ಸರೋಜಿನಿ ಪಡಸಲಗಿ
**
ರೆಪ್ಪೆಯಡಿ ಸುಳಿದಾಡಿ ಕಣ್ತುಂಬ ಮಿಂಚಾಗಿ ಹರಿದಾಡೊ
ಕನಸುಗಳೆ ಮುತ್ತದಿರಿ ನನ್ನ
ಬಡವಿ ನಾನೀಗ ಕಾಡದಿರಿ ನನ್ನ
ನಿಮ್ಮ ಶ್ರುತಿಗೆ ಜೀವ ವೀಣೆ ಮಿಡಿತ ತಾಳ ತಪ್ಪಿದೆ
ಲಯವಿಲ್ಲದ ಸ್ವರ ತಾ ಮೌನದತ್ತ ಹೊರಳಿದೆ
ಎದೆಯ ನಾದ ರಸವಿಹೀನ ಯಾಕೊ ತಿಳಿಯದು
ನಿಮ್ಮ ರಾಗ ರಾಗಿಣಿಗೆ ಧನಿಗೂಡಿಸಲಾರೆ ನಾ
ಕಾಡದಿರಿ ನನ್ನ
ಹುಟ್ಟಿ ಎದೆಯಂಗಳದಿ ಬಿಟ್ಟು ಬೇರು ಆಳಕೆ ಚಿಗುರು
ಕೊನರಿ ಮನದಗಲ ಕಂಪು ಸೊಂಪು ಹರಿದು
ಕಣ್ತುಂಬ ನಗು ಸುರಿದ ಹಸಿರು ಕೆಂಪಾಗಿ
ನಿಮ್ಮ ರಂಗಿನೌತಣಕೆ ಓಗೊಡಲಾರೆ ನಾ
ಕಾಡದಿರಿ ನನ್ನ
ಬಡವಿಯಾಗಿ ನಿಂದಿಹೆ ಕನಸುಗಳೆ ನಿಮ್ಮೆದುರಲಿ
ಅತ್ತ ಇತ್ತ ಸುತ್ತಿ ಬಂದು ಅಂಕು ಡೊಂಕು ದಾರಿಯಲಿ
ಅರಸುತಿಹೆ ಸೆಲೆಯೊಂದ ಆಸೆಗಳ ನೆರವಿಯಲಿ
ಬಾಚಿಕೊಳ್ಳಬೇಕಿದೆ ಮೊಗೆದು ಮೊಗೆದು ಬೊಗಸೆಯಲಿ
ಸುಮ್ಮನಿರಿ ಕಾಡದಿರಿ ನನ್ನ
0 ಪ್ರತಿಕ್ರಿಯೆಗಳು