ದಿಗಂತ್ ಬಿಂಬೈಲ್
ಜುಗಾರಿ ಕ್ರಾಸ್ ಅಂಕಣ ಚರ್ಚೆ/ಸಂವಾದ ಬೆಳೆಸುವುದಕ್ಕೆ ಇರುವ ಅಂಕಣ.
ಇಂದಿನ ಜ್ವಲಂತ ಸಮಸ್ಯೆಗಳಾಗಲೀ, ಬೆಳಕಿಗೆ ಹಿಡಿದು ನೋಡಬೇಕಾದ ವಿಷಯಗಳಾಗಲೀ ಈ ಅಂಕಣದಲ್ಲಿ ಕಾಣಿಸಿಕೊಳ್ಳುತ್ತದೆ. ಸಂವಾದ ‘ಹೀಗೇ..’ ಎಂದು ಅಂತ್ಯಗೊಳ್ಳಬೇಕಾಗಿಲ್ಲ. ಆದರೆ ಒಂದು ವಿಷಯದ ಹಲವು ಮಗ್ಗುಲುಗಳನ್ನಾದರೂ ಜುಗಾರಿ ಕ್ರಾಸ್ ತಡವುವಂತಾಗಬೇಕು ಎಂಬುದು ನಮ್ಮ ಆಶಯ.
ಇಲ್ಲಿನ ಬರಹ ನಮ್ಮ ತಾಣದ ಅಧಿಕೃತ ನಿಲುವಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ನೋಟವನ್ನು ರೂಪಿಸಲು ಇಲ್ಲಿ ಚರ್ಚೆಗೆ ತೆರೆದಿಡಲಾಗಿದೆ.
ಹನಿ ನೆಟ್ವರ್ಕ್ ಸಿಗದ ಯಡೂರಿನ ಕಾಡು ಸೀಳಿದ ಹೆದ್ದಾರಿ ಬದಿಯ ಮರಗಳ ದರಗನ್ನ ಹೊತ್ತೊಯ್ಯೊಲು ನಿಂತ ಮಲೆನಾಡ ಸಾಂಸ್ಕೃತಿಕ ಕೊಂಡಿ ಎತ್ತಿನ ಗಾಡಿ ಕಂಡೊಡನೆ ಬಹಳ ಅಪರೂಪದ್ದೇನೋ ಕಂಡಂತೆ ಎಪ್ಪತ್ತರ ವೇಗದಲ್ಲಿದ್ದ ಕಾರನ್ನ ಎತ್ತಿನ ಗಾಡಿಯ ವೇಗಕ್ಕೆ ಇಳಿಸಿ ಬದಿ ನಿಲ್ಲಿಸಿದೆ.
ಮಲೆನಾಡ ಹೆಬ್ಬಾಗಿಲಿನಲ್ಲಿ ತಳತಳ ಹೊಳೆಯುವ ಕೋಟಿ ಕೋಟಿ ಸುರಿದ ವಿಮಾನ ನಿಲ್ದಾಣದ ಸುದ್ದಿಯೇ ಎಲ್ಲೆಲ್ಲು ವಿಜೃಂಭಿಸುತ್ತಿರುವ ಈ ಸಮಯದಲ್ಲಿ ನಮ್ಮ ಪೂರ್ವಜರನ್ನ ಹೊತ್ತು ಅಡ್ಡಾಡಿದ್ದ ಎತ್ತಿನ ಗಾಡಿಗಳು ಹತ್ತಿರತ್ತಿರ ನಾಮಾವಶೇಷವಾಗುವಷ್ಟರ ಮಟ್ಟಕ್ಕೆ ತಲುಪಿದ್ದು ಯೋಚನೆಗೆ ತಳ್ಳಿತು.
ಮಲೆನಾಡ ಸಾರಿಗೆ ವ್ಯವಸ್ಥೆ ನಡೆದು ಬಂದ ದಾರಿಗೆ ವಿಮಾನವು ಸೇರ್ಪಡೆ ಆಗುತ್ತಿರುವಾಗ, ವಿಮಾನ ನಿಲ್ದಾಣಕ್ಕೆ ಕುವೆಂಪುರವರ ಹೆಸರಿಟ್ಟಿದ್ದು ಕಾನೂರು ಹೆಗ್ಗಡತಿ ಕಾದಂಬರಿಯ ಮತ್ತೊಮ್ಮೆ ತಿರುವಿ ಹಾಕಲು ಕಾರಣ ಸಿಕ್ಕಂತಾಗಿತ್ತು.
ಕೊಪ್ಪದ ಕಡೆಯಿಂದ ಬರುತ್ತಿದ್ದ ಬೈಸಿಕಲ್ಲು ನೋಡಿ “ಇಲ್ಲಿಗೆಲ್ಲಿಂದ ಬಂತಪ್ಪಾ ಬೈಸಿಕಲ್ಲು?” ಎಂದು ಆಶ್ಚರ್ಯದಿಂದ ನೋಡುವ ಹೂವಯ್ಯನ ಪಾತ್ರದ ಜೊತೆಗೆ, ಬೈಸಿಕಲ್ಲು ಮಲೆನಾಡ ಹಾದಿಯಲ್ಲಿ ಕಂಡಿದ್ದನ್ನ “ಆಕ್ರಮಣಶೀಲವಾದ ಆ ಚಂಚಲಮಾನ ನಾಗರಿಕ ಲೋಕವು ಮಲೆನಾಡಿಗೆ ದಾಳಿಯಿಡುವ ಮೊದಲು ಮುನ್ನಟ್ಟಿದ ರಣಚಾರನಲ್ಲವೆ ಆ ಬೈಸಿಕಲ್ ಸವಾರ” ಮಲೆ ನೆಲದ ಭವಿಷ್ಯವನ್ನ ಕಣ್ಣೆದುರು ಕಂಡಂತೆ ಒಂದೇ ಸಾಲಿನಲ್ಲಿ ಕಟ್ಟಿಟ್ಟಿದ್ದನ್ನ ಮತ್ತೆ ಮತ್ತೆ ಓದುವಾಗ, ಬಂದಿಳಿಯುತ್ತಿರುವ ವಿಮಾನ ಏನೆಲ್ಲ ಪಲ್ಲಟಗಳ ಸೃಷ್ಟಿಸಬಹುದು? ಕುವೆಂಪು ಇದ್ದಿದ್ದರೆ ಬೈಸಿಕಲ್ಲನ್ನೇ ನಾಗರಿಕ ಲೋಕದ ದಾಳಿ ಎಂದು ಸುಸ್ಪಷ್ಟವಾಗಿ ಎದುರಿಟ್ಟವರು ವಿಮಾನವನ್ನ ಯಾವ ದಿಕ್ಕಿನಲ್ಲಿ ತೂಕಕ್ಕಿಡುತ್ತಿದ್ದರು ಎಂದೆಲ್ಲ ಯೋಚನೆಗಳ ಪ್ರಳಯವೇಳುತ್ತದೆ.
ಮಲೆನಾಡಿಗೆ ಕಾಲಿಟ್ಟ ಯಂತ್ರ ನಾಗರಿಕತೆ ಇಲ್ಲಿನ ಮೂಲ ಸ್ವರೂಪವನ್ನ ಕುಲಗೆಡಿಸಿಟ್ಟಿದ್ದೇ ಹೆಚ್ಚು. ವಿಮಾನ ನಿಲ್ದಾಣದಿಂದ ಶಿವಮೊಗ್ಗ ಅಭಿವೃದ್ಧಿ ಆಗ್ತದೆ, ಮಲೆನಾಡು ಬದಲಾಗ್ತದೆ ಎಂದೆಲ್ಲ ಬರೆಯುತ್ತಿರುವುದನ್ನ ನೋಡಿದಾಗ ಅಭಿವೃದ್ಧಿ, ಬದಲಾವಣೆ ಅಂದ್ರೇನು? ಈ ಪದಗಳ ವ್ಯಾಖ್ಯಾನವನ್ನ ಇನ್ನೊಮ್ಮೆ ವಿಮರ್ಶೆಗೆ ಹಚ್ಚಬೇಕಾದ ತುರ್ತಿದೆ ಎಂದು ತೀರಾ ಎನಿಸುತ್ತದೆ.
ಮಾನವ ಕೇಂದ್ರಿತ ದೃಷ್ಟಿಯಿಂದ ನೋಡುವುದಾದರೆ ವಿಮಾನ ನಿಲ್ದಾಣವನ್ನ ಶ್ಲಾಘಿಸಲೇಬೇಕು. ಆದರೆ ಉತ್ತರದ ಹೈಕಮಾಂಡ್ ಗಳು ನೇರಾ ಈ ನೆಲದಲ್ಲೇ ಬಂದಿಳಿದು ಪ್ರಾದೇಶಿಕತೆಯ ತುಳಿದು, ತಮಗೆ ಬೇಕಾದ ಬೆಳೆ ಬೆಳೆದುಕೊಳ್ಳಲು ಇನ್ನಷ್ಟು ವೇಗದೊರಕಿಸಿಕೊಟ್ಟಂತಾಯಿತೇನೋ ಎಂಬ ಯೋಚನೆ ಸುಳಿದಾಗ ದಿಗಿಲೇಳುತ್ತದೆ. ದೇವರ ವೇಷ ತೊಟ್ಟ ಅಭಿವೃದ್ಧಿ ಎಂಬ ರಾಕ್ಷಸನ ಹೆಸರಿನಿಂದಾದ ಯೋಜನೆಗಳಿಂದ ಮಲೆನಾಡಿನ ಸ್ವಾವಲಂಬಿ ಬದುಕನ್ನ ಪರಾವಲಂಬಿಗಳನ್ನಾಗಿ ಮಾಡಿ ಬಂಡವಾಳಶಾಹಿಯ ಕೈಯಾಳುಗಳನ್ನಾಗಿ ಮಾಡಿಟ್ಟಿದ್ದರ ಮುಂದುವರಿಕೆಯಾಗಿ ಕಾಣುತ್ತದೆ ಈ ವಿಮಾನ ನಿಲ್ದಾಣ.
ವಿಮಾನ ಮಲೆ ನೆಲ ತಾಗುತ್ತಿರುವ ಸಂತೋಷಕ್ಕಿಂತ ಇದೇ ಸಮಯಕೆ ಎತ್ತಿನ ಗಾಡಿಯೊಂದು ಜೀವಂತಿಕೆ ಸಾರಿ ಕಣ್ಣೆದುರಾಗಿದ್ದು ನನ್ನ ಪಾಲಿಗೆ ಸಂಭ್ರಮ. ಎತ್ತಿನಗಾಡಿಯಲ್ಲಿ ಕೂದಲು ನೆರೆತ ಅಜ್ಜ-ಅಜ್ಜಿಯ ಜಾಗದಲ್ಲಿ ಹರೆಯದವರಿದ್ದರೆ ಈ ಹಳ್ಳಿಗೆ ಭವಿಷ್ಯವಿದೆ ಎನ್ನುವ ಸಮಾಧಾನ ಏರುತ್ತಿತ್ತು! ಏನು ಮಾಡುವುದು? ನನ್ನನ್ನೂ ಸೇರಿದಂತೆ ನಾವು ನೆಲದ ಮೇಲೆ ನಿಲ್ಲುವುದಕ್ಕಿಂತ ಹಾರುವುದಕ್ಕೆ ಕಾಯುತ್ತಿರುವಾಗ ನಾಗರಿಕ ದಾಳಿಯ ಸಹಿಸಲೇಬೇಕು. ಎಷ್ಟಾದರೂ ನಾವು ದರಗು ಗುಡಿಸುವ ಕಾಲದಿಂದ ದುಡ್ಡು ಹೆರಕುವ ಕೆಲಸಕ್ಕೆ ಹಾತೊರೆದು ಕೂತವರಲ್ಲವೇ!
ವಿಮಾನದಲ್ಲಿ ತೇಲುವಾಗ (ಆಧುನಿಕ ಜಗತ್ತು) ಎತ್ತಿನ ಗಾಡಿಯ ಗಾಲಿ (ಮಲೆನಾಡ ಸಂಸ್ಕೃತಿ) ವರಲೆ ಹಿಡಿದಿರುವುದು ಕಣ್ಣಿಗೆ ಕಾಣುವುದಿಲ್ಲ ಬಿಡಿ! ಮನಸ್ಸಿಗೆ ಕಂಡರೆ, ಕಂಡೂ ಕಾಣದಂತೆ ಸಾಗೋಣ, ಹಾದಿಯೇ ಕಾಣದಂತೆ ಕುಳಿತಿರುತ್ತೇವಲ್ಲ ಅಲ್ಲಿ ಮೇಲೆ.
0 ಪ್ರತಿಕ್ರಿಯೆಗಳು