ಐ ಕಾಂಟ್ ಬ್ರೀದ್’ ಸಾಪೇಕ್ಷ ಪ್ರಜ್ಞೆಯ ಕವಿತೆಗಳು

ನೂರುಲ್ಲಾ ತ್ಯಾಮಗೊಂಡ್ಲು  

ಎಪ್ಪತ್ತು ಎಂಬತ್ತರ ದಶಕದಲ್ಲಿ ಬಂಡಾಯದ ಹೆಗ್ಗಾಳೆ ಊದಿದವರಲ್ಲಿ ಗವಿಸಿದ್ದ ಎನ್.ಬಳ್ಳಾರಿ ಯವರು ಒಬ್ಬರು. ಈಗ ಅದೇ ಜಾಡಿನಲ್ಲಿ ಕಾವ್ಯದ ದನಿಯನ್ನು ಒಳಗು ಮಾಡಿಕೊಂಡು ಕಾವ್ಯ ರಚಿಸುತ್ತಿರುವವರಲ್ಲಿ ಅವರ ಪುತ್ರರಾದ ಮಹೇಶ್ ಬಳ್ಳಾರಿಯವರು ಸಮಾಕಾಲೀನ ಪ್ರಮುಖರಲ್ಲಿ ಒಬ್ಬರು. ಈಗಾಗಲೇ ನಾಲ್ಕು ಕವನ ಸಂಕಲನಗಳಿಂದ ಗುರುತಿಸಿಕೊಂಡಿರುವ ಇವರ ಕಾವ್ಯ ಪ್ರತಿಭೆ ತೀರ ಭಿನ್ನ ನೆಲೆಯಲ್ಲಿ ಹೆಸರು ಮಾಡಿದೆ.

ಮೊನ್ನೆ ತಾನೇ ಲೋಕಾರ್ಪಣೆಗೊಂಡಿರುವ ಅವರ ಐದನೇ ಕವನ ಸಂಕಲನ ‘ಐ ಕಾಂಟ್ ಬ್ರೀದ್’ ಕನ್ನಡ ಕಾವ್ಯ ಪರಂಪರೆಯಲ್ಲಿ ವರ್ತಮಾನದೊಂದಿಗೆ ನೇರ ಮುಖಾಮುಖಿ ಅಭಿವ್ಯಕ್ತಿಯಿಟ್ಟುಕೊಂಡಿದ್ದ ಕಾಲ ದಲಿತ-ಬಂಡಾಯ ಕಾಲ. ಆ ಕಾಲದ ದನಿಯ ಲಯ ಪ್ರಕೃತದಲ್ಲೂ ಹೇಗೆ ಭಿನ್ನ ನೆಲೆಯಲ್ಲಿ ರೂಪಾಂತರ ತಾಳುತ್ತಾ ಬಂದಿದೆ ಎನ್ನುವುದಕ್ಕೆ ಈಗಾಗಲೇ ಪರಂಪರೆಯ ಹೊಸ್ತಿಲಿನಲ್ಲಿ ನಿಂತಿರುವ ಕಾವ್ಯದಿಂದ ಹೃದ್ಗತವಾಗುತ್ತದೆ. ಅಂಥ ಕವಿತೆಗಳಿಂದ ತಮ್ಮದೇ ಲಯ ಮತ್ತು ಪ್ರತಿಮೆಗಳೊಂದಿಗೆ ಸಂಘರ್ಷಕ್ಕಿಳಿದವರಲ್ಲಿ ಇತ್ತೀಚಿನ ರಾಜೇಂದ್ರ ಪ್ರಸಾದ್, ವಿ.ಆರ್.ಕಾರ್ಪೇಂಟರ್, ಕೃಷ್ಣಮೂರ್ತಿ ಕೈದಾಳ್, ಸಿರಾಜ್ ಬಿಸರಳ್ಳಿ, ವಿಲ್ಸನ್ ಕಟೀಲ್, ಸುನೈಫ್, ಬಿದಲೋಟಿ ರಂಗನಾಥ್ ಮತ್ತಿತರ ಪ್ರಮುಖರು. ಆದರೆ ನನಗಿಲ್ಲಿ ಮುಖ್ಯವಾಗುವುದು ಮಹೇಶ್ ಬಳ್ಳಾರಿ ಯವರ ‘ಐ ಕಾಂಟ್ ಬ್ರೀದ್…’ ಕವನ ಸಂಕಲನ.

ಸಂಕಲನ ಹೆಸರೇ ‘ಐ ಕಾಂಟ್ ಬ್ರೀದ್…’ ಅಂದರೆ ‘ನನಗೆ ಉಸಿರಾಡಲು ಸಾಧ್ಯವಿಲ್ಲ’ ಏಕೆ ಎನ್ನುವ ಪ್ರಶ್ನೆ ಓದುಗರಿಗೆ ಸಹಜ ಕುತೂಹಲವನ್ನು  ಒದಗಿಸುತ್ತದೆ. ಇದಕ್ಕೊಂದು ಸಣ್ಣ ಚರಿತೆ ಇದೆ. ಪ್ರಜಾಪ್ರಭುತ್ವದಂಥ ದೊಡ್ಡ ರಾಷ್ಟ್ರವಾದ ಅಮೇರಿಕದಲ್ಲಿ 2014ರಲ್ಲಿ ಕರಿಯ ಪ್ರಜೆ ಎರಿಕ್  ಗಾರ್ನರ್ನನ್ನು ಅಮಾನುಷವಾಗಿ ಹತ್ಯೆಗೈದ ಅಲ್ಲಿನ ನಿರಂಕುಷ ಕಂಪನಿ (ಪೊಲೀಸ್) ವಿರುದ್ಧ ಬಂಡೆದ್ದ ನಾಗರಿಕರ ಘೋಷವಾಕ್ಯ ‘ಐ ಕಾಂಟ್ ಬ್ರೀದ್’ ಆಗಿತ್ತು. ಆದರೂ ಮೊನ್ನೆವರೆಗೂ ಅಂದರೆ ಜಾರ್ಜ್ ಪ್ಲಾಯಿಡ್ ನ ಅದೇ ಪೊಲೀಸ್ ಕಂಪನಿಯವರು ಬರ್ಬರವಾಗಿ ಎನ್ಕೌಂಟರ್ ಮಾಡಿದಾಗ ಅಲ್ಲಿಯವರೆಗೂ ಸುಮಾರು ಎಪ್ಪತ್ತು ಕರಿಯ ಪ್ರಜೆಗಳ ಹತ್ಯೆಯಾಗಿತ್ತು. ಆಗ ಮತ್ತೆ ಅದೇ ಸ್ಲೋಗನ್ ಮಿಂಚು ಸಿಡಿಲಿನ ಅಬ್ಬರದಲ್ಲಿ ಇಡೀ ಪ್ರಪಂಚದಾದ್ಯಂತ ವ್ಯಾಪಿಸಿದ್ದು ಜನರನ್ನು ಬೆಚ್ಚಿಬೀಳಿಸಿತ್ತು.

ಆ ಅಮಾನುಷ ಕೊಲೆಯನ್ನು ದಮನಿಸುವುದಕ್ಕಾಗಿ ಇಡೀ ಮಾನವ ಸಂಕುಲ ಈ ಒಂದು ಘೋಷಣೆಯನ್ನು ಪ್ರಜಾಪ್ರಭುತ್ವದ ಉಳಿವಿಗಾಗಿ, ಮಾನವ ಹಕ್ಕುಗಳ ಒತ್ತಾಸೆಗಾಗಿ ಚಳುವಳಿಗಳಲ್ಲಿ ಉಸಿರಾಗಿಸಿತ್ತು. ಅಂಥ ಮಹತ್ವದ ಸ್ಲೋಗನನ್ನು ಮಹೇಶ್ ರವರು ತಮ್ಮ ಪ್ರಸ್ತುತ ಕೃತಿಗೆ ಹೆಸರಾಗಿಸಿ ವರ್ತಮಾನದಲ್ಲಿ ತನ್ನ ಸುತ್ತಮುತ್ತಲಿನ ದೋಷಗಳಿಗೆ ಕಿವಿಯಾಗಿ, ತಮ್ಮದೇ ಪ್ರತಿಮೆಗಳೊಂದಿಗೆ ದನಿಯಾಗಿ ಒಳಗು ಮಾಡಿಕೊಂಡು ಕವಿತೆ ರಚಿಸಿರುವುದು ಅವರ ಇಲ್ಲಿನ ಭಿನ್ನ ಆಲೋಚನಾ ಶೈಲಿಯಾಗಿದೆ.

ಮೇಲಿನ ಉಪೋದ್ಘಾತದಲ್ಲಿ ಹೇಳಿದಂತೆ ಬದುಕು, ವರ್ತಮಾನ ಇವೆರಡರ ಮುಖಾಮುಖಿಯಲ್ಲಿ ಜೀವತಳೆದ ಕವನ ‘ಮಂದಿರ ಮತ್ತು ಮಸೀದಿ’. ‘ಅವನ ಮನದ ಮಂದಿರದ ತುಂಬಾ ಮಲಿನತೆ ಇವನ ಆತ್ಮದ ಮಸೀದಿಯ ತುಂಬಾ ಮಾತಾಂಧತೆ’ ಎಂದು ಕವಿ ನಿಷ್ಠುರವಾಗಿ ಹೇಳುತ್ತಾ ಮುಂದುವರೆದು ಇಂಥವರಿಗೆ ‘ದೇವರು ಒಲಿಯುವನೇ? ಎಂದು ಪ್ರಶ್ನೆ ಮಾಡುತ್ತಾನೆ.

ನಮ್ಮ ಕಾವ್ಯ ಪರಂಪರೆಯಲಿ ಇಂಥ ಕವನಗಳ ಭಾವ ಭಿತ್ತಿ ಇದೆ. ಆದರೂ ಹೊಸ ತಲೆಮಾರು ಕಾವ್ಯ ತನ್ನ ಸೃಜನಾತ್ಮಕ ಕಲೆಯಿಂದಾಗಿ ಮುರಿದು ಕಟ್ಟುವ ಕೆಲಸ ಮಾಡುತ್ತಿದೆ. ಹಾಗಾಗಿ ಶರೀಫರ ತಾಯ್ನೆಲವಾದ ಉತ್ತರ ಕರ್ನಾಟಕದ ಬಹುಭಾಗಗಳಿಂದ ಅಂಥ ಹಲವು ಕವನಗಳು ಇಂದಿಗೂ ಬೆಳಕು ಚೆಲ್ಲುತ್ತಿವೆ. ‘ಗಾಂಧೀ… ನಿನ್ನ ಬತ್ತಲ ದೇಹದ ಪ್ರತೀಕಗಳಾಗಿರುವ ಗ್ರಾಮಗಳು-‘ಸ್ವರೋಗ’ ಸಾಮ್ರಾಜ್ಯಗಳಾಗಿವೆ.

ಟೈಫಾಯಿಡ್, ಮಲೇರಿಯಾ, ನ್ಯುಮೋನಿಯಾ ಜೊತಿಗೆ ಇನ್ನು ಹೆಸರಿಡದ ಹಲವು ಕಾಯಿಲೆಗಳಿಗೆ ತುತ್ತಾಗಿ ಯಯಾತಿಯ ಅವಸ್ಥೆಗಳಲ್ಲಿವೆ’ (ಪುರುಷಕಟ್ಟೆ) ದೇಶದ ಬದುಕು ಹೇಗೆ ಖಾಯಿಲೆಗೆ ತುತ್ತಾಗಿದೆ ಎಂದು ವರ್ತಮಾನದ ಬದುಕನ್ನು ತಮ್ಮ ಬೀಜ ಕಾಳಾಜಿಯಾಗಿ ಆವಾಹಿಸಿಕೊಂಡು ತಮ್ಮದೇ ಆದ ವಿಭಿನ್ನ ತಂತ್ರ ಮತ್ತು ಪ್ರತಿಮೆಗಳೊಂದಿಗೆ ಕವಿತೆಯ ಕಸುಬಾಗಿಸಿಕೊಂಡಿದ್ದಾನೆ ಕವಿ. ಅವರ ಈ ಕಸುಬು ಭಾಗಶಃ ಅವರ ಇಲ್ಲಿನ ಬಹುತೇಕ ಕವಿತೆಗಳಲ್ಲಿ ಕಾಣಬಹುದು.

‘ಭಾರತಕ್ಕೆ ರೋಗ ತಗುಲಿದೆ, ಚಿಕಿತ್ಸೆ ಬೇಕು’ ಎಂದ ದೇವನೂರು ಮಹಾದೇವರ ಮಾತು ಇಲ್ಲಿ ಉಲ್ಲೇಖಾರ್ಹವಾಗಿ ನೆನಪಿಸಿಕೊಳ್ಳಬಹುದು. ಭಾರತದ ಬದುಕು ವಿಕಲ್ಪ ಮತಿಯಿಂದ ಅಥವ ಅಸಂವಿಧಾನಿಕ ನಡೆಯಿಂದಾಗಿ ಯಯಾತಿಯ ಸ್ಥಿತಿಯಲ್ಲಿದೆ ಎಂದು ಕವಿ ಬಹಳ ವಿಷಾದವಾಗಿ ನುಡಿಯುತ್ತಾನೆ. ಮತ್ತೆ ಸಂಕಲನದ ಶೀರ್ಷಿಕೆ ಕವಿತೆಯಾದ ‘ಐ ಕಾಂಟ್ ಬ್ರೀದ್…’ ನಲ್ಲಿ ಅಸಮಾನತೆ, ಅಸ್ಪೃಶ್ಯತೆ, ಮೇಲು-ಕೀಳಿನ ಭೀಭತ್ಸ ಭಾವ ಹೇಗೆ ಆಚಾರಣೆಯಲ್ಲಿದೆ; ಸ್ವಾತಂತ್ರ್ಯೋತ್ತರ ಪ್ರಜಾಪ್ರಭುತ್ವದಲ್ಲಿ ನಿಲ್ಲದ ಹಿಂಸೆ, ಹಗೆತನ ಹೇಗೆ ತನ್ನ ಕದಂಬ ಬಾಹುಗಳನ್ನು ಚಾಚುತ್ತಿದೆ ಎನ್ನುವ ಕರಾಳ ಸತ್ಯವನ್ನು ‘ಐ ಕಾಂಟ್ ಬ್ರೀದ್’ ಕವನದಲ್ಲಿ ಸಾಂಕೇತಿಕವಾಗಿ ಗುರುತಿಸಲು ಕವಿ ಪ್ರಯತ್ನಿಸಿರುವುದು ಕಾಣಬಹುದು.

ಅಮೇರಿಕಾದ ಕರಿ ಪ್ರಜೆ ಜಾರ್ಜ್ ಪ್ಲಾಯಿಡ್ ನನ್ನು ಹೇಗೆ ನಿರಂಕುಶ ಮತಿಯಾಗಿ ಕೊಲೆಮಾಡಿತು ಎನ್ನುವ ಪ್ರಸ್ತಾವನೆಯ ಭಾವ ಇಲ್ಲಿ ಕವಿತೆಯ ವಿಷಯವಾಗಿರುವುದು ಒಂದು ಉದ್ಭೋಧವು ಆಗಿದೆ. ಈ ವಿಷಯ ಕೇವಲ ಅಮೇರಿಕದಲ್ಲಲ್ಲ ಎಲ್ಲಿ ನಿರಂಕುಶ ಮತಿತ್ವ ತನ್ನ ಆತ್ಯಂತಿಕ ಬಲ ಪಡೆದಿರುತ್ತದೆಯೋ ಅಲ್ಲಿ ಪ್ರಜಾಪ್ರಭುತ್ವದ ಹಿಂಸಾಚಾರ, ದಮನಿತರ ದಬ್ಬಾಳಿಕೆ, ಅಲ್ಪಸಂಖ್ಯಾತರ ಕಗ್ಗೋಲೆ ಕೇವಲ ಕ್ಷುಲ್ಲಕವಾಗಿ ಬಿಡುತ್ತದೆ. ಆದರೆ ಕವಿಗೆ ಅದರ ಸಂಕಟ ಉಸಿರುಗಟ್ಟಿಸಿದೆ. ಹಾಗಾಗಿ ಕವಿ ‘ಐ ಕಾಂಟ್ ಬ್ರೀದ್…’ ಎಂದು ಉಸಿರು ಬಿಗಿ ಹಿಡಿದೇ ಅಕ್ಷರಗಳಿಗೆ ಜೀವ ಕೊಡುತ್ತಾನೆ. 

ಕವಿತೆ ಜೀವ ಚೈತನ್ಯವಾಗಿರಬೇಕಾದರೆ ಆ ಸಮಾಜದಲ್ಲಿ ಜೀವಪರ ಕಾಳಾಜಿಯುಳ್ಳ ಕವಿ ಮನಸ್ಸುಗಳಿರಬೇಕು. ಆದರೆ ಈ ಜೀವಪರ ಕವಿಗಳು ಬಹು ಸಂಖ್ಯೆಯಲ್ಲಿ ಕಾಣದಿರುವುದೇ ದುರಂತ. ಹಾಗಾಗಿ ಜೀವಪರ ಕಾವ್ಯ ಬತ್ತಿ ಹೋಗುತ್ತಿದೆಯೇ? ಪ್ರಶ್ನೆ ಕಾಡುತ್ತದೆ. ಇಲ್ಲ, ಖಂಡಿತ ಇಲ್ಲ. ಮಹೇಶ್ ಬಳ್ಳಾರಿಯವರಂಥ ಕವಿಗಳು ಸಮಕಾಲೀನ ಕಾವ್ಯ ಪರಂಪರೆಯಲ್ಲಿ ಗುರುತರವಾಗಿ ಸಿಗುತ್ತಾರೆ. ಖಂಡ್ಗವಾಗಲಿ ಕಾವ್ಯ ಜನರ ನಾಡಿ ಮಿಡಿವ ಪ್ರಾಣ ಮಿತ್ರ ಎನ್ನುವ ಭರವಸೆಯೊಂದಿಗೆ. ಈ ಭರವಸೆ ಸದಾ ಜಾಗೃತವಾಗಿರುತ್ತದೆ. ಒಟ್ಟು ಮೂವತ್ತೆಂಟು ಕವಿತೆಗಳಿರುವ ಈ ಸಂಕಲನದಲ್ಲಿ ಅವರ ಸೂಕ್ಷ್ಮ ಕಾಣ್ಕೆಯಿಂದಾಗಿಯೇ ರಚನೆಯಾದಂಥವು ಎನ್ನಬೇಕು.

ಕಸೋತ್ಪಾದನೆ, ರೊಟ್ಟಿ ಮತ್ತು ಹುಡುಗಿ, ಬಲೆ, ಹಾಲಕ್ಕಿ, ತರಕಾರಿ ಹುಡುಗಿ, ಹೋಟೆಲಿನೊಳಗಿನ ಟೇಬಲ್ಲು, ಅಲೈನ್ಮೆಂಟ್ ಕವನಗಳು ದಿನನಿತ್ಯ ಸಂಚರಿಕೆಯಲಿ ಕಾಣುವ ಸೂಕ್ಷ್ಮ ಸಂಗತಿಗಳೇ. ಅಂಥ ವಸ್ತುಗಳನ್ನು ಕವನದ ರೂಪ ಕೊಟ್ಟಿರುವುದು ಕವಿಯ ಒಳಗುದಿಯ ಕಾಣ್ಕೆ. ಅಂಥ ಕಾಣ್ಕೆ ಕವನಗಳಲ್ಲಿ ಪ್ರಮುಖವಾದುದು ಕುವೆಂಪು ರವರ ‘ಗೊಬ್ಬರ’ ಕವನವು ಒಂದು. ಚಳುವಳಿಯ ಸಾಪೇಕ್ಷ ಪ್ರಜ್ಞೆ ಮತ್ತು ಆ ಪರಂಪರೆಯ ಸಂಕೀರ್ಣ ಓದು ಮಹೇಶ್ ರವರಿಗೆ ಲಭಿಸಿರುವುದರಿಂದ ಅವರ ಇಲ್ಲಿನ ಒಟ್ಟು ಕವಿತೆಯ ಬನಿ ಸಂಕೀರ್ಣವಲ್ಲ ಸುಲಭವಾಗಿ ಗ್ರಹಿಕೆಗೆ ನಿಲುಕುವ ಸರಳ ಭಾಷೆಯ ಕವಿತೆಗಳಾಗಿವೆ.

ವರ್ತಮಾನದಲ್ಲಿ ಉಲ್ಕೆಯಂತಹ ಪರಿಕರಗಳನ್ನು ಹೆಕ್ಕಿ ಕಾವ್ಯ ಕಸುಬಿಗಿಳಿದರೂ ಕವಿತೆಗಳ ವಿನ್ಯಾಸವೂ ವಿಕ್ಷಿಪ್ತವಾಗದೇ ಇರುವುದರ ಕಡೆ ಗಮನಹರಿಸಿರುವುದು ಕವಿಯ ಜಾಣ್ಮೆಯಾಗಿದೆ. ಆದರೆ ಇಲ್ಲಿನ ಕವಿತೆಗಳು ಗದ್ಯ ಲಯದ ಪೊರೆಯನ್ನು ಅಂಟಿಸಿಕೊಂಡಂತೆ ನಿರ್ವಚಿಸಲ್ಪಡುತ್ತವೆ. ಇದರ ಅರಿವು ಕವಿಗೂ ಇದೆ ಎಂದು ಭಾವಿಸುವೆ. ಮುಂದಿನ ಅವರ ಕವಿತೆಗಳು ಇಂಥ ಹೆರೆಯನ್ನು ಕಳಚಿ ಬರೆಯುವರೆಂಬ ಆಶಯವಿದೆ. 

‍ಲೇಖಕರು Avadhi

March 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: