ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ದಡವೇ ಕಾಣದ ಹೊಳೆಯ ಆಚೆ…

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಿಕ್ಕಿದೆ.

ಕರಾವಳಿ ಲೇಖಕಿ ವಾಚಕಿಯರ ಸ೦ಘದ ಪ್ರಥಮ ಲೇಖಕಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಪುತ್ತೂರು ಹನ್ನೊ೦ದನೇ ತಾಲೂಕು ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ೨೦೦೫ರಲ್ಲಿ. ದ.ಕ. ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಯಾಗಿದ್ದರು.

18

‘ಚಿಕ್ಕಿ, ಇನ್ನೊಂದು ಚೀಲ? ಆ ಟಿನ್ನಿನ ಟ್ರಂಕು? ಏನಿದೆ ಅದರಲ್ಲಿ?’ ಗೌರಿಗೆ ಆತುರ.
‘ನಿನ್ನ ಮುಂದೆ ಟಿನ್ನಿನ ಬೀಗ ತೆಗೆದರೆ ಆಗೇ ಹೋಯ್ತು. ನಾನಿಲ್ಲದಾಗ ಇದರ ಬೀಗ ತೆಗಿಬ್ಯಾಡ ಮಹರಾಯ್ತಿ. ವಿಶ್ವಾಸ ಇಡಲಾ? ಮತ್ತೆ ಆ ಚೀಲ ಹೊಲಿಗೆಯದು ನೀನು ನೋಡಿಯಾಗಿದೆ. ಕಳ್ಳಿ! ನಂಗೆ ಗೊತ್ತು’
ಗೌರಿ ಕಳ್ಳಿ! ಸಿಕ್ಕಿಬಿದ್ದಳು ಸುಶೀಲ ಚಿಕ್ಕಿಯ ಎದುರಲ್ಲೇ! ಕೈ ಜೋಡಿಸಿದಳು, ‘ತಪ್ಪಾಯ್ತು ಚಿಕ್ಕಿ. ಎಂತ ಇದ್ದು ನೋಡ್ದೆ. ಕದಿವ ಬುದ್ಧಿ ನನ್ನದಲ್ಲ. ಬೇಕಿದ್ದರೆ ಆಯಿ, ನಾಣಿಯನ್ನು ಕೇಳು.’

‘ಖುಷಾಲು ಮಾಡ್ದೆ. ಬ್ಯಾಸರ ಆಯ್ತಾ? ನೀ ಯಾವ ಚೀಲಕ್ಕೆ ಕೈ ಹಾಕಿದರೂ ಮಹಾ ವಸ್ತು ಏನಿದ್ದು? ಕಂಡ್ಯಲ್ಲ. ನಿಂಗೆ ಕಲಿವ ಮನಸ್ಸಿದ್ದರೆ’
‘ಇದ್ದು ಚಿಕ್ಕಿ, ನಿಂಗೆ ಎಂತೆಲ್ಲ ಗೊತ್ತು ಎಲ್ಲ ನಂಗೂ ಹೇಳಿಕೊಡೆಕ್ಕು. ನಂಗೆ ಎಲ್ಲ ಕಲಿಯಕ್ಕು ಹೊಲಿಗೆ, ಕಸೂತಿ, ಚಿತ್ರ ಬಿಡಿಸಲು, ಇಂಗ್ಲೀಷ ಬರೆಯಲು ಎಲ್ಲಾ ಅಂದ್ರೆ ಎಲ್ಲಾನೂ’
‘ಹೇಳಿಕೊಡಲು ಕಷ್ಟ ಇಲ್ಲೆ. ನೀ ಜಾಣೆ. ನನ್ನ ಒಟ್ಟಿಗೆ ಇದ್ದು ಅಭ್ಯಾಸ ಮಾಡಿದ್ರೆ ಸೈ’ ಸುಶೀಲಚಿಕ್ಕಿ ಹೇಳಿದ್ದು ನಿಜ, ಅಭ್ಯಾಸಕ್ಕೆಂದು ಒಂದೆರಡು ದಿನ ಅಟ್ಟದಲ್ಲಿ ಕಸೂತಿ, ಹೊಲಿಗೆ, ಅದೂ ಇದು ಕಾಲ ಕಳೆದ ಗೌರಿಗೆ ಏಕೋ ಹತ್ತು ಬಾರಿ ತುಂಬ ಆಕಳಿಕೆ. ಆ ನಾಜೂಕು ಹೊಲಿಗೆ, ಚಿತ್ತಾರದ ಕೆಲಸದಲ್ಲಿ ಕೈ ಓಡುವುದಿಲ್ಲ. ಚಿತ್ತ ಇನ್ನೆತ್ತಲೋ.

ಆದಿನವೂ ಧಾರಾಕಾರ ಮಳೆ. ಅದು ನಿಲ್ಲುವ ಹೊತ್ತಿಗೆ ನಾಣಿ ಬಾಲ ಸುಟ್ಟ ಬೆಕ್ಕಿನಂತೆ, ಕೂತು ಕೂತು ಕಾಲು ಕೆರೆಯಿತು ಎನ್ನುವಂತೆ, ‘ಅಕ್ಕ, ನಡಿಯೇ, ಅಂಗಳದಲ್ಲಿ ಹರಿವ ನೀರಿಗೆ ಕಾಗದದ ದೋಣಿ ಬಿಡೋಣ? ಆರು ದೋಣಿ ಮಾಡಾತು. ನಿಂಗೆ ಮೂರು, ನಂಗೆ ಮೂರು. ಯಾರ ದೋಣಿ ಜೋರಾಗಿ ಓಡ್ತು ಕಾಂಬ’ ಗೌರಿಗೂ ಅದೇ ಬೇಕಿತ್ತು. ಇಬ್ಬರೂ ಅಂಗಳಕ್ಕಿಳಿದು ಸ್ವಲ್ಪ ಹೊತ್ತು ನೀರಿನಲ್ಲಿ ದೋಣಿ ಬಿಟ್ಟು ಅದೂ ಬೇಸರವಾಗಿ ಮೈ ಮುರಿದರು. ನನ್ನದು ದೋಣಿ ಮುಂದೆ, ನಿನ್ನದು ಮಗುಚಿತು ಎಂದು ಹುಯ್ಲೆಬ್ಬಿಸಿ ಒಬ್ಬರಿಗೊಬ್ಬರು ಠೂ ಬಿಟ್ಟು ರಾಜಿಯಾಗಿ ಅಲ್ಲವೇ ಮತ್ತೆ? ಮಕ್ಕಳ ಜಗಳ ಒಂದು ನಿಮಿಷದ್ದು.

ಅಗೋಮಳೆ ಬಂದು ನಿಂತ ಮೇಲೆ ಬಿಸಿಲಿನ ಕೋಲು ಎಷ್ಟು ಚೆಂದಕ್ಕೆ ಬಿದ್ದಿದೆ. ತೋಟದೊಳಗೆ ಅದರಾಚೆ ಆಗತಾನೇ ಜೀವ ತಳೆಯುತ್ತಿದ್ದ ಹಸಿರು ಭತ್ತದ ಪೈರು ನಗುತ್ತಿವೆ. ಹಸಿರು ಹಳದಿ ಕಂದು ಬಣ್ಣದ ಚಿಟ್ಟೆಗಳಿಗೆ ಏನು ಅವಸರವೋ ಕಣ್ತಪ್ಪಿಸುತ್ತ ಹಾರುತ್ತಿವೆ. ಎಲ್ಲ ಕಡೆಗೂ ಗಿಜಿಗಿಜಿ ಕೆಸರು ಮಣ್ಣು. ಆ ಪುಟ್ಟ ಪಾದಗಳಿಗೆ ಅದು ಕೊಳಕು ಅಲ್ಲ, ಹೇಸಿಗೆಯೂ ಅಲ್ಲ. ಮಣ್ಣಲ್ಲಿ ಕುಣಿವ ಆಸೆ. ಮೋತಿ ಜೊತೆ ರೆಂಬೆ ಕೊಂಬೆ, ನೆಲದ ಮೇಲೆ ಅರಳಿದ ಬಿಳಿಮತ್ತು ನಸು ಹಳದಿಯ ಅಣಬೆಗಳು, ನೋಡುತ್ತ ಕಾಡು ಹೂವಿನ ಸುಗಂಧ ಹೀರುತ್ತ ಗೌರಿ, ನಾಣಿ ಮುಕ್ತವಾಗಿ ನಕ್ಕರು.

ಈ ಬಾಲರ ನಗುವಿಗೆ ಸಾಕ್ಷಿ ಎನ್ನುವಂತೆ ಸೂರ್ಯ ಇನ್ನೂ ಮೇಲೇರಿದ್ದ. ಸೃಷ್ಟಿಕರ್ತ ಈಗಲೇ ಪ್ರಕೃತಿಯ ಸಮಸ್ತ ಸೊಬಗನ್ನು ತೆರೆದಿಟ್ಟಾಗ ತಾಯಿ ಜೋಗುಳದಂತೆ ಸಂಗೀತ ಆಲಾಪನೆ ಮಾಡುತ್ತದೆ. ಕೃತಾರ್ಥಳಾದ ವನದೇವತೆಯ ಸ್ವರ್ಣ ಮುಕುಟವೂ ಹೆಮ್ಮರವನ್ನು ತಬ್ಬಿದ ಲತೆಯಿಂದ ಒಡಗೂಡಿ ಪಾದದ ಕೆಳಗೆ ಮುಟ್ಟಿದರೆ ಮುನಿಯುವ ನಾಚಿಗೆ ಮುಳ್ಳು ಇನ್ನಿತರ ಸಸಿಗಳಿಂದ, ಅವುಗಳ ಸಣ್ಣ ಸಣ್ಣ ಹೂವುಗಳಿಂದ ಅಲಂಕೃತಗೊಂಡಿವೆ. ಜರ್ಜರಿತವಾದ ಒಣರೆಂಬೆ ಕೊಂಬೆಗಳು, ಎಲೆ ಬಳ್ಳಿಗಳು ಗಾಳಿಯ ಸಮರದಲ್ಲಿ ನೆಲಕ್ಕುರುಳಿ ಎಳೆ ಚಿಗುರು ಹೂವುಗಳಿಗೆ ಹೊಸ ಜೀವ ತುಂಬುತ್ತಿದೆ. ಮಕ್ಕಳ ಕೋಮಲ ಹೃದಯದಲ್ಲಿ ಇದೇನಿದು? ಎಲ್ಲೆಲ್ಲೂ ಆನಂದಮಯ ಕೋಲಾಹಲ.

ಇಬ್ಬರೂ ವಾಡಿಕೆಯಂತೆ ಹೊಳೆದಡಕ್ಕೆ ಬಂದರು. ಹೊಳೆ ಶಾಂತವಾಗಿ ಹರಿಯುತ್ತಿತ್ತು. ನೀರು ದಡದಿಂದ ಕೆಳಗಿಳಿದು ಸುಮ್ಮನೆ ಹರಿದು ಹೋಗುತ್ತಿತ್ತು. ದಡಕ್ಕೆ ಒರಗಿನಿಂತಿತ್ತು ಸಣ್ಣ ಎರಡು ದೋಣಿಗಳು. ಮೀನು ಹಿಡಿಯಲು ಒಯ್ಯುವಂತವು. ಇನ್ನೆರಡು ಬಿದುರಿನ ತೆಪ್ಪಗಳು. ಆರಡಿ ಉದ್ದದ ನಾಲ್ಕು ಗಟ್ಟಿ ಬಿದುರನ್ನು ಜೋಡಿಸಿದ ಆ ತೆಪ್ಪಗಳನ್ನು ನಡೆಸುವ ಅಗಲ ಕೈ ಹರಗೋಲು ಇತ್ತು. ಒಂದು ತೆಪ್ಪ ಪರಮನದು. ಇನ್ನೊಂದು ಯಾರದೋ ತಿಳಿಯದು. ಪರಮ ಮೀನು ಹಿಡಿಯಲು ಹೊಳೆಗಿಳಿಯುವುದು ಅದರಲ್ಲೇ. ಆಗಾಗ ಗ್ರಾಮದ ಜನರಿಗೆ ಅಗತ್ಯವಿದ್ದರೆ ಅದೇ ತೆಪ್ಪದಲ್ಲಿ ಕರೆದೊಯ್ಯುವವ.

‘ನಾಣಿ, ನಾವಿಬ್ಬರೆ ಪರಮನ ತೆಪ್ಪ ಕಟ್ಟಿ ಹೊಳೆಯಲ್ಲಿ ಒಂದು ಸುತ್ತು ಹಾಕಿದರೆ ಮಜ ಇತ್ತಲ್ವಾ?’ ಗೌರಿ ರೆಕ್ಕೆಯಂತೆ ಎರಡೂ ಕೈ ಚಾಚಿ ಸುತ್ತು ಸುತ್ತು ತಿರುಗಿದಳು.
‘ಇಬ್ಬರೇನಾ? ಮುಳುಗಿದರೆ?’
‘ಹ್ಯಾಗೆ ಮುಳಗ್ತೇವೆ? ಬಿದಿರಿನ ತೆಪ್ಪ ಮುಳಗ್ತಿಲ್ಲೆ. ನಾವೇ ಹುಟ್ಟು ಹಾಕೂದು. ಹೊಳೆದಂಡೆ ಬದೀಗೇ ಹ್ವಾದರೆ ತೆಪ್ಪ ಮುಳುಗಿದ್ರೂ ನಡೆದು ಬಪ್ಪಲಕ್ಕು’
‘ಅಪ್ಪಯ್ಯ ಆಯಿ ಬೆನ್ನು ಮುರಿವಂಗೆ ಹೊಡಿತ್ರು. ನಾನೇ ಹೇಳ್ತೆ ಕಾಣು. ಮೊನ್ನೆ ಬೇಸಿಗೆಯಲ್ಲಿ ನಾವಿಬ್ಬರೂ ತೆಪ್ಪದಲ್ಲಿ ಹೋಗಿ ಕುಂಡೆಗೆ ಬಾಸುಂಡೆ ಬಪ್ಪ ಹಾಂಗೆ ಪೆಟ್ಟು ಸಿಕ್ಕಿದ್ದು, ಆಯಿ ನಮ್ಮಿಂದ ದೇವರ ಪ್ರಮಾಣ ಮಾಡ್ಸಿದ್ದುನೆನಪಿಲ್ಯಾ?’
ನೆನಪಿಲ್ಲದೆ ಏನು? ಮೊನ್ನೆ ಬೇಸಿಗೆಯಲ್ಲಿ ನೀರು ಕಡಿಮೆ ಹರಿಯುವ ಸಮಯದಲ್ಲೇ ಒಂದು ಮಧ್ಯಾಹ್ನ ಪರಮನ ಮಗ ಚಾನು ಜೊತೆ ತೆಪ್ಪದಲ್ಲಿ ಇಬ್ಬರೇ ಹತ್ತಿದ್ದು, ಆ ಮೂವರೂ ಹಾಯಿಗೋಲಿನ ಸಹಾಯದಿಂದ ತೆಪ್ಪ ನಡೆಸಿದ್ದು ನೆನಪಿದೆ. ಚಾನು ಬುದ್ಧಿವಂತ. ತೆಪ್ಪ ನಡೆಸುವ ಚುರುಕಿನ ಹುಡುಗ. ಗೌರಿ ನಾಣಿಯ ಕೈಗೆ ಒಂದೊಂದು ಹರಗೋಲು ಕೊಟ್ಟು ತೆಪ್ಪದ ಒಂದು ಬದಿಗೆ ಅವಳನ್ನು, ಮಧ್ಯ ನಾಣಿಯನ್ನು ಕುಳ್ಳಿರಿಸಿದ್ದ. ಅವರಿಂದ ಮೊದಲೇ ಚಂಗನೆ ನೆಗೆದು ತೆಪ್ಪ ಹತ್ತಿದ ಮೋತಿ ನಾಣಿಯ ಬಳಿ ಕುಳಿತಾಗಿತ್ತು.

ನಾಯಿ ಬುದ್ಧಿ ಗೊತ್ತಲ್ಲ. ಹೊಳೆ ನಡುವೆ ಕುಂಯಿಗುಟ್ಟು ತೆಪ್ಪದಲ್ಲಿ ಹಾರಿ ಜಿಗಿದರೆ ತೆಪ್ಪ ಮುಳುಗೀತೆಂದು ಚಾನು ಅದನ್ನು ನೀರಿಗೆ ದೂಡಲು ಹೇಳಿದಾಗ ನಾಣಿ ‘ನನ್ನ ಮಾತು ಕೇಳ್ತು. ಪಾಪದ್ದು’ ಎದೆಗವಚಿಕೊಂಡಿದ್ದ. ಚಾನು ಕಲ್ಲಿನ ಗೂಟದಲ್ಲಿ ಕಟ್ಟಿದ ಹಗ್ಗ ಬಿಡಿಸಿ ತೆಪ್ಪವನ್ನು ನೀರಿಗೆ ದೂಡಿ ತಾನು ಹಾರಿ ಅದರ ಮೇಲೇರಿ ಗೌರಿಗೆ ಎದುರಾಗಿ ಇನ್ನೊಂದು ತುದಿಗೆ ಕುಳಿತಿದ್ದ.ತೆಪ್ಪ ನಿಧಾನವಾಗಿ ಚಲಿಸಿತ್ತು ಮುಂದಕ್ಕೆ. ‘ಸಣ್ಣ ಒಡೆಯಾ, ಚೂರೂ ನೀರಿಗೆ ಹಣಕಿ ನೋಡೂಕಾಗ, ಮೈ ಕುಣಿಸುಕಾಗ. ನಾಯಿನೂ ಗಟ್ಟಿ ಹಿಡ್ಕಳಿ. ಸಣ್ಣ ಒಡ್ತಿ, ನೀವೂ ಹಾಂಗೆ, ನೀರಿನ ವಿರುದ್ಧ ದಿಕ್ಕಿಗೆ ಹರಗೋಲಿಂದ ಹುಟ್ಟು ಹಾಕೆಕ್ಕು’ ಎಂದವನು ಅದನ್ನು ಹೇಗೆ ಆಚೀಚೆ ತಿರುಗಿಸಬೇಕು ಹೇಳಿ ಕೊಡುತ್ತ ತೆಪ್ಪವನ್ನು ದಂಡೆಯ ಬದಿಯಲ್ಲೇ ನಡೆಸುತ್ತ ಆಮೇಲೆ ನೀರು ಆಳವಾದ ಕಡೆ ಮುನ್ನಡೆಸಿದ. ಗೌರಿ ಹುಟ್ಟು ಹಾಕಿದಳು.

ಎಷ್ಟು ಸುಲಭ! ಗೌರಿ ನಾಣಿಗೆ ಈಜು ತಿಳಿಯದು. ಆದರೆ ಈ ದಡದ ಉದ್ದಕ್ಕೂ ನೀರು ಕಡಿಮೆಯೇ. ತೆಪ್ಪ ಹಾಗೆಲ್ಲ ಮಗುಚಿಕೊಳ್ಳುವುದಿಲ್ಲ. ಹರಗೋಲು ಸರಿಯಾಗಿ ನೀರಿನಲ್ಲಿ ಹಿಂದೆ ತಳ್ಳಬೇಕು. ಆಗ ತೆಪ್ಪ ಮುಂದಕ್ಕೆ ಚಲಿಸುತ್ತದೆ. ನೋಡಿ ಗೊತ್ತಿದೆ. ತಾವೇತೆಪ್ಪ ನಡೆಸುವುದು ಇದೇ ಮೊದಲು. ಚಾನು ಎಷ್ಟು ಧೈರ್ಯದ ಹುಡುಗ. ಗೌರಿಗಿಂತ ಎರಡು ಮೂರು ವರ್ಷಕ್ಕೆ ದೊಡ್ಡವನಾದರೂ ತೆಪ್ಪ ನಡೆಸುವುದರಲ್ಲಿ ಭಲೇ ಹುಷಾರು.

ಎಷ್ಟು ಆಳ ನೀರಿನಲ್ಲೂ ಈಜಬಲ್ಲ. ಅವನ ಧೈರ್ಯ ಅವಳಲ್ಲೂ ತುಂಬಿತು. ಅವಳ ಧೈರ್ಯ ನಾಣಿಗೂ ಹುರುಪು ತಂದಿತ್ತು. ಅಲ್ಲವೇ ಮತ್ತೆ? ಹುಚ್ಚು ಧೈರ್ಯ ಅಂದರೆ ಇದೇ. ಅಕ್ಕ ಜೊತೆಗಿದ್ದರೆ ಪಾತಾಳದ ಆಳದ ನೀರಿಗೂ ಅವ ಅಂಜಲಾರ. ತೆಪ್ಪ ಮುಂದಕ್ಕೆ ಹೋದಂತೆ ಬಾನಾಡಿಯಂತೆ ಮಧ್ಯಾಹ್ನದ ಬಿಸಿಲಿನಲ್ಲಿ ಇಬ್ಬರ ಮನಸ್ಸು ಕುಣಿಯಿತು. ಅದೋ ದೂರದಲ್ಲಿ, ದಡವೇ ಕಾಣದ ಹೊಳೆಯ ಆಚೆ ನೀಲಸಾಗರದ ಅಂಚಿನುದ್ದಕ್ಕೂ ಹೋಗಬೇಕು ಹಾಗೇ, ಹೋಗುತ್ತಲೇ ಇರಬೇಕು. ವಿಶಾಲವಾದ ಸಮುದ್ರದ ಆಚೆ ಏನಿದೆ? ಚಿಕ್ಕಿ ಸಮುದ್ರದ ಕಥೆ ಹೇಳುವಾಗ ಬೇರೆ ದೇಶಗಳಿಗೆ ಹೋಗಲು ದೊಡ್ಡ ಹಡಗುಗಳು ಇವೆಯೆಂದು, ಸಣ್ಣ ದೋಣಿಯ ಬದಲಿಗೆ ದೊಡ್ಡ ಹಡಗಿನಲ್ಲಿ ಹೋಗಬೇಕೆಂದೂ ಭೂಪಟದಲ್ಲಿ ಅರಬ್ಬಿ ಸಮುದ್ರ, ಅದರಾಚೆ ಕಾಣುವ ಬೇರೆ ದೇಶಗಳನ್ನು ತೋರಿಸುತ್ತಿದ್ದಳು.

ಏಳು ಸಮುದ್ರಗಳ ದಾಟಿ ಹೋಗುವ ರಾಜಕುಮಾರನ ಶೌರ್ಯದ ಕಥೆ ಹೇಳುತ್ತಿದ್ದಳು. ತಾವು ದೊಡ್ಡವರಾದ ಮೇಲೆ ಹೀಗೆ ನೀರಿನಲ್ಲಿ, ಸಮುದ್ರದಲ್ಲಿ ಜಗತ್ತಿನ ಎಲ್ಲ ಕಡೆಗೂ ತಿರುಗಾಡಬೇಕು. ನಾನು ನಾಣಿ ಇಬ್ಬರೇ! ಕೈ ಕೈ ಹಿಡಿದು ಅಲೆಯಬೇಕು. ಆ ಕಲ್ಪನೆಯಲ್ಲಿ ಇಬ್ಬರೂ ಹಾಡಿದರು, ಕೇಕೆ ಹಾಕಿದರು. ನೀರಿನ ಹನಿಗಳು ತುಷಾರದಂತೆ ಹಾರುತ್ತಿದ್ದವು ಮೈಮೇಲೆ. ಏರುವ ಬಿಸಿಲಿನ ಮೋಡಿಯಲ್ಲಿ ನೀರ ಅಲೆಗಳ ಮೇಲೆ ಹರಡಿದ ಕಾಂತಿಯಲ್ಲಿ ತೆಪ್ಪದ ಆಚೆ ಈಚೆ ಧಾವಿಸುವ ಸಣ್ಣ ದೊಡ್ಡಮೀನುಗಳೂ ನುಲಿಯುತ್ತಿದ್ದವು.

| ಇನ್ನು ನಾಳೆಗೆ |

‍ಲೇಖಕರು Admin

July 26, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: