ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಕಾಲಗೆಜ್ಜೆ ಸಪ್ಪಳ ಕೇಳ್ತಾ ಇರ್ಲಿ…

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಿಕ್ಕಿದೆ.

ಕರಾವಳಿ ಲೇಖಕಿ ವಾಚಕಿಯರ ಸ೦ಘದ ಪ್ರಥಮ ಲೇಖಕಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಪುತ್ತೂರು ಹನ್ನೊ೦ದನೇ ತಾಲೂಕು ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ೨೦೦೫ರಲ್ಲಿ. ದ.ಕ. ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಯಾಗಿದ್ದರು.

9

‘ಹೀಗೆ ಹೇಳಿ ಕಮಲಿಯನ್ನ ಅವಸರದಲ್ಲಿ ಮದ್ವೆ ಮಾಡಿ ಎಂತಾತು ಅದರ ಹಣೆಬರಹ? ಮೈ ನೆರೆವ ತನಕ ಮನೇಲಿ ಇಟ್ಕಂಡು ಆಮೇಲೆ ಪ್ರಸ್ತ ಮಾಡ್ವ ಅಂದೆವಲ್ಲ, ಆಯ್ತಾ? ಕುತ್ತಿಗೆಗೆ ತಾಳಿ ಬಿದ್ದದ್ದು ಬಿಟ್ಟರೆ ಹುಡುಗಿ ಏನು ಸುಖ ಗೋರಿಕೊಂಡ್ಲು? ವಿಧಿ, ದುರ್ವಿಧಿ’ ಆಯಿ ಕುಸು ಕುಸು ಮಾಡಿದಳು. ಗೌರಿ ಉಸಿರು ಬಿಗಿ ಹಿಡಿದಳು. ಪಾಪ, ಕಮಲತ್ತೆ ಗಂಡನ ಮನೆಗೆ ಹೋಗಲೇ ಇಲ್ಲ. ಯಾವ ಪಾಪಕ್ಕೆ ಮದುವೆಯ ಶಿಕ್ಷೆ? ನನಗೂ ಹಾಂಗೆ ಆಗದಂತೆ ಅಪ್ಪಯ್ಯನ ಕಾಳಜಿ. ಹೇಳುತ್ತಿದ್ದಾನೆ, ‘ಒಳ್ಳೆ ಸಂಬಂಧ ಅಂದ್ರೂ ಅವಸರ ಮಾಡಲಾಗ. ನಾ ಕಮ್ತಿಯವರಿಗೆ ಹೇಳಿಬಿಡ್ತೇನೆ, ಅವರಿಗೆ ಸರಿಯಾದ ಜೋಡಿ ನಮ್ಮ ಶಾರದೆಯೇ. ಅವಳನ್ನು ಬೇಡ ಅಂದರೆ ನಮಗೂ ಈ ಸಂಬಂಧ ಊಹೂಂ’

‘ಮಗಳಿಗೆ ಒಂದು ಶ್ರೀಮಂತ ಮನೆ ತಪ್ಪೋಯ್ತಲ್ಲ. ಇನ್ನು ಬೇಕೆಂದರೂ ಇಂತ ಮನೆ ಹುಡುಗ ಸಿಕ್ಕ.’ ಆಯಿ ಮಾತು, ‘ಗೌರಿಯನ್ನು ಒಂದು ಮಾತು ಕೇಳ್ಬೇಡ್ವಾ?’ ಅಪ್ಪಯ್ಯನ ನಗು ಕೇಳಿತು, ‘ಅವಳನ್ನು ಕೇಳಲು ಇದು ಬೊಂಬೆ ಮದುವೆ ಅಲ್ಲ ಶರಾವತಿ, ನಿಜ ಮದುವೆ. ಅದರ ಕಾಲಗೆಜ್ಜೆ ಸಪ್ಪಳ ಇನ್ನಷ್ಟು ಕಾಲ ನಮ್ಮ ಮನೆ ಒಳಗೆ ಹೊರಗೆ ಕೇಳ್ತಾ ಇರ್ಲಿ’

‘ನಾನು ಚಕ್ರೀ ಮನೆಗೆ ಹೋಗಿ ಅಮ್ಮನಲ್ಲಿ ಒಂದು ಮಾತು ಕೇಳ್ಕಂಡು ಬರ್ಲಾ?’

‘ನಿನ್ನ ಅಮ್ಮನ ಹತ್ರ ನೀ ಹತ್ತು ಮಾತು ಕೇಳಿದ್ರೂ ನನ್ನದು ಒಂದೇ ಮಾತು ಶರಾವತಿ. ಬ್ಯಾಡ ಅಂದ್ರೆ ಬ್ಯಾಡ. ಸ್ವಲ್ಪ ಅರ್ಥಮಾಡ್ಕೋ. ನಿರಾಶೆ ಎಂತಕ್ಕೆ? ಭರವಸೆ ಇರಲಿ ಮುಂದಿನ ಜೀವನದಲ್ಲಿ. ಮಕ್ಕಳ ಜೀವನ ನಮ್ಮಿಂದ ಹಾಳಾಗೂಕಾಗ. ಅದಕ್ಕೇ ಹೇಳಿದ್ದು ಈ ಮಳೆಗಾಲ ಕಳೆದ್ಮೇಲೆ ಅವಳೂ, ನಾಣಿಯೂ ನಿನ್ನ ಅಪ್ಪನ ಮನೆಯಿಂದಲೇ ಶಾಲೆಗೆ ಹೋಗಲಿ’

‘ಇಬ್ಬರನ್ನೂ ಅಲ್ಲಿ ಶಾಲೆಗೆ ಕಳಿಸಿದ್ರೆ ಅಲ್ಲಿದ್ದವರ ಕಣ್ಣಲ್ಲಿ ನಾವು ಸಸ್ಸಾರ ಆಗೂದು.ʼ ಆಯಿಯ ನಿಟ್ಟುಸಿರು ಪರದೆ ಸೀಳಿ ಬಂತು.
‘ಹಾಂಗಾ? ಮಳೆಗಾಲ ಕಳೆದ್ಮೇಲೆ ಸಾಸ್ತಾನದಲ್ಲೇ ಇಬ್ಬರಿಗೂ ಒಂದು ವ್ಯವಸ್ಥೆ ಮಾಡೋಣ? ನಮ್ಮೂರಲ್ಲೇ ಶಾಲೆ ಇದ್ದಿದ್ದರೆ ಈ ಗೋಟಾಳಿ ಇರ್ತಿರಲಿಲ್ಲ, ಮಗಳೂ ನಾಲ್ಕನೇ ಇಯತ್ತೆ ತನ್ಕ ಓದ್ತಿತ್ತು.’

ನಿಜವೇ. ತಾನು ನಾಣಿ ಶಾಲೆಗೆ? ಹಾಗಾದರೆ ನನಗೆ ಮದುವೆ ಇಲ್ಲ. ಸೀರೆ, ಚಿನ್ನದ ಒಡವೆಗಳ ಅಲಂಕಾರ, ಮಾವಂದಿರು ನನ್ನನ್ನು ಹೊತ್ತುಕೊಂಡು ಮದುವೆ ಮಂಟಪಕ್ಕೆ ಬರುವುದು, ಅಲ್ಲಿ ಎಲ್ಲರ ಮುಂದೆ ಗಮ್ಮತ್ತಿನಲ್ಲಿ ಕುಳಿತುಕೊಳ್ಳುವ ಸಂಭ್ರಮ ಏನೂ ಇಲ್ಲ. ಹೌದಲ್ಲ ನಾಣಿ, ನಿನ್ನನ್ನು ಬಿಟ್ಟು ನಾನೆಲ್ಲಿಗೂ ಹೋಗಲಾರೆ. ನಿನ್ನ ಜೊತೆಯೇ ಇರ್ತೇನೆ ಪುಟ್ಟ! ಗೌರಿಗೆ ಯಾಕೋ ಬಿಕ್ಕಳಿಕೆ ಬಂದಂತೆ, ದುಃಖದಿಂದಲೋ, ಖುಷಿಯಿಂದಲೋ!
** ** ** ** ** **

ಸುಬ್ಬಪ್ಪಯ್ಯ ತಮ್ಮ ಮಗಳ ಬದಲು ಮೊಮ್ಮಗಳಿಗಾದರೆ ಸೈ, ಸಂಬಂಧ ಒಪ್ಪಿಕೊಳ್ಳಿ ಎನ್ನುತ್ತಿದ್ದಾರೆ.ಆದರೆ ಅಪ್ಪಯ್ಯನದು ಗೌರಿಗಾದರೆ ಬೇಡವೇ ಬೇಡ ಎಂದು ಖಚಿತ ಅಭಿಪ್ರಾಯ.ಆಯಿಗೆ ಸಮಾಧಾನವಿಲ್ಲ. ಒಪ್ಪುವುದೇ? ಬಿಡುವುದೇ? ಮನಸ್ಸು ಡೋಲಾಯಮಾನ. ನಾಳೆ ನಾಡಿದ್ದರಲ್ಲಿ ಆಯಿ ಮತ್ತು ಮಕ್ಕಳಿಬ್ಬರೂ ಚಕ್ರಿಮನೆಗೆ ಹೋಗಿ ಅಮ್ಮಮ್ಮನನ್ನೇ ಕೇಳಿ ಬರುವುದೆಂದು ಬೆಳಿಗ್ಗೆಯೇ ನಿಶ್ಚಯವಾಗಿತ್ತು. ಆದರೆ ಮಧ್ಯಾನ್ಹದ ಹೊತ್ತಿಗೆ ಹೇಳಿ ಕಳುಹಿಸಿದಂತೆ ದಿಢೀರ್‌ನೆಅವರಲ್ಲಿಗೇ ಬಂದಿಳಿದಳು ಚಕ್ರಿ ಅಮ್ಮಮ್ಮ. ಬಂದದ್ದು ಒಬ್ಬಳೇ. ಪರಿಚಯದ ದೋಣಿಯವ.

ನೀಯತ್ತಿನಲ್ಲಿ ದಡ ತಲುಪಿಸಿದ್ದು ಮಾತ್ರವಲ್ಲ, ಅವಳ ಹಿಂದಿನಿಂದಲೇ ಮನೆತನಕ ಬಂದು ಭಾರದ ಒಂದು ಚೀಲ ಒಳಗಿಟ್ಟ.
‘ಹ್ವಾಯ್, ನೀನು ನಾಡಿದ್ದು ಬೆಳಿಗಿನ ದೋಣಿ ಇತ್ತ ತಂದರೆ ನಾನು ಚಕ್ರಿ ಮನೆಗೆ ಹಿಂದೆ ಹ್ವಾಪದು. ಬತ್ತೆಯಾ?’ ಕೇಳಿದಳು.
‘ಬತ್ತೆ ಅಮ್ಮ, ನಾಡಿದ್ದು ಸೂರ್ಯ ಮೇಲೆ ಬಪ್ಪ ಮೊದಲೇ ಮೊದಲನೇ ದೋಣಿ ಇತ್ಲಾಗೇ ತತ್ತೆ’ ನಾಲ್ಕು ಕಾಸು ಪಡೆದ ದೋಣಿಯವ ಹೊರಟುಹೋದ.

ಅಮ್ಮಮ್ಮ ಬಂದದ್ದು ಆಯಿಗೆ, ಗೌರಿಗೆ ತಡೆಯಲಾರದ ಸಂತೋಷ. ಬೆಳಿಗ್ಗೆಯಿಂದ ಕಾಗೆ ಕಾವ್ ಕಾವ್ ಸ್ವರ ತೆಗೆದಾಗಲೇ ಗೌರಿ, ಅಜ್ಜಮ್ಮ ಭವಿಷ್ಯ ಹೇಳಿಯಾಗಿತ್ತು, ಇವತ್ತು ಯಾರೋ ಬರ್ತಾರೆ, ಅನ್ನಕ್ಕೆ ಒಂದು ಮುಷ್ಟಿ ಅಕ್ಕಿ ಜಾಸ್ತಿಯೇ ಇರಲಿ ಎಂದು. ಇದೀಗ ಸರಿಹೋಯ್ತು. ಶ್ಯಾಮಿಗೆ, ಬಾಳೇಹಣ್ಣಿನ ರಸಾಯನ ರಾತ್ರೆ ಮಾಡುವುದೆಂದೂ ಲೆಕ್ಕ ಹಾಕಿಯಾಯ್ತು.

‘ನಾ ಎಂತ ದೂರದ ಕುಳವೇ? ಮನೆಯವಳೇ? ಎಂತದೂ ಬೇಡ. ಗಂಜಿ, ಅಪ್ಪೆಮಿಡಿ ಉಪ್ಪಿನಕಾಯಿ ಇದ್ದರೆ ಅದೇ ಯಥೇಷ್ಟ ಆಯ್ತು”ಅಮ್ಮಮ್ಮ ತಾನು ತಂದ ಚೀಲದಿಂದ ಉಪ್ಪಿನಕಾಯಿ, ಹಲಸಿನ ಮತ್ತು ಉದ್ದಿನ ಹಪ್ಪಳ, ಸಂಡಿಗೆ, ಬಾಳಕ, ಮಾವಿನ ಹಣ್ಣಿನ ಮಾಂಬಳ, ಹಲಸಿನ ಸಿಹಿ ಹಪ್ಪಳ, ಜೇನು ಇನ್ನೂ ಏನೇನೋ ಹೊರ ತೆಗೆಯುವಾಗ ಗೌರಿ, ನಾಣಿ ಕುಕ್ಕುರುಗಾಲಲ್ಲಿ ಕುಳಿತು ಕಣ್ಣರಳಿಸಿದ್ದು ನೋಡಬೆಕು, ಹಸಿದು ಬಂದ ಪರದೇಸಿಯಂತೆ. ಹಪ್ಪಳ ಕಚ್ಚಿಯಾಯ್ತು, ಮಾಂಬಳ ಎಳೆದು ಚೂರು ಬಾಯಿಗೆ ಹಾಕಿ ಚಪ್ಪರಿಸಿಯಾಯ್ತು.

ಮಳೆಗಾಲದಲ್ಲಿ ಸಿಗುವ ಹೊಳೆ ಮಾವಿನ ಕಾಯಿಯನ್ನೂ ಬದಿಗೆ ಇಟ್ಟಾಯ್ತು. ಮಕ್ಕಳಿಗೆ ಸಿಹಿ ತಿಂಡಿ ತಂದದ್ದು ಅಮ್ಮಮ್ಮ ತೆಗೆ ತೆಗೆದು ನೀಡಿದಳು. ‘ಇನ್ನು ಆಷಾಢ ಮಾಸ ಶುರುವಾದರೆ ನನಗೂ ನಿಮಗೂ ನಾಲ್ಕು ಮೈಲು ದೂರ ದೋಣಿಯಲ್ಲಿ ಹೋಗಿ ಬಪ್ಪದು ಕಷ್ಟ. ಬಿರುಗಾಳಿ, ತೂಫಾನು ದೋಣಿಯವರೂ ಸಮ, ಮಳೆಗಾಲದಲ್ಲಿ ಗಾಳಿ ಮಳೆ ಹವಾಮಾನ ನೋಡ್ಕಂಡೆ ದೋಣಿ ನೀರಿಗಿಳಿಸ್ತೋ. ನಾವು ಹೇಳಿದಾಂಗೆ ಹೋಪಕಿಲ್ಲೆ, ಬಪ್ಪಕಿಲ್ಲೆ. ಅದಕ್ಕೆ’ ‘ಲಾಯಕ್ಕಾಯ್ತು. ಆದರೆ ನಾನೂ ಹಪ್ಪಳ ಸಂಡಿಗೆ ಎಲ್ಲ ಮಾಡಿದ್ದೆ ಅಮ್ಮ, ನೀನ್ಯಾಕೆ ಕಷ್ಟದಲ್ಲಿ ಹೊತ್ತು ತಂದೆ?’ ಆಯಿ ಅಕ್ಷೇಪಿಸುತ್ತಲೇ ಅವನ್ನು ಜೋಡಿಸಿಟ್ಟಳು, ‘ಒಂದು ಹೊರೆ ತಂದಿದ್ದಿ. ಎಂತ ಅಲ್ಲಿ ಮೊಮ್ಮಕ್ಕಳಿಗೂ ಚೂರು ಪಾರು ಇಟ್ಟಿದ್ದಿಯಾ?’

‘ಅವಕ್ಕೆ ಉಳಿಸಿಯೇ ತಂದದ್ದು. ಮಾಂಬಳ ನಮ್ಮ ಗೌರಿಗೆ, ಖಾರದ ಹಲಸಿನ ಹಪ್ಪಳ ನಮ್ಮ ಮುದ್ದು ಕೃಷ್ಣನಿಗೆ?’ ಮೊಮ್ಮಕ್ಕಳನ್ನು ತನ್ನ ಮೊಟ್ಟೆಗೆ ಎಳೆದುಕೊಂಡಳು ಅಮ್ಮಮ್ಮ. ಎಂತಹ ಅಸೀಮ ಪ್ರೀತಿ ಅವಳದು! ಆ ಪ್ರೀತಿಯ ಆಳ ಅರಿಯದ ನಾಣಿ ಚಕ್ರಿ ಮನೆಯಿಂದಶಾಲೆಗೆ ಹೋಗಲು ಒಪ್ಪದೆ ಒಬ್ಬನೇ ದೋಣಿ ಹತ್ತಿ ಹೊಳೆಬಾಗಿಲಿಗೆ ಬಂದಾಗಲೇ ಗೌರಿ ಅವನ ಕಿವಿ ಹಿಂಡಿದ್ದಳು. ‘ಮೂರು ಹೊತ್ತು ಚಕ್ರೀಮನೆ ಜಪ ಮಾಡುವವ ಅಲ್ಲೇ ಉಳಿಲಿಕ್ಕೆ ಏನಾಗಿತ್ತು ಧಾಡಿ? ನಾ ಬೇಕಾ ಜೊತೆಗೆ?’

‘ಹೌದಕ್ಕಾ, ಶಾಲೆಯಲ್ಲಿ ಕಲಿವದು ಎಂತಾ ಮಣ್ಣು ಇಲ್ಲೆ. ಎಲ್ಲ ನಮ್ಮ ಅಜ್ಜಯ್ಯ ನಮ್ಗೆ ಹೇಳಿಕೊಟ್ಟದ್ದೇ. ನಂಗೆಲ್ಲ ಗೊತ್ತು. ಪಾಟಿ ಚೀಲ ಹೊತ್ಕೊಂಡು ಹೋಪದು ಹೊರೆ ಭಾರ’ ‘ದೊಡ್ಡಸ್ತಿಕೆ ನೋಡು. ಅದೇನು ಮಣಗಟ್ಟಲೆ ಭಾರವಾ? ನಾ ಶಾಲೆಗೆ ಹೋಗ್ತೆ ಅಂದ್ರೆ ಆಯಿ ಒಪ್ತಿಲ್ಲೆ. ಚಕ್ರಿ ಅಮ್ಮಮ್ಮನ ಮನೇಲಿ ಗಮ್ಮತ್ತು ಅಲ್ಲದಾ?’ ಹೇಳುವಾಗ ಗೌರಿ ಕಣ್ಣುಗಳಲ್ಲಿ ಮಿನುಗು. ಅವಳಿಗೆ ಕಲಿಕೆ ಮುಖ್ಯವಲ್ಲ, ಅಮ್ಮಮ್ಮನ ಸಾಮಿಪ್ಯ, ಅವಳ ಅಗಾಧ ಪ್ರೀತಿ, ಉಪಚಾರದಲ್ಲಿ ಆ ಜೀವ ಕೊಡುವ ಹಿತವಾದ ಸ್ಪರ್ಶ ಬೇಕು. ಇವತ್ತು ಅವಳೇತಮ್ಮ ಮನೆಯಲ್ಲಿ! ಆ ಜೀವಸ್ಪರ್ಶಕ್ಕೆ ಹಾತೊರೆದಂತೆ ಚಕ್ರಿ ಮನೆಯಲ್ಲೇ ಮನಸ್ಸು ಓಡಿ ಅಲ್ಲಿ ತಾನು ಇದ್ದಂತೆ ಆ ಭಾವ ಒರತೆಯಲ್ಲಿ ಅಮ್ಮಮ್ಮನ ಮುಖ ನೋಡಿದಳು.

ಈಚಕ್ರಿ ಅಮ್ಮಮ್ಮ ನಾರ್ಣಜ್ಜನ ಎರಡನೇ ಹೆಂಡತಿ. ಮೊದಲನೇಯವಳು ಹೆರಿಗೆಯಲ್ಲಿ ಮಗು ಸಮೇತ ತೀರಿಕೊಂಡ ನಾಲ್ಕು ತಿಂಗಳಲ್ಲಿ ನಾರ್ಣಜ್ಜನ ಮನೆ ತುಂಬಿದ ಒಂಬತ್ತರ ಬಾಲೆ ಪರಮೇಶ್ವರಿ ಮರಳಿ ಅಪ್ಪನ ಮನೆಗೆ ಹೋಗಲೇ ಇಲ್ಲವಂತೆ. ಏನು ಕಾರಣವೋ? ಹದಿನೆಂಟು ಮೊಳದ ಸೀರೆಯುಟ್ಟು ಕೂಡು ಕುಟುಂಬಕ್ಕೆ ಕಿರಿಯ ಸೊಸೆಯಾದ ಅವಳನ್ನು ಎಲ್ಲರೂ ಕರೆಯುವ ಹೆಸರು ಪಾತೂ. ಮಕ್ಕಳಿಗೆ ಅಮ್ಮಮ್ಮ. ಅವಳಿಗೆ ಆಯಿ ಒಬ್ಬಳೇ ಮಗಳಲ್ಲ. ನಾಲ್ವರು ಗಂಡುಮಕ್ಕಳಿದ್ದಾರೆ.

ಗಂಪತಿ ಮಾವ, ಶಂಕರಿ ಅತ್ತೆ, ಮತ್ತು ಅಪ್ಪೂಮಾವ, ಸುಭದ್ರ ಅತ್ತೆ ಮನೆಯಲ್ಲಿ, ಇನ್ನಿಬ್ಬರು ಬೇರೆ ಬೇರೆ ಊರುಗಳಲ್ಲಿ. ಒಟ್ಟೂ ಹತ್ತು ಮೊಮ್ಮಕ್ಕಳು. ಅವರೆಲ್ಲರಿಗೂ ಅಮ್ಮಮ್ಮನಿಂದ ಸಿಗುವ ಪ್ರೀತಿಗೆ ಬರವಿಲ್ಲ. ಆದರೂ ಅಮ್ಮಮ್ಮನಿಗೆ ಗಂಡುಮಕ್ಕಳಿಗಿಂತ ಮಗಳ ಮೇಲೆ ಪ್ರೀತಿ ಜಾಸ್ತಿ. ಗೌರಿ, ನಾಣಿಯೆಂದರೆ ಒಂಚೂರು ಇನ್ನೂ ಜಾಸ್ತಿಯೇ ಮೋಕೆ. ಅವರು ಬಂದರೆ ಸಾಕು, ಅವಳ ಮೋರೆಯಲ್ಲಿ ಸಂಭ್ರಮದ ಕಳೆ. ಬೂರಲು ಹತ್ತಿಯ ಮೆತ್ತನೆ ಹಾಸಿಗೆ, ಕಬ್ಬಿಣದ ಪೆಟ್ಟಿಗೆಯಲ್ಲಿ ನುಸಿಗುಳಿಗೆಯಲ್ಲಿ ಮಡಿಚಿಟ್ಟ ಹಾಸು ಹೊದಿಕೆಗಳು ಹೊರ ಬರುತ್ತವೆ. ಅವು ಹೊದಿಕೆಗಳಲ್ಲ. ಅಮ್ಮಮ್ಮನ ಹಳೆ ಸೀರೆಗಳು. ಅವುಗಳನ್ನು ಹಾಸಿ ಹೊದೆಯಿಸಿ ತಾನೂ ಅವರ ಬದಿಗೆ ಚಾಪೆ ಹಾಸಿ ಮಲಗಿ ಇಬ್ಬರ ಬೆನ್ನ ಮೇಲೆ ಮೃದುವಾಗಿ ತಟ್ಟುತ್ತ…

ಹೌದಲ್ಲ, ತನಗೆ ಆ ಸೀರೆಗಳ ಬೆಚ್ಚಗಿನ ನವಿರಾದ ಸ್ಪರ್ಶದಲ್ಲಿ, ಆ ಕಂಪಿನಲ್ಲಿ ಜೋಗುಳ ಹಾಡಿದಂತೆ! ಏಳು ಮಲ್ಲಿಗೆ ತೂಕದ ರಾಜಕುಮಾರಿ ಹಂಸತೂಲಿಕಾಪಲ್ಲಂಗದಲ್ಲಿ ಮಲಗಿದಂತೆ ಯಾವಾಗಲೋ ನಿದ್ರೆಗೆ ಜಾರಿ… ಅಮ್ಮಮ್ಮನಿಗೆಆಗ ಎಷ್ಟು ಮಾತು ಮಾತು. ಮಾತು. ಎಲ್ಲೆಲ್ಲಿಯದೋ ಹಳೆ ಕಥೆಗಳು ಕತ್ತಲಿನ ಗರ್ಭ ಸೀಳಿ ಹೊರಬರುತ್ತವೆ ರಂಜನೀಯವಾಗಿ. ತನ್ನ ಪ್ರೀತಿ ವಾತ್ಸಲ್ಯ, ಬೇಸರ, ಆಕ್ರೋಶ, ಕಷ್ಟ ನಿಷ್ಟುರಗಳ, ಸುಖ ದುಃಖದ ಮೂಟೆ ಬಿಚ್ಚಿ ಉಣಬಡಿಸುತ್ತಾಳೆ ಮಕ್ಕಳ ಮುಂದೆ. ಅಜ್ಜಯ್ಯ ಹೇಳುವ ರಾಜ ರಾಣಿಗಳ ಕಥೆಗಿಂತ ಅಮ್ಮಮ್ಮನ ಕಥೆಗಳನ್ನು ಕೇಳಲು ಇಬ್ಬರಿಗೂ ಖುಷಿ.

| ಇನ್ನು ನಾಳೆಗೆ |

‍ಲೇಖಕರು Admin

July 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಜಯಲಕ್ಷ್ಮಿ

    ಹಪ್ಪಳ, ಮಾಂಬಳದ ಓದು ಮಳೆಗಾಲದ ಇಂದಿನ ದಿನಕ್ಕೆ ರುಚಿಕಟ್ಟಾಗಿತ್ತು.ಚಕ್ರಿ ಅಮ್ಮಮ್ಮ ಹೇಳುವ ಕಥೆ ಕೇಳುತ್ತಾ ಆ ಹೊದಿಕೆಯ ನವಿರು ಪರಿಮಳ ನನ್ನನ್ನೂ ಸವರಿದಂತೆ ಆಯ್ತು,ಗೌರಿ ಮದುವೆಗೆ ಚಕ್ರಿ ಅಮ್ಮಮ್ಮನೂ ಒಪ್ಪದಿರಲಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: