ಎಲ್ಲಾರ್ಗು ಒಂದಾ ರೂಲ್ಸು..

ಗುಂಡುರಾವ್ ದೇಸಾಯಿ

**

ಬೆಂಗಳೂರಿನಿಂದ ಬಂದಿದ್ದ ರಾಮುವಿಗೆ ಹಳ್ಳಿಯ ಮಕ್ಕಳು ಆಡುತ್ತಿದ್ದ ಆಟಗಳಲ್ಲಿ ಭಾಗವಹಿಸಿ ತಾನೂ ಆಡಿ ಸಂತೋಷ ಪಟ್ಟರೂ ಸದಾ ಸೋಲುತ್ತಿದ್ದುದು ಅವನಲ್ಲಿ ಏನೋ ಗಿಲ್ಟ್ ಕಾಡ ಹತ್ತಿತು. ‘ಇಲ್ಲಿಯ ಮಕ್ಕಳು ಯಾವ ಕೋಚಿಂಗ್‌ಗೂ ಹೋಗಲ್ಲ ಆದರೂ ಎಷ್ಟು ಜಾಣರು. ಕಬಡ್ಡಿ, ಖೋಖೋ, ವಾಲಿಬಾಲ್, ಥ್ರೋಬಾಲ್, ಯಾವುದೇ ಇರಲಿ ಎಷ್ಟು ಚಂದ ಆಡತಾರೆ? ಅವೇನೋ ಕುಂಟುಪಿಲ್ಲಿ, ಗಿಲ್ಲಿ ದಾಂಡು, ಗೋಲಿ, ಲಗೋರಿ ಎಷ್ಟು ಸರಳವಾಗಿ ಆಡತಾರೆ. ನಾವು ದುಡ್ಡು ಕೊಟ್ಟು ಗಾಳಿಪಟ ತಂದರೆ ಇವರೆಲ್ಲ ಪೇಪರ್‌ನಲ್ಲಿಯೆ ತಾವೇ ಸ್ವತಃ ಮಾಡಿ ಎಷ್ಟು ಚಂದ ಹಾರಸ್ತಾರೆ. ಬುಗರಿಯನ್ನು ಎಸೆದು ಕೈಯಲ್ಲಿ ಆಡಸ್ತಾರೆ. ಓದೋದ್ರಲ್ಲೂ ಹಾಗೆ ನಾನು ಇಂಗ್ಲೀಷ್ ಟೇಬಲ್ಸ್ ನ ಒದ್ದಾಡಿಕೊಂತ ಹೇಳಿದರೆ ಅವರು ಮಗ್ಗಿನ ಅರಳು ಹುರಿದ ಹಾಗೆ ಕನ್ನಡದಲ್ಲಿ ಪಟಪಟ ಹೇಳತಾರೆ. ನನಗೆ ತಪ್ಪಿದ್ದಲ್ಲಿ ತಿಳಿ ಹೇಳತಾರೆ. ಇಂಗ್ಲೀಷ್ ಮಾತಾಡೋಕೆ ಬರುವುದಿಲ್ಲ ಅನ್ನೋದು ಬಿಟ್ಟರೆ ಅವರು ಎಲ್ಲದರಲ್ಲೂ ಮುಂದು. ಗಣಿತದ ಬಾಯಿ ಲೆಕ್ಕಗಳು, ಒಗಟುಗಳು ನನಗೆ ಏನೂ ಬರಲ್ಲ. ಯಾವುದೆ ವಿಷಯ ಕೇಳಿದ್ರು ‘ಎಸ್ ಎಸ್’ ಅಂತಾರೆ. ನಾನು ಅಂತಹ ದೊಡ್ಡ ಸ್ಕೂಲಿನಲ್ಲಿ ಓದುತ್ತಿರುವುದೇ ವೇಷ್ಟು…’ ಎಂದು ಅಂದುಕೊಳ್ಳುತ್ತಿರುವಾಗಲೇ ‘ಇಲ್ಲ ಇಲ್ಲ ನಾನು ದೊಡ್ಡ ಸಿಟಿಯಲ್ಲಿ ಓದುವವ ಇಷ್ಟು ನಿರಾಶನಾಗಬಾರದು, ನಾಳೆ ಇವರನ್ನೆಲ್ಲ ಕ್ರಿಕೆಟ್ ಆಡಲು ಕರೆದು ಆಟದಲ್ಲಿ ಇವರನ್ನೆಲ್ಲ ಸೋಲಿಸಬೇಕು’ ಎಂದು ನಿರ್ಧಾರ ಮಾಡಿ, ನಾನು ಕ್ರಿಕೆಟ್‌ನಲ್ಲಿ ಸಾಕಷ್ಟು ಪಳಗಿದವ. ಅನೇಕ ಟೂರ್ನಮೆಂಟ್‌ಗಳಲ್ಲಿ ಭಾಗವಹಿಸಿ ಕಪ್ ಗೆದ್ದವ. ನಾಳೆ ಇವರಿಗಿಂತ ಚೆನ್ನಾಗಿ ಆಡಿ, ನಾನು ಏನು ಅನ್ನುವುದು ತೋರಿಸಬೇಕು’ ಎಂದು ನಿರ್ಧರಿಸಿ ‘ಅಯ್ಯೊ! ಮಾಮನ ಈ ಮನೆಯಲ್ಲಿ ಆಡಲು ಬೇಕಾದ ಬ್ಯಾಟು, ಬಾಲು, ಸ್ಟಂಪ್ಸ್ ಇಲ್ಲಲ್ಲ ಏನು ಮಾಡುವುದು?’ ಎನ್ನುವ ಯೋಚನೆಯೂ ಬಂದು ‘ಇಲ್ಲ ಇಲ್ಲ. ಇಲ್ಲಿಯ ಚೂಟಿ ಗೆಳೆಯರು ಏನಾದ್ರೂ ವ್ಯವಸ್ಥೆ ಮಾಡತಾರೆ’ ಎಂದುಕೊಂಡು ಮಲಗಿದ.

ಬೆಳಗಿನ ಜಾವ ಆಡಲು ಕರೆಯಲು ಬಂದ ಮಲ್ಲ, ನಾಗ, ಸೀನನಿಗೆ “ಇಂದು ಕ್ರಿಕೇಟ್ ಆಡೋಣವಾ?” ಎಂದ ರಾಮು. “ಓ ಎಸ್… ನಾವು ರೆಡಿ?” ಅಂದ್ರು ಎಲ್ಲರೂ. “ಆದರೆ ಮನೆಯಲ್ಲಿ ಕ್ರಿಕೆಟ್ ಬ್ಯಾಟ್ ಇಲ್ಲಲ್ಲ” ಅಂದ ರಾಮು. “ಅದಕ್ಯಾಕ ತಲೆ ಕೆಡಿಸಕೋತಿಯಾ …?” ಎಂದು ನಾಗ ಗೆಳೆಯರತ್ತ ತಿರುಗಿ “ಸೀನ ನಿಮ್ಮ ಮನ್ಯಾಗ ಬಾಲ್ ಇತ್ತಲ್ಲ ತೊಗೊಂಡು ಬಾ, ಮಲ್ಲ ನಿಮ್ಮನ್ಯಾಗೊಂದು ಬ್ಯಾಟಿತ್ತಲ್ಲ ಓಡಿ ಹೋಗಿ ತರಬೇಕು. ಎಲ್ಲಿ ಗೊತ್ತಾಯ್ತಲ್ಲ? ಅದೆ ನಮ್ಮ ಕಾಯಂ ಜಾಗ. ಅದೆ ಬಯಲಿಗೆ ಬರಬೇಕು. ಬೇಗ” ಎಂದು ಆದೇಶವಿತ್ತ. ನಾಗನ ಆಜ್ಞಾಪಾಲಕರಾದ ಅವರು ತರಲು ಮನೆಗೆ ಓಡಿದರು. “ಸ್ಟಂಪ್ಸ್…..”ಎಂದ ರಾಮು “ಅದಕ್ಯಾಕ ಚಿಂತಿ ಅಡ್ಜಸ್ಟ ಮಾಡೋಣ ಬಾ” ಎಂದು ಮನೆಯಿಂದ ಸ್ವಲ್ಪ ದೂರದಲ್ಲಿದ್ದ ಸಣ್ಣ ಬಯಲಿಗೆ ರಾಮುವನ್ನು ಕರೆದುಕೊಂಡು ಬಂದ. ಸಣ್ಣದಾದ ಬಯಲನ್ನು ನೋಡಿ “ಇಲ್ಲ..ಇಲ್ಲ…ಇಲ್ಲಿ ಕ್ರಿಕೇಟ್ ಆಡೋಕೆ ಆಗೊದಿಲ್ಲ” ಅಂದ ರಾಮು.

“ಇರೋದೆ ಇಷ್ಟು ಜಾಗ. ಅಡ್ಜಸ್ಟ ಮಾಡಿಕೋಬೇಕು”

“ಗ್ರೌಂಡು ದೊಡ್ಡದಿರಬೇಕು, ಪಿಚ್ ಇಲ್ಲ”
“ಓ ಅವೆಲ್ಲ ನಿಮ್ಮೂರಾಗ… ಇಟ್ಟಕೋ…”
“ಇಂತಹ ಬಯಲಲ್ಲಿ ಆಡಿ ಗೊತ್ತಿಲ್ಲ ನನಗೆ”
“ನಾವು ಇಲ್ಲೆ ಆಡೋದು… ‘ಎಸ್’ ಅಂದ್ರ ಆಡೋಣ ಇಲ್ಲಂದ್ರ ಕ್ಯಾನ್ಸಲ್”ಎಂದ ನಾಗ.
“ಹೇ ಹೇ ಬ್ಯಾಡ ಅಡ್ಜಸ್ಟ್ ಮಾಡಿಕೋತಿನಿ” ಎಂದ ರಾಮು. ಅಷ್ಟರಲ್ಲಿ ರಬ್ಬರ್ ಬಾಲ್ ಹಿಡುಕೊಂಡು ಸೀನ, ಉದ್ದನೆಯ ಭಾರದ ಕಟ್ಟಿಗೆ ತುಂಡು ಹಿಡಿದುಕೊಂಡು ಮಲ್ಲ ಆ ಸಣ್ಣ ಬಯಲಿಗೆ ಬಂದರು. ಅವರ ಕೈಯಲ್ಲಿಯ ವಸ್ತುಗಳನ್ನು ನೋಡಿದ ರಾಮು,
“ಇವೇನೂ…?” ಅಂದ.
“ಬಾಲು, ಬ್ಯಾಟು” ಎಂದ ನಾಗ.
“ಬಾಲೇನೊ ಸರಿ ಬ್ಯಾಟ್ ಹೇಗಿದೆಯಲ್ಲ..! ಉದ್ದನೆಯ ಕಟ್ಟಿಗೆ ಇದ್ದ ಹಾಗೆ. ಇದರಲ್ಲಿ ಆಡೋಕೆ ಬರೋದಿಲ್ಲ” ಎಂದ ರಾಮು.

“ಮನೆಯಲ್ಲಿ ಇದ್ದ ಹಲಗಿಯಿಂದ ನಾನೇ ಕೆತ್ತಿದ್ದು. ಫಿನಿಶಿಂಗ್ ಆಗಿಲ್ಲ ಅಷ್ಟೆ. ಎಷ್ಟು ಮ್ಯಾಚ್ ಗೆದ್ದಿವಿ ಗೊತ್ತಾ? ಹೌದಲ್ಲೊ ನಾಗ?” ಎಂದ ಮಲ್ಲ.
“ಹೌದು ರಾಮು ಲಕ್ಕಿ ಬ್ಯಾಟು… ನಿನಗ ಸ್ವಲ್ಪ ಭಾರ ಆಗಬಹುದು ನಮಗೇನೂ ಇಲ್ಲಪ್ಪ” ಎಂದ ನಾಗ. ರಾಮು ಬ್ಯಾಟ್‌ಅನ್ನು ಕೈಯಲ್ಲಿ ಹಿಡಿದುಕೊಂಡು ನೋಡಿದ. ಕಂಪನಿ ಬ್ಯಾಟ್‌ಗೂ ಇದಕ್ಕೂ ಹೋಲಿಕೆ ಮಾಡುವ ಹಾಗೆ ಇರಲಿಲ್ಲ. ಉದ್ದನೆ ಹಲಗೆಯನ್ನು ಕೊಡಲಿಯಿಂದ ಕತ್ತರಿಸಿ ಒಂದು ಕಡೆಗೆ ಹ್ಯಾಂಡಲ್ ಮಾಡಲಾಗಿತ್ತು. ಹ್ಯಾಂಡಲ್‌ಗೆ ದಾರ ಸುತ್ತಲಾಗಿತ್ತು. ಮಣಭಾರ ಇತ್ತು. ಕೈಗೆ ಒತ್ತುತ್ತಿತ್ತು.

“ಇದರಿಂದ ಹ್ಯಾಗೆ ಆಡೋದು?” ಎಂದ.
“ಹ್ಯಾಂಗ ಅಂದ್ರೆ ಹಿಂಗೆ…” ಎಂದು ಬ್ಯಾಟು ಹಿಡಿದು ಹೊಡೆದ ಹಾಗೆ ತೋರಿಸಿದ ಸೀನ.
“ನನಗೆ ಆಗುವುದಿಲ್ಲಪ” ಎಂದ ರಾಮು.
“ಸರಿ ಬಿಡು ಈ ಆಟ ಕ್ಯಾನ್ಸಲ್ ಮಾಡೋಣ…. ನೀನೆ ಆಡೋಣ ಅಂದಿದ್ದಕ್ಕೆ ಇಷ್ಟೆಲ್ಲ ವ್ಯವಸ್ಥೆ ಮಾಡಿದೆ” ಎಂದ ನಾಗ.
ರಾಮು ತಾನೆ ಕರೆದಿದ್ದರಿಂದ ಅನಿವಾರ್ಯವಾಯಿತು.

“ಹೇ ಹೇ ಬ್ಯಾಡ ಅಡ್ಜಸ್ಟ್ ಮಾಡಿಕೊಳ್ಳುವೆ. ಇದರಲ್ಲೆ ಆಡೋಣ. ಸ್ಟಂಪ್ಸ್ ಎಲ್ಲಿ?” ಎಂದ. ಅಲ್ಲೆ ಬಿದ್ದಿದ್ದ ಇದ್ದಲಿಯಿಂದ ಗೋಡೆಗೆ ಮೂರು ಗೆರೆ ಎಳೆದು
“ಇದೆ ಸ್ಟಂಪ್ಸ್…” ಎಂದ ಸೀನ.
“ಅಲ್ರೋ…ಇದೇನಾ?” ಎಂದ ಗಾಭರಿಯಿಂದ ರಾಮು.
“ಬೇಡಾ… ಬೆಂಗಳೂರು ಮಂದಿಗೆ ಸರಿಬರಲ್ಲಲ” ಎಂದು ಉದ್ದನೆಯ ಕಲ್ಲನ್ನು ಉರಳಿಸಿಕೊಂಡು ಬಂದು ನೇರವಾಗಿ ನಿಲ್ಲಿಸಿ

“ಇದು ಓ.ಕೆ ನಾ?” ಎಂದ ಸೀನ. ರಾಮು ಅನಿವಾರ್ಯವಾಗಿ ಒಪ್ಪಬೇಕಾಯಿತು.

“ಟೀಮ್ ಮಾಡೋಕೆ ಇನ್ನೂ ಹುಡುಗರನ್ನು ಕರಿರೋ?” ಎಂದ ರಾಮು.
“ಅದೆಲ್ಲಾ ಆಗೊಲ್ಲ ಬಾಳ ಜನ ಬಂದ್ರ ಬ್ಯಾಂಟಿಂಗ್ ಸಿಗೊಲ್ಲ. ಒಬ್ಬೊಬ್ರ ಆಡಬೇಕು ಅಷ್ಟ” ಎಂದ ನಾಗ.
“ಆಯ್ತಪ…. ಫಸ್ಟ್ ಆಡುವವರು ಯಾರಂತ ಹ್ಯಾಂಗ ಟಾಸ್ ಮಾಡೋದು?” ಎಂದ ರಾಮು.

ನಾಗ ಆ ಬ್ಯಾಟನ್ನು ಹಿಡಿದಕೊಂಡು ದೂರ ಹೋಗಿ ಯಾರಿಗೂ ಕಾಣಲಾರದ ಹಾಗೆ ಬ್ಯಾಟ್‌ಅನ್ನು ಅಡ್ಡ ಮಾಡಿ ಇಟ್ಟು ನೆಲದ ಮೇಲೆ 1, 2, 3, 4 ಅಂತ ಹಿಂದ ಮುಂದಾಗಿ ಬರೆದು, ಬರೆದ ಸಂಖ್ಯೆಗಳ ಮುಂದೆ ಉದ್ದ ಗೆರೆ ಎಳೆದು ಬ್ಯಾಟಿನಿಂದ ಆ ಸಂಖ್ಯೆಯನ್ನು ಮುಚ್ಚಿ ಎಲ್ಲರನ್ನು ಕರೆದ. ಅವರೆಲ್ಲ ಬಂದ ಮೇಲೆ “ಹಾಕಿರುವ ಗೆರೆ ಹಿಡಿಯಿರಿ. ನಿಮಗ ಯಾವುದು ನಂಬರ್ ಬಂದಿರುತ್ತದೋ ಆ ಸರದಿಯಲ್ಲಿ ಬ್ಯಾಟಿಂಗ್ ಮಾಡಬೇಕು” ಎಂದ. ಸೀನ ಮೊದಲಿಗೆ ಒಂದು ಗೆರೆ ಹಿಡಿದ, ಮಲ್ಲ ಬಂದು ಇನ್ನೊಂದು ಗೆರೆ ಹಿಡಿದ. ಅವರ ಹಿಂದೆ ಬಂದ ರಾಮುವಿಗೆ ಏನು ಅಂತ ಗೊತ್ತಾಗಲಿಲ್ಲ. ನಾಗ “ರಾಮು ಎರಡು ಗೆರೆ ಉಳದಾವ. ಎರಡರಲ್ಲಿ ಒಂದು ಹಿಡಿ. ಯಾವುದು ಬರತಾದೊ ಆ ಸರದಿಯಲ್ಲಿ ಆಡಬೇಕು” ಎಂದು ಮತ್ತೊಮ್ಮೆ ತಿಳಿಸಿ ಹೇಳಿದ. “ಇಲ್ಲ ನೀನ ಹಿಡಿ ಮೊದಲು” ಎಂದ ರಾಮು. “ನಾನೇ ನಂಬರ್ ಬರೆದು ಗೆರೆ ಹಾಕಿದವ. ಮೊದಲು ಹಿಡಿದರೆ ತಪ್ಪಾಗತದ, ನೀನು ಹಿಡಿ ಬಿಟ್ಟಿದ್ದು ನನ್ನದು” ಎಂದ. ನಾಗನ ಪ್ರಾಮಾಣಿಕತೆ ಖುಷಿ ನೀಡಿತು. ‘ಆಯ್ತು’ ಅಂತ ಒಂದು ಗೆರೆ ಮೇಲೆ ಕೈ ಇಟ್ಟ. ಬ್ಯಾಟ್ ತೆಗೆದ ಮೇಲೆ ಸೀನ ಒಂದನೇ ನಂಬರ್ ಮೇಲೆ, ಮಲ್ಲ ಎರಡನೇ ನಂಬರ್ ಮೇಲೆ ರಾಮು ಮೂರನೆ ನಂಬರಿನ ಮೇಲೆ ಇಟ್ಟಿದ್ದ. ಉಳಿದ ಗೆರೆ ನಾಲ್ಕನೇ ನಂಬರ್ ಆಗಿತ್ತು, ಅದು ನಾಗನ ಪಾಲಾಯಿತು. ಮೊದಲು ಎರಡನೆ ನಂಬರ್ ಬಂದಿದ್ದ ಸೀನ ಮಲ್ಲ ‘ಡಂಕನಕ… ಡಿಂಕನಕ…. ಡಂಕನಕ… ಡಿಂಕನಕ… ನಮ್ಮದಾ ಮೊದಲ ಬ್ಯಾಟಿಂಗ್‌ಮೊ” ಅಂತ ಕುಣಿದಾಡಿದರು.

“ಅಂಪೈರ್ ಯಾರು ಈ ಆಟಕ್ಕೆ?” ಎಂದ ರಾಮು.
“ಎಲ್ಲರೂ ಅಂಪೈರೆ…… ಅಷ್ಟ……ನಂಬಿಕೆ ಇದ್ರ ಸಾಕು”ಎಂದ ನಾಗ. ಸೀನ ಬ್ಯಾಟ್ ಹಿಡಿದು ಪಿಚ್ ಕಡೆ ಹೊರಟ. ಅಷ್ಟರಲ್ಲಿ ಓಡೋಡಿ ಬಂದ ಪ್ರಜ್ಜಲ್ “ನಾನು ಬರತೀನ್ರೋ…. ನನ್ನನ್ನು ಸೇರಿಸಿಕೊಳ್ಳಿ” ಅಂದ “ಲಾಸ್ಟ ಬ್ಯಾಟಿಂಗ್ ನಿನ್ನದು.. ಅಲ್ಲೆ ನಿಂತು ದೂರ ಹೋಗುವ ಬಾಲ್, ತರಬೇಕು” ಎಂದ ನಾಗನ ಮಾತಿಗೆ ‘ಆಯ್ತು ‘ಎಂದು ಒಪ್ಪಿ ನಿಂತ. “ಎಲ್ಲರಿಗೂ ಕ್ರಿಕೇಟ್ ರೂಲ್ಸ್ ಗೊತ್ತಾವಲ್ಲ….?”ಎಂದ ನಾಗ. ರಾಮುನ ಕಡೆ ನೋಡಿದಾಗ ರಾಮು ‘ನನಗ ಕ್ರಿಕೇಟ್ ರೂಲ್ಸ್ ಹೇಳಾಕ ಬರುತ್ತಾನಲ್ಲ’ ಎನ್ನುವ ಹಾಗೆ ವ್ಯಂಗ್ಯವಾಗಿ ನಕ್ಕ.

“ರಾಮು ಬೌಲಿಂಗ್ ಹಾಕ್ತಿಯೇನು? ಹಾಗೆ ನೋಡಿದ್ರ ನಾನಾ ಹಾಕಬೇಕು” ಎಂದ ನಾಗ.
‘ಸಿಕ್ಕಿದೆ ಚಾನ್ಸ್, ಬಿಡಬಾರದು’ ಎಂದು ರಾಮು ಬೌಲಿಂಗ ಮಾಡಲು ಒಪ್ಪಿದ. ದೂರದಿಂದ ಜೋರಾಗಿ ಓಡಿ ಬಂದು ಬಾಲ್ ಮಾಡಿದ. ಅದು ನೇರವಾಗಿ ಸ್ಟಂಪ್ ನಂತೆ ನಿಲ್ಲಿಸಿದ್ದ ಕಲ್ಲಿಗೆ ಬಡಿಯಿತು. “ಔಟ್…” ಅಂದ ರಾಮು, ಸೀನ “ಇದು ಟ್ರಯಲ್ ಬಾಲ್‌ಮಾ” ಎಂದ. ಮಲ್ಲ “ಹೌದು ಫಸ್ಟ್ ಬಾಲ್ ಟ್ರಯಲ್ ಬಾಲ್” ಎಂದ. ರಾಮು ಸಿಟ್ಟಿನಿಂದ ಜೋರಾಗಿ ಓಡೋಡಿ ಬಂದು ಎರಡನೇ ಬಾಲ್ ಎಸೆದ ಅದು ಜೋರಾಗಿ ಬರವುದನ್ನು ಎದುರಿಸಲಾಗದೆ ಸರಿದು ನಿಂತ. ಅದು ಸ್ಟಂಪ್‌ಗೆ ಬಡಿಯಿತು’ ಔಟ್’ ಎಂದ. ಸೀನ ಜಗಳ ತೆಗದು “ಇಲ್ಲ ಇಲ್ಲ ಹಾಂಗೆಲ್ಲ ಬೌಲಿಂಗ್ ಹಾಕಂಗಿಲ್ಲ. ನಿಧಾನವಾಗಿ ಹಾಕಬೇಕು” ಎಂದ. ಎಲ್ಲರೂ ಧ್ವನಿಗೂಡಿಸಿದರು. ರಾಮುಗ ತಿಕ್ಕಪಕ್ಕ ಹಿಡಿಯಿತು. ‘ಆಯ್ತು’ ಎಂದು ಹಾಗೆ ಬೌಲ್ಮಾ ಡಿದ. ಡಕ್ ಮಾಡತಾ ಮೂರು ರನ್ ಮಾಡಿದ. ಎರಡನೆ ಓವರ್ ನಲ್ಲಿ ಮಲ್ಲನ ಬೌಲಿಂಗ್. ಹಾಗೆ ಹೀಗೆ ಬಾರಿಸುತ್ತಾ ಹತ್ತು ರನ್ ಮಾಡಿದ. ಕೊನೆ ಬಾಲ್‌ಅನ್ನು ಹೈ ಹೊಡೆದಾಗ ಪ್ರಜ್ವಲ್‌ನ ಕೈಗೆ ಸಿಗುತ್ತಲಿತ್ತು. ‘ಹಿಡಿಲೇ ಬಿಡಬೇಡ’ ಎಂದು ಎಲ್ಲರೂ ಕೂಗಿದ್ರು. ಆದರೂ ಕ್ಯಾಚ್ ಮಿಸ್ ಆಯ್ತು ನೆಲಕ್ಕೆ ಬಿದ್ದು ಪುಟಿತು. ಪುಟಿದು ಬೀಳುವಾಗ ಹಿಡಿದ. ‘ಟಿಪ್ ಕ್ಯಾಚ್ ಔಟ್ ’ ಎಂದು ಮಲ್ಲ ತೀರ್ಪು ಕೊಟ್ಟ. ರಾಮು ‘ಅಲ್ಲ…ನಾಟ್ ಔಟ್’ ಅಂದ. “ನಮ್ಮ ಕ್ರಿಕೇಟ್‌ನಲ್ಲಿ ಟಿಪ್ ಕ್ಯಾಚ್” ಅದ ಎಂದ. ಸೀನ ಬ್ಯಾಟು ಬಿಟ್ಟ ಈಗ ಮಲ್ಲನ ಸರದಿ. ರಾಮು ನಾನೇ ಬಾಲಿಂಗ ಮಾಡತಿನಂದ. ರಾಮು ಹಾಕಿದ ಬಾಲ್‌ಗೆ ಮಲ್ಲ ಟಚ್ ಮಾಡಿದ. ಅದು ತಗಡಿನ ಕಂಪೌಂಡಿಗೆ ಬಡಿಯಿತು ಸಿಕ್ಸ್ ಅಂತ ನಾಗ ಕೂಗಿದ. ‘ಹೌದೌದು’ ಎಂದು ಎಲ್ಲರೂ ತಲೆ ಅಲ್ಲಾಡಿಸಿದರು.

“ಅದು ಹೇಗೆ? ಇದು ಟ್ರಯಲ್ ಬಾಲ್ ಕೌಂಟಿಲ್ಲ”ಎಂದ ರಾಮು.
“ಅದೆಲ್ಲ ಇಲ್ಲಮೊ. ನಮ್ಮಿಷ್ಟ. ಟ್ರಯಲ್ ಬಾಲ್ ತೊಗೊಬಹುದು ಬಿಡಬಹುದು” ಎಂದ ಮಲ್ಲ. ಎಲ್ಲರೂ ‘ಹೌದೌದು’ ಎಂದರು. ರಾಮು ಹಾಕಿದ ಬಾಲಿಗೆ ಏನು ಬಾರದ ಮಲ್ಲ ಸಿಕ್ಸ್ ಹೊಡೆದು ಹೀರೋ ಆದ. ಪ್ರಜ್ವಲ್‌ನ ಬೌಲಿಂಗ್‌ನಲ್ಲಿ ಮಲ್ಲ ಹನ್ನೆರಡು ರನ್ ಮಾಡಿ ಔಟಾದಾಗ ಈಗ ರಾಮುನ ಪಾಳಿ ಬಂದಿತು. ಒಳ್ಳೆ ಸ್ಟೈಲ್ ಮೇಲೆ ಬಂದು ಬ್ಯಾಟು ಹಿಡಿದು ನಿಂತ. ‘ರಾಮು ಬೆಂಗಳೂರಾಗ ಬ್ಯಾಟಮಾಡಿದವ. ಅವನಿಗೆ ಬೌಲಿಂಗ್ ಹಾಕೋಕೆ ಆಗಲ್ಲ’ ಎಂದು ಎಲ್ಲರೂ ಒಲ್ಲೆ ಎಂದಾಗ ನಾಗ ರೆಡಿ ಆದ. ನಾಗ ತನ್ನ ಸಹಜ ಶೈಲಿಯಲ್ಲಿ ಬೌಲಿಂಗ್ ಮಾಡಿದಾಗ ಬಾಲ್ ನೇರವಾಗಿ ಸ್ಟಂಪ್‌ಗೆ ಬಡಿಯಿತು. ನಾಗನ ಬೌಲಿಂಗ್ ಸಾಮಾನ್ಯ ಅನಿಸಲಿಲ್ಲ. ಗೂಗ್ಲಿ ಮಾಡಿದ್ದ. ರಾಮು ನಿರಾಶನಾದ. “ಹೇ ರಾಮು ಇದು ಔಟಿಲ್ಲ. ಟ್ರಯಲ್ ಬಾಲ್ ತೊಗೊ” ಎಂದು ನಾಗ ಹೇಳಿದಾಗ ರಾಮು ಜೀವ ಬಂದಂತಾಗಿ ಎರಡನೆ ಬಾಲ್‌ ಅನ್ನು ನೇರವಾಗಿ ಹೊಡೆದ, ಅದು ತಗಡಿನ ಗೇಟನ್ನು ದಾಟಿ ಹೋಯಿತು. ಪ್ರಜ್ವಲ್ ‘ಔಟ್’ ಎಂದು ಕೂಗಿದ. ’ಸಿಕ್ಸ್ ‘ಅನ್ನೊ ಬದಲು ‘ಔಟ್’ ಎನ್ನುವ ಇವರ ಮಾತಿಗೆ ರಾಮು “ಅದು ಹೇಗೆ ಔಟ್? ಸಿಕ್ಸ್ ಅದು” ಎಂದ. “ನಮ್ಮ ಆಟದಾಗ ಎಲ್ಲಿಬೇಕಂದ್ರ ಅಲ್ಲಿ ಹೊಡೆಂಗಿಲ್ಲ. ಜೋರ್ ಹೊಡದ್ರ ಔಟು. ಮುಳ್ಳಾಗ ಹೊಡದ್ರ ಔಟು. ಹಿಂದಕ ಹೊಡದ್ರ ಔಟು. ಟಿಪ್ ಕ್ಯಾಚ ಹಿಡದ್ರ ಔಟ್’ ಎಂದು ಹೇಳಿದ ಮಲ್ಲ. “ಹೌದು ರಾಮು ಜೊತೆಗೆ ನಾಲ್ಕು ಬಾಲ್ ಟಚ್ ಮಾಡಲಾರದ ಬಿಟ್ರುನೂ ಔಟ್” ಎಂದ ನಾಗ. ಇವರ ರೂಲ್ಸ್ ಕೇಳಿ ರಾಮುವಿಗೆ ಹುಚ್ಚು ಮಬ್ಬು ಕೂಡಿಯೆ ಹಿಡಿಯಿತು. ಇವನಿಗೆ ಸಾಥಿ ಯಾರು ಇರಲಿಲ್ಲ. ಇವರ ಜೊತೆ ಒಳ್ಳೆ ಸಿಕ್ಕುಬಿದ್ದೆ ಅನ್ನೋ ಹಾಗೆ ಆಯಿತು. “ಇದು ಅನ್ಯಾಯ” ಅಂದಾಗ, ಸೀನ “ನಾವು ಇಷ್ಟರೊಳಗ ಹ್ಯಾಂಗ ಆಡಿದಿವಿ ನೋಡಿದಿಲ್ಲ. ನಮಗೇನು ಹೊಡಿಯಾಕ ಬರಲ್ಲನು? ಎಂತೆಂತಹ ಟೂರ್ನಮೆಂಟ್ ಗೆದ್ದವರು ನಾವು. ದೊಡ್ಡ ಗ್ರೌಂಡ್‌ನ್ಯಾಗ ದೊಡ್ಡ ಹೊಡೆತ. ಸಣ್ಣ ಗ್ರೌಂಡನಾಗ ಅಷ್ಟರಾಗ ಆಡೋದು. ನೋಡು ನಾವು ಹಿಂದ ಹೊಡಿದಿವಾ? ಕಂಪೌಂಡ ದಾಟಿಸಿದಿವಾ…? ಬೆಲ್ಯಾಗ ಹೊಡದವಾ ? ಇಲ್ಲಲ್ಲ. ಇಷ್ಟರೊಳಗ ಹೊಡದು ಹತ್ತು ರನ್ ಮಾಡಿದೆ…” ಎಂದ. “ಹೌದು ನಾನು ಹನ್ನೆರಡು ರನ್ ಮಾಡಿದೆ….” ಎಂದ ಮಲ್ಲ. ಅವರ ಮಾತಿಗೆ ರಾಮು ಸ್ಟನ್ ಆದ.

“ಇರಲಿ, ರೂಲ್ಸ್ ಎಲ್ಲಾ ಗೊತ್ತಿಲ್ಲ. ಇನ್ನೊಂದು ಚಾನ್ಸ್ ಕೊಡೋಣ ರಾಮುವಿಗೆ” ಎಂದ ನಾಗ. ಈಗ ರೆಡಿನಾ ಅಂದ. “ನಾನೆ ಇವರನ್ನೆಲ್ಲ ಸೋಲಿಸೋಕೆ ಆಡೋಕೆ ಕರೆದು ನಾನೇ ಸೋಲುವ ಹಾಗೆ ಆಗುತ್ತಿದೆಯಲ್ಲ” ಎಂದು ಅನಿಸಿದರೂ ರಾಮು ತೋರುಗೊಡದೆ ರಕ್ಷಣಾತ್ಮಕ ಆಟ ಆಡಲು ನಿರ್ಧರಸಿದರೂ ನಾಗನ ಬೌಲಿಂಗ್‌ನಲ್ಲಿ ಒಂದು ರನ್ನು ಗಳಿಸಲಾಗಲಿಲ್ಲ. ಮಲ್ಲನ ಬೌಲಿಂಗನಲ್ಲಿ ಎರಡು ರನ್ನು ಮಾತ್ರ ಸಿಕ್ಕಿತು. ಸೀನನ ಬೌಲಿಂಗನಲ್ಲಿ ಮೂರು ರನ್ ಸಿಕ್ಕಿತು.

ಮಲ್ಲ “ರಾಮು ಮೂರು ಬಾಲ್ ಟಚ್ ಮಾಡಿದಿ ಹೊಡಿಬೇಕು. ನೀನು ಜಾಸ್ತಿ ಓವರ್ ಆಡಕತಿದಿ ಸರಿಯಲ್ಲ ನೋಡು” ಎಂದು ತನ್ನ ವಾದ ಮಾಡಿದ.
“ಇರಲಿ, ಅವನಿಗೆ ಲೋಕಲ್ ಕ್ರೀಕೆಟ್ ರೂಲ್ಸ್ ಗೊತ್ತಿಲ್ಲ ಹಾಕು ಬೌಲಿಂಗ್” ಎಂದ ನಾಗ. ಮಲ್ಲನ ಬೌಲಿಂಗ್ ನಂತರ ನಾಗನ ಬೌಲಿಂಗ್‌ನಲ್ಲಿ ರಾಮು ಬೌಂಡರಿ ಹೊಡೆದ. ಇನ್ನೊಂದು ಬಾಲನ್ನು ಕವರ್ ಡ್ರೈವ್ ಹೊಡೆದಾಗ ಅದು ಬೇಲಿಯೊಳಗೆ ಹೋಯಿತು. ‘ಔಟ್’ ಎಂದು ಎಲ್ಲರೂ ಕೂಗಿದರು. ರಾಮ ‘ಅಲ್ಲ….’ ಅಂತ ವಾದಿಸಿದರೂ ನಡಿಯಲಿಲ್ಲ. ‘ಇರಲಿ ಇನ್ನೊಂದು ಚಾನ್ಸ್ ಕೊಡೋಣ’ ಎಂದ ನಾಗ. ಉಳಿದವರು ‘ರಾಮು ಏನೂ ಮ್ಯಾಲಿನಿಂದ ಇಳಿದು ಬಂದಾನೇನು? ನಮಗೊಂದಾದ್ರೂ ಚಾನ್ಸ್ ಕೊಟ್ಟಿಯಾ? ಅವನಿಗೊಂದು ರೂಲ್ಸು ನಮಗೊಂದು ರೂಲ್ಸಾ?’ ಎಂದು ಜಗಳ ತೆಗೆದರು. “ಇರಲಿ ಈ ಬಾಲ್‌ನಲ್ಲಿ ಔಟ್ ಮಾಡುತೀನಿ ನೋಡಿ” ಎಂದಾಗ ರಾಮುವಿಗೆ ಸಿಟ್ಟು ಬಂತು. ಹೇಗಾದರೂ ಮಾಡಿ ಔಟ್ ಆಗಲೆ ಬಾರದೆಂದು ಮೈಯಲ್ಲಾ ಕಣ್ಣಾಗಿಸಿ ಆಟಕ್ಕಿಳಿದ. ನಾಗನು ಹಾಕಿದ ಬಾಲ್ ಬ್ಯಾಟಿನ ತುದಿಗೆ ಟಚ್ ಆಗಿ ಮೇಲೆ ಹಾರಿತು. ನಾಗನೇ ಓಡೋಡಿ ಹೋಗಿ ಗಾಳಿಯಲ್ಲಿದ್ದ ಬಾಲನ್ನು ಹಿಡಿದು ಸಂಭ್ರಮಿಸಿದ. ರಾಮು ಅನಿವಾರ್ಯವಾಗಿ ಸೋಲನ್ನು ಒಪ್ಪಿಕೊಳ್ಳಲೇಬೇಕಾಯಿತು. ರಾಮನ ರನ್‌ಗಳು ಇಬ್ಬರಿಗಿಂತಲೂ ಕಡಿಮೆ ಆಗಿದ್ದವು. ನಾಗನಿಗೆ ಬ್ಯಾಟಿಂಗ್‌ನಲ್ಲಿ ಬೇಗ ಸೋಲಿಸಬೇಕೆಂದು ರಾಮುನೆ ಬೌಲಿಂಗ್‌ಗೆ ಇಳಿದ.

ರಾಮು ಜೋರಾಗಿ ಬೌಲಿಂಗ ಮಾಡಿದ ಟ್ರಯಲ್ ಬಾಲ್ ಬಾಲ್‌ನಲ್ಲಿ ತಗಡಿಗೆ ಬಡಿಸಿದ. ‘ಫೋರ್’ ಎಂದು ಎಲ್ಲರೂ ಕೂಗಿದರು. “ಇಲ್ಲ ಟ್ರಯಲ್ ಬಾಲ್ ಬಾಲ್ ನನಗೆ ರನ್ ಬೇಕಿಲ್ಲ…”ಎಂದು “ರಾಮು ಹಾಕು” ಎಂದ ನಾಗ. ರಾಮುವಿನ ಎರಡು ಬಾಲುಗಳನ್ನು ಬೌಂಡರಿಗೆ ಅಟ್ಟಿ ಎಂಟು ರನ್ ಕದ್ದ. ಉಳಿದ ಬೌಲ್ ನಲ್ಲಿ ಎರಡೆರಡು ರನ್ ಓಡಾಡಿ ಗಳಿಸದ ಕೊನೆ ಬಾಲ್‌ನಲ್ಲಿ ಬೌಂಡರಿ ಹೊಡೆದು ಎಲ್ಲರಿಗಿಂತಲೂ ಹೆಚ್ಚು ರನ್ ಮಾಡಿದ.
“ಪ್ರಜ್ವಲ್ ಬಾ ಆಡು” ಎಂದು ಬ್ಯಾಟ್ ಕೊಟ್ಟ. ಓವರ್ ಮುಗಿದಿತ್ತು.

ನಾಗನ ಬ್ಯಾಟಿಂಗ್ ನೋಡಿ ಬೆರಗಾಗಿದ್ದ ರಾಮು “ಔಟಾಗಿಲ್ಲ ಯಾಕ ಕೊಟ್ಟಿ ?” ಎಂದ.
“ಇಲ್ಲ ರಾಮು ನಮ್ಮ ನಾಗ ಕಿಂಗ್ ಕೋಹ್ಲಿ ಇದ್ದಂಗ. ಕ್ರೀಸ್‌ಗೆ ಬರೋದು ಸಿಕ್ಕಂಗ ಹೊಡದು ರನ್ ರೇಟ್ ಹೆಚ್ಚಿಸೋದು ಔಟಾಗೋದು” ಎಂದ ಸೀನ.
“ಈಗ ಇನ್ನೂ ಔಟ್ ಆಗಿಲ್ಲಲ” ಎಂದ ರಾಮು.
“ಇಲ್ಲ ಟೈಮಾಯ್ತು, ಅವನಿಗೂ ಸಿಗಬೇಕಲ್ಲ. ಮಳೆ ಬೇರೆ ಬರುವ ಹಾಗಿದೆ” ಎಂದು ಏನೋ ಕಾರಣ ಹೇಳಿದ ನಾಗ. ಪ್ರಜ್ವಲ್ ನಾಲ್ಕು ಬಾಲ್ ಆಡೋದ್ರಲ್ಲಿ ಔಟ್ ಆಗಿ ಹೋದ. “ನಾಗ ಹೈಯೆಸ್ಟ್ ರನ್ ಹೊಡದವ, ಗೆದ್ದವ ಅಂತ ಕೂಗಿದ, ನಾನು ಸೆಕೆಂಡ್, ಮಲ್ಲ ಥರ್ಡ್, ಫೋರ್ಥ ರಾಮು, ಪ್ರಜ್ವಲ್ ಲಾಸ್ಟ್” ಎಂದು ಸೀನ ಕೂಗಿದ. ಆದರೆ ರಾಮುವಿಗೆ ಇಲ್ಲೂ ಸೋಲಾಗಿದ್ದು ನಿರಾಸೆ ಎನಿಸಿದರೂ ಯಾವುದೆ ತರಬೇತಿ ಇಲ್ಲದೆ ಇಷ್ಟೆಲ್ಲ ಆಡುವ ಅವರ ಸಾಮರ್ಥ್ಯಕ್ಕೆ ಖುಷಿ ಆಯಿತು. ಆಟವನ್ನು ಸ್ಪರ್ಧೆ ಎಂದು ಭಾವಿಸದೆ ಖುಷಿಯಾಗಿ ಆಡಿ ಗೆದ್ದು ಆ ಕ್ಷಣದಲ್ಲೆ ಮರೆಯುವ ನಾಗ, ಸೀನ, ಮಲ್ಲ ರಾಮುವಿಗೆ ಹಿರೋಗಳೆನಿಸಿದರು.

‍ಲೇಖಕರು Admin MM

August 14, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: