ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಕಣ್ಣೀರಿಗೆ ಸಾಕ್ಷಿಯಾಗಿತ್ತು ಗಂಗೊಳ್ಳಿ ಹೊಳೆ

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಿಕ್ಕಿದೆ.

ಕರಾವಳಿ ಲೇಖಕಿ ವಾಚಕಿಯರ ಸ೦ಘದ ಪ್ರಥಮ ಲೇಖಕಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಪುತ್ತೂರು ಹನ್ನೊ೦ದನೇ ತಾಲೂಕು ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ೨೦೦೫ರಲ್ಲಿ. ದ.ಕ. ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಯಾಗಿದ್ದರು.

4

ಹೊಳೆಬಾಗಿಲು ಆಸ್ತಿ, ಮನೆಯ ಪಾಲುದಾರಿಕೆಯ ಮಾತುಕಥೆ. ಗೌರಿಗೆ ಏನೂ ಅರ್ಥವಾಗದ ವಯಸ್ಸು. ಅವಳ ಕಣ್ಣ ಮುಂದೆ ಚಿತ್ರದ ಪರದೆಯಂತೆ ಇದೇ ಮನೆಯ ಭದ್ರ ಬುನಾದಿಯೊಂದು ಶಿಥಿಲವಾಗಿ ಹೋದದ್ದು, ಸಂಬಂಧದ ಒಡಕುಗಳು ಇನ್ನೆಂದೂ ಸರಿಪಡಿಸದಂತೆ ಕಮರಿ ಹೋದದ್ದು. ಮಾತು ಮೌನವಾಗಿ ಹೃದಯ ಭಾರವಾದ ಆಯಿ ಗೌರಿಯನ್ನು ತಬ್ಬಿಕೊಂಡು ಸುರಿಸಿದ ಕಣ್ಣೀರಿಗೆ ಸಾಕ್ಷಿಯಾಗಿತ್ತು ಗಂಗೊಳ್ಳಿ ಹೊಳೆ.

ಆ ಕಣ್ಣೀರಿನಲ್ಲಿ ಬದುಕಿನ ನೈಜ ಕಥೆಯಿತ್ತು. ಅವಳು ಈ ಮನೆ ತುಂಬಿದ ದಿನ ರಾತ್ರೆ ಅಪ್ಪಯ್ಯ ಹೇಳಿದ ಮೊದಲ ಮಾತು, ‘ಶರಾವತಿ, ನೀನು ಗಂಗೆಯಂತೆ. ತುಂಬಿದ ನಮ್ಮ ಸಂಸಾರದ ಕೊನೆ ಸೊಸೆ. ಕೂಡು ಕುಟುಂಬದಲ್ಲಿ ಯಾರೂ ನಿನ್ನತ್ತ ಬೊಟ್ಟು ಮಾಡಿ ತೋರಿಸಿ ಕೆಟ್ಟ ಮಾತು ಹೇಳದಂತೆ, ಸಂಬಂಧದಲ್ಲಿ ಒಡಕು ಬಾರದಂತೆ ನೋಡಿಕೊಳ್ಳುವ ಹೊಣೆ ನಿನ್ನದು. ನಿನ್ನಲ್ಲಿ ನಾನಿಟ್ಟ ವಿಶ್ವಾಸ ಉಳಿಸಿಕೊಡು?’

ಆಯಿ ಈ ಮಾತನ್ನು ಹೇಳುತ್ತ ಗೌರಿಯನ್ನು ಕೇಳಿದ್ದಳು, ‘ಮಾವನವರಿಗೆ ನನ್ನಲ್ಲಿ ವಿಶ್ವಾಸ. ನಾನು ಶರಾವತಿ ನದಿಯಂತೆ ಶಾಂತ ಸ್ಥಿತಪ್ರಜ್ಞೆಯಂತೆ. ಎಲ್ಲರಿಗೂ ಬೇಕಾದವಳಂತೆ. ಅಲ್ಲವೇ ಗೌರಿ, ಚಕ್ರ ಹೊಳೆ ತೀರದಲ್ಲಿ ಹುಟ್ಟಿ ಬೆಳೆದ ಹುಡುಗಿ ನಾನು. ಆ ಹೊಳೆಬದಿಯ ಮನೆಯಿಂದ ಈ ಹೊಳೆಬದಿಯ ಮನೆಗೆ ಎಂಟರ ಪ್ರಾಯದಲ್ಲಿ ಮದುವೆಯಾಗಿ ಬಂದವಳು. ಅಲ್ಲಿ ದೋಣಿ ಹತ್ತಿದರೆ ಹೊಳೆಬಾಗಿಲಿಗೆ ನೀರಿನಲ್ಲಿ ನಾಲ್ಕು ಮೈಲುಗಳ ದಾರಿ. ಅದು ಚೂರು ಪೇಟೆ ತರಹ.

ಶಾಲೆ, ಅಂಗಡಿ, ಚಕ್ರೇಶ್ವರಿ ದೇವಸ್ಥಾನ, ಮೋಟಾರ್ ಬಂಡಿ ಹೋಪ ವಾಹನ ಮಸ್ತ ಜನ ಇದ್ದ ಜಾಗ. ಇಲ್ಲಿ ಅದೆಂತದೂ ಇಲ್ಲೆ. ನಿನ್ನ ದೊಡ್ಡಪ್ಪನ ಹೆಂಡತಿಯರು ಸಮಾ ಒಂದು ವಾರ ನಿಂತರೆ ಕೇಳು. ಮೈಮೇಲೆ ಚೇಳು ಬಿದ್ದಂಗೆ ಥೈ ಥೈ. ಯಾವ ಕಷ್ಟಕ್ಕೆ ಹೆದರದ ನಾನು ನಿನ್ನ  ದೊಡ್ಡಪ್ಪನ ಹೆಂಡತಿಯರಂತೆ ನಾಜೂಕಿನವಳಾ? ಹೇಳು. ಆಸ್ತಿಯಲ್ಲಿ ಪಾಲು ಕೊಡ್ಬೇಡಿ ಅಂತ ನಾನು ನಿನ್ನ ಅಪ್ಪನ ಕಿವಿ ಊದಿದ್ದೇನಾ? ಹೇಳು’

‘ಪಾಲು ಅಂದ್ರೆ ಎಂತಾದ್ದು?’ ಗೌರಿ ಕೇಳಿದ ಪ್ರಶ್ನೆಗೆ ಆಯಿ ಉತ್ತರವಿತ್ತಷ್ಟೂ ಮುಗಿಯದು. ರಘುರಾಮ ಸಿರ್ಸಿಯಲ್ಲಿ, ಸೀತೂ ದೊಡ್ಡಪ್ಪ ಗೋವಾದಲ್ಲಿ ಹೊಸಮನೆ ಕಟ್ಟಿಸುವ ಅಂದಾಜು ಮಾಡಿ ಮೂಲಮನೆ ಆಸ್ತಿಯಲ್ಲಿ ಪಾಲು ಬೇಡಿಕೆ ಇಟ್ಟಿದ್ದರು. ಎರಡು ಬಾರಿ ಬಂದು ನೆನಪಿಸಿ ಹೋಗಿದ್ದರು. ಅವರ ಒತ್ತಾಯ ಜಾಸ್ತಿಯಾದಾಗ ಏನನ್ನೂ ಉತ್ತರಿಸಲಿಲ್ಲ. ಕೆಲವು ಸಾವಿರ ರೂಪಾಯಿ, ಕಿಟಕಿ ಬಾಗಿಲಿಗೆ ಮನೆಯಲ್ಲೇ ಕಡಿಸಿಟ್ಟ ಹಲಸು, ದೇವದಾರು ಮರಗಳನ್ನು ಕೊಡುತ್ತೇನೆ ಎಂದು ಸುಬ್ಬಪ್ಪಯ್ಯ ಹೇಳಿದರೂ ಸಮಾಧಾನ ಆಗಲಿಲ್ಲ.

ಇಡೀ ಜಾಗದ ಸಮಪಾಲು ಬೇಕು. ಅಥವಾ ವರ್ಷಕ್ಕೆ ಇಂತಿಷ್ಟು ಆದಾಯದ ಪಾಲಿನ ಹಣ ಸಿಗಬೇಕು ಎಂದವರ ಶರ್ತು. ಜಾಗದಲ್ಲಿ ಪಾಲು ಕೊಡುವುದು ಕಷ್ಟ. ಆದಾಯದಲ್ಲಿ ಪ್ರತಿವರ್ಷ ಮೂರುಪಾಲು ಮಾಡಿದರೆ ರಾಮಪ್ಪಯ್ಯ ಸಾಲದ ಸುಳಿಗೆ ಬಿದ್ದಂತೆ. ಹುಟ್ಟುವಳಿ ಬರದಿದ್ದರೆ ಗಂಗೊಳ್ಳಿ ಹೊಳೆಯೇ ಗತಿ. ಸುಬ್ಬಪ್ಪಯ್ಯ ಮುಂದಾಲೋಚನೆ ಮಾಡಿಯೇ ಗೌರಿ ಹುಟ್ಟಿದ ವರ್ಷ ಜಮೀನನ್ನು ರಾಮಪ್ಪಯ್ಯನ ಹೆಸರಿಗೆ ಮಾಡಿಬಿಟ್ಟಿದ್ದರು. ದೊಡ್ಡ ಬಾಂಬ್ ಬಿದ್ದಂತೆ ಸ್ಪೋಟ.

‘ಗೌರಿ, ನಾನು ಹೇಳಿ  ಬರೆಸಿದ್ದ.? ಮಾವನವರು ಅವೇ ಬರೆದು ಹಾಕಿದ್ದು. ಮತ್ತೆ ಈ ಭಾವಂದಿರು ನಾನೇ ಕಮ್ಮಕು ಕೊಟ್ಟೆ ಅಂತ ಎಷ್ಟು ಗಲಾಟೆ ನೋಡು. ಅವೇ ಇಬ್ಬರು ಉಳೀಲಿ ಇಲ್ಲಿ. ಮಾರಿ ಎಲ್ಲ ತಕ್ಕೊಂಡು ಹೋಗ್ಲಿ. ನಂಗೆತ್ತದು? ನಾವಿಬ್ಬರು ನಿನ್ನನ್ನು ಮಾಣಿಯನ್ನು ಕರ್ಕೊಂಡು ಹೊರ ಬೀಳ್ತೊ. ಹುಟ್ಟಿಸಿದ ದೈವ ಹೊಟ್ಟೆ ನೋಡಲಾರನೇ? ರಟ್ಟೆಲಿ ಗೆಯ್ಯುವ ತಾಕತ್ತು ಇದ್ದು. ಎಲ್ಲೊ ದುಡಿದು ತಿಂದರೆ ಸಾಕು’

ಆಯಿಯನ್ನು ಅಪ್ಪಿ ಹಿಡಿದು ಗೌರಿ ತಾನೂ ಅತ್ತಳು. ಇಬ್ಬರು ದೊಡ್ಡಪ್ಪಂದಿರಲ್ಲಿ ಅವಳಿಗೆ ಸಲುಗೆ ಜಾಸ್ತಿ. ಒಮ್ಮೆ ಅಪ್ಪಯ್ಯನ ಜೊತೆ ಇಬ್ಬರು ದೊಡ್ಡಪ್ಪಂದಿರ ಮನೆಗೆ ಹೋದಾಗ ಎಂತ ಸಮ್ಮಾನ! ಅವಳಿಗೆ ಅಂಗಿ, ನಾಣಿ ಬರಲಿಲ್ಲವೆಂದು ಅವನಿಗೆ ಅಂಗಿ ಚಡ್ಡಿ  ಕೊಡಿಸಿದ್ದು ರಘು ದೊಡ್ಡಪ್ಪ, ಕಾಲಿನ ಬೆಳ್ಳಿ ಗೆಜ್ಜೆ, ಕೀಲಿ ತಿರುಗಿಸಿದರೆ ಓಡುವ ಕಾರು ನಾಣಿಗೆ ಕೊಟ್ಟದ್ದು ಸೀತೂದೊಡ್ಡಪ್ಪ. “ಮಕ್ಕಳನ್ನು ಶಾಲೆಗೆ ಕಳಿಸಿ ಚೆನ್ನಾಗಿ ಓದಿಸು” ಎಂದಿದ್ದರು ಇಬ್ಬರೂ ಅಪ್ಪಯ್ಯನಿಗೆ. ಈಗ ನೋಡಿದರೆ ಆ ಜನ ಬೇರೆಯೇ. ಹೀಗಾ ಆಯಿಯನ್ನು ಗೋಳಾಡಿಸುವುದು? ಅಜ್ಜಯ್ಯ, ಅಜ್ಜಮ್ಮ ಎಂತಕ್ಕೆ ಮಾತಾಡ್ತಿಲ್ಲೆ? ಪಾತ್ರೆಪಗಡಿ, ಮರಮಟ್ಟು, ಚಿನ್ನಾಬರಣದ ವಿಷಯ ಹೇಗೆ? ರಘು ದೊಡ್ಡಪ್ಪನಿಗೆ ಒಂಚೂರೂ ನಾಚಿಕೆಯಿಲ್ಲೆ. ಅಪ್ಪಯ್ಯ ಬಾಯಿಗೆ ಬೀಗ ಹಾಕಿ ಕೂತಿದ್ದ. ಸುಬ್ಬಪ್ಪಯ್ಯನವರೇ ಮಾತಾಡಿದ್ದು,

‘ನಿಮಗೆ ಮನೆ ಕಟ್ಟೋಣಕ್ಕೆ ಬೇಕಾದ ಮರದ ಹಲಗೆಗಳು ಅಟ್ಟದಲ್ಲಿ ಮತ್ತು ಹಟ್ಟಿಯಲ್ಲಿವೆ. ನಿತ್ಯ ಬಳಸುವ ಹಿತ್ತಾಳೆ ಪಾತ್ರೆಗಳು. ತಾಮ್ರದ ಕೊಳತಪ್ಪಲೆಗಳು,ಏನು ಬೇಕು? ಶರಾವತಿಗೆ ಅವಳ ಅಪ್ಪನ ಮನೆಯಿಂದ ಕೊಟ್ಟ ಬೆಳ್ಳಿ ನೀಲಾಂಜನ, ಬೆಳ್ಳಿ ಬಟ್ಟಲು, ಕುಂಕುಮ ಭರಣಿ ಇವಿಷ್ಟು ಬಿಟ್ಟು ದೇವರ ಪರಿಕರಗಳು, ಆರತಿ, ಬೆಳ್ಳಿ ಹರಿವಾಣ ಏನೇನು ಇದೆಯೋ ಎಲ್ಲ ಇಬ್ಬರೂ ಹಂಚಿಕೊಳ್ಳಿ. ಎಲ್ಲ ನಿಮಗೇ!’

ದಾಕ್ಷಿಣ್ಯದ ಮಾತೇ ಇಲ್ಲ. ಅಟ್ಟ ಖಾಲಿಯಾಯ್ತು. ಮರಮಟ್ಟುಗಳನ್ನು ತ್ರಾಸಿಯಲ್ಲಿ ಬಂದು ನಿಂತ ಮೋಟಾರ್ ಗಾಡಿಗೆ ಸಾಗಿಸಿಯಾಯ್ತು. ಆಮೇಲೆ ತಿಂಗಳಿಗೊಮ್ಮೆ ಅಮವಾಸ್ಯೆ ಹುಣ್ಣಿಮೆಗಳು ಬರುವಂತೆ ಇಬ್ಬರು ದೊಡ್ಡಪ್ಪಂದಿರೂ ಅಪ್ಪಯ್ಯ ತೆಗೆದ ಉತ್ಪನ್ನದಲ್ಲಿ ನಾಚಿಕೆಯಿಲ್ಲದೆ ತುಂಬಿದ್ದೇ ತುಂಬಿದ್ದು. ವರ್ಷಕ್ಕೊಮ್ಮೆ ಮಾಡಿರಿಸಿದ ಮಿಡಿ ಉಪ್ಪಿನಾಕಾಯಿ, ಉದ್ದು, ಹಲಸಿನ ಹಪ್ಪಳದಕಟ್ಟು, ಬಾಳಕ ಮೆಣಸು, ಜೇನು, ಕಾಯಿಸಿದ ತಾಜಾ ದನದ ತುಪ್ಪ ಒಂದೇ ಎರಡೇ ಹಳ್ಳಿಮನೆಯದು ಎಂದು ಹೊಗಳಿಕೆ ಬೇರೆ. ಆಯಿ ನಗುತ್ತಲೇ ಕೊಡುವಾಗ ಗೌರಿ ಮೋರೆ ಬಿಗಿದುಕೊಳ್ಳುತ್ತಿತ್ತು. ನಾಣಿಗೆ ಹಲಸಿನ ಹಪ್ಪಳ ಪ್ರೀತಿ. ಅದು ಊಟಕ್ಕಿದ್ದರೆ ಅವ ಎರಡು ತುತ್ತು ಜಾಸ್ತಿಯೇ ಉಣ್ಣುವವ. ‘ಇಬ್ಬರು ದೊಡ್ಡಮ್ಮರು ಹಪ್ಪಳ ಸಂಡಿಗೆ ಮಾಡದೆ ನಿನ್ನನ್ನು ಯಾಕೆ ಕೇಳ್ತಾರೆ ಆಯಿ? ಅಜ್ಜಮ್ಮನೂ ಯಾಕೆ ಹೇಳ್ತಿಲ್ಲೆ? ಅಪ್ಪಯ್ಯನೂ.’ 

 ‘ಏನೋ ಅವರಿಗೂ ಮಕ್ಕಳಿದ್ದಾರೆ ನಿನ್ನ ಹಾಗೆ. ತಿನ್ನಲಿ ಬಿಡೆ. ನಿಮಗೆ ಕಮ್ಮಿ ಮಾಡಿದ್ದೇನಾ?’

ಆದರೆ ಒಮ್ಮೆ ಸುಬ್ಬಪ್ಪಯ್ಯನೇ ಬರೆ ಕಾಸಿದರು, ಚೆನ್ನಾಗಿ ತಾಗುವಂತೆ. ‘ಚೆಂದಕ್ಕೆ ಬಂದು ಹೋಗಿ ಮಾಡಿ. ನಿಮ್ಮ ತಮ್ಮನಿಗೂ ಒಂದು ಸಂಸಾರ ಇದೆ, ನೆನಪಿರಲಿ. ಇನ್ಮೇಲೆ ಇಲ್ಲಿಂದ ಎಂತ ಸಾಗಿಸಿದರೂ ನಾ ಪರುಷರಾಮನ ಅವತಾರ ತಾಳ್ಬೇಕಾದೀತು. ಹುಷಾರ್!’

ಸ್ವಂತ ಮಕ್ಕಳಿಗೆ ತಿರುಗಿಬಿದ್ದ ಅಪ್ಪ. ಅಲ್ಲದಾ ಮತ್ತೆ? ಹಾಗೇ ಆಗಬೇಕು. ನಾವು ಮಕ್ಕಳು ತಪ್ಪು ಮಾಡಿದಂತೆ ದೊಡ್ಡವರ ತಪ್ಪು ಅವಕ್ಕೆ ಗೊತ್ತಾಗ್ಬೇಕು. ‘ಹಾಗಾಗ್ಬೇಕು, ಹಲ್ಲು ಮುರೀಬೇಕು’ ಗೌರಿಗೆ ಖುಷಿಯೇ ಖುಷಿ. ನಾಣಿಯ ಕೈ ಹಿಡಿದು ಗರ ಗರ ಸುತ್ತು ಬಂದಿದ್ದಳು. ಅದೇ ಕೊನೆ. ಸಂಬಂಧದ ಗೋಡೆ ಪೂರಾ ಕುಸಿದು ಬಿತ್ತು. ದೊಡ್ಡಪ್ಪಂದಿರು ಅವರ ಕುಟುಂಬ ಹೊಳೆಬಾಗಿಲಿಗೆ ಬರುವುದು ನಿಂತು ಹೋಯಿತು.

ಅನ್ನಪೂರ್ಣೇಶ್ವರಿ ದೇವಸ್ಥಾನದ ನವರಾತ್ರೆ ಪೂಜೆಗೆ ದೊಡ್ಡಪ್ಪಂದಿರು ಮಾತ್ರ ಒಂದು ದಿನಕ್ಕೆ ಬಂದು ಹಾಜರಿ ಹಾಕಿ ಪ್ರಸಾದ ಸ್ವೀಕರಿಸಿ ಹೋಗುತ್ತಾರೆ. ಮಾತಿಲ್ಲ, ಕತೆಯಿಲ್ಲ. ಗುಮ್ಮನಗುಸ್ಕಗಳು! ರಾಮಪ್ಪಯ್ಯ ಹಾಗೆಲ್ಲ ಸಂಬಂಧ ಕಳೆದುಕೊಳ್ಳದೆ ಹೋಗಿಬರುವ ಪರಿಪಾಠ ಇಟ್ಟು ಕೊಂಡಿದ್ದ. ಒಮ್ಮೆ ಗೋವಾಕ್ಕೆ ಗೌರಿಯೂ ಹೋಗಿದ್ದಳು. ಆಗ ಸೀತೂದೊಡ್ಡಪ್ಪ ಅವಳ ಸಾಮನ್ಯ ಕ್ರಯದ ಪರಕಾರ ರವಿಕೆ ಕಂಡು ಕುಚೇಷ್ಟೆ ಮಾಡಿದ್ದ.

‘ದಂಡಿಯಾಗಿ ಗದ್ದೆ ತೋಟದ ಆದಾಯ ಇದ್ದರೂ ಎಂತ ಕಂಜೂಸು ನಿನ್ನ ಅಪ್ಪ? ಅಲ್ಲ, ನಿಂಗೊಂದು ಒಳ್ಳೆಯ ಬಟ್ಟೆ ಹೊಲಿಸುವ ಯೋಗ್ಯತೆಯೂ ಇಲ್ಲವೇನೇ ಅವನಿಗೆ?ʼ ಕೇಳಿದಾಗ ದೊಡ್ಡಪ್ಪನ ಮೇಲೆ ಸಿಟ್ಟು ಬಂದಿತ್ತು. ರಘು ದೊಡ್ಡಪ್ಪ ಇನ್ನೂ ಕಠೋರ. ‘ನನ್ನ ಅಮ್ಮನ ಚಿನ್ನಾಭರಣ ಪೂರಾ ಶರಾವತಿ ಅತ್ತಿಗೆ ಬುಟ್ಟಿಗೆ ಹಾಕಿಕೊಂಡಿದ್ದಾಳಲ್ಲೆ? ಮತ್ತೆ ಇದು ಎಂತದೂ ಹಾಕ್ದೆ ಬೋಳು ಕಿವಿಲಿ ಬಂದಿದೆ? ಒಂದು ಚಿನ್ನದ ಟಿಕ್ಕಿ ಹಾಕೂಕೆ ಆತಿಲ್ಯಾ? ಕಥೆ ಎಂತಾ?’ ಗೌರಿಗೆ ಕೇಳಲೆಂದೇ ಹೆಂಡತಿಯ ಬಳಿ ಹೇಳಿದ್ದ, ಚಿನ್ನದ ಟಿಕ್ಕಿಯಲ್ಲಿ ಒಂದರ ತಿರುಪು ಜಾರಿಬಿದ್ದು ಕಳೆದುಹೋಗಿ ಬೋಳು ಕಿವಿಯಲ್ಲಿ ಇಲ್ಲಿಗೆ ಬಂದದ್ದೇ ಕಣ್ಣು ಕಿಸುರಾದದ್ದು. ಸೂಕ್ಷ ಮನಸ್ಸಿನ ಹುಡುಗಿ.

ತನ್ನ ಮುಂದೆ ಅಪ್ಪಯ್ಯ ಆಯಿ ಬಗ್ಗೆ ಹೀಗಾ ಆಡಿಕೊಳ್ಳುವುದು? ನಾ ಬೋಳು ಕಿವಿಯಲ್ಲಿ ಬರಲಿ, ಬಟ್ಟೆ ಇಲ್ಲದೆ ದುಂಡಗೆ ತಿರಗಲಿ ಇವಕ್ಕೆ ಎಂತಾ ಹೇಳುವ ರೋಗ? ಇನ್ನೂ ಹೋಗಲಿಲ್ಲ ಇವರ ಚಿನ್ನದ ಮೋಹ. ಆದಿನ, ಪಾತ್ರೆಗಳು ಸಪ್ಪಳ ಮಾಡಿದ ದಿನ ಕೊನೆಗೆ ರಘು ದೊಡ್ಡಪ್ಪ, ಇಬ್ಬರು ದೊಡ್ಡಮ್ಮರು ಅಜ್ಜಮ್ಮನ ಒಡವೆ ಎಲ್ಲಾ ತೋರಿಸಲೇ ಬೇಕೆಂದು ಹಠ ಮಾಡಿದ್ದರು. ಇಲ್ಲ ಎನ್ನುತ್ತಲೇ ಅಜ್ಜಮ್ಮನ ಒಪ್ಪದ (ಚೆಂದದ) ಸಂದೂಕದಿಂದ ಹೊರಬಂದಿತ್ತು ಹಳೆಕಾಲದ ಒಡವೆಗಳು. ಅಬ್ಬ. ಎಷ್ಟು ನಮೂನಿಗಳು.

ಆಸೆ ನೀರೂರುವಂತೆ ಇನಿತೂ ಬಣ್ಣಗೆಡದೆ ಝಗಮಗ! ಗೌರಿಗೆ ಅಜ್ಜಮ್ಮ ಎಷ್ಟು ಬಾರಿ ತೋರಿಸಿದ್ದೋ. ಅದರಿಂದ ರಘುವಿನ ಇಬ್ಬರು ಮತ್ತು ಸೀತಾರಾಮನ ಮೂವರು ಹುಡುಗಿಯರಿಗೆ ಕಿವಿಯೋಲೆ, ಸರ, ಬಳೆಗಳನ್ನು ಈಗಾಗಲೆ ಕೊಟ್ಟಾಗಿದೆ. ಉಳಿದ ರಾಶಿ ದೊಡ್ಡಮ್ಮರು ನೋಡಿದ್ದು ಇದೇ ಮೊದಲು. ಅವರ ಅರಳಿದ ಕಣ್ಣು ಮುಚ್ಚಲೇ ಇಲ್ಲ. ಅವನ್ನು ಮೂರು ಪಾಲು ಮಾಡಬೇಡವೇ? ಆದರೆ ತುಂಬ ಹುಷಾರು ಅಜ್ಜಮ್ಮ. ಎಲ್ಲವನ್ನೂ ಗೌರಿಯ ಆಯಿಗೇ ಮುಚ್ಚಿ ಇಟ್ಟಳಲ್ಲ! ಆದರೂ ಆಯಿ ಹೇಳಿದ್ದೇನು?

‘ದೊಡ್ಡ ಸೊಸೆಯರು ಪಾಲು ಕೇಳ್ತಿದಾರೆ. ಅವರಿಗೆ ಬೇಕ್ಕಾದು ಕೊಡಿ ಅತ್ತೆ.’ ದೊಡ್ದ ಮನಸ್ಸು ಆಯಿಯದು.

‘ನೀನು ಸುಮ್ಮನಿರು ಶರಾವತಿ. ಇದೆಲ್ಲ ನನ್ನ ಸೊತ್ತು. ಪಾವಲಿ ತೂಕದ್ದೂ ನನ್ನ ಗಂಡ ಮಾಡಿಸಿದ್ದಲ್ಲ. ನನ್ನ ಅಪ್ಪ ಗುರಿಕಾರ ಆಗಿದ್ದ. ಒಬ್ಬಳೇ ಮಗಳು ಹೇಳಿ ಕೊಟ್ಟದ್ದು ಇದೆಲ್ಲ. ಅಪ್ಪನ ಮನೆಗೇ ಅಕ್ಕಸಾಲಿಗ ಬಂದು ನನ್ನ ಮರ್ಜಿಗೆ ಬೇಕಾದ್ದು ಕೇಳಿ ಅಳತೆ ತಕ್ಕೊಂಡು ಹೋಗಿ ಮಾಡಿ ತಂದದ್ದು. ಇನ್ನೂ ಹೊಸ್ತರ ಹಾಗಿದೆ. ಇವನ್ನು ಯಾರಿಗೆ ಕೊಡಬೇಕು? ಯಾವಾಗ ಕೊಡಬೇಕು ಅದು ನನ್ನ ಮರ್ಜಿ. ನನ್ನ ಮನೆ ನಂದಾದೀಪ ಹಚ್ಚುವವಳಿಗೆ ಕೊಡುವ ಹಕ್ಕು ನನಗಿದೆ.’

‘ನಂದಾದೀಪ ಅಂದ್ರೆ ಎಂತ ಆಯೀ?’ ಗೌರಿಗೆ ಅಷ್ಟೂ ತಿಳಿಯದು.

‘ದೇವರ ಮುಂದೆ ದಿನ ರಾತ್ರೆ ಎಂದಿಗೂ ನಂದದಂತೆ ಹಚ್ಚಿ ಇಡ್ತಾರಲ್ಲ ಮಗಾʼ ಆಯಿಗೆ ಮಗಳ ಮೇಲೆ ಹೆಚ್ಚು ಕೊಂಡಾಟ ಬಂದರೆ ಮಗಾ ಎನ್ನಬೇಕು. ʼಅದು ನಂದಾದೀಪ. ಅತ್ತೆ, ನಿಮ್ಮ ಒಡವೆ ಆಸೆಗೆ ಜೊಲ್ಲು ಸುರಿಸಿ ನಂದಾದೀಪ ಹಚ್ಚುವವಳು ನಾನು ಅಂತ ಕೆಟ್ಟ ಹಣೆಪಟ್ಟಿ ಬೇಡ. ನಿಮ್ಮ ಮನೆಯ ನಂದಾದೀಪ ನಾನು ಹಚ್ಚಿದರೂ ಒಂದೇ, ಅವರಿಬ್ಬರೂ ಸೊಸೆಯಂದಿರು ಹಚ್ಚಿದರೂ ಒಂದೇ.ʼ

ಅಜ್ಜಮ್ಮ ಗುಲಗುಂಜಿ ತೂಕದ ಚಿನ್ನ ತೆಗೆಯದೆ ಒಡವೆ ಸಂದೂಕ ಮುಚ್ಚಿ ಒಳ ನಡೆದಾಗ ನಿಜಕ್ಕೂ ಗೌರಿಯ ತುಟಿಯಂಚಿನಲ್ಲಿ ನಗು. ಚಿನ್ನಕ್ಕೆ ಆಸೆ ಪಟ್ಟರಲ್ಲ ದೊಡ್ಡಮ್ಮರು? ಅತಿಆಸೆ ಮಾಡಿ ನೇರಳೇಹಣ್ಣು ಹುಳಿ ಎಂದೋಡಿದ ನರಿಯ ಕಥೆ ನೆನಪು. ಗೋಸುಂಬೆ ಬಣ್ಣ ನಂಬಬಾರದAತೆ. ಯಾಕೋ? ಇವತ್ತು ಅಜ್ಜಮ್ಮ ತಮ್ಮ ವಿರುದ್ಧ ಅಪ್ಪಯ್ಯನ ಬಳಿ ಚಾಡಿ ಹೇಳಿದರೂ ಪಾಪ ಅಜ್ಜಮ್ಮ. ಗೌರಿ, ನಾಣಿಯೆಂದರೆ ತಲೆಮೇಲೆ ಹೊರುವ ದೇವರು. ಕೊಲ್ಲೂರು ಮೂಕಾಂಬಿಕಾ ಸ್ತೋತ್ರ ಹೇಳುತ್ತ ಕೆಲವೊಮ್ಮೆ ಅವಳಿಗೆ ಐಲು ಬರುತ್ತದೆ.

ಆಗ ಈ  ಒಡವೆ ಸಂದೂಕ ಹೊರ ಬಂದು ಗೌರಿಯನ್ನು ಕರೆಯುತ್ತಾಳೆ. ‘ನನ್ನ ಬಂಗಾರ, ನನ್ನ ಕೂಸೇ, ನನ್ನ ಮುದ್ದೇ’ ಕೊಂಡಾಟದಲ್ಲಿ ಗೌರಿಯ ಎಳೆ ಮೈಗೆ ಸರ, ನೆಕ್ಲೇಸ್, ಹವಳದ ಹಾರ, ಸೊಂಟಪಟ್ಟಿ, ಕಾಲ್ಗೆಜ್ಜೆ, ತೋಳ್ಬಳೆ, ನೆತ್ತಿಎಳೆ ತೊಡಿಸಿ ‘ನೀ ಪುಟ್ಟ ದೇವಿ ಹಾಗೇ, ಕೊಲ್ಲೂರು ಮೂಕಾಂಬಿಕಾ ದೇವಿಯೇ! ನಿನಗೆ ನಮೋ ನಮಃ’ ಅಂದ ನೋಡಿ ಮರುಳಾಗಿ ಕಣ್ಣೀರು ಸುರಿಸಿ ಬಿಗಿದಪ್ಪಿದರೆ ಅಜ್ಜಮ್ಮ ಮೊಮ್ಮಗಳಿಗೆ ಸಮಯದ ಪರಿವೆಯಿಲ್ಲ. ಅಜ್ಜಮ್ಮ ಮಗು, ಗೌರಿ ದೇವಿ, ನಡೆಯುತ್ತದೆ ಆಟ ಅವರಲ್ಲಿ. ಹೊರಗೆ ಹಿತವಾದ ಮಳೆ ಇದ್ದರೆ ಅಜ್ಜಮ್ಮ ಮೂಕಾಂಬಿಕಾ ದೇವಿಯ ವೈಭವದ ಕಥೆ ಹೇಳುತ್ತ ಹೇಳುತ್ತಾ…

| ಇನ್ನು ನಾಳೆಗೆ |

‍ಲೇಖಕರು Admin

July 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

 1. ಲಲಿತ ಎ.ಪಿ.

  ಪುಟ ಗೌರಿಯ ಕಣ್ಣುಗಳ ಮೂಲಕ ದೊಡ್ಡವರ ಸಣ್ಣತನ, ಆಸ್ತಿ ಪಾಲಿಗಾಗಿ ಜಗಳ, ಚಿನ್ನ ಪಾತ್ರೆಗಳು ಮರಮಟ್ಟು ವಿಂಗಡನೆ, ಹಳ್ಳಿಯ ಮೂಲಮನೆಯಲ್ಲಿ ನೆಲೆಯಾದ ಮಗ,ಸೊಸೆಯ ನೋವು ಅಸಹಾಯತೆ ಮುಂತಾದ ಸಂಗತಿಗಳನ್ನು ನಾವು ನೋಡುವ ವಿಧಾನ ಹೊಸದಾಗಿದೆ, ಸೊಗಸಾಗಿದೆ.

  ಪ್ರತಿಕ್ರಿಯೆ
  • ಜಯಲಕ್ಷ್ಮಿ

   ಛೇ… ಗೌರಿಯ ದೊಡ್ಡಪ್ಪಂದಿರು,ಅವಳಲ್ಲಿ ಸಲುಗೆಯಿಂದ ಇದ್ದವರು,ಹೀಗೆ ಬದಲಾಗಬಾರ ದಿತ್ತು…ಎಳೆ ಮನಸ್ಸಿಗೆ ಎಷ್ಟು ಆಘಾತ.ಧಾರಾವಾಹಿ ಚೆಂದಕ್ಕೆ ಬರುತ್ತಾ ಇದೆ.ಅಜ್ಜ,ಅಜ್ಜಮ್ಮ,ಆಯಿಯರ ಚಿತ್ರಣ ಹಿತವಾಗಿದೆ.

   ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: