭಾಗವಹಿಸುತ್ತ ಒಂದಲ್ಲಾ ಒಂದು ಸಮಸ್ಯೆಗಳನ್ನು ಮೈಮೇಲೆಳೆದುಕೊಳ್ಳುವ ಅವರ ಪಾದರಸ ಸದೃಶ ನಡೆನುಡಿ ಕಂಡುಂಡು ಬೆರಗಾದವರೆ, ಅವರೊಂದಿಗೆ ಒಡನಾಡಲು ಹಾತೊರೆಯುತ್ತಿದ್ದಂಥವರೆ.
ಆ ರಾತ್ರಿ ಅಲ್ಲಿಂದ ಹೊರಟು ಬಳ್ಳಾರಿ ತಲುಪಿದೆ, ಮುಖಮಾರ್ಜನ ಮಾಡಿಕೊಳ್ಳದೆ ಟೀವಿ ಆನ್ ಮಾಡಿದೆ. ಎಲ್ಲಾ ವಾಹಿನಿಗಳಲ್ಲೂ ಮೂರ್ತಿಯವರ ನಿಧನ ವಾರ್ತೆ! ಮೂತರ್ಿಯವರ ಅಂತಿಮದರ್ಶನ ಪಡೆಯುವ ಆಸೆ ಇತ್ತು, ಆದರೆ ದೂರದ ನನ್ನಂಥ ಅಭಿಮಾನಿಗಳಿಂದ ಸಕರ್ಾರ ಅದನ್ನು ಕಿತ್ತುಕೊಂಡಿತ್ತು. ಕೆಲವೇ ಗಂಟೆಗಳಲ್ಲಿ ಬಳ್ಳಾರಿಯಿಂದ ಹೊರಟು ಬೆಂಗಳೂರನ್ನು ತಲುಪಿ ಅವರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸುವುದು ಅಸಂಭವವೆನಿಸಿತು. ನಾನಿದ್ದ ಹೋಟಲ್ಲಿಗೇ ಬಂದ ಮಾಧ್ಯಮಗಳೆದುರು ಮೂತರ್ಿವರಿಗೆ ಸಂಬಂಧಿಸಿದ ಸಕಾರಾತ್ಮಕ ಅಂಶಗಳನ್ನು ಹಂಚಿಕೊಂಡೆ. ಹಿರಿಕಿರಿಯ ಲೇಖಕರ ಸಂತಾಪದ ಮಾತುಗಳನ್ನು ಸುದ್ದಿಮಾಧ್ಯಮಗಳ ಮೂಲಕ ಆಲಿಸಲಾರಂಭಿಸಿದೆ. ಎಂದಿನಂತೆ ಅವೇ ರೆಡಿಮೇಡ್ ಮಾತುಕತೆ, ಮಾಧ್ಯಮಗಳದು ಶೋಕೋದ್ಯಮವಾದರೆ, ಅಭಿಮಾನಿಗಳದು ಶೋಕೋತ್ಸಾಹ. ಆದರೆ ಮಿತ್ರ ಬಾಲಗುರುಮೂರ್ತಿ ಮತ್ತು ಚಂಪಾ ಅವರ ಮಾತುಗಳು ಭಿನ್ನ ಹಾಗೂ ಹೊಸತನದಿಂದಾವರಿಸಿದ್ದವು. ಆದರೆ ಸಂವೇದನಾಶೂನ್ಯ ಸನಾತನ ಪಿಶಾಚಿಗಳು ಅವರ ಸಾವನ್ನು ಸಂಭ್ರಮಿಸಿದ್ದು ವರ್ತಮಾನ ಸಂದರ್ಭದ ಕ್ರೂರ ವ್ಯಂಗ್ಯ. ತುಮಕೂರು, ವಿಜಾಪುರ ಕಡೆಯ ಒಂದಿಬ್ಬರು ಮೋದಿ ಕಟ್ಟಾಭಿಮಾನಿಗಳು ತಾವು ಸಿಹಿ ಹಂಚಿದ್ದಾಗಿ ಹೇಳಿಕೊಂಡರು. ದೂರದ ದೆಹಲಿಯಲ್ಲಿದ್ದುಕೊಂಡೇ ಕನರ್ಾಟಕದ ವಿದ್ಯಾಮಾನ ಗ್ರಹಿಸುತ್ತಿರುವ ಮಿತ್ರ ಪುರುಷೋತ್ತಮ ಬಿಳಿಮಲೆ ತಮ್ಮ ಪೇಸ್ಬುಕ್ ಖಾತೆಯಲ್ಲಿ ರಾಸ್ವಸೇ ಸಂಘದ ಸದಸ್ಯರು ಗಾಂಧೀಜಿಯವರ ಹತ್ಯೆಯನ್ನು ಸಂಭ್ರಮಿಸಿದ್ದು ಸುಳ್ಳೆಂದು ಭಾವಿಸಿದ್ದು ಈಗ ನಿಜವೆನ್ನಿಸಿತು ಎಂದು ಹೇಳಿಕೊಂಡರು. ಗುಲಬರ್ಗಾದ ಪ್ರಗತಿಪರ ಚಿಂತಕಿ ಡಾ ಮೀನಾಕ್ಷಿ ಬಾಳಿಯವರು ಪತ್ರಿಕೆಯಲ್ಲಿ ಹೀಗೆ ಬರೆದಿದ್ದಾರೆ ಸಂಸ್ಕೃತಿ ಧರ್ಮ ದೇವರ ಬಗ್ಗೆ ಭಾವುಕವಾಗಿ ಮಾತಾಡುವ ಹಿಂದೂ ಸಂಘಟನೆಗಳು ವ್ಯಕ್ತಿಯೊಬ್ಬರ ಸಾವಿನ ಸನ್ನಿಧಿಯಲ್ಲಿ ಮಾಡಿದ್ದೇನು?
ವಿವಿಧ ವೈಚಾರಿಕೆ ಗುಂಪುಗಳ ನಡುವೆ ಪರಸ್ಪರ ಸೈದ್ಧಾಂತಿಕ ಭಿನ್ನತೆಗಳಿರಬಹುದು, ಅಭಿಪ್ರಾಯ ಭೇದಗಳಿರಬಹುದು, ಆದರೆ ಕನಿಷ್ಠಮಟ್ಟದ ಮಾನವೀಯತೆ ಇಲ್ಲವಾದರೆ ಆ ದೇಶಕ್ಕೆ ಬಹುದೊಡ್ಡ ಗಂಡಾಂತರ ಕಾದಿದೆ ಎಂದರ್ಥ ಪ್ರಧಾನಮಂತ್ರಿಗಿರುವ ಕಾಮನ್ ಸೆನ್ಸ್ ಅದೇ ಪಕ್ಷದ ಉಳಿದ ಪದಾಧಿಕಾರಿಗಳಿಗೆ ಕೇಂದ್ರ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಇಲ್ಲವೆನ್ನುವುದಕ್ಕೆ ಅವರ ಬಿಗಿದ ಮುಖಗಳು ಪುರಾವೆ ಒದಗಿಸಿದವು. ಆದರೆ ಮೂರ್ತಿಯವರ ಅಂತಿಮಸಂಸ್ಕಾರದ ಸಂದರ್ಭದಲ್ಲಿ ಆಡಳಿತಪಕ್ಷದ ಸಚಿವರ ಪ್ರಗತಿಪರ ಮುಖವಾಡವೂ ಕಳಚದೆ ಇರಲಿಲ್ಲ. ಯಾವುದೇ ವ್ಯಕ್ತಿಯ ಬದುಕಿನ ಅಸಲೀಯತ್ ತಿಳಿಯುವುದು ಆ ವ್ಯಕ್ತಿ ಸತ್ತಾಗ. ನಮಗೆ ತಿಳಿದಿರುವಂತೆ ಬಸವಶ್ರೀ ಪ್ರಶಸ್ತಿ ಪುರಸ್ಕೃತ ಅನಂತಮೂರ್ತಿ ತಮ್ಮ ಕೌಟುಂಬಿಕ ಪರಿಸರದ ಸನಾತನ ಮೌಲ್ಯಗಳನ್ನು ದಿಕ್ಕರಿಸುತ್ತಲೇ ಬೆಳೆದವರು. ಎಸ್ತರ್ ಅವರನ್ನು ವಿವಾಹವಾಗುವುದರ ಮೂಲಕ ಜಾತಿವ್ಯವಸ್ಥೆಯನ್ನು ಗೊಡ್ಡುಕಂದಾಚಾರ ಮೌಢ್ಯವನ್ನು ವಿರೋಧಿಸಿದವರು, ತಮ್ಮ ಬದುಕಿನುದ್ದಕ್ಕೂ ವೈಚಾರಿಕತೆಯನ್ನು ಪ್ರತಿಪಾದಿಸಿದವರು, ನೂರಾರು ವರ್ಷ ಬದುಕಲು ಹಂಬಲಿಸಿದವರು. ಆದರೆ ಅಂಥ ಮಹಾನ್ ವಿಚಾರವಾದಿ ಸಂಸ್ಕಾರ ಕಾದಂಬರಿಯ ನಾರಾಣಪ್ಪತ್ವವನ್ನು ಪ್ರತಿಪಾದಿಸಿದವರು, ಪ್ರಾಣೇಶಾಚಾರ್ಯತ್ವವನ್ನು ವಿರೋಧಿಸಿದವರು. ಆದರೆ ಅವರ ವೈಚಾರಿಕ ಆಶಯಗಳಿಗೆ ಅಗ್ನಿಸ್ಪರ್ಶ ಮಾಡಲು ಸನಾತನ ಮನಸ್ಸುಗಳೊಂದಿಗೆ ಆಡಳಿತಾರೂಢ ವ್ಯಕ್ತಿಗಳೊಂದೇ ಅಲ್ಲದೆ ಕುಟುಂಬ ಸದಸ್ಸರೂ ಕೈಜೋಡಿಸಿದರು. ತುಪ್ಪ ಶ್ರೀಗಂಧ ಇತ್ಯಾದಿ ದುಬಾರಿ ಅಪರಕಾಮರ್ಿಕ ವಸ್ತುಗಳನ್ನು ಮೂರ್ತಿಯವರ ಕಳೇಬರದೊಂದಿಗೆ ದಹಿಸಲಾಯಿತಲ್ಲದೆ ಅನರ್ಥಕಾರಿ ಮಂತ್ರಗಳನ್ನೂ ಓತೋಪ್ರೋತವಾಗಿ ಪಠಿಸಲಾಯಿತು. ತಮ್ಮ ಅಂತಿಮಸಂಸ್ಕಾರ ಹೇಗಿರಬೇಕೆಂಬುದರ ಕುರಿತು ಅನಂತಮೂರ್ತಿ ಕೆ ಎ ಅಬ್ಬಾಸ್ ಅವರಹಾಗೆ ಮರಣಪೂರ್ವದಲ್ಲಿ ನಿರ್ಧರಿಸಿದ್ದರೆ ಈ ಪ್ರಶ್ನೆ ಉದ್ಭವಿಸುತ್ತಿರಲಿಲ್ಲ, ಹ್ಹಾಂ ಅಂದಹಾಗೆ..
‘ಕೆಎ ಅಬ್ಬಾಸ್’ ಇವರ ಕುರಿತು ಹೇಳುವುದೇನಿದೆ! ಹಿಂದಿ ಉರ್ದುಭಾಷೆಯ ವೈಚಾರಿಕ ನಿಲುವಿನ ಲೇಖಕ, ಹತ್ತಾರು ಕಥೆಕಾದಂಬರಿಗಳನ್ನೊಂದೇ ಅಲ್ಲದೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ, ಜಾಗ್ತೆ ರಹೋದಂಥ ಅಜರಾಮರ ಚಲನಚಿತ್ರಕ್ಕೆ ಸಂಭಾಷಣೆ ಚಿತ್ರಕತೆ ಬರೆದಿದ್ದಾರೆ. ಅವರ ತಮ್ಮ ಮರಣಕ್ಕೆ ಸಂಬಂಧಿಸಿದ ಉಯಿಲು ಈ ಕೆಳಗಿನಂತಿದೆ.
73 ವರ್ಷ ವಯಸ್ಸಿನ ನಾನು ದೈಹಿಕವಾಗಿ ಅನಾರೋಗ್ಯದಿಂದ ನರಳುತ್ತಿದ್ದರೂ ಮಾನಸಿಕವಾಗಿ ಆರೋಗ್ಯದಿಂದಿರುವೆನು. ಎಪ್ಪತ್ತರ ನಂತರ ಬದುಕುವುದು ಅಪರೂಪ. ನಾನೇನಾದರೂ ಮರಣ ಹೊಂದಿದರೆ ಯಾರೊಬ್ಬರೂ ಅತ್ತು ನನ್ನ ಆಶಯಗಳನ್ನು ಅವಮಾನಿಸಬಾರದು. ನನ್ನ ಅಂತಿಮಯಾತ್ರೆ ಈ ಕೆಳಗೆ ಸೂಚಿಸಿದಂತೆ ನಡೆದರೆ ನನ್ನ ಆತ್ಮಕ್ಕೆ ಶಾಂತಿ. ನನ್ನ ಕಳೇಬರದ ಮೆರವಣಿಗೆ ಮಹಾರಾಷ್ಟ್ರೀಯ ಲೇಜಿಂ (ಈ ಬಗ್ಗೆ ಕಮಲಾಕರ್ಗೆ ಸೂಚಿಸಿರುವೆನು) ವಾದ್ಯಸಂಗೀತದೊಡನೆ ಸಮುದ್ರತೀರದುದ್ದಕ್ಕೂ ಇರುವ ಬಿರ್ಲಾಮಂದಿರ ಮೂಲಕ ಬೀಚ್ವರೆಗೆ ಸಾಗಬೇಕು. ಗಾಂಧಿವಿಗ್ರಹ ಬಂದೊಡನೆ ಮೆರವಣಿಗೆಯನ್ನು ಬರಕಾಸ್ತ್ ಮಾಡುವುದು ಮುಖ್ಯ, ಅಲ್ಲಿಂದ ನನ್ನ ಹೆಣವನ್ನು ಸರಳರೀತಿಯಲ್ಲಿ ಲಾರಿ ಮೂಲಕ ನಗರಸಭೆಯ ಶ್ಮಶಾನಕ್ಕೆ ತೆಗೆದೊಯ್ಯಬೇಕು. ನನ್ನ ಪ್ರಿಯಪತ್ನಿಯ ಸಮಾಧಿ ಸನಿಹದಲ್ಲಿ ಖನನಮಾಡಬೇಕು, ಏಕೆಂದರೆ ಆಕೆಯನ್ನು ನಾನು ತುಂಬಾ ಪ್ರೀತಿಸುತ್ತೇನೆ.
ಈ ಕ್ಷಣದವರೆಗೆ ಮರಣೋತ್ತರ ವಿಷಯಗಳಿಗೆ ಸಂಬಂಧಿಸಿದಂತೆ ನನಗೆ ಹಲವು ಅನುಮಾನಗಳಿವೆ. ಜಾತಿ ಧರ್ಮ ಕುರಿತಂತೆ ನನಗೇನು ತಿಳಿದಿಲ್ಲ, ಮುಸ್ಲಿಮನಾಗಿದ್ದರೂ ದೇವರೊಬ್ಬ ಮನುಷ್ಯಕುಲವೆಲ್ಲ ಒಂದೆ ಎಂದು ನಂಬಿದ್ದೇನೆ. ಎಲ್ಲಾ ಧರ್ಮಗಳ ಆಶಯವೂ ಇದೇ ಆಗಿದೆ. ಪ್ರಕೃತಿಗಿಂತ ಮಿಗಿಲಾದ ದೇವರಿಲ್ಲ. ನನ್ನ ವಾರಸುದಾರರಿಗೆ ಹಂಚಲು ಯಾವುದೇ ಸ್ಥಿರಚರ ಆಸ್ತಿಯನ್ನು ನಾನು ಉಳಿಸಿಲ್ಲ, ಇರುವ ಒಬ್ಬಳೇ ಒಬ್ಬ ಮಗಳಿಗೆ ಏನು ಕೊಡಬೇಕೋ ಅದನ್ನು ಕೊಟ್ಟಿದ್ದೇನೆ. ಪುಸ್ತಕ ರೂಪದಲ್ಲಿರುವ ಅಪರಿಮಿತ ಆಸ್ತಿಯನ್ನು ನಯಾ ಸಂಸಾರ್ ಟ್ರಸ್ಟ್ ಹೆಸರಿಗೆ ಬರೆದಿದ್ದೇನೆ. ನಾನು ವಾಸಿಸುತ್ತಿರುವ ಫಿಲೋಮೀನಾ ಅಪಾರ್ಟ್ಮೆಂಟಿನ ಒಂದನೇ ಸಂಖ್ಯೆಯ ನನ್ನ ಮನೆಯೂ ಅದೇ ಟ್ರಸ್ಟಿಗೆ ಸೇರುವುದು.
ನನಗೆ ಸ್ವರ್ಗ ಮತ್ತು ನರಕಗಳ ಬಗ್ಗೆ ನಂಬಿಕೆ ಇಲ್ಲ, ಕಾರಣ ಅವೆರಡನ್ನೂ ಬದುಕಿರುವಾಗಲೇ ಅನುಭವಿಸಿದ್ದೇನೆ. ಮನುಷ್ಯರಿಗೆ ಒಳ್ಳೆಯದು ಮಾಡುವುದೇ ಸ್ವರ್ಗ ಕೆಟ್ಟದ್ದು ಮಾಡುವುದೇ ನರಕ ಎಂಬ ತತ್ವದಲ್ಲಿ ನಂಬಿಕೆ ಇರಿಸಿ ಅದರಂತೆ ಬದುಕಿದ್ದೇನೆ. ಎಲ್ಲಾ ಧರ್ಮಗಳ ಸಾರ ಇದೇ ಆಗಿದೆ. ಮುಗುಳ್ನಗುತ್ತಲೇ ಇಹಲೋಕ ತ್ಯಜಿಸಬೇಕೆಂದು ಈಗಾಗಲೇ ನಿರ್ದರಿಸಿದ್ದೇನೆ. ಮರಣಾನಂತರ ನನ್ನ ಅಭಿಮಾನಿಗಳಾದ ನೀವು (ಅಲೀ ಸರ್ದಾರ್ ಜಾಫ್ರಿ, ಜನಾಬ್ ಷಿಕಾಯ್, ಇಂದರ್ ರಾಜ್ ಆನಂದ್, ಆರ್ ಕೆ ಕರಂಜಿಯಾ, ಪ್ರಗತಿಪರ ಫಾದ್ರಿ, ಭೌದ್ದ ಮತ್ತು ಜೈನ ಧರ್ಮಗುರುಗಳು) ಸಂತಾಪ ವ್ಯಕ್ತಪಡಿಸಲು ಐದು ನಿಮಿಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬಾರದು. ಹ್ಹಾ ಇನ್ನೊಂದು ವಿಷಯ ನನ್ನ ಕಳೇಬರದ ಮೇಲೆ ಹೊದ್ದಿಸುವ ಬಟ್ಟೆ ಮೇಲೆ ಹಿಂದಿ ಉರ್ದು ಭಾಷೆಯ ಅಕ್ಷರಗಳಿರುವುದು ಮುಖ್ಯ. ಮರಣೋತ್ತರವಾಗಿ ನೆನಪುಮಾಡಿಕೊಳ್ಳುವುದಿದ್ದಲ್ಲಿ ನಾನು ಬರೆದಿರುವ ಎಪ್ಪತ್ತು ಕೃತಿಗಳ ಪೈಕಿ ಯಾವುದಾದರೊಂದನ್ನು ಓದಿ

***

ನನ್ನ ಮತ್ತು ಅನಂತಮೂರ್ತಿಯವರ ಸಂಬಂಧ ನಾಲ್ಕು ದಶಕಗಳಷ್ಟು ಹಿಂದಿನದು, ಆಗ ಸಿದ್ದಗಂಗಾ ಮಠದಲ್ಲಿ ಶಿಕ್ಷಕ ತರಭೇತಿ ಸಂಸ್ಥೆಯ ವಿದ್ಯಾರ್ಥಿ, ಕವಿತೆಗಳನ್ನು ಬರೆದು ಪತ್ರಿಕೆಗಳಿಗೆ ರವಾನಿಸುತ್ತಿದ್ದೆ, ಪ್ರಕಟವಾಗದೆ ಅವು ಮಾರ್ಗಮಧ್ಯದಲ್ಲಿಯೇ ಅಸುನೀಗುತ್ತಿದ್ದವು. ಧೈರ್ಯಮಾಡಿ ಸಿದ್ದಗಂಗಾ ಸ್ವಾಮೀಜಿಯವರ ಶಿಪಾರಸು ಪತ್ರ ಲಗತ್ತಿಸಿ ಪ್ರಜಾವಾಣಿಗೆ ಕಳಿಸಿದೆ. ಸಾಪ್ತಾಹಿಕ ಪುರವಣಿ ಓದಲು ಕ್ಯಾತಸಂದ್ರ ವೆಂಕಟೇಶ್ವರ ಹೇರ್ ಕಟ್ಟಿಂಗ್ ಸಲೂನಿಗೆ ಪ್ರತಿ ರವಿವಾರ ದೌಡಾಯಿಸುತ್ತಿದ್ದೆ. ಹೀಗೆ ಹಲವು ತಿಂಗಳುಗಳ ಬಳಿಕ ಪತ್ರಿಕೆಯಲ್ಲಿದ್ದ ನವಿಲುಗಳು ಎಂಬ ಹೆಸರಿನ ಕಥೆ ನನ್ನನ್ನಾಕರ್ಷಿಸಿತು. ಓದಿದೆ, ಅರ್ಥವಾಗಲಿಲ್ಲ, ಯಾರೋ ಅನಂತಮೂರ್ತಿ ಹೆಸರಿನ ಉದಯೋನ್ಮುಖ ಲೇಖಕ ಬರೆದಿರಬಹುದಾದ ಕಥೆ ಎಂದುಕೊಂಡೆ. ಎಂಟನೆಯ ಓದಿಗೆ ಆ ಕಥೆ ನನ್ನೊಳಗೆ ವಿಶಿಷ್ಟ ತಳಮಳ ಸೃಷ್ಠಿಸಿತು. ಮೂರ್ತಿಯವರ ಮತ್ತು ಅವರ ವಾರಿಗೆಯ ನವ್ಯಲೇಖಕರ ಹಲವಾರು ಕೃತಿಗಳನ್ನು ಜೀರ್ಣಿಸಿಕೊಳ್ಳುವುದರ ಮೂಲಕ ನನ್ನೊಳಗೆ ಕಥೆಗಾರನನ್ನು ಆವಹಿಸಿಕೊಂಡೆ. ವಂದವಾಗಿಲಿ ಸೇರಿಕೊಂಡಾದ ಬಳಿಕ ಒಂದೆರಡು ವರ್ಷಗಳಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಥೆಗಳನ್ನು ಬರೆದೆ, ಅವೆಲ್ಲ ಕನ್ನಡದ ಪ್ರಸಿದ್ದ ನಿಯತಕಾಲಿಕಗಳಲ್ಲಿ ಪ್ರಕಟವಾದವು. ಒಕ್ಕೂಟ, ಬಂಡಾಯ ಸಂಘಟನೆ ಮತ್ತಿತರ ಚಳವಳಿಗಳು ನನ್ನ ವಾರಿಗೆಯವರಲ್ಲಿ ಸೃಜನಶೀಲ ಉತ್ಸಾಹವನ್ನೂ ಬ್ರಾಹ್ಮಣ ಲೇಖಕರ ಬಗೆಗೆ ಅಸಡ್ಡೆಯನ್ನೂ ಸೃಷ್ಠಿಸಿದ್ದವು. ಆದರೂ ಇನ್ನಾದರೂ ಸಾಯಬೇಕು ಎನ್ನುವ ನನ್ನ ಪ್ರಥಮ ಕಥಾ ಸಂಕಲನಕ್ಕೆ ಮುನ್ನುಡಿ ಬರೆಯಬೇಕೆಂದು ಕೇಳಿಕೊಂಡಿದ್ದಕ್ಕೆ ಅನಂತಮೂರ್ತಿ ಒಪ್ಪಿದರು, ಆದರೆ ಚಂಪಾ ಅವರ ಸಲಹೆ (ನಿನ್ನ ಕಥೆಗಳು ನವ್ಯದವರಿಗೆ ಅದರಲ್ಲೂ ಬ್ರಾಹ್ಮಣ ಲೇಖಕರಿಗೆ ಅರ್ಥ ಆಗೋದಿಲ್ಲ, ಅದರಲ್ಲೂ ಅನಂತಮೂರ್ತಿ ಹಾದಿ ತಪ್ಪಿಸೋ ರೀತೀಲಿ ಬರೀತಾರೆ, ಆದ್ದರಿಂದ ಮುನ್ನುಡಿ ಹಂಗಿಲ್ಲದೆ ಸಂಕಲನ ಪ್ರಕಟಿಸು) ಮೇರೆಗೆ ಅವರಿಂದ ಮುನ್ನುಡಿ ಬರೆಸಲಿಲ್ಲ. ಆದರೂ ಜಾತಿ ಸಂಬಂಧೀ ಗುಮಾನಿ ಅನುಮಾನುಗಳು ದಿನದಿಂದ ದಿನಕ್ಕೆ ದಟೈಸುತ್ತ, ಹುಂಬತನವನ್ನು ಗಟ್ಟಿಗೊಳಿಸುತ್ತಲೇ ಹೋದವು.
ಮೂರ್ತಿಯವರನ್ನು ಮುಖತಃ ಭೆಟ್ಟಿಯಾದದ್ದು. ನನ್ನ ಕಥೆಯಾಧಾರಿತ ಕೆಂಡದ ಮಳೆ ಸಿನೆಮಾಕ್ಕೆ ದೇವನೂರು ಮಹಾದೇವ ಅವರ ಕಪ್ಪು ಕೈಯಿಂದ ಕ್ಲಾಪ್ ಮಾಡಿಸುವುದು ಎಂಬ ನಿರ್ಧಾರವನ್ನು ಗೌರಿಶಂಕರ್ ಬೆಂಬಲಿಸಿದರು. ಒಪ್ಪಿಸಲು ಕರೆತರಲು ನನ್ನನ್ನು ಕುವೆಂಪುನಗರಕ್ಕೆ ಅಟ್ಟಿದರು. ಮನೆಯಿಂದ ಮನೆಗೆ ಅಲೆದಾಡಿದೆ, ತಿರುಗಿ ನೋಡಿದೆ, ಮನೆಯೊಂದರ ಪ್ರಾಂಗಣದಲ್ಲಿ ಅನಂತಮೂರ್ತಿ ಕೆಲವರ ಸಂಗಡ ಹರಟುತ್ತಿದ್ದುದು ಗೋಚರಿಸಿತು, ತಮ್ಮ ಬಳಿಗೆ ಬಂದ ನನ್ನನ್ನು ಅಪಾದಮಸ್ತಕ ದಿಟ್ಟಿಸಿ ಯಾರೂ? ಏನು ಬೇಕಾಗಿತ್ತು? ಎಂದು ಕೇಳಿದರು, ಪ್ರವರ ಹೇಳಿಕೊಂಡೆ, ಓಹೋ ಬೆಂಕಿ ಕೆಂಡ ಅಂತ ಏನೇನೋ ಕಥೆ ಬರೀತೀಯಲ್ಲ ನೀನೇ ಏನು ಎಂದು ಮುಖಕ್ಕೆ ಮಾತಿನಿಂದ ಹೊಡೆದರು. ಹೌದೆಂದು ತಲೆ ಅಲ್ಲಾಡಿಸಿ ಬಂದ ಉದ್ದೇಶ ಹೇಳಿದೆ. ದೇವನೂರು ಮಹಾದೇವನಾ, ಆ ಹೆಸರಿನವ್ರು ಇಲ್ಲೆಲ್ಲೋ ಇದ್ದಾರಪ್ಪಾ, ನಿಧಾನವಾಗಿ ಹುಡುಕು ಸಿಕ್ರೂ ಸಿಕ್ಬೌದು ಎಂದು ಬೀಳ್ಕೊಟ್ಟರು.
ಅದಾದ ಹತ್ತುವರ್ಷಗಳ ಬಳಿಕ ಶಿವಮೊಗ್ಗದ ಇಬ್ರಾಹಿಂ ನನ್ನನ್ನು ತಮ್ಮ ಆಸಕ್ತಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಒಪ್ಪಿದೆ, ಅದಕ್ಕೆ ಅವರು ಮುನೀರ್ ಮೂಲಕ ಇನ್ನಿಬ್ಬರು ಅತಿಥಿಗಳು ನಿಸಾರ್ ಅಹ್ಮದ್, ಅನಂತಮೂರ್ತಿ, ಅವಿಬ್ಬರ ನಡುವೆ ನೀನು ಕ್ಲಿಕ್ಕಾಗೋದು ನಮಗೆ ಮುಖ್ಯ, ಧೈರ್ಯವಿದೆ ತಾನೆ! ಎಂದು ಕೇಳಿದ್ದಕ್ಕೆ ಮುಖದ ಬೆವರೊರೆಸಿಕೊಂಡೆ. ನಾನ್ ಅಕಾಡೆಮಿಕ್ ಹಿನ್ನಲೆಯ, ಗ್ರಾಮೀಣಹಿನ್ನಲೆಯ ಲೇಖಕರ ಪ್ರತಿನಿಧಿಯೆಂದೇ ಭಾವಿಸಿ ಶಿವಮೊಗ್ಗ ಸೇರಿದೆ. ಭಾರತದಲ್ಲಿ ಅಲ್ಪಸಂಖ್ಯಾತರ ಸಂಕಟಗಳು ಎಂಬ ವಿಷಯ ಕುರಿತು ಒಂದೂವರೆ ತಾಸು ಮಾತಾಡಿದೆ. ಅನಂತಮೂರ್ತಿ ನನ್ನ ಬಳಿಗೆ ಎದ್ದು ಬಂದು ಕೈಕುಲುಕಿ ಅಭಿನಂದಿಸಿದರು, ತಾವಿರುವ (ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದರು) ದೆಹಲಿಗೂ ಆಮಂತ್ರಿಸಿದರು. ಮುಂದೆ ಅವರು ಕರೆಯಲಿಲ್ಲ, ನಾನು ಹೋಗಲಿಲ್ಲ.
ಹೆಬ್ಬೆರಳಿಗೆ ಬದಲು ಆಯಾ ವರ್ಷಪ್ರಕಟವಾದ ಕೃತಿಗಳನ್ನು ಅವರಿಗೆ ಸೌಜನ್ಯಪೂರ್ವಕವಾಗಿ ಕಳಿಸುವುದನ್ನು ಮರೆತಿರಲಿಲ್ಲ, ಅವರಿಂದ ಕರ್ಟೆಸಿಗೆ ಉತ್ತರ ಬಾರದಿದ್ದರೂ. ದಶಕದ ಅವಧಿಯಲ್ಲಿ ಹತ್ತಾರು ಕೃತಿಗಳಿಗೆ ಹತ್ತಾರು ಬಹುಮಾನಗಳು ಬೇರೆ. ಕೆಲವು ವರ್ಷಗಳ ಬಳಿಕ
ಭಳಾರೆ ವಿಚಿತ್ರಂ ಕೃತಿಗೆ ಬರೆದ ಮುನ್ನುಡಿಯಲ್ಲಿ ಪ್ರೊ ಓ ಎಲ್ ನಾಗಭೂಷಣಸ್ವಾಮಿ ಕಥೆಗಳನ್ನು ಮೆಚ್ಚಿದ್ದರು. ಅದರ ಬಿಡುಗಡೆ ಸಮಾರಂಭ ಧಾರವಾಡದಲ್ಲಿ, ಮನೋಹರ ಗ್ರಂಥಮಾಲೆ ಅದನ್ನು ಆಯೋಜಿಸಿತ್ತು. ವೇದಿಕೆಯಲ್ಲಿ ನನ್ನ ಎಡಗಡೆ ಚಂದ್ರಶೇಖ ಕಂಬಾರ ಬಲಗಡೆ ಅನಂತಮೂರ್ತಿ, ಅವರಿಬ್ಬರೂ ಅಸೇತುಹಿಮಾಚಲ ಹೆಸರಾಂಕಿತರೆ. ಎಂದಿನಂತೆ ನಾನು ತಾಸಿಗೂ ಹೆಚ್ಚುಕಾಲ ಮಾತಾಡಿದ್ದರಲ್ಲಿ..
ಅನಂತಮೂರ್ತಿಯವರು ಎಷ್ಟೊಂದು ಪ್ರಭಾವಶಾಲಿ ಮಾತುಗಾರರೆಂದರೆ, ಇವರೇನಾದರೂ ಆತ್ಮಹತ್ಯೆಯ ಪರ ವಾದ ಮಂಡಿಸಿದ ಪಕ್ಷದಲ್ಲಿ ಸಭಿಕರ ಪೈಕಿ ಶೇಕಡಾ ಇಪ್ಪತ್ತಕ್ಕೂ ಹೆಚ್ಚು ಸಭಿಕರು ಆತ್ಮಹತ್ಯೆ ಮಾಡಿಕೊಳ್ಳಬಹದು, ಅಥವಾ ಆತ್ಮಹತ್ಯೆಯನ್ನು ಗಂಭೀರವಾಗಿ ಪರಿಗಣಿಸಲೂಬಹುದು
ಅವರು ಎಂದಿನಂತೆ ನಕ್ಕರು, ಅಭಿನಂದಿಸಿದರು (ಇಂಗ್ಲೀಷಿನಲ್ಲಿ). ಹೊಯ್ಸಳ ಲಾಡ್ಜಿನಲ್ಲಿ! ಮೈಸೂರಿನಿಂದ ಕೃಷ್ಣಮೂರ್ತಿ ಶಾಮಣ್ಣ ಕಾದಂಬರಿ ಓದುವಂತೆ ಶಿಫಾರಸ್ ಮಾಡಿದ ಬಳಿಕ ಮೂರ್ತಿಯವರು ನೀನು ಇಷ್ಟೆಲ್ಲ ಬರೆದಿರುವೀಯಂತೆ, ನನ್ಗೆ ಗೊತ್ತೇ ಇಲ್ವಲ್ಲಾ, ನೀನು ನಾಳೇನೆ ಆ ನಿನ್ನ ಶಾಮಣ್ಣ ಕಾದಂಬ್ರೀನ ಕಳಿಸು ಎಂದು ಹೆಗಲ ಮೇಲೆ ಕೈಯಾಡಿಸಿದರು.
ಇದು ನಮ್ಮ ಅನಂತಮೂರ್ತಿಯವರ ಮಾತಿನ ವರಸೆ. ನನ್ನ ಯಾವುದೇ ಕಥೆಕಾದಂಬರಿ ಓದಿಲ್ಲವೆಂದು ಮನವರಿಕೆಯಾಯಿತು. ಕೆಲವು ವರ್ಷಗಳ ಹಿಂದೆ ಕೇಳಿದ್ದಕ್ಕೆ ವಿವೇಕ್ ಅವರಿಗೆ ಕಳಿಸಿದಿದ್ದರೇನೇ ಒಳ್ಳೇದು ಕುಂವೀ, ಅವ್ರು ಯಾವ್ದೂ ಓದೋ ಸ್ಥೀತೀಲಿಲ್ಲವೆಂದು ವಾಸ್ತವ ವಿವರಿಸಿದರು.
ಇದು ನನ್ನ ಒಬ್ಬ ಅನುಭವವಲ್ಲ, ಅವರು ನನ್ನಂಥ ಯಾವುದೇ ಗ್ರಾಮೀಣ ಹಿನ್ನಲೆಯ ಲೇಖಕರ ಕೃತಿಗಳನ್ನು ಓದಿಲ್ಲ. ಓದಿದ್ದರೂ ಕೆಲವೇ ಕೆಲವು ಲೇಖಕರ ಕೃತಿಗಳನ್ನು ಮಾತ್ರ. ಆದ್ದರಿಂದ ಒಮ್ಮೆ ಅವರ ಸಮಕ್ಷಮ ಹೇಳಿದ್ದು, ಕನ್ನಡದಲ್ಲಿ ಎರಡು ಘರಾನಾಗಳಿವೆ, ಒಂದು ಅನಂತಮೂರ್ತಿಯವರ ಘರಾನಾ, ಇನ್ನೊಂದು ತೇಜಸ್ವಿ ಘರಾನ, ನಾವೂ ನಿಸ್ಸಂದೇಹವಾಗಿ ತೇಜಸ್ವಿ ಘರಾನಕ್ಕೆ ಸೇರಿದವರೆಂದು.
ಅನಂತಮೂರ್ತಿಯವರಿಗೆ ಯಾವುದೂ ಅಪಥ್ಯವಾಗಿರಲಿಲ್ಲ. ಕಾಲಕ್ಕೆ ತಕ್ಕಂತೆ ವಿಷಯಕ್ಕೆ ತಕ್ಕಂತೆ ವಾದ ಮಂಡಿಸಬಲ್ಲವರಾಗಿದ್ದರು. ತಮ್ಮ ಮಾಂತ್ರಿಕ ಭಾಷೆ ಮೂಲಕ ಕತ್ತೆಯನ್ನು ಕುದುರೆಯನ್ನಾಗಿಯೂ, ಕುದುರೆಯನ್ನು ಕತ್ತೆಯನ್ನಾಗಿಯೂ ಪರಿವರ್ತಿಸಬಲ್ಲವರಾಗಿದ್ದರು. ಅತ್ಯಾಕರ್ಷಕ ಭಂಗಿ ಮೂಲಕ, ಮೆಸ್ಮರೈಜ್ ಮಾತುಗಾರಿಕೆ ಮೂಲಕ ಸಭಿಕರನ್ನು ಮಂತ್ರಮುಗ್ದಗೊಳಿಸುವ ತಾಕತ್ ಕನ್ನಡದಲ್ಲಿ ಯಾರಿಗಾದರೂ ಇದ್ದರೆ ಅದು ಕೇವಲ ಮೂರ್ತಿಯವರಿಗೆ ಮಾತ್ರ. ಕನ್ನಡ ನುಡಿಗಟ್ಟನ್ನು ತಿದ್ದಿತೀಡುವ, ಪ್ರಶ್ನಿಸುವ ಪರಿಯನ್ನು ಕಲಿಸುವ, ಸಮಸ್ಯೆಯನ್ನು ಸೃಷ್ಠಿಸುವ, ಸೃಷ್ಠಿಸಿದ ಸಮಸ್ಯೆಯನ್ನು ಬಲೆಯನ್ನಾಗಿ ಪರಿವರ್ತಿಸಿ ನಾಡಿನಾದ್ಯಂತ ಹರಡುವ ಕಲಾನೈಪುಣ್ಯ ಅವರಿಗೆ ಮಾತ್ರ ಸಿದ್ದಿಸಿತ್ತು. ಹತ್ತುಹಲವು ಪ್ರತಿಷ್ಠಿತ ಹುದ್ದೆಗಳು ಅವರಿಗಾಗಿ ಹಂಬಲಿಸುತ್ತಿದ್ದವು, ತಾವು ಅಲಂಕರಿಸಿದ ಹುದ್ದೆಯ ಮಾಯಾಗನ್ನಡಿಗಳಲ್ಲಿ ತಮ್ಮ ಪ್ರತಿಬಿಂಬ ಸಾರ್ವಕಾಲಿಕವಾಗಿ ಗೋಚರಿಸುವಂತೆ ಜಾಗ್ರತೆವಹಿಸಿದರು. ನ್ಯಾಷನಲ್ ಬುಕ್ ಟ್ರಸ್ಟ್, ಕೇಂದ್ರ ಸಾಹಿತ್ಯ ಅಕಾಡೆಮಿಗಳ ಅಧ್ಯಕ್ಷರಾಗಿದ್ದಾಗ ತಮ್ಮ ಅನುಯಾಯಿಗಳನ್ನು ಐಫೆಲ್ ಟವರ್ನ ತುಟ್ಟತುದಿಗೆ ಕೊಂಡೊಯ್ದರು. ಇಂಥ ಹಲವು ಕಾರಣಗಳಿಂದಾಗಿ ಕುವೆಂಪು ಥರದ ಕನ್ನಡ ಲೇಖಕರು ಕನ್ನಡೇತರ ಭಾಷಾ ವಾಚಕರಿಗೆ ಇಂದಿಗೂ ಅಪರಿಚಿತರು.
ಏನೇ ನ್ಯೂನತೆಗಳ ನಡುವೆಯೂ ಅನಂತಮೂರ್ತಿ ಈಸ್ಟ್ಮನ್ ಕಲ್ಲರ್ ಲೇಖಕ, ಕನ್ನಡ ತಿಳವಳಿಕೆ ತಿದ್ದಿದ ಚಿಂತಕ, ಕನ್ನಡದ ಬೆಳಕನ್ನು ಜಗತ್ತಿಗೆ ಪರಿಚಯಿಸಿದ ಪರಿಚಾರಕ. ಅವರ ಸೂರ್ಯನ ಕುದುರೆಯಂಥ ಕಥೆ, ಸಂಸ್ಕಾರದಂಥ ಕಾದಂಬರಿ, ಪ್ರಜ್ಞೆ ಮತ್ತು ಪರಿಸರದ ಹಲವು ಲೇಖನಗಳು ಕನ್ನಡ ಸಾಹಿತ್ಯವನ್ನು ರೀಫ್ರೆಷ್ ಮತ್ತು ರೀಚಾಜರ್್ ಮಾಡುತ್ತಲೇ ಇರುತ್ತವೆ.
ಜ್ಞಾನಪೀಠ ಪ್ರಶಸ್ತಿಯನ್ನು ಪ್ರಶ್ನಿಸಿ ಸಣ್ಣವನಾದೆ ಎಂಬ ಗಿಲ್ಟ್ ನನ್ನನ್ನು ಕಾಡುತ್ತಲೇ ಇದೆ. ನನ್ನ ವಾಗ್ವಾದವನ್ನು ಮಾಧ್ಯಮಗಳು ದುರುಪಯೋಗಪಡಿಸಿಕೊಂಡವು. ಆದರೆ ಅವರು ನನ್ನಂಥವರ ಪ್ರಶ್ನೆತಕರಾರುಗಳಿಂದ ವಿಚಲಿತರಾಗಲೇ ಇಲ್ಲ. ಕೆಲವು ತಿಂಗಳುಗಳ ಹಿಂದೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಪ್ರಶಸ್ತಿವಿತರಣಾ ಸಮಾರಂಭದಲ್ಲಿ ದೂರದಲ್ಲಿ ನಿಂತಿದ್ದ ನನ್ನ ಕಡೆ ನೋಡಿದವರೆ ಏಯ್ ಕುಂವೀ ಬಾರೋ ನನ್ ಪಕ್ಕ, ನಿನ್ ಜೊತೆ ನಾನ್ ಫೋಟೋ ತೆಗೆಸ್ಕೋಬೇಕು ಎಂದು ಕೂಗಿ ಕರೆದರು. ಕೇಳಿಸಿಕೊಂಡ ನನ್ನ ಕಣ್ಣುಗಳು ತುಂಬಿದವು. ತಮ್ಮ ಅನಾರೋಗ್ಯ ಸ್ಥಿತಿಯಲ್ಲೂ ಜೀವನೋತ್ಸಾಹವನ್ನು ಪಲ್ಲವಿಸುತ್ತಿದ್ದ ಅನಂತಮೂರ್ತಿ ಇನ್ನು ಕೇವಲ ನೆನಪು ಮಾತ್ರ.

‍ಲೇಖಕರು G

August 28, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

18 ಪ್ರತಿಕ್ರಿಯೆಗಳು

 1. kvtirumalesh

  ಶ್ರೀ ಕುಂ.ವೀ.
  ನಿಮ್ಮ ಲೇಖನ ಮನನೀಯವಾಗಿದೆ. ಆದರೆ ನಿಮ್ಮ ಡಾ. ಬಸವನಗೌಡರು `ನೆಹರೂ ನಿವೃತ್ತರಾಗುವುದಿಲ್ಲ’ ಎಂಬ ಮಾತನ್ನು ಅನಂತಮೂರ್ತಿಯವರಿಗೆ ಯಾಕೆ ಆರೋಪಪಿಸಿದರೋ ತಿಳಿಯದು. ಅದು ಗೋಪಾಲಕೃ‍ಷ್ಣ ಅಡಿಗರ ಒಂದು (ಪ್ರಸಿದ್ಧ) ಕವಿತೆ (೧೯೫೮). `ನೆಹರೂ ನಿವೃತ್ತರಾಗುವುದಿಲ್ಲ / ಇನ್ನು ಪರವಾ ಇಲ್ಲ’ ಎಂದು ಕವಿತೆ ಆರಂಭವಾಗುತ್ತದೆ.
  ಅನಂತಮೂರ್ತಿಯವರು ಆ ಕಾಲದಲ್ಲಿ ನೆಹರೂ ಪರವೇ ಆಗಿದ್ದರು. ಹೀಗೆಂದು ಅನಂತಮೂರ್ತಿಯವರು ತಾವೇ ಹೇಳಿಕೊಂಡಿದ್ದಾರೆ.
  ಡಾ. ಗೌಡರು ಏನನ್ನು ಉದ್ದೇಶಿಸಿದ್ದರೋ ನನಗೆ ತಿಳಿಯದು. ಓದುಗರು ತಪ್ಪಾಗಿ ತಿಳಿಯದಿರಲಿ ಎಂದು ಈ ಪತ್ರ ಬರೆದಿದ್ದೇನೆ.
  ಕೆ.ವಿ. ತಿರುಮಲೇಶ್

  ಪ್ರತಿಕ್ರಿಯೆ
 2. kumvee

  ಸರ್ ನಿಮ್ಮ ಗ್ರಹಿಕೆ ಸರಿ, ಅವರು ಹಾಗೆ ಹೇಳಿದರೋ ನಾನೇ ತಪ್ಪಾಗಿ ಗ್ರಹಿಸಿದೆನೋ, ಗೊಂದಲ
  ಧನ್ಯವಾದಗಳು

  ಪ್ರತಿಕ್ರಿಯೆ
 3. kumvee

  ಎಂಬತ್ತೆಂಟರಲ್ಲಿ ಬಳ್ಳಾರಿಯಲ್ಲಿ ನಡೆದ ಕಥಾಕಮ್ಮಟ ಸಂದರ್ಭದಲ್ಲಿ ಅವರನ್ನು ನಿಮಗೆ ಪರಿಚಯಿಸಿದ್ದೆ

  ಪ್ರತಿಕ್ರಿಯೆ
 4. amardeep.p.s.

  ನಿಮ್ಮ ಬರವಣಿಗೆ ಇಷ್ಟಪಡುವ ನಾನಿನ್ನು ತಿಳಿದುಕೊಳ್ಳೋದು ತುಂಬಾ ಇದೆ.. ಅಭಿನಂದನೆಗಳು ಸರ್

  ಪ್ರತಿಕ್ರಿಯೆ
 5. hgopalakrishna

  kum.vee,nimma lekhana endinahaage seleetade.Anantamurthy avara bagge eegaagale neevu saakashtu illiruvudanne heliddiri.anisitu.Adaroo Athmeeyavaagige ee lekhana..

  ಪ್ರತಿಕ್ರಿಯೆ
 6. purushottama Bilimale

  ನಾನೂ ನಿನ್ ಜೊತೆ ಬರ್ತೀನಿ ಕುಂವೀ..ಸ್ವರ್ಗದಲ್ಲಿ ಕತ್ತಲನ ಕಯ್ಯಲ್ಲಿ ತ್ರಿಶೂಲ ಹಿಡಿಸೋಣ

  ಪ್ರತಿಕ್ರಿಯೆ
 7. Bharavi

  ಹಿರಿಯ ಕವಿ ಕೆ.ಎ ಅಬ್ಬಾಸ್ ರವರ ಮರಣದ ಉಯಿಲು ಇಷ್ಟವಾಯ್ತು. ಬಹುಶಃ ಅನಂತಮೂರ್ತಿಯವರಿಗೆ ಇಷ್ಟು ಬೇಗ ಸಾವಿನ ಪರಿಕಲ್ಪನೆ ಇದ್ದಿದ್ದರೆ ಅವರೂ ಬರೆಯುತ್ತಿದ್ದರೇನೋ…!?

  ಪ್ರತಿಕ್ರಿಯೆ
  • Rajan

   What does “ಇಷ್ಟು ಬೇಗ” mean?
   He was already 80+!!!
   URA was all about getting the best of both worlds, criticize the system, but get all fruits of it. Criticize the traditions but everything has to be proper and primed for him!

   ಪ್ರತಿಕ್ರಿಯೆ
   • Bharavi

    ಜೀವನವನ್ನು ಅತಿಯಾಗಿ ಪ್ರೀತಿಸುವ ಮಾನವನಿಗೆ ತಾನು ಅಮರ ಎಂಬ ಭ್ರಮೆ ಇರುತ್ತದೆ. ಸಾವನ್ನು ಯಾರೂ ನಿರೀಕ್ಷಿಸುವುದಿಲ್ಲ. ವಯಸ್ಸು ನೂರಾದರೂ ಅಷ್ಟೇ…ರಜನ್

    ಪ್ರತಿಕ್ರಿಯೆ
 8. Usha Rai

  ಮಾತಾಡುತ್ತಿರುವ ಹಾಗೆ ನೆನಪುಗಳನ್ನು ಹಂಚಿಕೊಂಡಿದ್ದೀರಿ. ಚೆನ್ನಾಗಿದೆ.

  ಪ್ರತಿಕ್ರಿಯೆ
 9. Maluru Venkataswamy

  ಅನಂತ ಮೂರ್ತಿ ಬಗ್ಗೆ ಕುಂ.ವೀ. ಮಾತು ‘ಬೆರಳಿಗೆ ಬದಲು ಪುಸ್ತಕ’ ಆಲೋಚನೆಗೆ ಹಚ್ಚುತ್ತದೆ. ದೇವನೂರು ಬಗ್ಗೆ ಅನಂತ ಮೂರ್ತಿ ಏಕೆ ಹಾಗೆ ಹೇಳಿದರು?

  ಪ್ರತಿಕ್ರಿಯೆ
 10. Anonymous

  ಈಗ ಹರಿದಿರುವ ಮಾತಿನ ಹೊಳೆಯ ಮತ್ತೊಂದು ಮುಖ ಅನಾವರಣ ಮಾಡಿದ್ದೀರಿ . ನಾನೂ ಒಂದು ಲೇಖನ ಬರೆದಿದ್ದೇನೆ. ಜನಶಕ್ತಿಯಲ್ಲಿ. ಲಂಕೇಶ್ ನಂತರ ಸಾಮಾಜಿಕ ಕ್ರಿಯಾಶೀಲತೆಯನ್ನು ಕಾಯ್ದುಕೊಂಡವರು ಎಂದು. ವಿವಿಧ ಕಾಲಘಟ್ಟದಲ್ಲಿ ಅನಂತಮೂರ್ತಿಯವರ ಕೃತಿಗಳು ಮತ್ತು ಕ್ರಿಯಾಶೀಲತೆಯನ್ನು ಕರ್ನಾಟಕ ಸಾಂಸ್ಕೃತಿಕ ಲೋಕ ಹೇಗೆ ಪರಿಗಣಿಸಿದೆ

  ಪ್ರತಿಕ್ರಿಯೆ
 11. ಸತ್ಯನಾರಾಯಣ

  “ಕನ್ನಡದಲ್ಲಿ ಎರಡು ಘರಾನಾಗಳಿವೆ, ಒಂದು ಅನಂತಮೂರ್ತಿಯವರ ಘರಾನಾ, ಇನ್ನೊಂದು ತೇಜಸ್ವಿ ಘರಾನ, ನಾವೂ ನಿಸ್ಸಂದೇಹವಾಗಿ ತೇಜಸ್ವಿ ಘರಾನಕ್ಕೆ ಸೇರಿದವರೆಂದು.” ಸರ್ ಈ ಮಾತು ಹೇಳಿದ್ದು ನೀವು ಸೆಂಟ್ರಲ್ ಕಾಲೇಜು ಸಭಾಂಘಣದಲ್ಲಿ. ಅನಂತಮೂರ್ತಿಯವರೂ ಇದ್ದರು. ಅಂದಿನ ನಿಮ್ಮ ಭಾಷಣ ಮೇಲಿನ ಮಾತಿಷ್ಟೇ ಅರ್ಥಪೂರ್ಣವಾಗಿತ್ತು.
  ಪ್ರಸ್ತುತ ಲೇಖನವೂ ಅಷ್ಟೆ. ನೇರ ದಟ್ಟ ನಿರಂತರ………

  ಪ್ರತಿಕ್ರಿಯೆ
 12. udayakumar habbu

  ಕುಂವಿಯವರ ಲೇಖನ ಅನಂತಮೂರ್ತಿಯವರ ಕುರಿತದ್ದು ತನ್ನ ಬರಹದ ಕುರಿತು ಅಥವಾ ತನ್ನ ಕುರಿತು ಅವಜ್ನೆಯಿಂದ ಯು ಆರ್ ಏ. ನಡೆದುಕೊಂಡರು ಎಂಬ ಅವರ ಅನುಭವ ಅವರಿಂದ ಇಷ್ಟೆಲ್ಲ ಮಾತುಗಳನ್ನು ಬರೆಸಿತು. ಯು ಆರ್ ಏ ಘರಾನಾದ ವಾರಸುದಾರರು ಯಾರೆಲ್ಲ ಎಂದು ಕುಂವಿ ವಿಶದಪಡಿಸಿ.ಮತ್ತು ಪೂರ್ಣಚಂದ್ರ ತೇಜಸ್ವಿಯವರ ಘರಾನಾದ ಬಳಗ ಯಾರೆಲ್ಲ? ಪೂಚಂತೆಯಂತೆ ಬರೆಯಲು ಅನುಕರಿಸಲು ಅಸಾಧ್ಯ. ಆದರೆ ಯು ಆರ್ ಏಯಂತೆ ಹಲವರು ವಿಶೇಷವಾಗಿ ಸನಾತನ ಸಂಸ್ಕೃತಿಯ ಟೀಕೆ ಮತ್ತು ವಿಮರ್ಶೆಯನ್ನು ತಮ್ಮ ಸಾಹಿತ್ಯ ಕೃತಿಗಳಲ್ಲಿ ಬರೆದವರಿರಬಹುದು.ಆದರೆ ಈ ಇಬ್ಬರು ಲೇಖಕರು ಸಂಗೀತದ ಘರಾನದಂತೆ ಶಿಷ್ಯ ವರ್ಗವನ್ನು ಹುಟ್ಟು ಹಾಕಲಿಲ್ಲ. ಲೇಖಕರಾಗಿ ಪೂಚಂತೆ ಪೂಚಂತೆಯೆ ಮತ್ತು ಯು ಆರ್ ಏ ಯು ಆರ್ ಏನೆ. ಸಾಹಿತ್ಯ ಚಳುವಳಿಯಲ್ಲಿ ಅಡಿಗರ ಘರಾನಾ ಇದ್ದುದೊಂದು ಐತಿಹಾಸಿಕ ಸತ್ಯ.ಮತ್ತೆ ಕುಂವಿಯವರು ತಮ್ಮ ಕೃತಿಗಳಲ್ಲಿ ಪೂರ್ಣಚಂದ್ರ ತೇಜಸ್ವಿಯಂತೆ ಬದುಕಿನ ಚಿತ್ರಗಳನ್ನು ಕೊಡಲಿಲ್ಲ. ಮತ್ತು ಕುಂವಿಯವರು ಮೈಸೂರಿಗೆ ಹೋದಾಗ ‘ದೇವನೂರು ಮಹಾದೇವರ ಬಗ್ಗೆ ಯು ಆರ್ ಏ ಕೇವಲವಾಗಿ ಮಾತಾಡಿದ್ದು ಎಂಬ ಕುಂವಿಯವರ ವರದಿಯ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಯಾವ ಆಧಾರಗಳೂ ಇಲ್ಲವಾಗಿ ಇದು ಲೇಖಕನ ಅಸಹನೆಯನ್ನೂ, ಮತ್ಸರವನ್ನೂ ತೋರುವ ಬಗೆಯಾಗಿದೆ. ಅಂಬೆಗಾಲಿಕ್ಕಿ ನಡೆವ ನನ್ನ ಲೇಖನವನ್ನೂ ಗಮನಿಸಿ ಮೆಚ್ಚಿ ಮಿಂಚಂಚೆ ಬರೆದ ಯು ಆರ್ ಏ ಹೀಗೂ ಇದ್ದರೆ ಎಂದು ನಂಬಲು ಕಷ್ಟವಾಯಿತು.

  ಪ್ರತಿಕ್ರಿಯೆ
 13. Achuthamurthy BL

  1996 ರಲ್ಲಿ ಶಿವಮೊಗ್ಗದ ಕುವೆಂಪು ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮಕ್ಕೆ ನಾನೂ ಬಂದಿದ್ದೆ. ಕಾರಣ
  ​ನಮಗೆ ಆಗ ಪಿಯುಸಿ ಕನ್ನಡ ವಿಷಯದಲ್ಲಿ ‘​ಕುಂವಿ’ಯವರ ಕಥೆಯೊಂದಿತ್ತು. ಅಲ್ಲದೆ ನನ್ನ ನೆಚ್ಚಿನ ಕವಿ ‘​ನಿಸಾರ್ ಅಹ್ಮದ್’ ಅವರೂ ಬರುವವರಿದ್ದರು. ಜೊತೆಗೆ ‘ಅನಂತಮೂರ್ತಿ’ ಅವರು. ‘ಠೊಣ್ಣಿ’ ಅನ್ನುವ ಕಥೆ ಓದಿದ್ದ ನನಗೆ, ಕುಂವಿ ಅದೇಕೋ ತುಂಬಾ ಇಷ್ಟವಾಗಿಬಿಟ್ಟಿದ್ದರು. ಅಲ್ಲದೆ ನಿಸಾರ್ ಅಹ್ಮದ್ ಕೂಡ. ಬಹುಶಃ ಡಿವಿಎಸ್ (ಸ್ವತಂತ್ರ) ಪಿಯು ಕಾಲೇಜಿನಲ್ಲಿ ನಮ್ಮ ಕನ್ನಡ ಅಧ್ಯಾಪಕರಾಗಿದ್ದ ಮುನೀರ್ ಭಾಷಾ ಅವರ ಪ್ರಭಾವ ಅನ್ನಿಸುತ್ತೆ.
  ಕುಂವಿ ಅವರನ್ನು ಜೀನ್ಸ್ ಪ್ಯಾಂಟಿನಲ್ಲಿ ನಾನು ನಿರೀಕ್ಷಿಸಿರಲೇ ಇರಲಿಲ್ಲ! ಇನ್ನು, ನಿಸಾರರ ಸೂಟು-ಬೂಟು, ಅನಂತಮೂರ್ತಿಯವರ ನೀಲಿ ಅಂಗಿಯ ಮೇಲೆ ವೈಸ್ಟ್ ಕೋಟ್ ನ ಚಿತ್ರ ನನ್ನ ನೆನಪಿನಿಂದ ಮಾಸೇ ಇಲ್ಲ. ಈ ಮೂವರ ಆ ಹಳೆಯ ಚಿತ್ರ ನೋಡಿ, ಅತೀವ ಸಂತೋಷವಾಗುತ್ತಿದೆ.
  ಕವಿ-ಕಥೆಗಾರರುಗಳ ವ್ಯಯಕ್ತಿಕ ಇಷ್ಟಾನಿಷ್ಟಗಳ ಹಂಗು ಓದುಗನಿಗಿರುವುದಿಲ್ಲ. ಓದುಗ ನಿರೀಕ್ಷಿಸುವುದು ಸತ್ವಯುತವಾದ ಕೃತಿಯನ್ನು ಮಾತ್ರ. ಎಲ್ಲರೂ ತಮ್ಮ ತಮ್ಮ ಸುತ್ತ ಒಂದು ಲಕ್ಷ್ಮಣ ರೇಖೆಯನ್ನು ಎಳೆದುಕೊಂಡು ಬಿಟ್ಟರೆ ಯಾವುದೇ ಸಮಸ್ಯೆಗಳಿರುವುದಿಲ್ಲ. ಆದರೆ ಇದು ಆಗುವಂತದ್ದಲ್ಲ!

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: