ಏನ್ ಗೊತ್ತಾ…! ಎಂಬ ಆತ್ಮೀಯ ಪದಬಂಧ

ಕೃಷ್ಣ ಭಟ್

ಮಾತೇ ಮಂತ್ರವಾಗಿರುವ ಕಾಲದಲ್ಲಿ ನಮ್ಮ ಮನದ ಮಾತು ಕೇಳೋರು ಯಾರಾದ್ರೂ ಇದಾರಾ?

ಈಗ ಎಲ್ರ ಕತೆಯೂ ಒಂದೇ… ದಿನ ಬೆಳಗಾದ್ರೆ ಮಾತು, ಮಾತು ಮಾತು. ಕೆಲವರು ಫೋನಲ್ಲಿ ಮಾತಾಡ್ತಾರೆ, ಇನ್ನು ಕೆಲವರು ಮೆಸೇಜ್ ಗಳ ಮೂಲಕ ಕಮ್ಯುನಿಕೇಟ್ ಮಾಡ್ತಾರೆ. ಕೆಲವರದು ವಿಡಿಯೊ ಕಾಲ್, ಇನ್ನು ಕೆಲವರದು ಆಡಿಯೊ ಮೀಟಿಂಗ್. ಈಗಿನ ಕಾಲದಲ್ಲಿ ಮಾತಾಡದಿದ್ರೆ ಕೆಲಸವೇ ಆಗಲ್ಲ ಅನ್ನೊ ಪರಿಸ್ಥಿತಿಯೂ ಇದೆ. ಸಂವಹನವೇ ಈ ಕಾಲದ ಮಂತ್ರ.

ಹಾಗಂತ ಎಲ್ರ ಹತ್ರ ಎಲ್ಲವನ್ನೂ ಮಾತನಾಡ್ಲಿಕೆ ಆಗುವುದಿಲ್ಲ. ಎಲ್ಲಿ ಏನು ಮಾತಾಡ್ಬೇಕೊ ಅದನ್ನಷ್ಟೇ ಮಾತಾಡಬೇಕು. ಯಾರ ಹತ್ರ ಎಷ್ಟು ಮಾತಾಡ್ಬೇಕೋ ಅಷ್ಟೇ ಮಾತಾಡ್ಬೇಕು. ಈ ಫಿಲ್ಟರ್ ಗಳ ಜಗತ್ತಿನಲ್ಲಿ ಮನದೊಳಗಿನ ಮಾತು ಅಲ್ಲಲ್ಲೇ ಗಂಟಲಲ್ಲೇ ಉಳಿದುಬಿಡುತ್ತವೆ ಅನಿಸ್ತದೆ ಕೆಲವೊಮ್ಮೆ.

ನಿಜವೆಂದರೆ ನಮ್ಮ ಮಾತುಗಳನ್ನು ಕೇಳಿಸಿಕೊಳ್ಳುವ ತಾಳ್ಮೆಯೂ ಎಲ್ಲರಿಗೂ ಇರುವುದಿಲ್ಲ. ಈಗೀಗ ಪ್ರತಿಯೊಬ್ಬರೂ ನಾವು ಏನನ್ನೋ ಹೇಳುವ ಮೊದಲೇ ಅದಕ್ಕೊಂದು ಅರ್ಥ ಕಲ್ಪಿಸಿ, ತಮ್ಮದೊಂದು ಅಭಿಪ್ರಾಯ ರೂಪಿಸಿ ಕಮೆಂಟ್ ಮಾಡುವುದಕ್ಕೆ ಕಾಯ್ತಾ ಇರ್ತಾರೆ.. ಪ್ರತಿಯೊಬ್ಬರೂ ನ್ಯಾಯಾಧೀಶರೇ.. ಹೀಗಾಗಿ ಏನೋ ಒಂದು ವಿಚಾರ ಹೇಳಬೇಕೊ? ಹೇಳೊದಾದ್ರೆ ಹೇಗೆ ಹೇಳಬೇಕು ಅಂತ ಸಾವಿರ ಬಾರಿ ಯೋಚನೆ ಮಾಡಬೇಕಾಗುತ್ತದೆ. ನಿರುಮ್ಮಳವಾಗಿ, ನಿರಾಳವಾಗಿ ಮಾತನಾಡುವುದೇ ಕಷ್ಟ ಎಂಬ ಪರಿಸ್ಥಿತಿ ಈಗ.

ಇದೆಲ್ಲದರ ನಡುವೆಯೂ ನಮ್ಮ ಮಾತುಗಳನ್ನು ಪ್ರೀತಿಯಿಂದ ಕೇಳಿಸಿಕೊಳ್ಳಬಲ್ಲ ಕೆಲವರು ಇದ್ದೇ ಇರ್ತಾರೆ… ಅವರ್ಯಾರು ಎಂದು ‌ಕಂಡುಕೊಳ್ಳುವುದೇ ಒಂದು ಸವಾಲು. ಇತ್ತೀಚೆಗೆ ಲೇಖಕಿ ಬಿ.ವಿ. ಭಾರತಿ ಅವರು ತಮ್ಮ ಲೇಖನವೊಂದರಲ್ಲಿ ಬರೆದಿದ್ರು: ನಾನು ಈ ಕಡೆಯಿಂದ ಏನ್ ಗೊತ್ತಾ ಅಂತ ಹೇಳಿದ ಕೂಡಲೇ ಮಗ ಆ ಕಡೆಯಿಂದ ಎಲ್ಲ ಕೆಲಸ ಬಿಟ್ಟು ಮಾತು ಕೇಳಲು ರೆಡಿ ಆಗ್ತಾನೆ ಅನ್ನೋ ಅರ್ಥದಲ್ಲಿತ್ತದು.

ಈ ಏನ್ ಗೊತ್ತಾ ಅನ್ನೋದು ಸಂವಹನದ ಒಂದು ದೊಡ್ಡ ಪದ ಬಂಧ. ನಾವು ಯಾರಲ್ಲಾದರೂ ಏನ್ ಗೊತ್ತಾ ಅಂತ ಮಾತು ಶುರು ಮಾಡಿದೆವೆಂದರೆ ನಮ್ಮಲ್ಲಿ ಮಾತಾಡೋಕೆ ತುಂಬಾ ಸಂಗತಿ ಇದೆ ಅಂತೇನೂ ಅರ್ಥವಲ್ಲ. ಆದರೆ ಏನನ್ನೋ ಮುಕ್ತವಾಗಿ ಹಂಚಿಕೊಳ್ಳುವ ಆಸೆ ಆಗ್ತಿದೆ ಅಂತ ಅರ್ಥ.

ಏನ್ ಗೊತ್ತಾ ಅನ್ನೋದರ ಹಿಂದೆ ಬದುಕಿನ ಯಾವುದೋ ಹೇಳಿಕೊಳ್ಳಲಾಗದ ಸಂಕಟ ಇರಬಹುದು, ಯಾವುದೋ ಖುಷಿ ವಿಚಾರ ಇರಬಹುದು, ಒಂದು ಗಾಸಿಪ್, ಒಂದು ಚೇಷ್ಟೆ ಏನು ಬೇಕಾದರೂ ಇರಬಹುದು. ಜಗತ್ತಿನ ಯಾವ ಸಂಗತಿಯಾದರೂ ಸರಿ.. ಹೇಳ್ಕೊಬೇಕು ಅನ್ನೋ ತುಡಿತವೇ ಈ ಏನ್ ಗೊತ್ತಾ. ಕೆಲವರು ಇದನ್ನು ಒಂದು ವಿಷಯ ಗೊತ್ತಾ, ನಿಮಗೊಂದು ಸಂಗತಿ‌ ಗೊತ್ತಾ ಯೂ ನೋ ವಾಟ್ ಅಂತಾನೂ ಬಳಸಬಹುದು.

ಏನ್ ಗೊತ್ತಾ ಅಂತ ಆರಂಭವಾಗುವ ಮಾತುಗಳಲ್ಲಿರುವುದು ಒಂದು ಹೃದ್ಯವಾದ ನಂಬಿಕೆ. ಇಲ್ಲಿ ಎಲ್ಲವೂ ಸತ್ಯವೇ ಅಂತಲ್ಲ. ಏನೋ ತಪ್ಪು ಮಾಹಿತಿ ಇದ್ರೆ ತಮಾಷೆ ಮಾಡ್ತಾರೆ, ಬೈದು ಬಿಡ್ತಾರೆ ಅನ್ನುವ ಭಯ ಇಲ್ಲಿಲ್ಲ. ನಮ್ಮದೇ ಬದುಕಿನ ಕತೆ ಇದ್ರೂ ಇನ್ನೊಬ್ಬರ ಎದುರು ಹೇಳ್ತಾರೆ ಅನ್ನುವ ಆತಂಕವಿಲ್ಲ. ಯಾವುದೋ ಗಾಸಿಪ್ ಕತೆ ಹೇಳಿದ್ರೆ ಬೇರ್ಯಾರಿಗೋ ಹೇಳಿ ಸಿಕ್ಕಿಸಿ ಹಾಕ್ತಾರೆ ಅನ್ನೋ ಚಿಂತೆ ಇಲ್ಲಿ ಬೇಕಿಲ್ಲ. ಅದೊಂಥರಾ ಜಡ್ಜ್ ಮೆಂಟ್ ಗಳಿಲ್ಲದ, ಮುಕ್ತ ಮಾತುಗಳ ಸುಂದರ ಪ್ರಪಂಚ.

ಒಂದೊಂದು ಮಾತಿಗೂ ಸಾವಿರ ಬಾರಿ ಯೋಚಿಸಬೇಕಾದ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಈ ಏನ್ ಗೊತ್ತಾ ಅನ್ನೊ ಆತ್ಮೀಯ ಭಾವದ ಸಂವಹನಕ್ಕೊಂದು ಜೀವ ಇದ್ರೆ ಮನಸ್ಸು ಹೇಳ್ಕೊಂಡು ಹಗುರಾಗೋದು ತುಂಬ ಸುಲಭ.

ಅಂದ ಹಾಗೆ, ನಿಮಗೆ ಯಾರಾದ್ರೂ ಏನ್ ಗೊತ್ತಾ ಎನ್ನುವಷ್ಟು ಆತ್ಮೀಯರಿದ್ದಾರಾ? ಅಥವಾ ನೀವು ಯಾರ ಪಾಲಿಗಾದರೂ ಮುಕ್ತ ಮಾತಿನ ಏನ್ ಗೊತ್ತಾ ಬಂಧು ಆಗಿದ್ದೀರಾ?

‍ಲೇಖಕರು Avadhi

May 26, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: