ಎಸ್.ಎಲ್.ಭೈರಪ್ಪ ಶೈಲಿಯಲ್ಲಿ

ವಾನರ ಪರ್ವ

ಎಸ್.ಎಲ್.ಭೈರಪ್ಪನವರ ಶೈಲಿಯಲ್ಲಿ
ಅಣಕು ಬರಹ ರಚನೆ : ಬೇಲೂರು

ಒಂದು ಊರು. ಅದು ಇತ್ಲಾಗೆ ಬಯಲು ಸೀಮೆಯೂ ಅಲ್ಲ ಅತ್ಲಾಗೆ ಮಲೆನಾಡೂ ಅಲ್ಲ ಅನ್ನುವಂಥದ್ದು. ಆದರೆ ಅಲ್ಲಿ ಸುತ್ತಮುತ್ತ ಮಳೆ ಮಾತ್ರ ತುಂಬಾ ಇರ‍್ತಿತ್ತು. ಆಗಿನ ಕಾಲದಲ್ಲಿ ಎಲ್ಲಾ ಊರಿನಲ್ಲೂ ಇರೋಹಾಗೆ ಆ ಊರಲ್ಲೂ ಒಂದು ಕೆರೆ, ಒಂದು ದೇವರ ಗುಡಿ ಇತ್ತು. ವಿಶೇಷ ಏನಪ್ಪಾ ಅಂದ್ರೆ ಯಾವುದೋ ಊರಲ್ಲಿ ಹುಟ್ಟಿ ಇನ್ಯಾವುದೋ ಊರಿಗೆ ಸೇರೋ ಮೊದಲು ಒಂದು ನದಿ ಆ ಊರಿನ ಮುಖಾಂತರ ಹರಿದು ಹೋಗ್ತಿತ್ತು. ಅದು ಆ ಊರಿನ ಜನರಿಗೆ ಬೆಳೆಯೋಕೆ, ಕುಡಿಯೋಕೆ ಬಹಳಾ ಉಪಯೋಗ ಆಗ್ತಿತ್ತು. ಅದರ ಹೆಸರು ಗೋದಾವರಿ ಅಂತ ನನ್ನ ನೆನಪು. ಆ ನದಿ ದಡದಲ್ಲಿ ಒಂದು ದೊಡ್ಡ ಆಲದ ಮರ. ನಾನು ಅದನ್ನು ನಮ್ಮಜ್ಜನ ಕಾಲದಿಂದ ನೋಡ್ಕೊಂಡು ಬಂದಿದೀನಿ. ಬಹಳಾ ದೊಡ್ಡ ಮರ. ಅದರ ಸುತ್ತಳತೆನೇ ಸುಮಾರು ನೂರು ಅಡಿ ಇರಬೇಕೇನೋಪ್ಪ. ಮರ ಅಂದ್ಮೇಲೆ ಹಕ್ಕಿ, ಪಾರಿವಾಳ, ಗಿಳಿ ಇಂಥವುಕ್ಕೆ ಏನೂ ಕಡಿಮೆ ಇರೂದಿಲ್ಲ. ಆ ಮರದಲ್ಲೂ ಸಾಕಷ್ಟು ಗಿಳಿಗಳು ಗೂಡು ಕಟ್ಕ್ಕೊಂಡು ಮಕ್ಕಳು ಮರಿ ಮಾಡ್ಕೊಂಡು ನೆಮ್ಮದಿಯಿಂದ ಇದ್ವು.

ಒಂದು ವರ್ಷ ಮಾತ್ರ ಹಿಂದಿನ ವರ್ಷಗಳಿಗಿಂತಾ ಬಹಳಾ ಮಳೆ. ಅದೇನೋ ಹೇಳ್ತಾರಲ್ಲ ಆಕಾಶ ತೂತು ಬಿದ್ದಿದೆಯೋ ಏನೋ ಅಂತ, ಹಾಗೆ. ವಾರಗಟ್ಳೆ ಮಳೆ ಧೋ ಅಂತ ಸುರಿದು ಜನರಿಗೆಲ್ಲ ಸಾಕುಮಾಡಿಬಿಡ್ತು. ಮಳೆ ಬಂದ್ರೆ ಗಿಳಿಗಳು, ಹಕ್ಕಿಗಳು ಪಾಪ ಎಲ್ಲಿ ಹೋಗುತ್ವೆ. ನೆಮ್ಮದಿಯಾಗಿ ಗೂಡಿನಲ್ಲಿ ಇದ್ವು. ಆಗ ಅದೆಲ್ಲಿಂದ ಬಂತೋಪ್ಪ ದೊಡ್ಡ ದೊಡ್ಡ ಕಪಿಗಳ ಹಿಂಡು ಬಂದು ಏಕಾಏಕಿ ಮರ ಹತ್ತಿಬಿಟ್ಟವು. ಕಪಿಗಳು ಹೀಗೆ ಮರ ಹತ್ತಿದ್ದನ್ನು ಗೂಡಿನ ಒಳಗಿಂದಲೇ ನೋಡಿದ ಗಿಳಿಗಳು ಗಾಬರಿ ಮಾಡ್ಕೊಂಡಿದ್ದಂತೂ ನಿಜ. ಅಲ್ಲಾ ಇಷ್ಟು ವರ್ಷ ನಮ್ಮ ಪಾಡಿಗೆ ನಾವು ಇಲ್ಲಿದೀವಿ. ಈಗ ಈ ಕಪಿಗಳು ಬಂದು ನಮ್ಮ ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡುತ್ವಲ್ಲ ಅಂತ. ಗಿಳಿಗಳ ಗುಂಪಿನಲ್ಲಿ ಒಂದು ಹಿರಿ ಗಿಳಿ ಇತ್ತು. ಬೇರೆ ಗಿಳಿಗಳಿಗಿಂತ ಅದಕ್ಕೆ ಸ್ವಲ್ಪ ಧೈರ್ಯ ಜಾಸ್ತಿ. ಏನು ಶಬ್ದ ಆದ್ರೂ ಮೊದಲು ಹೋಗಿ ನೋಡ್ತಿದ್ದಿದ್ದು ಈ ಹಿರಿ ಗಿಳಿನೇ. ಯಾವಾಗ ಹಿಂಡು ಹಿಂಡು ಕಪಿಗಳು ಮರ ಹತ್ತಿದವೋ ಆಗ ಹಿರೀ ಗಿಳೀನೇ ಗೂಡಿನಿಂದ ಆಚೆಗೆ ಬಂದು ಕಪಿಗಳ ಗುಂಪಿನಲ್ಲಿದ್ದ ಒಂದು ಗಡವ ಕಪಿಯ ಹತ್ತಿರ ಹೋಗಿ ಏನ್ರಪ್ಪಾ ನಿಮಗೂ ಆಸರೆಗೆ ಈ ಮರಾನೇ ಬೇಕಾಗಿತ್ತಾ. ನಮ್ಮ ಪಾಡಿಗೆ ನಮ್ಮನ್ನು ನೆಮ್ಮದಿಯಾಗಿ ಇರೋಕೆ ಬಿಡಬಾರ‍್ದಾ. ದೇವರು ನಿಮಗೆ ಬಲಿಷ್ಠವಾದ ಕೈ ಕಾಲುಗಳನ್ನು ಕೊಟ್ಟಿದಾನೆ. ಮಳೆಯಿಂದ ಆಸರೆಗೆ ಅಂತ ಸಣ್ಣದೋ ಪುಟ್ಟದೋ ಒಂದು ಮನೆ ಕಟ್ಕೊಂಡು ನೀವೂ ನೆಮ್ಮದಿಯಾಗಿದ್ದು ನಮ್ಮನ್ನೂ ನೆಮ್ಮದಿಯಾಗಿ ಇರೋಕೆ ಬಿಡಬಾರದಾ ಅಂತ ಕೇಳ್ತು.

ಈ ಘಟನೆ ನಡೆದದ್ದು ನನಗೆ ನೆನಪಿರೋ ಹಾಗೆ ಸುಮಾರು ಎರಡು ಮಿಲಿಯನ್ ವರ್ಷಗಳ ಹಿಂದೆ ಇರಬೇಕು. ಅವತ್ತು ಗಿಳಿಗಳು ಏನು ಹೇಳಿದ್ವೋ ಹಾಗೆ ಅ ಕಾಲದಲ್ಲಿದ್ದ ಕ್ರಮೇಣ ಮಂಗನಿಂದ ಮಾನವ ಅಂತಾರಲ್ಲ ಹಾಗೆ ಮನುಷ್ಯರಾಗಿ ಪರಿವರ್ತನೆ ಹೊಂದಿ ನದೀ ತೀರದ ಮರಗಳನ್ನೆಲ್ಲಾ ಕಡಿದು ಗೇಟೆಡ್ ಕಮ್ಯುನಿಟಿ ಅಂತ ಕಟ್ಕೊಂಡು ಆ ಮನೆಗಳ ಕಲುಷಿತ ನೀರನ್ನು ನದೀಗೇ ಬಿಡ್ತಾ ನೆಮ್ಮದಿಯಾಗಿವೆ. ಈಗ ಅಲ್ಲಿ ಹಕ್ಕಿಗಳಿಗಾಗಲೀ, ಗಿಳಿಗಳಿಗಾಗಲೀ, ಇನ್ಯಾವುದೇ ರೀತಿಯ ಪಕ್ಷಿಗಳಿಗಾಗಲೀ ಜಾಗವೇ ಇಲ್ಲ.

‍ಲೇಖಕರು avadhi

October 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

ದೊರೆ..

ದೊರೆ..

೧ ಪ್ರತಿಕ್ರಿಯೆ

  1. Vasundhara k m

    ಸೊಗಸಾಗಿ ಭೈರಪ್ಪನವರ ಶೈಲಿಯನ್ನು ಅನುಕರಣೆ ಮಾಡಿರುವಿರಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: