ಬನವಾಸಿಗರು
**
ಬನವಾಸಿಗರು ಸಂಪಾದಿಸಿದ ‘ದೇವನೂರ ಮಹಾದೇವ ಜೊತೆ ಮಾತುಕತೆ – ಆಯ್ದ ಸಂದರ್ಶನಗಳ ಸಂಕಲನ’ ಕೃತಿ ಬಿಡುಗಡೆಯಾಗಿದೆ.
‘ಅಭಿರುಚಿ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಗೆ ‘ಬನವಾಸಿಗರು’ ಬರೆದ ಪ್ರಸ್ತಾವನೆ ಇಲ್ಲಿದೆ.
**
ಹೌದು. ಇವೆಲ್ಲವೂ ಅನಿರೀಕ್ಷಿತವೇ! ಹೀಗೇ..ಇದನ್ನೇ..ಇಷ್ಟೇ.. ಮಾಡಬೇಕೆಂದು ಯಾವ ಅಂದಾಜನ್ನೂ, ಸಿದ್ಧತೆಯನ್ನೂ ಮಾಡಿಕೊಳ್ಳದೇ, ಉದ್ದೇಶವನ್ನೂ ಇಟ್ಟುಕೊಳ್ಳದೇ ಇಷ್ಟು ದೂರ ನಡೆದು ಬಂದಿದ್ದೇವೆ! ಅದು ದೇವನೂರ ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಸಂಕಲನ ಪ್ರಕಟಗೊಳ್ಳುವುದಕ್ಕೂ ಮೊದಲಿನ ಕಾಲ. ಪ್ರಕಟಿತ ಬರಹಗಳನ್ನು ಕಾಲಕಾಲಕ್ಕೆ ಸಂಗ್ರಹಿಸಿಡುವ ಶಿಸ್ತು ದೇಮರಲ್ಲಿ ಇರಲಿಲ್ಲ. ಕೆಲವು ಮುಖ್ಯ ಲೇಖನಗಳೇನೋ ಕುಟುಂಬದವರ, ಆಪ್ತರ ಸಂಗ್ರಹದಲ್ಲಿ ಸಿಕ್ಕಿತ್ತು. ಮಿಕ್ಕವು ಎಲ್ಲೆಲ್ಲೋ ಚದುರಿ ಹೋಗಿದ್ದವು. ಹಲವು ಆಯಾಮಗಳಲ್ಲಿ ಅವುಗಳನ್ನು ಹುಡುಕುವ ಕೆಲಸ ಪ್ರಾರಂಭಿಸಿದ್ದೆವು. ಆಗ ಲೇಖನದ ಜೊತೆಜೊತೆಗೇ ದೇಮರ ಸಂದರ್ಶನಗಳು, ಹೇಳಿಕೆಗಳು, ವರದಿಗಳು, ಭಾಷಣದ ಅಕ್ಷರ ರೂಪ, ಇವರ ಸಾಹಿತ್ಯ ಕುರಿತ ವಿಮರ್ಶೆ, ಅಭಿಪ್ರಾಯಗಳು, ಪತ್ರಗಳು ಹೀಗೆ ನಾವು ಊಹಿಸಿರದಿದ್ದ ತುಣುಕುಗಳೆಲ್ಲ ಯಾರ‍್ಯಾರಿಂದಲೋ, ಎಲ್ಲೆಲ್ಲಿಂದಲೋ ಬಂದು ನಾವು ಒಡ್ಡಿದ್ದ ಜೋಳಿಗೆಗೆ ಬೀಳುತ್ತಾ ಹೋಯ್ತು. ಅದರಲ್ಲಿನ ಆಯ್ದ ಲೇಖನಗಳನ್ನು ದೇಮ ಮತ್ತೆ ಮತ್ತೆ ತಿದ್ದಿ ಬರೆದು 2012ರಲ್ಲಿ ‘ಎದೆಗೆ ಬಿದ್ದ ಅಕ್ಷರ’ ಸಂಗ್ರಹ ಹೊರತಂದರು.
ಆದರೆ ಆ ಸಂಗ್ರಹದಲ್ಲಿ ಸೇರದ ಹಲವು ವಿಭಿನ್ನ ರೂಪದ ಕೆಲ ಬರಹಗಳು, ಫೋಟೋ, ವಿಡಿಯೋ, ಆಡಿಯೋ ಇತ್ಯಾದಿಗಳು ನಮ್ಮಲ್ಲಿಯೇ ಉಳಿದು ಹೋಯಿತು. ಆಗ ಅದರಲ್ಲಿನ ಮುಖ್ಯವಾದುದನ್ನು ಆರಿಸಿ, ಸೇರಿಸಿ ದಾಖಲೀಕರಣ ಮಾಡುವ ಆಲೋಚನೆಯ ಮೂರ್ತರೂಪವಾಗಿ ಹುಟ್ಟಿಕೊಂಡಿದ್ದು- “ನಮ್ಮ ಬನವಾಸಿ” ಅಂತರ್ಜಾಲ ತಾಣ [ [nammabanavasi.com]. 2014ರಲ್ಲಿ ಹುಟ್ಟಿದ ಈ ತಾಣದ ಹಿಂದಿನ ಶಕ್ತಿ ಮತ್ತು ಪ್ರೇರಣೆಯಾಗಿ, ಕಳೆದ ವರ್ಷದವರೆಗೆ ನಮ್ಮ ಜೊತೆಗಿದ್ದವರು- ಅಂತಃಕರಣದ ಸೆಲೆ ಪ್ರೀತಿಯ ರಾಮು ಕಾಕಾ [ಮೈಸೂರಿನ ಕವಿ, ದಿವಂಗತ ಟಿ.ಎಸ್.ರಾಮಸ್ವಾಮಿ ಉರುಫ್ ಹಾಡುಪಾಡು ರಾಮು]. ಹೆಚ್ಚಿನವರಿಗೆಲ್ಲ ಉಪಯೋಗವಾಗಬಲ್ಲ ಈ ತಾಣ ರೂಪಿಸಬೇಕೆಂದು ನಿರ್ಧರಿಸಿದ ನಂತರ, ನಮ್ಮ ಬಳಗದ ಹುಡುಕಾಟದಿಂದಾಗಿ ಇನ್ನಷ್ಟು ಮಾಹಿತಿಗಳು ಸಿಕ್ಕುತ್ತಾ ಹೋಯ್ತು. ಅವನ್ನು ನೀಡಿದ ದೇಮ ಕುಟುಂಬದವರು, ಸ್ನೇಹ ಬಳಗ, ಪತ್ರಿಕಾ ಬಳಗ, ಫೋಟೋಗ್ರಾಫರ್‌ಗಳು, ಸಹೃದಯರೆಲ್ಲರಿಗೂ ನಾವು ಚಿರಋಣಿ.
ಆದರೆ ನಮಗೆ ಸಿಕ್ಕದಿರುವ ಮಾಹಿತಿಗಳು ಇನ್ನೂ ಹೆಚ್ಚಾಗಿಯೇ ಇರಬಹುದು. ಸಿಕ್ಕಿದ್ದಷ್ಟನ್ನು ಆಯ್ದು, ಆಗಾಗ “ನಮ್ಮ ಬನವಾಸಿ” ತಾಣದಲ್ಲಿ ಜೋಡಿಸುತ್ತಾ ಬಂದಿದ್ದೇವೆ. ಹೀಗೆ ನೂರಾರು ಆತ್ಮೀಯರ, ಸಹೃದಯರ ನೆರವು, ಸಹಕಾರದಿಂದ ಈ ತಾಣ ರೂಪುಗೊಂಡು ಈಗ ಹತ್ತನೆಯ ವರ್ಷ. ದೇಮರ ಕುರಿತು ವಿಶೇಷವಾದ ಮಾಹಿತಿ ಏನಾದರೂ, ಯಾರಲ್ಲಿಯಾದರೂ ಇದ್ದರೆ, ನಮ್ಮ ಬನವಾಸಿಯ ದಾಖಲೀಕರಣಕ್ಕೆ ನೀಡಲು ಬಯಸಿದರೆ, ದಯಮಾಡಿ [email protected] ಗೆ ಕಳಿಸಿಕೊಡಲು ಈ ಮೂಲಕ ಮತ್ತೊಮ್ಮೆ ಎಲ್ಲರಲ್ಲಿ ಮನವಿ ಮಾಡುತ್ತಿದ್ದೇವೆ. ಈ ಹುಡುಕಾಟದಲ್ಲಿ ಸಿಕ್ಕ ಕೆಲ ಸಂದರ್ಶನಗಳನ್ನು ನಮ್ಮ ಬನವಾಸಿ ತಾಣದಲ್ಲಿ ದಾಖಲಿಸಿದ್ದೆವು. ಇನ್ನೂ ಅನೇಕ ಸಂದರ್ಶನಗಳು ಅಲ್ಲಲ್ಲಿ ಚದುರಿ ಹೋಗಿರುವುದು ತಿಳಿದಿತ್ತು. ಅವನ್ನು ಹುಡುಕುತ್ತಾ, ಸಿಕ್ಕವನ್ನು ಸಂಗ್ರಹಿಸುತ್ತಾ ಈಗ ದಶಕವೇ ಕಳೆದುಹೋಗಿದೆ! ಸಂಬಂಧಿಸಿದವರಲ್ಲಿ ಕೇಳಿದರೂ ದೊರೆಯದಿರುವುವೂ, ನಮಗೆ ಸಿಕ್ಕದಿರುವ ಸಂದರ್ಶನಗಳೂ ಸಂಕಲನದೊಳಗೆ ಸೇರದೇ ಉಳಿದು ಹೋಗಿವೆ. ಸಂಗ್ರಹವಾದ ಆಯ್ದ ಮಾತುಕತೆ, ಸಂದರ್ಶನಗಳದ್ದೊಂದು ಸಂಕಲನವನ್ನು ಹೊರ ತರಬೇಕೆಂದು ಮತ್ತೆ ಮತ್ತೆ ಕೇಳಿ, ದೇಮ ಅವರನ್ನು ಒಪ್ಪಿಸುವಷ್ಟರಲ್ಲಿ ಮತ್ತಷ್ಟು ಕಾಲ ಸರಿದಿದೆ. ಅವರ ಒಪ್ಪಿಗೆಗಾಗಿ ಹಾಗೂ ಕೊನೆಗೊಮ್ಮೆ ಎಲ್ಲವನ್ನೂ ಕೂಲಂಕಷವಾಗಿ ಓದಿ ನೋಡಿ, ಅವಶ್ಯಕತೆ ಇರುವೆಡೆ ತಿದ್ದಿ, ನವೀಕರಿಸಿಕೊಟ್ಟಿದ್ದಕ್ಕೆ ಅವರಿಗೆ ನಮ್ಮ ಅನಂತ ಧನ್ಯವಾದಗಳು.
ನಮಗೆ ಸಿಕ್ಕ ತಮ್ಮ ಸಂದರ್ಶನವನ್ನು ಈ ಸಂಗ್ರಹದಲ್ಲಿ ಬಳಸಿಕೊಳ್ಳಲು ಅನುಮತಿ ನೀಡಿದ, ತಾವೇ ತಮ್ಮ ಸಂದರ್ಶನವನ್ನು ಶ್ರಮವಹಿಸಿ ಹುಡುಕಿ ಕೊಟ್ಟ ಸಂದರ್ಶಕರಿಗೂ, ತಮ್ಮಲ್ಲಿ ಸಂಗ್ರಹಿಸಿದ್ದ ಸಂದರ್ಶನವನ್ನು ಸಂಗ್ರಹಕ್ಕೆ ನೀಡಿದ ಸಹೃದಯರಿಗೂ ಹೃದಯಪೂರ್ವಕ ಧನ್ಯವಾದಗಳು. ತುರ್ತಾಗಿ ಈ ಸಂಕಲನವನ್ನು ಮುದ್ರಿಸಲು ಒಪ್ಪಿದ ಮಿತ್ರರಾದ ಅಭಿರುಚಿ ಗಣೇಶ್ ಅವರಿಗೂ, ಅರ್ಥಪೂರ್ಣ ಮುಖಪುಟ ರಚಿಸಿಕೊಟ್ಟ ಕಲಾವಿದ ಸುಧಾಕರ ದರ್ಬೆ ಅವರಿಗೂ ವಂದನೆಗಳು. ಅಂತೂ ಇಂತೂ ಇಷ್ಟು ಕಾಲದ ನಂತರವಾದರೂ ದೇಮರ ಸಂದರ್ಶನಗಳ ಸಂಗ್ರಹ ಹೊರಬರುತ್ತಿರುವುದು ನಮಗಂತೂ ಸಂತಸವನ್ನು ತಂದಿದೆ. ಓದುಗರೂ ಈ ಸಂಕಲನವನ್ನು ಮನಃಪೂರ್ವಕವಾಗಿ ಸ್ವಾಗತಿಸುವರೆಂಬ ನಂಬುಗೆ ನಮ್ಮದು.
0 ಪ್ರತಿಕ್ರಿಯೆಗಳು