ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಆ ಮನೆಯ ಹೆಸರು ಹೊಳೆಬಾಗಿಲು

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಿಕ್ಕಿದೆ.

ಕರಾವಳಿ ಲೇಖಕಿ ವಾಚಕಿಯರ ಸ೦ಘದ ಪ್ರಥಮ ಲೇಖಕಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಪುತ್ತೂರು ಹನ್ನೊ೦ದನೇ ತಾಲೂಕು ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ೨೦೦೫ರಲ್ಲಿ. ದ.ಕ. ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಯಾಗಿದ್ದರು.

3

ಒಂದು ದಿನ ಬಿಲ್ಲಿಗೆ ಬಾಣ ಹೂಡಿ ಆಡುತ್ತ ಆಡುತ್ತ ಗುಡ್ಡೆಯಲ್ಲಿ ಕಸಕಡ್ಡಿ ಪೇರಿಸಿಟ್ಟ ಬೆಂಕಿ ಕೊಟ್ಟ ಸುಡುಮಣ್ಣು ರಾಶಿಯ ಬೂದಿ ಮೇಲೆ ಇವನು ಹಾರಿ, ಎಡ ಕಾಲು ಸುಡುಮಣ್ಣಿನ ಒಳಗೆ ಕಾಣದ ಕೆಂಡಕ್ಕೆ ಬಿದ್ದು, ಅಯ್ಯಮ್ಮೋ, ಪಾದ ಬೆಂದು, ಒಂದೆರಡು ದಿನವಲ್ಲ ವಾರಗಟ್ಟಲೆ ನಾಣಿ ನಿತ್ರಾಣಿಯಾಗಿ ಮಲಗಿದ್ದ. ದೊಡ್ಡ ಹೆಂಗಸಿನಂತೆ ಗೌರಿ ಆರೈಕೆ ಮಾಡಿದ್ದಳು. ‘ನನ್ನ ತಮ್ಮನನ್ನು ಬದುಕಿಸಿಕೊಡು ದೇವರೇ!’ ಹಲುಬಿ ಬೇಡಿದ್ದು ಎಷ್ಟು ಬಾರಿಯೋ? ಜೀವರಸ ಹಿಂಡಿದಂತೆ ಅವಳು ಏನನ್ನೂ ಮರೆತಿಲ್ಲ.

ಸುಟ್ಟ ಗಾಯ ಕಡಿಮೆಯಾದರೂ ಕಲೆ ಉಳಿದಿದೆ ಹಾಗೇ. ತುಂಟ ವಾಮನ ಮೂರ್ತಿ. ಅವನ ಚೇಷ್ಟೆಗೆ ಆಯಿ ಗದರುವುದು ಬಿಟ್ಟಿಲ್ಲ. ಮತ್ತೊಂದು ದಿನ, ನೆತ್ತಿಗೇರಿದ ಬಿಸಿಲು ಧಗೆಗೆ ಬಾಯಿತುಂಬ ಮಣ್ಣು ತುಂಬಿಕೊಂಡು ಅಕ್ಕನ ಹತ್ತಿರ ಬಂದಾಗ ಅವಳು ಅವನ ಕಿವಿ ಹಿಡಿದು ಆಯಿ ಬಳಿ ದೂರು ತಂದಿದ್ದಳು. ಆಗ, ‘ಹೋ! ದೋಣಿ ದೋಣಿ ಬರ್ತಾ ಇದೆ. ಈ ಬದಿಗೆ, ನಮ್ಮದೇ ತೀರಕ್ಕೆ, ನಾಣಿ, ಕೆಳಗಿಳಿ’ ಗೌರಿ ಪೇರಳೆ ತಿಂದ ಬಾಯಿ ಒರಸಿಕೊಳ್ಳುತ್ತ ಕೈಯ್ಯನ್ನು ಇನ್ನೊಂದು ಗೆಲ್ಲಿಗೆ ಒತ್ತಿ ಕಾಲನ್ನು ಮಡಚಿ ಕೆಳಗೆ ಬಗ್ಗಿ ನಾಣಿಯ ಹಿಂದೆಯೇ ಸರಸರ ಮರ ಇಳಿದಳು.

ಇಬ್ಬರೂ ಓಡಿದರು ಹೊಳೆ ತೀರಕ್ಕೆ. ಆಗಲೇ ದೋಣಿ ಒಬ್ಬನನ್ನು ಇಳಿಸಿ ಮತ್ತೆ ಎಡಕ್ಕೆ ತಿರುಗಿ ಹೊಳೆಯಲ್ಲಿ ಮುಂದೆ ಸಾಗಿತು. ದೋಣಿಯಲ್ಲಿ ಬೇರೆ ದಿಕ್ಕಿಗೆ ಹೋಗುವ ಇನ್ನೂ ಕೆಲವರಿದ್ದರು. ಅವರು ಯಾರಿದ್ದರೆ ಎಂತಾ? ಎತ್ತ ಹೋದರೇನು? ದೋಣಿ ಇಳಿದು ನೀರಿನಲ್ಲಿ ದಡ ಏರಿದವನನ್ನು ಕೊಕ್ಕರೆಯ ಗುಂಪು ಬರ‍್ರನೆ ಹಾರಿ ಹೋದಂತೆ ಓಡಿಬಂದ ಮಕ್ಕಳಿಬ್ಬರೂ ಬಿಗಿಯಾಗಿ ತಬ್ಬಿಕೊಂಡರು, ‘ಅಪ್ಪಯ್ಯಾ!’

ಒಂದು ವಾರ! ಅದೆಷ್ಟು ದೀರ್ಘ ಅವಧಿ! ವಿಷಯಗಳ ಮಹಾಪೂರ ಗೌರಿ, ನಾಣಿಯ ಬಾಯಲ್ಲಿ. ನಾ ಮುಂದು, ತಾ ಮುಂದು ಎನ್ನುತ್ತ ಮನೆ ಒಳಗೆ ನಡೆದದ್ದು, ಕೆಲಸದವರ ಸಂಗತಿ, ಮೇಯಲು ಬಿಟ್ಟ ದನಗಳಲ್ಲಿ ಒಂದು ಸಂಜೆ ತನಕ ಬಾರದೆ ಅಜ್ಜಯ್ಯ, ಮೋತಿನಾಯಿ, ಲಿಂಗಣ್ಣ ಹೊಳೆ ಬದಿಗೆಲ್ಲ ಹುಡುಕಿ ಕರೆ ತಂದದ್ದು, ಬೆಕ್ಕು ಮೂರು ಮರಿ ಹಾಕಿದ್ದು, ಆ ತಾಯಿ ಬೆಕ್ಕು ತನ್ನದೇ ಒಂದು ಮರಿಯನ್ನು ತಿಂದದ್ದು, ನಾಣಿ ಸಿಟ್ಟಿನಲ್ಲಿ ತಾಯಿ ಬೆಕ್ಕನ್ನು ಹೊಳೆಗೆ ಹಾಕಲು ಹೊರಟಾಗ ಆಯಿ.

ಅಜ್ಜಮ್ಮ ತಡೆದದ್ದು, ಹೊಸದಾಗಿ ನೆಟ್ಟ ಗುಲಾಬಿ ಗಿಡದಲ್ಲಿ ಕೆಂಪು ಗುಲಾಬಿ ಅರಳಿದ್ದು ಹೀಗೆ ಮುಗಿಯದಷ್ಟು ಸುದ್ದಿಗಳು. ಎಲ್ಲಾ ವರದಿ ಮಾಡುತ್ತ ಅಪ್ಪಯ್ಯನ ತಲೆಚಿಟ್ಟು ಹಿಡಿಸುವ ಹೊತ್ತಿಗೆ ಶಾರದತ್ತೆಗೆ ಕೊಖ್ ಕೊಖ್ ನಗು. ಅಜ್ಜಮ್ಮನೂ ಸೆರಗಿನಿಂದ ಬಾಯಿ ಮುಚ್ಚಿ, ‘ಮಕ್ಕಳು ಬೆಲ್ಲದ ಅಕ್ರೋಟ್ ಮಾಡಿ ಅದು ಅಡಿ ಹಿಡಿದು ಅಜೀರ್ಣ ಆಗುವಷ್ಟು ತಿಂದು ಹೊರಕಡೆ ಶುರುವಾದದ್ದು ಹೇಳಲಿಲ್ಲ’ ಎಂದು ಮುಸಿ ಮುಸಿ ನಗುತ್ತ, ‘ಎರಡು ದಿನ ಊಟಕ್ಕೆ ಚೆನ್ನಾಗಿ ಬೇಯಿಸಿದ ಹುರಿದ ಅಕ್ಕಿ ಗಂಜಿಗೆ ಕಂಚಿಸಟ್ಟಿನ ಚಪ್ಪೆ ಉಪ್ಪಿನಕಾಯಿ ಕೊಟ್ಟೆ. ಸರಿ ಹೋಯ್ತು ಹೊಟ್ಟೆ’ ಎಂದಳು.

ತನ್ನದೇ ಮೊಮ್ಮಕ್ಕಳಾದರೂ ಕ್ಷುಲ್ಲಕ ಸಂಗತಿಗೆ ದೂರು ಹೇಳುವುದರಲ್ಲಿ ಅಜ್ಜಮ್ಮ ನಂಬರ್ ಒಂದು. ನಾವೇನು ಬೇಕೆಂದೇ ಅಡಿ ಹಿಡಿಸಿದ್ದಲ್ಲ. ಆಯಿ ಹದ ನೋಡಿ ಹೇಳಿದ್ದರೂ ಎಂತದೋ ಆಯ್ತು. ಅದೇನು ಮಹಾ ತಪ್ಪಾ? ಆಗ ಅಜ್ಜಮ್ಮ ಚಪ್ಪರಿಸಿ ತಾನೂ ಅಕ್ರೋಟ ಜಾಸ್ತಿ ತಿಂದು ಈಗ ಅಪ್ಪಯ್ಯನಿಗೆ ಹೀಗಾ ದೂರು ಕೊಡುವುದು? ಚಾಡಿ ಮಾತು ಎಂತಕ್ಕೆ? ಗೌರಿ ತಮ್ಮನ ಕಿವಿಯಲ್ಲಿ ಪಿಸುಗುಟ್ಟಿ, ‘ನಾವು ಅಜ್ಜಮ್ಮನಿಗೆ ಠೂ!’ ಎರಡು ಬೆರಳನ್ನು ತುಟಿಗಿಟ್ಟು ಠೂ ಮಾಡಿದಳು. ನಾಣಿಯೂ ಠೂ ಎಂದ. ಮಕ್ಕಳಾದರೂ ದೊಡ್ಡವರು ತಮ್ಮದೇ ಸಮಪ್ರಾಯ ಎಂದವರ ಊಹೆ. ‘ಅಜ್ಜಮ್ಮನಿಗೆ ತಮ್ಮನ್ನು ಕಂಡರೆ ಒಂಚೂರು ತಾತ್ಸಾರ ಅಲ್ಲದಾ? ಮತ್ತೆ ಚಕ್ರಿ ಅಮ್ಮಮ್ಮನ ಕಾಣು. ನಾವೆಂತ ಮಾಡಿದ್ರೂ ಯಾರ ಹತ್ರಾನೂ ಚಾಡಿ ಮಾತು ಊಹೂಂ. ಹಾಂಗೇ ಇರಬೇಕಲ್ದ?’ ಗೌರಿ ತಮ್ಮನ ಕಿವಿಯಲ್ಲಿ ಪಿಸುಗುಟ್ಟಿದಳು.

ಚಕ್ರಿ ಅಮ್ಮಮ್ಮ ಶರಾವತಿಯ ತಾಯಿ. ಆ ಅಮ್ಮಮ್ಮನ ಪರ ಮಕ್ಕಳು ವಹಿಸಿ ಮಾತನಾಡುವುದು ಅಜ್ಜಮ್ಮನಿಗೆ ತಿಳಿದ ಸಂಗತಿಯೇ. ಆದರೂ? ಮಕ್ಕಳನ್ನು ತಬ್ಬಿಕೊಂಡ ಅಪ್ಪಯ್ಯನಿಗೆ ನಗುವೋ ನಗು., ‘ದೊಡ್ಡವರು ಚಾಡಿ ಹೇಳಿದರೂ ಅದರಲ್ಲಿ ಒಳ್ಳೆತನ ಇರುತ್ತದಲ್ಲ ಗೌರಿ. ಪ್ರೀತಿ ಇದ್ದಲ್ಲಿ ಬುದ್ದಿ ಮಾತು. ಅಜ್ಜಮ್ಮನಿಗೆ ನೀವಲ್ಲದೆ ಮುದ್ದು ಮಾಡಲು ಇನ್ಯಾರಿದ್ದೋ? ಕೆಟ್ಟ ಯೋಚ್ನೆ ಬಾರದಂತೆ ನಿಮ್ಮಲ್ಲೇ ತಪ್ಪಾಯ್ತು ಅನ್ನಿ.’

ಹೊಳೆಬಾಗಿಲು ಆ ಊರ ಹೆಸರು. ಆ ಮನೆಯ ಹೆಸರು ಹೌದು. ಹಳೆ ಮಾದರಿಯ ನಾಲ್ಕು ಕೋಣೆ, ಮುಖಮಂಟಪ, ಉದ್ದದ ಊಟದ ಮನೆ, ಹಿಂದೆ ಅಡಿಗೆ ಕೋಣೆ, ಇವುಗಳ ಮೇಲೆ ಮಾಳಿಗೆ, ಮರದ ಏಣಿ ಹತ್ತಿಳಿಯಲು, ಅಲ್ಲೇ ಸಾಮಾನು ಸರಂಜಾಮು ಇಡುವ ಅಟ್ಟ, ಅನುಕೂಲಕ್ಕೆ ತಕ್ಕಂತೆ ಕಟ್ಟಿಸಿದ ಹಿಂಬದಿಯ ಕೋಣೆಗಳು. ಹೊಳೆ ಬದಿಯ ಭದ್ರತೆಗೆ ತಳಪಾಯ ಮತ್ತು ಎಂಟಡಿ ಎತ್ತರ ಕಲ್ಲು ಕಟ್ಟಿದ ಗಟ್ಟಿಮುಟ್ಟಾದ ಮನೆ. ಎದುರಿಗೆ ಮುಖ ಮಂಟಪ, ಅದರಾಚೆ ದೂರದಲ್ಲಿ ಹರಿಯುವ ಸೌಪರ್ಣಿಕಾ ನದಿ.

ಹಿಂಭಾಗದಲ್ಲಿ ಅಡಿಗೆ ಕೋಣೆ, ಬಚ್ಚಲು ಮನೆ, ದನದ ಕೊಟ್ಟಿಗೆ.ರಾತ್ರೆ ಆ ಮನೆಗೆ ಚಿಮಣಿ ಎಣ್ಣೆಯದೇ ದೀಪಗಳು. ಉದ್ದದ ಜಗಲಿಯಂತೆ ಇರುವ ಸಣ್ಣ ಮಹಡಿಯಿದೆ. ಕೆಳಗಿನ ಉದ್ದದ ಹೊರ ಜಗಲಿಯಿಂದ ಮಹಡಿಗೆ ಹೋಗಲು ಮರದ ಏಣಿ. ಇದು ಹಳೆ ಸಾಮಾನು ಸರಂಜಾಮು, ಪಾತ್ರೆ ಪಗಡಿ, ತೆಂಗಿನಕಾಯಿರಾಶಿ, ಉಪ್ಪಿನಕಾಯಿ, ಹಪ್ಪಳ, ಬೆಲ್ಲ ಇತ್ಯಾದಿ ಆಹಾರ ವಸ್ತು ಇಡುವ ಬೆಚ್ಚಗಿನ ಜಾಗ. ಸುಶೀಲಚಿಕ್ಕಿ ಈ ಮನೆಗೆ ಬಂದ ಲಾಗಾಯ್ತು ಮಹಡಿ ಮೂಲೆಯೇ ಅವಳ ವಾಸದ ಸ್ಥಾನ. ಸುಬ್ಬಪ್ಪಯ್ಯ ಎಷ್ಟು ಹೇಳಿದರೂ ರಾತ್ರೆ ಹಗಲು ಬೆಕ್ಕಿನ ಬಿಡಾರ ಬೇರೆಯೇ.

ಕೆಳಗೆ ಅಪ್ಪಯ್ಯನ ಮಲಗುವ ಕೋಣೆ ದೊಡ್ಡದು. ಅದರ ಮಧ್ಯ ಬಟ್ಟೆ ಪರದೆ. ಒಂದು ಭಾಗದಲ್ಲಿ ಅಪ್ಪಯ್ಯ, ಆಯಿ. ಇನ್ನೊಂದು ಭಾಗದಲ್ಲಿ ಗೌರಿ, ನಾಣಿ. ಅಪ್ಪಯ್ಯ ಸಾಸ್ತಾನಕ್ಕೆ ಹೋದ ದಿನಗಳಲ್ಲಿ ಅರ್ಧ ಕಟ್ಟಿದ ಪರದೆ ಸರಿಸಿ ಮಕ್ಕಳು ಆಯಿಯ ಹಾಸಿಗೆಯಲ್ಲಿ ತೂರಿಕೊಳ್ಳುತ್ತವೆ. ಆಚೆಗೊಬ್ಬರು, ಈಚೆಗೊಬ್ಬರು. ಸ್ವರ್ಗೀಯ ಸುಖ! ಗೌರಿ ನಾಣಿ ನಿದ್ದೆ ಬರುವ ತನಕ ಮಾತು ಮಾತು, ಆಯಿ ಗದರಬೇಕು. ‘ಹೋಗಿ ಹೊರಗೆ, ಅಜ್ಜಯ್ಯನ ಮಗ್ಗಲಿಗೆ’ ಸುಬ್ಬಪ್ಪಯನವರಿಗೆ ಹಗಲು ಹೊತ್ತು ಮಕ್ಕಳ ಸಾಮಿಪ್ಯ ಆಪ್ಯಾಯಮಾನ. ರಾತ್ರೆ ಹತ್ತಿರ ಬರಬಾರದು. ‘ನಿಮ್ಮ ಜಾಗದಲ್ಲಿ ಬಿದ್ದುಕೊಳ್ಲಿ’ ಅಟ್ಟುತ್ತಾರೆ. ಅವರ ಎದುರಿನ ಕೋಣೆ ಶಾರದತ್ತೆ, ಕಮಲತ್ತೆಯದು. ಅವರ ನಿದ್ರೆಯ ಸಹವಾಸಗೌರಿಗೆ ದೂರವೇ. ಅದೇನು ಹರಟೆಯೋ ತಡ ರಾತ್ರೆವರೆಗೆ. ಅಳು ನಗು ಒತ್ತರಿಸುವ ಜೊತೆಗೆ ಈ ಕಮಲತ್ತೆಗೆ ಹಲ್ಲು ಜಗಿಯುವ ರೋಗ. ಕರಕಟ, ಕರಕಟ ಸಪ್ಪಳ ಅಪ್ಪಳಿಸುತ್ತದೆ ಕಿವಿಗೆ.

ಒಮ್ಮೆ ಗೌರಿ ಅವಳ ಬಾಯಿಗೆ ಬಟ್ಟೆ ತುರುಕಿದ್ದು, ಅವಳ ಉಸಿರುಗಟ್ಟಿದ್ದು, ನಿದ್ದೆಗಣ್ಣಿನಲ್ಲಿ ಎದ್ದ ಕಮಲತ್ತೆ ಗೌರಿಯನ್ನು ಹೊಡೆದದ್ದು, ಬೇಡಪ್ಪ ನಿನ್ನ ತಂಟೆ ಎಂದು ತಮ್ಮನೊಂದಿಗೆ ಗುಬ್ಬಚ್ಚಿಯಂತೆ ಮುದುರಿ ಮಲಗುತ್ತಾಳೆ. ಅಪ್ಪಯ್ಯನ ಪರದೆಯಾಚೆ ಬದಿಯಲ್ಲಿದೆ. ಈ ದಿನವೂ ಹಾಸಿಗೆ ಒದರಿ ಹಾಕಿಕೊಳ್ಳುವ ಹೊತ್ತಿನಲ್ಲಿ ದೀಪ ಬೆಳಗುತ್ತಿದ್ದ ಮುಖಮಂಟಪದಲ್ಲಿ ಹಿರಿಯರ ಪಿಸು ಮಾತುಗಳು. ಗಹನ ವಿಷಯ. ಗೌರಿಯ ಕಿವಿ ನಿಮಿರಿತು. ಅಪ್ಪಯ್ಯ ಹೇಳುತ್ತಿದ್ದ, ‘ನಾಳೆ ಬೆಳಿಗ್ಗೆ ಸಾಸ್ತಾನದಿಂದ ಕಮ್ತಿಯವರ ಗೆಳೆಯ ಮತ್ತು ಅವರ ಮಗ ಶಾರದೆಯನ್ನು ನೋಡ್ಲಿಕ್ಕೆ ಬರ್ತಾ ಇದ್ದೋ. ಒಂದು ಸಿಹಿ, ಒಂದು ಖಾರದ ತಿಂಡಿ ಮಾಡಿ. ಶಾರದೆ ತಯಾರಾಗಿರಲಿ’ ಶಾರದತ್ತೆ ಗೊಣಗಿದಳು.

ಅಪ್ಪಯ್ಯ ತನ್ನ ಮೂರು ಬೆರಳೆತ್ತಿದ, ‘ಇವ ಮೂರನೇಯವ. ಮೂರಕ್ಕೆ ಮುಕ್ತಾಯ!’
‘ಮೂರಕ್ಕೆ ಮುಕ್ಕ ಆದ್ರೆ ಮತ್ತೆ ಮದಿ ಇಲ್ಲೆ ಅಣ್ಣಯ್ಯ, ನನಗೆ ಸಾಕಾಯ್ತು’
‘ಅಪದ್ದ ಹೇಳ್ಬೇಡ ಶಾರು. ಹುಡುಗ ಶ್ರೀಮಂತ. ತೋಟ, ಗದ್ದೆ, ಕರಾವು ಸಂಪತ್ತು ಇದ್ದವ. ಓದಿದವ. ಹಳ್ಳಿ ಹುಡುಗಿಯೇ ಆಯೆಕ್ಕಂತೆ.’ ಇನ್ನೂ ಏನೇನೋ ಅಸ್ಪಷ್ಟ ಮಾತುಗಳು. ಗೌರಿ ತಮ್ಮನ ಹಾಸಿಗೆ ಬದಿಗೆ ಸರಿದಳು, ‘ನಾಣಿ, ನಾಳೆ ಶಾರದತ್ತೆನ್ನ ನೋಡಲು ಇನ್ನೊಬ್ಬರು ಬರ್ತಾ ಇದ್ದವು. ಖಾರ, ಸಿಹಿತಿಂಡಿ. ಗಮ್ಮತ್ತು ಇದ್ದು. ಕೇಳ್ತಾ, ನಾಳೆ ಬೇಗ ಏಳೆಕ್ಕು’

ನಾಣಿಗೆ ಸಂಜೆಗತ್ತಲಲ್ಲಿ ಅಪ್ಪಯ್ಯ ತಂದ ಕರ್ನಾಟಕ ಭೂಪಟದಲ್ಲಿ ಸಾಸಿವೆ ಗಾತ್ರದ ಅಕ್ಷರಗಳಲ್ಲಿ ಗಂಗೊಳ್ಳಿ ಹೊಳೆ, ಹೊಳೆಬಾಗಿಲು ಎಲ್ಲಿದ್ದವೋ ಅಪ್ಪಯ್ಯ ತೋರಿಸಿದರೂ ಅಸ್ಪಷ್ಟ. ತಿಳಿದುಕೊಳ್ಳಲು ಆಗಲೇ ಇಲ್ಲ. ಸುಶೀಲ ಚಿಕ್ಕಿಗೂ ಹಾಗೇ ಆಗಿತ್ತು. ನಾಳೆ ಬೆಳಿಗ್ಗೆ ಮೊದಲು ಮಾಡುವ ಕೆಲಸ, ಮುಖಮಂಟಪದಲ್ಲಿ ಭೂಪಟ ಬಿಡಿಸಿ ನೋಡುವುದು. ಆ ಗುಂಗಿನಲ್ಲಿ ಕನಸಿನ ರಾಜ್ಯಕ್ಕೆ ಹೋಗಿದ್ದ ಈ ಹುಡುಗನಿಗೆ ಅಕ್ಕನ ಧ್ವನಿ ಕೇಳಿಸಲಿಲ್ಲ.

ಅದೇನೋ ಗೌರಿಗೆ ಕೆಲವೊಮ್ಮೆ ನಿದ್ರೆ ಬರುವುದೇ ಇಲ್ಲ. ಆವತ್ತು ಒಂದು ದಿನ ಮನೆಯಲ್ಲಾದ ಸನ್ನಿವೇಶ ನೆನಪಾಗುತ್ತದೆ. ಹಾಗೇ ಅಟ್ಟದ ಮೇಲೆ ಕೊಳತಪ್ಪಲೆಗಳು, ಪಾತ್ರೆಗಳು ಉರುಳಿದಂತೆ ಧಡಭಡ ಸದ್ದು. ಕೊಟ್ಟಿಗೆಯಿಂದ ಮರಮುಟ್ಟುಗಳ ಲೆಕ್ಕಾಚಾರ, ಒಳಗೆ ಹಿರಿಯರ ವಾಗ್ಯುದ್ಧ. ಇತ್ಯರ್ಥಕ್ಕೆ ರಘು ದೊಡ್ಡಪ್ಪ, ಸೀತೂದೊಡ್ಡಪ್ಪ ಅವರಿಗೆ ಹೆಣ್ಣುಕೊಟ್ಟ ಮಾವಂದಿರು ಸೇರಿದ್ದಾರೆ.

| ಇನ್ನು ನಾಳೆಗೆ |

‍ಲೇಖಕರು Admin

July 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಲಲಿತ ಎ.ಪಿ.

    ಚೆನ್ನಾಗಿ ಓದಿಸಿ ಕೊಂಡು ಹೋಗುತ್ತಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: