ಪ್ರತಿಭಾ ಪಾಟೀಲ
ಧಾರವಾಡದ ‘ಕಾವ್ಯ ಸಂಸ್ಕೃತಿ ಯಾನ’ದಲ್ಲಿ ವಾಚಿಸಿದ ಕವನ
**
ಅವಳಿಗೆಲ್ಲಿ ಸಮಯವಿತ್ತು
ತನ್ನ ಒಡೆದ ಹಿಮ್ಮಡಿಗಳನ್ನು
ಆರೈಕೆ ಮಾಡಿಕೊಳ್ಳಲು
ಎಲ್ಲರಂತಲ್ಲದವಳು
ಎಲ್ಲರಿಗಾಗಿ ದುಡಿಯುವವಳು
ನೆಲ್ಲಕ್ಕೂರಿದರೆ ಟಿಸಿಲೊಡೆದು ರಕ್ತ
ಸ್ರಾವವಾಗಿ
ಶಗಣಿಯ ನೆಲವೆಲ್ಲ ಇಂಗಿಕೊಂಡು
ಹಂಗಿಸಿ ನಗುತಿತ್ತು, ಒಡೆದ ಹಿಮ್ಮಡಿಗೂ
ಅದು ಅರಿವಾಗಿ ಸುಮ್ಮನಾಗುತ್ತಿತ್ತು, ಆರೈಕೆ
ಮಾಡಿಕೊಳ್ಳಲು ಅವಳಿಗೆಲ್ಲಿ ಸಮಯವಿತ್ತು
ದುಡಿದು, ದಣಿವಿಗೆ ಕುಡಿದು, ಕುಡಿದ ಮತ್ತಲ್ಲಿ
ಅವಳನ್ನು ಹೊಡೆದು, ನಂತರ ಮಂಚಕ್ಕೆ
ಎಳೆದ
ಗಂಡನಿಗೆ ರಾತ್ರಿಯಲ್ಲ ಉಪಚರಿಸಿ, ಮೆಲ್ಲಗೆ
ಎಲ್ಲವನ್ನೂ ಮರೆಯುವವಳಿಗೆ ಮಲ್ಲಿಗೆ
ಮುಡಿಯಲು ಅವಳಿಗೆಲ್ಲಿ ಸಮಯವಿತ್ತು
ಕಸ ಗೂಡಿಸಿ ನೆಲ ಸಾರಿಸಿ ರಂಗೋಲಿ
ಇಟ್ಟಾಗ
ಅಂಗಳವೆಲ್ಲ ಮಂಗಳ ರಾಗ ಹಾಡುತ್ತಿತ್ತು
ಎಣ್ಣೆಸ್ನಾನ ಮಾಡಿ ಮೈಲಿಗೆ ಕಳೆದುಕೊಂಡು
ದೇವರಿಗೆ ದೀಪ ಹಚ್ಚಿದರೆ ಗಂಟೆ ತಾಳ
ಹಾಕುತ್ತಿತ್ತು
ತನ್ನ ನೆನೆದ ಕೂದಲನ್ನು ಒಣಗಿಸಿ
ಸಿಂಗರಿಸಿಕೊಳ್ಳಲು ಅವಳಿಗೆಲ್ಲಿ
ಸಮಯವಿತ್ತು
ಗಂಟೆ ನಾದಕ್ಕೆ ಸೂರ್ಯ
ಮೈಮುರಿದೇಳುತ್ತಿದ್ದ
ಅವಳ ಬಳೆಗಳ ಸದ್ದಿಗೆ ದನಕರುಗಳು
ಎದ್ದು ನಿಂತಾಗ ಕೊಟ್ಟಿಗೆಯನ್ನು
ಸ್ವಚ್ಚಗೊಳಿಸಿ
ಆಕಳ ಕೆಚ್ಚಲು ಕರೆದು ಬಟ್ಟಲು
ತುಂಬುತ್ತಿದ್ದಳು
ಶಗಣಿ ಮೆತ್ತಿದ ಆ ಕೈಗಳಿಗೆ ಮದರಂಗಿ
ಹಚ್ಚಿಕೊಳ್ಳಲು ಅವಳಿಗೆಲ್ಲಿ ಸಮಯವಿತ್ತು
ಕಟ್ಟಿಗೆ ತಂದು ಉರುವಲು ಮಾಡಿ ಊದಿ
ಒಲೆ ಹೊತ್ತಿಸಿ ಹೊತ್ತೊತ್ತಿಗೆ ಮನೆಮಂದಿಗೆಲ್ಲ
ಅನ್ನ ಬೇಯಿಸಿ ಹಾಕುವ
ಅನ್ನಪೂರ್ಣೆಯವಳು
ಇಷ್ಟಾರ್ಥಗಳನು ಪೂರೈಸುವ
ಸದ್ಗುಣೆಯಾದ
ಅವಳ ಬಿಳಿಯಾಗುತ್ತಿರುವ ಕೂದಲಿಗೆ ಬಣ್ಣ
ಹಚ್ಚಿಕೊಳ್ಳಲು ಅವಳಿಗೆಲ್ಲಿ ಸಮಯವಿತ್ತು
ಮಕ್ಕಳ ಲಾಲನೆ ಪಾಲನೆ,
ಮದುವೆಗಳಾದವು
ಅವಳು ಮಾಡಿದ ಹಬ್ಬಹರಿದಿನಗಳ
ಲೆಕ್ಕವಿಲ್ಲ
ದುಡಿಮೆಯೊಂದೆ ಲಕ್ಷ್ಯ ಇದ್ದವಳಿಗೆ
ವಯಸ್ಸಾದ ಪರಿವಿಲ್ಲ ರೋಗಗಳ
ದಾರಿಯಲ್ಲಿ
ನಿಶಕ್ತ ದೇಹಕ್ಕೆ ಮದ್ದು ಔಷಧಿಗಳಿಂದ ಆರೈಕೆ
ಮಾಡಿಕೊಳ್ಳಲು ಅವಳಿಗೆಲ್ಲಿ ಸಮಯವಿತ್ತು
ಈಗವಳು ದೇವರ ಪಾದ ಸೇರಿಯಾಗಿತ್ತು
0 ಪ್ರತಿಕ್ರಿಯೆಗಳು