ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಿಕ್ಕಿದೆ.
ಕರಾವಳಿ ಲೇಖಕಿ ವಾಚಕಿಯರ ಸ೦ಘದ ಪ್ರಥಮ ಲೇಖಕಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಪುತ್ತೂರು ಹನ್ನೊ೦ದನೇ ತಾಲೂಕು ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ೨೦೦೫ರಲ್ಲಿ. ದ.ಕ. ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಯಾಗಿದ್ದರು.
10
ಅಮ್ಮಮ್ಮ ಚಕ್ರೀಮನೆಯಲ್ಲಿ ಸೋಮಾರಿತನವಿಲ್ಲದೆ ಗೈಯ್ದರೂ ಗಂಡುಬೀರಿ, ಸಿಡಿಗುಂಡು, ದೊಂಡೆಬಾಯಿ, ಕೋಪಿಷ್ಟೆ ಒಂದೇ ಎರಡೇ ಅಬ್ಬಬ್ಬ, ಏನೆಲ್ಲ ಬಿರುದುಗಳು! ‘ನಾನಾದುದಕ್ಕೆ ಈ ಮನೇಲಿ ಏಗಿ ಎಲ್ಲಾ ಸೈಸಿಕೊಂಡೆ. ಬೇರೆ ಜನ ಆಗಿದ್ರೆ ಚಕ್ರಿ ಹೊಳೆಗೆ ಹಾರಿಕೊಳ್ತಿದ್ದರು’ ಎಷ್ಟು ಬಾರಿ ಹೇಳುವಳೋ.
ಹೆಚ್ಚಿನ ಕಷ್ಟಗಳನ್ನು ಕಾಣದಿದ್ದ ಅಮ್ಮಮ್ಮ ಬಿಸುಸುಯ್ಯುತ್ತ ಹಾಗೆ ಹೇಳುವುದು ವಾಡಿಕೆ ಮಾತು. ನಾರ್ಣಜ್ಜನ ಮೇಲೆ ಸ್ವಲ್ಪ ಅಸಮಾಧಾನ ಇರಬಹುದು. ಎಷ್ಟಾದರೂ ನಾರ್ಣಜ್ಜನ ಎರಡನೇ ಹೆಂಡತಿ. ಮದುವೆಗೆ ಮೊದಲು ಅಮ್ಮಮ್ಮನಿಗೆ ಎಲ್ಲರೂ ಗುಟ್ಟು ಮಾಡಿದ್ದು ಯಾಕೋ. ಎಂಟರ ಬಾಲೆಗೆ ಹದಿನೆಂಟು ಮೊಳದ ಸೀರೆ ಉಡಿಸಿದ್ದರಂತೆ. ಮೈ ತುಂಬ ಭಾರ ಆಗುವಷ್ಟು ಚಿನ್ನದ ಒಡವೆಗಳು. ಅವಳ ಅಪ್ಪನ ಮನೆಯಲ್ಲಿ ಯಾರೂ ನಿರೀಕ್ಷಿಸದಷ್ಟು! ಸಿರಿವಂತರ ಮನೆ.
ಹಿರಿಯರು ಗೇಣಿಗೆ ಕೊಟ್ಟ ಸುಮಾರು ಹತ್ತಾರು ಎಕರೆ ಭತ್ತದ ಗದ್ದೆಗಳು, ತೆಂಗಿನ ಮರಗಳಿಂದ ಬರುತ್ತಿರುವ ಉತ್ಪತ್ತಿಗೆ ಪಾಲುದಾರರು ನಾರ್ಣಜ್ಜನೂ ಸೇರಿ ಐವರಿದ್ದರು. ಆಯಿ ಹುಟ್ಟಿದ ಮೇಲೆ ಕುಟುಂಬ, ಜಮೀನು ಪಾಲಾಗಿ ನಾರ್ಣಜ್ಜನಿಗೆ ಚಕ್ರಹೊಳೆಯ ಎಡಭಾಗದ ದಂಡೆಯ ಮೇಲಿನ ಜಾಗ ಸಿಕ್ಕಿತು. ನಾರ್ಣಜ್ಜ ಕಷ್ಟಪಟ್ಟು ದುಡಿಯುವ ಕುಳ. ಪಾಲಿಗೆ ಬಂದದ್ದು ಅಲ್ಲದೆ ಸ್ವಲ್ಪ ಕಾಡು ಕಡಿದು ಗದ್ದೆ ಮಾಡಿಸಿದ್ದು, ತೆಂಗು ಕೃಷಿ ಹೆಚ್ಚಿಸಿದ್ದು, ಕಬ್ಬಿನ ಬೆಳೆಗೆ ಕೈಹಾಕಿದ್ದು ಎಲ್ಲಾ ಹಳೆ ಸಂಗತಿ. ಅಮ್ಮಮ್ಮನಿಗೆ ಸ್ವತಂತ್ರ ಬದುಕು ಸಿಕ್ಕಿತ್ತು. ಇದೆಲ್ಲ ಆಯಿ ಹುಟ್ಟಿದ ಗಳಿಗೆ ಕಾರಣವೆಂಬ ನಂಬಿಕೆ.
‘ನಿನ್ನ ಅಮ್ಮ ಮಹಾಲಕ್ಷ್ಮಿ. ಸಾಕ್ಷಾತ್ ಲಕ್ಷ್ಮಿ ಸ್ವರೂಪಳು. ಮಹಾಲಕ್ಷ್ಮಿ ಹೆಸರಿಡುವ ಎಂದರೆ ನಿನ್ನ ಅಜ್ಜ ಶರಾವತಿ ಹೆಸರೇ ಆಗಬೇಕೆಂದರು. ನನ್ನ ಮಾತೆಲ್ಲಿ ಕೇಳ್ತಾರೆ? ಹೂಂ ಅಂದೆ. ಹೇಳು ಗೌರಿ, ಮಹಾಲಕ್ಷ್ಮಿ, ಶರಾವತಿ ಇದರಲ್ಲಿ ಯಾವ ಹೆಸರು ಚೆಂದ?’
‘ನನಗೆ ಆಯಿ ಹೆಸರು ಚೆಂದ’ ಮೂಗೇರಿಸಿದ್ದ ನಾಣಿ.
‘ಆಯಿಯೋ, ನಾಯಿಯೋ! ಗೌರಿ ಹುಟ್ಟಿದ ನಂತರ ಅಮ್ಮ, ಅಬ್ಬೆ ಬದಲು ಆಯಿ ಆದ್ಲು’
‘ಅದು ಹೇಗೆ?’
‘ನಮ್ಮ ಮನೆ ಹಾಡಿಯಾಚೆ ಸೊನಗಾರನ ಸಂಸಾರ ಇತ್ತಲ್ದ, ಅವರ ಮನೆ ಬದಿಗೆ ಗೋವಾ ಕಡೆಯ ಒಂದು ಸಾರಸ್ವತ ಕುಟುಂಬ ಇತ್ತು. ಅವು ಈಗ ಆ ಜಾಗ ಬಿಟ್ಟು ಹೋಗಿ ಎಷ್ಟೋ ವರ್ಷ ಆತು. ಅವರ ಮನೆ ಮಕ್ಕಳು ತಮ್ಮ ತಾಯಿಗೆ ಆಯಿ ಅಂತಿದ್ದರು. ನಮ್ಮ ಶರಾವತಿ ಸಣ್ಣ ಹುಡುಗಿ. ಆಯಿ ಹೆಸರು ಹೆಚ್ಚು ಹಿಡಿಸಿತ್ತು. ನಿಮಗೂ ಆ ಹೆಸರನ್ನು ಅಭ್ಯಾಸ ಮಾಡ್ಸಿದಳು. ನಾ ಬ್ಯಾಡ ಅಂದ್ರೆ ಅದು ಕೇಳುತ್ತಾ? ಪ್ರೀತಿ ವಾತ್ಸಲ್ಯದ ಕರೆಗೆ ಯಾವ ಹೆಸರಾದರೆ ಏನಾತು?
ಗಂಪತಿ ಮಾವ, ಅಪ್ಪೂಮಾವನ ಮಕ್ಕಳು ಗಿರಿಧರ, ವಿನಾಯಕ, ವೆಂಕಟಲಕ್ಷ್ಮಿ, ದುರ್ಗಾಲಕ್ಷ್ಮಿ ಈ ಮೊಮ್ಮಕ್ಕಳ ವಯಸ್ಸಿನವರೆ. ಆದರೂ ಆಗೀಗ ಮಾತು ಕೃತಿಯಲ್ಲಿ ಅವಳ ಪ್ರೀತಿ, ವಾತ್ಸಲ್ಯ ಈ ಮೊಮ್ಮಕ್ಕಳನ್ನೇ ಹೆಚ್ಚು ತೂಗುವುದು ಅಂಗೈ ಕನ್ನಡಿಯಂತೆ ಸ್ಪಷ್ಟ. ಗಿರಿಧರ ಮೂದಲಿಸುತ್ತಾನೆ, ‘ಅವರೇನು ದೇವಲೋಕದಿಂದ ಇಳಿದು ಬಂದವರಾ?’ ವೆಂಕಟಲಕ್ಷ್ಮಿ ಮುಖ ಸಿಂಡರಿಸಿ, ‘ಆಟಕ್ಕೆ, ತಿಂಡಿಗೆ, ಸ್ನಾನಕ್ಕೆ ಹೋಗ್ಲಿ ತಲೆ ಬಾಚೂದಕ್ಕೂ ಅಮ್ಮಮ್ಮನಿಂದ ಅವಕ್ಕೆ ಮೊದಲ ಉಪಚಾರ. ತಿಂಡಿ ಕಾಣು, ಅಡಗ್ಸಿ ಹುಗ್ಗಿಸಿ ಗುಟ್ಟಾಗಿ ಕೊಡ್ತುಳು. ಕೇಳೀರೆ ಪಾಪ ಅಂತೆ’ ಎನ್ನುವಳು. ವಿನಾಯಕ ಕೆಲವೊಮ್ಮೆ ಮಾತೇ ಆಡುವುದಿಲ್ಲ.
ಒಮ್ಮೆ ಎಲ್ಲ ಮಕ್ಕಳೂ ಸೇರಿ ಎರಡು ಕೊತ್ತಳಿಗೆ ಸೇರಿಸಿ ಕಟ್ಟಿ ಅದರಲ್ಲಿ ಒಬ್ಬ ಕುಳಿತು ಉಳಿದವರು ಅವನನ್ನು ಎಳೆಯುವ ಆಟ. ನಾಣಿಯ ಹೊರತಾಗಿ ಒಬ್ಬೊಬ್ಬರೇ ಕುಳಿತು ಎಲ್ಲರೂ ಎಳೆದಾಯ್ತು. ಉಳಿದವನು ನಾಣಿ ಒಬ್ಬನೇ. ಗಿರಿಧರನಿಗೆ ಆಟ ಸಾಕೆಂದು ಓಡಿಹೋದ. ಉಳಿದವರೂ ಓಡಿದರು ಅವನ ಹಿಂದೆ. ನಾಣಿ ಅಳುತ್ತ ಅಮ್ಮಮ್ಮನ ಬಳಿ ದೂರು ತಂದು ಅವಳು ಎಲ್ಲರನ್ನೂ ಗದರಿಸಿ ಮನೆ ರಂಪ.
ಇನ್ನೊಮ್ಮೆ ಇದನ್ನೇ ನೆಪ ಮಾಡಿದ ಗಿರಿಧರ ನಾಣಿಯ ಕಿವಿ ಹಿಂಡಿ ಹೊಡೆದದ್ದು ಅಮ್ಮಮ್ಮನಿಗೆ ಗೊತ್ತಾಗಿ ಅವಳು ಸವುದೆ ತುಂಡಿನಿಂದ ಗಿರಿಧರನಿಗೆ ಬಾಸುಂಡೆ ಬರುವಂತೆ ಬಾರಿಸಿ, ಈಗಲೂ ನೆನಪಿದೆ ಗೌರಿಗೆ. ಪಾಪ, ಎರಡು ದಿನ ಮೈಕೈ ನೋವು.ಜ್ವರ. ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಹಚ್ಚುವ, ಮಗನ ಮಕ್ಕಳು ಮಗಳ ಮಕ್ಕಳೆಂದು ಭೇದ ತೋರುವ ಅಮ್ಮಮ್ಮನ ಸ್ವಭಾವ ಶಂಕರಿ ಅತ್ತೆಗೆ, ಸುಭದ್ರ ಅತ್ತೆಗೆ ನುಂಗಲಾರದ ಬಿಸಿ ತುಪ್ಪದಂತೆ. ಹಿರಿಯರಿಗೆ ಎದುರು ಹೇಳುವ ಧೈರ್ಯವಿಲ್ಲ. ‘ನಮ್ಮ ಮಕ್ಕಳಿಗೆ ಸವುದೆ ತುಂಡು ಎತ್ತುವ ಅತ್ತೆ ಗೌರಿ, ನಾಣಿಯನ್ನು ಅದರಲ್ಲೇ ಹೊಡೀಲಿ ಕಾಂಬಾ? ಒಂದು ಹೂವಿಂದಲೂ ಪೆಟ್ಟ ಹಾಕೀರೆ ಕೇಳು’ ಅವರಲ್ಲೇ ಗುಸು ಗುಸು ಮಾತಾಡಿದ್ದು ಅಮ್ಮಮ್ಮನ ಕಿವಿ ತಲುಪಿ ಅದಿನ್ನೊಂದು ರಾಧಾಂತ.
ಇದೆಲ್ಲಕ್ಕಿಂತ ಪ್ರಾಣಾಪಾಯ ಆದದ್ದು ಇನ್ನೊಂದು ಸಂಗತಿ. ನೆಲ ಮಟ್ಟದಲ್ಲಿರುವ ಚಕ್ರಿ ಮನೆ ಭಾವಿಯಲ್ಲಿ ಧಾರಾಳ ನೀರು. ಮಳೆಗಾಲದಲ್ಲಿ ಕೆಲವೊಮ್ಮೆ ಭಾವಿ ತುಂಬಿ ನೀರು ಹೊರ ಚೆಲ್ಲಿ ಹರಿಯುತ್ತದೆ. ಬೇಸಿಗೆಯಲ್ಲಿ ಬತ್ತುವುದಿಲ್ಲ. ಆದರೆ ಈ ಭಾವಿಗೆ ಮೇಲೆ ಕಟ್ಟೆಯಿಲ್ಲ. ನೀರು ಎಳೆದುಕೊಳ್ಳುವ ಭಾಗಕ್ಕೆ ಜೋಡಿಸಿ ಇಟ್ಟ ನಾಲ್ಕು ಅಡಿಕೆಮರದ ತುಂಡುಗಳು. ಅದರ ಮೇಲೆ ನಿಂತು ಸೊಂಟ ಬಗ್ಗಿಸಿ ಕೊಡಪಾನಕ್ಕೆ ಹಗ್ಗ ಕಟ್ಟಿ ಕೆಳಗಿಳಿಸಿ ನೀರೆಳೆಯಬೇಕು. ಕೊಡಪಾನ ಕೆಳಗಿಳಿಯುವಾಗ, ಮೇಲೆ ಎಳೆಯುವಾಗ ಎಚ್ಚರ ಬೇಕು. ಎಚ್ಚರ ತಪ್ಪಿದರೆ ಗುಳುಂ ಭಾವಿ ಒಳಗೆ! ಮನೆ ಎದುರಿನ ತೆಂಗಿನ ತೋಟಕ್ಕೆ ನೀರು ಬಿಡಲು ಏತ ಇದೆ. ಏತದ ಒಂದು ತುದಿಗೆ ಭಾರದಕಲ್ಲು.
ಮತ್ತೊಂದು ತುದಿಗೆ ಉದ್ದದ ಕವಂಗ ತರಹದ ಹಿತ್ತಾಳೆಯ ಪಾತ್ರೆ. ಪಾತ್ರೆಯನ್ನ ಕೆಳಗಿಳಿಸುವಾಗ ಕಲ್ಲು ಮೇಲಕ್ಕೇರುತ್ತದೆ. ನೀರು ತುಂಬಿದ ಪಾತ್ರೆ ಮೇಲಕ್ಕೆ ಬರುವಾಗ ಕಲ್ಲು ಕೆಳಗಿಳಿಯುತ್ತದೆ. (ಜೊಟ್ಟೆ ಎಂದರೆ ಇದೇ) ಮನೆಖರ್ಚಿಗೆ ಜೊಟ್ಟೆ ನೀರು. ಅಡಿಗೆಗೆ ಮಾತ್ರ ಎಳೆದು ತರುವ ನೀರು. ಅದೇನಾಯಿತೋ, ಒಂದುದಿನ ವಿನಾಯಕ ಮತ್ತು ಗಿರಿಧರನ ಕಿತಾಪತಿಯಿಂದ ಗೌರಿಗೆ ಸಿಟ್ಟು ಬಂದು ಜೊಟ್ಟೆಯಲ್ಲಿ ನೀರು ಎಳೆಯಲು ಸಿದ್ಧಳಾಗಿ, ಅಲ್ಲ, ಈಗಲೂ ಗೌರಿಗೆ ಭಾವಿ ಎಂದರೆ ಹೆದರಿಕೆ ನಿಂತಿಲ್ಲ. ಆದಿನ ಇನ್ನೂ ಜೊಟ್ಟೆ ಕೆಳಗಿಳಿದಿಲ್ಲ, ಅಡಿಕೆ ಮರದ ಅಂಚಿನಿಂದ ಜಾರಿ ಅವಳು ಸೀದಾ ಜೊಟ್ಟೆ ಒಳಗೆ ಬಿದ್ದು ಅದು ಭಾವಿ ನೀರಿನಲ್ಲಿ ಮುಳುಗಿಯಾಯ್ತು.
ಪೂರಾ ತಳ ಮುಟ್ಟಿದ ಜೊಟ್ಟೆ ಅವಳ ಸಮೇತ ಒಮ್ಮೆ ಮೇಲೆ ಬಂದು ಪುನಃ ಮುಳುಗಿ ಆಮೇಲೆ ಏನಾಯಿತೋ ಗೌರಿಗೆ ನೆನಪಿಲ್ಲ. ಎಚ್ಚರವಾದಾಗ ಅವಳು ಜಗಲಿಯಲ್ಲಿ ಮಲಗಿದ್ದಾಳೆ. ಸುತ್ತಲೂ ಜನವೇ ಜನ. ಆಯಿ ಅಳುತ್ತಿದ್ದಾಳೆ ದೊಡ್ಡದಾಗಿ. ಆಮೇಲೆ ತಿಳಿಯಿತು, ಅವಳು ಜೊಟ್ಟೆ ಸಮೇತ ಭಾವಿಗೆ ಬಿದ್ದಳೆಂದು ವಿನಾಯಕ ಬೊಬ್ಬೆ ಹಾಕಿ ತೋಟದಲ್ಲಿದ್ದ ಚಕ್ರಿಅಜ್ಜ ಧಾವಿಸಿ ಬಂದು ಸಮಯಪ್ರಜ್ಞೆಯಿಂದ ಅವಳನ್ನು ಮೇಲೆ ಎಳೆದಿದ್ದ, ಹೊಟ್ಟೆ ಸೇರಿದ ನೀರನ್ನು ತೆಗೆದಿದ್ದ. ಸುಭದ್ರತ್ತೆ, ಶಂಕರಿ ಅತ್ತೆ ತಮ್ಮ ಮಕ್ಕಳಿಗೆ ಎಷ್ಟು ಗದರಿಸಿದರೋ. ‘ಕಂಟಕ ಇತ್ತು, ಕಳೀತು’ ಸಮಾಧಾನ ಎಲ್ಲರಿಗೂ.
ವಿನಾಯಕನಿಗೆ ಪಶ್ಚಾತ್ತಾಪವಾಗಿತ್ತು. ಅವನು, ಗಿರಿಧರ ಸದಾಕಾಲ ಅವಳ ಎರಡು ಜಡೆ ಹಿಡಿದು ‘ಕರೆಗಂಟೆ ಒಮ್ಮೆ ಹೊಡೆದರೆ ಸಾಕು’ ಹಾಡುತ್ತ ಓಡುವಾಗ ನಗುತ್ತಿದ್ದಳು ಪುಟ್ಟಗೌರಿ. ಅವಳ ಆ ಎರಡು ಜಡೆ ಎಂದರೆ ನಾಣಿಗೆ ಮಹಾ ಪ್ರೀತಿ. ಯಾವಾಗಲೂ ಆಯಿಯೇ ಕೂದಲಿಗೆ ಎಣ್ಣೆ ಹಚ್ಚಿ ಮರದ ಹಣಿಗೆಯಿಂದ ನಿಧಾನಕ್ಕೆ ನೋವಾಗದಂತೆ ಬಾಚುವಳು. ಗುಂಗುರು ಕೂದಲು, ಬಾಚಿದಂತೆ ಕೆದರಿ ಹರಡಿಕೊಳ್ಳುತ್ತದೆ. ಒಮ್ಮೊಮ್ಮೆ ನಾಣಿ ತಾನೂ ಅವಳ ತಲೆ ಬಾಚಿ ಜಡೆ ಹಾಕಲು ನೋಡುತ್ತಿದ್ದ.
ಪುಟ್ಟ ಕೈಗಳಲ್ಲಿ ಕೂದಲು ಹಿಡಿಯಲಾರದೆ ಇವನು ಎಳೆಯುವಾಗ ‘ಅಯ್ಯೋ ಬಿಡು ನನ್ನ ಕೂದಲು, ತಲೆ ನೋಯ್ತಿದೆ’ ಎಂದರೂ ಅವನ ಚೇಷ್ಟೆ ಅವಳಿಗಿಷ್ಟವೇ.ಆದರೆ ದೊಡ್ಡವಳಾದಂತೆ ನಾಣಿಯ ಹೊರತಾಗಿ ಬೇರೆಯವರು ಖುಷಾಲಿಗೂ ಜಡೆ ಮುಟ್ಟಬಾರದು. ಆದರೆ ವಿನಾಯಕ, ಗಿರಿಧರನಿಗೆ ಅವಳ ಜಡೆ ಎಳೆಯುವುದೇ ಒಂದು ಪಾಡು. ಆಗೆಲ್ಲ ಜಡೆಕೂದಲು ತಲೆಬುಡದಿಂದ ಕಿತ್ತು ನೋಯುವಾಗ ಗೌರಿ ಕಣ್ಣುಗಳಲ್ಲಿ ಧಾರಾಕಾರ ನೀರು. ಇವರಿಗೋ ನಗು, ನಗು. ಇವತ್ತು ತಮ್ಮ ಚೇಷ್ಟೆಯಿಂದ ಅವಳು ಭಾವಿಗೆ ಬಿದ್ದು ಉಳಿದದ್ದೇ ಪುಣ್ಯ.
‘ಗೌರಿ, ನಾ ಬೇಕೆಂದೇ ಮಾಡ್ಲಿಲ್ಲೆ. ನೀ ಜೊಟ್ಟೆ ಹಿಡೀವಾಗ ಗಿರಿ ನಿನ್ನ ಜಡೆ ಎಳೆದ, ನಾ ಹಪ್ ಹೇಳಿದ್ದು ಅಷ್ಟೇ. ಅಷ್ಟಕ್ಕೆ ಭೂತ ಕಂಡಂತೆ ಹೆದರೂದಾ? ತಪ್ಪಾತು ಗೌರಿ, ಎಲ್ಲಿ ಒಂದ್ಸಲ ನಗು ಕಾಂಬ?’ ಬೆಣ್ಣೆ ಸವರುವ ಮಾತಾಗಿತ್ತೇ? ಅಲ್ಲವಾದರೆ ಶಂಕರಿ ಅತ್ತೆ ತಮ್ಮ ಹುಡುಗಿಯರಿಗೆ ತಂದ ತರಹದ್ದೇ ಗೌರಿಗೂ ಸ್ವಲ್ಪ ಸಣ್ಣ ಗೊಂಬೆ ತಂದಿದ್ದಳು. ಜರಿ ಅಂಗಿ, ಕೆಂಚುಕೂದಲಿನ ಗೊಂಬೆ ಮುದ್ದಾಗಿತ್ತು.
| ಇನ್ನು ನಾಳೆಗೆ |
ಕುತೂಹಲ ಸಹಿತ ಸರಾಗವಾಗಿ ಸಾಗುತ್ತಿದೆ.
ಮಕ್ಕಳು ಒಂದೊಂದು ರೀತಿಯಲ್ಲಿ ಗೌರಿಯನ್ನು ಕೆಣಕುವ ಪರಿ ಬಾಲ್ಯವನ್ನು ನೆನಪಿಸಿತು.