ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಅಮ್ಮಮ್ಮನ ಹಸ್ತದಲ್ಲಿಯ ಪ್ರೀತಿಯ ಮಾಯಾದಂಡವೋ!

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಿಕ್ಕಿದೆ.

ಕರಾವಳಿ ಲೇಖಕಿ ವಾಚಕಿಯರ ಸ೦ಘದ ಪ್ರಥಮ ಲೇಖಕಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಪುತ್ತೂರು ಹನ್ನೊ೦ದನೇ ತಾಲೂಕು ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ೨೦೦೫ರಲ್ಲಿ. ದ.ಕ. ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಯಾಗಿದ್ದರು.

13

ಈ ಚೈತ್ರ ಮಾಸದಲ್ಲಿ ಚಕ್ರಿ ಮನೆಯಲ್ಲಿ ಪೂಜೆಗೆ ತಾವಿಬ್ಬರೂ ಆಯಿಯೂ ಹೋದಾಗ ರಾತ್ರೆ ಎಂದಿನಂತೆ ಬಾಣಂತಿ ಕೋಣೆಯ ಬದಿಕೋಣೆಯಲ್ಲಿ ಮಲಗಿದ ಸಮಯ. ಅಮ್ಮಮ್ಮ ಮೆತ್ತಗೆ ಆಯಿಯನ್ನು ಕೇಳಿದ್ದಳು, ‘ಶರಾವತಿ, ನಿನಗ್ಯಾಕೆ ಎರಡೇ ಮಕ್ಕಳು? ನಾಣಿ ನಂತರ ಗರ್ಭ ಕಟ್ಟಲೇ ಇಲ್ಲವೇ?’

ಇನ್ನೂ ಎಚ್ಚರದಲ್ಲಿದ್ದ ಗೌರಿಯ ಕಿವಿ ನಿಮಿರಿತು. ಆಯಿಯ ಕಿಸಕ್ಕನೆ ನಗು. ‘ಗೊತ್ತಿಲ್ಲ ಅಮ್ಮಾ’
‘ನನಗೆ ಏಳು ಮಕ್ಕಳು. ಎರಡು ಗರ್ಭ ಹೋಗಿ ಉಳಿದವು ಐದು. ಮತ್ತೆ ಬಸಿರು ಬಾರದಂತೆ ನಿನ್ನ ಅಪ್ಪನನ್ನು ನನ್ನ ಮಗ್ಗಲಿಗೆ ಬಾರದಂತೆ ದೂರ ಇಟ್ಟಿದ್ದೆ. ಅದಕ್ಕೇ ಕೇಳ್ತೆ, ನಿಮ್ಮಿಬ್ಬರಲ್ಲಿ ಎಂತಾ ಕಥೆ? ದೂರ ಇದ್ರಾ? ಜಗಳವಾ?’
‘ಏನೂ ಇಲ್ಲೆ. ಅವರಿಗೆ ಹೆಚ್ಚು ಮಕ್ಕಳು ಬ್ಯಾಡವಂತೆ. ದೊಡ್ಡ ಸಂಸಾರ ಕಂಡು ಸಾಕಾಗಿದೆ ಅಂತಿದ್ರು.’
‘ಹಾಂಗಾರೆ ಇಬ್ಬರದೂ ಸನ್ಯಾಸಿ ಸಂಸಾರವಾ? ಒಟ್ಟಿಗೆ ಅಪ್ಪಿಕೊಂಡು ಮಲಗತಿಲ್ಯಾ?’
‘ಹೋಗಮ್ಮಾ, ಎಂತಾದ್ರೂ ಕೇಳ್ತೇ ನಾಚ್ಕೆ! ನಮ್ಮಿಬ್ಬರಲ್ಲಿ ಜಗಳ, ದೂರ ಸರಿದು ಮನಿಕಂಬದ್ದು (ಮಲಗುವುದು) ಇಲ್ಲೆ. ಹತ್ರಾನೇ ಇದ್ದೋ. ಏನೋ ಆಗ್ಲಿಲ್ಲೆ.’

ಹರ‍್ರೇ! ಹಾರಿ ಬೀಳುವ ಖುಷಿ! ಈ ಮೊದಲೇ ಗೊಂಬೆ ಮದುವೆ ಆಟದಲ್ಲಿ ನಾಣಿಯನ್ನು ಕೇಳಿದ್ದಳು, ‘ತಮ್ಮ, ಮಕ್ಕಳು ಹೇಗೆ ಆಗ್ತಾವೆ?’ ಅವನಿಗೇನು ಗೊತ್ತು? ಅವನೂ ಸಣ್ಣವನೇ. ಇವತ್ತು ಆಯಿ, ಅಮ್ಮಮ್ಮನ ಮಾತನ್ನು ಉಸಿರುಗಟ್ಟಿ ಕೇಳಿ ಬಹುವಾದ ಆಶ್ಚರ್ಯದಲ್ಲಿ ಹೊಸತನ್ನು ಕಂಡಂತೆ, ಹೆಣ್ಣು ಗಂಡಿನ ಪ್ರಕ್ರಿಯೆಯ ಒಗಟು ಬಿಡಿಸಿದಂತೆ ತನ್ನದೆ ಶರಾ ಬರೆದಿದ್ದಾಳೆ, ಅಪ್ಪ ಅಮ್ಮ ಒಟ್ಟಿಗೆ ಮಲಗಿದರೆ ಮಕ್ಕಳಾಗುತ್ತವೆ. ಇಶ್ಶೀ, ಇದೂ ಗೊತ್ತಿಲ್ಲ ನನ್ನ ದಡ್ಡ ಮಂಡೆಗೆ. ತನ್ನ ಕಿವಿ ಕೇಳಿದ್ದನ್ನು ತಮ್ಮನ ಕಿವಿಗೆ ಊದಿದ್ದಳು. ಮತ್ತೆ ಸುಮ್ಮನಿರದೆ ಆವತ್ತು ಚಕ್ರಿ ಮನೆಯಿಂದ ಹಿಂದಿರುಗಿ ಹೊಳೆಬಾಗಿಲಿಗೆ ದೋಣಿಯಲ್ಲಿ ಬರುವಾಗ ಗೌರಿ ಮಾತು ತೆಗೆದಿದ್ದಳು, ‘ಆಯಿ, ನಮಗೆ ಒಬ್ಬ ತಮ್ಮನೋ ತಂಗಿಯೋ ಬೇಕಲ್ಲದ? ಯಾವಾಗ ಬತ್ತು?’

ಆಯಿ ಕಣ್ಣರಳಿಸಿ ಹೊಳೆನೀರಿನ ತೆರೆಯಲ್ಲಿ ಕೈಯ್ಯಾಡಿಸುತ್ತ, ‘ಎಂತದೇ ನಿನ್ನ ಪ್ರಶ್ನೆ? ಯಾವಾಗ ಬತ್ತು ಅನ್ನಲು ಅದೇನು ಆಕಾಶದಿಂದ ಉದುರುತ್ತಾ? ಹುಚ್ಚಿ, ಇಂತಹ ಪ್ರಶ್ನೆ ಕೇಳೂ ವಯಸ್ಸು ನಿಂದಲ್ಲ. ನಿನಗೆ ಮದಿ ಆದ್ಮೇಲೆ ತಿಳೀಗು ಎಲ್ಲಾ’

ತಾವು ಗೊಂಬೆ ಮದುವೆ ಮಾಡುವುದು, ಗೊಂಬೆ ಮಗುವನ್ನು ತೊಟ್ಟಿಲಲ್ಲಿಟ್ಟು ತೂಗುವುದು, ಅದರಾಚೆ ಒಂದಕ್ಕೊಂದು ಸಂಬಂಧ ಎಲ್ಲ ನಿಗೂಢ. ಹೇಳುವವರು ಯಾರೂ ಇಲ್ಲ, ಬಾಲಿಶ ಮನಸ್ಸು ಹಲವು ಎಳೆಗಳನ್ನು ಜೋಡಿಸುತ್ತದೆ ಯಾಕೋ? ಇದೇ ಕಾರಣಕ್ಕೇ ಆಯಿ ಹೇಳಿದ್ದು, ಗೌರಿ ತಲೆ ಮದುವೆ ಮಕ್ಕಳ ವಿಚಾರದಲ್ಲಿ ಚುರುಕು! ವ್ಯವಹಾರಸ್ಥೆ ಅಮ್ಮಮ್ಮ. ಮದುವೆಗೆ ಅವಸರ ಏನಿದೆ? ತಿಂದುಣ್ಣುವಷ್ಟು ಆಸ್ತಿಪಾಸ್ತಿ, ಸಂಪತ್ತು. ಹಿರಿಮಗನ ಜವಾಬ್ದಾರಿ. ಈ ನಡುವೆ ಮಗುವಿನ ಬಾಳು ಉರುಳು ಗುಂಡಾಗದಂತೆ ಎಚ್ಚರದಲ್ಲಿ, ‘ಸ್ವಲ್ಪ ವರ್ಷ ಕಳೆಯಲಿ ಶರಾವತಿ, ಅವಳನ್ನು ಶಾಲೆಗೆ ಕಳುಹಿಸು, ಚೆನ್ನಾಗಿ ಓದಲಿ. ನನ್ನ ಯೋಚ್ನೆ ಅಂದರೆ ಈ ವರ್ಷವೇ ಅವಳು ಶಾಲೆಗೆ ಹೋಗಲಿ. ಕಲಿಯಲಿ. ಮದ್ವೆ ಚಿಂತೆ ಮತ್ತಿನದು’

ಮೊಮ್ಮಕ್ಕಳು ಹುಗ್ಗಿಸಿ ಇಟ್ಟ ತನ್ನ ಚೀಲ ಕಾಣದೆ ಅಮ್ಮಮ್ಮ ಹಾಗೇ ಬೆಳಗಿನ ದೋಣಿಗೆ ಹೊರಟು ನಿಂತಾಗ ನಾಣಿ ಅಳುತ್ತಲೇ ಚೀಲ ತಂದುಕೊಟ್ಟ. ‘ಶ್ರಾವಣ ಮಾಸದಲ್ಲಿ ಮಳೆ ಕಮ್ಮಿ. ದೋಣಿಯವರೂ ಆಚೆ ಈಚೆ ಬತ್ತಾ ಇರ್ತೋ. ಗುರ್ತಿನ ದೋಣಿಯಲ್ಲಿ ನೀವಿಬ್ಬರೇ ಮಕ್ಕಳು ಬನ್ನಿ ಹೆದರಿಕೆ ಇಲ್ಲೆ. ತಿರಗಾ ಗಂಪತಿ ಮಾವ ನಿಮ್ಮನ್ನು ಇಲ್ಲಿ ತಂದು ಬಿಡ್ತಾ’ ತಲೆ ನೇವರಿಸಿದ ಅಮ್ಮಮ್ಮನ ಹಸ್ತದಲ್ಲಿ ಅದೇನು ಪ್ರೀತಿಯ ಮಾಯಾದಂಡವೋ! ಗೌರಿ, ನಾಣಿ ಹೊಳೆ ತನಕ ಅಮ್ಮಮ್ಮನ ಜೊತೆಗೂಡಿದರು.

ನಿನ್ನೆ ಬಂದ ದೋಣಿಯವ ಆಗಲೇ ಬಂದು ನಿಂತು ಕಾಯುತ್ತಿದ್ದ. ಅಮ್ಮಮ್ಮ ಮೊಮ್ಮಗಳನ್ನು ಅಪ್ಪಿಕೊಂಡಳು, ‘ಮದುವೆ ಬಗ್ಗೆ ತಲೆ ಕೆಡ್ಸಿಕೊಳ್ಳಬ್ಯಾಡ. ಶಾರದೆಯನ್ನು ಬಿಟ್ಟು ನಿಂಗೆ ಮದ್ವೆ ಮಾಡುವ ಮನಸ್ಸು ಯಾರಿಗೂ ಇಲ್ಲೆ. ನಿನ್ನ ಅಪ್ಪಯ್ಯನಿಗೆ ಹೇಳಿ ಸಾಸ್ತಾನದಿಂದ ಪೇಪರು, ಕಥೆ ಪುಸ್ತಕ, ಗಾಂಧೀಜಿಯ ಬರಹ ತರಿಸಿ ಓದು. ಆಯಿಗೂ ಹೇಳಿದ್ದೆ. ಸುಶೀಲಚಿಕ್ಕಿ ಘನಾ ತಿಳಕಂಡವಳು. ಇಂಗ್ಲೀಷು ಬತ್ತು ಅದಕ್ಕೆ. ನಿಂಗೆ ಕಲಸುಗು. ಮನೇಲೇ ಕಲಿರಿ ನೀನೂ, ನಾಣಿಯೂ. ಹೋಗಿ ಬರ್ಲಾ?’

ದೋಣಿ ಅಮ್ಮಮ್ಮನನ್ನು ಹತ್ತಿಸಿಕೊಂಡು ಎರಡು ಮುಗ್ಧ ಜೀವಿಗಳ ಕಣ್ಣೀರಲ್ಲಿ ವಿದಾಯ ಹೇಳುತ್ತ ಗಂಗೊಳ್ಳಿ ಹೊಳೆಯಲ್ಲಿ ಸಾಗಿ ತಿರುವಿನಲ್ಲಿ ಕಣ್ಮರೆ ಆಯಿತು.

ಆಷಾಡ ಮಾಸ ಬಂದರೆ ಸಾಕು, ಗಂಗಾವತರಣ ಎಲ್ಲ ಕಡೆಗೂ. ಮನೆಯಿಂದ ತಲೆ ಹೊರಗೆ ಹಾಕದಂತೆ ಇಪ್ಪತ್ನಾಕು ಗಂಟೆಯೂ ಜಡಿಮಳೆ. ಮಿಂಚು ಗುಡುಗಿನ ಅಬ್ಬರ. ಬೀಸು ಗಾಳಿಯ ಅವಾಂತರ, ಧರಾಶಾಹಿಯಾಗಿ ಬೀಳುವ ಮರ ಗಿಡಗಳು. ಕುಸಿಯುವ ಗುಡ್ಡ ಬರೆಗಳು, ಮನೆಗಳು. ಗಂಗೊಳ್ಳಿ ಹೊಳೆ ಉಕ್ಕಿ ಉಕ್ಕಿ ಬಂದಂತೆ ಎಲ್ಲೆಲ್ಲೂ ನೀರು ನೀರು. ಕೆಲವೊಮ್ಮೆ ಬಿಸಿಲಿನ ಛಾಯೆಯಿಲ್ಲದೆ ಕಪ್ಪಾಗಿ ಕಾಣುವ ಹೊಳೆಯ ಅಲೆಯಲ್ಲಿ ದೋಣಿಗಳ ಓಡಾಟವೂ ಕಡಿಮೆ. ಅಲ್ಲಲ್ಲಿ ಗದ್ದೆ ಹುಣಿಗಳಲ್ಲಿ ಹೊಳೆತೀರದಲ್ಲಿ ತುಂಬುವ ಕೆರೆ, ನಾಲೆಗಳಿಂದ ನೆಲ ನೀರು ಒಂದಾಗಿ ಏನೂ ಕಾಣದ ಸ್ಥಿತಿ.

ಎರಡು ವರ್ಷಗಳ ಹಿಂದೆ ಇಂತಹದೇ ಆಷಾಢ ಮಾಸದ ಒಂದು ಸಂಜೆ ಸುಶೀಲಚಿಕ್ಕಿ ಹೊಳೆಬಾಗಿಲು ಮನೆಗೆ ಬಂದಿದ್ದಳು ತೀರ ಅನಿರೀಕ್ಷಿತವಾಗಿ. ಉಡುಪಿಯ ಅನಂತಯ್ಯ ಕರೆದುಕೊಂಡು ಬಂದಿದ್ದ. ಮನೆ ಮಂದಿಗೆ ಸುಶೀಲಚಿಕ್ಕಿಯ ವಿವರ ಒದಗಿಸಿ ಅವಳಿಗೆ ಬೇರೆಡೆಗೆ ವಾಸದ ವ್ಯವಸ್ಥೆ ಆದಮೇಲೆ ಕರೆದೊಯ್ಯುವೆ ಎಂದು ಎಲ್ಲರನ್ನೂ ಒಪ್ಪಿಸಿ ಹೋಗಿದ್ದ.

ದಿಕ್ಕಿಲ್ಲದ ಮಕ್ಕಳುಮರಿ ಇಲ್ಲದ ಹೆಣ್ಣುಮಕ್ಕಳಿಗೆ ಈ ತರಹ ನೆರವು ನೀಡಿ ಅವರಿಗೆ ಭದ್ರತೆ ಒದಗಿಸುವ ವಿಶ್ವಾಸಾರ್ಹ ವ್ಯಕ್ತಿಗೆ ಇಲ್ಲ ಎನ್ನುವುದು ಹೇಗೆ? ಸಮಾಜಕಾರ್ಯದಲ್ಲಿ ಇಳಿದವರಿಗೆ ಇವೆಲ್ಲ ಮಾಮೂಲು. ಇವಳು ದಿಕ್ಕಿಲ್ಲದ ಮಕ್ಕಳುಮರಿ ಇಲ್ಲದ ಹೆಣ್ಣುಮಗಳು. ಐವತ್ತು ವರ್ಷವಾಗಿದೆ. ಆದರೆ ಗುರುತು ಪರಿಚಿತಳಲ್ಲ. ಬಂಧುವಲ್ಲ, ರಕ್ತ ಸಂಬಂಧಿಯಲ್ಲ. ಅನಂತಯ್ಯನ ಅಕ್ಕನ ಮಗಳ ಗಂಡನ ತಮ್ಮನ ಇನ್ನೂ ಹೀಗೆ ಎಲ್ಲೆಲ್ಲೋ ಎಳೆದ ದೂರದ ಬಾದರಾಯಣ ಸಂಬಂಧ. ಒಚಿಟಿ ಹೆಣ್ಣಿನ ಕಷ್ಟಕಾಲಕ್ಕೆ ಮರುಗಿ ಆಶ್ರಯ ಕೊಡಲು ಒಪ್ಪಿದ್ದರು. ದುಂಡು ಮುಖ, ಸಾತ್ವಿಕ ಕಳೆ, ಹಂಸದಂತೆ ಬಿಳಿಸೀರೆ, ಕಾಲಲ್ಲಿ ಹವಾಯ್ ತರಹದ ಚಪ್ಪಲಿ.

ಮನೆಯವರ ಗಮನ ಸೆಳೆಯುವ ಆಕರ್ಶಕ ನಿಲುವು. ನಾಣಿ, ಗೌರಿ ದಂಗು ಬಡಿದಂತೆ ಅಡಿಯಿಂದ ಮುಡಿ ತನಕ ಅವಳನ್ನು ನೋಡಿದ್ದೇ ನೋಡಿದ್ದು. ಈ ತನಕ ಇಂತಹ ಮೊಗದ ಹೆಂಗಸನ್ನು ಕಂಡದ್ದಿಲ್ಲ. ಕಂಡರೂ ದೇವಸ್ಥಾನಗಳಲ್ಲಿ, ಧರ್ಮಶಾಲೆಯಲ್ಲಿ, ಕೆಲವರ ಮನೆ ಅಂಗಳದ ಎದುರಲ್ಲಿ ಕೆಂಪು ಸೀರೆಯುಟ್ಟು ತಲೆಮೇಲೆ ಸೆರಗು ಹೊದ್ದವರು. ಅಷ್ಟಾಗಿ ಹೆಚ್ಚು ಗಮನ ಇಟ್ಟಿಲ್ಲ. ಇವಳೂ ಅವರಂತೆ! ನಾಣಿ ಅಕ್ಕನ ಕಿವಿಯಲ್ಲಿ ಪಿಸಿಗುಟ್ಟಿದ,
‘ಅಕ್ಕಾ, ನಮ್ಮ ಅಂಚೆ ಮಾಸ್ತರರ ಅಮ್ಮ ಇದ್ದಾರಲ್ಲ, ಧಡೂತಿ ಬೋಳುಮಂಡೆ? ಅವರ ಹಾಗೆ ಇವಳೂ ಪೂರಾ ಬೋಳು ಮಂಡೆ!’

‘ದೊಡ್ಡದಾಗಿ ಹೇಳಬೇಡ್ವೋ. ಎಷ್ಟು ಸಾಮಾನು ಇದೆ ಕಾಣು. ಎಲ್ಲಿಡ್ತಾರೆ? ಅಕಾ, ಅಟ್ಟದಲ್ಲಿ ಇಡ್ತಾ ಇದ್ದಾನೆ ಅಪ್ಪಯ್ಯ.’

ಹೀಗೆ ಬಂದವಳಿಗೆ ಕಮಲತ್ತೆ ಕೋಣೆಯಲ್ಲಿ ವ್ಯವಸ್ಥೆ ಮಾಡಿದ್ದರೂ ಅವಳು ಅಟ್ಟದ ಮೂಲೆ ಆರಿಸಿದ್ದಳು. ಏಕಾಂತ ಬಯಸುವ ಜೀವ. ಮಾತಿಗಿಂತ ಮೌನ ಜಾಸ್ತಿ. ಬೋಳು ಕೈ, ಕುಂಕುಮ ಇಲ್ಲದ ಹಣೆ, ಬಿಸಿಲಿಗೆ ಮಿಂಚುವ ಬೋಳು ಮಂಡೆ. ಬಿಳಿಸೀರೆ ಗೌರಿಗೆ ಈ ವೇಷದ ಅರ್ಥವಾದದ್ದು ಕೆಲ ಸಮಯದ ನಂತರವೆ. ಅಟ್ಟದ ಸಾಮಾನುಗಳ ಬದಿಗೆ ಒಂದು ಮಾಸಿದ ಫೋಟೋ. ‘ಇದ್ಯಾರದ್ದು?’ ಸುಶೀಲಚಿಕ್ಕಿ ಕಣ್ಣೀರು ತುಂಬಿದ್ದಳುಗೌರಿಯ ಪ್ರಶ್ನೆಗೆ. ಆಮೇಲೆ ಆಯಿಯೇ ಹೇಳಿದಳಲ್ಲ, ‘ಅದು ಅವಳ ಗಂಡನದು. ಮದುವೆಯಾಗಿ ಕೆಲವು ವರ್ಷ ಸಂಸಾರ ಮಾಡಿದ್ದಳಂತೆ. ಚೆನ್ನಾಗಿಯೇ ಇದ್ದರಂತೆ, ಪ್ಲೇಗ್ ಜ್ವರದಲ್ಲಿ ಗಂಡ ಹೋಗಿಬಿಟ್ನಂತೆ. ಪಾಪ’ ಮುಂದೆ ಆಯಿ ವಿವರ ಹೇಳುವುದಿಲ್ಲ. ವಿವರ ಬೇಕಿಲ್ಲ. ವೇಷ ಭೂಷಣದಿಂದ ಆಗಲೇ ಅರ್ಥವಾಗಿತ್ತು. ಪಾಪ ಎನಿಸುತ್ತದೆ. ಕಮಲತ್ತೆ ಹಾಗೆ ಇವಳೂ. ಆದರೆ ಬೋಳು ಮಂಡೆ ಯಾಕೆ? ಕಮಲತ್ತೆ ತರಹ ಕೂದಲು ಇಟ್ಟುಕೊಳ್ಳಬಾರದೆ? ಕೇಳಿಕೊಂಡಿದ್ದಳು ತನ್ನಲ್ಲೇ.

ಪ್ರತಿ ಮೂರುತಿಂಗಳಿಗೆ ಅವರ ಮನೆಗೆ ತಪ್ಪದೆ ಬರುತ್ತಿದ್ದ ಹಜಾಮ ಹಣುಮ. ಸುಮಾರು ಐವತ್ತು ಅರ್ವತ್ತು ಇದ್ದೀತು. ವರ್ಷದ ಲೆಕ್ಕ ಅವನಿಗಿಲ್ಲ. ಹೆಂಡತಿ ಮಕ್ಕಳು ಸಂಸಾರ ಇದೆ. ಹೊಳೆಬಾಗಿಲು ಮನೆಯ ಕಾಲು ಹಾದಿಯಲ್ಲಿ ಹೊಳೆಗುಂಟ ಒಂದು ಮೈಲು ನಡೆದರೆ ಅವನ ಗುಡಿಸಲು.

| ಇನ್ನು ನಾಳೆಗೆ |

‍ಲೇಖಕರು Admin

July 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

 1. Krishna Bhat

  ಕಾದಂಬರಿ ತುಂಬಾ ಚೆನ್ನಾಗಿದೆ ಅಕ್ಕ ಬರೆದದ್ದು ಹಳ್ಳಿಯ ಜೀವನ ಮಕ್ಕಳ ಕುತೂಹಲ ಸುತ್ತಲಿನ ಪರಿಸರ ಕಣ್ಣಿಗೆ ನಮಗೆ ಕಟ್ಟಿದ ಹಾಗೆ ಆಗುತ್ತದೆ ಆಶಾಡ ಮಾಸದಲ್ಲಿ ಮಳೆಯ ಪ್ರಹಾರ ಅಲ್ಲಿಯ ಸೃಷ್ಟಿ ಸೌಂದರ್ಯವನ್ನು ಚೆನ್ನಾಗಿ ಬಿತ್ತರಿಸಿದ್ದಾಳೇ ಹಿಂದಿ ಹಳೆ ಹೆಂಗಸರು ಮನೆ ಸಣ್ಣ ಸಣ್ಣಗೆ ಧ್ವನಿಯಿಂದ ಮಾತನಾಡುತ್ತಿರುವಾಗ ಸಣ್ಣ ಮಕ್ಕಳು ಮಲಗಿರುತ್ತಾರೆ ಎಂದು ಅವರ ಭಾವನೆ ಆದರೆ ಇವರು ಮಾತನಾಡುವ ಕೆಲವು ಗುಟ್ಟುಗಳು ಸಣ್ಣ ಮಕ್ಕಳು ಕೇಳುತ್ತಿರುತ್ತಾರೆ ಎಂಬ ಅರಿವು ಅವರಿಗೆ ಇರುವುದಿಲ್ಲ ಮತ್ತು ಬೆಳೆಯುವ ವಯಸ್ಸು ಕುತೂಹಲ ಎಲ್ಲಾ ಸಾಮಾನ್ಯ ಮಕ್ಕಳು ಹೇಗೆ ಆಗುತ್ತಾರೆ ಅದನ್ನು ಬಹಳ ಚೆನ್ನಾಗಿ ಮಾತಿನಲ್ಲಿ ಹೇಳಿದ್ದು ಹಾಗೂ ಅಲ್ಲೇ ಮಲಗಿದ್ದ ಮಗು ಕೇಳಿದ್ದು ಸಮರ್ಪಕವಾಗಿದೆ ತಮ್ಮ ಪ್ರಿಯಕೃಷ್ಣ ವಸಂತಿ

  ಪ್ರತಿಕ್ರಿಯೆ
  • ಜಯಲಕ್ಷ್ಮಿ

   ಸುಶೀಲ ಚಿಕ್ಕಿ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕುತ್ತಿದೆ,ಚೆನ್ನಾಗಿ ಬರುತ್ತಿದೆ.

   ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: