ಮಲಯಾಳ ಮೂಲ: ನಜೀರ್ ಕಡಿಕ್ಕಾಡ್
ಇಂಗ್ಲಿಷಿಗೆ: ರವಿ ಶಂಕರ್ ಎನ್
ಕನ್ನಡಕ್ಕೆ: ಪ್ರತಿಭಾ ನಂದಕುಮಾರ್
**
ನಾನು ನಿನ್ನೆ ಬರೆದ ಕವನವನ್ನು
ಐದು ಜನ ಓದಿದರು.
ಮೊದಲನೆಯವನು
ಕವನದಲ್ಲಿನ ಮನೆಯ ಹುಡುಗಿಯೊಂದಿಗೆ
ಓಡಿಹೋದ.
ಎರಡನೆಯವನು
ಕವನದಲ್ಲಿನ ಮುದುಕ ಭಿಕ್ಷುಕನ
ತಲೆ ಒಡೆದು ಕೊಂದ.
ಮೂರನೆಯವನು
ಕವನದಲ್ಲಿನ ನದಿ ದಡದಲ್ಲಿದ್ದ
ತನ್ನ ಮನೆ, ಜಮೀನು ಮಾರಿ
ನಗರಕ್ಕೆ ವಲಸೆ ಹೋದ.
ನಾಲ್ಕನೆಯವನು
ಕವನದಲ್ಲಿನ ರಾಜ್ಯದ ರಹಸ್ಯಗಳನ್ನು
ಸೋರಿಕೆ ಮಾಡಿ ಗಡಿ ದಾಟಿದ.
ಐದನೆಯವನು
ಕವನದಲ್ಲಿನ ಜೈಲು ಮುರಿದು
ನಿರಪರಾಧಿಯನ್ನು ಬಿಡುಗಡೆ ಮಾಡಿದ.
ಇತರರು ಕವಿತೆಯನ್ನು ಓದಲು ಹಿಂಬಾಲಿಸಿದರು.
ಒಬ್ಬ ರೈತ
ಒಬ್ಬ ವ್ಯಾಪಾರಿ
ಒಬ್ಬಳು ಪ್ರೇಮಿ
ಒಬ್ಬ ಗುರು
ಒಬ್ಬಳು ಪತ್ರಕರ್ತೆ
ಒಬ್ಬ ನಿರುದ್ಯೋಗಿ
ಒಬ್ಬ ವಿಜ್ಞಾನಿ
ಒಬ್ಬ ರೋಗಿ
ಒಂದು ಶಾಲಾ ಮಗು
ಒಬ್ಬಳು ಗೃಹಿಣಿ
ಕವಿತೆಯಲ್ಲಿ ಏನೂ ಉಳಿದಿಲ್ಲ
ಎಂದು ನಿರಾಸೆಯಿಂದ
ಅವರೆಲ್ಲರೂ ಹಿಂತಿರುಗಿದರು
ನಾನು ಇಲ್ಲಿ ನಿಂತು
ಹಿಂದಿರುಗುವವರನ್ನು
ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ.
****
0 ಪ್ರತಿಕ್ರಿಯೆಗಳು