ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಹೊಳೆಬಾಗಿಲ ರಭಸಕ್ಕೆ ಮನೆಯೇ ಕುಸಿದು ಬೀಳ್ತಿತ್ತು..

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಿಕ್ಕಿದೆ.

ಕರಾವಳಿ ಲೇಖಕಿ ವಾಚಕಿಯರ ಸ೦ಘದ ಪ್ರಥಮ ಲೇಖಕಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಪುತ್ತೂರು ಹನ್ನೊ೦ದನೇ ತಾಲೂಕು ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ೨೦೦೫ರಲ್ಲಿ. ದ.ಕ. ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಯಾಗಿದ್ದರು.

21

ಆವತ್ತು ಒಂದುದಿನ ಹೆರಿಯಮ್ಮನ ಮನೇಲಿ ಪೂಜೆ ಎಂದು ಆಯಿ, ಕಮಲತ್ತೆ ಹೋಗಿದ್ದರು. ನಾಲ್ಕು ದಿನ ಅಲ್ಲೇ ಉಳಿದು ಬರುವವರು. ಹೆರಿಯಮ್ಮ ಚಕ್ರಿ ಅಮ್ಮಮ್ಮನ ಹಿರಿ ಅಕ್ಕ. ವಯಸ್ಸಾದ ಜೀವ. ‘ಮಡಿ ಅಮ್ಮಮ್ಮ’ ಬಂಧುಗಳು ಅವರಿಗಿಟ್ಟ ಹೆಸರು! ಮಡಿಅಮ್ಮಮ್ಮನ ಮನೇಲಿ ಯಾವ ಕಾರ್ಯಕಟ್ಟಲೆ ಇದ್ದರೂ ಆಯಿಗೆ ಕರೆ ಬರುತ್ತಿತ್ತು. ಹೊಳೆಬಾಗಿಲು ಕುದ್ರುವಿನಂತೆ ಅದೂ ಒಂದು ಸಣ್ಣ ಕುದ್ರು. ಆ ಜಾಗಕ್ಕೆ ಹೋಗಲು ದಾರಿಗಳಿವೆ, ದೋಣಿಯೂ ಇದೆ.

ಸಾಸ್ತಾನದ ತನಕ ದೋಣಿಯಲ್ಲಿ ಹೋಗಿ ಅಲ್ಲಿಂದ ಎರಡು ಅಳವೆ ಕಿರು ದೋಣಿಯಲ್ಲಿ ದಾಟಿದರೆ ಹೊರಳಿಸಾಲು ಸಿಗುತ್ತದೆ. ಗೋವೆ ಮರಗಳ ಸಾಲುಗಳ ಮಧ್ಯೆ ನಡೆದು ಹೋದರೂ ಹೊರಳಿಸಾಲು ದೂರವೆನಲ್ಲ. ಬರೀ ಕುಗ್ರಾಮ. ಆಯಿ ಕರೆ ಬಂದಾಕ್ಷಣ ಖುಷಿಯಲ್ಲಿ ಮೈ ತುಂಬ ಚಿನ್ನದ ಒಡವೆಗಳನ್ನು ತೊಟ್ಟು ಮದುಮಗಳಂತೆ ಶೃಂಗಾರದಲ್ಲಿ ಹೋಗಿಬರುತ್ತಾಳೆ. ಕಮಲತ್ತೆಯನ್ನೂ ಒತ್ತಾಯಿಸಿ ಕರೆದೊಯ್ಯುತ್ತಾಳೆ.

ಪಾಪ, ಅವಳಿಗೂ ಸ್ವಲ್ಪ ಬದಲಾವಣೆ ಇರಲಿ ಎಂಬ ಕನಿಕರ. ಕಮಲತ್ತೆ ಹೊರಟರೆ ಗೌರಿ, ನಾಣಿ ಮನೆಯಲ್ಲಿರಬೇಕು. ಒಳ್ಳೆಯದೇ ಆಯಿತು ಗೌರಿಗೆ. ಅವರು ಅತ್ತ ಹೋದದ್ದೇ ಸೈ, ಹಾರ್ಮೋನಿಯಂಗೆ ಎಲ್ಲಿಲ್ಲದ ಸಂಭ್ರಮ. ಗೌರಿ ಕೈಗಳಿಗೆ ಉತ್ಸಾಹದ ಮೋಡಿ. ನಾಣಿಯ ಹೆಜ್ಜೆಗಳಿಗೆ ಕುಣಿತದ ಲಾಸ್ಯ. ಅವರ ಉಮೇದು ಅರಿತಿದ್ದ ಅಜ್ಜಮ್ಮ, ‘ಶರಾವತಿ, ನೀವು ನಾಲ್ಕು ದಿನ ಹೆಚ್ಚೇ ಉಳಿದು ಬನ್ನಿ’ ಎಂದಿದ್ದಳು.

ಈ ನಡುವೆ ಗೌರಿಗೆ ಚಿತ್ರ ಬಿಡಿಸುವ ಹುಚ್ಚು ಹೆಚ್ಚಿತ್ತು. ಪ್ರಾಣಿಗಳ ಚಿತ್ರ ಮನೆ ಚಿತ್ರ, ಹಳ್ಳಿಗಳ ದೃಶ್ಯ, ಹೊಳೆಗಳು ಮರ ಗಿಡಗಳು ಬಿಡಿಸಲು ಹೇಳಿಕೊಟ್ಟಿದ್ದಾಳೆ ಸುಶೀಲಚಿಕ್ಕಿ. ಅಕ್ಕ ತಮ್ಮನನ್ನು ಹೊಳೆ ಬದು, ಗದ್ದೆ ಬಯಲು ಆಗಸ ಮುಗಿಲು, ಇತ್ಯಾದಿ ತೋರಿಸಿ, ‘ಇದನ್ನೆಲ್ಲ ಮನನ ಮಾಡು ಗೌರಿ. ಇವು ನಿನ್ನ ಮನದಲ್ಲಿ ಅಚ್ಚೊತ್ತಿದರೆ ಬಿಡಿಸುವ ಚಿತ್ರಗಳಿಗೂ ಅರ್ಥ ತುಂಬ್ತು’ ಎನ್ನುವಳು. ಬಣ್ಣ ಬಣ್ಣದ ಪೆನ್ಸಿಲ್, ಕಾಗದಗಳು, ವಾಟರ್ ಕಲರ್ ಕುಂಚಗಳು, ಇಂಗ್ಲೀಷ್ ಪುಸ್ತಕಗಳು ಬಂದಿವೆ. ಎ.ಬಿ.ಸಿ.ಡಿ. ಅಕ್ಷರಗಳನ್ನು ಬರೆಯಲು ಓದಲು ಕಲಿಸುವಳು. ಕೈ ಹಿಡಿದು ತಿದ್ದಿಸುವಳು.

ಬಣ್ಣದ ಚಿತ್ರಗಳಿಗೆ ಇಂಗ್ಲೀಷ್ ಹೆಸರುಗಳನ್ನು ಹೇಳಿಸುವಳು. ಸುಶೀಲಚಿಕ್ಕಿ ಜೊತೆ ಹೊತ್ತು ಹೋದದ್ದು ತಿಳಿಯುವುದೇ ಇಲ್ಲ. ಮಕ್ಕಳಿಬ್ಬರೂ ಅಟ್ಟದಲ್ಲಿ ಕಾಲ ಕಳೆಯುವಾಗ ಅಜ್ಜಮ್ಮ ಆಯಿಗೆ ಚಾಡಿ ಹೇಳುತ್ತಿದ್ದಳು, ‘ಕೋತಿ ತಾನು ಕೆಟ್ಟು ಉಳಿದವರನ್ನೂ ಕೆಡಿಸ್ತು. ಆ ಸುಶೀಲೆಗೆ ಕೆಲ್ಸ ಇಲ್ಲೆ. ನಿನ್ನ ಮಗಳ ತಲೆಗೆ ಎಂತದೆಲ್ಲ ತುಂಬಿ ತಲೆ ಕೆಡಿಸ್ತಾ ಇರ್ತಾಳೆ. ಚೂರು ಕೆಳಗೆ ಕರಿ, ಒಂಚೂರು ಮನೆಕೆಲ್ಸ ಕಲೀಲಿ.ಇಲ್ಲದಿದ್ರೆ ಗಂಡನ ಮನೇಲಿ ಕಷ್ಟ’ ‘ಗಂಡನ ಮನೆಗೆ ಹ್ವಾದ ಮ್ಯಾಲೆ ಇದ್ದೇ ಇದ್ದು ಕತ್ತೆ ಚಾಕರಿ ಕೆಲ್ಸ. ಎಂತದೋ ಕಲೀತಾ ಇದ್ದು. ಕಲೀಲಿ. ಕೂಸು ನಗ್ತಾ ಇದ್ರೆ ನಮಗೂ ಹಿತ ಅಲ್ಲದಾ?’ ಆಯಿ ಮಕ್ಕಳ ಪರ.

ಇವತ್ತು ಆಯಿ ಕಮಲತ್ತೆ ಇಲ್ಲದೆ ಅಜ್ಜಮ್ಮ ಎಷ್ಟು ಕಿರಿಕಿರಿ ಮಾಡುತ್ತಾಳೋ? ಹೆದರಿಯೇ ಗೌರಿ ಪಡಸಾಲೆಗೆ ಹಾರ್ಮೋನಿಯಂ ತಂದಿಟ್ಟು ಬಾರಿಸಲು ಕುಳಿತಿದ್ದಳು. ಎಡಗೈ ನಾಲ್ಕು ಬೆರಳುಗಳಿಂದ ಶೃತಿ ಹಿಡಿದು ಪೆಟ್ಟಿಗೆ ಮೇಲೆ ಬಲ ಹೆಬ್ಬೆರಳನ್ನು ಸಾ ಮೇಲೆ ಒತ್ತಿ ಉಂಗುರದ ಬೆರಳನ್ನು ಪಾ ಮೇಲೆ ಒತ್ತಿ ಬಾರಿಸ ಹೊರಟರೆ ಮತ್ತೆ ಅದೇ ಹಿಂದಿನ ಅಪಸ್ವರ. ಹೇಗೆ ಪಟ್ಟಿಗಳನ್ನು ಒತ್ತುವುದು ತಿಳಿದರೆ ತಾನೇ? ಯಾಕೋ ಅಜ್ಜಯ್ಯ ಹೇಳಿಕೊಡುವುದೇ ಇಲ್ಲ.

ಅಸಮಾಧಾನದಲ್ಲಿ ಎಡ ಬೆರಳುಗಳನ್ನು ಎಳೆದೆಳೆದು ಮಾಡುತ್ತ ಬಲ ಬೆರಳಿನಿಂದ ಸಿಕ್ಕಿದ ಕಡೆ ಸ್ವರ ಒತ್ತುತ್ತ, ಹೊರಗೆ ಮೋತಿ ಇನ್ನೂ ಕರ್ಕಶವಾಗಿ ಕುಂಯ್ಯೋ ಎನ್ನುವಾಗ ಅಟ್ಟದಿಂದ ಸರಸರನೆ ಇಳಿದುಬಂದಳು ಸುಶೀಲಚಿಕ್ಕಿ. ನೋಡುತ್ತಾಳೆ ಗೌರಿ ಕೈಯ್ಯಲ್ಲಿ ಹಾರ್ಮೋನಿಯಂ ಪೆಟ್ಟಿಗೆ! ಬಾರಿಸುವ ಪ್ರಯತ್ನ ನಡೆದಿದೆ. ಅವಳಿಗೋ ಪ್ರಪಂಚದ ಏಳು ಅದ್ಭುತಗಳನ್ನು ಕಂಡಂತೆ ಆಶ್ಚರ್ಯ, ಗೌರಿ ಎದುರು ಕುಕ್ಕುರುಗಾಲಲ್ಲಿ ಕುಳಿತು ‘ಇದೆಲ್ಲಿಂದ ಗೌರಿ?’ ಕೇಳಿದಳು.

ಕಮಲತ್ತೆಯೇ ಬಂದಳೆಂದು ಬೆಚ್ಚಿದ ಗೌರಿಗೆ ಕಾಣಿಸಿದವಳು ಸುಶೀಲಚಿಕ್ಕಿ. ನಗು ಬಂದಿತು. ಆ ನಗುವಿನಲ್ಲಿ ಕಮಲತ್ತೆಯ ಹಾರ್ಮೋನಿಯಂ ವೃತ್ತಾಂತ ಹೊರ ಬಂದು ಅನಂತರ ನಡೆದ ಕಥೆ ಬೇರೆಯೇ. ಒಂದು ವಾದ್ಯಕ್ಕೆ ಇಷ್ಟು ದೊಡ್ಡ ಪ್ರಕರಣವೇ? ಅವಳು ಬಾರಿಸದಿದ್ದರೆ ಹೋಗಲಿ, ಗೌರಿಗೆ ಬೇಡ ಎನ್ನುವುದು ನ್ಯಾಯವೇ? ನಾಣಿ ಕಲಿಯಬೇಡವೇ? ಸುಬ್ಬಪ್ಪಯ್ಯ ಮಗಳಿಗಾಗಿ ಮೊಮ್ಮಕ್ಕಳನ್ನು ಅಲಕ್ಷಿಸುವದುಂಟೇ? ಸುಶೀಲಚಿಕ್ಕಿ ಗೌರಿಯನ್ನು ಬದಿಗೆ ಸರಿಸಿ ಚಕ್ಕಳಮುಕ್ಕಳ ಹಾಕಿ ಕೂತು, ‘ನಾ ಬಾರಿಸಿ ನೋಡ್ತೆ?’ ಎಂದವಳು ಹಾರ್ಮೋನಿಯಂ ಎದುರಿಗಿಟ್ಟು ಕೈ ಮುಗಿದು ಅರೆಗಳಿಗೆ ಕಣ್ಣುಮುಚ್ಚಿಕೊಂಡಳು. ಅವಳ ಬೆರಳುಗಳು ನಿಧಾನವಾಗಿ ಚಲಿಸಿತು ಪೆಟ್ಟಿಗೆಯ ಮೇಲೆ, ‘ನಾರಾಯಣ ನಿನ್ನ ನಾಮದ ಸ್ಮರಣೆಯ| ಪಾನಾಮೃತ ಎನ್ನ ನಾಲಿಗೆಗೆ ಬರಲಿ|’ ತಾನೇ ಬಾರಿಸುತ್ತ ಹಾಡುವುದನ್ನು ನೋಡಿದರೆ ಸಂಗೀತ ಕಲಿತು ಬಾರಿಸುವುದರಲ್ಲೂ ಪಳಗಿದ ಕೈ ಹೌದು! ಮೋತಿ ಬಾಲ ಅಲ್ಲಾಡಿಸುತ್ತ ಹೇಗೆ ಸುಮ್ಮನೆ ನಿಂತು ಬಿಟ್ಟಿದೆ! ಗದ್ದೆ ಬದಿಯಿಂದ ಹಿಂದಿರುಗಿ ಬರುತ್ತಿದ್ದ ಸುಬ್ಬಪ್ಪಯ್ಯ ದಣಪೆ ದಾಟಿ ಅಂಗಳದಲ್ಲಿ ಓಡಿಕೊಂಡೆ ಬಂದರು.

ಹಾರ್ಮೊನಿಯಂ ವಾದ್ಯಕ್ಕೆ ಸುಶೀಲಚಿಕ್ಕಿಯ ಸ್ವರ ಮಾದುರ್ಯ ಮಿಳಿತವಾಗಿ ಹೊರಹೊಮ್ಮುತ್ತಿದ್ದು ಸುಬ್ಬಪ್ಪಯ್ಯ ಸಂಪೂರ್ಣ ಮೋಡಿಗೆ ಒಳಗಾಗಿ ತಟಸ್ಥರಾಗಿ ನಿಂತುಬಿಟ್ಟರು. ಎಷ್ಟು ವರ್ಷಗಳು ಕಳೆದು ಹೋದವೋ ಇಂತಹ ಹಾಡು, ವಾದ್ಯದ ಸ್ವರ ಕೇಳದೆ. ‘ನಾರಾಯಣಾ, ನಿನ್ನ ಗಾನಾಮೃತ ತುಂಬಲಿ ನನ್ನ ಕಿವಿಗಳಲ್ಲಿ’ ಹೇಳಿಕೊಂಡವರ ಕಣ್ಣಲ್ಲಿ ಆನಂದಬಾಷ್ಪ ತುಂಬಿ ಬಾಗಿಲಲ್ಲೇ ಕೈ ಮುಗಿದರು. ಅಜ್ಜಮ್ಮನ ಅಡಿಗೆಕೆಲಸವೂ ಅರ್ಧಕ್ಕೆ ನಿಂತು ಹೋಯಿತು. ಹಾಡು ಮುಗಿದು ವಾದ್ಯ ಸ್ವರ ನಿಂತ ಮೇಲೆ ಒಳ ಬಂದ ಸುಬ್ಬಪ್ಪಯ್ಯ, ‘ಇವತ್ತಿಗೆ ಸಾರ್ಥಕ ಆತು ಹಾರ್ಮೋನಿಯಂ. ಮಜ್ಜಿಗೆಯಲ್ಲಿ ಅಡಗಿದ ಬೆಣ್ಣೆ ಹಾಂಗೆ ಇದ್ಯಲ್ಲೇ ನೀನು!’ ಎಂದರು ಮೆಚ್ಚುಗೆಯಲ್ಲಿ.

‘ಇದೇನು ಮಹಾ ಅಣ್ಣಯ್ಯ, ನನಗಿದು ವಂಶದ ಬಳುವಳಿ. ನಿಂಗೊತ್ತಲ್ಲ ಅಪ್ಪ ಹರಿಕಥೆ ದಾಸರು. ಪ್ರಲ್ಹಾದ್, ಹರಿಶ್ಚಂದ್ರ, ಕೃಷ್ಣ ಚರಿತ್ರೆ, ರಾಮಕಥಾ ಪ್ರಸಂಗ ಇವೆಲ್ಲದರ ಸಾರ ತೆಗೆದು ಉದಾಹರಣೆ ಕೊಟ್ಟು ದಾಸರ ಪದ್ಯಗಳನ್ನು ಹಾಡ್ತಿದ್ದರು. ಪದ್ಯಗಳ ಅಭ್ಯಾಸ ನಮ್ಮದೇ ಹಾರ್ಮೋನಿಯಂನಲ್ಲಿ. ನನಗೂ ಬಾರಿಸಲು ಹೇಳಿಕೊಟ್ಟದ್ದು ಅವರೇ. ಹೆಚ್ಚುಗಾರಿಕೆ ಎಂತದೂ ಇಲ್ಲೆ. ನೀವು ಇಷ್ಟು ದಿನ ಮಕ್ಕಳಿಂದ ಇದನ್ನು ಮುಚ್ಚಿಟ್ಟದ್ದು ಎಂತಕ್ಕೆ? ಇನ್ನಾದರೂ ಗೌರಿ, ನಾಣಿಗೆ ಅಭ್ಯಾಸ ಮಾಡ್ಸಿ. ಕಲಿಗು’

ಸುಬ್ಬಪ್ಪಯ್ಯರಿಗೂ ತಮ್ಮ ತಪ್ಪಿನ ಅರಿವಾಯಿತು. ಕಮಲಿಯ ಮೋಹದಿಂದ ತಾನೂ ಹಾಡುವುದ, ಬಾರಿಸುವುದ ಬಿಟ್ಟು ಹಾರ್ಮೋನಿಯಂ ಮೂಲೆಗೆ ತಳ್ಳಿಬಿಟ್ಟೆನಲ್ಲ? ಸಕಾಲದಲ್ಲಿ ಎಚ್ಚರಿಸಿದ್ಲು ನಿನ್ನೆ ಮೊನ್ನೆ ಬಂದವಳು. ಸರಿ, ಆ ರಾತ್ರೆಯೇ ಭಜನೆಯಲ್ಲಿ ಹಾರ್ಮೋನಿಯದೇ ಗುಂಜಾವರ.
ಹೊರಗೆ ಕುಂಭದ್ರೋಣ ಮಳೆಯ ಅಬ್ಬರ. ಇಡೀ ಆಕಾಶವೇ ಭುವಿಗೆ ಮುತ್ತಿಟ್ಟಂತೆ.

ಪ್ರಾಯಶಃ ಗಂಗೊಳ್ಳಿ ಹೊಳೆನೀರು ಇಡೀ ಊರನ್ನು ತುಂಬಿಕೊಳ್ಳುತ್ತಿದೆ. ನಾಲ್ಕು ವರ್ಷಗಳ ಮೊದಲು ಇಂತಹದೇ ಮಳೆಯಲ್ಲಿ ಹೊಳೆಬಾಗಿಲು ಮನೆಯ ಚಾವಡಿ, ಪಡಸಾಲೆ, ದೇವರ ಕೋಣೆಯ ಎತ್ತರಕ್ಕೆ ಹೊಳೆನೀರು ರಭಸದಲ್ಲಿ ಹರಿದು ಅಮ್ಮೋ, ಗೌರಿ ಇನ್ನೂ ಮರೆತಿಲ್ಲ ಆ ರಾತ್ರೆಯನ್ನು. ಆ ನೀರಿನಲ್ಲಿ ಬಳಕೊಂಡು ಹೋದ ಸಾಮಾನುಗಳು ಅದೆಷ್ಟೋ. ತಾವೆಲ್ಲರೂ ಅಟ್ಟ ಹತ್ತಿ ಕುಳಿತು ನೀರಿಳಿದ ನಂತರವೇ ಕೆಳಗೆ ಬಂದದ್ದು. ಸುಬ್ಬಪ್ಪಯ್ಯ ಹೇಳಿದ್ದು, ‘ಈ ಮನೆಯ ಅಡಿಪಾಯ ಗಟ್ಟಿ ಇಲ್ಲದಿದ್ದರೆ ಮನೆಯೇ ಕುಸಿದು ಬೀಳ್ತಿತ್ತು. ನಾವೂ ಹೊಳೆಗೆ ಬಳ್ಕೊಂಡು ಹೋಪಕಿತ್ತು’.

| ಇನ್ನು ನಾಳೆಗೆ |

‍ಲೇಖಕರು Admin

July 29, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

 1. Krishna Bhat

  ಶ್ರೀಮತಿ ಎಪಿ ಮಾಲತಿಯವರು ಈ ಈ ಕಂತಿನಲ್ಲಿ ಬರೆದ ಲೇಖನ ಬಹಳ ಚೆನ್ನಾಗಿದೆ ಗೌರಿಯ ಆಯಿ ಮತ್ತು ಅತ್ತೆ ಬೇರೆ ಊರಿಗೆ ಹೋದಾಗ ಅವಳು ಹಾರ್ಮೋನಿಯಂ ತೆಗೆದು ಬಾರಿಸಲು ಪ್ರಯತ್ನ ಪಡುವದು ಆಗ ಸುಶೀಲತ್ತೆ ಬಂದು ದೇವರ ನಾಮದ ಹಾಡಿನೋಡನೆ ಸರಾಗವಾಗಿ ಹಾರ್ಮೋನಿಯಂ ಬಾರಿಸುವದು ಅದನ್ನು ಕೇಳುತ್ತ ನಾಯಿ ಸಹಿತ ಬೊಗಳುವದು ಬಿಟ್ಟು ನೋಡುತ್ತಾ ಆಲಿಸುವದು ತುಂಬಾ ಚೆನ್ನಾಗಿದೆ ಸುಶೀಲತ್ತೆಯಲ್ಲಿ ಇನ್ನು ಎಷ್ಟು ಕಲೆಗಳು ಅಡಗಿದೆ ಎಂದು ಸುಬ್ಬಯ್ಯನವರು ಬಾಯಿ ಬಿಟ್ಟು ನೋಡುವದು ತಂದೆ ಹರಿಕಥೆ ಮಾಡುತ್ತಾ ತಿರುಗುವಾಗ ಇರುವಾಗಿನ ಮನೆಯಲ್ಲಿ ಹಾರ್ಮೋನಿಯಂ ಬಾರಿಸುತ್ತಾ ಇದ್ದದ್ದನ್ನು ನೆನಸುತ್ತ ಬಾರಿಸುವದು ನನಗೆ ನೆನಪು ಮಾಡಿ ಕೊಡುತ್ತದೆ ಇದೆ ರೀತಿ ಎಷ್ಟೋ ಕಲೆಗಳು ತುಂಬಾ ಜನಗಳ ಅವರೊಡನೆ ಅಡಗಿ ಹೋಗುತ್ತದೆ ಅವರಿಗೆ ಅವಕಾಶ ಹಾಗೂ ಪ್ರೋತ್ಸಾಹ ಇರುವುದಿಲ್ಲ ಇಲ್ಲಿ ನನಗೆ ಪಂಡರಿಭಾಯಿ ಹಾಗೂ ಅವಳ ತಂಗಿ ಸಣ್ಣ ಇದ್ದಾಗ ಅವರ ಊರು ಭಟ್ಕಳ ನನ್ನ ಅಜ್ಜನ ಮನೆ ಚೋಳೇಶ್ವರ ಹತ್ತಿರ ಅವರು ಇದ್ದರು ಚಿಕ್ಕವರಿದ್ದಾಗ ಅಪ್ಪನ ಒಟ್ಟಿಗೆ ಹರಿಕಥೆಗೆ ಹೋಗುತ್ತಿದ್ದರಂತೆ ಅಂತ ನನ್ನ ಆಯಿ ಹೇಳಿದ್ದ ನೆನಪು ಬಹಳ ಚೆನ್ನಾಗಿದೆ ಇದೇ ರೀತಿ ಮುಂದುವರಿಯಲಿ ತಮ್ಮ ಪ್ರಿಯಕೃಷ್ಣ ವಸಂತಿ

  ಪ್ರತಿಕ್ರಿಯೆ
 2. Theresa Madtha

  ಹೊಳೆಬಾಗಿಲು

  ಸುಶೀಲಚಿಕ್ಕಿಯಲ್ಲಿರುವ ಪ್ರತಿಭೆ /
  ಧೈರ್ಯ ಮೆಚ್ಚ್ಬೇಕು. ಅದಲ್ಲದೆ, ಗೌರಿ, ನಾಣಿಗೂ ಕಲಿಸುವ ಉತ್ಸಾಹ!!

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: