ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’ ಆರಂಭ-

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಿಕ್ಕಿದೆ.

ಕರಾವಳಿ ಲೇಖಕಿ ವಾಚಕಿಯರ ಸ೦ಘದ ಪ್ರಥಮ ಲೇಖಕಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಪುತ್ತೂರು ಹನ್ನೊ೦ದನೇ ತಾಲೂಕು ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ೨೦೦೫ರಲ್ಲಿ. ದ.ಕ. ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಯಾಗಿದ್ದರು.

1

ಆ ಬದುಕೇ ಬಹು ದೊಡ್ಡದು…

ದಕ್ಷಿಣ ಕನ್ನಡದ ಗಂಗೊಳ್ಳಿ ಹೊಳೆ ಎಂದರೆ ಅದು ತನ್ನ ಉದರದಲ್ಲಿ ಹಳ್ಳ, ಕೊಳ್ಳ, ತೊರೆ, ಝರಿ, ನದಿಗಳನ್ನು ಕೂಡಿಸಿಕೊಂಡು ಹರಿಯುವ  ಜೀವದಾಯಿನಿ ನದಿ. ಸೌಪರ್ಣಿಕಾ, ವಾರಾಹಿ, ಕೇದಕಿ, ಕುಬ್ಜ, ಚಕ್ರ ಹೊಳೆ ಈ ಐದು ನದಿಗಳು ಒಂದಾಗಿ ಕೂಡಿಕೊಂಡು ಅಂತ್ಯದಲ್ಲಿ ಅರಬ್ಬೀ ಸಮುದ್ರ ಸೇರಿಕೊಳ್ಳುತ್ತದೆ.

ಈ ಒಂದೊಂದು ನದಿಗಳೂ ಜನಸಾಮಾನ್ಯರಿಗೆ ಪವಿತ್ರವಾದದ್ದು. ಮನುಕುಲಕ್ಕೆ ನಿಸರ್ಗ ನೀಡಿದ ಕೊಡುಗೆಯಾಗಿ ಪಂಚ ಗಂಗಾವಳಿ ಎಂದೂ ಕರೆಯಲ್ಪಡುವ ಇದು ಮುಂದೆ ಜನರ ಬಾಯಲ್ಲಿ ಗಂಗೊಳ್ಳಿ ಹೊಳೆಯಾಗಿದೆ.

ಗಂಗೊಳ್ಳಿ ಹರಿಯುವ ತೀರದ ಉದ್ದಕ್ಕೂ ಕೆಸರು ನಿಲ್ಲುವ ಜೌಗು ಪ್ರದೇಶದಲ್ಲಿ ಬಿದಿರು ಸಾಲುಗಳು, ಪಾಪಾಸು ಕಳ್ಳಿಗಳು, ಕುರುಚಲು ಕಾಡು, ಬಯನೆ ಮರಗಳು, ಬಾಗಿನಿಂತ ತೆಂಗಿನ ಮರಗಳು, ಕಾಡು ಬಾಳೆಗಳು, ಅದರಾಚೆ  ಭತ್ತದ ಗದ್ದೆಗಳು, ಮನುಷ್ಯ ವಾಸದ ಕುರುಹುಗಳು. ಅಲ್ಲಲ್ಲಿ ಲಂಗರು ಹಾಕಿನಿಂತ ದೋಣಿಗಳು. ಹೊಳೆಯಲ್ಲಿ ತೀರ ಪ್ರದೇಶದಿಂದ ಸ್ವಲ್ಪ ದೂರವಾಗಿ ಅನೇಕ ಸಣ್ಣ ದೊಡ್ಡ ದ್ವಿಪಗಳಂತೆ ಕಾಣುವ ಕುದುರುಗಳಿವೆ. ಕೆಲವು ಕುದುರುಗಳು ಕೇವಲ ಕಾಡುಗಳ ಬೀಡು.

ಇನ್ನು ಕೆಲವು ಮನುಷ್ಯನ ವಾಸಸ್ಥಾನದ ಬೀಡು. ಬೇಸಿಗೆ ಕಾಲಕ್ಕೆ ಆ ಕುದುರುಗಳಿಗೆ ಹೋಗಿ ಬರಲು ದಡದಿಂದ ಕಾಲು ಹಾದಿಗಳಿವೆ. ಆದರೆ ಮಳೆಗಾಲದಲ್ಲಿ ಹೊಳೆ ತುಂಬಿ ಹರಿಯುತ್ತಿದ್ದರೆ, ಗಾಳಿ ಜೋರಾಗಿದ್ದರೆ, ಮೋಡ ಮುಸುಕಿದ ವಾತಾವರಣವಿದ್ದರೆ ಕುದುರುಗಳ ಹಾದಿಯೂ ಮುಳುಗಿ ಕಾಣುವುದು ಜಲಾಶಯ ಒಂದೇ! ಎಷ್ಟು ಭವ್ಯ ಭಯಾನಕ, ಅಷ್ಟೇ ನಿಗೂಢತೆ! ಹೊಳೆಯ ದಡ ಸಮೀಪವಿದ್ದರೂ ಯಾವ ನೀರಿನ ಋಣವೋ, ಯಾವ ಮಣ್ಣಿನ ಗುಣವೋ, ಯಾವ ಸಂಬಂಧಗಳ ನೆಲೆಯೋ, ಇಲ್ಲಿ ಜೀವ ಚೈತನ್ಯ ಉಸಿರಾಡುವ ರೀತಿ, ಬದುಕು ಕಟ್ಟಿಕೊಂಡ ಪರಿಗೆ ನಿಸರ್ಗವೇ ತಲೆಬಾಗಿದೆ, ನಿಸರ್ಗ ಮತ್ತು ಮನುಷ್ಯನ ಅವಿನಾಭಾವ ಸಂಬಂಧವೇ ಇಲ್ಲಿ ಮುಖ್ಯ.

ಸುಬ್ಬಪ್ಪಯ್ಯನವರ ಹಿರಿಯರು ಬಾಳಿ ಬದುಕಿದ್ದು, ಈಗಲೂ ಕಿರಿಯರು ತಮ್ಮ ಬದುಕನ್ನು ಸಂಭ್ರಮಿಸುತ್ತಿರುವುದು ಸೌಪರ್ಣಿಕಾ ನದಿ ಹರಿಯುತ್ತಿರುವ ಗಂಗೊಳ್ಳಿ ನೀರಿನಲ್ಲಿ ಎದ್ದು ನಿಂತ ವಿಶಾಲವಾದ ನಾಲ್ಕೈದು ಮೈಲಿ ವಿಸ್ತಾರವಾದ ಕುದುರುವಿನಲ್ಲಿ. ಭತ್ತ, ತೆಂಗು, ಉದ್ದು, ನವಣೆ,ಅವಡೆ, ಮೆಣಸು ಇತ್ಯಾದಿ ಬೆಳೆದು, ದನ ಎಮ್ಮೆ ಹಾಲು ಕರಾವು ಎಂದು ಬದುಕು ಕಟ್ಟಿಕೊಂಡವರು.  ಸಮೀಪದ ಕೋಟೇಶ್ವರ, ಸಾಸ್ತಾನ, ತ್ರಾಸಿ ಕಡೆಗೆ ಕುದುರುವಿನಿಂದ ಕಾಲು ದಾರಿಯಲ್ಲಿ ಹೋದರೆ  ಎರಡು ಮೈಲು. ನಡೆಯಬೇಕು. ಸಾಸ್ತಾನದ ಅಳವೆ ಬಾಗಿಲಲ್ಲಿ ದೋಣಿ ಹಿಡಿದರೆ ಕೇವಲ ಅರ್ಧ ಗಂಟೆ ಸಾಕು. ಬೇರೆ ಊರ ಗ್ರಾಮ ನದಿ ತೀರಕ್ಕೆ ತೆರಳಲು ದೋಣಿಯೇ ಗತಿ.

ಬ್ರಿಟಿಶ್ ವಸಾಹಿತಶಾಹಿ ಕಾಲದಲ್ಲಿಯೇ ಇತ್ತ ಅವರ ಅಧಿಕಾರಿಗಳು ದೋಣಿಯಲ್ಲಿ ಬಂದದ್ದು ಇಲ್ಲ. ಕೆಲವೊಮ್ಮೆ ಅರಬ್ಬೀ ಸಮುದ್ರದಲ್ಲಿ  ಬರುವ ಹಡಗಿನಿಂದ ಕೆಲ ವಿದೇಶಿಯರು, ದೇಶೀಯರು ಕುಶಾಲಿಗೆ ದೋಣಿ ಏರಿ ಇಂತಹ ಕುದುರುಗಳ ಸುತ್ತಲೂ ವಿಹಾರ ಮಾಡಿ ತಾವು ತಂದ ಕಳ್ಳ ಮಾಲನ್ನು ಮಾರಿ ಹೋಗುತ್ತಿದ್ದರಂತೆ. ಸುಮಾರು ಮೂವತ್ತು ಮನೆಗಳಿರುವ ಈ ಪ್ರದೇಶಕ್ಕೆ ಬಂಧುಗಳು, ನೆಂಟರು ಬರುವುದೂ ಅಪರೂಪ. ಹೊರ ಜಗತ್ತಿನ ಸಂಪರ್ಕ ಕಡಿಮೆಯೇ.

ಸುಬ್ಬಪ್ಪಯನವರಿಗೆ ಏಳು ಗಂಡು ಎರಡು ಹೆಣ್ಣು ಒಟ್ಟೂ ಒಂಬತ್ತು ಮಕ್ಕಳು. ಗಂಡುಮಕ್ಕಳಲ್ಲಿ ಬದಿಕಿ ಉಳಿದವರು ಮೂವರೇ. ಹಿರಿಯವ ರಘುರಾಮ, ಎರಡನೇಯವ ಸೀತಾರಾಮ ಮೂರನೇಯವ ಅನಂತ ರಾಮ. ಶಾಲಾ ವಿದ್ಯಾಭ್ಯಾಸ ಹೆಚ್ಚಿಲ್ಲದಿದ್ದರೂ ರಘುರಾಮ ಮದುವೆ ಆದಾಕ್ಷಣ ಕೆಲಸ ಹಿಡಿದು ಹೋದದ್ದು ಸಿರ್ಸಿಗೆ. ಅಡಿಕೆಮಂಡಿಯ ಕೆಲಸ. ಈಗ ನಾಲ್ಕು ಮಕ್ಕಳ ತಂದೆ.

ಸೀತಾರಾಮ ತನ್ನ ಮದುವೆ ಆಗುವ ತನಕ ಇಲ್ಲೇ ಇದ್ದ. ಮೊದಲ ಮಗು ಹುಟ್ಟಿದ ನಂತರ ದೂರದ ಗೋವಾದಲ್ಲಿ ಹೆಂಡತಿಯ ಅಣ್ಣನ ಸಣ್ಣ ಬಿಸಿನೆಸ್‌ನ ಪಾಲುದಾರನಾಗಿ ಅಲ್ಲೇ ಖಾಯಂ ನೆಲೆಯೂರಿದ. ಅವನಿಗೂ ನಾಲ್ಕು ಮಕ್ಕಳು. ಎಲ್ಲರೂ ಒಟ್ಟಿಗೇ ಇರಬೇಕೆಂದು ಆಸೆಯಿತ್ತು ಸುಬ್ಬಪ್ಪಯ್ಯನವರಿಗೆ.

ಇಲ್ಲಿ ಹೆಚ್ಚಿನ ಆದಾಯದ ದಾರಿ ಆಶಾದಾಯಕ ಮಾಡಬಹುದಿತ್ತು. ಆದರೆ ಅವರಿಬ್ಬರ ಹೆಂಡತಿಯರು ಹೊಳೆಬಾಗಿಲಿನ ಸೊಸೆಯಾಗಿ ಬಂದರೂ ಈ ಕುದುರುವಿನ ನೀರಸ ಜೀವನದಿಂದ ಹೊರ ಹೋಗುವ ನಿರ್ಧಾರ ಮಾಡಿರಬೇಕು. ಸಂತೋಷ, ತೃಪ್ತಿಯೇ ಜೀವನದ ಸುಖ ಸೂತ್ರ. ಮತ್ತೆ ಉಳಿದವನು ಅನಂತ ರಾಮ. ಅರ್ಥಾತ್  ರಾಮಪ್ಪಯ್ಯ. ಅಪ್ಪ ಅಮ್ಮನ ಮುದ್ದಿನ ಕೊನೆಮಗ. ಗಂಡು ಮಕ್ಕಳ ಸಂಸಾರ ಬೇರೆ ಬೇರೆಯಾದರೂ ಅವರಲ್ಲಿತ್ತು ಒಗ್ಗಟ್ಟು, ಮಧುರ ಪ್ರೀತಿ. ಪರಸ್ಪರ ನೋವು, ನಲಿವಿನಲ್ಲಿ ಬೆರೆಯುವ ಅನ್ಯೋನ್ಯತೆ. ಹುಡುಗಿಯರಲ್ಲಿ ಉಳಿದವರು ಇಬ್ಬರೇ. ದೊಡ್ಡವಳು ಕಮಲಿಗೆ ಮದುವೆ ಆಗಿದ್ದರೂ ಹಿಂದಿರುಗಿದ್ದಾಳೆ ತಂದೆ ಮನೆಗೆ. ತಂಗಿ ಶಾರದೆ ಮದುವೆಗೆ ಇರುವವಳು.

ರಾಮಪ್ಪಯ್ಯ ಹುಟ್ಟಿದ್ದು ದೇಶಕ್ಕೆ ಸ್ವಾತಂತ್ರ್ಯ ದೊರೆಯುವ ಇಪ್ಪತ್ತು ವರ್ಷಗಳ ಮೊದಲೇ. ಬ್ರಿಟಿಶರ ಆಳ್ವಿಕೆ, ದಬ್ಬಾಳಿಕೆ, ಎರಡನೇ ಮಹಾಯುದ್ಧ,  ಸ್ವಾತಂತ್ರ್ಯ ಸಮರದ ಬಿಸಿ ಈ ಕೂಪದ ತನಕ ತಲುಪದ ಕಾರಣ ದೇಶದ ರಾಜಕಾರಣವೂ ಇವನ ಅರಿವಿಗೆ ಬಂದದ್ದೇ ಇಲ್ಲ. ಅಣ್ಣಂದಿರೂ ಹಾಗೇ ಇದ್ದವರೇ. ಅವರು ಗೋವಾ, ಸಿರ್ಸಿಗೆ ಹೋದನಂತರ ಇವನ ಸವಾರಿ ಹಲವು ಬಾರಿ ಅಲ್ಲಿಗೆ ಹೋಗಿದೆ. ಆಗೆಲ್ಲ ಹೊಳೆಬಾಗಿಲಿನ ಬದುಕೇ ಬಹು ದೊಡ್ಡದು.

ಪ್ರಕೃತಿಯ ಆರಾಧನೆಯೇ ಸರ್ವಶ್ರೇಷ್ಟವೆಂದು ನಂಬಿದವ. ಆದರೆ ಒಮ್ಮೆ ಸಾಸ್ತಾನದಲ್ಲಿ ಬ್ರಿಟಿಶರ ವಿರುದ್ದ ಸ್ವದೇಶೀ ಆಂದೋಲನ, ಪ್ರತಿಭಟನೆಗೆ ಹೋದಾಗ ಪೋಲೀಸರು ನೂರಾರು ಮಂದಿಯನ್ನು ಬಂಧಿಸಿದ್ದರು. ಆ ಬಂಧಿತರಲ್ಲಿ ಇವನೂ ಒಬ್ಬ. ಆರು ತಿಂಗಳು ಬೆಳಗಾವಿ ಜೈಲ್ ವಾಸ. ಜೈಲಿನಲ್ಲಿ ತನಗಿಂತ ಕಿರಿಯರು ಅದೆಷ್ಟೋ ವಿಷಯ ತಿಳಿದುಕೊಂಡಿದ್ದಾರೆ. ತಾನೊಬ್ಬ ಕೂಪ ಮಂಡೂಕ. ಹೊಳೆಬಾಗಿಲಿನ ಆಚೆ ಹೊರ ಪ್ರಪಂಚ ಕಾಣದಂತೆ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಅಪ್ಪನ ಜೊತೆ ತಾಳಮದ್ದಳೆ, ಅಮ್ಮನ ಜೊತೆ ಪಗಡೆ ಆಟ, ತಂಗಿಯರ ಜೊತೆ ಇಸ್ಪೀಟು, ಚೆನ್ನೆಮಣೆ ಆಡ್ತಾ ಇದೇ ಪ್ರಪಂಚ ಎಂದುಕೊಂಡವ.

ಏನೇ ಆಗಲಿ ಜೈಲಿನಿಂದ ಬಿಡಿಗಡೆ ಆದ ನಂತರ ಸಣ್ಣದೋ ದೊಡ್ಡದೋ ಒಂದು ಉದ್ಯೋಗ ಮಾಡಬೇಕು, ಪ್ರಪಂಚ ಅರಿಯಬೇಕೆಂದು ಆಗಲೇ ನಿರ್ಧಾರ ಮಾಡಿದ್ದ. ಜೈಲಿಗೆ ಹೋಗುವ ಎರಡು ವರ್ಷಗಳ ಮೊದಲೇ ಅವನ ಮದುವೆಯಾಗಿತ್ತು ಹತ್ತರ ಬಾಲೆ ಶರಾವತಿಯ ಜೊತೆಯಲ್ಲಿ. ಅವಳು ಮೈ ನೆರೆದ ಮೇಲೆಯೇ ಪ್ರಸ್ತ ಮಾಡಿ ಮನೆ ತುಂಬಿಸಿಕೊಳ್ಳಬೇಕು ಎಂದಿದ್ದರು ಸುಬ್ಬಪ್ಪಯ್ಯನವರು.

ಮುಂದೆ ಆರು ತಿಂಗಳಲ್ಲಿ ಶರಾವತಿ ಮನೆ ತುಂಬುವಾಗ ರಾಮಪ್ಪಯ್ಯ ಸಾಸ್ತಾನದಲ್ಲಿ ಸಣ್ಣ ಸಣ್ಣ ಎರಡು ಕಡೆ ಕೆಲಸ ಹಿಡಿದು ಮನಸ್ಸಿಗೆ ಒಪ್ಪದೆ ಕೊನೆಗೆ ಹೆಸರಾಂತ ವಕೀಲರಾದ ಕಾಮತರಲ್ಲಿ ಲೆಖ್ಖ ಬರೆಯುವ ಉದ್ಯೋಗಕ್ಕೆ ಸೇರಿಕೊಂಡಿದ್ದ. ಸಣ್ಣ ಬಾಡಿಗೆ ಕೋಣೆ ಮಾಡಿದ. ವಾರ ಪೂರಾ ಸಾಸ್ತಾನದಲ್ಲಿ. ಶನಿವಾರ ಹೊಳೆಬಾಗಿಲಿಗೆ ಬಂದರೆ ಸೋಮವಾರ ಬೆಳಗಿನ ದೋಣಿಯಲ್ಲಿ ಮರಳಿ ಸಾಸ್ತಾನಕ್ಕೆ.
ಇದಿಷ್ಟು ಹಳೆಕಥೆ.

| ಇನ್ನು ನಾಳೆಗೆ |

‍ಲೇಖಕರು Avadhi

July 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

 1. ಸೀಮಾ ಬುರ್ಡೆ

  ಚೆನ್ನಾಗಿದೆ. ಸಾಸ್ತಾನು, ಕುದುರು ಎಲ್ಲಾ ಹೊಸ ಶಬ್ದಗಳು.

  ಗಂಗೊಳ್ಳಿಯ ವರ್ಣನೆ ಚೆನ್ನಾಗಿ ಬಂದಿದೆ..

  ಆದರೆ ತಂಗಿ ಶಾರದೆ ಮದುವೆಯಾಗದೆ ಉಳಿದಿದ್ದು ವಯಸ್ಸಿನ ಕಾರಣಕ್ಕಾ ಅಥವಾ ಇನ್ನೂ ಚಿಕ್ಕವಳಾ?

  ಅಣ್ಣಂದಿರ ವಯಸ್ಸಿಗೆ ಹೋಲಿಸಿದರೆ ವಯಸ್ಸಾಗಿರಬಹುದು ಎಂದೆನಿಸುತ್ತದೆ. ಕಥೆ ಸಾಗಿದಂತೆ ಈ ವಿಷಯಗಳು ಅನಾವರಣಗೊಳ್ಳಬಹುದು .

  ಪ್ರತಿಕ್ರಿಯೆ
 2. ಜಯಲಕ್ಷ್ಮಿ

  ಅವಧಿಯಲ್ಲಿ ನಿಮ್ಮ ಧಾರಾವಾಹಿ ಬರುತ್ತಿರುವುದಕ್ಕೆ ಅಭಿನಂದನೆಗಳು.ಹೊಳೆಬಾಯಾಗಿಲು ಪರಿಸರ ಇಷ್ಟವಾಯಿತು.ಮುಂದ ಕ್ಕೆ ಓದಲು ಖುಷಿಯಿಂದ ಎದುರು ನೋಡುವೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: