ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಚೋಟುದ್ದ ಪೋರಿಗೆ ಹೇಳಲೇಬೇಕಾದ ಅದೆಷ್ಟೋ ಸಂಗತಿ..

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಿಕ್ಕಿದೆ.

ಕರಾವಳಿ ಲೇಖಕಿ ವಾಚಕಿಯರ ಸ೦ಘದ ಪ್ರಥಮ ಲೇಖಕಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಪುತ್ತೂರು ಹನ್ನೊ೦ದನೇ ತಾಲೂಕು ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ೨೦೦೫ರಲ್ಲಿ. ದ.ಕ. ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಯಾಗಿದ್ದರು.

20

ಅಜ್ಜಮ್ಮ ಮಲಗುವ ಕೋಣೆಯ ಮಂಚದ ಕೆಳಗೆ ಚೆನ್ನಾಗಿ ಬಟ್ಟೆಯಲ್ಲಿ ಸುತ್ತಿಟ್ಟ ಒಂದು ಹಾರ್ಮೋನಿಯಮ್ ಪೆಟ್ಟಿಗೆಯಿದೆ. ಇತ್ತೀಚೆಗೆ ಹಲವಾರು ವರ್ಷಗಳಿಂದ ಯಾರೂ ಉಪಯೋಗಿಸದೆ ಮೂಲೆ ತಳ್ಳಿದ ಹಾರ್ಮೋನಿಯಮ್ ಪೆಟ್ಟಿಗೆ ಅದು. ಬಾರಿಸುವವರು ಇಲ್ಲದೆ ಯಾರ ಸ್ಪರ್ಶಕ್ಕೆ ಸಿಗದೆ, ಯಾರ ಗೌರವಕ್ಕೆ ಪಾತ್ರವಾಗದೆ ತೀರ ಅನಾಥವಾಗಿ ಮುದುರಿಕೊಂಡಿದೆ.

ಯಾವಾಗಲೋ ಒಂದು ದಿನ ಗೌರಿ ನಾಣಿ ಹುಗ್ಗಾಟ ಆಡುವ ಸಂದರ್ಭದಲ್ಲಿ ಮಂಚದಡಿ ಅವಿತುಕೊಂಡ ನಾಣಿಗೆ ಬಟ್ಟೆಯಲ್ಲಿ ಸುತ್ತಿದ ಪೆಟ್ಟಿಗೆ ಕಂಡು ಹೊರ ಎಳೆದು ಬೆಳಕಿಗೆ ತಂದಿಟ್ಟು ಅದರ ಮುಸುಕು ತೆಗೆದಿದ್ದ. ಅದೇನೆಂದು ಅಕ್ಕ ತಮ್ಮ ಪರೀಕ್ಷೆಯ ನೋಟ ಬೀರುವಾಗ ಸುಬ್ಬಪ್ಪಯ್ಯ ತಾವೇ ನೆಲದ ಮೇಲೆ ಚಕ್ಕಳಮುಕ್ಕಳ ಹಾಕಿ ಕೂತು ಹಾರ್ಮೋನಿಯಂ ಬಾರಿಸಿ ತೋರಿಸಿದ್ದರು. ಇದೊಂದು ವಾದ್ಯ. ಚೆಂದ ಇದ್ದು! ಬಾರಿಸಲು ಖುಷಿ ಅಲ್ಲದಾ? ಮತ್ತೆ ಕೇಳಬೇಕೇ? ಆ ಪೆಟ್ಟಿಗೆ ಕೋಣೆಯಿಂದ ಹೊರ ಮುಖಮಂಟಪಕ್ಕೆ ಬಂದಿತು.

ರಾತ್ರೆ ಹಗಲು ಎನ್ನದೆ ಮಕ್ಕಳ ಕೈಗೊಂಬೆಯಾಗಿ ಅವರ ಬೆರಳತುದಿಯ ಸ್ಪರ್ಷದಲ್ಲಿ ಏನೇನೋ ಸ್ವರ ಹೊರಡಿಸುತ್ತ ಹೊಸ ಜೀವದ ಮೆರಗು ಪಡೆದು ಹಾರ್ಮೋನಿಯಮ್ ವಿಜೃಂಭಿಸಿತು. ಮಕ್ಕಳ ಕುತೂಹಲ, ಸುಬ್ಬಪ್ಪಯ್ಯರಿಗೆ ಪ್ರಾಯದ ಉತ್ಸಾಹ. ಅದನ್ನು ಹೇಗೆ ಬಾರಿಸಬೇಕೆಂದು ತೋರಿಸಿಕೊಟ್ಟರು. ನಂತರ ಇಬ್ಬರೂ ತಮಗಿಚ್ಚೆ ಬಂದಂತೆ ಹಾರ್ಮೋನಿಯಂ ಪೆಟ್ಟಿಗೆ ಮೇಲೆ ಬೆರಳು ಒತ್ತಿ ಒತ್ತಿ ಬಾರಿಸಿದ್ದೇ ಬಾರಿಸಿದ್ದು. ಸುಸ್ವರವೋ, ಅಪಸ್ವರವೋ ಹೇಳುವವರು ಯಾರು? ಆದರೆ ಆಗ ಹೊರಗೆ ಕಟ್ಟಿ ಹಾಕಿದ ಮೋತಿ ವಿಕಾರ ಸ್ವರದಲ್ಲಿ ಕುಂಯ್ ಕುಂಯ್ ಅರಚುತ್ತಿತ್ತು. ಅದಕ್ಕಿಂತ ಹೆಚ್ಚಾಗಿ ಹಾರ್ಮೋನಿಯಮ್ ಸ್ವರ ಕೇಳಿದಾಕ್ಷಣ ಕಮಲತ್ತೆಯ ಬೊಬ್ಬೆ.

‘ನರಿನಾಯಿ ಊಳಿಟ್ಟಂತೆ ಇದೆಂತದು? ನಿಲ್ಲಿಸಿ’ ಕಮಲತ್ತೆ ಎರಡೂ ಕೈಗಳಿಂದ ಕಿವಿ ಮುಚ್ಚುವಾಗ ನಿಲ್ಲಿಸಲೇಬೇಕು. ಪ್ರತಿದಿನ ಇವರು ಬಾರಿಸುವುದು, ‘ಚೋಟುದ್ದ ಪೋರರಿಗೆ ಪೊಗರು!.’ ಅವಳು ಕೀರಲು ಸ್ವರದಲ್ಲಿ ತಡೆಯುವುದು. ಎಷ್ಟು ದಿನ ಹೀಗೆ? ಅವಳು ತಡೆದಷ್ಟೂ ಗೌರಿ, ನಾಣಿಗೆ ಬಾರಿಸುವ ಉಮೇದು. ರಾಗಜ್ಞಾನ ಇಲ್ಲದಿದ್ದರೇನಂತೆ, ಸಾ, ಪಾ, ಧಾ ಇನ್ನೂ ಏನೇನೋ ಸ್ವರ ಬರುತ್ತದಲ್ಲ ಸಾಕು ಅಷ್ಟೇ.

ಚಕ್ರಿ ಅಮ್ಮಮ್ಮನ ಮನೆಗೆ ಹೋದಾಗ ಜಾತ್ರೆ ಸಮಯ ದೇವಸ್ಥಾನದಲ್ಲಿ ಕೆಲವು ಹಾಡುಗಾರರು ಇಂತಹದೇ ವಾದ್ಯಪೆಟ್ಟಿಗೆ ಹಿಡಿದು ಹಾಡುವುದನ್ನು ನೋಡಿದ್ದಾರೆ. ತಮ್ಮ ಪ್ರಾಯದ ಪೋರರು ಆ ಪೆಟ್ಟಿಗೆ ಭುಜಕ್ಕೇರಿಸಿ ಕೈಬೆರಳಲ್ಲಿ ಬಾರಿಸುತ್ತ ಮನೆ ಮನೆಗೂ ಹಾಡುತ್ತ ಬಂದರೆ ಕೇಳಿದವರು ಒಂದೆರಡು ಕಾಸು ಕೊಡುತ್ತಾರೆ. ಅಂತಹ ಜಾದೂ ಪೆಟ್ಟಿಗೆ ಬೆರಳಿನಿಂದ ಮುಟ್ಟಿದರೆ ಸ್ವರ ತೆಗೆಯುವ ಪೆಟ್ಟಿಗೆ ನಮ್ಮ ಮನೆಯಲ್ಲಿದೆ! ಈ ತನಕ ಒಬ್ಬರೂ ಬಾರಿಸಿದ್ದು ಕೇಳಿಯೇ ಇಲ್ಲ. ಕಮಲತ್ತೆಗೆ ಚೇಳು ಕಚ್ಚಿದಂತೆ ಅಸಹನೆ? ಒಂದು ದಿನ ನಿಜವಾಗಿಯೂ ಕಮಲತ್ತೆ, ‘ನನ್ನ ಮುಂದೆ ನುಡಿಸಿದರೆ ಎತ್ತಿ ತೋಡಿಗೆ ಬಿಸಾಕ್ತೆ’ ಎಂದು ಹಾರ್ಮೋನಿಯಮ್ ಹಿಡಿದೆಳೆದಾಗ ಆಯಿ ಗದರಿದಳು’ ‘ಗೌರಿ, ನಿಂಗೂ ಎಂತಕ್ಕೆ ಹಠ? ಕತ್ತೆ ರಾಗದಲ್ಲಿ ನೀ ಬಾರಿಸಿದ್ರೆ ನಮ್ಮ ಕೆಮಿಯೂ ಕೆಪ್ಪಾಗ್ತು. ತೆಗೆದು ಒಳಗಿಡು’ ಸಿಟ್ಟು ಮಾಡಿದ ಆಯಿಗೆ ಅನಂತರ ಬಹಳ ಬೇಜಾರಾಗಿತ್ತು.

ಗೌರಿಯನ್ನು ತಬ್ಬಿದ ಆಯಿಯಲ್ಲಿ ಹೇಳಲಾಗದ, ಚೋಟುದ್ದ ಪೋರಿಗೆ ಹೇಳಲೇಬೇಕಾದ ಅದೆಷ್ಟೋ ಸಂಗತಿಗಳಿದ್ದವು. ಯಾವ ರಾಯನ ಕಾಲದಿಂದಲೋ ಈ ಮನೆತನದ ಅಮೂಲ್ಯ ಸೊತ್ತು ಹಾರ್ಮೋನಿಯಮ್. ಸುಬ್ಬಪ್ಪಯ್ಯನ ಅಪ್ಪ, ಅವರ ತಂದೆ ಎಲ್ಲರೂ ಹಾರ್ಮೊನಿಯಮ್ ಕಲಿತವರೇ. ಸಂಗೀತದ ರಾಗಜ್ಞಾನ ಇದ್ದವರು, ಇಲ್ಲದವರು ಎಲ್ಲರೂ ಬಾರಿಸುವವರು. ಹಿಂದಿನ ಆದಿನಗಳಲ್ಲಿ ಹಾರ್ಮೋನಿಯಮ್ ಇದ್ದರೆ ಮನೆತನಕ್ಕೂ ಶೋಭೆ. ಸುಬ್ಬಪ್ಪಯ್ಯರೂ ಚೆನ್ನಾಗಿ ಬಾರಿಸುವವರು. ತಮ್ಮ ಮಕ್ಕಳಿಗೂ ಆಸೆಯಿಂದ ಕಲಿಸಲು ಇಚ್ಚಿಸಿದರೆ ಕಮಲತ್ತೆಯ ಹೊರತಾಗಿ ಉಳಿದವರು ಹಾರ್ಮೋನಿಯಮ್‌ನಲ್ಲಿ ಆಸಕ್ತಿ ತೋರಿಸಲೇ ಇಲ್ಲ.

ಕಮಲತ್ತೆ ತನ್ನ ಐದರ ಪ್ರಾಯದಿಂದಲೇ ತಂದೆಯಿಂದ ದಾಸರ ಪದಗಳನ್ನು, ಭಜನೆ ಹಾಡುಗಳನ್ನು ಕಲಿಯುತ್ತ ಸುಶ್ರಾವ್ಯವಾಗಿ ಹಾರ್ಮೋನಿಯಮ್ ಬಾರಿಸುತ್ತಿದ್ದಳು. ಪ್ರತಿದಿನ ಸಂಜೆ ದೇವರ ಭಜನೆ ಮಾಡುವಾಗ ಸುಬ್ಬಪ್ಪಯ್ಯರ ಹಾಡು, ಕಮಲಿಯ ಹಾರ್ಮೋನಿಯಮ್ ಜೊತೆಯಾದರೆ ಒಂದು ತರಹ ಭಕ್ತಿ ವಾತಾವರಣ. ಸುಬ್ಬಪ್ಪಯ್ಯರಿಗೆ ತಾಳಮದ್ದಳೆ ಹುಚ್ಚು ಇತ್ತು. ಆ ಊರಲ್ಲಿ ನಡೆಯುವ ತಾಳಮದ್ದಳೆಗೆ ಅವರ ಹಾರ್ಮೋನಿಯಮ್‌ನದೇ ಬಳಕೆ.

ಸುಬ್ಬಪ್ಪಯ್ಯ ಭಾಗವತರ ಜೊತೆಗೇ ಕುಳಿತು ಬಾರಿಸುತ್ತಿದ್ದರು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಪ್ರತಿ ನವರಾತ್ರೆಯ ಒಂಬತ್ತು ದಿನಗಳು, ರಥೋತ್ಸವ ಸಂದರ್ಭ, ವಿಶೇಷ ಪೂಜಾ ಕಟ್ಟಳೆಗಳು ಇರುವಾಗ ಸಂಜೆ ಭಕ್ತಿಗೀತೆಗಳಿಗೆ ಹಾರ್ಮೋನಿಯಮ್ ಸೇವೆ ಸುಬ್ಬಪ್ಪಯ್ಯರದು. ಹೆಚ್ಚಾಗಿ ದಾಸರ ಪದಗಳೇ ಇರುತ್ತಿತ್ತು. ಕಮಲತ್ತೆಗೆ ಹಾರ್ಮೋನಿಯಮ್ ಚೆನ್ನಾಗಿ ಅಭ್ಯಾಸ ಆದನಂತರ ತಂದೆಯ ಜೊತೆ ದೇವಸ್ಥಾನದಲ್ಲಿ ಬಾರಿಸುವುದು ಖಾಯಂ ಆಯಿತು. ಆವಾಗ ‘ಇವಳು ನನ್ನ ಮಗಳು’ ಎಂದು ಎಲ್ಲರಿಗೂ ಪರಿಚಯಿಸಲು ಸುಬ್ಬಪ್ಪಯ್ಯರಿಗೆ ಬಹಳ ಹೆಮ್ಮೆ.

ಇವೆಲ್ಲ ಆಯಿಯಿಂದ ಗೌರಿಗೆ ತಿಳಿದ ಸಂಗತಿಗಳು. ಕಮಲತ್ತೆಗೆ ಮದುವೆ ಎಂಟರ ಪ್ರಾಯದಲ್ಲಿ ಆಗಿತ್ತು. ಆದರೆ ಮೈ ನೆರೆದು ಪ್ರಸ್ತವಾಗದೆ ಗಂಡನ ಮನೆಗೆ ಹೋಗುವಂತಿಲ್ಲ. ಅವಳು ಹೊಳೆಬಾಗಿಲು ಮನೆಯಲ್ಲೇ ಉಳಿದಳು. ಆ ನಂತರ ಅವಳ ಹಾರ್ಮೋನಿಯಮ್ ಬಾರಿಸುವಿಕೆ ಇನ್ನೂ ರಂಗೇರಿತು. ಕೆಂಪು ಪಟ್ಟೆದಾರದ ತಾಳಿಯ ಜೊತೆ ಚಿನ್ನದ ಕರಿಮಣಿ, ಕಿವಿಗೆ ಕುತ್ತಿಗೆಗೆ ಚಿನ್ನದ ಹೊಸ ಆಭರಣಗಳು, ಮದರಂಗಿ ಹಚ್ಚಿದ ಕಾಲ್ಗಳಿಗೆ ಗೆಜ್ಜೆ, ಚೆಂದದ ಸೀರೆಯುಟ್ಟು ದೇವಸ್ಥಾನದಲ್ಲಿ ಕುಳಿತರೆ ಸಾಕ್ಷಾತ್ ಅನ್ನಪೂರ್ಣೇಶ್ವರಿ ದೇವಿಯೇ! ‘ಇನ್ನೂ ಚಿಕ್ಕ ಬಾಲೆ, ಎಂತ ಲಾಯಕ್ ಬಾರ್ಸುತ್ತಳು. ಕಾಂಬಕೂ ಚೆಂದ. ಮೊಗ್ಗು ಬಿರಿದಾಂಗೆ ನಗು ಕಾಣು, ತಲೆಬಾಗಕ್ಕು ನಾವು’ ಎನ್ನುತ್ತಿದ್ದರು ನೆರೆದ ಭಕ್ತರು. ಸುಬ್ಬಪ್ಪಯ್ಯ ಅಲ್ಲದೆ ಬೇರೆ ಹಾಡುವವರು ಬಂದು ಕುಳಿತರೆ ಅವರ ಸ್ವರಕ್ಕೂ ಶೃತಿ ಸರಿಪಡಿಸಿ ಬಾರಿಸುವಾಗ ಶೋತೃಗಳು ತಲೆದೂಗುತ್ತಿದ್ದರು. ‘ಸೌಭಾಗ್ಯವತೀ ಭವ’ ಮುಖ್ಯ ಅರ್ಚಕರು ಆಶೀರ್ವದಿಸಿ ಫಲ ಮಂತ್ರಾಕ್ಷತೆ ಕೊಡುವಾಗ ಸುಬ್ಬಪ್ಪಯ್ಯರಿಗೆ ಧನ್ಯತಾಭಾವ.

ಈ ಸಂತೋಷದಲ್ಲಿ ಐದಾರು ವರ್ಷಗಳು ಕಳೆದ ನಂತರ ಕಮಲತ್ತೆ ಗಂಡನ ಮನೆಗೆ ಹೋದವಳು ಕೇವಲ ಎರಡೇ ತಿಂಗಳಲ್ಲಿ ತವರಿಗೆ ಹಿಂದಿರುಗಿದ್ದು ವಿಧಿಯಾಟ. ಮೊದಲಿನಂತೆ ಮನೆ ಭಜನೆಯಲ್ಲಿ ಹಾರ್ಮೋನಿಯಂ ಬಾರಿಸುವುದು ನಿಂತು ಹೋಯಿತು. ಗಂಡನ ವರ್ಷಾಂತಿಕ ಮುಗಿದ ನಂತರ ಅವಳು ಹಾಡುವ, ಹಾರ್ಮೋನಿಯಮ್ ಬಾರಿಸುವ ನಿರೀಕ್ಷೆ ಇತ್ತು ಸುಬ್ಬಪ್ಪಯ್ಯರಿಗೆ. ಆದರೆ ಅವಳು ಅತ್ತ ಕಣ್ಣೆತ್ತಿಯೂ ನೋಡಲಿಲ್ಲ. ಒಮ್ಮೆ ಸುಬ್ಬಪ್ಪಯ್ಯ ಹಾರ್ಮೋನಿಯಂ ಪೆಟ್ಟಿಗೆ ಅವಳ ಮುಂದಿಟ್ಟು ಬಗ್ಗಿದ್ದ, ‘ದೇವರ ನಾಮ ಹಾಡು ಮಗಳೇ. ಬೇರೆಯವರಿಗೆ ಅಲ್ಲ, ನಿನ್ನ ನೋವು, ದುಃಖ ಮರೆಯೂದಕ್ಕೆ.’

ತಂದೆಯ ಬಲವಂತಕ್ಕೆ ಹಾರ್ಮೋನಿಯಂ ಹಿಡಿದು, ‘ಕರುಣಾಕರ ನೀನೆನ್ನುವುದೇತಕೋ| ಭರವಸೆ ಇಲ್ಲವೆನಗೆ|’ ಹಾಡುತ್ತ ಬಾರಿಸುತ್ತ ಕಣ್ಣು ತುಂಬಾ ನೀರು. ಅರ್ಧಕ್ಕೆ ನಿಲ್ಲಿಸಿ ಬಿಕ್ಕಿ ಬಿಕ್ಕಿ ಅಳು. ಅಂದೇ ಕೊನೆ, ಕಮಲತ್ತೆಗೆ ಅದನ್ನು ಕಂಡರೆ ಸಾಕು, ಮೈ ಉರಿ. ಈಗ ದೇವಸ್ಥಾನದ ಕಾರ್ಯಕಟ್ಟಳೆಯಿಂದ ದೂರ ಉಳಿದ ಸುಬ್ಬಪ್ಪಯ್ಯರೂ ಮೌನಿ. ಪ್ರಧಾನ ಅರ್ಚಕರು ಮನೆ ತನಕ ಬಂದು, ‘ಸುಬ್ಬಪ್ಪಯ್ಯನವರೆ, ನಿಮ್ಮ ಹಾಡು, ಕಮಲಿಯ ಹಾರ್ಮೋನಿಯಂ ಸೇವೆಯಾದರೆ ಅನ್ನಪೂರ್ಣೇಶ್ವರಿ ದೇವಿಗೂ ತೃಪ್ತಿ. ಇಲ್ಲ ಅನ್ನಬೇಡಿ. ತಾಯೀ, ನೀನು ಮರೆಯಲ್ಲಿ ಕುಳಿತು ಹಾರ್ಮೋನಿಯಂ ಬಾರ್ಸು. ಜನ ಕೇಳ್ತಾರೆ. ಇಲ್ಲ ಅನ್ನಬೇಡ’ ಕೈಮುಗಿದು ಕಮಲಿಯನ್ನೇ ಬೇಡಿಕೊಂಡರು.

ಅವರ ಬೇಡಿಕೆ ವ್ಯರ್ಥವಾಯಿತು. ಇದಕ್ಕೆಲ್ಲ ಸಾಕ್ಷಿಯಾದ ಅಪ್ಪಯ್ಯ, ಸೀತು ದೊಡ್ಡಪ್ಪ, ರಘು ದೊಡ್ಡಪ್ಪ ತಾವೂ ಮೌನ ತಳೆದರು. ಹೋಗಲಿ, ಇನ್ನಾದರೂ ಮನೆತನದ ಪ್ರತಿಷ್ಟೆ ಉಳಿಸಲು ಹಾರ್ಮೋನಿಯಂ ಸ್ವಲ್ಪ ಅಭ್ಯಾಸ ಮಾಡಬಹುದಿತ್ತು. ದೂರದ ಊರುಗಳಲ್ಲಿ ಇದ್ದರೇನಂತೆ, ನವರಾತ್ರೆ, ರಥೋತ್ಸವಕ್ಕೆ ಒಂದು ದಿನದ ಪ್ರಸಾದ ಸ್ವೀಕಾರಕ್ಕೆ ಬಂದಾಗ ಈ ವಾದ್ಯದ ಸೇವೆ ಮಾಡಿದರಾಯ್ತು. ಅಪ್ಪಯ್ಯ ಒಬ್ಬ ಇದ್ದ, ಅವನಿಗೂ ವಾದ್ಯ ಮಾರುದೂರ. ಈ ಎಲ್ಲ ಕಾರಣಗಳಿಂದ ಹಾರ್ಮೋನಿಯಂ ಅಟ್ಟದ ಮೂಲೆಯ ಹಳೆ ಸಾಮಾನುಗಳ ರಾಶಿಯಲ್ಲಿ ಹುದುಗಿ ಹೋಯಿತು. ಯಾವಾಗ ಸುಶೀಲಚಿಕ್ಕಿ ತನ್ನ ವಾಸಕ್ಕೆ ಅಟ್ಟವನ್ನು ಆಯ್ಕೆ ಮಾಡಿದಳೋ ಆಗ ಹಳೆ ಸಾಮಾನುಗಳ ಪೈಕಿ ಕೆಲವನ್ನು ಸ್ಥಳಾಂತರಿಸುವಾಗ ಹಾರ್ಮೋನಿಯಂ ಅಜ್ಜಮ್ಮನ ಮಂಚದ ಅಡಿಗೆ ಪ್ರತಿಷ್ಟಿತವಾಗಿತ್ತು. ಅದು ಹೊರ ಬರಲು ಮಕ್ಕಳ ಹುಗ್ಗಾಟ ಒಂದು ನೆಪ.

‘ಪಾಪ ಅನ್ಸುತ್ತು ನಿನ್ನ ಕಮಲತ್ತೆಯನ್ನು ಕಾಂಬಾಗ ಗೌರಿ, ನೀವಿನ್ನು ಅವಳಿಗೆ ಕೇಳುವ ಹಾಂಗೆ ಬಾರ್ಸಬೇಡಿ’ ಹೇಳಿದ ಆಯಿಗೆ ಮಾವ ಹೇಳಿಕೊಟ್ಟರೆ ಗೌರಿಯೂ ಹಾರ್ಮೋನಿಯಂ ಬಾರಿಸಬಲ್ಲಳೆಂದು ಖಚಿತವಾಗಿತ್ತು. ಆದರೆ ಅವರೂ ಕಲಿಸುವ ಉಮೇದು ತೋರಿಸಲಿಲ್ಲ. ಸ್ವರ ಅಪಸ್ವರವಾಗಿ ಬಾರಿಸುವಾಗ ದಿಟವಾಗಿಯೂ ಮೋತಿ ವಿಕಾರ ಸ್ವರದಲ್ಲಿ ಕೂಗಿಕೊಳ್ಳುತ್ತದೆ. ಕಮಲತ್ತೆಯದೂ ಬೊಬ್ಬೆ.

ಇರಲಿ, ಅವಳು ಮನೆಯಿಂದ ಹೊರ ಹೋದ ಸಂದರ್ಭದಲ್ಲಿ ಗೌರಿ ಸುಮ್ಮನಿರುವವಳಲ್ಲ. ಹಾರ್ಮೋನಿಯಂ ಮುಂದಿಟ್ಟುಕೊಳ್ಳುತ್ತಾಳೆ. ಆ ಹೊತ್ತಿಗೆ ನಾಣಿಗೂ ಐಲು ತಲೆಗೇರಿ ಯಕ್ಷಗಾನದ ತಥ್ ಥೈ,ತಥ್‌ಥೈ ಕುಣಿತವೇ ಕುಣಿತ. ‘ನೋಡಕ್ಕ, ನನ್ನನ್ನು ಯಕ್ಷಗಾನದಲ್ಲಿ ರಾಮ ಪಾತ್ರದಾರಿ ಕುಣಿದಂತೆ ಕಾಂತಿಲ್ಲೆಯಾ? ದೊಡ್ಡ ಸ್ವರದಲ್ಲಿ ನೀ ಬಾರ್ಸು. ನಾ ರಾಕ್ಷಸನಂತೆ ಕುಣಿವೆ’ ಎನ್ನುವ. ಅವರಿಬ್ಬರನ್ನು ಕಂಡು ಆಯಿ ಅಡಿಗೆ ಮರೆತು ಮನಃಪೂರ್ವಕ ನಗುತ್ತಾಳೆ. ಅಜ್ಜಮ್ಮ ಕವಳ ಹಾಕಿಕೊಳ್ಳುತ್ತ ಆನಂದಿಸುತ್ತಾಳೆ.

ಈಗೀಗ ಸಂಜೆ ಭಜನೆಯಲ್ಲಿ ಹಾಡುವ ‘ಭಾಗ್ಯದ ಲಕ್ಷ್ಮಿ ಬಾರಮ್ಮಾ, ನಮ್ಮಮ್ಮಾ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮಾ’ ‘ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ ತಾರೆ ಬಿಂದಿಗೆಯಾ’ ಪದಗಳನ್ನು ಗೌರಿ ಹಾಡುತ್ತಾಳೆ. ಹಾರ್ಮೋನಿಯಂ? ಊಹೂಂ, ಹೊರಗೆ ಬಾಗಿಲು ಬಳಿಗೆ ಕುಳಿತ ಕಮಲತ್ತೆಗಾಗಿ ಅದು ಮೌನದ ಮುಸುಕಿನಲ್ಲಿ. ‘ಯಾರ ಮನಸ್ಸು ನಮ್ಮಿಂದ ಮುಳ್ಳು ಚುಚ್ಚಿದಂಗೆ ನೋಯೂಕಾಗ ಗೌರಿ. ಇನ್ನೊಬ್ಬರ ಇಚ್ಚೆ ಅರಿತು ನಡೆವಲೆ ಕಲ್ತರೆ ನಮಗೇ ಒಳ್ಳೇದು, ನೆನಪಿಟ್ಟುಕಾ’ ಸಮಜಾಯಿಸಿ ಬುದ್ಧಿ ಹೇಳುತ್ತಿದ್ದಳು ಆಯಿ.

| ಇನ್ನು ನಾಳೆಗೆ |

‍ಲೇಖಕರು Admin

July 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

 1. ಲಲಿತ ಎ.ಪಿ.

  ಗೌರಿ, ನಾಣಿ, ಅವರಿಬ್ಬರ ಮೋತಿ… ಚೆನ್ನಾಗಿದೆ ಜೋಡಿಗಳು!

  ” ಮನಸ್ಸು ನಮ್ಮಿಂದ ಮುಳ್ಳು ಚುಚ್ಚಿದಂಗೆ ನೋಯೂಕಾಗ ಗೌರಿ. ಇನ್ನೊಬ್ಬರ ಇಚ್ಚೆ ಅರಿತು ನಡೆವಲೆ ಕಲ್ತರೆ ನಮಗೇ ಒಳ್ಳೇದು, ನೆನಪಿಟ್ಟುಕಾ” ಸಮಜಾಯಿಸಿ ಬುದ್ಧಿ ಹೇಳುತ್ತಿದ್ದಳು ಆಯಿ.
  ಎಂಥಾ ಚಂದದ ಅನುಕರಣೀಯ ಬುದ್ಧಿವಾದ!

  ಪ್ರತಿ ಸಂಚಿಕೆಯಲ್ಲಿ ಬಹು ಸಹಜವಾಗಿ ಸಂಭಾಷಣೆಯ ರೂಪದಲ್ಲಿ ಬರುವ ನೀತಿ ಪಾಠ, ಜೀವನ ಧರ್ಮ ಮನ ಸೆಳೆಯುತ್ತದೆ.

  ಪ್ರತಿಕ್ರಿಯೆ
  • Theresa Madtha

   ಇವತ್ತು, ಹೊಳೆಬಾಗಿನವರೆಲ್ಲರೂ ಬಹಳ ಗಂಭೀರ!! ನಾನೂ ಕೂಡಾ !

   ಕಮಲತ್ತೆಯ ವಿಷಯ ಕೇಳಿ ಬೇಜಾರು!

   “ಇನ್ನೊಬ್ಬರ ಇಚ್ಚೆ ಅರಿತು ನಡೆವಲೆ ಕಲ್ತರೆ ನಮಗೇ ಒಳ್ಳೇದುು” – ಆಯಿಯ ಸಮಾಜಾಯಿಷಿ, ನನಗೂ ತಲುಪಿತು.

   ಪ್ರತಿಕ್ರಿಯೆ
  • ಜಯಲಕ್ಷ್ಮಿ

   ಎಂಥಾ ಒಳ್ಳೆಯ ಆಯಿ.. ಆಯಿಯ ಬುದ್ಧಿವಾದ ಕೇಳಿ ಕಣ್ಣು ಮಂಜಾಯಿತು..ಹಾಗೇ ಕಮಲಿ ಅತ್ತೆಯ ಕರುಣಕಥೆ ಬಹಳ ಬೇಸರವೆನಿಸಿತು.

   ಪ್ರತಿಕ್ರಿಯೆ
 2. Theresa Madtha

  ಎ ಪಿ ಮಾಲತಿಯವರ “ಹೊಳೆಬಾಗಿಲು”, ಇವತ್ತು ಗಂಭೀರ ಎನಿಸಿತು. ಕಮಲತ್ತೆಯ ಕಥೆ ಕೇಳಿ ಬೇಜಾರವಾಯ್ತು.
  “ಇನ್ನೊಬ್ಬರ ಇಚ್ಚೆ ಅರಿತು ನಡೆವಲೆ ಕಲ್ತರೆ ನಮಗೇ ಒಳ್ಳೇದು” – ಆಯಿಯ ಈ ಬುದ್ಧಿವಾದ ನನಗೂ ತಲುಪಿತು.

  ಎ ಪಿ ಮಾಲತಿಯವರೇ… ನಿಮಗೆ ತುಂಬು ಹೃದಯದ ವಂದನೆಗಳು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: