ಎದೆಬಿಲ್ಲೆಯೂ ಮಾತುಕತೆಯೂ…

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ.. 

ಕೆಲವು ವರ್ಷಗಳ ಹಿಂದೆ ನಮ್ಮ ವೃದ್ಧ ತಂದೆಯನ್ನು ತುರ್ತಾಗಿ ಜಯದೇವ ಹೃದ್ರೋಗ ಚಿಕಿತ್ಸಾಲಯಕ್ಕೆ ಕರೆದೊಯ್ಯಬೇಕಾಯಿತು. ತುರ್ತು ನಿಗಾ ಕೇಂದ್ರದಲ್ಲಿ ತಂದೆಯವರೊಡನೆ ಇದ್ದೆ. ವೈದ್ಯರು ನೋಡಿದ ಮೇಲೆ ಅವರ ನಿರ್ದೇಶನದಂತೆ ಕೆಲವು ಪರೀಕ್ಷೆಗಳನ್ನು ನಡೆಸಲು ಸಹಾಯಕರೊಬ್ಬರು ಬಂದರು. ಇಸಿಜಿ ನಡೆಸಿದ ನಂತರ ಆ ಸಹಾಯಕರು ನಾನು ಸದಾಕಾಲ ಧರಿಸುವ ‘ಎಲ್ಲ ಹಕ್ಕುಗಳು ಎಲ್ಲ ಮಕ್ಕಳಿಗೂ’ ಘೋಷಣೆಯ ಎದೆಬಿಲ್ಲೆ (ಬ್ಯಾಡ್ಜ್) ನೋಡಿ ಕೇಳಿದರು, ‘ನೀವು ಕೆಲಸ ಮಾಡೋದು ಇದರ ಬಗ್ಗೇನ ಸರ್?‌ʼ

ನಾನು ಸಡಗರಿಸಿಕೊಂಡು ಹೌದೌದು ಎಂದು ಬಹಳವೇ ಖುಷಿಯಿಂದ ಹೇಳಿದೆ. ಸದ್ಯ ಈ ಎದೆಬಿಲ್ಲೆ ಕೆಲಸ ಮಾಡುತ್ತಿರುವುದು, ಆತ ನನ್ನನ್ನ ಗುರುತಿಸಿದ್ದು, ಬೇಡ ಬೇಡ ಎಂದರೂ ನನ್ನ ‘ಹೌದು’ವಿನಲ್ಲಿ, ಆ ಬಿಕ್ಕಟ್ಟಿನ ಸಮಯದಲ್ಲೂ ಕಣ್ಣಲ್ಲಿ ಇಣಕಿತ್ತು. ಮಕ್ಕಳ ಹಕ್ಕುಗಳ ಬಗ್ಗೆ ಕೆಲಸ ಮಾಡುವ ಬಗ್ಗೆ ನನಗೆ ಬಹಳ ಹೆಮ್ಮೆ.

ಈ ಎದೆಬಿಲ್ಲೆಯ ಉದ್ದೇಶವೇ ಅದು. ಸಂಚಾರಿ ಜಾಹೀರಾತು. ಯಾರಾದರೂ ನೋಡಲಿ, ಅದರ ಬಗ್ಗೆ ಕೇಳಲಿ, ಆಗ ನಾನವರ ಜೊತೆ ಮಾತನಾಡಲು ಒಂದು ಅವಕಾಶ ತೆರೆದುಕೊಳ್ಳುತ್ತದೆ. ಕಳೆದ ಹದಿನೈದು ವರ್ಷದಲ್ಲಿ ಲಿಫ್ಟ್‌ಗಳಲ್ಲಿ, ಬಸ್ಸು, ರೈಲು, ವಿಮಾನಗಳಲ್ಲಿ ಅಕ್ಕಪಕ್ಕ ಇರುವವರು ನನ್ನ ಮಕ್ಕಳ ಹಕ್ಕುಗಳ ಎದೆಬಿಲ್ಲೆ ನೋಡಿ ಕೇಳುವುದು, ಅವರೊಡನೆ ಮಾತನಾಡಿ ಕೊನೆಗೆ ಅವರಿಂದ ಪ್ರಶಂಸೆ, ಪ್ರಶ್ನೆ, ಸಲಹೆ ಇತ್ಯಾದಿ ನಾನು ಪಡೆದು, ಅವರನ್ನು ಇನ್ನಷ್ಟು ಮಕ್ಕಳ ಬಗ್ಗೆ, ಮಕ್ಕಳ ಹಕ್ಕುಗಳ ಬಗ್ಗೆ ಸೂಕ್ಷ್ಮಗೊಳಿಸುವುದು ಆಗಿದೆ.

ಈಗ ಅದೇ ಜಾಡಿನಲ್ಲಿ ಮಾತನಾಡಲು ಆಸ್ಪತ್ರೆಯಲ್ಲಿ ಇನ್ನೊಂದು ಜನ ಸಿಕ್ಕಿದ್ದಾರೆ. ಖುಷಿಯಾಯಿತು. (ಕೆಲವೊಮ್ಮೆ, ನಮ್ಮ ವಿಶಿಷ್ಟ ಬ್ಯಾಡ್ಜ್ ನ ಚಿತ್ರ ಅಕ್ಷರ ನೋಡದೇ, ‘ಇದೇನು ಸರ್‌ ʼತೂಕ ಇಳಿಸಿಕೊಳ್ಳಿ ‘ಅಂತಾ ಹೇಳೋ ಬ್ಯಾಡ್ಜಾ’ ಅಂತಾನೂ ಕೇಳಿದವರಿದ್ದಾರೆ!).

ಈಗೀಗ ಬ್ಯಾಡ್ಜ್ ಗಳು ಬೇರೆ ಬೇರೆ ರೂಪದಲ್ಲಿ ಲಭ್ಯವಿದೆ. ನಗುಮುಖಗಳು, ಎಚ್ಚರಿಕೆಗಳು, ಘೋಷಣೆಗಳು, ಧೋರಣೆಗಳು ಮೊದಲಾದವುಗಳಿಗೆ ಬ್ಯಾಡ್ಜ್ ಗಳಿವೆ. 

ಒಮ್ಮೊಮ್ಮೆ ಈ ಮಕ್ಕಳ ಹಕ್ಕುಗಳ ಬ್ಯಾಡ್ಜ್‌ ಅಲ್ಲದೆ, ಚೈಲ್ಡ್‌ಲೈನ್‌ ೧೦೯೮ ಅಥವಾ ಬಾಲ್ಯವಿವಾಹ ತಡೆಗಟ್ಟಿ, ಮಾನವ ಸಾಗಣೆ ನಿಲ್ಲಿಸಿ, ಮಕ್ಕಳ ಲೈಂಗಿಕ ಶೋಷಣೆ ತಡೆಗಟ್ಟಿ, ಬಾಲಕಾರ್ಮಿಕ ಪದ್ಧತಿ ತಡೆಗಟ್ಟಲು ಬೆಂಬಲ ಕೊಡಿ ಎಂದೂ ಬೇರೆ ಬೇರೆ ಸಂದೇಶಗಳ ಬ್ಯಾಡ್ಜ್‌ ಧರಿಸುತ್ತೇನೆ. ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ನ ನನ್ನ ಸಹೋದ್ಯೋಗಿಗಳೂ ಇಂತಹ ಬ್ಯಾಡ್ಜ್‌ಗಳನ್ನ ಸದಾ ಧರಿಸುತ್ತಾರೆ. ನಾವೆಲ್ಲಾ ಮಕ್ಕಳ ಹಕ್ಕುಗಳ ಪರವಾಗಿ ಸಂಚಾರಿ ಪ್ರಚಾರಕರು.  

ಕೆಲಸದ ಸಮಯವಲ್ಲದೆ ಬಂಧುಗಳು, ಸ್ನೇಹಿತರ ಮನೆಗೆ ಹೋದಾಗ, ಮಾರುಕಟ್ಟೆ, ಸಿನೆಮಾ, ನಾಟಕ, ಪುಸ್ತಕ ಬಿಡುಗಡೆ, ಸಂಗೀತ ಕಾರ್ಯಕ್ರಮ, ಜೊತೆಗೆ ಮದುವೆ, ಗೃಹಪ್ರವೇಶವೇ ಮೊದಲಾದವುಗಳಲ್ಲೂ ಮಕ್ಕಳ ಹಕ್ಕುಗಳ ಬ್ಯಾಡ್ಜ್ ಇರುತ್ತದೆ. ಸಹ ಚಿಂತಕಿ, ಯುನಿಸೆಫ್ ಜೊತೆಗಿದ್ದ ಸುಚಿತ್ರಾ ರಾವ್ ನಮ್ಮ ನಡುವೆ ಮನೆಗೆಲಸಕ್ಕೆ ಮಕ್ಕಳನ್ನು ನೇಮಿಸಿಕೊಳ್ಳಬೇಡಿ ಎಂಬ ಆಂದೋಲನದಲ್ಲಿ ಆರಂಭಿಸಿದ (೨೦೦೩-೦೪) ಈ  ಬ್ಯಾಡ್ಜ್ ಸಂಸ್ಕೃತಿ ಈಗ ಸಾಕಷ್ಟು ಊರಿಕೊಂಡಿದೆ. ಇಷ್ಟು ಹೊತ್ತಿಗೆ ಆಯಾ ಕಾಲಘಟ್ಟಗಳಲ್ಲಿ ಬಾಲಕಾರ್ಮಿಕ ಪದ್ಧತಿ ವಿರೋಧಿಸಲಿಕ್ಕೆ, ಮಕ್ಕಳ ಸಾಗಣೆ ತಡೆಬಟ್ಟಲು ಪ್ರಚಾರಕ್ಕೆ, ಶಿಕ್ಷಣ ಹಕ್ಕು ಆಗಲಿ ಎಂದು ಒತ್ತಾಯಿಸಲಿಕ್ಕೆ ನಾವೆಲ್ಲಾ ಬ್ಯಾಡ್ಜ್‌ ಚಳವಳಿ ಮಾಡಿದ್ದೆವು. 

ನಾವು ಕೆಲವರು ಸದಾಕಾಲ ಧರಿಸುವ ಈ ಬ್ಯಾಡ್ಜ್‌ ಮಕ್ಕಳ ಹಕ್ಕು, ಮಾನವ ಹಕ್ಕುಗಳನ್ನು ಕುರಿತು ನಮ್ಮ ನಿಲುವಿನ ರೂಪಕ. 

೨೦೦೩ರಿಂದ ಈಚೆಗೆ ಮಕ್ಕಳ ಹಕ್ಕುಗಳ ಬ್ಯಾಡ್ಜ್‌ ನನ್ನೆದೆಯ ಮೇಲೆ ಈಗ ಹೆಚ್ಚೂ ಕಡಿಮೆ ಶಾಶ್ವತವೇ ಆಗಿದೆ. ಮನೆಯಿಂದ ಹೊರಟಾಗ ಅಕಸ್ಮಾತ್‌ ನಾನು ಬ್ಯಾಡ್ಜ್‌ ಮರೆತರೂ ನನ್ನ ಹೆಂಡತಿಯೋ ಮಗಳೋ ‘ಬ್ಯಾಡ್ಜ್‌’ ಎಂದು ನೆನಪಿಸುತ್ತಾರೆ. ಸಾಕಷ್ಟು ಕಡೆ ನನ್ನ ಗುರುತೂ, ‘ಅದೇ ಮಕ್ಕಳ ಹಕ್ಕು ಬ್ಯಾಡ್ಜ್‌ ಹಾಕ್ಕೊಂಡಿರ್ತಾಲ್ಲ ಅವರಲ್ಲವಾ’ ಎಂದು ಹೇಳುವುದುಂಟು. ಸಾಕಷ್ಟು ಬಾರಿ ಬ್ಯಾಡ್ಜ್‌ನ ಆಕರ್ಷಣೆಗೆ ಬಿದ್ದು ಮಕ್ಕಳು, ದೊಡ್ಡವರು ನಮಗೂ ಕೊಡಿ ಎಂದು ಕೇಳುವುದುಂಟು. ಕೊಡಬೇಕು! ಜೊತೆಗೆ ಇದನ್ನ ಧರಿಸಬೇಕು, ಈ ಬಗ್ಗೆ ತಿಳಿದುಕೊಂಡು ಮಾತನಾಡಬೇಕು ಎಂದು ಆಗ್ರಹಿಸುವುದೂ ಆಗುತ್ತದೆ.  

‘ನೋಡಿ ಸರ್, ನಾನು ಹೀಗೆ ಹೇಳ್ತೀನಿ ಅಂತ ನೀವೇನು ಅಂದುಕೊಳ್ಳಬೇಡಿ ಸರ್’. ಇವರು ಏನು ಹೇಳಬಹುದು ಅಂತ ಊಹಿಸಿಕೊಳ್ಳುವುದು ಈಗ ನನ್ನ ಕೆಲಸವಾಯಿತು. ಪ್ರಾಯಶಃ ಅನೇಕರು ಹೇಳುವಂತೆ, ಮಕ್ಕಳಿಗೆ ಹಕ್ಕು ಅಂತ ಕೊಟ್ಟು ಬಹಳ ಕಷ್ಟ ಆಗಿದೆ, ಮಕ್ಕಳನ್ನ ತಲೆ ಮೇಲೆ ಕೂರಿಸಿಕೊಂಡಿದ್ದೀರಿ. ಮಕ್ಕಳಿಗೆ ಜವಾಬ್ದಾರಿಗಳನ್ನೂ ಕಲಿಸಿ. ಈ ಹಕ್ಕು ಅನ್ನೋದು ಮಕ್ಕಳಿಗೆ ಜಾಸ್ತಿಯಾಗಿದೆ, ಇತ್ಯಾದಿ ಇರಬಹುದು. ಇದಕ್ಕೆ ಏನು ಪ್ರತಿಕ್ರಿಯೆ ಕೊಟ್ಟು ಅವರನ್ನೂ ಮಕ್ಕಳ ಪರವಾಗಿ ತಿರುಗಿಸುವುದು ಹೇಗೆ ಎಂದು ಯೋಚಿಸತೊಡಗಿದೆ.

ಅಷ್ಟರಲ್ಲಿ ಅವರಿಗೆ ವೈದ್ಯರ ಕರೆ ಬಂತು, ‘ಬಂದೆ ಸರ್, ಅವರನ್ನ ನೋಡಿ ಬಂದು ಮಾತಾಡ್ತೀನಿ’ ಎಂದು ಆತ ಹೋದರು. ನಾನು ತಂದೆಯವರ ಕಡೆಗೆ ಗಮನ ಕೊಟ್ಟೆ.

‘ನೋಡಿ ಸರ್, ನಾನು ಎರಡು ಕೋರ್ಸ್ ಮಾಡಿದ್ದೀನಿ. ಒಂದು ನರ್ಸಿಂಗ್, ಎರಡನೇದು ಬಿಎಡ್. ಅದಕ್ಕೆ ಈ ಮಾತು ಹೇಳ್ತೀನಿ. ಏನೂ ಅಂದುಕೋಬೇಡಿ ಸರ್.’ ವೈದ್ಯರು ಹೇಳಿದ ಕೆಲಸ ಮುಗಿಸಿ ಬಂದ ಆತ ಮತ್ತೆ ಮಾತನಾಡಲಾರಂಭಿಸಿದರು.

‘ಮೊದ್ಲೇ ಹೇಳ್ಬಿಡ್ತೀನಿ ಸರ್, ನಮಗೆ ನರ್ಸಿಂಗ್‌ನಲ್ಲೂ ಮಕ್ಕಳ ಹಕ್ಕುಗಳ ಬಗ್ಗೆ ಪಾಠ ಇದೆ. ನಮಗೂ ಮಕ್ಕಳ ಬದುಕು, ರಕ್ಷಣೆ, ಅಭಿವೃದ್ಧಿ ಮತ್ತು ಭಾಗವಹಿಸುವಿಕೆ ಎಲ್ಲಾ ಗೊತ್ತು. ಬಿ.ಎಡ್‌ನಲ್ಲೂ ಮಕ್ಕಳ ಹಕ್ಕುಗಳ ಬಗ್ಗೆ ಹೇಳಿದ್ದಾರೆ. ಮಕ್ಕಳಿಗೆ ಹೊಡೆಯೋದು, ಬಯ್ಯೋದು, ಹೀಯಾಳಿಸೋದು, ತಾರತಮ್ಯ ಇವೆಲ್ಲಾ ಮಾಡಬಾರದು ಸರ್’.

ನನಗೋ ಒಂದು ಕಡೆ ಸಂತೋಷ ಆಗ್ತಿದೆ. ಇವರಿಗೆ ಇದೆಲ್ಲಾ ಗೊತ್ತಿದೆಯಲ್ಲಾ ಅದನ್ನ ಇಷ್ಟು ಚೆನ್ನಾಗಿ ಹೇಳ್ತಾರಲ್ಲ ಅಂತ. ಇನ್ನೊಂದು ಕಡೆ, ಕಸಿವಿಸಿ, ನನಗೆ ಭಾಷಣ ಮಾಡಲು ಬಿಡದೆ ಈತನೇ ಮಾತಾಡ್ತಾ ಇದ್ದಾನಲ್ಲ ಅಂತ. ಮತ್ತೊಂದು ಕಡೆ ಅನಿಸಿದ್ದು, ಪರವಾಗಿಲ್ಲ, ನನ್ನಂಥಹವರ ಇಪ್ಪತ್ತೈದು ಮೂವತ್ತು ವರ್ಷಗಳ ಕಾಲ ಮಕ್ಕಳ ಹಕ್ಕುಗಳ ಪರವಾದ ಹೋರಾಟ, ವಕೀಲಿ, ಪ್ರಚಾರ ಇವೆಲ್ಲಾ ಶಿಕ್ಷಕರು ಮತ್ತು ನರ್ಸಿಂಗ್ ಶಾಲೆಗಳನ್ನ ಮುಟ್ಟಿದೆಯಲ್ಲ ಅನ್ನುವ ಹೆಮ್ಮೆಯೂ ಆಗ್ತಿತ್ತು.

ಆದ್ರೂ ಆ ಮನುಷ್ಯ ಹೇಳಬೇಕೆಂದಿರುವ ವಿಚಾರ ಇನ್ನೂ ಹೊರಬಿದ್ದಿರಲಿಲ್ಲ. ನಾನೇ ಜ್ಞಾಪಿಸಿದೆ.

‘ಅದು, ಸರ್, ನಾನು ಕೆಲಸ ಮಾಡ್ತಿರೋದು ನೀವೇ ನೋಡ್ತಿದ್ದೀರಲ್ಲ, ಹೃದಯ ರೋಗಿಗಳ ಮಧ್ಯ. ಅದು ತುರ್ತು ನಿಗಾ ಕೇಂದ್ರದಲ್ಲಿ. ನಾನು ಗಮನಿಸಿದರೋದನ್ನ ಹೇಳಿ ಆಮೇಲೆ ಏನು ಆಗಲೇಬೇಕೂಂತ ಹೇಳ್ತೀನಿ’ ಮತ್ತೆ ಒಂದು ಸಸ್ಪೆನ್ಸ್ ಇಟ್ಟರು. ‘ಇತ್ತೀಚೆಗೆ ಇಲ್ಲಿಗೆ ಬರುವ ರೋಗಿಗಳ ವಯಸ್ಸು ಚಿಕ್ಕದಾಗ್ತಾ ಇದೆ ಸರ್. ಕೆಲವ್ರಂತೂ ಇನ್ನೂ ಮುವತ್ತೈದು ಕೂಡಾ ದಾಟಿರಲ್ಲ. ಗಂಡಸ್ರು, ಹೆಂಗಸ್ರು ಅಂತ ಹೆಚ್ಚೂ ಕಡಿಮೆ ಇಲ್ಲ. ಎಲ್ರೂ. ಇದಕ್ಕೆಲ್ಲಾ ಕಾರಣ, ನಾವು ಕಲಿಸ್ತಿರೋದು ಅಥವಾ ಕಲಿಸ್ದೇ ಇರೋದು’. ‘ಅಂದ್ರೆ?’ ನಾನು ಮಧ್ಯ ಬಾಯಿ ಹಾಕಿದೆ. 

‘ನಮ್ಮ ವಿದ್ಯಾರ್ಥಿ ದೆಸೆನಲ್ಲಿ ನಾವು ನಿಜವಾಗಿಯೂ ಎಷ್ಟು ತಿನ್ನಬೇಕು, ಯಾವುದರಲ್ಲಿ ಹಿತಮಿತ ಕಾಪಾಡಿಕೊಳ್ಳಬೇಕು ಅನ್ನೋದನ್ನ ನಮಗೆ ಕಲಿಸಲ್ಲ. ಮಕ್ಕಳಿಗೆ ಮಾನಸಿಕ ಆರೋಗ್ಯ, ಸುತ್ತಮುತ್ತಲಿನವರೊಡನೆ ಹ್ಯಾಗೆ ನಡೆದುಕೊಳ್ಳಬೇಕು, ಸೈರಣೆ, ತಾಳ್ಮೆ ಹೇಗೆ ತಾವೇ ರೂಢಿಸಿಕೊಳ್ಳಬೇಕು, ಪಡೆದುಕೊಳ್ಳಬೇಕು, ದೊಡ್ಡೋವ್ರು, ಚಿಕ್ಕೋವ್ರು, ಸಮವಯಸ್ಕರರ  ಜೊತೆ ಹೇಗಿರಬೇಕು, ಇಲ್ಲಾ ಸರ್ ಏನೂ ಕಲಿಸಲ್ಲ. ದೊಡ್ಡೋವ್ರೂ ನಮಗ್ಯಾಕೆ ಅಂತ ಬಿಟ್ಟುಬಿಡ್ತಾರೆ.

ಮಕ್ಕಳು ಆರೋಗ್ಯ ಕಾಪಾಡಿಕೊಳ್ಳಲ್ಲ, ವ್ಯಾಯಾಮ ಮಾಡಲ್ಲ. ದೊಡ್ಡವರಾದ ಮೇಲಂತೂ ಹೇಳೋರು ಕೇಳೋರು ಯಾರೂ ಇರಲ್ಲ. ಕಂಡಿದ್ದೆಲ್ಲಾ ತಿನ್ನೋದು, ಕುಡಿಯೋದು, ಯಾವುದಕ್ಕೂ ಇತಿ ಮಿತಿ ಇರಲ್ಲ. ಎಲ್ಲರಿಗೂ ಏನೋ ಪೊಗರು. ದುಡ್ಡಿದೆಯಲ್ಲ. ಮನೇಲಿ ಕೊಡ್ತಾರೋ, ಇವರೇ ಸಂಪಾದಿಸ್ತಾರೋ. ಎಲ್ಲ ಬೇಡದ್ದು ತಿಂದು, ಅನುಭವಿಸಿ… ಕೊನೇಲಿ ಇಲ್ಲಿಗೆ, ಅದೂ ಎಮರ್ಜೆನ್ಸಿ ಕೇಸ್‌ಗಳಾಗಿರ‍್ತಾರೆ…’

ನಾನಿನ್ನೂ ಏನೂ ಹೇಳಿರಲಿಲ್ಲ. ‘ಸರ್, ಮಕ್ಕಳ ಶಾಲೆ ಪುಸ್ತಕದಲ್ಲಿ ಈ ಬಗ್ಗೆ ಪಾಠ ಇಡಿಸಿ. ಜೊತೆಗೆ ಆ ಪಾಠಗಳನ್ನ ಸುಮ್ಮನೆ ಓದೋದಲ್ಲ ಅಥವಾ ಸುಮ್ಮನೆ ಯಾಂತ್ರಿಕವಾಗಿ ಹೇಳೋದಲ್ಲ, ಅಥವಾ ಪರೀಕ್ಷೇಲಿ ಒಂದು ಪ್ರಶ್ನೆ ಅಂತ ಅಲ್ಲ. ಬದಲಿಗೆ ಶಿಕ್ಷಕರು ಅವುಗಳನ್ನ ಅನುಭವಿಸಿ ಬದುಕಿನಲ್ಲಿ ಮಕ್ಕಳು ಅಳವಡಿಸಿಕೊಂಡು ಹೇಗೆ ಬದುಕಬೇಕು ಅನ್ನೋದನ್ನ ನಿಜವಾಗಿಯೂ ಹೇಳಿಕೊಡೋ ಹಾಗೆ ಮಾಡಿಸ್ಬೇಕು ಸರ್‌. ನಾಳೆ ನಮ್ಮ ಯುವಕರು ಸದೃಢರಾಗಿರಬೇಕು, ಅವರ ಎದೆ ಗಟ್ಟಿಯಾಗಿರಬೇಕು ಅಂದ್ರೆ, ಇದು ಬೇಕು’.

ಈಗ ನಾನು ಅವರ ಮಾತಿನ ಕುರಿತು ಯೋಚಿಸಲಾರಂಭಿಸಿದೆ.

ʼಶಾಲೆ ಹತ್ರ ನೂರು ಮೀಟರ್‌ ಒಳಗೆ ಸಿಗರೇಟು, ಗುಟ್ಕಾ ಮಾರಬಾರದು ಅಂತ ಸುಮ್ಮನೆ ಬೋರ್ಡ್‌ ಹಾಕಿಬಿಟ್ಟರೆ ಆಗಲ್ಲ. ಶಾಲೆ ಹತ್ತಿರ ಹೆಂಡದಂಗಡಿ ಇರಬಾರದು ಎಂದು ಬಿಟ್ರೆ ಆಗಲ್ಲ. ಇದು ಯಾಕೆ ಶಾಲೇಲಿ ಹೇಳಿಕೊಡಬೇಕು ಅನ್ನೋದನ್ನ ಟೀಚರ್‌ಗಳಿಗೆ ಸರಿಯಾಗಿ ತಿಳಿಸಬೇಕು. ಅದಕ್ಕೆ ನಮ್ಮ ಮೇಡಮ್‌ಗಳು ಮತ್ತು ಮೇಷ್ಟ್ರುಗಳು ಪ್ರಯತ್ನ ಹಾಕಬೇಕು.

ʼನಾನು ಓದಿದ್ದೆಲ್ಲಾ ರೂರಲ್‌ ಶಾಲೆಗಳಲ್ಲಿ. ತುಂಬಾ ಹಿಂದೆ. ಆಗ ನಮ್ಮ ಟೀಚರ್‌ ಶಾಲೇನಲ್ಲೇ ಬೀಡಿ ಸೇದ್ತಾ ಇದ್ರು. ನಾವೇ ತಂದುಕೊಡ್ತಿದ್ವಿ. ಕೆಲವು ಮೇಷ್ಟ್ರುಗಳು ಜೋಬಲ್ಲಿ ಪಾಕೆಟ್‌ ಇಟ್ಕೊಂಡು ಬರ್ತಾ ಇದ್ರು. ಈಗ ಅಂತಹದು ಇಲ್ಲಾ ಬಿಡಿ. ತುಂಬಾ ಬದಲಾಗಿದೆ.  ನಾನೂ ಬಿಎಡ್‌ ಮಾಡಿದ ಮೇಲೆ ಸ್ವಲ್ಪ ದಿನ ಯಾವ್ದೋ ಪ್ರೈವೇಟ್‌ ಸ್ಕೂಲಲ್ಲಿ ಟೀಚರ್ರೂ ಆಗಿದ್ದೆ.

ಬಿಡಿ. ಅದೆಲ್ಲಾ ಆಗಿಹೋದ ಮಾತು. ನನಗೆ ಇಷ್ಟ ಇದ್ದರೂ, ಮಕ್ಳಿಗೆ ಕಲಿಸೋ ಆಸೆ ಇದ್ದರೂ, ಬದುಕು ನಡೆಸಬೇಕಲ್ಲ ಸರ್‌, ಸಂಬಳ ಸರೀಗಿರಲಿಲ್ಲ, ಸರ್ಕಾರಿ ಕೆಲಸ ನನ್ನಂಥೋರಿಗೆ ಸಿಗಲಿಲ್ಲ. ಕೊನೆಗೆ ಈ ಮೆಡಿಕಲ್‌ ಕೋರ್ಸ್‌ ಮಾಡಿಕೊಂಡು, ಗುತ್ತಿಗೆ ಆಧಾರದಲ್ಲಿ ಇಲ್ಲಿ ಇದೀನಿ. ಹೃದಯಗಳ ಜೊತೆʼ ಆತ ನಕ್ಕರು.

ಆತ ಅವರಿಗರಿವಿಲ್ಲದಂತೆ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಛೇದ  ೨೪: ಆರೋಗ್ಯ ಮತ್ತು ಆರೋಗ್ಯ ಸೇವೆಗಳ ಹಕ್ಕು ಹಾಗೂ ೨೯:  ಶಿಕ್ಷಣದ ಗುರಿ ಮತ್ತು ಉದ್ದೇಶಗಳ ಬಗ್ಗೆ ಮಾತನಾಡಿದ್ದರು. ಜೊತೆಗೆ ಭಾರತ ಸಂವಿಧಾನದ ಪರಿಚ್ಛೇದ ೨೧ ಜೀವಿಸುವ ಹಕ್ಕುಗಳಿಗಾಗಿ ಕೆಲಸ ಮಾಡುತ್ತಲೇ ಅದರೊಡನೆ ಸೇರಿರುವ ಪರಿಚ್ಛೇದ ೨೧ ಎ (ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು) ಕುರಿತು ಚಿಂತಿಸುತ್ತಾ ಕೆಲಸ ಮಾಡುತ್ತಿದ್ದಾರೆ. 

ನಾನು ಧರಿಸಿದ್ದ ʼಎಲ್ಲ ಹಕ್ಕುಗಳು ಎಲ್ಲ ಮಕ್ಕಳಿಗೂʼ ಎದೆಬಿಲ್ಲೆಗೆ ತೃಪ್ತಿಯಾಯಿತೇನೋ.

‍ಲೇಖಕರು ವಾಸುದೇವ ಶರ್ಮ

February 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: