ಎರಡು ಹೊಸ ಪುಸ್ತಕಗಳೊಂದಿಗೆ ಎಂ ಆರ್ ಕಮಲ..

ಎಂ ಆರ್ ಕಮಲ ಎರಡು ಹೊಸ ಪುಸ್ತಕಗಳೊಂದಿಗೆ ನಮ್ಮೆದುರು ಬಂದಿದ್ದಾರೆ.
ಕೊರೋನಾ ಭಯದಿಂದ ಎಲ್ಲರೂ ತತ್ತರಿಸಿ ಲಾಕ್ ಡೌನ್ ನಿಂದ ಬೋರ್ ಹೊಡೆಸಿಕೊಂಡು ಕುಳಿತಿದ್ದಾರೆ ಕಮಲ ಮಾತ್ರ ಅದನ್ನು ಸದುಪಯೋಗಪಡಿಸಿಕೊಂಡಿದ್ದಾರೆ 
#ಕ್ವಾರಂಟೈನ್ ಮತ್ತು ಊರ ಬೀದಿಯ ಸುತ್ತು ಎರಡು ಕೃತಿಗಳು ನಮ್ಮ ಮನಕ್ಕೆ ಆವರಿಸಿದ್ದ ನೀರವತೆಯನ್ನು ತೊಡೆದು ಹಾಕುವಂತಿವೆ.
#ಕ್ವಾರಂಟೈನ್ ಕೃತಿಗೆ ಕಮಲ ಅವರು ಬರೆದಿರುವ ಮಾತು ‘ಅವಧಿ’ ಓದುಗರಿಗಾಗಿ ಇಲ್ಲಿದೆ-

ಎಲ್ಲ  ಓದುಗರಿಗೆ ನಮಸ್ಕಾರ,
ಸೀರೆ, ಕಾವ್ಯ ವಾಚನ, ಹಾಡು, ಸಂಯೋಜನೆ, ಅಭಿನಯ, ಅಡುಗೆ ಚಾಲೆಂಜುಗಳಲ್ಲಿ  ಕೆಲವೊಂದರಲ್ಲಾದರೂ  ಭಾಗವಹಿಸುತ್ತಾ, `ಉಸಿರುಗಟ್ಟುತ್ತಿದ್ದ ‘ ಕಾಲವನ್ನು ಸುಗಮ ಮಾಡಿಕೊಂಡವರಲ್ಲಿ ಅವಳೂ ಒಬ್ಬಳು.
ಆದರೆ ಅವಳಿಗೆ ಅವಳೇ ಒಂದು ಸವಾಲನ್ನು ಒಡ್ಡಿಕೊಂಡಿದ್ದಳು. ಅದೆಂದರೆ `ಇಪ್ಪತ್ತೈದು ದಿನಗಳ ಕೊರೋನಾ ಕಾಲದ  ತನ್ನ  ಭಾವನೆಗಳನ್ನು, ಅನುಭವವನ್ನು ತಪ್ಪದೇ ಹಿಡಿದಿಡುತ್ತ ಹೋಗುವುದು. ಕಾಲುನೋವು, ತಲೆನೋವು, ಸಣ್ಣ ಪುಟ್ಟ ಆರೋಗ್ಯದ ಸಮಸ್ಯೆ  ಯಾವುದನ್ನು ಲೆಕ್ಕಿಸದಂತೆ ಬರೆಯುವುದು. ಹಿಂದಿನ ದಿನ ರಾತ್ರಿ ಏನು ಬರೆಯುವುದು ಎಂದು ಯೋಚಿಸಿ ತಲ್ಲಣಕ್ಕೊಳಗಾಗಬಾರದು. ಅದು ಅವಳ ಸಹಜ ಅಭಿವ್ಯಕ್ತಿಯಾಗಿರಬೇಕು. ಬೆಳಗ್ಗೆ ಎದ್ದು ನಾಯಿಯನ್ನು ವಾಕ್ ಕರೆದೊಯ್ದು, ತಿಂಡಿ ಮಾಡಿ, ಮನೆಗೆಲಸವನ್ನು ಬೇಗ ಬೇಗಮುಗಿಸಿ, ಕೆಲಸ  ತಪ್ಪಿಸಿಕೊಂಡೆ ಎನ್ನುವ ಅಪರಾಧಿ ಮನೋಭಾವ ಕಾಡದಂತೆ ನೋಡಿಕೊಂಡು, ಬೆಳಗ್ಗೆ ಎಂಟುಗಂಟೆಗೆ ಬರೆಯಲು ಆರಂಭಿಸಿ ಒಂಬತ್ತು ಗಂಟೆಯೊಳಗೆ ಮುಗಿಸಿ ಅಡುಗೆಗೆ ತೆರಳುವುದು.  ಬರೆಯುವಾಗ ತಾನು ಓದಿದ್ದು  ಮಾತ್ರ ಕೈ ಹಿಡಿದು ನಡೆಸಬೇಕು. ಅದಕ್ಕಾಗಿ ತಡಕಾಡಬಾರದು. (ಮರೆತ ಕಾವ್ಯದ ಕೆಲವು ಸಾಲುಗಳನ್ನು ಮಾತ್ರ ಹುಡುಕಬೇಕಾಯಿತು).
ಅವಳು ಸ್ನಾತಕೋತ್ತರ ವಿದ್ಯಾಭ್ಯಾಸವನ್ನು ಮಾಡುವಾಗ `ಇಂಗ್ಲಿಷ್ ಮತ್ತು ಯುರೋಪಿಯನ್ ಸಾಹಿತ್ಯ’ವನ್ನು  ಮುಖ್ಯ ವಿಷಯವಾಗಿ ತೆಗೆದುಕೊಂಡಿದ್ದಳು. ಅದು ಅವಳಿಗಿಲ್ಲಿ ನೆರವಾಯಿತು. ಆಗಿನ  ವಿದ್ಯಾಭ್ಯಾಸದ ಕ್ರಮ ಕೊಂಚ ಭಿನ್ನವಿತ್ತು ಅನ್ನಿಸುತ್ತದೆ. ಹೆಸರಿಗೆ  ವರ್ಡ್ಸ್ ವರ್ತ್  ಅಥವಾ ಶೆಲ್ಲಿಯ ಹತ್ತು ಕವನಗಳನ್ನು  ಪಠ್ಯಕ್ರಮದಲ್ಲಿ ಇಟ್ಟಿದ್ದರೂ ಅವರು ಬರೆದ ಎಲ್ಲ ಕವನಗಳ ಹಿನ್ನೆಲೆಯಲ್ಲಿಯೇ ಪ್ರಶ್ನ ಪತ್ರಿಕೆಗಳು ರೂಪುಗೊಳ್ಳುತ್ತಿದ್ದವು. ಅವಳದಕ್ಕೆ  ಉತ್ತರಿಸಬೇಕಾಗಿತ್ತು. ಹಾಗಾಗಿ `ಜ್ಞಾನ ಭಾರತಿ’ಯ  ಗ್ರಂಥಾಲಯದಲ್ಲಿ ಸದಾ ಅವಳು ಮತ್ತವಳ ಗೆಳೆಯ ಗೆಳತಿಯರು ಇರುತ್ತಿದ್ದರು. ಅರ್ಥವಾಗಲಿ, ಅರ್ಥವಾಗದಿರಲಿ ಸುಮ್ಮನೆ ಎಲ್ಲರೂ ಓದುತ್ತ ಹೋದರು ಪ್ರೇಮ ಕವನಗಳಲ್ಲಿ ತುಸು ವಿಶ್ರಮಿಸಿಕೊಂಡರು.  ಹಾಗೆ ನೋಡಿದರೆ ಪ್ರೀತಿ ಹುಟ್ಟುತ್ತಿದ್ದುದೇ `ಗ್ರಂಥಾಲಯಗಳಲ್ಲಿ’!  ಆ ಕಡೆಯಿಂದ ಪುಸ್ತಕವನ್ನು ಹುಡುಕಿಕೊಂಡು ಬರುವ ಅವಳು, ಈ ಕಡೆಯಿಂದ ಪುಸ್ತಕ ಹುಡುಕಿ ಬರುವ ಅವನನ್ನು ಆ ಕಾಲದ ಅನೇಕ ಸಿನೆಮಾಗಳು ಚಿತ್ರಿಸಿವೆ. ಪರಸ್ಪರ ಮಾತನಾಡಲು ಹೆದರುತ್ತಿದ್ದವರಂತೂ ಪುಸ್ತಕಗಳಲ್ಲಿ ಪ್ರೇಮ ಪತ್ರಗಳನ್ನೋ, ಕವಿತೆಗಳನ್ನೋ ಇಟ್ತು,  ಸದ್ದಿರದೆ ಮರೆಯಾಗಿಬಿಡುತ್ತಿದ್ದರು. ಎಲ್ಲವನ್ನು ಎಲ್ಲರೆದುರಿಗೆ ಗಟ್ಟಿಯಾಗಿ ಹೇಳಿಬಿಡುವ ಅವಳ ಸ್ವಭಾವ ಹುಡುಗರಿಗೆ ಅಧೈರ್ಯ ಮೂಡಿಸಿದ್ದೇ ಹೆಚ್ಚು.
ಯೇಟ್ಸ್ ಕವಿ ಅವಳಿಗೆ ಪ್ರೀತಿಪಾತ್ರನಾಗಿದ್ದ. ಅದರಲ್ಲೂ ಅವನ `Second Coming ‘  ಬಗ್ಗೆ ವೈವಾದಲ್ಲಿ ಪ್ರಶ್ನೆ ಕೇಳಿದ್ದಾಗ `Innocence is drowned ‘ ಎಂದು  ಕಿರುಚಿದ್ದಳು. ಯೇಟ್ಸ್ ಕವಿಯೇ  ಅವಳನ್ನು ಒಲಿಸಿಕೊಳ್ಳುವ ಮಾರ್ಗ ಎಂದು ತಿಳಿದು ಅವಳ ನೋಟ್ ಪುಸ್ತಕದಲ್ಲಿ ಯೇಟ್ಸ್ ನ  ಕವನಗಳನ್ನು  ಕೆಲವರು ಬರವಣಿಗೆ ತಮ್ಮದಲ್ಲವೆನ್ನುವಂತೆ ಗೀಚಿದ್ದರು. ಅದರಲ್ಲಿ ಮುಖ್ಯವಾಗಿ `when you are old and grey ‘ ಕವನದ ಸಾಲುಗಳು.
How many loved your moments of glad grace,
And loved your beauty with love false or true,
But one man loved the pilgrim soul in you,
And loved the sorrows of your changing face;
(ನೀ ಮುದುಕಿಯಾಗಿ ಕೂದಲು ನರೆತು, ಕಣ್ಣಲ್ಲಿ ನಿದ್ದೆ ತುಂಬಿದ್ದಾಗ, ಬೆಂಕಿಗೂಡಿನ ಬಳಿ ಕೂತು ಈ ಪುಸ್ತಕವನ್ನು ಕೈಗೆತ್ತಿಕೊ, ನಿನ್ನ ಹರ್ಷ, ಉಲ್ಲಾಸದ ಗಳಿಗೆಗಳನ್ನು ಅನೇಕರು ಪ್ರೀತಿಸಿದ್ದರು. ಅದು ನಿಜವೋ, ಸುಳ್ಳೋ , ನಿಜವಾಗಿ ಪ್ರೀತಿಸಿದ್ದು ಅವರು ನಿನ್ನ ಚೆಲುವನ್ನು. ಆದರೆ ಒಬ್ಬ ಮಾತ್ರ ನಿನ್ನ `ಯಾತ್ರಿಕ   ಪವಿತ್ರಾತ್ಮವನ್ನು’  ಪ್ರೀತಿಸಿದ!  ಹಾಗೆ ಬದಲಾಗುತ್ತಿದ್ದ ನಿನ್ನ ಮುಖದ ದುಗುಡಗಳನ್ನು ಕೂಡ)
ಈಗವಳ ಕೂದಲು ಬೆಳ್ಳಗಾಗಿದೆ.  ಅದನ್ನು ನೆನೆಸಿಕೊಂಡು ಖುಷಿಯಲ್ಲಿ ನಗುತ್ತಾಳೆ. ಅವಳು ಎಂದರೆ `ಅವಳು’ ಮಾತ್ರ ಅಲ್ಲ. ಅವಳಂಥ ಲೆಕ್ಕವಿರದಷ್ಟು `ಅವಳು’ಗಳು! ಇಪ್ಪತ್ತೈದು ದಿನದ ಬರವಣಿಗೆಯಲ್ಲಿ ಅವರೆಲ್ಲರೂ ಅವಳೊಂದಿಗಿದ್ದಾರೆ. ಅವಳು ತಾನು ಓದಿದ ಓದೆಲ್ಲಾ ಮೇದ ಕಬ್ಬಿನ ಸಿಪ್ಪೆ ಎಂದು ತಿಳಿದಿದ್ದಳು. ಆದರೆ `ಆದ ಕಬ್ಬು’ (ರಸಭರಿತ ಕಬ್ಬು) ಎಂದವಳಿಗೆ ಅರ್ಥವಾಗಿದೆ .
ಕೊರೋನಾ ಕಾಲವನ್ನು ಬಹುಬೇಗ ದಾಟಿ, ನಿತ್ಯದ ಬದುಕಿಗೆ ಮರಳುತ್ತೇವೆ ಎನ್ನುವ ಆತ್ಮವಿಶ್ವಾಸ ಇದ್ದೇ ಇದೆ.
ಪ್ರೀತಿಯಿಂದ ಓದಿ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದ.
ಪ್ರೀತಿಯಿಂದ,
ಅವಳು

ಎಂ ಆರ್ ಕಮಲ

ಎಂ ಆರ್ ಕಮಲ


ಪುಸ್ತಕಗಳು ಬಂದಿವೆ….
ಪುಸ್ತಕದಂಗಡಿಗಳಲ್ಲಿ ಸಿಗುವುದು ಇನ್ನೂ ಒಂದು ವಾರವಾಗಬಹುದು.
ಆದರೆ ನನ್ನ ಬಳಿ ಈಗಲೇ ಸಿಗುತ್ತದೆ..
ಆಸಕ್ತರು ಸಂಪರ್ಕಿಸಬಹುದು.
ಪಿನ್ ಕೋಡಿನೊಂದಿಗೆ ವಿಳಾಸ , ಫೋನ್ ನಂಬರ್ ಇನ್ಬಾಕ್ಸ್ ಮಾಡಿದರೆ ಕಳಿಸುವೆ.
ಊರ ಬೀದಿಯ ಸುತ್ತು : 175 Rs
# ಕ್ವಾರಂಟೈನ್ : 85 Rs
Google pay Phone no 9880892243

‍ಲೇಖಕರು avadhi

June 9, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: