ಎಸ್ ದಿವಾಕರ್ ಕಂಡಂತೆ ‘ಗುಡಿ ಗಂಟೆ’

ಎಸ್ ದಿವಾಕರ್

ನನ್ನ ಆತ್ಮೀಯ ಗೆಳೆಯರಾದ ನಲ್ಲತಂಬಿ ಮುಖ್ಯ ಕತೆಗಾರರು, ಕನ್ನಡ ತಮಿಳು ಎರಡು ಭಾಷೆಗಳಲ್ಲೂ ನುರಿತ ಭಾಷಾಂತರಕಾರರು. ಅವರು ಅನುವಾದಿಸಿರುವ ಹೆಸರಾಂತ ತಮಿಳು ಲೇಖಕ ತಿ. ಜಾನಕಿರಾಮನ್ ಅವರ 17 ಸಣ್ಣಕತೆಗಳ ಈ ಸಂಕಲನವನ್ನು ಓದಿ ನನಗಾದ ಸಂತೋಷವನ್ನು ಮುನ್ನುಡಿಯ ರೂಪದ ಈ ಬರಹದಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಈ ಸಂಕಲನದ ಮೊದಲ ಕತೆ ‘ಗಟ್ಟಿಮೇಳ’. ಇದು ತಮಿಳಿನಲ್ಲಿ ಮೊದಲು  ಪ್ರಕಟವಾದದ್ದು ೧೯೫೧ರಲ್ಲಿ; ಕೊನೆಯ ಕತೆ ೧೯೭೦ರಲ್ಲಿ. ಅಂದರೆ ಐವತ್ತು ವರ್ಷಗಳಿಗೂ ಹಿಂದಿನ ಕತೆಗಳಿವು. ಕನ್ನಡದಲ್ಲಿ ಅಷ್ಟು ಹಿಂದೆ ಬರೆಯುತ್ತಿದ್ದವರು ಪ್ರಗತಿಶೀಲರು. ಇಲ್ಲಿನ ಕೆಲವಾದರೂ ಕತೆಗಳನ್ನು ಓದುವಾಗ ಈ ಅಂಶವನ್ನು ಗಮನದಲ್ಲಿಟ್ಟುಕೊಂಡರೆ ಒಳ್ಳೆಯದು.

ತಿ. ಜಾನಕಿರಾಮನ್ (೧೯೨೧-೧೯೮೨) ಅತ್ಯಂತ ಪ್ರತಿಭಾವಂತ ಕತೆಗಾರರು ಮತ್ತು ಕಾದಂಬರಿಕಾರರು. ತಂಜಾವೂರು ಜಿಲ್ಲೆಯ ಬದುಕನ್ನು ಅತ್ಯಂತ ಸೂಕ್ಷ್ಮವಾಗಿ ನಿರೂಪಿಸುವ ಅವರ ಕಾದಂಬರಿಗಳು ತಮ್ಮ ಭಾವಗೀತಾತ್ಮಕ ಗುಣದಿಂದ ಈಗಲೂ ತಮಿಳು ಸಾಹಿತ್ಯದ ಕ್ಲಾಸಿಕ್ ಕೃತಿಗಳೆನಿಸಿವೆ. ಅವರ ಸಣ್ಣಕತೆಗಳು ತಿಳಿಹಾಸ್ಯ, ಅನುಕಂಪ, ಘನತೆ ಮೊದಲಾದ ಗುಣಗಳಿಂದ ಯಾವ ಕೊರೆಯೂ ಇಲ್ಲದ ಅಮೋಘ ಕೃತಿಗಳಾಗಿವೆ.

ತಮಿಳು ಜೀವನವನ್ನು ಉಸಿರಾಡುವ ಭಾಷೆಯಿಂದ, ಆ ಜೀವನವನ್ನು ದೂರ ನಿಂತು ಪರಿಭಾವಿಸುವ ನಿರೂಪಣಾ ಕೌಶಲ್ಯದಿಂದ ಓದುಗರನ್ನು ಆವರಿಸಿಕೊಳ್ಳುವ ಈ ಕತೆಗಳು ಮನುಷ್ಯ ಸಹನೆಯಿಂದ, ಪ್ರೀತಿಯಿಂದ ತುಂಬಿ ತುಳುಕುತ್ತವೆ. ಇಲ್ಲಿನ ವಿವರಗಳಿಗೆ, ಪಾತ್ರಗಳ ಕ್ಯಾಶ್ಯುಯಲ್ ಭಾವಾಭಿನಯಗಳಿಗೆ ಎಂಥ ಸಹಜತೆಯಿದೆಯೆಂದರೆ ಅವು ಕತೆಗಾರರ ಕಲ್ಪನೆಯಲ್ಲವೇ ಅಲ್ಲ ಎನ್ನುವಷ್ಟು ಜೀವಂತಿಕೆಯಿ೦ದಿವೆ. ಕತೆಗಳಲ್ಲಿ ವಿವರ ವರ್ಣನೆಗಳಿಗಿಂತ ಮಿಗಿಲಾಗಿ ಸಂಭಾಷಣೆಗೇ ಹೆಚ್ಚು ಒತ್ತು ಕೊಡಲಾಗಿದೆ. ಹಾಗಾಗಿ ಇಲ್ಲಿನ ಪಾತ್ರಗಳು ಆಡುವ ಮಾತುಗಳೇ ಅವುಗಳ ವ್ಯಕ್ತಿತ್ವ, ಮನೋಧರ್ಮ, ಸೂಕ್ಷ್ಮಜ್ಞತೆ, ಬದುಕನ್ನು ಕುರಿತ ಅನುಭವ ಮೊದಲಾದವುಗಳನ್ನು ಅನಾವರಣಗೊಳಿಸುತ್ತವೆ. ಹಾಗೆ ನೋಡಿದರೆ ಇದು ನಮ್ಮ ಪ್ರಗತಿಶೀಲರ ಕಾಲದ, ಅದರಲ್ಲೂ ಮುಖ್ಯವಾಗಿ ಅ.ನ.ಕೃ., ನಿರಂಜನರ೦ಥವರ ನಿರೂಪಣಾ ಶೈಲಿಗೆ ಹತ್ತಿರವಾದದ್ದು. ಅವರ ಕತೆಗಳಲ್ಲಿರುವ ಹಾಗೆಯೇ ಈ ಕತೆಗಳಲ್ಲಿಯೂ ಸಣ್ಣ ಸಣ್ಣ ವಾಕ್ಯಗಳಿವೆ, ಕೆಲವೇ ವಾಕ್ಯಗಳ ಪ್ಯಾರಾಗಳಿವೆ. ಆದರೆ ಜಾನಕಿರಾಮನ್ ಅವರು ಇಲ್ಲಿನ ಪಾತ್ರಗಳ ಒಳಬಾಳನ್ನು ಶೋಧಿಸುವುದಕ್ಕಾಗಿ ಉಪಯೋಗಿಸುವ ಮನೋವಿಶ್ಲೇಷಣಾ ವಿಧಾನ ಹಾಗೂ ಸ್ವಗತಲಹರಿ ಬಹುಮಟ್ಟಿಗೆ ರಾಮಚಂದ್ರ ಶರ್ಮರ ‘ಸೆರಗಿನ ಕೆಂಡ’ದ೦ಥ ಮೊದಲ ಸಂಕಲನದ ಕತೆಗಳನ್ನು ಹೇಗೋ ಹಾಗೆ ಕೆ.ಸದಾಶಿವರ ಹಾಗೂ ಶ್ರೀಕಾಂತರ ಕತೆಗಳನ್ನೂ ನೆನಪಿಸುವಂತಿವೆ.

ಜಾನಕಿರಾಮನ್ ಅವರದು ಕೆಲವೇ ಮಾತುಗಳಲ್ಲಿ ತಮ್ಮ ಪಾತ್ರಗಳ ರೂಪರೇಷೆಯನ್ನು ಕಡೆದು ನಿಲ್ಲಿಸುವ ಪ್ರತಿಭೆ. ನಿದರ್ಶನಕ್ಕಾಗಿ ‘ಗೋಪುರದ ದೀಪ’ ಕತೆಯಲ್ಲಿ ಬರುವ ಈ ವಾಕ್ಯಗಳನ್ನು ನೋಡಿ: “ನಂದಿಯ ಬಳಿ ಅರ್ಧ ಜಾಮಕ್ಕಾಗಿ ಕಾಯುತ್ತಿದ್ದ ಇಬ್ಬರು ಬೋಳಜ್ಜಿಯರು ನಿದ್ದೆಗಣ್ಣಿನಲ್ಲಿದ್ದರು. ಇಬ್ಬರಿಗೂ ಮುಂಡನ ಮಾಡಿ ಸೆರಗು ಹೊದೆಸಿದ ಶಿರಸುಗಳು, ಮಾಸಿದ ಬಿಳಿಯ ಸೀರೆ, ಹಣೆಯಲ್ಲಿ ವಿಭೂತಿ, ತಾಳೆಕಾಯಿಯಂತೆ ಮೂತಿಗಳು. ಚರ್ಮದಲ್ಲಿ ಸುಕ್ಕು. ಉಪವಾಸ ಹಸಿವಿನಿಂದ ಇಬ್ಬರೂ ಕ್ಲೇಶದಿಂದಿದ್ದಾರೋ ಏನೋ! ಇಲ್ಲದಿದ್ದರೆ ಐವತ್ತು ವರ್ಷದೊಳಗೆ ಇಷ್ಟೊಂದು ದಣಿವೂ ನಿಶ್ಶಕ್ತಿಯೂ ಯಾಕೆ? ಮನುಷ್ಯ ಜನ್ಮ ಪಡೆದೂ ಸಹ ಎಳ್ಳಷ್ಟೂ ಸುಖ ಕಾಣದ ಪಿಂಡಗಳು ಇವೆರಡೂ”. ಈ ಸಣ್ಣ ಪ್ಯಾರಾ ಪಾತ್ರಗಳ ಚಹರೆಯನ್ನು ಸ್ಪಷ್ಟಪಡಿಸುವುದಲ್ಲದೆ ಅವುಗಳ ಸಾಮಾಜಿಕ ಹಿನ್ನೆಲೆಯ ದುರಂತವನ್ನು ಕೂಡ ಸೂಚಿಸುವಷ್ಟು ಶಕ್ತವಾಗಿದೆ.

ಇಲ್ಲಿರುವ ಎಲ್ಲ ಕತೆಗಳಲ್ಲೂ ನಿಜವಾಗಿ ಉಸಿರಾಡುತ್ತಿರುವವರು ನಾವು ಜೀವನದಲ್ಲಿ ಸದಾ ಎದುರುಗೊಳ್ಳುವ, ಆದರೆ ಅಷ್ಟಾಗಿ ಗಮನಿಸದ ಸಾಮಾನ್ಯ ಮನುಷ್ಯರು. ಬಹುಮಟ್ಟಿಗೆ ಅಸಹಾಯಕರಾಗಿರುವ ಎಲ್ಲರೂ ರಾಗದ್ವೇಷಗಳಿಂದ, ದೈನಂದಿನ ತಾಪತ್ರಯಗಳಿಂದ ಬಳಲುತ್ತಿದ್ದರೂ ತಮ್ಮ ಸಣ್ಣ ಸಣ್ಣ ಸಾಹಸಗಳಿಂದ ಬದುಕಿಗೊಂದು ಅರ್ಥವನ್ನು ಕಂಡುಕೊಳ್ಳಲು ಹೆಣಗುತ್ತಿರುವವರು. ಕತೆಗಾರ ಜಾನಕಿರಾಮನ್ ಇಂಥವರ ಜಗತ್ತನ್ನು ನಿರೂಪಿಸುವಾಗ ಇವರಲ್ಲಿ ಕೆಲವೊಮ್ಮೆ ಹಠಾತ್ತಾಗಿ ಕಾಣಿಸಿಕೊಳ್ಳುವ ಸದ್ಗುಣವನ್ನೋ ವೈಪರೀತ್ಯವನ್ನೋ ಅನಿರೀಕ್ಷಿತ ರೀತಿಯಲ್ಲಿ ಕಾಣಿಸುವ ಮೂಲಕ ಕತೆಗಳಿಗೆ ಹೊಸದೊಂದು ಆಯಾಮವನ್ನೇ ಕೊಟ್ಟುಬಿಡುತ್ತಾರೆ.

‘ಸಂಗೀತ ತರಬೇತಿ’ ಕತೆಯ ಮಲ್ಲಿ, ‘ಕೊನೆಯ ಗಂಟೆ’ ಕತೆಯ ಅರಾವಮುದು, ಇಬ್ಬರೂ ಸ್ವಭಾವತಃ ಸೌಮ್ಯವಾಗಿರುವವರು. ಆದರೆ ತೀರ ಮೃದು ಸ್ವಭಾವದವರಾದ ಇವರು ಕಡೆಗೊಮ್ಮೆ ತಮ್ಮ ತಾಳ್ಮೆ ಕಳೆದುಕೊಂಡು ಆಸ್ಫೋಟಿಸುವ ಮೂಲಕ ತಮಗೇ ಅರಿವಿಲ್ಲದಂತೆ ತಮ್ಮ ತಮ್ಮ ವ್ಯಕ್ತಿತ್ವದ ಅಪರಿಚಿತ ಮುಖವನ್ನು ಅನಾವರಣಗೊಳಿಸುತ್ತಾರೆ ಮತ್ತು ತಮ್ಮ ಸ್ವಾತಂತ್ರ್ಯವನ್ನು ಪ್ರತಿಪಾದಿಸುತ್ತಾರೆ. ಉತ್ತಮ ಪುರುಷ ನಿರೂಪಣೆಯಲ್ಲಿರುವ ‘ಪುಳಕ’ ಕತೆ ಇಡಿಯಾಗಿ ಬಿಚ್ಚಿಕೊಳ್ಳುವುದು ಒಂದು ರೈಲು ಪ್ರಯಾಣದಲ್ಲಿ. ಅಪರಿಚಿತರು ಪರಿಚಿತರಾಗುವುದಕ್ಕೊಂದು ಮಾಧ್ಯಮವಾಗುವ ರೈಲಿನಲ್ಲಿ ಇಬ್ಬರು ಮಕ್ಕಳ ವಿಭಿನ್ನ ಪರಿಸ್ಥಿತಿ ಮುಖಾಮುಖಿಯಾಗುತ್ತದೆ. ನಿರೂಪಕ ಆಡುವ “ಇಬ್ಬರು ಅನಾಥರು ಊಟ ಮಾಡುವಾಗ ನನಗೆ ಅರಿಯದೆ ಮರುಕ ಹುಟ್ಟಿತು. ತಾಯಿಯನ್ನು ಬಿಟ್ಟು ಬಂದ ಅನಾಥರು! ಆದರೆ ಎಷ್ಟೊಂದು ವ್ಯತ್ಯಾಸ! ಒಂದು ಅನಾಥ ಇನ್ನು ಎರಡು ಗಂಟೆಯಲ್ಲಿ ತಾಯಿಯ ಮಡಿಲಲ್ಲಿ ಜಿಗಿದು ಕುಣಿಯುತ್ತೆ. ಮತ್ತೊಂದು ದೂರ ದೂರ ಹೋಗುತ್ತಲೇ ಇದೆ” ಎಂಬ ಮಾತುಗಳು ವಿಧಿಯ ವಿಕಟಾಟ್ಟಹಾಸವನ್ನು ಸೂಚಿಸುವಂತಿವೆ. ಕಡೆಗೆ ಒಂದು ಮಗು ತಾನು ತಿನ್ನಬೇಕೆಂದು ಆಸೆಪಟ್ಟಿದ್ದ ಕಿತ್ತಳೆಹಣ್ಣನ್ನು ಇನ್ನೊಂದು ಮಗುವಿಗೆ ಕೊಟ್ಟುಬಿಡುವ ಕ್ರಿಯೆ ಕತೆಯ ಅರ್ಥಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಪಾತ್ರಗಳ ವಿಷಯಕ್ಕೆ ಬಂದರೆ ಇಲ್ಲಿನ ಕಥಾಲೋಕದಲ್ಲಿ ಪುರುಷಾಕ್ರಮಣವನ್ನು ಅತ್ಯಂತ ಜಾಣತನದಿಂದ ಎದುರಿಸಿ ನಿಲ್ಲುವ ರುಕ್ಕು ಇದ್ದಾಳೆ; ನ್ಯಾಯಾಧೀಶರೂ ಸಂಗೀತ ರಸಿಕರೂ ಆದ, ಮಾನವೀಯ ಅನುಕಂಪದ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕುವ ವಕೀಲ್ ಅಣ್ಣ ಇದ್ದಾರೆ; ಭಾರತೀಯ ಸಂಗೀತದಿ೦ದ ಅಪರೂಪದ ಅನುಭೂತಿ ಪಡೆಯುವ ಪೋಲ್ಸ್ಕಾ ಎಂಬ ವಿದೇಶೀಯನಿದ್ದಾನೆ; ಆರೋಗ್ಯವನ್ನು ಗೆದ್ದುಕೊಂಡೆನೆ೦ದು ಬೀಗುತ್ತಿರುವಾಗಲೇ ಹೃದಯಾಘಾತಕ್ಕೆ ತುತ್ತಾಗುವ ಅಕ್ಬರ್ ಶಾಸ್ತ್ರೀ ಇದ್ದಾರೆ; ಪ್ರಾಯಶ್ಚಿತ್ತಾರ್ಥ ಗುಡಿಗೆ ಮಾಡಿಸಿಕೊಟ್ಟ ಗಂಟೆಯಿ೦ದಲೇ ಭ್ರಮಾಧೀನನಾಗಿ ಭಯಪಡುವ ಮಾರ್ಗಂ ಇದ್ದಾನೆ. ವಿಧವೆ/ವೇಶ್ಯೆಯ ದಾರುಣ ಸ್ಥಿತಿಯನ್ನು ಚಿತ್ರಿಸುವ ‘ಗೋಪುರ ದೀಪ’, ವೈಯಕ್ತಿಕ ಹಾಗೂ ಸಾಂಸ್ಥಿಕ ಎರಡೂ ರೂಪಗಳಲ್ಲೂ ಇರುವ, ಅಭಿವೃದ್ಧಿಯೆಂಬ ತೋರಿಕೆಯ ಮೋಸವನ್ನು ಕುರಿತ ಒಂದು ಪ್ಯಾರಬಲ್ ಎನ್ನಬಹುದಾದ ‘ಸೀಟೀಎನ್ = ರಪೆ’, ಅಸೂಯೆ ದ್ವೇಷವಾಗಿ ಪರಿವರ್ತನೆಗೊಳ್ಳುವ, ಆ ಮೂಲಕ ಅನ್ಯಾಯವಾಗಿ ನಡೆದುಕೊಂಡು ಬೇರೆಯವರ ಮೇಲೆ ತಪ್ಪುಹೊರಿಸುವ ‘ಪಾಯಸ’, ಇವೂ ಮುಖ್ಯ ಕತೆಗಳೇ. ಆದರೆ ಇವುಗಳಿಗಿಂತ ನನಗೆ ಹೆಚ್ಚು ಧ್ವನಿಪೂರ್ಣವೆನ್ನಿಸಿದ ಕತೆ ‘ಮುಳ್ಳು ಕಿರೀಟ’. ಇಲ್ಲಿ ಎಂದೂ ಯಾವ ಹುಡುಗನನ್ನೂ ಶಿಕ್ಷಿಸದ ಮಾಸ್ತರ್ ಅನುಕೂಲಸ್ವಾಮಿ ನಿವೃತ್ತಿಯ ನಂತರ ಹಿಂದೊಮ್ಮೆ ತಮಗೇ ಗೊತ್ತಿಲ್ಲದೆ ತಾವು ಶಿಕ್ಷಿಸಿದ ಹುಡುಗನನ್ನು ಭೇಟಿಯಾದ ಮೇಲೆ ಹೊಸದೊಂದೇ ವಾಸ್ತವವನ್ನು ಎದುರಿಸಬೇಕಾಗುವ ಪ್ರಸಂಗವಿದೆ.

ಕೊನೆಗೆ ‘ಮುಳ್ಳು ಕಿರೀಟವುಳ್ಳ ಮುಖದಲ್ಲಿ ಕರುಣೆಯ ಪ್ರವಾಹ’ ಎಂಬ ಸಾಂಕೇತಿಕ ಮಾತು ಯೇಸುಕ್ರಿಸ್ತನನ್ನು ಧ್ವನಿಸುವುದಲ್ಲದೆ ಅನುಕೂಲಸ್ವಾಮಿಯವರ ಮನಃಸ್ಥಿತಿಗೊಂದು ಪ್ರತೀಕವಾಗಿಯೂ ಸಾರ್ಥಕವೆನಿಸುತ್ತದೆ. ‘ಮನಸ್ಸಿನ ನಾಲಿಗೆ’ ದೈಹಿಕ ಆಕರ್ಷಣೆ, ವಿವಾಹೇತರ ಸೆಳೆತ, ಪ್ರೀತಿ, ಚಡಪಡಿಕೆ, ಆತಂಕ, ಅಳುಕು, ನಿರೀಕ್ಷೆ, ಹೀಗೆ ವಿವಿಧ ಭಾವಗಳನ್ನು ಮೂರ್ತಗೊಳಿಸುವ, ಒಂದು ಭಾವಗೀತೆಯಂತೆ ಮನಸ್ಸನ್ನು ಕಲಕುವ ಯಶಸ್ವೀ ಕತೆ.

ಈ ಸಂಕಲನದಲ್ಲಿ ನನಗೆ ತುಂಬ ಇಷ್ಟವಾದ ಕತೆ ‘ಗೋದಾವರಿ ಕೊಡ’. ಉತ್ತಮ ಪುರುಷ ನಿರೂಪಣೆಯಲ್ಲಿರುವ ಈ ಕತೆಯಲ್ಲಿ ಕಥಾನಾಯಕನ ಮನೆಗೆ ಬರುವ ಗಂಗಾಬಾಯಿ/ಗೋದಾವರಿ ಎಂಬ ಹೆಂಗಸು ಒಂದು ಕೊಡವನ್ನು ಇಟ್ಟುಕೊಂಡು ಎರಡು ರೂಪಾಯಿ ಕಡ ಕೊಡುವಂತೆ ಕೇಳುತ್ತಾಳೆ. ಅವಳ ಗಂಡ ದತ್ತೋಜಿರಾವ್ ಮಂತ್ರ-ತ೦ತ್ರ ಬರದ  ಪುರೋಹಿತನಷ್ಟೇ ಅಲ್ಲ, ಒಬ್ಬ ಅಲಸಿಗ ಕೂಡ. “ಗಂಗೂಬಾಯಿಯ ಸೀರೆಯಲ್ಲಿ ಕಣ್ಣಿಗೆ ಕಾಣುವಂತೆ ಹದಿನೈದು ತೇಪೆಗಳಾದರೂ ಇರಬಹುದು. ದತ್ತೋಜಿಯ ಪಂಚಕಚ್ಚೆಯಲ್ಲಿ ಅದಕ್ಕಿಂತ ಹೆಚ್ಚಾಗಿ ನಾಲ್ಕು ಇರಬಹುದೇ ಹೊರತು ಕಡಿಮೆಯಂತೂ ಇರಲಾರದು”. ಇನ್ನು ಕಥಾನಾಯಕನ ಸ್ಥಿತಿಯೇನು ಉತ್ತಮವಾಗಿದೆಯೆ? ಇಲ್ಲ. ಅವನು ತೂಗಿ ಅಳೆದು ಕೊಡುವ ಒಂದು ರೂಪಾಯಲ್ಲಿ ಗಂಗಾಬಾಯಿ ಹತ್ತಾಣೆಗೆ ಮಲ್ಲಿಗೆ ಹೂ ಕೊಂಡರೆ, ಉಳಿದ ಆರಾಣೆಯನ್ನು ಹೊಸ ಸಿನಿಮಾ ನೋಡುವುದಕ್ಕೆ ಖರ್ಚು ಮಾಡಿಬಿಡುತ್ತಾಳೆ. ಜೀವನದ ಬಗ್ಗೆ ಯಾವುದೇ ಘನ ವಿಚಾರವನ್ನು  ಹೇಳದ ಈ ಕತೆ ತನ್ನೊಡಲಿನಲ್ಲಿರುವ ಜೀವನೋತ್ಸಾಹದಿಂದಾಗಿಯೇ ಗಾಬ್ರಿಯೇಲ್ ಗಾರ್ಸಿಯಾ ಮಾರ್‌ಕೆಸ್‌ನ ‘ಬಾಲ್ತಜರ‍್ಸ್ ಮರ‍್ವಲೆಸ್ ಆಫ್ಟರ್‌ನೂನ್’ನಂಥ ಕತೆಗೆ ಸರಿಸಾಟಿಯಾಗಿ ನಿಲ್ಲುತ್ತದೆ.

ಜಾನಕಿರಾಮನ್ನರ ಕತೆಗಳ ಕ್ರಿಯಾಕ್ಷೇತ್ರ ತಂಜಾವೂರು, ದೆಹಲಿಗಳಂಥ ಪಟ್ಟಣಗಳಾಗಿರಲಿ ಅಥವಾ ಜಪಾನಿನಂಥ ದೇಶವಾಗಿರಲಿ, ಅವರ ಬರವಣಿಗೆಗೆ ನಮ್ಮನ್ನು ಸಂಪೂರ್ಣವಾಗಿ ತನ್ನ ಕಾಲ್ಪನಿಕ ಜಗತ್ತಿನಲ್ಲಿ ಮುಳುಗಿಸಿಬಿಡುವ ಶಕ್ತಿಯಿದೆ. ಜೀವನದ ಸಂತೋಷ, ದುಃಖಗಳ ನಡುವೆ ಸಮತೋಲನ ಸಾಧಿಸುವ ಈ ಕತೆಗಳು ಅವರ ಒಳನೋಟಗಳ ಆಳಗಳನ್ನು ಹೇಗೋ ಹಾಗೆ ಅವರ ಕಲಾತ್ಮಕ ಕಾಣ್ಕೆಯನ್ನೂ ಪ್ರತಿಫಲಿಸುತ್ತವೆ.

ನಲ್ಲತಂಬಿಯವರು ಮೂಲ ಕತೆಗಳಲ್ಲಿರುವ ತಮಿಳರ ಸಾಂಸ್ಕೃತಿಕ ಆವರಣವನ್ನೂ ಅಪ್ಪಟ ತಮಿಳಿನದೇ ಎನ್ನಿಸುವ ಭಾಷಾಲಯವನ್ನೂ ಕನ್ನಡಕ್ಕೆ ತರಲು ವಹಿಸಿರುವ ಶ್ರದ್ಧೆ, ಪರಿಶ್ರಮಗಳು ಈ ಅನುವಾದದಲ್ಲಿ ಎದ್ದು ಕಾಣುತ್ತವೆ. ಅವರು ಉದ್ದೇಶಪೂರ್ವಕವಾಗಿಯೇ ಕೆಲವು ತಮಿಳು ಶಬ್ದಗಳನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಉದಾಹರಣೆಗೆ ಕಟ್ಟುಪಡಿ, ಗೆಂಜಿದ, ಸಮಾಳಿಸು, ಪೊರುಕಿ, ಅಳ್ಳಿಕೊ, ಪಚ್ಚೆಲೆ, ಕುಮುಲು, ಚಾವಿ, ತಳ್ಳಿ (ಆ ಮನೆಯನ್ನು ತಳ್ಳಿ ಹೋಗಿ), ಇತ್ಯಾದಿ. ಇವುಗಳಿಗೆ ಪರ್ಯಾಯ ಕನ್ನಡ ಪದಗಳಿಲ್ಲವೆಂದಲ್ಲ. ಆದರೆ ಕನ್ನಡ ಓದುಗರಿಗೆ ಈ ತಮಿಳು ಪದಗಳು ಮೂಲ ಕತೆಗಳಲ್ಲಿರುವ ಸ್ವಾದವನ್ನು ತಕ್ಕಮಟ್ಟಿಗೆ ದಾಟಿಸುತ್ತವೆಯೆಂಬುದನ್ನು ಅಲ್ಲಗಳೆಯುವಂತಿಲ್ಲ. ಈ ಕತೆಗಳ ಅನುವಾದ ಇಷ್ಟು ಸೊಗಸಾಗಿರುವುದಕ್ಕೆ ಕಾರಣ ನಲ್ಲತಂಬಿಯವರಿಗೆ ಕನ್ನಡ ತಮಿಳು ಭಾಷೆಗಳಲ್ಲಿರುವ ವಿಶೇಷ ಪರಿಶ್ರಮ.

ಜೊತೆಗೆ ಸ್ವತಃ ಒಬ್ಬ ಸಂವೇದನಾಶೀಲರಾಗಿರುವುದರಿAದ ಭಾಷಾಂತರಕ್ಕೆ ಬೇಕಾದ ವ್ಯುತ್ಪತ್ತಿಯೂ ಅವರಲ್ಲಿದೆ. ಜಾನಕಿರಾಮನ್ ಅವರು ನಮ್ಮ ಸಸ್ಯಶಾಸ್ತçಜ್ಞ, ಲೇಖಕ ಬಿ.ಜಿ.ಎಲ್.ಸ್ವಾಮಿಯವರ ಆಪ್ತಮಿತ್ರರಲ್ಲಿ ಒಬ್ಬರಾಗಿದ್ದರು. ಒಮ್ಮೆ ನಾನು ಮದರಾಸಿನಲ್ಲಿ ಸ್ವಾಮಿಯವರ ಮನೆಯಲ್ಲೇ ಅವರನ್ನು ನೋಡಿದ್ದೆ. ಅವರ ಹಸನ್ಮುಖ, ಎದುರಿಗಿದ್ದವರನ್ನು ಒಲಿಸಿಕೊಳ್ಳುವಂತೆ ಆಡುತ್ತಿದ್ದ ಅವರ ಮೆಲುಮಾತು ಇನ್ನೂ ನನ್ನ ನೆನಪಿನಲ್ಲಿವೆ. ನಲ್ಲತಂಬಿಯವರ ಈ ಅನುವಾದಿತ ಕತೆಗಳನ್ನು ಓದುವಾಗ ಅದೇಕೋ ನನಗೆ ಅವರ ಮೃದುಮಾತುಗಳೇ ನೆನಪಾಗುತ್ತಿದ್ದವು.

‍ಲೇಖಕರು Admin

June 16, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: