ಎರಡು ಗರಿಗಳು

Gopal Wajapeyi

ಗೋಪಾಲ ವಾಜಪೇಯಿ

paper birdಉಡುಪಿ ಜಿಲ್ಲೆಯ ಬ್ರಹ್ಮಾವರದ ಬಡ ಮನೆತನದಲ್ಲಿ ಹುಟ್ಟಿದ ಬಾಲಕ ಸದಾಶಿವ ಅನಿವಾರ್ಯವಾಗಿ ರಂಗಭೂಮಿಯ ವಿಂಗಿನಲ್ಲಿ ಬೆಳೆಯಬೇಕಾಗಿ ಬಂತು. ಅಲ್ಲಿ ಪರದೆ ಹಿಡಿಯುವುದರಿಂದ ಹಿಡಿದು ಪೋಷಕ ಪಾತ್ರಗಳನ್ನು ವಹಿಸುವಲ್ಲಿಯವರೆ
ಗಿನ ಎಲ್ಲ ಕೆಲಸಗಳನ್ನೂ ಕರಗತ ಮಾಡಿಕೊಂಡರು.

”ನನಗೆಲ್ಲ ಗೊತ್ತು,” ಎಂದು ಯಾವತ್ತೂ ಗರ್ವ ತೋರದೇ, ಸರ್ವರೊಳಗೊಂದಾಗಿ ಬೆರೆತರು. ಅನ್ನವಿಕ್ಕಿ, ಆಶ್ರಯವಿತ್ತು, ಆತ್ಮೀಯತೆಯಿಂದ ನೋಡಿಕೊಂಡ ಎಲ್ಲರ ಬಗ್ಗೆಯೂ ಅವರಿಗೆ ಗೌರವ, ವಿನೀತಭಾವ.

ತಮ್ಮ ಹದಿನೈದನೆಯ ವರ್ಷದಿಂದಲೇ ಕಲಾಭೂಷಣ ಏಣಗಿ ಬಾಳಪ್ಪನವರ ‘ಕಲಾವೈಭವ ನಾಟ್ಯ ಸಂಘ’ದಲ್ಲಿ ಕೆಲಸ ಮಾಡತೊಡಗಿದ ಸದಾಶಿವ, ಊರಿನ ಹೆಸರನ್ನೇ ಅಡ್ಡ ಹೆಸರನ್ನಾಗಿ ಇಟ್ಟುಕೊಂಡರು. ಸದಾಶಿವ ಬ್ರಹ್ಮಾವರರನ್ನು ಇವತ್ತಿಗೂ ಶತಾಯುಷಿ ಏಣಗಿ ಬಾಳಪ್ಪನವರು ಪುತ್ರವಾತ್ಸಲ್ಯದಿಂದಲೇ ಕಾಣುತ್ತಾರೆ. ಇವರೂ ಅಷ್ಟೇ ; ಬಾಳಪ್ಪನವರನ್ನು ‘ಮಾಲಿಕರೆಂದೇ’ ಕರೆಯುತ್ತಾರೆ.

sadashiva brahmavara1‘ಕಲಾವೈಭವ ನಾಟ್ಯ ಸಂಘ’ ಮುಚ್ಚಿದ ಮೇಲೆ ಬೇರೆ ಬೇರೆ ನಾಟಕ ಕಂಪನಿಗಳಲ್ಲಿ ಕೆಲಸ ಮಾಡಿದ ಸದಾಶಿವ ಬ್ರಹ್ಮಾವರ ಅವರು ಗಾಂಧೀ ನಗರದ ನಿರ್ಮಾಪಕರ ಕಣ್ಣಿಗೆ ಬಿದ್ದರು. ಆಗಿನಿಂದ ಈ ತನಕ ಏನಿಲ್ಲೆಂದರೂ ಇನ್ನೂರು ಕನ್ನಡ ಸಿನಿಮಾಗಳಲ್ಲಿ ತಂದೆ, ತಾತ, ಮನೆಯಾಳು, ಶಾಲಾ ಶಿಕ್ಷಕ ಹೀಗೆ ಪೋಷಕ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತ, ಕನ್ನಡ ಚಿತ್ರ ರಸಿಕರ ಮನದಲ್ಲಿ ಆತ್ಮೀಯರಾಗಿ ಕೂತವರು. ಯಾವುದೇ ದುಶ್ಚಟಗಳಿಗೆ ಬಲಿಯಾಗದೇ, ಆರೋಗ್ಯವನ್ನು ಕಾಪಾಡಿಕೊಂಡು ಬಂದಿರುವ ಸದಾಶಿವ ಬ್ರಹ್ಮಾವರ ಅವರೊಂದಿಗೆ ಮಾತಾಡುವುದೇ ಒಂದು ಆನಂದದ ಅನುಭವ ನೀಡುತ್ತದೆ.

ಇದೀಗ 87ನೆಯ ವಯಸ್ಸಿನಲ್ಲೂ ಸಿನಿಮಾದಲ್ಲಿ ಪಾತ್ರವಹಿಸಬೇಕಾದ ಅನಿವಾರ್ಯತೆ ಅವರದು. ತಾನೊಬ್ಬ ಚಿತ್ರ ನಟ ಎಂಬ ಹಮ್ಮು ಬಿಮ್ಮುಗಳಿಲ್ಲದೇ, ಇವತ್ತಿಗೂ ಬಸ್ಸಿನಲ್ಲಿಯೇ ಹುಬ್ಬಳ್ಳಿ-ಧಾರವಾಡಗಳಿಗೆ ಹೋಗಿ ಬರುವ ಸರಳ ವ್ಯಕ್ತಿ ಸದಾಶಿವ ಬ್ರಹ್ಮಾವರ. ಎಂದೂ ತನ್ನ ಕಷ್ಟಗಳನ್ನು ಇತರರೆದುರು ಹೇಳಿಕೊಳ್ಳದೆ, ಯಾರೆದುರೂ ಕೈ ಒಡ್ಡದೇ ಬದುಕಿರುವವರು ಅವರು. ಹಾಗೇನಾದರೂ ಅವರು ಕೈ ಒಡ್ಡಿದ ಪ್ರಸಂಗಗಳಿದ್ದರೆ ಅದು ಕ್ಯಾಮರಾ ಮುಂದೆ ಒಂದು ಪಾತ್ರವಾಗಿ ಅಷ್ಟೇ.

ಇಂಥ ಸ್ವಾಭಿಮಾನಿ ಹಿರಿಯನಿಗೆ 2015ರ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ದೊರೆತಿರುವುದು ಆ ಪ್ರಶಸ್ತಿಗೆ ನಿಜಕ್ಕೂ ಬೆಲೆ ಬಂದಂತಾಗಿದೆ.
ರಂಗಭೂಮಿಯ ನಡೆದಾಡುವ ವಿಶ್ವಕೊಶವೇ ಆಗಿರುವ ಸದಾಶಿವ ಬ್ರಹ್ಮಾವರ ಅವರಿಗೆ ಈ ಮೂಲಕ ನನ್ನ ಅಭಿನಂದನೆಗಳು.

‘ಸೋಮಣ್ಣನ ಸ್ಟಾಕ್’

paper birdಕನ್ನಡ ರಂಗಭೂಮಿಯ ಹಿರಿಯ ಕಲಾವಿದ, ಲೇಖಕ, ಸರಸ ಮಾತುಗಾರ ಎಚ್.ಜಿ. ಸೋಮಶೇಖರ ರಾಯರಿಗೆ ಈ ಸಲದ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ದೊರಕಿರುವುದು ಖುಷಿಯ ಸಂಗತಿ. ಸೋಮಣ್ಣ ಎಂದೇ ನಾವೆಲ್ಲ ಕರೆಯುವ ಸೋಮಶೇಖರ ರಾಯರು ಕೆನರಾ ಬ್ಯಾಂಕ್ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದವರು.

ಮೈಸೂರು ಅನಂತಸ್ವಾಮಿ, ಗುಣಸಿಂಗ್, ವಿಜಯಭಾಸ್ಕರ್, ಕೆ.ಎಸ್.ಎಲ್. ಸ್ವಾಮಿ ಮುಂತಾದವರ ಮಿತ್ರರಾಗಿ, ಅವರೊಂದಿಗೆ ಒಂದೇ ಕೋಣೆಯಲ್ಲಿ ವಾಸಿಸುತ್ತ, (ಮೈಸೂರಿನಲ್ಲಿ) ವಿದ್ಯಾರ್ಥಿ ದೆಸೆಯಿಂದಲೇ ರಂಗಭೂಮಿಯತ್ತ ಆಕರ್ಷಿತರಾದವರು. ನಂತರ ಅನೇಕ ಚಲನಚಿತ್ರಗಳಲ್ಲೂ ಅವರು ಅಭಿನಯಿಸಿದರು.

h g somashekar raoವಿಶೇಷವಾಗಿ ನನಗೆ ಅವರು ಯಾಕೆ ಹತ್ತಿರ ಎಂದರೆ, ಹಿಂದೊಮ್ಮೆ ‘ಕಸ್ತೂರಿ’ ಪತ್ರಿಕೆಯಲ್ಲಿ ಬ್ಯಾಂಕು ಸಾಲ ವಸೂಲಿಗಾರನಾಗಿ ಪಟ್ಟ ಪಾಡುಗಳ ಬಗ್ಗೆ ಅವರದೊಂದು ಲಘು ಹಾಸ್ಯದ ಅನುಭವ ಕಥನವನ್ನು ನಾನು ಓದಿದ್ದೆ. ಮುಂದೆ ನಾನು ‘ಕರ್ಮವೀರ’ದ ನಿರ್ವಾಹಕ ಸಂಪಾದಕನಾದ ಮೇಲೆ (1996-1998ರ ಅವಧಿಯಲ್ಲಿ) ಬ್ಯಾಂಕಿನ ರಸವತ್ತಾದ ಅನುಭವಗಳನ್ನು ಬರೆಯಿರಿ ಎಂದು ಗಂಟುಬಿದ್ದು ಒಪ್ಪಿಸಿದೆ.

‘ಸೋಮಣ್ಣನ ಸ್ಟಾಕ್’ನಿಂದ ಎಂಬ ಶೀರ್ಷಿಕೆಯನ್ನೂ ನಾನೇ ಸೂಚಿಸಿ ದುಂಬಾಲು ಬಿದ್ದೆ. ಸುಮಾರು ಐವತ್ತಕ್ಕೂ ಹೆಚ್ಚು ವಾರ ಅವರು ‘ಕರ್ಮವೀರ’ದಲ್ಲಿ ತಮ್ಮ ನೆನಪಿನ ಸ್ಟಾಕಿನಲ್ಲಿರುವ ಸರಕನ್ನು ತೆಗೆದು, ಓದುಗರಿಗೆ ಸವಿಯಾಗಿ ಉಣಬಡಿಸಿದರು. ಮುಂದೆ ಅದನ್ನು ಅದೇ ಹೆಸರಿನಲ್ಲಿ ಪುಸ್ತಕ ರೂಪದಲ್ಲೂ ಪ್ರಕಟಿಸಿದರು. ಇಂದಿಗೂ ಒಂದಿಲ್ಲೊಂದು ಪುಸ್ತಕ ರಚನೆಯಲ್ಲಿ ತೊಡಗಿಕೊಂಡೇ ಇರುವವರು ಸೋಮಣ್ಣ.

2015 ರ ಸಾಲಿನ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ಗೆ ಭಾಜನರಾಗಿರುವ ಅವರಿಗೆ ನಾನು ವೈಯಕ್ತಿಕವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

‍ಲೇಖಕರು admin

November 1, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Shrinivas

    Sir, Where can I get ‘ಸೋಮಣ್ಣನ ಸ್ಟಾಕ್’ನಿಂದ book? I am intended to read it again but not able to find it anywhere. Please reply. Thank you

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: