ಸಂತೋಷ್ ಅನಂತಪುರ ಅವರ ಹೊಸ ಪ್ರಬಂಧ ಸಂಕಲನ ‘ಆಳ ನೀಳ’ ಬಿಡುಗಡೆಯಾಗುತ್ತಿದೆ
ನವಕರ್ನಾಟಕ ಪ್ರಕಾಶನ ಈ ಕೃತಿಯನ್ನು ಪ್ರಕಟಿಸುತ್ತಿದೆ
ಇದಕ್ಕೆ ಹಿರಿಯ ವಿಮರ್ಶಕರಾದ ಎಸ್ ದಿವಾಕರ ಅವರು ಬರೆದಿರುವ ಮುನ್ನುಡಿ ಇಲ್ಲಿದೆ-
ಎಸ್. ದಿವಾಕರ್
ಮನುಷ್ಯನ ಹಾಗೆ ಶಿಕ್ಷಣಕ್ಕೆ ತೆರೆದುಕೊಳ್ಳುವ ಪ್ರಾಣಿ ಇನ್ನೊಂದಿಲ್ಲ. ಶಿಕ್ಷಣದಿಂದಾಗಿಯೇ ಅವನು ಯಾವುದು ಒಳಿತು, ಯಾವುದು ಕೆಡುಕು ಎಂಬುದನ್ನು ಅರಿಯಬಲ್ಲ; ನಂಬಿಕೆಗೂ ವಾಸ್ತವಾಂಶಕ್ಕೂ ಇರುವ ಅಂತರವನ್ನು, ಅಜ್ಞಾನಕ್ಕೂ ವಿವೇಕಕ್ಕೂ ನಡುವೆ ಇರುವ ಕಂದರವನ್ನು ಗ್ರಹಿಸಬಲ್ಲ. ಹೀಗೆ ಕಲಿಯುವ, ಗ್ರಹಿಸುವ ಪ್ರಕ್ರಿಯೆಯಿಂದಾಗಿಯೇ ಸಂಸ್ಕಾರಗೊಳ್ಳುವ ಅವನು ಕ್ರಮೇಣ ‘ನಾಗರಿಕ’ನಾಗಬಲ್ಲ.
ಯಾವ ಸಮಾಜ ಮನುಷ್ಯ ಜೀವನ ಹೇಗಿರಬೇಕೆಂದು ಸದಾ ತನ್ನೊಳಗೆ ತಾನೇ ಚರ್ಚಿಸುತ್ತಿರುತ್ತದೆಯೋ ಅದು ನಾಗರಿಕ ಸಮಾಜ. ಅಂಥ ಸಮಾಜ ಬೇಕೆಂದರೆ ನಮ್ಮಲ್ಲಿ ಪ್ರತಿಯೊಬ್ಬರೂ ಆ ಚರ್ಚೆಯಲ್ಲಿ ಭಾಗಿಗಳಾಗಲೇಬೇಕು.
ಮನುಷ್ಯ ಇಡೀ ಪ್ರಕೃತಿಯನ್ನು ನಿಯಂತ್ರಿಸುತ್ತಾನೆ, ನಿಜ. ಆದರೆ ಪ್ರಕೃತಿಯ ಒಂದು ಭಾಗವೇ ಆಗಿರುವ ಮನುಷ್ಯ ಮಾತ್ರ ತನ್ನನ್ನು ತಾನು ನಿಯಂತ್ರಿಸಿಕೊಳ್ಳಲಾರ. ಈ ಲೋಕದ ಪ್ರಾಣಿಗಳಲ್ಲಿ ಹುಟ್ಟಿನ ಜೊತೆಗೇ ಬರುವ ಮೂಲ ಪ್ರವೃತ್ತಿಗಳು ಅವುಗಳ ಸಹಜ ಬಾಳ್ವೆಗೆ ಸಾಕಾಗುತ್ತವೆ. ಆದರೆ ಮನುಷ್ಯನದು ರ‍್ಯಾಷನಲ್’ ಸ್ವಭಾವವಾದ್ದರಿಂದ ಅವನು ಕೇವಲ ಪ್ರವೃತ್ತಿಗಳಿಂದಷ್ಟೇ ಮನುಷ್ಯನಾಗಲಾರ. ಯಶವಂತ ಚಿತ್ತಾಲರು ಒಂದೆಡೆ ಬರೆದಿರುವಂತೆ “ನಾವು ಮನುಷ್ಯರಾಗಿ ಹುಟ್ಟಿದವರಲ್ಲ; ಮನುಷ್ಯರಾಗಲು ಹುಟ್ಟಿದವರು.” ಮನುಷ್ಯರಾಗುವ ಪ್ರಕ್ರಿಯೆಯಲ್ಲಿ ನಾವು ಕೇಳಿಕೊಳ್ಳುವ ಬಹು ಮುಖ್ಯ ಪ್ರಶ್ನೆಗಳಲ್ಲಿ ‘ಹೇಗೆ ಬದುಕುವುದು’ ಎಂಬುದೂ ಒಂದು. ಇದಕ್ಕೆಇರುವ ಇನ್ನೂ ಕೆಲವು ಉಪ ಪ್ರಶ್ನೆಗಳೆಂದರೆ ನಮ್ಮ ಜೀವನಕ್ಕೆ ಅರ್ಥ ತಂದುಕೊಡುವ ಸಂಪನ್ಮೂಲಗಳು ಎಲ್ಲಿವೆ? ಒಬ್ಬನ ಬಾಳು ಸಮಾಜದ ಇತರರಿಗೂ ಬೆಲೆಯುಳ್ಳದ್ದಾಗಬಲ್ಲುದೆ? ನಾವು ಅನುಭವವನ್ನು ಹೇಗೆ ಅಮೂಲ್ಯಗೊಳಿಸಬಹುದು? ಜೀವನದಲ್ಲಿ ಕಲಿಯುತ್ತಲೇ ಆತ್ಮಜ್ಞಾನವನ್ನು ಹೇಗೋ ಹಾಗೆ ಇತರರ ಬಗೆಗಿನ ಜ್ಞಾನವನ್ನೂ ಹೇಗೆ ಗಳಿಸಬಹುದು? ಬ್ರಿಟಿಷ್ ತತ್ವಶಾಸ್ತ್ರಜ್ಞ ಎ. ಸಿ. ಗ್ರೇಲಿಂಗ್‌ನ ಪ್ರಕಾರ ಮನುಷ್ಯರಾಗಲು ನಮಗಿರುವ ಸಂಪನ್ಮೂಲಗಳೆಂದರೆ ಕಲೆ, ಪ್ರೀತಿ ಮತ್ತು ಜ್ಞಾನಸಾಧನೆ. ಇವುಗಳನ್ನು ಗಮನದಲ್ಲಿಟ್ಟುಕೊಂಡರೆ ನಮ್ಮ ಪ್ರಶ್ನೆಗಳಿಗೆ ಉತ್ತರಗಳು ಸಿಕ್ಕಬಹುದು. ಮತ್ತೆ ಇವು ನಮ್ಮಲ್ಲಿ ನಿರೀಕ್ಷಣಾ ಭಾವವನ್ನು ಮೂಡಿಸಿ, ನಾವು ವಸ್ತುವಿಷಯಗಳ ಬಗ್ಗೆ ಆಳವಾಗಿ ಚಿಂತಿಸಲೂ ಸಹಾಯಕ.
ಪ್ರಿಯ ಮಿತ್ರ ಸಂತೋಷ್ ಅನಂತಪುರ ಅವರ ಈ ಕೃತಿಯಲ್ಲಿ ಒಟ್ಟು ೩೧ ಪುಟ್ಟ ಪುಟ್ಟ ಪ್ರಬಂಧಗಳಂಥ ಲೇಖನಗಳಿವೆ. ಜೀವನದ ಮುಖ್ಯ ಮೌಲ್ಯಗಳನ್ನು ಪ್ರತಿಪಾದಿಸುವ, ಆ ಮೌಲ್ಯಗಳನ್ನು ನಮ್ಮ ಸಂಸ್ಕೃತಿಯ ಹಿನ್ನೆಲೆಯಲ್ಲಿ ವಿಶ್ಲೇಷಣೆಗೊಳಪಡಿಸುವ ಲಲಿತ ಶೈಲಿಯ ಈ ಪ್ರಬಂಧಗಳಲ್ಲಿ ಸುಖ ದುಃಖ ಸ್ನೇಹ ಯೌವನ ದಾಂಪತ್ಯ ಕುಟುಂಬ ಮನಸ್ಸು ನೆನಪು ಅರಿವು ಮುಗ್ಧತೆ ನಂಬಿಕೆ ಭರವಸೆ ಸತ್ಯ ಸೌಂದರ್ಯ ಮಾತೃತ್ವ ಬೆಳಕು ವ್ಯಕ್ತಿತ್ವವಿಕಾಸ, ಅಭ್ಯಾಸ ಸಾಧನೆ, ಹೀಗೆ ಎಷ್ಟೆಲ್ಲ ವಿಷಯಗಳು! ವಿಷಯ ನಿರೂಪಣೆಯ ತೀವ್ರತೆಯೊಡನೆ ಸಂಕ್ಷಿಪ್ತವಾಗಿಯೂ ಇರುವ ಈ ಪ್ರಬಂಧಗಳ ಉದ್ದೇಶ ಇದುವರೆಗೆ ಏನೆಲ್ಲ ಚಿಂತಿಸಲಾಗಿದೆ, ಯಾವುದರ ಬಗ್ಗೆ ಚಿಂತಿಸಬೇಕು, ಯಾಕೆ ಚಿಂತಿಸಬೇಕು, ಚಿಂತನೆಯಿಂದ ಪಡೆದುಕೊಳ್ಳುವ ಸಾರಾಸಾರ ವಿಚಾರಗಳನ್ನು ಯುಕ್ತಾಯುಕ್ತಿಯಿಂದ ಸ್ವೀಕರಿಸಿ ನಮ್ಮ ಜೀವನವನ್ನು ಹೇಗೆ ಸುಧಾರಿಸಿಕೊಳ್ಳಬಹುದು ಎಂಬ ಪ್ರಶ್ನೆಗಳನ್ನು ಎತ್ತುವ ಮೂಲಕ ಓದುಗರ ಜೊತೆ ಸಂವಾದ ನಡೆಸುವುದು. ಇಂಥ ಸಂವಾದಕ್ಕಾಗಿಯೇ ಸಂತೋಷ್ ಅವರು ಅನುಸರಿಸುವ ನಿರೂಪಣಾ ವಿಧಾನ, ಕೊಡುವ ಪ್ರಮಾಣಗಳು, ಹೂಡುವ ವಾದಸರಣಿ, ಇವೆಲ್ಲವೂ ಓದುಗರನ್ನು ಪ್ರೇರೇಪಿಸಿ ಅವರನ್ನು ವಿಚಾರ-ವಿವೇಕದ ಮಾರ್ಗದಲ್ಲಿ ಕರೆದೊಯ್ಯಬಯಸುವ ಆಶಯವನ್ನು ಪ್ರತಿಫಲಿಸುತ್ತವೆ. ಹಾಗೆ ನೋಡಿದರೆ ಭಾವಗೀತೆಗೆ ಸಹಜವಾದ ಒಂದು ಮನೋವಿಲಾಸ ಇಲ್ಲಿನ ಬರಹಗಳಲ್ಲಿದೆ. ಜೊತೆಗೆ ಉಚಿತವೆನಿಸುವ ಕಡೆಗಳಲ್ಲೆಲ್ಲ ಉಪಮೆ, ಪ್ರತಿಮೆ, ಅನ್ಯೋಕ್ತಿ ಮುಂತಾದವು ಒಮ್ಮೊಮ್ಮೆ ತಿಳಿಹಾಸ್ಯದೊಡನೆ ಕಾಣಿಸಿಕೊಂಡು ಇಲ್ಲಿನ ಬರಹಗಳಿಗೊಂದು ಆತ್ಮೀಯ ಧಾಟಿಯನ್ನು ಕಲ್ಪಿಸಿಕೊಟ್ಟಿವೆ.
ಕೆಲವು ಪ್ರಬಂಧಗಳ ಶೀರ್ಷಿಕೆಗಳನ್ನು ನೋಡಿ: ‘ಒಬ್ಬ ವ್ಯಕ್ತಿ ನಮ್ಮನ್ನು ನೋಯಿಸಿದಾಗ’, ‘ನೆನಪುಗಳ ಸೌಗಂಧಿಕಾ’, ‘ಯೌವನವೆಂಬ ಚೈತ್ರ ಸುಗಂಧ’, ‘ಅಂತರಂಗದ ಅರಿವು-ಬಹಿರಂಗದ ಕ್ರಿಯೆ’, ‘ಹೆತ್ತೊಡಲು ಕಡಲು’, ‘ಶಾಂತ ಕಡಲೊಳು ಬೀಸಿದ ಬಿರುಗಾಳಿ’, ಇತ್ಯಾದಿ. ಇವು ಪ್ರಬಂಧಗಳ ಅಂತರಂಗವನ್ನು ಕಾಣಿಸುವ ಕಿಟಕಿಗಳು. ಇನ್ನು ಕೆಲವು ಪ್ರಬಂಧಗಳಲ್ಲಿ ಒಂದು ಶಬ್ದದ ಬೆನ್ನು ಹತ್ತಿ ಸಮಾಜದಲ್ಲಿ ಅದಕ್ಕೆ ಏನೆಲ್ಲ ಅರ್ಥವ್ಯಾಪ್ತಿ ಇದೆಯೆಂದು ಶೋಧಿಸುವ ಪ್ರಯತ್ನವಿದ್ದರೆ, ಮತ್ತೆ ಕೆಲವಲ್ಲಿ ದಿನನಿತ್ಯದ ಬದುಕಿನ ಅನುಭವಗಳನ್ನು ಧ್ಯಾನಿಸುವ ಮೂಲಕ ಹೊಸ ಅರಿವನ್ನೋ ಅರ್ಥವನ್ನೋ ಕಂಡುಕೊಳ್ಳುವ ಪ್ರಯತ್ನವಿದೆ.
‘ಬೆಳಕ ದಾಟಿಸುವ ಹಣತೆಯೂ.. ಒಳ್ಳೆಯವರಾಗುವ ವ್ಯಸನವೂ….’ ಎಂಬ ಪ್ರಬಂಧದ ವಿಶೇಷವೆಂದರೆ ಅದು ಒತ್ತಿ ಹೇಳುವ ಆತ್ಮಜ್ಞಾನದ ಮಹತ್ವ. “ಕಾಲವೇ ನಮ್ಮನ್ನು ಬಂಧಿಯಾಗಿಸುತ್ತದೆನ್ನುವ ವಿವೇಕವೂ ಇಲ್ಲದೆ ಬೇರೆಯವರು ನಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂದು ಚಿಂತಿಸುವುದರಲ್ಲೇ ಹೆಚ್ಚಿನ ಕಾಲವನ್ನು ಕಳೆಯುತ್ತೇವೆ. ಇನ್ನೊಬ್ಬರ ಯೋಚನೆಯೊಳಗೆ ನಾವು ಹೇಗಿರಬೇಕು ಎನ್ನುವುದರೊಳಗೇ ನಾವು ನಾವಾಗಿ ಹೇಗಿರಬೇಕೆನ್ನುವ ವಿಚಾರವೇ ಮಾಸಿ ಹೋಗಿರುತ್ತದೆ.” ಈ ಪ್ರಬಂಧವನ್ನು ಓದುತ್ತಿರುವಾಗ ನನಗೆ ಗೋಪಾಲಕೃಷ್ಣ ಅಡಿಗರ ‘ಒಳ್ಳೆತನ ಸಹಜವೇನಲ್ಲ’ ಎಂಬ ಕವನ ನೆನಪಾದದ್ದು ಆಕಸ್ಮಿಕವಾಗಿರಲಾರದು. ಒಳ್ಳೆತನವೆನ್ನುವುದು ಕೂಡ ಆತ್ಮಜ್ಞಾನಕ್ಕೆ ಎರವಾಗಿ ಇನ್ನೊಬ್ಬರ ಮೆಚ್ಚುಗೆಯನ್ನು ಗಳಿಸುವ ಉದ್ದೇಶವುಳ್ಳ ಆತ್ಮವಂಚನೆಯಾಗಿರಬಾರದೇಕೆ?
ಇಲ್ಲಿನ ಒಂದೊಂದು ಪ್ರಬಂಧದಲ್ಲೂ ಓದುಗರನ್ನು ತಡೆದು ನಿಲ್ಲಿಸಿ, ಅವರು ಕ್ಷಣ ಕಾಲ ಯೋಚಿಸುವಂತೆ ಮಾಡಬಲ್ಲ ವಾಕ್ಯವೃಂದಗಳಿವೆ. ಉದಾಹರಣೆಗೆ, “ಜೀವ ಪ್ರೀತಿಸುವ ಕಲೆಗಳೊಳಗೆ ಮಾತ್ರ ಮುಗ್ಧತೆಯನ್ನು ತುಂಬಿಸಿ ಇಟ್ಟಿದ್ದಾರೇನೋ ಎಂದು ಸ್ಪರ್ಶ ಸಂವೇದನೆಯನ್ನು ಕಳಕೊಂಡ ಜೀವಗಳನ್ನು ಕಂಡಾಗ ಅನಿಸುವುದಿದೆ. ಬರಿದಾದ ನೆಲಕ್ಕೆ ಒಸರಿನ ಹಂಗನ್ನು ಜೋಡಿಸುವ ಹಾಗೆ ಮುಗ್ಧ ಕ್ಷಣಗಳನ್ನು ಕಮರ್ಷಿಯಲ್ ಪರದೆಯ ಮೇಲೆ ಸೃಷ್ಟಿಸಿಬಿಡುತ್ತೇವೆ. ಅದನ್ನು ಕಣ್ಣಲ್ಲಿ ತುಂಬಿಸಿಕೊಂಡು ಒಂದರೆಕ್ಷಣ ಆರ್ದ್ರರಾಗಿಯೂ ಬಿಡುತ್ತೇವೆ.” (‘ಮುಗ್ಧತೆ ಎನ್ನುವ ತುಳಸೀದಳ’); “ಸಾತ್ವಿಕವಲ್ಲದ ಸಿಟ್ಟಿಗೆ ಈ ಜಗತ್ತಿನಲ್ಲಿ ಬೆಲೆಯಿಲ್ಲ ಎನ್ನುವುದರ ಅರಿವಿರಬೇಕು. ಭುಸುಗುಟ್ಟಲು ಸಿಟ್ಟಿರಬೇಕು, ಕಚ್ಚಲಲ್ಲ. ಸಿಟ್ಟು ನೆತ್ತಿಗೇರುವುದು ಎಷ್ಟು ಅಪಾಯವೋ ಅಷ್ಟೇ ಅಪಾಯ ಸಿಟ್ಟಿಗೆ ಅವಕಾಶವನ್ನು ಕಲ್ಪಿಸಿಕೊಡುವುದು. ನಮ್ಮದಲ್ಲದ ಕ್ರಿಯೆಗೆ ಪ್ರತಿಕ್ರಿಯಿಸುವುದು ಸಲ್ಲ. ಕ್ರಿಯೆ ನಮ್ಮದೇ ಆಗಿದ್ದರೂ ಸಹ ವಿಕೋಪಕ್ಕೆ ಎಳೆದೊಯ್ಯುವುದೂ ಸಹ್ಯವಲ್ಲ. ಕ್ರಿಯೆಗಳು ನಮಗೆ ಸಂಬಂಧಪಟ್ಟದ್ದೇ ಅಲ್ಲವೇನೋ ಎಂದು ನಿರ್ಲಿಪ್ತರಾಗುವುದಿದೆ ನೋಡಿ, ಅದಕ್ಕಿಂತ ದೊಡ್ಡ ಪ್ರತ್ಯಸ್ತ್ರ ಇನ್ನೊಂದಿಲ್ಲ.” (‘ಕಟ್ಟಿದ್ದು ಮುರಿದು ಬಿದ್ದಾಗಲೇ ಇರುವುದರ ದರ್ಶನ’); “ಡಿಟ್ಯಾಚ್‌ಮೆಂಟ್ ಇರಬೇಕು. ನಮ್ಮ ಪ್ರೀತಿಯ ವಸ್ತು ನಮ್ಮಿಂದ ದೂರವಾದರೆ ವ್ಯಥೆ ಪಡದೆ, ಒಮ್ಮೆ ತಿರುಗಿ ನೋಡಿಕೊಳ್ಳಿ. ಅಲ್ಲಿ ಯಾವುದು ತಾನೆ ಶಾಶ್ವತವಾಗಿತ್ತು?…. ಶಾಶ್ವತವಲ್ಲದ್ದಕ್ಕೆ ತಲೆ ಕೆಡಿಸಿಕೊಂಡು ಸುಂದರ ಬದುಕನ್ನು ಕಳೆದುಕೊಳ್ಳುವುದರಲ್ಲಿ ಅರ್ಥವಿಲ್ಲ.” (‘ಅಂತರಂಗದ ಅರಿವು-ಬಹಿರಂಗದ ಕ್ರಿಯೆ’); ಪ್ರೀತಿಯು ಮನುಷ್ಯನನ್ನು ಎಂದಿಗೂ ಕೈದಿಯನ್ನಾಗಿಸುವುದಿಲ್ಲ. ಅದು ಆತನನ್ನು ಸ್ವತಂತ್ರನನ್ನಾಗಿಸುತ್ತದೆ. ಬಲಯುತವಾದ ಪ್ರೇಮಾನುಬಂಧವನ್ನು ಹುಟ್ಟುಹಾಕುವುದು ಮಹೋತ್ತರವಾದ ಶಕ್ತಿ. ಕೇವಲ ಅನುಭೂತಿ, ಸೋಮಾರಿತನ, ನಿಸ್ಸಹಾಯಕತೆ ಪ್ರೇಮಬಂಧವನ್ನು ಏರ್ಪಡಿಸಲಾರವು. ಸೌಂದರ್ಯವನ್ನು ಆನಂದಿಸಬೇಕೆಂದರೆ ಅದಕ್ಕೂ ಮುಂಚೆ ನಾವು ಅದನ್ನು ಆಸ್ವಾದಿಸುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು” (‘ಮನಸೇ ಸುಖ-ದುಃಖದ ಮೂಲ ನೆಲೆ’).
‘ಹುಷಾರು ಮಗಳೇ, ದೇವರ ಹೆಸರಲ್ಲಿ ದಾನವರೂ ಬಂದಾರು’ ಎಂಬ ಪ್ರಬಂಧ ತನ್ನ ಲಾಲಿತ್ಯದಿಂದ, ಸುಕುಮಾರತೆಯಿಂದ ಗಮನ ಸೆಳೆಯುತ್ತದೆ. ‘ಮಳೆಯ ಕನವರಿಕೆಯಲ್ಲಿ’ ನೆನಪುಗಳ ಒಂದು ಮೆರವಣಿಗೆಯೇ ಇದ್ದರೂ, ಮಳೆಯನ್ನು ಇಂದ್ರಿಯಗಮ್ಯವಾಗುವಂತೆ ಚಿತ್ರಿಸಬಲ್ಲ ಧ್ವನಿಪೂರ್ಣ ವಿವರಗಳಿಲ್ಲದೆ, ಸ್ವಾನುಭವವಿಶೇಷವಿಲ್ಲದೆ ಅದು ಒಳ್ಳೆಯದೊಂದು ಲಲಿತ ಪ್ರಬಂಧವಾಗದೆ ಹೋಯಿತೇನೊ.
ಸೂಕ್ಷ್ಮವಾಗಿ ಓದಿದಾಗ ಇಲ್ಲಿನ ಕೆಲವು ಪ್ರಬಂಧಗಳು ವ್ಯಕ್ತಿತ್ವವಿಕಸನಕ್ಕಿಂತ ಮಿಗಿಲಾಗಿ ಸಾಮಾನ್ಯಜ್ಞಾನದ ಪ್ರಾಮುಖ್ಯತೆಯನ್ನು ಪ್ರತಿಪಾದಿಸುವಂತಿವೆ. ಸಾಮಾನ್ಯಜ್ಞಾನ ಎಂದರೇನು? ಕೆ. ವಿ. ಅಕ್ಷರ ಒಂದೆಡೆ ಬರೆದಿರುವಂತೆ “ಸಾಮಾನ್ಯಜ್ಞಾನ – ಕಾಮನ್‌ಸೆನ್ಸ್ – ಎಂಬುದು ಪ್ರಚ್ಛನ್ನ ರೂಪದಲ್ಲಿ ಅಡಗಿ ಕುಳಿತಿರುವ ಒಂದು ನಿರ್ದಿಷ್ಟ ‘ಸಿದ್ಧಾಂತ’; ಅದೇನೂ ಸಾರ್ವಕಾಲಿಕ ಸರ್ವಗ್ರಾಹ್ಯ ಸತ್ಯವಲ್ಲ. ಹಲವೊಮ್ಮೆ ಅದು ಸವಕಳಿಯಾಗಿರುವ ಒಂದು ಹಳೆಯ ಸಿದ್ಧಾಂತದ ಪಳೆಯುಳಿಕೆಯಾಗಿ ನಮ್ಮ ಮನಸ್ಸಿನಲ್ಲಿ ಉಳಿದಿರುವ ಒಂದು ಅವಶೇಷ; ಮತ್ತು ಅದು ಎಲ್ಲವನ್ನೂ ಹೊಸತಾಗಿ ಪ್ರಶ್ನಿಸಿ ಚರ್ಚಿಸಲು ಬಯಸದಿರುವ ನಮ್ಮ ಬೌದ್ಧಿಕ ಸೋಮಾರಿತನಕ್ಕೆ ಕೂಡಾ ಒಂದು ನೆಪ. ಆಧುನಿಕ ಜೀವನಕ್ರಮದಲ್ಲಿ ನಾವಿವತ್ತು ಹಲವು ಪದಗಳನ್ನೂ ಮತ್ತು ಆ ಪದಗಳೊಂದಿಗೆ ಅಂತರ್ಗತವೂ ಗ್ರಹೀತವೂ ಆಗಿರುವ ವಿಚಾರಗಳನ್ನು ಈ ಬಗೆಯ ‘ಸಾಮಾನ್ಯಜ್ಞಾನ’ವಾಗಿ ತುಂಬಾ ಸಹಜವೂ ಪರಿಚಿತವೂ ಎಂದು ಭಾವಿಸಿ ಸ್ವೀಕರಿಸಿದ್ದೇವೆ.” ಸಂತೋಷ್ ಅವರಿಗೆ ಇಂಥ ಅರಿವಿರುವುದರಿಂದಲೇ ಅವರು ದಿನನಿತ್ಯ ನಾವು ಎದುರುಗೊಳ್ಳುವ, ಆದರೆ ಅವುಗಳನ್ನು ಗುರುತಿಸಿಯೂ ಅಷ್ಟಾಗಿ ಗಮನಿಸದ ವಿವಿಧ ಸಮಸ್ಯೆಗಳನ್ನು ಹಾಗೂ ನಡಾವಳಿಗಳನ್ನು ಅವು ಇರುವ ಹಾಗೆಯೇ ಸ್ವೀಕರಿಸುವುದಿಲ್ಲ. ಮತ್ತೆ ಅವರದು ಪರಿಶೀಲನೆಯೇ ಹೊರತು ಪ್ರತಿಪಾದನೆಯಲ್ಲ.
ಅರಿಸ್ಟಾಟಲನ ಮಾತಿನಲ್ಲಿ ಒಳ್ಳೆಯ ಜೀವನವೆಂದರೆ ಪರ್ಯಾಲೋಚಿಸಿದ ಜೀವನ. ನೀತಿನಿಯಮಗಳಿಲ್ಲದ ಅಸಮರ್ಥ, ಅಶಕ್ತ ಜೀವನ ಅದೃಷ್ಟವನ್ನೋ ದುರದೃಷ್ಟವನ್ನೋ ಅವಲಂಬಿಸಿರುತ್ತದೆ. ಅದು ನಮಗಾಗಿ ಇತರರು ರೂಪಿಸಿದ ದಾರಿಯಲ್ಲೇ ನಡೆಯುವಂತೆ ನಮ್ಮನ್ನು ಪ್ರೇರೇಪಿಸುತ್ತಿರುತ್ತದೆ. ಅಂಥ ದಾರಿಯನ್ನು ಅನುಸರಿಸುತ್ತ ಬದುಕು ಮಾಡುವ ಮನುಷ್ಯ ಜೀವನದ ಪರಮ ಮೌಲ್ಯಗಳ ಬಗ್ಗೆ ಕುರುಡಾಗುವುದು ಸಹಜ. ಅರಿಸ್ಟಾಟಲನ ಪ್ರಕಾರ ಪರ್ಯಾಲೋಚಿಸಿದ ಜೀವನ ರೂಪುಗೊಳ್ಳುವುದು ಸದುದ್ದೇಶಗಳಿಂದ; ಅದಕ್ಕೆ ಬಲ ಬರುವುದು ಸಮಗ್ರತೆಯಿಂದ. ಪ್ರ‍್ರಯಾಣ ಹೊರಡುವ ಮುನ್ನ ನಕ್ಷೆಯೊಂದನ್ನು ಪರಿಶೀಲಿಸುವುದಿದೆಯಲ್ಲ, ಅದು ಪ್ರಯಾಣಕ್ಕೆ ಸಮನಲ್ಲದಿದ್ದರೂ ನಮಗೆ ನಾವು ನೋಡಲಿರುವವುಗಳ ಬಗ್ಗೆ ಅತ್ಯಗತ್ಯವಾದ ಮುನ್ನೋಟವನ್ನೋ ಮಾಹಿತಿಯನ್ನೋ ನೀಡುವ ಮೂಲಕ ನಮ್ಮ ಕುತೂಹಲವನ್ನು ಕೆರಳಿಸುತ್ತದೆಯಷ್ಟೆ. ಇಲ್ಲಿನ ಪ್ರಬಂಧಗಳಲ್ಲಿ ಅಂಥದೊಂದು ನಕ್ಷೆಯಿದ್ದು ಅದು ನಮ್ಮನ್ನು ಮನುಷ್ಯವ್ಯಾಪಾರಗಳ ಲೋಕದಲ್ಲಿ ಸುತ್ತಾಡಿಸಿ ಚಿಂತನೆಗೆ ಹಚ್ಚುವಷ್ಟು ಶಕ್ತವಾಗಿದೆ. ಅದಕ್ಕಾಗಿ ಮಿತ್ರ ಸಂತೋಷ್ ಅನಂತಪುರ ನಿಜಕ್ಕೂ ಅಭಿನಂದನಾರ್ಹರು.
0 ಪ್ರತಿಕ್ರಿಯೆಗಳು