ಎಸ್ ಬಿ ರವಿಕುಮಾರ್ ಓದಿದ ‘ಸೋಲಿಗ ಚಿತ್ರಗಳು’

ಡಾ ಎಸ್ ಬಿ ರವಿಕುಮಾರ್

ಹೆಚ್ಚಿನ ವಿದ್ಯಾವಂತರ ಗುರಿ ಉದ್ಯೋಗ ಪಡೆಯುವುದೇ ಆಗಿದೆ. ಅದರಲ್ಲೂ ಉಪನ್ಯಾಸಕರಂಥ ಬಿಳಿಕಾಲರಿನ ಉದ್ಯೋಗ ದೊಡ್ಡ ಪಟ್ಟಣದಲ್ಲಿ ದೊರೆತರಂತೂ ಜೀವನ ಸಾರ್ಥಕವಾಯಿತು ಎಂದು ಭಾವಿಸುವವರೇ ಹೆಚ್ಚು. ಆದರೆ ಇಲ್ಲೊಬ್ಬ ಮಹಾಶಯರಿದ್ದಾರೆ. ಮೈಸೂರಿನ ಪ್ರತಿಷ್ಟಿತ ಸುತ್ತೂರು ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರೂ ರಜಾ ದಿನಗಳಲ್ಲಿ ಬಿಳಿಗಿರಿ ರಂಗನ ಬೆಟ್ಟಕ್ಕೆ ಹೋಗಿ ಸೋಲಿಗರೊಂದಿಗೆ ಬೆರೆಯುವ ಹವ್ಯಾಸ ಇಟ್ಟುಕೊಂಡವರು. ಸೋಲಿಗರಲ್ಲಿನ ಆರೋಗ್ಯ ಸಮಸ್ಯೆ ಗಮನಿಸಿ  ಸ್ವಚ್ಛತೆಯ ಹಾಗೂ ಎದೆಯಲ್ಲಿ ಅಕ್ಷರದ ಬೀಜ ಬಿತ್ತುವ ಮೂಲಕ ಪರಿಹಾರಕ್ಕೆ ಚಿಂತಿಸಿದವರು. 

ಒಂದು ವರ್ಷ ವೇತನರಹಿತ ರಜಾ ಹಾಕಿ ಬೆಟ್ಟದಲ್ಲೇ ತಂಗಿ ಡಾ. ಸುದರ್ಶನ್ ಜೊತೆ ಬಿಳಿಗಿರಿರಂಗನ ಬೆಟ್ಟದಲ್ಲಿ ಸೋಲಿಗರ ಅಭಿವೃದ್ಧಿಗಾಗಿ ದುಡಿದವರು ಎಂದರೆ ಈ  ಸೇವೆಯ ‘ಹುಚ್ಚು’ ಇವರನ್ನು ಎಲ್ಲಿಗೆ ತಂದಿರಬಹುದೆಂದು ನೀವು ಈಗಾಗಲೇ ಊಹಿಸಿರಲು ಸಾಕು. ಮುಂದೆ ಇವರು ತಮ್ಮ ಪ್ರತಿಷ್ಟಿತ ಕಾಲೇಜಿನ ಪ್ರಾಧ್ಯಾಪಕ ವೃತ್ತಿಗೆ ರಾಜೀನಾಮೆ ನೀಡಿ, ಮದುವೆಯನ್ನೂ ಆಗದೆ ತಮ್ಮ ಬದುಕನ್ನು ಸೇವೆಗಾಗಿಯೇ ಮುಡಿಪಾಗಿಟ್ಟು ಪೂರ್ಣಪ್ರಮಾಣದ ಸೇವಾ ಕಾರ್ಯಕರ್ತರಾಗಿ ದುಡಿಯತೊಡಗಿದರು. ಇವರೇ ಶ್ರೀ ಜಿ. ಎಸ್ ಜಯದೇವ ಅವರು. 

ಕುಟುಂಬದಲ್ಲಿದ್ದ ಸಹಜವಾಗಿಯೇ ಲಭ್ಯವಿದ್ದ ಪ್ರಭಾವಳಿಯನ್ನು ಚಿಮ್ಮುಹಲಗೆಯನ್ನಾಗಿ ಉಪಯೋಗಿಸಿಕೊಳ್ಳದೆ, ಶ್ರೀ ಜಯದೇವರು ಜೀವಪರಕಾಳಜಿಯಿಂದ ದುಡಿದು ತಮ್ಮ ಪ್ರಾಮಾಣಿಕತೆ, ನಿಸ್ಪೃಹ ಸೇವೆಯನ್ನೇ ಚಿಮ್ಮುಹಲಗೆಯನ್ನಾಗಿಸಿಕೊಂಡು, ತಮ್ಮದೇ  ಆದ ಪ್ರಭಾವಳಿಯನ್ನು ನಿರ್ಮಿಸಿಕೊಂಡವರು.

ಪೂರ್ಣ ಪ್ರಮಾಣದ ಸೇವೆಯಲ್ಲಿ ತೊಡಗಿದ ನಂತರ ಚಾಮರಾಜನಗರದಲ್ಲಿ ದೀನಬಂಧು ಟ್ರಸ್ಟ್ ಪ್ರಾರಂಭಿಸಿ ಅನಾಥ ಮಕ್ಕಳಿಗೆ ಪುನರ್ವಸತಿ ಕಲ್ಪಿಸಿ, ಅವರ ಶಿಕ್ಷಣಕ್ಕೆ ಗಮನ ಕೊಟ್ಟರು. ಮಕ್ಕಳ ಜೊತೆಗಿನ ಒಡನಾಟದಲ್ಲಿ ಅವರ ಬಾಲ್ಯದ ಕಹಿನೆನಪುಗಳಿಗೂ ಅವರ ಇಂದಿನ ವರ್ತನೆಗೂ  ಸಂಬಂಧವಿದೆಯೆಂಬುದು ಸೂಕ್ಷ್ಮಮತಿಗಳಾದ ಜಯದೇವರಿಗೆ ಗೊತ್ತಾಗಲು ಹೆಚ್ಚುದಿನ ಬೇಕಾಗಲಿಲ್ಲ. 

ಶಾಲೆಯಲ್ಲಿ ಮಕ್ಕಳಿಗೆ ಕನ್ನಡದಲ್ಲಿಯೇ ವಿಜ್ಞಾನವನ್ನು ಪರಿಣಾಮಕಾರಿಯಾಗಿ ಬೋಧಿಸತೊಡಗಿದರು. ಕಬ್ಬಿಣದ ಕಡಲೆಯಂಥ ವೈಜ್ಞಾನಿಕ ವಿಷಯಗಳು ಸುಲಭವಾಗಿ ಅರ್ಥವಾಗಲು; ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಗರಿಗೆದರುವಂತೆ ಮಾಡಲು, ತಾವೇ  ಅನೇಕ ಉಪಕರಣಗಳನ್ನು ತಯಾರಿಸಿ, ಸೈನ್ಸ್ ಪಾರ್ಕ್ ಮಾಡಿದರು. ಶಾಲೆಯಲ್ಲಿ ಗಂಟೆಗಟ್ಟಲೆ ಪಾಠ ಮಾಡಿದರೂ ಅರ್ಥವಾಗದ ಅನೇಕ ವಿಷಯಗಳು ಈ ಉಪಕರಣಗಳನ್ನು ನೋಡಿ, ಅವುಗಳೊಂದಿಗೆ ಆಟವಾಡಿದರೆ ಇನ್ನೆಂದೂ ಮರೆಯದಂತೆ ವಿಷಯ ಮನದಟ್ಟಾಗುವ ವಿಸ್ಮಯಕಂಡು ಮಕ್ಕಳ ಮುಖದಲ್ಲಿ ನಗು ಮೂಡಿತು. 

ಕೇವಲ ಮಕ್ಕಳಲ್ಲ ಇತರೆ ಶಾಲೆಗಳ ಮುಖ್ಯಸ್ಥರೂ ಬೆರಗಾಗಿ; ಅನೇಕ ಶಾಲೆಗಳಿಂದ ಇಂತಹ ಉಪಕರಣಗಳಿಗೆ ಬಂದಿರುವ ಬೇಡಿಕೆ ಅವರ ಪ್ರಯೋಗ ಯಶಸ್ವಿಯಾಗಿರುವುದಕ್ಕೆ ಸಾಕ್ಷಿಯಾಗಿದೆ. ಅನೇಕ ದಶಕಗಳ ಮಕ್ಕಳ ಜೊತೆಗಿನ ತೊಡಗುವಿಕೆ, ಸೂಕ್ಷ್ಮಗ್ರಾಹಿ ಮನಸ್ಸು ಇವರನ್ನು ಒಬ್ಬ ಶ್ರೇಷ್ಟ ಶಿಕ್ಷಣ ತಜ್ಞರನ್ನಾಗಿಸಿದೆ. ಈ ಬಗ್ಗೆ ‘ಮಕ್ಕಳ ಬೆಳವಣಿಗೆ ಮತ್ತು ನಾವು’, ‘ಜಾಗತೀಕರಣ, ಶಿಕ್ಷಣ ಮತ್ತು ಸಮಾಜ’ ಎನ್ನುವ ಪುಸ್ತಕಗಳನ್ನು ಸೇರಿ ಒಟ್ಟು  ಇದುವರೆಗೆ  ಹತ್ತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಶಾಲೆಗಳ, ಹಾಸ್ಟೆಲುಗಳ  ನಿರ್ವಹಣೆ, ಮೈಸೂರಿನ ಪರಿತ್ಯಕ್ತ ಹೆಣ್ಣುಮಕ್ಕಳ ಶಕ್ತಿ ಕೇಂದ್ರದ ನಿರ್ವಹಣೆ, ತಮ್ಮ ವಿಸ್ತಾರವಾದ ಓದು ಪುಸ್ತಕರಚನೆ ಮಧ್ಯೆಯೂ  ಸೋಲಿಗರೊಂದಿಗೆ ಸತತ ಸಂಪರ್ಕವನ್ನಿಟ್ಟುಕೊಂಡಿದ್ದಾರೆ. 

ತಮ್ಮ ಈ ಸುಮಾರು ನಾಲ್ಕು ದಶಕಗಳ ಸೋಲಿಗರ ಜೊತೆಯಲ್ಲಿನ ವಿಶಿಷ್ಟ ಒಡನಾಟದ ಬಗ್ಗೆ ಮೆಲುಕು ಹಾಕಿ ‘ಸೋಲಿಗ ಚಿತ್ರಗಳು’ ಪುಸ್ತಕವನ್ನು ಕೊಟ್ಟಿದ್ದಾರೆ. ಈ ಚಿತ್ರಗಳು ಸೋಲಿಗರ ಜೀವನ ಕ್ರಮವನ್ನು ಮಾತ್ರವಲ್ಲ, ಅಚ್ಚರಿಯಾಗುವಂತೆ ಕಾಡಿನ ಬಗ್ಗೆ ಅವರಿಗಿರುವ ಅಪಾರ ಜ್ಞಾನವನ್ನು ಪರಿಚಯಿಸುತ್ತದೆ. ಕಾಡಿನಲ್ಲಿ ಜೀವ ಜಂತುಗಳು, ಸಸ್ಯಗಳು ಪರಸ್ಪರ ಹೇಗೆ ಸಹಜ ಕೊಡುಕೊಳ್ಳುವಿಕೆಯಲ್ಲಿ ಹೊಂದಿಕೊಂಡಿವೆಯೆಂದರೆ ಯಾವುದೋ ಒಂದು ಸಸ್ಯ ಪ್ರಬೇಧವೊಂದು ಅಳಿದರೆ, ಅದನ್ನೇ ಅವಲಂಬಿಸಿದ್ದ ಯಾವುದೋ ಒಂದು ಜೀವಜಾಲ ಸದ್ದಿಲ್ಲದೆ ನಿರ್ನಾಮವಾಗಿ ಜೀವಜಾಲದ ಕೊಂಡಿ ಕತ್ತರಿಸಿದಂತಾಗುತ್ತದೆ.

ತೇಜಸ್ವಿಯವರು ಬರೆದಿರುವ ಗುಮ್ಮಾಡಲು ಹಕ್ಕಿಯ ಕತೆ ನೀವು ಓದಿರಬಹುದು. ಅಲ್ಲಲ್ಲಿ ಬೆಳೆದಿದ್ದ ನಾಲ್ಕಾರು ಧೂಪದ ಮರಗಳನ್ನು ಬೆಂಕಿಕಡ್ಡಿ ಫ್ಯಾಕ್ಟರಿಯವರು ಕತ್ತರಿಸಿದ್ದರಿಂದ ಕೆಲವು ವರ್ಷಗಳಲ್ಲಿ ಆ ಭಾಗದಲ್ಲಿ ಗುಮ್ಮಾಡಲು ಹಕ್ಕಿಗಳು ಕಾಣೆಯಾಗಿಬಿಟ್ಟವು. ಏಕೆಂದರೆ ತಲತಲಾಂತರದಿಂದ ಅವು ಕೇವಲ ಈ ಧೂಪದ ಮರದ ಹಣ್ಣುಗಳನ್ನೇ ತಿಂದು ಜೀವಿಸಿದ್ದವು. ಅವುಗಳಿಗೆ ಬೇರೆ ಹಣ್ಣು ತಿನ್ನುವುದು ಗೊತ್ತೇ ಇರಲಿಲ್ಲ. ಇಂಥ ಅನೇಕ ಸಂಬಂಧಗಳನ್ನು ಸೋಲಿಗರು ಸಹಜವಾಗೇ ಅರ್ಥಮಾಡಿಕೊಂಡಿದ್ದಾರೆ. ಸೋಲಿಗ ಚಿತ್ರಗಳು ಇಂಥ ಅನೇಕ ಕುತೂಹಲಭರಿತ, ಆಸಕ್ತಿದಾಯಕ ಅಚ್ಚರಿಯ ಸಂಗತಿಗಳನ್ನು ತಿಳಿಸುತ್ತವೆ. ಜೊತೆಗೆ ನಮ್ಮನ್ನು ಚಿಂತಿಸುವಂತೆ ಮಾಡುತ್ತವೆ. ಒಳ್ಳೆ ಕೀಟಗಳು ಹೋಗಿ ಕೆಟ್ಟ ಕೀಟಗಳು ಜಾಸ್ತಿಯಾಗಿರುವುದು, ಸೋಲಿಗರ ಗಮನಕ್ಕೆ ಬಂದಿವೆ.

ಇತ್ತೀಚೆಗೆ ಜಿಗಣೆಗಳು, ಉಣ್ಣೆಗಳು ಜಾಸ್ತಿಯಾಗಿವೆ ಎಂದು ಕೊರಗುತ್ತಾರೆ. ಹಿಂದೆ ಕಾಡಿನಲ್ಲಿ ಅಪಾರವಾಗಿದ್ದ ಬಾಣೆ ಹುಲ್ಲು ಎನ್ನುವ ಪ್ರಬೇಧ ಈಗ ಲಾಂಟಾನದ ಹೊಡೆತಕ್ಕೆ ಸಿಕ್ಕಿ ಕಡಿಮೆಯಾಗಿದೆ. ಇದು ಆನೆ, ಕಡವೆ, ಜಿಂಕೆಗಳಿಗೆ ಮುಖ್ಯ ಆಹಾರವಾಗಿತ್ತು. ಈಗ ಬಾಣೆ ಹುಲ್ಲು ಕಡಿಮೆಯಾಗಿರುವುದರಿಂದ ಆನೆಗಳು ಯಾವ ಯಾವುದೋ ಮರಗಳ ತೊಗಟೆಗಳನ್ನು -ಕಾರೆ, ಹೊನ್ನೆ ಇತ್ಯಾದಿ- ತಿನ್ನುವ ಅನಿವಾರ್ಯತೆಗೆ ಸಿಕ್ಕಿವೆ. ಮಗ್ಗಾರೆಯ ತೊಗಟೆಯನ್ನು ಕೊಳದ ನೀರಿನಲ್ಲಿ ಕಿವಿಚಿದರೆ ಮೀನುಗಳು ಸತ್ತು ತೇಲುತ್ತವೆ. ಇದು ಸೋಲಿಗರ ಮೀನು ಶಿಕಾರಿ ವಿಧಾನ. ಇಂಥ ಮಗ್ಗಾರೆಯ ತೊಗಟೆಯನ್ನೂ ಇತ್ತೀಚೆಗೆ ಆನೆಗಳು ತಿನ್ನುತ್ತವಲ್ಲ ಎಂಬ ಆತಂಕ ಇದರ ಪರಿಣಾಮವೇನಾಗಬುದು ಎನ್ನುವ ಚಿಂತೆ ಸೋಲಿಗರದು. ಉದುರುಂಬೆ ಗಿಡ ಹೂ ಕಚ್ಚಿದಾಗ ಕಾಡಿನ ಕಣಜಗಳು ಸಾಯುತ್ತವೆ. ಕೆಲವು ಕಣಜಗಳು ತ್ಯಾವದ ಮರದ ಪೊಟರೆಗಳಲ್ಲಿ ಅಡಗಿ  ಪ್ರಾಣ ಉಳಿಸಿಕೊಳ್ಳುತ್ತವೆ! ಮುಂದೆ ಉದುರುಂಬೆ ಹೂಗಳು ಬಿದ್ದು ಹೋದಮೇಲೇ ಕಣಜಗಳು ಪೊಟರೆಯಿಂದ ಹೊರಬರುವ ಧೈರ್ಯ ಮಾಡುತ್ತವಂತೆ! ಆದರೆ ಇಂಥ ವಿಷಯಗಳಿಗಿರಬಹುದಾದ ಗಹನತೆಯ ಬಗ್ಗೆ ಅರಿವೇ ಇರದ  ಮುಗ್ಧ ಸೋಲಿಗರ ನಂಬಿಕೆ ಏನು ಗೊತ್ತೇ ? ವಿಷಪೂರಿತವಾದ ಕಣಜಗಳು ಮಿತಿಮೀರಿ ಬೆಳೆಯಬಾರದು ಎಂದು ದೇವರೇ ಈ ಉದರುಂಬೆ ಹೂವನ್ನು ಸೃಷ್ಟಿಸಿ ಅವುಗಳನ್ನು ನಿಯಂತ್ರಿಸುತ್ತಾನೆ!  

ಎಲ್ಲಕ್ಕಿಂತ ಆತಂಕಕಾರಿ ವಿಷಯವೆಂದರೆ ಲಾಂಟಾನ ಬಹು ಉಪಯೋಗಿ ಬಾಣೆಹುಲ್ಲನ್ನು ಏಳದಂತೆ ಮಾಡಿರುವುದರಿಂದ ಬಾಣೆಹುಲ್ಲಿನ ಗಡ್ಡೆಗಳು ನೆಲದಲ್ಲೇ ಕೊಳೆತು ಭೂಮಿ ಪಾಷಾಣದಂತಾಗಿದೆ. ಗೆಣಸಿಗಾಗಿ ನೆಲದಾಳಕ್ಕೆ ಬಗೆದಾಗ ಈ ವಿದ್ಯಮಾನ ಕಂಡು ಅವರು ಆತಂಕಗೊಂಡಿದ್ದಾರೆ. ಇಲಿ ಸತ್ತ ವಾಸನೆಯಂತೆ ನಾರುವುದರಿಂದ ಇಂಥ ಕಡೆಯ ಗೆಡ್ಡೆ ಗೆಣಸುಗಳನ್ನು ಅವರು ತಿನ್ನುವುದಿಲ್ಲವಂತೆ!  ಬಾಣೆಹುಲ್ಲು ಸರ್ವನಾಶವಾದ ಮೇಲೆ ಈ ಸಮಸ್ಯೆ ಎದುರಾಗಿದೆ. ಹಿಂದೆ ಆಗಾಗ ಕಾಡಿನಲ್ಲಿ ಕಾಣಿಸುತ್ತಿದ್ದ ತರಗು ಬೆಂಕಿ ಲಂಟಾನಾ ನಿಗ್ರಹಿಸುತ್ತಿತ್ತಂತೆ. ತರಗುಬೆಂಕಿ ಎಂದರೆ ಕೇವಲ ಒಣಗಿದ ಹುಲ್ಲು ಮಾತ್ರ ಸುಟ್ಟು ಹೋಗುವಂಥ ಬೆಂಕಿ. ಇದು ಲಾಂಟಾನದ ಬೀಜಗಳನ್ನು ಸುಡುವುದರ ಜೊತೆಗೆ ಬೂಷ್ಟು ರೋಗ ಹರಡದಂತೆ ತಡೆಯುತ್ತದಂತೆ !

ಎಂತ ಊಹೆಗೂ ನಿಲುಕದ ಸಂಬಂಧಗಳು! ವಿಜ್ಞಾನಿಗಳು ಅನೇಕ ವರ್ಷಗಳ ಸತತ ಅಧ್ಯಯನ, ಸಂಶೋಧನೆ ಮಾಡಿ ತಿಳಿದುಕೊಳ್ಳಬಹುದಾದ ಇಂಥ ಅಸಂಖ್ಯಾತ ಸಂಗತಿಗಳು, ತಲತಲಾಂತರದಿಂದ ಕಾಡನ್ನು ಗಮನಿಸುತ್ತಿರುವ ಸೋಲಿಗರ ಬಾಯಲ್ಲಿಯೇ ಇವೆ! ಇಂಥ ಹತ್ತು ಹಲವು ಮಾಹಿತಿ, ವಿಚಾರಗಳು ನಮ್ಮನ್ನು ಬೆರಗುಗೊಳಿಸುತ್ತವೆ.  

ಸಾಮಾನ್ಯವಾಗಿ ಗ್ರಾಮೀಣಾಭಿವೃದ್ಧಿಯಲ್ಲಿ ತೊಡಗಿರುವ ಅಧಿಕಾರಿಗಳಿಗೆ ಗ್ರಾಮಾಂತರ ಜನರು ಏನೂ ತಿಳಿಯದ ದಡ್ಡರು, ಅವರ ಸಮಸ್ಯೆಗಳಿಗೆ ನಾವೇ ಪರಿಹಾರ ಹುಡುಕುವವರು ಎನ್ನುವ ಅಹಂ ಇರುತ್ತದೆ. ಆದರೆ ನೈಜ ಕಾಳಜಿಯ, ಪ್ರಾಮಾಣಿಕ ಅಧಿಕಾರಿಗೆ ಗ್ರಾಮಾಂತರ ಜನರ ಅಪಾರ ಅನುಭವ, ಪಾರಂಪರಿಕ ಜ್ಞಾನ, ತಮ್ಮ ಸಮಸ್ಯೆಗಳಿಗೆ ಸಹಜವಾಗಿಯೇ ಅವರಲ್ಲಿ ಪರಿಹಾರವೂ ಇರುತ್ತದೆಂಬ, ತಾನು ಕೇವಲ ಮನವಿಟ್ಟು ಕೇಳುವ ತಾಳ್ಮೆ ಹೊಂದಿದ್ದರೆ ಅನೇಕ ಸಮಸ್ಯೆಗಳಿಗೆ ಸುಲಭ ಪರಿಹಾರ ಸಾಧ್ಯ ಎನ್ನುವ ನಂಬಿಕೆ ಇರುತ್ತದೆ. ಗ್ರಾಮಾಂತರ ಜನರ ಜೀವನಾನುಭವದ ಬಗ್ಗೆ ಗೌರವವಿರುತ್ತದೆ.  

ಗ್ರಾಮಾಂತರ ಜನರ ಬಗ್ಗೆಯೇ ಈ ರೀತಿ ಅಭಿಪ್ರಾಯ ಇರುವಾಗ ಇನ್ನು ಬುಡಕಟ್ಟು ಜನಾಂಗ, ಆದಿವಾಸಿಗಳು ಎಂದರೆ ಅವರು ಕೇವಲ ಪ್ರಾಣಿಸದೃಶರು ಎಂದೇ ನಾಗರಿಕೆರೆನ್ನಿಸಿಕೊಂಡವರ ಅನಿಸಿಕೆ. ಅವರನ್ನು ಉದ್ದಾರ ಮಾಡುವುದು ಎಂದರೆ ನಮ್ಮಂತೆ ಅವರನ್ನು ‘ನಾಗರಿಕ’ರನ್ನಾಗಿಸುವುದು ಎಂದೇ ಭಾವಿಸುತ್ತಾರೆ. ಆದರೆ ಅವರಲ್ಲಿರುವ ಪಾರಂಪರಿಕ ಜ್ಞಾನ; ಪರಸ್ಪರರಿಗೆ ತೊಂದರೆಯಾಗದಂತೆ ಪ್ರಾಣಿಪಕ್ಷಿಗಳೊಂದಿಗೆ ಸಹಜೀವನ ನಡೆಸುವ ಜಾಣ್ಮೆ , ಕಾಡಿನ ಬಗ್ಗೆ ಸಹಜ ಪ್ರೇಮ, ಯಾವ ಕಾಲದಲ್ಲಿ ಯಾವ ಹೂ ಅರಳುತ್ತದೆ ಹಾಗಾಗಿ ಯಾವ ಸಮಯದಲ್ಲಿ ತೆಗೆದ ಜೇನು ಯಾವ ಹೂವಿನ ಮಕರಂದ ಹೊಂದಿರುತ್ತದೆ ಇತ್ಯಾದಿ ನಾಗರಿಕರೆನ್ನಿಸಿಕೊಂಡವರ ಕಲ್ಪನೆಗೂ ನಿಲುಕದ ಜ್ಞಾನವನ್ನು ಗುರುತಿಸಲು ನಮ್ಮ ಪದವಿ, ಹುದ್ದೆ ಇತ್ಯಾದಿ ಬಿರುದು ಬಾವಲಿಗಳನ್ನೆಲ್ಲ ಮರೆತ ಕುತೂಹಲಭರಿತ ಅರಳುಗಣ್ಣು, ಸಹೃದಯ ಮನಸ್ಸು ಬೇಕಾಗುತ್ತದೆ. 

ಇಂಥ ಹೃದಯ ಮನಸ್ಸು ಇರುವುದರಿಂದಲೇ ಶ್ರೀ ಜಿ.ಎಸ್. ಜಯದೇವರು ಚಿತ್ರಿಸುವ ಸೋಲಿಗ ಚಿತ್ರಗಳಲ್ಲಿ ಕಂಡುಬರುವ ವ್ಯಕ್ತಿಗಳು ನೋಡಲು ಅತ್ಯಂತ ಸಾಧಾರಣರಂತೆ ಮೇಲುನೋಟಕ್ಕೆ ಕಂಡರೂ ಅಪಾರ ಜ್ಞಾನಿಗಳಾಗಿ ಕಂಡುಬರುತ್ತಾರೆ. ಕಾಡಿನಲ್ಲಿನ ಪ್ರಾಣಿ ಪಕ್ಷಿಗಳು, ಗಿಡ ಮರಗಳ ಬಗ್ಗೆ ಪ್ರೀತಿಯಿರುವ ಪರಿಸರವಾದಿಗಳಾಗಿ ಕಾಣುತ್ತಾರೆ. ವಾಸ್ತವವಾಗಿ ಕಾಡು ಸಂರಕ್ಷಿಸುತ್ತೇವೆಂದು ಹೊರಟಿರುವವರಿಂದಲೇ ನಿಜವಾಗಿ ಕಾಡು ನಾಶವಾಗುತ್ತಿದೆಯೇ ಹೊರತು ಕಾಡಿನಲ್ಲಿನ ಜೀವಜಾಲದ ಜೊತೆ ಸಹಜವಾಗಿಯೇ ಹೆಣೆದುಕೊಂಡಿರುವ; ಪರಸ್ಪರರಿಗೆ ತೊಂದರೆಯಾಗದಂತೆ ಬಾಳುವ ಜಾಣ್ಮೆಯಿರುವ ಸೋಲಿಗರಿಂದ ಕಾಡು ನಾಶವಾಗುತ್ತಿಲ್ಲ ಎಂದು ಮನವರಿಕೆ ಮಾಡಿಕೊಡುತ್ತಾರೆ. 

ಸೋಲಿಗ ಚಿತ್ರಗಳನ್ನು ಓದಿ ಮುಗಿಸಿದ ಮೇಲೆ ಒಂದು ಬಗೆಯ ವಿಷಣ್ಣತೆ ಮನಸ್ಸನ್ನು ತಟ್ಟುತ್ತದೆ. ನಿಜವಾಗಿಯೂ ಅಭಿವೃದ್ಧಿ ಎಂದರೆ ಏನು ? ಕೇವಲ ಭೌತಿಕ ಸೌಕರ್ಯಗಳನ್ನು ಒದಗಿಸುವುದೇ? ಪ್ರಕೃತಿಯಲ್ಲಿ ಒಂದಾಗಿ ಬಾಳದೆ ಮುಂದಿನ ಪೀಳಿಗೆಗೆ ವಾಸಿಸಲು ಯೋಗ್ಯ ವಾತಾವರಣವನ್ನೂ ಬಿಡದೆ ಸಂಪನ್ಮೂಲಗಳನ್ನು ಶೋಷಿಸಿ ಕ್ಷಣಿಕ ಸುಖ ಪಡುವುದೇ? ಗರಿಷ್ಟ ಮಟ್ಟದ ಭೌತಿಕ ಸೌಕರ್ಯಗಳನ್ನು ಪಡೆಯುತ್ತ ಹೋದರೂ ಮಾನವ ತನ್ನ ಮನಃಶಾಂತಿಯನ್ನು ಏಕೆ ಕಳೆದುಕೊಳ‍್ಳುತ್ತಿದ್ದಾನೆ ? ಭೌತಿಕ ಸೌಕರ್ಯಗಳ ಪಡೆಯುವಿಕೆಯಲ್ಲಿ ಅನಿವಾರ್ಯವಾಗಿರುವ ಸಾಂಸ್ಕೃತಿಕ ಪಲ್ಲಟಗಳನ್ನು ಮೀರಿ ತಮ್ಮತನವನ್ನು ಉಳಿಸಿಕೊಳ್ಳಲಾರದೆ ನರಳುವವರು ನಿಜವಾಗಿಯೂ ಅಭಿವೃದ್ಧಿಹೊಂದಿದವರೆಂದು ಪರಿಗಣಿಸಬೇಕೇ? ಹಣದ ಓಡಾಟ ಹೆಚ್ಚಿದಂತೆ ಅವರು ವ್ಯಸನಗಳಿಗೆ ಬಲಿಯಾಗುತ್ತಿರುವುದನ್ನು ನೋಡಿ ವ್ಯಥೆ  ಪಡಬೇಕೇ? ಅವರ ಪಾಡಿಗೆ ಅವರನ್ನು ಬಿಡುವುದೇ ನಾವು ಇಂಥ ಆದಿವಾಸಿಗಳಿಗೆ ಮಾಡುವ ಮಹದುಪಕಾರವೇ? ಇಂಥಹ ಅನೇಕ ಪ್ರಶ್ನೆಗಳು ಮನದಲ್ಲಿ ಉದಯಿಸಿ ನಮ್ಮನ್ನು ಚಿಂತಿಸುವಂತೆ ಮಾಡುತ್ತದೆ. ಜೊತೆಗೆ ತಮ್ಮ ಇಂದಿನ ಪೀಳಿಗೆಗೇ ತಮ್ಮ ಪಾರಂಪರಿಕ ಜ್ಞಾನವನ್ನು ದಾಟಿಸಲಾಗದ ಸೋಲಿಗರ ಅಸಹಾಯಕತೆ ಕಂಡು ಇನ್ನೆಂದೂ ಯಾರಿಗೂ ದಕ್ಕದೆ ಅಗಾಧವಾದ ಜ್ಞಾನ ಕೈತಪ್ಪಿಹೋಗುತ್ತಿರುವ ಬಗ್ಗೆ ತೀವ್ರ ವಿಷಾದ ಮೂಡುತ್ತದೆ.   

ಶ್ರೀ ಜಯದೇವ ಅವರ ಸ್ನೇಹವಲಯದ ಆಪ್ತರಾದ ಶ್ರೀ ಕೃಷ್ಣಮೂರ್ತಿ ಹನೂರು ಅವರ ‘ಈ ಬಗೆಯ ಸಾಹಚರ್ಯದ ನನೆಪುಗಳ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದೇನೆಂದು ನಾನು ಅಂದುಕೊಂಡಿಲ್ಲ, ಆ ಶಕ್ತಿ ನನಗಿಲ್ಲವೆಂದು ತಿಳಿದಿದ್ದೇನೆ’ ಎನ್ನು ವ ಹಾಗೂ ಶ್ರಿ ಎಚ್. ಎಸ್. ವೆಂಕಟೇಶಮೂರ್ತಿಯವರ ‘ಕುವೆಂಪುರವರ ಮಲೆನಾಡ ಚಿತ್ರಗಳಂತೆ, ತೇಜಸ್ವಿಯವರ ಸ್ವಾನುಭವದ ಪ್ರಬಂಧಗಳಂತೆ ಜಯದೇವರ ಗದ್ಯ ನಮ್ಮ ಅಂತರಂಗವನ್ನು ಕಲಕುವಷ್ಟು ಸಮರ್ಥವಾಗಿದೆ.’ ಎನ್ನುವ ಮೆಚ್ಚುಗೆಯ ಮಾತುಗಳು ಜಯದೇವರ ಬರವಣಿಗೆಯ ಸಾರ್ಥಕತೆಯನ್ನು ಸಾರುತ್ತವೆ.    

ಕಾಡನ್ನು ರಕ್ಷಿಸಬೇಕೆನ್ನುವ ಇಲಾಖೆ, ಸಂಸ್ಥೆಗಳು; ಹಿಂದುಳಿದವರ, ಆದಿವಾಸಿಗಳ ಅಭಿವೃದ್ಧಿಗೆ ಶ್ರಮಿಸುವ ಇಲಾಖೆ, ಸರ್ಕಾರೇತರ ಸಂಸ್ಥೆಗಳು ಹಾಗೂ ಅಭಿವೃದ್ಧಿ ಇಲಾಖೆಗಳ ಕಾರ್ಯಕರ್ತರು ಅವಶ್ಯವಾಗಿ ಓದಲೇ ಬೇಕಿರುವ ಪುಸ್ತಕವಿದು. ಸೋಲಿಗರು ಅಥವಾ ಯಾವುದೇ ಆದಿವಾಸಿಗಳು ಅನಾಗರಿಕರು, ಹಿಂದುಳಿದವರು ಎಂದು ಭಾವಿಸಿ,  ತಮ್ಮನ್ನು ತಾವೇ  ನಾಗರಿಕರೆಂದುಕೊಂಡಿರುವವರೆಲ್ಲರ ಅಭಿಪ್ರಾಯವನ್ನು  ಈ ಪುಸ್ತಕದ ಓದು ಬದಲಿಸಿ ಆದಿವಾಸಿಗಳನ್ನು ನೋಡುವ ದೃಷ್ಟಿ ಬದಲಾಗುವುದರಲ್ಲಿ ಸಂಶಯವಿಲ್ಲ. ಜೊತೆಗೆ ನಿಜವಾಗಿ ಕಾಡನ್ನು ನಾವು ಪುನರ್ನಿರ್ಮಿಸಬಲ್ಲೆವೇ? ಕಾಡನ್ನು ರಕ್ಷಿಸುವುದು ಹೇಗೆಂಬ ಬಗ್ಗೆ ಒಳನೋಟ ಸಹ  ದೊರಕಬಲ್ಲದು. ಹಾಗಾಗಲಿ ಎಂದು ಆಶಿಸುತ್ತ, ಇಂಥ ಪುಸ್ತಕವನ್ನು ನೀಡಿದ ಶ್ರೀ ಜಯದೇವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.  

‍ಲೇಖಕರು Admin

October 10, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: