ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಿಕ್ಕಿದೆ.
ಕರಾವಳಿ ಲೇಖಕಿ ವಾಚಕಿಯರ ಸ೦ಘದ ಪ್ರಥಮ ಲೇಖಕಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಪುತ್ತೂರು ಹನ್ನೊ೦ದನೇ ತಾಲೂಕು ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ೨೦೦೫ರಲ್ಲಿ. ದ.ಕ. ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಯಾಗಿದ್ದರು.
26
ಗುಡಿಗಾರ ದೇವಣ್ಣ ಹಗಲು ಬಿಡುವಿಲ್ಲದಷ್ಟು ಕೆಲಸದಲ್ಲಿದ್ದರೂ ಸಂಜೆ ಆರರ ನಂತರ ಸೀದಾ ಅನ್ನಪೂರ್ಣೇಶ್ವರಿ ದೇವಿಯ ದೇವಸ್ಥಾನದಲ್ಲಿ ಹಾಜರು. ವಿನಯವೇ ಮೈವೆತ್ತಂತೆ ತಗ್ಗಿ ಬಗ್ಗಿ ನಡೆಯುವವ ಸಂಜೆ ದೈವೀ ಪ್ರಭೆಯಲ್ಲಿ ತನ್ನನ್ನೇ ಮರೆಯುವವ. ಪ್ರತಿ ಹದಿನೈದು ದಿನಕ್ಕೊಮ್ಮೆ ಅವನ ಪ್ರವಚನ ದೇವಸ್ಥಾನದ ಸಭಾ ಆವರಣದಲ್ಲಿ. ತುಂಬ ಪರಿಣಾಮಕಾರಿ ಅಲ್ಲದಿದ್ದರೂ ಚೆನ್ನಾಗಿ ದಾಸರ ಪದ ಹಾಡುತ್ತಾನೆ. ಭಕ್ತ ಪ್ರಹ್ಲಾದ, ಭಕ್ತ ಕುಂಬಾರ, ಶ್ರೀಕೃಷ್ಣ ಬಾಲಲೀಲೆ, ಶ್ರೀಕೃಷ್ಣ ಕಥಾ ಸಾರ, ಭಕ್ತ ಧ್ರುವ ಕುಮಾರ ಮುಂತಾದ ಭಕ್ತಿ ಪ್ರಧಾನ ಕಥೆಗಳ ಪ್ರವಚನದಲ್ಲಿ ಅವನ ಗಂಭೀರ ಕಂಠ, ಹಾಡು ಮಾತಿನಲ್ಲಿ ಕೇಳುಗರು ತಲೆದೂಗಬೇಕು.
ಒಮ್ಮೆ ಸುಬ್ಬಪ್ಪಯ್ಯ ಅವನ ಪ್ರವಚನಕ್ಕೆ ಹೋದವರು, ‘ವಿದ್ವತ್ತು ಏನೂ ಇಲ್ಲ. ಹೆಂಗ್ಸು, ಮಕ್ಕಳಿಗೆ ಅವನ ಪ್ರವಚನ ಸಾಕು’ ಎಂದದ್ದುಂಟು. ದೇವಣ್ಣನಿಗೆ ಬೇಸರವಿಲ್ಲ. ತಾನು ದೇವಿಗೆ ಭಕ್ತಿ ಮಾತುಗಳ ಸೇವೆ ಸಲ್ಲಿಸುವವ ಎನ್ನುತ್ತಾನೆ. ಈಗೀಗ ಮಾತನಾಡಿಯೇ ನಾಲಿಗೆ ಸಾಫ್ ಆಗಿ ಹಿರಿ ತಲೆಯವರು ಬರುತ್ತಿದ್ದಾರೆ. ಗೌರಿ, ನಾಣಿಗೆ ವಿದ್ವತ್ತಿನ ಮಹತ್ವ ಗೊತ್ತಿಲ್ಲ. ಮಕ್ಕಳಿಗೆಂದು ಕಥೆ ಹೇಳುವ ಅವನ ರೀತಿ ಇಷ್ಟ. ಇಲ್ಲದಿದ್ದರೆ ಈ ಬಾಲ ಬಿಚ್ಚುವ ಮಂಗಗಳು ದೇವಸ್ಥಾನಕ್ಕೆ ಬರುವುದುಂಟೇ! ಕಥೆಯ ಹುಚ್ಚು ದೇವಣ್ಣನ ಮಾತಿನ ಮೋಡಿಗೆ ಎಳೆದು ತಂದದ್ದು ಅಲ್ಲವೇ?
ಆ ಶುಕ್ರವಾರ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಸುಬ್ಬಪ್ಪಯ್ಯನವರ ಹಾಡು, ಕಮಲತ್ತೆಯ ಹಾರ್ಮೋನಿಯಂ ಆದ ನಂತರ ಗುಡಿಗಾರು ದೇವಣ್ಣನ ಪ್ರವಚನ. ಆ ದಿನದ ವಿಷಯ ಭಕ್ತ ಧ್ರುವ ಕುಮಾರ. ನಾಣಿ, ಗೌರಿ ಮೊದಲೇ ಬಂದು ಕುಳಿತಿದ್ದಾರೆ ಕಥೆ ಕೇಳಲು. ಏಳುವರ್ಷದ ಧ್ರುವಕುಮಾರ. ತಂದೆಯ ತೊಡೆಯೇರಿ ಕುಳಿತುಕೊಳ್ಳುವ ಆಸೆಗೆ ಅವನ ಮಲತಾಯಿ ಬಿಡುವುದಿಲ್ಲ. ಆಗ ಹೆತ್ತ ತಾಯಿ, ‘ನಿನ್ನ ತಂದೆಯ ಪ್ರೀತಿ ಗಳಿಸಲು ನೀನು ದೇವರನ್ನು ಹುಡುಕಿಕೊಂಡು ಹೋಗು’ ಎನ್ನುತ್ತಾಳೆ.
ಧ್ರುವಕುಮಾರ ತಾಯಿಯ ಮಾತಿನಂತೆ ದೇವರನ್ನು ಒಲಿಸಿಕೊಳ್ಳಲು ಕಾಡಿಗೆ ಹೋಗುತ್ತಾನೆ. ಅವನು ದೀರ್ಘ ತಪಸ್ಸು ಮಾಡಿದ್ದು, ದೇವರು ಪ್ರತ್ಯಕ್ಷನಾಗಿ ವರ ಕೊಟ್ಟದ್ದು, ಕೊನೆಗೆ ಹೊಳೆಯುವ ನಕ್ಷತ್ರವಾಗಿ ಬಾನಿನಲ್ಲಿ ಚಿರಸ್ಥಾಯಿ ಆದದ್ದು, ಇದಿಷ್ಟು ಕಥೆ ಸ್ವಾರಸ್ಯದಲ್ಲಿ ವಿವರಿಸಿದ ದೇವಣ್ಣ ಈಗಲೂ ಉತ್ತರ ಭಾಗದಲ್ಲಿ ಧ್ರುವ ನಕ್ಷತ್ರ ನೋಡಬಹುದೆಂದೂ ಚೆಂದಕ್ಕೆ ಮನಸ್ಸಿಗೆ ನಾಟುವಂತೆ ಹೇಳಿದ. ಕೇಳಿ ಗೌರಿಗೆ ಅಳು. ನಾಣಿ ಕಣ್ಣಲ್ಲೂ ನೀರು. ಮುಂದೆ ಎರಡು ರಾತ್ರೆ ಆಕಾಶದ ಉತ್ತರಭಾಗದಲ್ಲಿ ಧ್ರುವ ನಕ್ಷತ್ರ ಹುಡುಕಿ, ಅಜ್ಜಯ್ಯನಿಂದ ಕೇಳಿ ತಿಳಿದು ನೋಡಿದ್ದರು. ಹೊಳೆಯುವ ದೊಡ್ಡ ನಕ್ಷತ್ರ!
ಧ್ರುವಕುಮಾರ ತಪಸ್ಸಿಗೆ ಕುಳಿತದ್ದು ಅರಣ್ಯದ ಏಕಾಂತ ಜಾಗದಲ್ಲಿ. ನದಿ ಹೊಳ್ಳ ಇಲ್ಲದ ದಟ್ಟ ಕಾಡಿನಲ್ಲಿ. ಒತ್ತಾಗಿ ಬೆಳೆದ ಮುತ್ತುಗದ ಮರವೋ, ಕಲ್ಮರದ ಮರವೋ, ಸಾಗವಾನಿಯೋ, ಅಶ್ವತ್ಥದ ಬಿಳಿಲೋ ಅದರ ಕೆಳಗೆ ಬಿದ್ದ ತರಗೆಲೆಗಳ ಹಾಸಿನಲ್ಲಿ ಪದ್ಮಾಸನ ಹಾಕಿ ಕುಳಿತು ತಪಸ್ಸು? ಅಯ್ಯಮ್ಮೋ! ಹಾವು ಹರಣೆ, ಹುಲಿಸಿಂಹ, ಆನೆ ಕರಡಿ ಬಂದೀತೆಂಬ ಹೆದರಿಕೆ ಇಲ್ಲವೇ ಆ ಪೋರನಿಗೆ? ದೇವರ ಕರೆಯಲ್ಲಿ ತಂದೆ ಪ್ರೀತಿ ಸಿಗಬೇಕೆಂಬ ಒಂದೇ ಧ್ಯಾನ. ನಾವೂ ಏಕಾಂತದಲ್ಲಿ ಕುಳಿತು ದೇವರನ್ನು ಧ್ಯಾನಿಸಿದರೆ ನಮ್ಮ ಬಯಕೆಗಳು ಕೈಗೂಡುತ್ತವೆ ಎಂದಿದ್ದ ದೇವಣ್ಣ ತನ್ನ ಪ್ರವಚನದಲ್ಲಿ. ಆಗಲೇ ಈ ಮಕ್ಕಳಲ್ಲಿ ತಾವೂ ಅವನಂತೆ ಧ್ಯಾನ ಮಾಡಬೇಕೆಂಬ ವಯೋಸಹಜ ಬಯಕೆ ಉದಯಿಸಿತ್ತು.
ಏಕಾಂತಕ್ಕೆ ಅಟ್ಟ ಒಳ್ಳೆಯದು. ಅಲ್ಲಿ ಕುಳಿತುಕೊಳ್ಳೋಣವೇ? ಛೀ, ಸುಶೀಲಚಿಕ್ಕಿ ಇರುತ್ತಾಳೆ. ಅಟ್ಟಕ್ಕಿಂತ ಬೆಟ್ಟವೇ ಲಾಯಕ್ಕು. ಬೆಟ್ಟ ಅಂದರೆ ತಾವು ಹಾಡಿ ದಾಟಿ ಕಾಡಿಗೆ ಹೋಗಬೇಕು. ಅಲ್ಲಿ ಯಾರೂ ತಿರುಗದ ಯಾರೂ ನೋಡದ ಜಾಗ ಎಲ್ಲಿದೆ? ತಮ್ಮ ದನಕರುಗಳು ಮೇಯಲು ಕಾಡಿನ ತುದಿಗೂ ಬರುತ್ತವಲ್ಲ. ಏನು ಮಾಡೋಣ? ಆಯಿ ಅಪ್ಪಯ್ಯನಿಗೆ ಹೇಳದೆ, ಅಜ್ಜಮ್ಮನಿಗೂ ತಿಳಿಸದೆ ತಾವು ತಪಸ್ಸು ಮಾಡಲು ಕಾಡಿಗೆ ಹೋಗುವುದೇ? ಹಾಗೆ ಹೇಳಿದರೆ ಮನೆ ಅಂಗಳದಿಂದ ಹೊರ ಬಿಡುವರೇ? ಇಬ್ಬರಿಗೂ ಒಂದೆರಡು ದಿನ ಅದೇ ಯೋಚನೆ ಒಂದೇ.
ಕೊನೆಗೆ ಗೌರಿ ಆಯಿಯನ್ನೇ ಕೇಳಿದಳು, ‘ನಾವೂ ಧ್ರುವಕುಮಾರನಂತೆ ತಪಸ್ಸು ಮಾಡಿದ್ರೆ ದೇವರು ಕಾಣ್ತಾನಾ?’ ಆಯಿಗೆ ನಗುವೋ ನಗು. ‘ಮಾಡಿ ನೋಡಿ, ದೇವರು ಪ್ರತ್ಯಕ್ಷ ಆಗಲೂ ಬಹ್ದು’ ‘ದೇವರನ್ನು ನೆನೆದು ತಪಸ್ಸು ಮಾಡ್ಬೇಕಂತೆ. ದೇವಣ್ಣ ಹೇಳಿದ್ದ ಮೂಗು ಮುಚ್ಚಿ ಕಣ್ಣು ಮುಚ್ಚಿ ಓಂ ಹೇಳ್ಬೇಕಂತೆ. ಹೌದಾ ಆಯಿ? ನಾನೂ ಹಾಗೆ ಕುಳಿತು ಮಾಡ್ಲಾ?’
ನಾಣಿಯ ತಲೆ ಸವರಿದ ಆಯಿ ಅವರ ಹುಚ್ಚು ಮಾತಿಗೆ ಸೊಪ್ಪು ಹಾಕದೆ ಸುಮ್ಮನಾದಳು. ಮಕ್ಕಳು ತಮಗೆ ಗೊತ್ತಿಲ್ಲದ ಸಂಗತಿಗೆ ನೂರು ಪ್ರಶ್ನೆ ಕೇಳ್ತಾವೆ. ಸಹಜವೇ. ಸ್ವಲ್ಪ ದೊಡ್ಡವರಾಗಲಿ. ಧ್ರುವನ ತಪಸ್ಸು ಅರ್ಥವಾದೀತು. ಆಯಿಯ ಮೌನಗೌರಿ, ನಾಣಿಯಲ್ಲಿ ಉತ್ಸಾಹ ಹೆಚ್ಚಿಸಿಬಿಟ್ಟಿತು. ಗುಟ್ಟಾಗಿ ಧ್ರುವನಂತೆ ತಪಸ್ಸಿಗೆ ಹೋಗುವ ಎಣಿಕೆ ಹಾಕಿದರು. ಹೌದಲ್ಲವೇ, ಪ್ರಕೃತಿಯ ಮುಗ್ಧ ಸ್ನಿಗ್ಧ ಸೌಂದರ್ಯದಲ್ಲಿ ಲವಲೇಶವೂ ಕೃತ್ರಿಮವಿಲ್ಲದ ಕಡೆದಿಟ್ಟ ಪುತ್ತಳಿಗಳು. ಈಗಿರುವುದೇ ಸತ್ಯ. ಅನುಕರಣೆಯಲ್ಲಿ ಕುತೂಹಲ, ಆನಂದದ ಕೋಲಾಹಲ.
ಒಂದು ಅಪರಾನ್ಹ ಪಶ್ಚಿಮಕ್ಕೆ ಸೂರ್ಯ ಕೆಳಗಿಳಿಯಲು ಇನ್ನೂ ಎರಡು ತಾಸು ಇರುವಾಗ ಆಯಿಮಾಡಿಟ್ಟ ತಿಂಡಿ ಮುಗಿಸಿ ಗೌರಿಯೂ ನಾಣಿಯೂ ಮೋತಿಯ ಕಣ್ತಪ್ಪಿಸಿ ಸೂರ್ಯನಿಗೆ ಬೆನ್ನು ಹಾಕಿ ಕಾಡು ಏರಿದರು. ಗೌರಿಯದು ಉದ್ದ ಪರಕಾರ, ಬುಗ್ಗೆ ಕೈ ರವಿಕೆ. ನಾಣಿ ಎಂದಿನ ತುಂಡು ಬಟ್ಟೆ ಬಿಟ್ಟು ಚಡ್ಡಿ ಅಂಗಿ ಹಾಕಿದ್ದ. ಏನೋ ಸಾಧಿಸುವೆ ಎಂಬ ನಗುವಿತ್ತು ಮೊಗದಲ್ಲಿ. ಇಬ್ಬರೂ ನಡಿಗೆ ಚುರುಕು ಮಾಡಿದರು. ಯಾವಾಗಲೂ ತಾವು ತಿರುಗುವ, ದನಕರುಗಳು ಮೇಯುವ ಜಾಗಗಳೇ. ಹೊಳೆನೀರಿನ ತೀರದಲ್ಲಿ ದಟ್ಟ ಕಾಡು ಎಲ್ಲಿದೆ? ಕುರುಚಲು ಪೊದೆಗಳೇ.
ಕೆಲವೆಡೆ ಯಾರೂ ನಡೆದು ಸವೆಯದಿರುವ ಪೊದೆಗಳು, ಕಾಡು ಮರಗಳಿವೆ. ಏಕಾಂತಕ್ಕೆ ಸಾಕು. ಅದೋ, ಅತ್ತ ಕಾಣಿಸಿತು ಸ್ವಲ್ಪ ಒತ್ತಾಗಿ ಬೆಳೆದ ಸಾಧಾರಣ ಎತ್ತರದ ದೊಡ್ಡ ಸಾಗುವಾನಿ ಮರ. ಅದರ ಕೆಳಗೆ ಮಳೆನೀರಿನಿಂದ ಒದ್ದೆಯಾಗಿ ಒಣಗಿದ ಎಲೆಗಳು. ಮರಕ್ಕೆ ಹಬ್ಬಿದ ಬಂದಣಿಕೆಗಳು. ಜಡೆಗಟ್ಟಿದಂತೆ ತಿರುಚಿದ ಬಳ್ಳಿಗಳು. ಮರದ ಆಚೆ ಬಾಯ್ದೆರೆದು ನಿಂತ ಸಣ್ಣ ಹೊಂಡ. ಶಾಂತ ನಿರ್ಜನ ಪ್ರದೇಶ. ಕುಳಿತುಕೊಳ್ಳಲು ಪ್ರಶಸ್ತವಾಗಿತ್ತು. ಕಾಡು ಏರಿ ಬರುವಾಗ ಪ್ರಖರ ಬೆಳಕಿತ್ತು. ಈ ಜಾಗದಲ್ಲಿ ಬೆಳಕು ಕಡಿಮೆ. ಇದೂ ಒಳ್ಳೆಯದೇ. ಸ್ಥಳ ಆರಿಸಿ ಇಬ್ಬರೂ ಮರದ ಕೆಳಗೆ ನೆಲದ ಮೇಲೆ ದೂರ ದೂರ ಕುಳಿತಾಯ್ತು. ಕಣ್ಣು ಮುಚ್ಚಿದರು. ಸ್ವಲ್ಪ ಹೊತ್ತು ಇಬ್ಬರಲ್ಲೂ ಮಾತು. ‘ನಾಣಿ, ಏನು ಕಾಣುತ್ತಿದೇ?’
‘ಬರೀ ಕತ್ತಲೆ. ಅಕ್ಕಾ, ನಿನಗೆ?’
‘ನನಗೂ ಕತ್ತಲೆ. ನಾವು ಏನೆಂದು ಪ್ರಾರ್ಥಿಸುವುದು?’
‘ನಂಗೂ ತಿಳೀದು. ಹೀಗೆ ಕಣ್ಣುಮುಚ್ಚಿ ಓಂ ಎನ್ನುತ್ತಿದ್ದರೆ ಅಕ್ಕಾ, ದೇವರು ಕಾಣಿಸಲೇ ಬೇಕಲ್ಲ?’
ಮತ್ತೆ ಇಬ್ಬರೂ ಮೌನ. ಮತ್ತೆರಡು ನಿಮಿಷ. ನಾಣಿ ಸರಿದು ಗೌರಿಯ ಪರಕರದ ತುದಿ ತನ್ನ ಮೈಗೆ ಮುಟ್ಟುವಂತೆ ಕುಳಿತದ್ದು ಅವಳ ಅರಿವಿಗೆ ಬಂದಿತು. ಪಾಪ ಮಗು. ಹೆದರಿದ್ದಾನೆ. ಕುಳಿತುಕೊಳ್ಳಲಿ ಗೌರಿ ಕಣ್ತೆರೆಯದೆ ನಿಧಾನಕ್ಕೆ ತಾನೂ ಸರಿದಳು ಅವನ ಬದಿಗೆ. ಓಂ ಹೇಳುತ್ತ ತಟಸ್ಥರಾದರು ಇಬ್ಬರೂ. ಎಷ್ಟು ಹೊತ್ತಾಯಿತೋ, ಸಂಜೆ ಹಕ್ಕಿಗಳ ಕಿಚ ಕಿಚ ಗಲಾಟೆ. ಮರದ ಗೂಡಿಗೆ ಮರಳುವ ತಾಯಿ ಹಕ್ಕಿಗಳ, ಮರಿಹಕ್ಕಿಗಳ ಕಲರವ.
ಬೀಸುವ ತಂಗಾಳಿಯೂ ತಂಪಾಗುವ ಹೊತ್ತು. ಮರದ ನೀರ ಹನಿಗಳು ಅಲ್ಲೊಂದು ಇಲ್ಲೊಂದು ಟಪ್ ಟಪ್. ಗೌರಿಗೆ ಹೆದರಿಕೆ. ತಪಸ್ಸಿಗೆ ಕುಳಿತವರ ಸುತ್ತಲೂ ಹಾವುಗಳು, ಹೆಡೆ ಎತ್ತಿದ ಸರ್ಪಗಳು ತಿರುಗುತ್ತವೆಯಂತೆ. ಕಚ್ಚಿಬಿಟ್ಟರೆ? ಬರಲಾರದು. ಆದರೆ ಜಕಣಿ, ಕೊಳ್ಳಿದೆವ್ವ, ಗಾಳಿದೆವ್ವ, ಬ್ರಹ್ಮ ರಾಕ್ಷಸ ಬಂದುಬಿಟ್ಟರೆ? ಅಯ್ಯೋ, ಅದೆಲ್ಲ ಚಕ್ರಿ ಅಮ್ಮಮ್ಮನ ಊರಿನವು. ಇಲ್ಲಿಗೆ ಬರುತ್ತಾವೆಯೇ? ಛೇ, ಹುಚ್ಚು, ಏಕೆ ಬರುತ್ತವೆ ಅವುಗಳ ಊರು ಬಿಟ್ಟು?
ಚಕ್ರಿ ಅಮ್ಮಮ್ಮನ ನೆನಪಾಗಿ ಮೈತುಂಬ ಅವಳ ಹಳೆ ಸೀರೆಗಳ ಹಾಸು ಹೊದಿಕೆಯ ನವಿರಾದ ಸ್ಪರ್ಶ, ಹಿತವಾದ ವಾಸನೆ. ಚಕ್ರಿ ಮನೆಯಲ್ಲಿ ಅವಳ ಮಲಗುವ ಕೋಣೆ ಆಚೆ ಬಾಣಂತಿ ಕೋಣೆ. ಈಗ ಕಾಣುವ ಕತ್ತಲೆಯಂತೆ ಅದೂ ಗಾಳಿ ಬೆಳಕಿಲ್ಲದ, ಮೂಲೆ ಮುಡುಕು ಕಾಣದ ಕತ್ತಲು ಕೋಣೆ. ಆ ಕೋಣೆಗೆ ಹಗಲು ಹೊತ್ತು ದೀಪ ಬೇಕು. ಅಲ್ಲಿ ಅದೆಷ್ಟು ಹೆಂಗಸರ ಹೆರಿಗೆ, ನಲ್ವತ್ತು ದಿನಗಳ ಬಾಣಂತನ ಆಗಿದೆಯೋ! ಅವರ ಹೆರಿಗೆ ನೋವಿನ ನರಳಿಕೆ, ಹುಟ್ಟಿದ ಶಿಶುಗಳ ಬೆಕ್ಕಿನ ಮರಿಯಂತೆ ಕಾವ್ ಕೂವ್ ಅಳು ಅದೇ ಕೋಣೆಯಲ್ಲಿ. ಅಮ್ಮಮ್ಮಆಯಿಯ ಮತ್ತು ತನ್ನ ನಾಲ್ವರು ಸೊಸೆಯಂದಿರ ಹಲವಾರು ಬಾಣಂತನ ಮಾಡಿದ್ದು ಅದೇ ಕೋಣೆಯಲ್ಲಿ. ತಾನು ನಾಣಿ ಹುಟ್ಟಿದ್ದು ಅದೇ ಕತ್ತಲೆಯ ಸ್ಪರ್ಶದಲ್ಲಿ.
ತಾನು ಹುಟ್ಟಿ ನಲ್ವತ್ತು ದಿನಗಳ ತನಕ ವಿಪರೀತ ಅಳುತ್ತಿದ್ದೆನಂತೆ. ‘ಚೆಂದದ ಹೆಣ್ಣು ಮಗು. ದಿನಾ ದೃಷ್ಟಿ ತೆಗಿರಿ. ಗಾಳಿದೆವ್ವದ ತಂಟೆ ಇದ್ದರೆ ಓಡಿ ಹೋಗ್ತು’ ಎಂದಿದ್ದರಂತೆ ಹಿರಿತಲೆ ಹೆಂಗಸರು. ಗಾಳಿದೆವ್ವದ ಹೆಸರು ಕೇಳಿದರೆ ಸಾಕು, ತನಗೆ ಹೆದರಿಕೆ. ಬಾಣಂತಿಯರೇ ಇಲ್ಲದಾಗ ಆ ಕೋಣೆ ಒಂದುತರಹ ಮೂರಿ. (ವಾಸನೆ) ತಾನು ಆ ಬಾಗಿಲು ಮುಚ್ಚಿ ಬಿಡುತ್ತಿದ್ದೆ. ಅಮ್ಮಮ್ಮ ಧೈರ್ಯ ಹೇಳುತ್ತಿದ್ದಳು. ಒಂದು ಮಧ್ಯ ರಾತ್ರೆ ಬಾಣಂತಿ ಕೋಣೆಯಿಂದ ದೀರ್ಘ ಉಸಿರು ಎಳೆಯುತ್ತ ಗೊರ ಗೊರ ಶಬ್ಧ. ತಾನು ಗಾಳಿದೆವ್ವವೇ ಬಂತೆಂದು ನಡುಗಿ ಅಮ್ಮಮ್ಮನನ್ನು ಬಿಗಿದಪ್ಪಿ ಮಲಗಿದ್ದೆ.
ಮರುದಿನ ಅಮ್ಮಮ್ಮ ಗಾಳಿದೆವ್ವ ತೋರಿಸಿ ನಗಾಡಿದ್ದಳು. ಅದು ಬೇರೆ ಯಾರೂ ಅಲ್ಲ. ಹೊರ ಜಗಲಿಯಲ್ಲಿ ಮಲಗಿದ್ದ ಅಪ್ಪೂ ಮಾವ! ಗಾಢ ನಿದ್ರೆಯಲ್ಲಿ ಅಂಗಾತ ಮಲಗಿ ಅರ್ಧ ಬಾಯಿ ತೆರೆದು ಗೊರ್ ಗೊರ್! ಆ ಶಬ್ಧ ನಾಲ್ಕು ಬಾಗಿಲು ದಾಟಿ ಕೇಳಬಹುದಿತ್ತು. ತಾನು ಮತ್ತೆರಡು ದಿನ ಅವನ ತೆರೆದ ಬಾಯಿ, ಅದರಿಂದ ಹೊರಡುವ ಗೊರಕೆ ಕೇಳಿ ನಕ್ಕದ್ದು, ನಾಣಿ ಬಾಯಿಗೆ ನೀರು ಹಾಕಿದ್ದು, ನಿದ್ರೆಯಲ್ಲೇ ಅಪ್ಪೂ ಮಾವ ಘರ್ಜಿಸಿದ್ದು ಮಜಾ ಇತ್ತು. ಚಕ್ರಿ ಆಮ್ಮಮ್ಮ ಕರುಣೆಯ ಸಾಗರ. ಅವಳ ಅಂಗೈಯ್ಯಲ್ಲಿ ಬೆಳೆದ ಮಕ್ಕಳು ಚೆಂದಕ್ಕೆ ಹುಷಾರಾಗಿ ಇರುತ್ತವಂತೆ. ‘ನಿನ್ನ ಹೆರಿಗೆ ಬಾಣಂತನ ನಾ ಇಲ್ಲೆ ಮಾಡೆಕ್ಕು’ ಅಮ್ಮಮ್ಮ ಹೇಳುವಾಗ ಎಂತ ನಾಚಿಕೆ. ‘ಕತ್ತಲೆ ಕೋಣೆಯಲ್ಲಿ ಹೆದರಿಕೆನಾ?ದೆವ್ವ, ಭೂತ ನಮ್ಮ ಮನಸ್ಸಿನ ಭ್ರಮೆಗಳು’ ಎಂದಿದ್ದಳು.
ಇರಬಹುದೇ? ಕಳೆದ ಚೈತ್ರ ಮಾಸದ ಕೊನೆ ಇರಬೇಕು ಚಕ್ರಿ ಊರಿನಲ್ಲಿ ಯಕ್ಷಗಾನ ಬಯಲಾಟಕ್ಕೆ ಹೋದಾಗ ತಾನು ನಾಣಿ ನೋಡಿದ್ದು ಮನಸ್ಸಿನ ಭ್ರಮೆಯಾ? ಪ್ರತಿವರ್ಷ ಚೈತ್ರ ಮಾಸದಲ್ಲಿ ಚಕ್ರಿ ಊರಿನಲ್ಲಿ ಯಕ್ಷಗಾನ ಬಯಲಾಟದ ಮೇಳ ಬರುತ್ತದೆ. ಚಕ್ರಿ ಮನೆ ಎದುರು ಗದ್ದೆಯಲ್ಲಿ ಮೇಳದವರ ಅರ್ಧಾಕೃತಿಯ ರಂಗಸ್ಥಳ. ರಾತ್ರೆಯಿಂದ ಬೆಳಗಿನ ತನಕ ದೊಂದಿ ಬೆಳಕಿನಲ್ಲಿ ಆಟದ ಪ್ರದರ್ಶನ. ಕುಳಿತುಕೊಳ್ಳಲು ನೆಲವೇ ಆಸನ. ಊರ ಮತ್ತು ಪರ ಊರ ಜನ ಬರುತ್ತಾರೆ. ಅಮ್ಮಮ್ಮನಿಗೆ ಬಯಲಾಟದ ಹುಚ್ಚು. ಆದಿನ ಬೆಳಿಗ್ಗೆಯಿಂದಲೇ ದಿನದ ಕೆಲಸ ಅವಸರದಲ್ಲಿ ಮುಗಿಸುತ್ತಾಳೆ.
ರಾತ್ರೆ ಅರಳಲಿರುವ ಜಾಜಿ, ದುಂಡು ಮಲ್ಲಿಗೆಯ ಮೊಗ್ಗುಗಳನ್ನು ದಂಡೆ ಮಾಡಿ ಬಯಲಾಟಕ್ಕೆ ಹೋಗುವಾಗ ಮುಡಿದು ಕೊಳ್ಳುತ್ತಾಳೆ. ಆ ಮೊಗ್ಗುಗಳು ತಲೆಯಲ್ಲಿ ಅರಳಿ ಸುವಾಸನೆಯ ಕಂಪು ಬೀರುವಾಗ ಅಮ್ಮಮ್ಮನ ಆಟ ನೋಡುವ ಉತ್ಸಾಹವೂ ರಂಗೇರುತ್ತದೆ. ಮಲ್ಲಿಗೆ ಮೊಗ್ಗಿನ ಮಾಲೆ ಇಲ್ಲದೆ ಅವಳು ಬಯಲಾಟಕ್ಕೆ ಹೋದದ್ದೇ ಇಲ್ಲ. ಬೆಳಗಿನ ತನಕವೂ ಕಣ್ರೆಪ್ಪೆ ಮುಚ್ಚದೆ ಆಟ ನೋಡುವ ಅಮ್ಮಮ್ಮ ಮರುದಿನ ಮಕ್ಕಳೆದುರು ಬಯಲಾಟದ ಕುಣಿತದ ಕೆಲವು ಮಟ್ಟುಗಳನ್ನು ಕುಣಿದು ತೋರಿಸುವಾಗ ಮಕ್ಕಳು ಹೋ ಎನ್ನುತ್ತ ತಾವೂ ಕುಣಿಯುವವರೇ.
ಕಳೆದವರ್ಷ ಮೇಳದವರು ಮಾಡಿದ್ದು ‘ರಾವಣ ಸಂಹಾರ’ ಅದರಲ್ಲಿ ರಾಕ್ಷಸ ಪಾತ್ರಗಳೇ ಹೆಚ್ಚು. ತಾನು, ನಾಣಿ, ಮಾವಂದಿರ ಮಕ್ಕಳು ಹೋಗಿದ್ದೆವು. ಮಧ್ಯರಾತ್ರೆ ನಂತರ ಬಣ್ಣದ ವೇಷ ಬರುವಾಗ ನಾಣೆಗೆ ಆಟ ಸಾಕು ಮನೆಗೆ ಹೋಗುವ ಹಠ ಬಂದಿತ್ತು. ತಾವಿಬ್ಬರೂ ಕೆಲಸದಾಳಿನ ಜೊತೆ ಹೊರಟು ಮನೆ ಹತ್ತಿರ ಬಂದಾಗ ಕಂಡದ್ದೇನು? ತಾಳೆಮರಕ್ಕಿಂತಲೂ ಎತ್ತರದ ರಾಕ್ಷಸಾಕಾರದ ಒಂದು ಆಕೃತಿ! ಅಶ್ವಥಮರದ ಕಟ್ಟೆ ಮೇಲೆ ನಿಂತುಬಿಟ್ಟಿದೆ. ದೆವ್ವವೇ? ಬ್ರಹ್ಮರಾಕ್ಷಸನೇ? ಕಣ್ಣು ಹೊಸಕಿ ತಿಕ್ಕಿ ತಮ್ಮ ಕಥೆ ಮುಗಿದಂತೆ ಎನ್ನುವಾಗ!
ಅಯ್ಯೋ, ಇವತ್ತು ಈ ನಿರ್ಜನ ಸ್ಥಳದಲ್ಲಿ ಅದೇ ನಮೂನೆಯ ಒಂದು ಆಕೃತಿ ಬೆಳೆಯುತ್ತ ತಮ್ಮನ್ನು ಹೆದರಿಸುವುದನ್ನು ನೋಡಿದರೆ ಸಂಶಯವಿಲ್ಲ, ಅದು ಮರದ ಮೇಲಿರುವ ಜಕಣಿಯೋ,ಭೂತವೋ… ‘ನಾಣೀ, ಎಲ್ಲಿದ್ದಿಯೋ?’ ಉಸುರಿ ಕಣ್ತೆರೆದಾಗ ನಾಣಿಯೂ ಹೆದರಿ ಅವಳನ್ನೇ ಕಣ್ಣು ಬಿಟ್ಟು ನೋಡುತ್ತಿದ್ದ.
‘ಅಕ್ಕಾ, ಅಲ್ಲಿ ಕಾಣು! ಪೊದೆಯಲ್ಲಿ ಎರಡು ಪಿಳಿ ಪಿಳಿ ಕಣ್ಣು?’
ಗೌರಿ ಕಣ್ಣು ಅಗಲಿಸಿ ನೋಡುತ್ತಾಳೆ, ಎದುರಿನ ತಾಳೇಮರದಂತೆ ನಿಂತ ಆಕೃತಿ ಮಾಯ! ಪೊದೆಯಲ್ಲಿ ಕಾಣಿಸಿದೆ ಎರಡು ಕಣ್ಣುಗಳು. ಅವು ಕಣ್ಣುಗಳೋ, ಜೇಡರಬಲೆಯ ಮೇಲೆ ಬಿದ್ದ ನೀರ ಹನಿಗಳೋ, ಹೆಡೆಯರಳಿಸಿದ ಸರ್ಪವೋ, ದೆವ್ವದ ಇರುವಿಕೆಯ ಕುರುಹೋ. ಗೌರಿ ತಮ್ಮನ ನಡಗುವ ಕೈ ಬಿಗಿಯಾಗಿ ಹಿಡಿದು ಚಳಿ ಬಂದಂತೆ ನಡುಗಿದಳು. ಅದೇ ವೇಳೆ ಬಾಯ್ದೆರೆದ ಹೊಂಡದಲ್ಲಿ ಚರ ಚರ ಸಪ್ಪಳ. ಕತ್ತಲೆ ಇಣುಕಿದ ಜಾಗದಲ್ಲಿ ತಿರುಗಿದರೆ ಏನೂ ಕಾಣದು. ‘ಎಂತದೇ ಆಗ್ಲಿ.
ಇನ್ನೊಂದು ನಿಮಿಷ ಇಲ್ಲಿರೂದು ಬ್ಯಾಡ. ಏಳು ತಮ್ಮಾ, ನಡಿ.ಕೊಳ್ಳಿ ದೆವ್ವ, ಇನ್ನಾವ ಪ್ರಾಣಿ, ಭೂತ ಬರಲಿವೆಯೋ,’ ಹೇಳಿ ಮುಗಿಸುವ ಮೊದಲೇ ಅವನನ್ನು ಎಳೆದುಕೊಂಡೇ ಓಡತೊಡಗಿದಳು. ಮಕ್ಕಳಿಗೆ ಪರಿಚಿತ ಹಾದಿ. ಗವ್ ಎನಿಸುವ ಕತ್ತಲೆ. ಮುಗ್ಗರಿಸಿದರು, ಎದ್ದರು, ನಡೆದರು, ಓಡಿದರು. ಪೊದೆಗಳ ಜಾಗ ಇಳಿದು ಹಾಡಿಗೆ ಬರುವಾಗ ಚಂದ್ರ ಬೆಳಕಿನ ದರ್ಶನ. ನಾಣಿ ಹಿಂದೆ ತಿರುಗಿದರೆ ಯಾರೋ ತಮ್ಮನ್ನು ಅಟ್ಟಿಸಿಕೊಂಡು ಬಂದಂತೆ. ‘ತಿರುಗಿ ನೋಡಬೇಡವೋ. ಹಾಗೆ ನೋಡಿದರೆ ಭೂತಗಳಿಗೆ ಶಕ್ತಿ ಜಾಸ್ತಿಯಂತೆ. ಓಡು, ಬೇಗ’ ನಾಣಿ ಅಳತೊಡಗಿದ, ‘ಅಕ್ಕ, ಕತ್ತಲೆ ದಾರಿ ಕಾಣ್ತಿಲ್ಲೆ. ನಿಂಗೆ ದಾರಿ ತಪ್ಪಿತಾ?’ ಅಕ್ಕ ಮಾತನಾಡಲಿಲ್ಲ.ಎಳೆದುಕೊಂಡೇ ಹೋಗುತ್ತಿದ್ದಾಳೆ ಭೂತಶಕ್ತಿ ಮೈಯ್ಯಲ್ಲಿ ಹೊಗ್ಗಿದಂತೆ. ನಾಣಿಯ ಅಳು ಇನ್ನೂ ಹೆಚ್ಚಿತು. ಅಕ್ಕ ಕಾಣುವುದೇ ಇಲ್ಲ, ಮಾತು ಆಡುತ್ತಿಲ್ಲ ‘ಅಕ್ಕ, ದಾರಿ ತಪ್ಪಿತಾ? ಅಕ್ಕ, ದಾರಿತಪ್ಪಿತಾ? ಲೇ ಅಕ್ಕ, ದಾರಿ ತಪ್ಪಿತೇನೇ?’
ದಾರಿ ತಪ್ಪಿರಲಿಲ್ಲ. ಓಡಿಕೊಂಡೆ ಬಂದು ನಿಂತದ್ದು ಅಂಗಳದ ಉರುಗೋಲಿನ ಬಳಿ. ಅಲ್ಲಲ್ಲ, ಇವರನ್ನೇ ಅರಸುತ್ತ ಹೊರಟ ಅಜ್ಜಯ್ಯ, ಅಪ್ಪಯ್ಯನ, ಕಾದುನಿಂತ ಆಯಿ ಅಜ್ಜಮ್ಮನ ತೆರೆದ ಬಾಹುಗಳಲ್ಲಿ. ಮುಂದೆ ಎರಡು ದಿನ ಇಬ್ಬರಿಗೂ ಜ್ವರ. ಹಾಸಿಗೆ ಬಿಟ್ಟು ಮೇಲೇಳದ ಸ್ಥಿತಿಯಲ್ಲಿ ಮನೆಮದ್ದು ನಾಟಲಿಲ್ಲ. ಸುಶೀಲಚಿಕ್ಕಿ ತನಗೆ ಗೊತ್ತಿದ್ದ ಹಳ್ಳಿ ಮದ್ದನ್ನೂ ಅರೆದು ಕುಡಿಸಿದಳು. ಅಪ್ಪಯ್ಯ ಸಾಸ್ತಾನದ ಒಬ್ಬರು ಡಾಕ್ಟರರ ಇಂಗ್ಲೀಷ ಔಷಧಿ ತಂದು ಕುಡಿಸಿದ. ತುಸು ಕಡಿಮೆಯಾಗಿ ಚೇತರಿಸುವ ಹಂತಕ್ಕೆ ಬಂದಾಗ ಅಜ್ಜಮ್ಮ ಕಾಲು ಕೈಗೆ ಎಣ್ಣೆ ಹಚ್ಚಿ, ‘ಕತ್ತಲೆಯಲ್ಲಿ ಎಲ್ಲಿ ಸುಡುಗಾಡಿಗೆ ಅಲೆಯಲು ಹೋದದ್ದು? ಇದು ಕೊಳ್ಳಿ ದೆವ್ವದ ಕಿತಾಪತಿ.’ ಎಂದಳು.
‘ಕೊಳ್ಳಿ ದೆವ್ವವಲ್ಲ, ಭೂತಚೇಷ್ಟೆಯೂ ಅಲ್ಲ. ಇನ್ಮೇಲೆ ನಿಮಗಲ್ಲದ ತುಂಟ ಕೆಲಸಕ್ಕೆ ಹೋದ್ರೆ ಜಾಗ್ರತೆ’ ಆಯಿ ಮೈಗೆ ಶಾಖ ಕೊಟ್ಟಳು. ಅಂತೂ ಧ್ರುವಕುಮಾರರ ತಪಸ್ಸಿನ ಪ್ರಕರಣ ಹೀಗೊಂದು ರೀತಿಯಲ್ಲಿ ಮುಕ್ತಾಯವಾಗಿ ಚೇತರಿಕೆಯಲ್ಲಿ ಇದ್ದಾಗಲೆ ಸಿರ್ಸಿಯಿಂದ ರಘುದೊಡ್ಡಪ್ಪ ಗಂಗೊಳ್ಳಿ ಹೊಳೆ ದಡದ ರಸ್ತೆಯಲ್ಲಿ ಎರಡೂವರೆ ಮೈಲು ನಡೆದುಬಂದ. ಕೆಲಸ ನಿಮಿತ್ತ ಮಂಗಳೂರಿಗೆ ಬಂದವನು ಹಿಂದಿರುಗುವ ಹಾದಿಯಲ್ಲಿ ಸಾಸ್ತಾನದಲ್ಲಿ ಇಳಿದು ರಾಮಪ್ಪಯ್ಯನನ್ನು ನೋಡಿ ಹೋಗೋಣ ಎಂದುಕೊಂಡಿದ್ದ. ಆಗ ಕಮ್ತಿಯವರು, ‘ರಾಮಪ್ಪಯ್ಯ ಮೊನ್ನೆ ಶನಿವಾರ ಹೊಳೆಬಾಗಿಲಿಗೆ ಹೋದವರು ಒಂದು ವಾರ ರಜೆ ಹಾಕಿದ್ದಾರೆ. ಮಕ್ಕಳಿಗೆ ಮೈ ಆರಾಮ ಇಲ್ಲವಂತೆ, ದೋಣಿಯವನ ಕೈಲಿ ಹೇಳಿ ಕಳಿಸಿದ್ರು’ ಎಂದರು.
ರಘುದೊಡ್ಡಪ್ಪ ಮುಂದಿನ ದೋಣಿಗೆ ಕಾಯದೆ ನಡೆದ ಬಂದಿದ್ದ. ಬಂದ ಮೇಲೆಇಲ್ಲಿ ಮಕ್ಕಳ ತಪಸ್ಸಿನ ಕಿತಾಪತಿ ಕೇಳಿ ನಗಬೇಕೋ, ವ್ಯಥೆ ಪಡಬೇಕೋ ತಿಳಿಯಲಿಲ್ಲ. ಗೌರಿಯ ಕೆನ್ನೆ ಹಿಂಡಿ, ‘ಮಗಳೂ, ದೊಡ್ಡವಳಾಗಿದ್ದಿ?’ ನಾಣಿಯ ತಲೆ ಸವರಿ, ‘ಅಕ್ಕನ ಬಾಲ ನೀನು, ಸಣ್ಣವಲ್ಲ ತಿಳಿತಾ?’ ಎಂದರು. ಇಬ್ಬರಿಗೂ ನಾಚಿಕೆಯಲ್ಲಿ ಏನೂ ಕೂಡಾ. ಸಿರ್ಸಿ ದೊಡ್ದಪ್ಪ ಜೋರು ಕಂಡರೂ ಖುಷಾಲಿನವರೇ. ಅಪ್ಪಯ್ಯನನ್ನು ಗದರಿಕೊಂಡರು, ‘ಇಬ್ಬರನ್ನೂ ಉಂಡಾಡಿಗಳಂತೆ ಬಿಟ್ಟ ಫಲ ಇದು. ನಿನ್ನದೇ ತಪ್ಪು. ಶರಾವತಿ, ನೀ ಸ್ವಲ್ಪ ಬುದ್ಧಿ ಹೇಳು.’
ಆಯಿಯಲ್ಲಿ ಉತ್ತರವಿಲ್ಲ. ‘ನಾಣಿ ಗೌರಿ ಬಾಲ. ಗೌರಿಗೆ ನಾಣಿಯ ಮಗುವಂತೆ. ನೆರಳು ಬೆಳಕಿನಂತೆ ಇಬ್ಬರೂ ಜೊತೆ ಜೊತೆ. ಅವಳಿಗೆ ಮದ್ವೆಯಾದ್ರೆ ಇವನನ್ನೂ ಬಳವಳಿ ರೂಪದಲ್ಲಿ ಕೊಟ್ಟು ಬಿಡ್ತೇವೆ’
‘ಇದೆಲ್ಲ ಹಾರಿಕೆ ಮಾತು, ಶಾಲೆಗೆ ಉಸಾಬರಿ ಇಲ್ಲದೆ ನೀವು ಕಳ್ಸದೆ ಅವಳು ದಿಗಡದಿಮ್ಮಿ, ಇವನು ಉಂಡಾಡಿ. ಸರಿಹೋಯ್ತು. ರಾಮಪ್ಪಯ್ಯ, ಮಕ್ಕಳಿಬ್ಬರೂ ಸಿರ್ಸಿಗೆ ಬರಲಿ. ನನ್ನ ಮಕ್ಕಳ ಜೊತೆ ಅವೂ ಕಲಿತಾವೆ. ಮನೆ ಹತ್ರ ಶಾಲೆನೂ ಇದೆ. ಯೋಚನೆ ಮಾಡಿ’
| ಇನ್ನು ನಾಳೆಗೆ |
ಬಹಳ ಚೆನ್ನಾಗಿದೆ ಎಪಿ ಮಾಲತಿಯವರು ಈ ಕಂತಿನಲ್ಲಿ ಬರೆದಿದ್ದಾರೆ ಗೌರಿ ಹಾಗೂ ನಾಣಿ ಯಕ್ಷಗಾನಕ್ಕೆ ಕ್ಕೆ ಹೋಗುವುದು ಅಲ್ಲಿ ಧ್ರುವ ತಪಸ್ಸು ಮಾಡಿ ನಕ್ಷತ್ರ ವಾಗುವ ಕಥೆ ಕೇಳಿ ತಾವು ಅದೇ ರೀತಿ ತಪಸ್ಸು ಮಾಡುವ ಎಂದು ನೋಹೊಳೆ ದಂಡೆಯನ್ನು ದಾಟುತ್ತ ಮುಂದೆ ಹೋಗಿ ಯಾರು ಇಲ್ಲದ ಸ್ಥಳವನ್ನು ಹುಡುಕಿ ಅಲ್ಲಿ ತಪಸ್ಸು ಮಾಡುತ್ತಾ ಕುಳಿತು ಕೊಳ್ಳುವುದು ಆದರೆ ಸಂಜೆಯಾಗುತ್ತ ಸುತ್ತಲೂ ಗಿಡಗಂಟಿಗಳ ಮಧ್ಯ ಸಪ್ಪಳ ಕೇಳಿ ಹೆದರಿ ತಿರುಗಿ ಓಡುತ್ತಾ ಬರುವುದು ಬಂದಮೇಲೆ ಎರಡು ದಿನ ಮೈಯಲ್ಲಿ ಸಣ್ಣ ಜ್ವರ ತೊಡಗಿ ಹಾಗೂ ಮನೆ ಔಷಧ ಕೊಟ್ಟು ಗುಣವಾಗುವುದು ಬಹಳ ಚೆನ್ನಾಗಿದೆ ಮಕ್ಕಳ ಮನಸ್ಸು ತಿಳಿಯುವುದು ಕಷ್ಟ ಅವರ ಕಲ್ಪನೆ ಎಲ್ಲರಿಗಿಂತ ಭಿನ್ನ ರವಿ ಕಾಣದ್ದನ್ನು ಕವಿ ಕಾಣುತ್ತಾನೆ ಅನ್ನುತ್ತಾರೆ ಅದೇ ರೀತಿ ಮಕ್ಕಳ ವಿಚಾರ ನಮ್ಮೆಲ್ಲರಿಗಿಂತ ವಿಭಿನ್ನವಾಗಿರುತ್ತದೆ ಗುಡಿಗಾರ ದೇವಣ್ಣನ ದೇವರ ಪ್ರವಚನ ಅದು ರಾಮಾಯಣ ಹಾಗೂ ಮಹಾಭಾರತದ ಅದರ ಕಥೆಗಳು ಹಾಡುತ್ತಾ ಅರ್ಥ ಹೇಳುವುದು ಕೇಳುವಾಗ ಮನಸ್ಸಿಗೆ ಖುಷಿಯಾಗುತ್ತದೆ ಏಕೆಂದರೆ ನನ್ನ ಮನೆಯಲ್ಲಿ ಮನು ಪ್ರಭುಗಳು ಎಂಬವರು ಶ್ರಾವಣ ಮಾಸದಲ್ಲಿ ಪುರಾಣ ಪ್ರಸಂಗಗಳ ಪ್ರವಚನವನ್ನು ಭಟ್ಕಳದ ಹನುಮಂತ ದೇವಸ್ಥಾನದಲ್ಲಿ ಮಾಡುತ್ತಿದ್ದರು ಅಲ್ಲಿ ಸಂಜೆ 6ರಿಂದ 8 ಮಾಡುವ ಮೊದಲು ಐದರಿಂದ ಆರು ನನ್ನ ಮಾವನ ಮನೆಯಲ್ಲಿ ಬಂದು ಅವರೆದುರು ಓದಿ ಹೇಳುತ್ತಾ ಅದರ ಅರ್ಥವಿವರಣೆಯನ್ನು ಮಾಡುತ್ತಿದ್ದರು ನನ್ನ ಮಾವ ತಿಮ್ಮಣ್ಣ ಭಟ್ಟರು ಅವರು ಎಲ್ಲಾದರೂ ತಪ್ಪು ಆದರೆ ಅದು ಹೀಗಲ್ಲ ಹೀಗೆ ಎಂದು ಹೇಳುತ್ತಿದ್ದುದು ನಾನು ಕೇಳಿದ್ದು ಉಂಟು ಇದೆಯಲ್ಲ ನನ್ನ ನೆನಪು ಮುಂದುವರೆಯಲಿ ಇದೇ ರೀತಿ ಮುಂದಿನ ಕಂತುಗಳನ್ನು ಓದಲು ಮನಸ್ಸು ಕಾಯುತ್ತಾ ಇರುತ್ತದೆ ತಮ್ಮ ಪ್ರಿಯಕೃಷ್ಣ ವಸಂತಿ
ಶ್ರೀಮತಿ ಎಪಿ ಮಾಲತಿಯವರು ಬರೆದ ಈ ಕಂತು ಬಹಳ ಚೆನ್ನಾಗಿದೆ ಗುಡಿಗರ ದೇವಣ್ಣ ದೇವಸ್ಥಾನದಲ್ಲಿ ರಾಮಾಯಣ ಹಾಗೂ ಮಹಾಭಾರತದ ಕಾವ್ಯಗಳನ್ನು ಸಂಜೆಗೆ ದೇವಸ್ಥಾನದ ಪ್ರಾಂಗಣದಲ್ಲಿ ಹಾಡುವುದು ಅದನ್ನು ಎಲ್ಲರೂ ಕೇಳುವುದು ನನಗೆ ನನ್ನ ಮಾವನ ಮನೆಗೆ ಮನು ಪ್ರಭು ಎಂಬವರು ಬಂದು ಸಂಜೆಗೆ ಐದರಿಂದ ಆರು ನನ್ನ ಮಾವ ತಿಮ್ಮಣ್ಣ ಭಟ್ಟರ ಎದುರು ಮಹಾಭಾರತ ರಾಮಾಯಣದ ಭಾಗವನ್ನು ಓದುವುದು ಇದರಲ್ಲಿ ತಪ್ಪಾದರೆ ನನ್ನ ಮಾವನವರು ಅವರನ್ನು ತಿದ್ದುವುದು ಹಾಗೆ ಸಂಜೆಗೆ ಆರರಿಂದ ಏಳು ಗಂಟೆಗೆ ದೇವಸ್ಥಾನದಲ್ಲಿ ಓದಿ ಹೇಳುವುದು ನಾನು ನೋಡಿದ್ದು ಕೇಳಿದ್ದು ಮುಂದೆ ಮಕ್ಕಳು ಅಂದರೆ ಗೌರಿ ನಾಣಿ ಯಕ್ಷಗಾನದಲ್ಲಿ ಅವನು ಅಂದರೆ ಧೃವನು ಮಾಡುವ ತಪ್ಪಸ್ಸು ಹಾಗೂ ಅವನು ಧ್ರುವ ನಕ್ಷತ್ರ ವಾಗುವುದು ನಾವು ಅದೇ ರೀತಿ ಆಗುವ ಎಂದು ತಪಸ್ಸಿಗೆ ಅಡವಿಗೆ ಹೋಗಿ ಗಿಡಗಂಟೆಗಳ ಮಧ್ಯದಲ್ಲಿ ಕೂತು ಮಾಡುತ್ತಿರುವಾಗ ರಾತ್ರಿಯಾಗಿ ಹೆದರಿ ತಿರುಗಿ ಬಂದು ಎರಡು ದಿನ ಜ್ವರ ಅದಕ್ಕೆ ಇಂಗ್ಲಿಷ್ ಹಾಗೂ ನಾಟಿ ಔಷಧಿ ಮಾಡಿ ಗುಣವಾಗುವುದು ಚೆನ್ನಾಗಿ ಬರೆದಿದ್ದಾರೆ ಇದೇ ರೀತಿ ಮುಂದುವರಿಯಲಿ ಎಂದು ನನ್ನ ಆಸೆ ತಮ್ಮ ಪ್ರಿಯಕೃಷ್ಣ ವಸಂತಿ
ಬಹಳ ಚೆನ್ನಾಗಿ ಬರೆಯುತ್ತ ಇದ್ದರೆ ಓದಲು ಕುಶಿ ಆಗುತ್ತದೆ
ಬಹಳ ಚೆನ್ನಾಗಿದೇ ಲೇಖನ