ಅಜಯ್ ಅಂಗಡಿ
**
ಸಮುದ್ರಯಾನ ಹೊರಟ ಕವಿತೆಯದು ಒಂಟಿ ಪಯಣ
ನೀಲಿ ಕಡಲು, ನೀಲಿ ಮುಗಿಲು, ಅಪ್ಪಳಿಸುವ ಅಲೆಗಳು
ಇವಿಷ್ಟೇ ಈ ಯಾನದಲ್ಲಿ
ಆಳವೆಷ್ಟೋ ಗೊತ್ತಿಲ್ಲ, ಆಚೆ ತೀರದ ಸುಳಿವೂ
ಒಂದಿನಿತೂ ಇಲ್ಲ
ನೀರೋಮಯವೆಲ್ಲ ಜಗವೆಲ್ಲ
ಒಂಟಿ ಹಕ್ಕಿಯಂತೆ
ತೇಲುವ ಕವಿತೆ
ತನ್ನೊಳಗಿನ ಧಗಧಗಿಸುವ
ಬಿಸಿಯುಸಿರಿಗೆ ತಣ್ಣೀರ
ಸೋಕಿಸುವ ತವಕದಲ್ಲಿ ನಿರತ
ಸುನಾಮಿ ಅಪ್ಪಳಿಸಿದರೆ ಅದರೊಟ್ಟಿಗೆ
ಕವಿತೆ ಎಲ್ಲವನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ
ನಗರ, ಮುನುಷ್ಯ, ನೆಲ ಎಲ್ಲವನ್ನೂ ಎಲ್ಲವೂ
ಮುಳುಗಡೆಯಾದ ಬಳಿಕ ಕವಿತೆಗೆ ಅಸಂಖ್ಯ ಕಥೆಗಳ
ಅನುರಣನ ಕೇಳಿಸದೆ ಇದ್ದೀತೇ?
ಎಲ್ಲವನ್ನೂ ಕಳಕೊಂಡ ಕಥೆಗಳೂ ಈಗ ಒಂಟಿ
ಕವಿತೆಯಂತೆ
ಒಂದು ನೀರವ, ಮಹಾ ಸ್ಫೋಟದ ನಂತರ
ಕವಿತೆಯ ಸಮುದ್ರಯಾನ ನಿರಂತರ
ಕಾಲಗರ್ಭದಲ್ಲಿ ಮತ್ತೆ ಮತ್ತೆ
ಘಟಿಸುವುದೀ ಕ್ಷಣ
ಮತ್ತದೇ ಕವಿತೆ
ಕಥೆ
ಸುನಾಮಿ ಎಲ್ಲವೂ.
0 ಪ್ರತಿಕ್ರಿಯೆಗಳು