ಕಾತ್ಯಾಯಿನಿ ಕುಂಜಿಬೆಟ್ಟು
—
ಡಾ.ಪುರುಷೋತ್ತಮ ಬಿಳಿಮಲೆಯವರು ಆರು ಭಾಷೆಗಳಲ್ಲಿ ಸಂಪಾದಿಸಿರುವ ಕೃತಿ ಎರಡು ದಿನಗಳ ಹಿಂದೆ ನನ್ನ ಕೈ ಸೇರಿತು. ‘ದಲಿತರ ಬಾಳಲ್ಲಿ ಬೆಳಕು ಹಚ್ಚಲು ಹೋರಾಡಿರುವವರಿಗೆ ಈ ಕೃತಿಯನ್ನು ಅವರು ಅರ್ಪಿಸಿದ್ದಾರೆ. ಏಕೆಂದರೆ ಈ ಕೃತಿಯಲ್ಲಿ ತಮಿಳುನಾಡಿನ ಒಂದು ಗ್ರಾಮದ ದಲಿತರ 300 ವರ್ಷಗಳ ಹೋರಾಟದ ಬದುಕಿನ ಇತಿಹಾಸವೇ ಇದೆ. ಇದು ಬರೇ ತಮಿಳುನಾಡಿನ ಒಂದು ಗ್ರಾಮದ ಇತಿಹಾಸವಾಗಿರದೆ ಇಡೀ ವಿಶ್ವದ ಮಣ್ಣ ಬದುಕಿನ ಇತಿಹಾಸವಾಗಿದೆ.
ಆರು ಭಾಷಾ ಶೀರ್ಷಿಕೆಗಳನ್ನು ಮುಖಪುಟದಲ್ಲಿ ಹೊಂದಿರುವ ಈ ಕೃತಿಯ ಮೂಲ ಜೆ. ಬಾಲಸುಬ್ರಹ್ಮಣ್ಯಂ ಅವರ ತಮಿಳು ಕೃತಿ. ಇದನ್ನು ಇಂಗ್ಲಿಷಿಗೆ ಹಾಗೂ ಫ್ರೆಂಚಿಗೆ ಅಜಿತ್ ಖನ್ನಾ, ಕನ್ನಡಕ್ಕೆ ಶ್ರೀನಿವಾಸ ಕಾರ್ಕಳ , ಮರಾಠಿಗೆ ಮಿಲಿಂದ್ ಇ.ಅವಾದ್, ತುಳುವಿಗೆ ನಾನು (ಕಾತ್ಯಾಯಿನಿ ಕುಂಜಿಬೆಟ್ಟು ) ಅನುವಾದ ಮಾಡಿದ್ದೇವೆ.
ಡಾ.ಪುರುಷೋತ್ತಮ ಬಿಳಿಮಲೆಯವರ ಸಂಪಾದಕತ್ವದಲ್ಲಿ ಏಕಕಾಲದಲ್ಲಿ ಆರು ಭಾಷೆಗಳಲ್ಲಿ ಪ್ರಕಟವಾಗಿರುವುದು ಇದರ ಮುಖ್ಯ ಹೆಗ್ಗಳಿಕೆಯಾದರೆ, ಈ ಕೃತಿ – ಕಾಲಾತೀತ ದೇಶಾತೀತ ಭಾಷಾತೀತವಾಗಿ ಜಗತ್ತಿನ ಮಣ್ಣಲ್ಲಿ ನಡೆದಿರುವ ಜನಾಂಗ ದ್ವೇಷ, ವರ್ಣ ದ್ವೇಷಗಳಿಗೆ ಕೈಗನ್ನಡಿಯಾಗಿರುವುದು ವಿಶಿಷ್ಟ ಸಂಗತಿ.
‘ತಮಿಳುನಾಡಿನ ತಿರುಪ್ಪಾನಿ ಕರಿಸಲ್ಕುಲಂನ ದಲಿತರ ಬದುಕಿನ ಕತ್ತಲಿಂದ ಬೆಳಕಿನ ಕಡೆ ನಡೆದ ಹೋರಾಟದ ಬೆಂಕಿ ಹಾದಿಯ ಉತ್ಖನನದಲ್ಲಿ ಲಭಿಸಿರುವ ಆಧಾರಗಳ ಪಂಜಲ್ಲಿ ಆ ಜಾಗದ ಇತಿಹಾಸವನ್ನು ಮಾತ್ರವಲ್ಲ ಇಡೀ ವಿಶ್ವದ ಇತಿಹಾಸವನ್ನು ಒಳಗಣ್ಣಿಂದ ನಾವು ಕಂಡುಕೊಳ್ಳಬಹುದು. ತಮಿಳುನಾಡಿನ ತಿರುಪ್ಪಾನಿ ಕರಿಸಲ್ಕುಲಂ ದಲಿತರ ಏಳು ತಲೆಮಾರುಗಳ ಬದುಕಿನ ಮೇಲೆ – ಕಾಲಚಕ್ರದ ಏಳು ಉರುಳಿನಲ್ಲಿ ಧರ್ಮ ಹಾಗೂ ಅಧಿಕಾರದ ಮುಳ್ಳುಗಳು ಚುಚ್ಚಿರುವ ಮಾಯದ ಗಾಯಗಳು, ಮುಂಬೈ, ಕಲ್ಕತ್ತಾ ಮುಂತಾದ ಕಡೆ ವಲಸೆ ಹೋಗಿ – ಮೊದಲ ಎರಡು ತಲೆಮಾರುಗಳು ಅಲ್ಲಿ ಕೂಲಿಯಾಳುಗಳಾಗಿ, ಕಾರ್ಮಿಕರಾಗಿ ದುಡಿಯುತ್ತ… ಮೂರನೆ ತಲೆಮಾರಿನ ವ್ಯಕ್ತಿ ಬಿಳಿಯರ ಮನೆಯಲ್ಲಿ ಡ್ರೈವರ್ ಆಗಿ, ನಾಲ್ಕನೆ ತಲೆಮಾರಿನ ವ್ಯಕ್ತಿ ಟ್ರಾನ್ಸ್ಪೋರ್ಟ್ ಕಾರ್ ಪೊರೇಷನ್ನಲ್ಲಿ ಅಧಿಕಾರಿಯಾಗಿ – ಅಂದರೆ ನಾಲ್ಕನೇ ತಲೆಮಾರಿನಿಂದ ಏಳನೇ ತಲೆಮಾರಿನವರೆಗೆ ಶಿಕ್ಷಣ, ಚಳುವಳಿಗಳು, ವಲಸೆ, ಉದ್ಯೋಗ, ಉಳಿತಾಯದಿಂದ ದಲಿತರ ಬದುಕಲ್ಲಿ ಉಂಟಾದ ಸಾಮಾಜಿಕ ಸ್ಥಿತ್ಯಂತರದ ಕುಲಶಾಸ್ತ್ರೀಯ ಅಧ್ಯಯನ ಇಲ್ಲಿದೆ.
ಇನ್ನೂರು ವರ್ಷಗಳ ಹಿಂದಿನ ಸಂಕರಕುತಲಂ – ತಿರುಮಲೈ ದಂಪತಿಯ ಮೊದಲ ತಲೆಮಾರು ಹಾಗೂ ಅವರ ಮಕ್ಕಳು (ಎರಡನೇ ತಲೆಮಾರು) ಸ್ವಂತ ಭೂಮಿ ಇಲ್ಲದೆ ಭೂಮಾಲಿಕರ ಭೂಮಿಯಲ್ಲಿ ಕೃಷಿಕೂಲಿಕಾರ್ಮಿಕರು. ಈ ದಲಿತರಿಗೆ ಮದುವೆ, ಹೆರಿಗೆ, ಮರಣ ಎಲ್ಲವೂ ರಾತ್ರಿ ನಡೆಯಬೇಕಿತ್ತು. ಹಗಲು ಹೊತ್ತಲ್ಲಿ ಹೊಲದ ಕೆಲಸಕ್ಕೆ ಇವೆಲ್ಲ ಅಡ್ಡಿ ಎಂದು ಭೂಮಾಲಿಕರು ಹಿಂಸಿಸುತ್ತಿದ್ದರು.
ಮೂರನೇ ತಲೆಮಾರಿನಿಂದ ನಾಲ್ಕನೇ ತಲೆಮಾರಿನವರೆಗೆ ಈ ಊರಲ್ಲೇ ತಮ್ಮ ಕುಟುಂಬಗಳನ್ನು ಬಿಟ್ಟು ಮುಂಬೈ, ಕಲ್ಕತ್ತಾ ಮುಂತಾದ ಕಡೆ ವಲಸೆ ಹೋದ ವ್ಯಕ್ತಿಗಳು ದುಡಿದು, ಉಳಿತಾಯ ಮಾಡಿ ಊರಿನಲ್ಲಿ ತಾರಸಿ ಮನೆಕಟ್ಟಿ , ತಲೆಯೆತ್ತಿ ಭದ್ರ ಜೀವನ ನಡೆಸಿದರು. ಐದನೇ ತಲೆಮಾರಿಂದ ಏಳನೇ ತಲೆಮಾರಿನವರೆಗೆ ಪಡೆದ ಶಿಕ್ಷಣ ಅವರನ್ನು ಬಹಳ ಉನ್ನತ ಸ್ಥಾನಮಾನ ಗೌರವ ಪಡೆಯುವಂತೆ ಮಾಡಿತು. ಈ ಏಳೂ ತಲೆಮಾರುಗಳ ಹೃದಯಗಳನ್ನು ತಿರುಪ್ಪಾನಿ ಗ್ರಾಮದಲ್ಲೇ ಹಿಡಿದಿಟ್ಟ ಕೇಂದ್ರ ಸೂತ್ರ ಪ್ರತಿವರ್ಷ ಎಪ್ರಿಲಲ್ಲಿ ನಡೆಯುತ್ತಿದ್ದ ಕಯಿರುಕುತ್ತು ಉತ್ತವ.
ಈ ಕೃತಿಯು ಕೊನೆಯಾಗುವುದು ಈ ಸಾಲುಗಳಲ್ಲಿ, ” ಆರನೇ ತಲೆಮಾರಿನ ಪ್ರಿಯಾ (ಕನ್ನಯ್ಯನ ಮಗಳು) ಮುಂಬೈಯಲ್ಲಿಯೇ ಹುಟ್ಟಿ ಬೆಳೆದಳು. ಆಕೆ ಅಹಮದಾಬಾದ್ ನ ಐಐಎಎಮ್ ನಿಂದ ಎಂಬಿಎ ಪದವಿ (ಇಎನ್ ಐ ಗೆ ಸಮಾನ) ಪಡೆದಳು. ತನ್ನೊಂದಿಗೆ ಓದಿದ ಉತ್ತರ ಪ್ರದೇಶದವನನ್ನು ಮದುವೆಯಾಗಿ ಈಗ ಸಿಂಗಾಪುರದಲ್ಲಿದ್ದಾಳೆ. ಪ್ರಿಯಾ ತನ್ನ ಗಂಡನೊಂದಿಗೆ ಪ್ರತೀ ಎರಡು ವರ್ಷಕ್ಕೊಮ್ಮೆ ಎಪ್ರಿಲ್ ನಲ್ಲಿ ದೇವಸ್ಥಾನದ ಉತ್ಪವಕ್ಕೆ ಬರುತ್ತಾಳೆ. ಆಕೆ ಹಾಗೆ ಬಂದಾಗ ಅವರ ಐದು ವರ್ಷದ ಮಗ, ಆಕೆಯ ಕೈ ಹಿಡಿದುಕೊಂಡಿದ್ದ. ಏಳನೇ ತಲೆಮಾರಿಗೆ ಸೇರಿದ ಈ ಬಾಲಕ ಮರಿಯಮ್ಮನ್ ದೇವಸ್ಥಾನದ ಕಯಿರುಕುತ್ತು (ಎಪ್ರಿಲ್ ನಲ್ಲಿ ನಡೆಯುವ ದೇವಸ್ಥಾನದ ಉತ್ಸವ) ವನ್ನು ಅಚ್ಚರಿಯಿಂದ ಪಿಳಿಪಿಳಿ ನೋಡುತ್ತಿದ್ದ. ಈತನಿಗೆ ಜಾತಿ, ಅಸ್ಪೃಶ್ಯತೆ, ಸಂಕರಕುತ್ತಲಮ್ ಮತ್ತು ಸರ್ವೈಕರನ್ ಬಗ್ಗೆ ಗೊತ್ತಿರುವುದಕ್ಕೆ ಸಾಧ್ಯವೇ ಇಲ್ಲ.” ( ಶ್ರೀನಿವಾಸ ಕಾರ್ಕಳ, ‘ಹೂತು ಹೋದ ಹಾದಿ’, ಪುಟ ಸಂಖ್ಯೆ 61)
ಈ ಕಿರಣ ವಾಕ್ಯಗಳಲ್ಲೇ ಪ್ರತಿ ಗ್ರಾಮದ ದಲಿತರ ಬದುಕಿನ ಗತ ಭೂತ ಇತಿಹಾಸವಿದೆ, ವರ್ತಮಾನದ ನಡಿಗೆ ಇದೆ, ಶಿಕ್ಷಣದ ಮೂಲಕ ಪ್ರತಿಯೊಬ್ಬ ದಲಿತನ ಬದುಕು ವಿಶ್ವಾತ್ಮಕ ಬೆಳಕು ಆಗುವ, ಕುವೆಂಪು ಮಾತಿನಂತೆ “ನೂರು ಮತದ ಹೊಟ್ಟ ತೂರಿ, ಎಲ್ಲ ತತ್ವದಲ್ಲೆ ಮೀರಿ ಚೇತನವು ಅನಿಕೇತನವಾಗುವ ” ಭವಿಷ್ಯದ ಮುನ್ಸೂಚನೆಯಿದೆ.
ಒಟ್ಟಿನಲ್ಲಿ ಜಾತಿ , ವರ್ಗ , ಲಿಂಗ ತಾರತಮ್ಯ ಸಮಾಜದ ಘೋರ ಕಾಯಿಲೆಗಳು. ಉದ್ಯೋಗ ಕ್ಷೇತ್ರದಲ್ಲಿ, ಸಮಾಜದಲ್ಲಿ ಬಿಡಿ – ನಮ್ಮ ಸ್ವಂತ ಮನೆಯಲ್ಲೇ ತಾರತಮ್ಯವಾದರೆ ನಮ್ಮ ಮನಸ್ಸು ಸಿಡಿದು ಚೂರಾಗುತ್ತದೆ. ಮನೆಯ
ಅಮ್ಮ, ಅಣ್ಣನ ಊಟದ ಬಟ್ಟಲಿಗೆ ಘಮಘಮ ತುಪ್ಪ ಬಡಿಸಿ, ತನ್ನ ಬಟ್ಟಲಿಗೆ ಎಣ್ಣೆ ಬಡಿಸಿದರೆ ಮನೆಯ ಮಗುವೇ ತಾರಸಿ ಹಾರುವಂತೆ ಕಿರುಚಾಡಿ ಅರಚಾಡಿ.. ಛದಿ ಹಿಡಿದು ನೆಲದಲ್ಲಿ ಚೇರಂಟೆಯಂತೆ ಉರುಳಾಡಿ ಹೊರಳಾಡಿ … ಉಪವಾಸ ಕುಳಿತಾದರೂ ತಮ್ಮ ಹಕ್ಕನ್ನು ಪಡೆದುಕೊಳ್ಳುತ್ತವೆ.
ಹೀಗಿರುವಾಗ… ‘ದೇವರು ಕೊಟ್ಟರೂ ಪೂಜಾರಿ ಬಿಡ’ ಎಂಬಂತೆ ಈ ಭೂಮಿಯಮ್ಮ ತನ್ನ ಮಕ್ಕಳಿಗೆ ತಲೆತಲಾಂತರದಿಂದ ನೀಡುತ್ತಿರುವ ಮಣ್ಣು ಹಾಗೂ ನೀರನ್ನು ಮಣ್ಣ ಮಕ್ಕಳಿಗೇ ಸಿಗದಂತೆ ಮಾಡಿ ತಮ್ಮ ಪೀಳಿಗೆಗೇ ತುಪ್ಪದಂತೆ ತಪ್ಪದಂತೆ ಬಡಿಸಿದ ಯಥೇಚ್ಛ ಅನುಭವಿಸಿದ ಅಧಿಕಾರಶಾಹಿ ಕುರುಡು ಕೈಗಳ ದರ್ಪವನ್ನು ಒಂದು ಬಡವರ್ಗ ಸಹಿಸಿಕೊಂಡು ಸಹಿಸಿಕೊಂಡು … ಕೊನೆಗೊಮ್ಮೆ ಬಂಡೆದ್ದು ಮಾಡಿಕೊಂಡ ಹೋರಾಟದ ಹೆದ್ದಾರಿಯ ಚಾರಿತ್ರಿಕ ಉತ್ಖನನವನ್ನು ನಡೆಸುತ್ತದೆ ಜೆ.ಬಾಲಸುಬ್ರಹ್ಮಣ್ಯಂ ಅವರ ‘A Buried Path’.
ಏಳು ತಲೆಮಾರಿನ ಹಂತ ಹಂತದ ಬೆಳವಣಿಗೆಯ ಕೇಂದ್ರದಲ್ಲಿ ಇರುವುದು ದೇವೇಂದ್ರರ್, ಆದಿದ್ರಾವಿಡರ್ ಮತ್ತು ನಾಡಾರ್ ಸಮುದಾಯಗಳು ೨೦ನೇ ಶತಮಾನದ ಆರಂಭದಲ್ಲಿ ‘ತಿರುಪ್ಪಾನಿ ಕರಿಸಲ್ಕುಲಂ ರೈತ ರಕ್ಷಣಾ ಸಂಘ’ಕಟ್ಟಿಕೊಂಡು ತಮ್ಮ ಮೇಲೆ ಜಾತಿ ದೌರ್ಜನ್ಯ , ರೈತ ದೌರ್ಜನ್ಯ ನಡೆಸುತ್ತಿದ್ದ ಮೇಲ್ಜಾತಿಯವರ ವಿರುದ್ಧ ಹಂತ ಹಂತವಾಗಿ ನಡೆಸಿದ ತೀವ್ರವಾದ ಐತಿಹಾಸಿಕ ಚಳುವಳಿಗಳ ಹೋರಾಟದ ಹಾದಿ. ಮುಂದೆ ಈ ಸಂಘದ ಮುಂಚೂಣಿಯಲ್ಲಿದ್ದ ಮಂತಿರ ತಾತನ ಕೊಲೆಯೊಂದಿಗೆ, ದಲಿತರು ದಾಖಲಿಸಿದ ಈ ಕೊಲೆ ಕೇಸನ್ನು ಒತ್ತಾಯ ಒತ್ತಡ ಹೇರಿ ಆಳುವ ಪಕ್ಷಗಳು ಹಿಂಪಡೆಯುವ ಹಾಗೆ ಮಾಡಿ… ಇಡೀ ಉಗ್ರ ಹೋರಾಟದ ಹಾದಿಯು ಕಾಲಚಕ್ರದಡಿ ಹೂತು ಹೋದ ಇತಿಹಾಸವನ್ನು ೨೦೦೦ನೇ ಇಸವಿಯಲ್ಲಿ ಬಾಲಸುಬ್ರಹ್ಮಣ್ಯಂ ಅವರು ಮನೆಯ ಹೊರಗೆ ಎಸೆದಿದ್ದ ಮಂತಿರತಾತನ ಕಬ್ಬಿಣದ ಪೆಟ್ಟಿಗೆಯಲ್ಲಿ ದೊರೆತ ದಾಖಲೆ ಪತ್ರಗಳ ಆಧಾರದಲ್ಲಿ ಅಧ್ಯಯನ ನಡೆಸಿ ಬರೆದಿದ್ದಾರೆ.
ನಿಷ್ಪಕ್ಷವಾಗಿ ಸೂರ್ಯ ಕೊಡುತ್ತಿರುವ ಬೆಳಕನ್ನು.. ಮುಗಿಲು ಸುರಿಸುತ್ತಿರುವ ಮಳೆಯನ್ನು… ಸ್ವಚ್ಛಂದವಾಗಿ ಬೀಸುವ ಗಾಳಿಯನ್ನು
ನಿರ್ಬಂಧಿಸಲು ಯಾವ ಜಾತಿಗೂ, ಯಾವ ಧರ್ಮಕ್ಕೂ , ಯಾವ ಅಧಿಕಾರಕ್ಕೂ, ಯಾವ ವಿಜ್ಞಾನಕ್ಕೂ… ಸಾಧ್ಯವೇ ಇಲ್ಲ.
ಎರಡು ಕಾಲು, ಎರಡು ಕೈ, ಒಂದು ಹೊಟ್ಟೆ, ಒಂದು ಬಾಯಿ, ಒಂದು ಮಂಡೆ, ಒಂದೇ ಒಂದು ಹೃದಯದ ‘ಮಣ್ಣಗೊಂಬೆ’ಗಳು ನಾವು. ಮಣ್ಣನ್ನೇ ಸೇರಿ ಮಣ್ಣೆೇ ಆಗುವೆವು. ಇದನ್ನು ತಪ್ಪಿಸಲು ಕೂಡ ಯಾರಿಂದಲೂ ಸಾಧ್ಯವೇ ಇಲ್ಲ.
‘ ಎಂಟು ಗೇಣಿನ ದೇಹ ರೋಮಗಳೆಂಟು ಕೋಟಿಯು ಕೀಲ್ಗಳು ಅರುವತ್ತೆಂಟು ಮಾಂಸದ ಮನೆಯೊಳಗೆ ನೆಂಟ ನೀ ಬಂದಿರ್ದು ಅಗಲಿದೊಡೆ ಒಣ ಹೆಂಟೆಯಲಿ ಮುಚ್ಚುವರು ದೇಹದೊಳುಂಟೆ ಪುರುಷಾರ್ಥ ” ಅಂದಿದ್ದಾರೆ ಕನಕದಾಸರು. ಈ ದೇಹದ, ಈ ಬದುಕಿನ ನಶ್ವರತೆ ಗೊತ್ತಿದ್ದವ ಪ್ರೀತಿ,ನೀತಿಯ ದಾರಿ ಬಿಡಲಾರ, ಇನ್ನೊಂದು ಜೀವದ ಅನ್ನದ ಬಟ್ಟಲನ್ನು ಖಂಡಿತ ಕಸಿದುಕೊಳ್ಳಲಾರ, ಇದು ನಿಶ್ಚಯ.
ಈ ಕೃತಿಯನ್ನು ತುಳುವಿಗೆ ಅನುವಾದ ಮಾಡಲು ಅವಕಾಶ ನೀಡಿದ ಗುರು ಸಮಾನರಾದ ಡಾ. ಪುರುಷೋತ್ತಮ ಬಿಳಿಮಲೆಯವರಿಗೆ ನಾನು ಚಿರಋಣಿ.
0 ಪ್ರತಿಕ್ರಿಯೆಗಳು