‘ಎದೆ ತುಂಬಿ ಹಾಡಿದ’ ಎಸ್ ಪಿ ಸರ್…

-ಜಿ ಎನ್ ಮೋಹನ್

‘ಇದು ಕೇಳೋ ಪ್ರಶ್ನೆನಾ..’ ಅಂತ ಗದರಿದ ದನಿಯಲ್ಲೇ ಕೇಳಿದೆ.

ಎಸ್ ಪಿ ಬಾಲಸುಬ್ರಮಣ್ಯಂ ಅವರ ‘ಎದೆ ತುಂಬಿ ಹಾಡುವೆನು’ ಕನ್ನಡದ ಎಲ್ಲರ ಮನ ಗೆದ್ದು ಆಗಿತ್ತು. ಕನ್ನಡದ ಜನತೆ ಎಸ್ ಪಿ ಅವರ ಈ ಕಾರ್ಯಕ್ರಮಕ್ಕಾಗಿಯೇ ಕಾದು ಕೂರುತ್ತಿದ್ದರು. ‘ಈಟಿವಿ ಕನ್ನಡ’ದ ಅತ್ಯಂತ ಪಾಪ್ಯುಲರ್ ಪ್ರೋಗ್ರಾಮ್ ಇದು. ‘ಸ್ವರಾಭಿಷೇಕಂ’ ಹೆಸರಿನಲ್ಲಿ ಈಟಿವಿ ತೆಲುಜಿನಲ್ಲಿ ಆರಂಭವಾದ ಕಾರ್ಯಕ್ರಮ ಇದು. ರಾಮೋಜಿ ರಾಯರ ಕೂಸು. ಎಸ್ ಪಿ ಅವರಿಗಾಗಿಯೇ ರೂಪಿಸಿದ ಈ ಕಾರ್ಯಕ್ರಮ ತೆಲುಗಿನಲ್ಲಿ ಎಷ್ಟು ಪಾಪ್ಯುಲರ್ ಆಗಿ ಹೋಗಿತ್ತೆಂದರೆ ಎಸ್ ಪಿ ಬಗ್ಗೆ ಅಷ್ಟೇ ಹುಚ್ಚಿರುವ ಕನ್ನಡಿಗರಿಗೂ ಅದನ್ನು ದಾಟಿಸಬೇಕೆಂದು ರಾಮೋಜಿ ರಾಯರು ನಿರ್ಧರಿಸಿದರು. 

ಈಟಿವಿ ಕನ್ನಡಕ್ಕೆ ಎದೆ ತುಂಬಿ ಹಾಡುವೆನು ಎಂಟ್ರಿ ಕೊಟ್ಟದ್ದು ಹೀಗೆ 

ಆದರೆ ಆ ನಂತರ ಈಟಿವಿ ರಿಲಯನ್ಸ್ ಪಾಲಾಯ್ತು. ಆ ಮೊದಲು ಜಂಟಿಯಾಗಿ ಇದ್ದ ಸುದ್ದಿ ಹಾಗೂ ಮನರಂಜನೆ ವಿಭಾಗ ಎರಡಾಗಿ ಹೋಯ್ತು. ‘ಕಲರ್ಸ್ ಕನ್ನಡ’ ಹೊಸ ಮಾಲೀಕತ್ವಕ್ಕೆ ಎಸ್ ಪಿ ಬೇಡವಾಗಿಬಿಟ್ಟರು. ಒಂದು ಒಳ್ಳೆಯ ಮನಸ್ಸು ನಡೆಸಿಕೊಡುತ್ತಿದ್ದ, ಒಂದು ಸದಭಿರುಚಿಯ ಕಾರ್ಯಕ್ರಮ ಕಣ್ಣು ಮುಚ್ಚಿಕೊಂಡಿತ್ತು.

ಆಗಲೇ ನನಗೆ ದೂರದ ರಾಜಸ್ಥಾನದಿಂದ ಕರೆ ಬಂದಿದ್ದು. ಎಸ್ ಪಿ ಅವರ ‘ಎದೆ ತುಂಬಿ ಹಾಡುವೆನು’ ಶುರು ಮಾಡಬಹುದಾ ನೋಡಿ.. ಅಂತ. ಈಟಿವಿ ನ್ಯೂಸ್ ಚಾನಲ್ ನ ಕೇಂದ್ರ ಕಚೇರಿ ಆಗ ರಾಜಸ್ಥಾನದಲ್ಲಿ. ಅವರಿಗೋ ಎಸ್ ಪಿ ಯೂ ಗೊತ್ತಿರಲಿಲ್ಲ, ಎದೆ ತುಂಬಿಯೂ ಗೊತ್ತಿರಲಿಲ್ಲ. ಆದರೆ ಅಸಂಖ್ಯಾತ ನೋಡುಗರು ಪದೇ ಪದೇ ಪತ್ರ ಬರೆದು ಎಸ್ ಪಿ ಮಹತ್ವ ಅರಿವು ಮಾಡಿಕೊಟ್ಟಿದ್ದರು.

ಆಗಲೇ ನಾನು ಈ ಪ್ರಶ್ನೆ ಕೇಳಿದ್ದು. 

ತಕ್ಷಣ ಕಲರ್ಸ್ ಕನ್ನಡಕ್ಕೆ ಬೇಡವಾಗಿ ಹೋಗಿದ್ದ ಎಸ್ ಪಿ ಹಾಗೂ ಎದೆ ತುಂಬಿ ಹಾಡುವೆನುವನ್ನು ತುಂಬು ಪ್ರೀತಿಯಿಂದ ಕೈಹಿಡಿದುಕೊಂಡು ಈಟಿವಿ ಅಂಗಳಕ್ಕೆ ಬಂದುಬಿಟ್ಟೆ. ಇದಕ್ಕೆ ಬೆಂಗಾವಲಾಗಿ ನಿಂತಿದ್ದವರು ರಾಮೋಜಿ ಬಳಗದ ಬಾಪಿನಾಯ್ಡು  ಹಾಗೂ ಬೆಂಗಳೂರಿನ ಆರ್ ಸುಬ್ಬಾನಾಯ್ಡು.

ನಾನು ಎದೆ ತುಂಬಿ ಹಾಡುವೆನು ಸೆಟ್ ನಿರ್ಮಿಸಿದ್ದ, ಶೇಷಾದ್ರಿಪುರಂ ನಲ್ಲೇ ಇದ್ದ ವರದಾಚಾರ್ ಕಲಾಕ್ಷೇತ್ರಕ್ಕೆ ಹೋಗುವ ವೇಳೆಗೆ ಎಸ್ ಪಿ ಅವರು ನನ್ನನ್ನೇ ಹುಡುಕುತ್ತಿದ್ದರು. ಕೈಕುಲುಕಿದಾಗ ಎಸ್ ಪಿ ನೋಡಿದ ನೋಟವಿತ್ತಲ್ಲಾ ಅದು ನನ್ನೊಳಗೆ ಭದ್ರವಾಗಿ ಮನೆ ಮಾಡಿದೆ. ಕನ್ನಡದ ನೋಡುಗರ ಮುಂದೆ ನಾನು ಇರಬೇಕು ಎನ್ನುವುದು ಅವರ ಮುಖ್ಯ ಆಸೆಯಲ್ಲೊಂದಾಗಿತ್ತು. ಹಾಗಾಗಿ ಅವರಿಗೆ ಈ ಕಾರ್ಯಕ್ರಮ ಮುಖ್ಯವೂ ಆಗಿತ್ತು. ನಾನು ಮತ್ತೆ ಅದಕ್ಕೆ ಚಾಲನೆ ಕೊಟ್ಟಾಗ ಎಸ್ ಪಿ ತಮ್ಮ ಒಂದು ಆರ್ಧ್ರ ನೋಟ ನನಗೆ ಎಲ್ಲವನ್ನೂ ಮುಟ್ಟಿಸಿತ್ತು. 

ಪ್ರಾಥಮಿಕ ಆಯ್ಕೆ ಹಂತದ ನಂತರ ನಾವು ಅಭಿಮಾನ್ ಸ್ಟುಡಿಯೋ ಗೆ ಶಿಫ್ಟ್ ಆದೆವು. ನಾನು ಮತ್ತೆ ಮತ್ತೆ ಹೋದೆ. ಎಸ್ ಪಿ ಅವರ ವ್ಯಾಲೆಟ್ ವ್ಯಾನ್ ನಲ್ಲಿ, ಅತಿಥಿ ಕೊಠಡಿಯಲ್ಲಿ ಹೀಗೆ ಮೇಲಿಂದ ಮೇಲೆ ಭೇಟಿಯಾದೆವು. ಅವರಿಗೆ ಪ್ರಿಯವಾದ ತಿಂಡಿಗಳೊಂದಿಗೆ ಅವರ ಲೋಕ ಅರಿಯುತ್ತಾ ಹೋದೆ. 

ಹೀಗಿರುವಾಗಲೇ ಎಸ್ ಪಿ ನನಗೊಮ್ಮೆ ಫೋನ್ ಮಾಡಿ ‘ನಿಮ್ಮ ಮಗಳು ಚೆನ್ನಾಗಿ ಹಾಡ್ತಾಳೆ’ ಅಂದರು. ನಾನು ಕಕ್ಕಾಭಿಕ್ಕಿ. ನನ್ನ ಮಗಳಿಗೂ ಹಾಡಿಗೂ ಎತ್ತಣಿಂದೆತ್ತ ಸಂಬಂಧವಯ್ಯ? ತಕ್ಷಣ ಜೋರಾಗಿ ನಕ್ಕರು. 

ಅದಕ್ಕೆ ಕಾರಣವಿತ್ತು. ನಾನು ಆಗೀಗ ಶೂಟಿಂಗ್ ಸರಿಯಾಗಿ ನಡೆಯುತ್ತಿದೆಯೇ ಎಂದು ಪರಿಶೀಲಿಸಲೂ ಹಾಗೂ ಎಸ್ ಪಿ ಅವರ ಸಾಂಗತ್ಯ ಬಯಸಿ ಸೆಟ್ ಗೆ ಹೋಗುತ್ತಲೇ ಇದ್ದೆ. ಚಾನಲ್ ಸಂಪಾದಕರು ಬಂದಿದ್ದಾರೆ ಎನ್ನುವ ಕಾರಣಕ್ಕೆ ಶೂಟಿಂಗ್ ಸಮಯದಲ್ಲಿ ನಮ್ಮ ಹುಡುಗರು ಸ್ವಲ್ಪ ಹೆಚ್ಚೆ ನನ್ನ ಮೇಲೆ ಕ್ಯಾಮೆರಾ ತಿರುಗಿಸಿದ್ದರು. ಎಡಿಟಿಂಗ್ ವೇಳೆಯಲ್ಲೂ ವಿಡಿಯೋ ಎಡಿಟರ್ ಗಳು ನನ್ನನ್ನು ಹೆಚ್ಚೆ ಉಳಿಸಿದ್ದರು. ಹೀಗಾಗಿ ಕಾರ್ಯಕ್ರಮ ಪ್ರಸಾರವಾದಾಗ ಮೇಲಿಂದ ಮೇಲೆ ನನ್ನ ಮುಖವೂ ಕಾಣಿಸಿಕೊಂಡಿತ್ತು.

ಆದರೆ ಯಾರಿಗೂ ಗೊತ್ತಾಗದ ಒಂದು ತಮಾಷೆ ಅಲ್ಲಿ ಆಗಿ ಹೋಗಿತ್ತು. ನನ್ನನ್ನು ಹಾಗೆ ತೋರಿಸುವಾಗಲೆಲ್ಲಾ ವೇದಿಕೆಯಲ್ಲಿ ಹಾಡುತ್ತಿದ್ದ ಹುಡುಗಿ ನನ್ನ ಹಾಗೆಯೇ ಗುಂಡು ಗುಂಡಾಗಿದ್ದಳು. ಕಾರ್ಯಕ್ರಮ ಪ್ರಸಾರದಲ್ಲಿ ಆಕೆ ಹಾಡುವುದೂ ನಾನು ತಲೆದೂಗುವುದೂ ಯಾರ ಅರಿವಿಗೂ ಬಾರದಂತೆ ಮ್ಯಾಚ್ ಆಗಿಬಿಟ್ಟಿತ್ತು. 

ನೋಡಿದ ಸೆಟ್ ಹುಡುಗರೆಲ್ಲಾ ‘ಸರ್ ಮಗಳು ಎಷ್ಟು ಚೆನ್ನಾಗಿ ಹಾಡ್ತಾಳೆ’ ಅನ್ನುವುದು ಆರಂಭವಾಗಿ.. ಅದೇ ಹರಡುತ್ತಾ ಎಸ್ ಪಿ ಅವರ ಕಿವಿಗೂ ತಲುಪಿತ್ತು. ಅವರು ಆಕೆ ನನ್ನ ಮಗಳಲ್ಲ ಎಂದು ಖಚಿತಪಡಿಸಿಕೊಂಡೇ ‘ನಿಮ್ಮ ಮಗಳು ಚೆನ್ನಾಗಿ ಹಾಡ್ತಾಳೆ’ ಎಂದು ಫೋನ್ ಮಾಡಿ ನನ್ನ ಕಾಲೆಳೆದಿದ್ದರು. ನಾನೂ ಅವರು ಸಾಕಷ್ಟು ನಕ್ಕೆವು. 

ಅಭಿಮಾನ್ ಸ್ಟುಡಿಯೋದಲ್ಲಿ ನಾನು ಅವರಿಗೆ ಅಧಿಕೃತವಾಗಿ ಹೂ ಗುಚ್ಛ ಕೊಡುವುದೂ ಆಗ ಅವರು ಗಂಭೀರವಾಗಿ ಅದನ್ನು ಸ್ವೀಕರಿಸುವುದೇ ಒಂದು ದೊಡ್ಡ ಆಟದಂತಿತ್ತು. ಯಾಕೆಂದರೆ ಎಲ್ಲರಿಗೂ ಗೊತ್ತಿರುವ ಹಾಗೆ ಎಸ್  ಪಿ ಒಳಗೆ ಮಹಾನ್ ತುಂಟನೊಬ್ಬನಿದ್ದ. ಹಾಗಾಗಿ ಅವರು ನಾನು ಹೂಗುಚ್ಛ ಕೊಡುವಾಗ ಅದನ್ನು ಗಂಭೀರವಾಗಿ ಸ್ವೀಕರಿಸುತ್ತಲೇ ನೋಡುಗರಿಗೆ ಗೊತ್ತಾಗದಂತೆ ಒಂದು ಜೋಕ್ ಕಟ್ ಮಾಡಿರುತ್ತಿದ್ದರು ನಾನು ಸುಭಗನಂತೆ ಕಾಣಿಸಿಕೊಳ್ಳಬೇಕಾದ್ದರಿಂದ ನಾನು ನಗುವ ಹಾಗಿರಲಿಲ್ಲ. ನನ್ನ ಅವಸ್ಥೆ ನೋಡಿ ಅವರು ಇನ್ನೂ ಮಜಾ ತೆಗೆದುಕೊಳ್ಳುತ್ತಿದ್ದರು. 

ಅಭಿಮಾನ್ ಸ್ಟುಡಿಯೋದಲ್ಲಿ ಅವರಿಗೆ ಹಾಗೆ ಹೂಗುಚ್ಛ ಕೊಟ್ಟು ಕಾರ್ಯಕ್ರಮ ಮುಗಿದ ಮೇಲೆ ಮಸಾಲೆ ದೋಸೆ ತಿಂದದ್ದೇ ಕೊನೆಯಾಗಿ ಹೋಯಿತು. ಅವರು ಮಕ್ಕಳೊಡನೆ ಮಕ್ಕಳಾಗಿ ಹೋಗುತ್ತಿದ್ದನ್ನು ನೋಡಿ ಸದಾ ಅಚ್ಚರಿಗೊಳ್ಳುತ್ತಿದ್ದೆ. ಒಂದು ಸಜ್ಜನ ಮಗು ಮನಸ್ಸು ನಮ್ಮಿಂದ ದೂರ ಹೋಗಿಬಿಟ್ಟಿತು. —

‍ಲೇಖಕರು avadhi

September 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: