ಎಲ್ಲ ಕಾಲಕ್ಕೂ ಸಲ್ಲುವ ‘ಗಾಳಿಯ ಎದೆ ಸೀಳಿ ಹೊರಟ ಹಕ್ಕಿ’

ಮಹಾಂತೇಶ ಹೊದ್ಲೂರ

**

ಕವಿ ಎಸ್ ಕೆ ಮಂಜುನಾಥ್ ಅವರ ಹೊಸ ಕವನ ಸಂಕಲನ ‘ಗಾಳಿಯ ಎದೆ ಸೀಳಿ ಹೊರಟ ಹಕ್ಕಿ’.

ಈ ಕೃತಿಯನ್ನು ‘ಲುಂಬಿನಿ ಪ್ರಕಾಶನ’ ಪ್ರಕಟಿಸಿದೆ.

ಈ ಕೃತಿಯ ಕುರಿತು ಯುವ ಸಾಹಿತಿ ಮಹಾಂತೇಶ ಹೊದ್ಲೂರ ಅವರು ಬರೆದ ಬರಹ ಇಲ್ಲಿದೆ.

**

ನಮ್ಮ ಕವಿಗಳಿಗೆ ಒಂದು ಪದ್ಯ ಬರೆಯಲು ಒಂದು ಸಂವೇದನೆಯ ಅವಶ್ಯಕತೆ ಇರುತ್ತದೆ. ಯಾವುದಾದರೂ ಒಂದು ಸಂವೇದನೆ ಬೇಕು ನಿಜಾ, ಹಾಗಂತ ಅದಕ್ಕಾಗಿ ಕಾಯುತ್ತಾ ಕುಳಿತುಕೊಳ್ಳುವುದಲ್ಲ. ಪ್ರಸ್ತುತ ಕವಿತೆಗಳಿಗೆ ಒಂದು ಘಟನೆ ಜರುಗಿದಾಗಲೇ ಅವರಲ್ಲಿನ ಪದಗಳು ಕವಿತೆಗಳಾಗಿ ರೂಪಗೊಳ್ಳುವುದು. ಎಸ್ ಕೆ ಮಂಜುನಾಥರ “ಗಾಳಿಯ ಎದೆ ಸೀಳಿ ಹೊರಟ ಹಕ್ಕಿ” ಸಂಕಲನದಲ್ಲಿನ ಕವಿತೆಗಳು ಎಲ್ಲ ಕಾಲಕ್ಕೂ, ಎಲ್ಲ ಸಂವೇದನೆಗೂ ಒಗ್ಗುವ ಕವಿತೆಗಳಾಗಿವೆ. ಒಂದೊಂದು ಕವಿತೆಯೂ ಒಂದೊಂದು ಸಂವೇದನೆಯ ಜಾಡು ಹಿಡಿದು ಹೊರಡುತ್ತವೆ. ಒಂದು ಕವಿತೆ ಓದಿದ ನಂತರ ಇನ್ನೊಂದು ಕವಿತೆ ಓದುತ್ತೇವೆ ಎಂದರೆ ಯಾವ ಕವಿತೆಗಳು ಮುಂದೆ ಹೊರಡಲು ಬಿಡುವುದಿಲ್ಲ. ಅರಗಿಸಿಕೊಳ್ಳಲು ಕೆಲ ಸಮಯಗಳು ಬೇಕಾಗುತ್ತವೆ. “ಪ್ರೀತಿಸುವುದಕ್ಕಿಂತ  ದೊಡ್ಡ ಕ್ರಾಂತಿ ಯಾವುದಿದೆ ಹೇಳಿ” ಎಂದು ಹೇಳುವ ಕವಿ, ಪ್ರೀತಿಯ ಚೂರಿ ಹಿಡಿದು ಪ್ರೀತಿಯ ಬಂಡಾಯಕ್ಕೆ ನಿಂತ ನವನವೀನ ಕವಿ ಮಂಜು. ಇವರಿಗೆ ಪದಗಳ ಹಿಡಿತ ಗೊತ್ತಿದೆ. ಅವರು ಬಳಸುವ ಒಂದು ಸಾಲು, ಹಿಂದಿನ ಮತ್ತು ಮುಂದಿನ ಸಾಲಿಗೆ ಹೇಗೆ ಬೇಕಾದರೂ ಹೋಲಿಸಿಕೊಂಡು ಓದಬಹುದು. ಅಂತಹ ಒಂದು ವಿಶಿಷ್ಟ ಮತ್ತು ಗಟ್ಟಿ ಬರಹ ಎಸ್ ಕೆ ಮಂಜುನಾಥ ಅವರದ್ದು.

ಕವಿ ಎಸ್ ಕೆ ಮಂಜುನಾಥ್

**

ಮನುಷ್ಯರನ್ನಾಗಿ ಮಾಡಲಿ

ಬಡವರ ಕಣ್ಣೀರು

ನಿಮ್ಮ ದ್ವೇಷದ ಕಿಡಿಯಾರಿಸಲಿ

ಇಲ್ಲಿ “ಬಡವರ ಕಣ್ಣೀರು” ಸಾಲನ್ನು ನಾವು “ಮನುಷ್ಯನ್ನಾಗಿ ಮಾಡಲಿ ಬಡವರ ಕಣ್ಣೀರು” ಎಂದು ಓದಬಹುದು ಅಥವಾ “ಬಡವರ ಕಣ್ಣೀರು ನಿಮ್ಮ ದ್ವೇಷದ ಕಿಡಿಯಾರಿಸಲಿ” ಎಂದು ಸಹ ಓದಬಹುದು. ಈ ರೀತಿ ಹಲವಾರು ಕವಿತೆಗಳಲ್ಲಿ ಕಾಣಬಹುದು. ನಾವು ಮನುಷ್ಯರಾಗಬೇಕಿದೆ. ಈಗಿನ ದುರಿತ ಸಂದರ್ಭದಲ್ಲಿ ನಾವು ಮಾನವೀಯತೆವುಳ್ಳ ಮನುಷ್ಯಾಗಬೇಕಿದೆ. ಸಾವು-ನೋವುಗಳನ್ನು, ಬಡವರ ಬವಣೆಯನ್ನು ಹಾಸ್ಯದ ರೀತಿ ನೋಡುತ್ತಿರುವ ನಾವುಗಳು ಮನುಷ್ಯರಾಗಬೇಕಿದೆ ಎನ್ನುತ್ತಾರೆ ಎಸ್ಕೆ. ನಾವು ಮನುಷ್ಯರಾಗಲು ಬಹಳ ಸರಳವಿದೆ ಎನ್ನುವ ಕವಿ, “ಎದೆ ಮೇಲಿಟ್ಟ ಹೂವು” ಕವಿತೆಯ ಕೊನೆಯಲ್ಲಿ ಹೀಗೆ ಹೇಳುತ್ತಾರೆ,

ಮನುಷ್ಯನಾಗುವುದೆಂದರೆ

ಬುದ್ಧನಾಗುವುದು

ಬುದ್ಧನಾಗುವುದೆಂದರೆ

ಮನುಷ್ಯನಾಗುವುದು (ಎದೆ ಮೇಲಿಟ್ಟ ಹೂವು)

ಮನುಷ್ಯನಾಗಲು ಬಹಳ ಸರ್ಕಸ್ ಮಾಡಬೇಕಿಲ್ಲ ಬುದ್ಧನಾದರೆ ಸಾಕು. ಈ ಭೂಮಿ ಮೇಲೆ ಬುದ್ಧನಕ್ಕಿಂತ ಇನ್ನೊಬ್ಬ ಮನುಷ್ಯನುಂಟೆ? ಎಸ್ಕೆ ಮಂಜುನಾಥನೊಳಗೊಬ್ಬ ಮುಗ್ಧನಿದ್ದಾನೆ. ಅವನು ಬಹಳ ಸಂವೇದನಾ ಶೀಲ ವ್ಯಕ್ತಿ. ಅವನಿಗೆ ಅಪ್ಪನ ಕರಿ ಬೆನ್ನು, ಅವ್ವನ ಅಸಹಾಯಕತೆ, ಜಾತೀಯತೆ, ಹಸಿವು, ನೋವು, ನೀರಡಿಕೆಗಳ ಮಧ್ಯ ಅವನಿಗೆ ಇನ್ನೇನೋ ಹುಡುಕುವ ಕಯಾಲಿ.

ಹುಡುಕುತ್ತಿದ್ದೇನೆ,

ಇಲ್ಲೇ ಎಲ್ಲೋ ಕಳೆದು ಹೋಗಿರುವ

ನನ್ನನ್ನು, ನಿನ್ನನ್ನು

ಮತ್ತು

ಮನುಷ್ಯರನ್ನು (ಉರಿವ ಹೊಸ್ತಿಲ ಆಚೆ)

ಮನುಷ್ಯನಿಗೆ ಈಗೀಗ ಹಸಿವಿನ ಹಾಹಾಕಾರ ಹೇಳತ್ತಿರದು‌. “ಅಪ್ಪನ ಹರಿದ ಬನಿಯನ್ | ಭವ್ಯ ಭಾರತದ ನಕಾಶೆ” ಕಾಣುವ ಈ ಹೊತ್ತಲ್ಲಿ

ಹಸಿವಿನ ರೋಗಕ್ಕೆ 

ಯಾವ ಔಷಧಿ ಹುಡುಕಲಿ

ಅನ್ನದ ಹೊರತಾಗಿ (ನೆಲವ ನೆಕ್ಕುತ ಬರುತಿಹರು ಯಾರೊ)

ಅಪ್ಪನ ಹರಿದ ಬನಿಯನ್ ಈಗ ಹೇಗೆ ಕಾಣುತ್ತಿದೆ ಎಂದರೆ, ಭವ್ಯ ಭಾರತದ ನಕಾಶೆಯಂತೆ. ನಮ್ಮ ನಮ್ಮ ಹಸಿವ ನೀಗಿಸಲು ಅಪ್ಪನ ಬನಿಯನ್ ಹರಿದರೆ, ಅವ್ವನ ರೊಟ್ಟಿ ಚಿಂತೆಯನ್ನುವ ಚಿತೆಯಲ್ಲಿ ಸುಟ್ಟು ಹೋಗಿದೆ. “ಬನಿಯನ್, ರೊಟ್ಟಿ” ಪ್ರಸ್ತುತ ನನ್ನ ಭಾರತದ ಭವ್ಯ ಚಿತ್ರಣ. “ಬೆಳೆವ ನಾನು” ಮತ್ತು “ಬ್ರೇಕಿಂಗ್ ನ್ಯೂಸ್” ಈ ಎರಡು ಕವಿತೆಗಳು ಎಲ್ಲ ಕಾಲಕ್ಕೂ ಸಲ್ಲುವಂತ ಕವಿತೆಗಳು.

ನಿನಗೆ ಕಣ್ಣಿದ್ದರೆ

ಹಸಿದವರ ಸಂಕಟ ನೋಡು

ಹೃದಯವಿದ್ದರೆ

ಸಮಬಾಳಿನ ಗೀತೆ ಹಾಡು (ಬೆಳೆವ ನಾನು)

ಯಾವಾಗಲೂ ಬ್ರೇಕಿಂಗ್ ನ್ಯೂಸ್ ಹೇಳುತ್ತಿರುವ ನ್ಯೂಸ್ ಚಾಲನಗಳಿಗೆ ಹಿಡಿದ ಕನ್ನಡಿಯಾಗಿದೆ. ಈ ನ್ಯೂಸ್ ಚಾಲನಗಳ ಹಾವಳಿ ಎಷ್ಟರಮಟ್ಟಿಗೆ ಬಂದು ತಲುಪಿದೆ ಎಂದರೆ,

ಅನ್ನಕೆ ಹಸಿವಾಗಿದೆ

ಗಾಳಿಯೇ ಉಸಿರುಗಟ್ಡಿದೆ

ಸುಡುಗೆಂಡದ ಭಯ ಬೆಂಕಿಗೆ

ಬಾಯಾರಿಕೆ ನೀರಿಗೆ (ಬ್ರೇಕಿಂಗ್ ನ್ಯೂಸ್)

ಭೂಮಿಯ ಮೇಲಿನ ಪ್ರತಿ ಕಣಗಳು ಸಹ ಈಗ ನ್ಯೂಸ್ ಚಾಲನಗಳನ್ನು ಕೇಳಿ ಕ್ರಿಯೆ ಪ್ರಾರಂಭಿಸಬೇಕಿದೆ ಎನ್ನುವಷ್ಟರ ಮಟ್ಟಿಗೆ ಇವರುಗಳ ಹಾವಳಿ ಎದ್ದಿದೆ. ಇಲ್ಲಿನ ಕವಿತೆಗಳಿಗೆ ವಿಷಯಗಳು ಬೇಕಿಲ್ಲ. ಇಲ್ಲಿನ ಕವಿತೆಗಳು ಹೇಳದೆ ಇರುವ ವಿಷಯಗಳಲೇ ಇಲ್ಲ. ಎಸ್ಕೆ ಮಂಜುನಾಥ ತನ್ನ ಅನುಭವಕ್ಕೆ ಸಿಕ್ಕ ಎಲ್ಲ ವಿಷಯಗಳನ್ನು ಕವಿತೆಯಾಗಿಸಿದ್ದಾರೆ. ಮಂಜುನಾಥ ಒಬ್ಬ ಗಟ್ಟಿ ಕವಿಯಾಗಿ ಹೊರ ಹೊಮ್ಮುವ ಎಲ್ಲ ಲಕ್ಷಣಗಳನ್ನು ಹೊಂದಿದ್ದಾರೆ. ಅವರಿಂದ ಇನ್ನಷ್ಟು ಸಂವೇದನಾಶೀಲ ‌ಕವಿತೆಗಳು ಹೊರ ಬರಲಿ ಶುಭಾಶಯಗಳು ಮಂಜು.

‍ಲೇಖಕರು Admin MM

September 7, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: