ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಗೌರಿಯ ಖಿಲ್ ಖಿಲ್ ನಗುವ ಸದ್ದು…

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಿಕ್ಕಿದೆ.

ಕರಾವಳಿ ಲೇಖಕಿ ವಾಚಕಿಯರ ಸ೦ಘದ ಪ್ರಥಮ ಲೇಖಕಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಪುತ್ತೂರು ಹನ್ನೊ೦ದನೇ ತಾಲೂಕು ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ೨೦೦೫ರಲ್ಲಿ. ದ.ಕ. ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಯಾಗಿದ್ದರು.

8

‘ನಾ ಮದಿ ಆದಾಗ ಎಂಟರ ಪ್ರಾಯ.’ ಅಜ್ಜಮ್ಮ ಕವಳ ಬಾಯಿಗೆ ಹಾಕಿ ಕೊಳ್ಳುತ್ತ, ‘ನಾ ಬರಲಿಲ್ಯಾ ಗಂಡನ ಮನೆಗೆ, ಈ ಕೂಪಕ್ಕೆ? ದೊಡ್ಡ ಸಂಸಾರ. ಇಷ್ಟು ವರ್ಷದಿಂದ ಇದ್ದೆ ಇಲ್ಲೇ ಗೂಟಕ್ಕೆ ಕಟ್ಟಿದ ದನದ ಹಾಂಗೆ.’

‘ಶರಾವತಿಗೂ ಎಂಟರಲ್ಲೇ ಮದ್ವೆ ಆದದ್ದು.’ ಸುಬ್ಬಪ್ಪಯ್ಯರಿಗೆ ಸಂತೃಪ್ತಿಯ ನಗು, ‘ಇವಳನ್ನು ನಾವು ನೋಡಲು ಚಕ್ರೀ ಮನೆಗೆ ಹೋದಾಗ ಸಣ್ಣ ಅಂಗಿ ಹಾಕ್ಕಂಡ ಹೊರಗೆ ಬಂದಿತ್ತು ಈ ಕೂಸು. ಈಗ ನೋಡು ನಮ್ಮೆಲ್ಲರ ಜುಟ್ಟು ಅವಳ ಕೈಯ್ಯಲ್ಲಿ. ಇವಳಂತೆ ಇನ್ನೊಬ್ಬರನ್ನು ನಾ ಕಾಣೆ. ಇವಳದೇ ಪಡಿಯಚ್ಚು ನಮ್ಮ ಮೊಮ್ಮಗಳು. ಇದ್ದ ಮನೆಗೂ ಹೋದ ಮನೆಗೂ ಹೆಸರು ತರುವ ಹುಡುಗಿ.’

ಸುಶೀಲಚಿಕ್ಕಿ ತಟ್ಟನೆ ಅಂದಳು, ‘ವಿಚಾರ ಮಾಡಿ ಅಣ್ಣಯ್ಯ, ಕೂಸಿಗೆ ತ್ರಾಸ ಆಗ್ಬಾರದಲ್ಲ. ಅವರದು ದೊಡ್ಡ ಕುಟುಂಬವಂತೆ. ಇವ ಹಿರಿಮಗ. ಇವನ ಹಿಂದೆ ಏಳು ಚಿಳ್ಳೆಪಿಳ್ಳೆಗಳು’

‘ಇದ್ದಾವೆಂದು ಗೊತ್ತು. ಕೂಡು ಕುಟುಂಬ. ಹುಡುಗನ ಮೂವರು ಚಿಕ್ಕಪ್ಪಂದಿರು, ಅವರ ಸಂಸಾರ, ಮಕ್ಕಳು ಮರಿಮಕ್ಕಳು’ ಸುಬ್ಬಪ್ಪಯ್ಯರ ಸ್ವರ ನಿಧಾನಕ್ಕೆ ತಗ್ಗಿತು. ಯಾವುದೋ ಕಾಣದ ಭೂತದಂತಹ ಅರಮನೆಯಲ್ಲಿ ತಮ್ಮ ಪುಟ್ಟ ಮೊಮ್ಮಗಳನ್ನು ನಿಲ್ಲಿಸಿ ಅಳೆದು ಸುರಿದು ನೋಡಿ ಹಿತವಾಗಲಿಲ್ಲ,

‘ಮನೆ ಜೇನುಗೂಡು ಅಲ್ಲವಾ. ಅಲ್ಲಿ ಹಿರಿ ಸೊಸೆ ಈ ಪುಟ್ಟ ಕೂಸು. ಈ ಪಟ್ಟದ ಜೊತೆ ಜವಾಬ್ದಾರಿಯ ನೊಗ ಹೆಗಲಮೇಲೆ.’ ಅನುಭವದ ಮಾತು ಹೇಳಿದಳು ಸುಶೀಲಚಿಕ್ಕಿ. ‘ಆದ್ರೆ ಈಗ ಶಾರದಾ ಕಾನೂನು ಮಾಡ್ತದಂತೆ ಬ್ರಿಟಿಷ್ ಸರಕಾರ. ಅದರ ಪ್ರಕಾರ ಹುಡುಗಿಗೆ ಹದಿನಾಲ್ಕು ವರ್ಷ ಆಯೆಕ್ಕು. ಹುಡುಗರಿಗೆ ಹದಿನೆಂಟು. ಆ ಲೆಕ್ಕ ಕಂಡರೆ ಗೌರಿಗೆ ಇನ್ನೂ ಹನ್ನೊಂದು.’

‘ಆ ಕಾನೂನು ನಂಬಿಕಂಡ್ರೆ ನಾವು ಮದಿ ಮಾಡ್ದಾಂಗೆ. ಬಿಡು, ಅಲ್ಲವೇ ಸುಶೀಲಾ, ನಮ್ಮ ದೇಶದವರಿಗೆ ಮದುವೆಗೂ ಒಂದು ಕಾನೂನು ಬೇರೆಯವರು ಮಾಡೆಕ್ಕಾ?

‘ನೀ ಹೇಳಿದ್ದು ಸರಿ ಅಣ್ಣಯ್ಯ, ಆದ್ರೆ ಆಡಳಿತ ಬೇರೆ ದೇಶದವರದು. ಅವರು ಎಚ್ಚರಿಸಿದರೂ ಕೇಳದಿದ್ದರೆ ಕಾನೂನು ತರಲೇ ಬೇಕಲ್ಲದ? ನಮ್ಮ ದೇಶದ ಉತ್ತರಭಾರತ, ಬಂಗಾಲದ ಹಲವು ಭಾಗದಲ್ಲಿ ತೊಟ್ಟಿಲು ಶಿಶುಗಳಿಗೆ ಮದುವೆ ಮಾಡ್ತವು. ಮಕ್ಕಳ ಆಟಿಕೆ ಗೊಂಬೆಗಳ ಮದುವೆಯಂತೆ. ಇದೆಂತ ಸರಿಯಾ?’

‘ಆದರೆ ಕಾನೂನು ತಂದರೂ ಜನ ಎಚ್ಚೆತ್ತುಕೊಳ್ಳದಿದ್ದರೆ ಅವು ಜಾರಿಗೆ ಬರುವುದು ಸುಲಭದ ಮಾತಲ್ಲ. ಅದನ್ನೇ ನಿನ್ನ ಕೇಳ್ತೆ, ಕಾನೂನು ಎಂತಕ್ಕೆ? ನಮ್ಮ ರೀತಿ ರಿವಾಜು ನಮ್ಮದೇ. ನಮ್ಗೆ ಆಗ್ತಾ ಇಲ್ಲದಾ ಕಂಡರೆ ಸಾಕು’

‘ಸಮಾ ಹೇಳಿದ್ರಿ ಅಣ್ಣಯ್ಯ, ನಾನು, ಕಮಲಿ ಅಂಥವ್ರು ಸಣ್ಣದರಲ್ಲೇ ಮದಿ ಆಗಿ ಸುಖ ಗೋರಿಕಂಡದ್ದು ಸಾಕು. ಗೌರಿ ಚೂರು ದೊಡ್ಡ ಆಗಲಿ. ಶಾಲೆಗೆ ಹೋಗಿ ಬರಲಿ, ವಿದ್ಯೆ ಕಲಿಯಲಿ. ಆಮೇಲೆ ಕಂಡರಾಯ್ತು ಮದ್ವೆ ಮಾಣಿಯನ್ನು’ ಆದರೆ ಇತ್ತ ಅಜ್ಜಮ್ಮನಿಗೆ ಸಂಬಂಧ ಬಿಡುವ ಮನಸ್ಸಿಲ್ಲ.  ಅವಳದು ಒಂದೇ ರಾಗ, ‘ಹುಡುಗಿಯರ ಮದುವೆ ವಯಸ್ಸು ಕಾಂಬಕಾಗ. ಸುಶೀಲ ಹೇಳಿದಾಂಗೆ ಮೊದಲೆಲ್ಲ ತೊಟ್ಟಿಲು ಶಿಶುಗಳಿಗೆ ಮದಿ ಮಾಡ್ತಿದ್ದವು. ನಮ್ಮ ಹುಡುಗಿಗೆ  ಹನ್ನೊಂದು ಅಂದ್ರೆ ಸಣ್ಣ ವಯಸ್ಸಾ? ವಯಸ್ಸು ಲೆಕ್ಕಾಚಾರ ಎಂತಕ್ಕೇ? ಹುಡುಗ ಗಂಡುಗೋವಿ ಹಂಗಿದ್ರೆ ಸಾಕು. ಕೂಸಿನದು ಸುಖವಾದ ಬದುಕು, ಬಾಳ್ವೆ!’

ಒಳಕೋಣೆಯಿಂದ ಗೌರಿಯ ಖಿಲ್ ಖಿಲ್ ನಗುವ ಸದ್ದು. ಶಾರದತ್ತೆಯ ಬದಲು ತನಗೆ ಮದುವೆ! ಹೊಸಸೀರೆ ತೆಗೀತಾರೆ. ಅಜ್ಜಮ್ಮನ ಚಿನ್ನದ ಒಡವೆಗಳಿಂದ ಅಲಂಕಾರ ಮಾಡ್ತಾರೆ. ತಲೆ ಬಾಚಿ ಉದ್ದದ ಜಡೆ ಹಾಕಿ ಹೂವಿನ ಜಲ್ಲಿ ಕಟ್ತಾರೆ. ಕಾಲಿಗೆ ಗೆಜ್ಜೆ, ಕೈ ತುಂಬ ಬಳೆ. ಈ ಬಾರಿ ನನಗೆ ಬೇಕಾದ ಬಣ್ಣದ ಬಳೆ ತೊಡಿಸಲು ಚಕ್ರಿ ಅಮ್ಮಮ್ಮನ ಊರಿನ ಬಳೆಗಾರನಿಗೆ ಮೊದಲೇ ಹೇಳಬೇಕು. ಆಯಿ ಅಪ್ಪಯ್ಯನಿಗೆ ಹೇಳಿದರೆ ಸಾಕು ಎಲ್ಲಾ ಕೊಡ್ತಾರೆ ಅಲ್ಲದ? ಹಾಡು, ವಾಲಗ ಏನು ಗಮ್ಮತ್ತು. ಮತ್ತೆ ಮದುವೆ ಮಂಟಪಕ್ಕೆ ನನ್ನನ್ನು ಎತ್ತಿಕೊಂಡು ಹೋಗುವುದು ಯಾರು? ಗಂಪತಿ ಮಾವನಾ? ಅಪ್ಪೂ ಮಾವನಾ? ದೇವರನ್ನು ಎತ್ತಿದಂಗೆ ನನ್ನನ್ನೂ ಎತ್ತಿಕೊಂಡು ಹೋಗ್ತಾರಲ್ಲದ?

‘ಅಕ್ಕ, ನಿನಗೆ ಮದುವೆಯಂತೆ. ಮದುವೆಯಾದರೆ ನಮ್ಮನ್ನು ಬಿಟ್ಟು ನೀ ಗಂಡನ ಮನೆಗೆ ಹೋಗ್ತಿಯಂತೆ. ಶಾರದತ್ತೆ ಅಳ್ತಾ ಹೇಳಿದಳು. ಹೌದಾ?’ ನಾಣಿ ಕೇಳಿದ ಅನುಮಾನದಲ್ಲಿ.

‘ಬಿಡೋ, ಮದುವೆಯಾಗಿ ಗಂಡನ ಮನೆಗೆ ಹೋಗೋದಾ? ಲೊಟ್ಟೆ. ನಾವು ಚಕ್ರೀ ಅಮ್ಮಮ್ಮನ ಮನೇಲಿ ಎಷ್ಟು ಬಾರಿ ಮದುವೆ ಆಟ ಆಡ್ಲಿಲ್ಲ?’ ನೆನಪಿಸಿದಳು ಗೌರಿ. ಆ ಅಮ್ಮಮ್ಮನಲ್ಲಿ ಇವರಿಗಿಂತ ಹಿರಿಯ ಕಿರಿಯರ ಮಕ್ಕಳಿಗೆ ಮದುವೆ ಆಟವೆಂದರೆ ಬೇರೆಲ್ಲ ಆಟಕ್ಕಿಂತ ಹೆಚ್ಚು ಪ್ರಿಯ. ಒಂದು ಹುಡುಗ ಒಂದು ಹುಡುಗಿ ಗಂಡ ಹೆಂಡತಿ ಮಾಡಿ ಜೋಡಿಗೆ ಕೂರಿಸಿ ದೊಡ್ಡವರ ಅನುಕರಣೆ ಮಾಡ್ತಾ ಏನು ಮಜ! ಕೆಲವೊಮ್ಮೆ ಮಕ್ಕಳ ಬದಲು ಬಾಳೆದಿಂಡಿನ ಗಂಡು ಹೆಣ್ಣಿನ ಗೊಂಬೆಗಳಿಗೆ ಮದುವೆ ಮಾಡುವುದು. ಬಾಳೆದಿಂಡನ್ನು ಭಾಗ ಮಾಡಿ ಕೈಕಾಲು ಮಾಡಿ ಕಣ್ಣು ಮೂಗು ಬಾಯಿ ಬಿಡಿಸಿದರೆ ಗೊಂಬೆಗಳು ಸಿದ್ಧ.

ಗಂಡು ಗೊಂಬೆಗೆ ಮಸಿಕೆಂಡದಿಂದ ಬರೆದ ಮೀಸೆ, ಹೆಣ್ಣು ಗೊಂಬೆಗೆ ಹಣೆಗೆ ಕುಂಕುಮ. ಅವನ್ನು ನಿಲ್ಲಿಸಲು ಉದ್ದದ ಎರಡು ಹಿತ್ತಾಳೆ ಲೋಟಗಳು. ಹಾಗೇ ಬಾಳೇದಿಂಡಿನ ಹೊರಗಿನ ಹಾಳೆ ತೆಗೆದು ಹದ ಹಾಳಿತದಲ್ಲಿ ಕತ್ತರಿಸಿ ನಾಲ್ಕು ಬದಿಗಳಿಗೆ ಉದ್ದದ ಬಾಳೆನಾರಿನ ಹಗ್ಗ ಕಟ್ಟಿದರೆ ತೂಗು ತೊಟ್ಟಿಲು ಆಯಿತು. ಬಾಳೆದಿಂಡಿನದೇ ಮಗು. ಹೆಣ್ಣು ಗಂಡಿಗೆ ಮದುವೆ ಅನಂತರ ತೊಟ್ಟಿಲಲ್ಲಿ ಬಾಳೆ ದಿಂಡಿನ ಮಗುವನ್ನಿಟ್ಟು ತೂಗುವುದು. ಜೋಗುಳದ ಲಾಲಿ ಹಾಡುವುದು.

ತಾಯಿ ತಂದೆ ಮಗು. ಇದು ಮಕ್ಕಳ ಮದುವೆ ಆಟದಲ್ಲಿ ಸಾಕಾರಗೊಳ್ಳುತ್ತದೆ. ಮದುವೆ ಊಟ ಇನ್ನೂ ಮಜ. ಬಾಳೆಕೀತಿನಲ್ಲಿ ಕಲ್ಲು, ಮಣ್ಣು, ಎಲೆ, ಕಿಸ್ಕಾರ ಹೂವು, ಕಾಯಿ ಊಟಕ್ಕೆ. ಆ ತಿನ್ನುವ ಜೋರು ಕಂಡರೆ ಥೇಟ್ ಮದ್ವೆದೇ ಊಟ ಉಂಡಂತೆ. ತಮ್ಮೆಲ್ಲರ ಬೊಬ್ಬೆ ಸೂರು ಮುಟ್ಟುವಾಗ ಒಳಗಿನಿಂದ ಊಟಕ್ಕೆ ಕರೆ. ಬಾಳೆದಿಂಡು, ತೊಟ್ಟಿಲು, ಇನ್ನೆಲ್ಲ ಕಸ ಮೂಲೆಗೊತ್ತಿ ಓಡಿದರೆ ಅವನ್ನು ತೆಗೆಯಲು ಚಕ್ರೀ ಅಮ್ಮಮ್ಮನೇ ಬರಬೇಕು. ಅಂತಹದೇ ಮದ್ವೆ ಅಲ್ಲವಾ ಇದು? ಮತ್ತೆ ನಾಣಿ ಯಾಕೆ ಅಳ್ತಿದ್ದ? ಅವ ಹೇಳಿದಂತೆ ಮದ್ವೆ ಅಂದರೆ ಗಂಡನ ಮನೆಗೆ ಹೋಪದಾ?

ಅದು ಬೇಜಾರು, ಅಪ್ರಿಯ ಸಂಗತಿ. ಮುಂದಿನ ಯಾವ ಯೋಚನೆ ಮಾಡದಷ್ಟು ಬಾಲಿಷವಾಗಿತ್ತು ಅವಳ ಮನಸ್ಸು. ಸ್ವಲ್ಪಹೊತ್ತಿನಲ್ಲಿ ಪರದೆ ಆಚೆ ಆಪ್ಪಯ್ಯ, ಆಯಿಯ ಪಿಸಿ ಪಿಸಿ ಮಾತುಗಳು. ಅವು ಗೌರಿ ಮದುವೆಗೆ ಸಂಬಂಧಿಸಿದ್ದೇ. ಆಯಿಗೆ ತಾನಾಗಿ ಬಂದ ಸಂಬಂಧದಲ್ಲಿ ಹುಡುಗ ಸಣ್ಣ ಪ್ರಾಯದವ, ಓದಿದವ, ಘನಾ ಹೆಸರು ಇದ್ದ ಮನೆ, ಶ್ರೀಮಂತ, ಹಾಲು ತುಪ್ಪದಲ್ಲಿ ಕೈ ತೊಳಿಬಹುದು ಎಂದೆಲ್ಲ ಲೆಕ್ಕಹಾಕಿ ಸುಮ್ಮನೆ ಬಿಡಲು ಮನಸ್ಸಿಲ್ಲ. ಅಪ್ಪಯ್ಯನಿಗೆ ಮಗಳನ್ನು ಕೂಡು ಕುಟುಂಬಕ್ಕೆ ಕಲ್ಲು ಕಟ್ಟಿದಂತೆ ಕೊಡಲು ಮನಸ್ಸಿಲ್ಲ. ಒಂದೆಡೆ ಮದುವೆ ಜವಾಬ್ದಾರಿ, ಇನ್ನೊಂದೆಡೆ ಪ್ರೀತಿ, ವ್ಯಾಮೋಹದ ಸಂಕೋಲೆ. ವಯಸ್ಸಿಗೆ ಬಂದ ಶಾರದೆಯನ್ನು ಬಿಟ್ಟು ಎಳೆ ಬಾಲೆಯ ಮದುವೆ ಮಾಡುವುದು ಧರ್ಮ ಸಮ್ಮತವಲ್ಲ. ಇನ್ನೆರಡು ವರ್ಷ ಕಳೆಯಲಿ ಎಂದವನ ಆಲೋಚನೆ.

‘ಇನ್ನೊಂದು ವರ್ಷದಲ್ಲಿ ಅದು ಮೈನೆರೆದರೆ ಎಂತ ಮಾಡ್ತೀರಿ?’ ಆಯಿಗೆ ಹೆದರಿಕೆ. ಹುಡುಗಿ ಮೈ ನೆರೆಯುವ ಮೊದಲೇ ಮದುವೆ ಮಾಡುವ ಸಂಪ್ರದಾಯವಿದ್ದ ಕಾಲ ಅದು. ಮದುವೆ ಆಗದೆ ಮೈ ನೆರೆದರೆ ಆ ಮನೆಗೆ ಬಹಿಷ್ಕಾರ ಹಾಕುವುದೂ ಇತ್ತು. ಆದರೀಗ ಬದಲಾಗುತ್ತಿರುವ ಕಾಲದಲ್ಲಿ ಶಾರದೆಗೆ ಹದಿನೇಳು ದಾಟಿದ್ದರೂ ದೊಡ್ಡ ಪ್ರಮಾದ ಆದದ್ದಿಲ್ಲ. ಸಂಬಂಧ ಕೂಡದೆ ಮುಂದೆ ಹೋದದ್ದು ನಿಜ.

| ಇನ್ನು ನಾಳೆಗೆ |

‍ಲೇಖಕರು Admin

July 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

3 ಪ್ರತಿಕ್ರಿಯೆಗಳು

 1. ಜಯಲಕ್ಷ್ಮಿ

  ಗೌರಿಗೆ ಈ ಮದುವೆ ಆಗದಿರಲಿ ಎಂದು ಹಾರೈಸುವೆ

  ಪ್ರತಿಕ್ರಿಯೆ
 2. ಮಲ್ಲಿಕಾ ತಾಳಿತಾಯ

  ಕಥೆ ತುಂಬಾ ಚೆನ್ನಾಗಿದೆ. ದಿನಾ ಹೊಳೆ ಬಾಗಿಲಿಗೆ ಕಾಯುತ್ತೇ.

  ಪ್ರತಿಕ್ರಿಯೆ
 3. Geetha Hasyagar

  ಪಾಪ , ಗೌರಿ . ಮದುವೆ ಅಂದರೆ ಆಟದ ಮದುವೆ ಎಂದೇ ತಿಳಿದಿರುವ ಮುಗ್ಧ ಬಾಲೆ —– ಗೌರಿ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: