ಎಚ್ ಎಸ್ ಮುಕ್ತಾಯಕ್ಕ ಓದಿದ ‘ಮರೆತಿಟ್ಟ ವಸ್ತುಗಳು’

ಎಚ್ ಎಸ್ ಮುಕ್ತಾಯಕ್ಕ

ನಾನು ಮೂಲತಃ ವಿಮರ್ಶಕಿ ಅಲ್ಲ. ಶ್ರಿ ತೇರಳಿ ಎನ್ ಶೇಖರ ಅವರು ಅನುವಾದಿಸಿದ ‘ಮರೆತಿಟ್ಟ ವಸ್ತುಗಳು’ ಕವನ ಸಂಕಲನವನ್ನು ಓದಿ ಆನಂದಿಸಿದ್ದನ್ನು ನಿಮ್ಮೊಡನೆ ಹಂಚಿಕೊಂಡ್ಡಿದ್ದೇನೆ.

ಶ್ರಿ ತೇರಳಿ. ಎನ್. ಶೇಖರ ಅವರು ಅನುವಾದಿಸಿದ ಮಲಯಾಳಂ ಕವಿ ಶ್ರೀ ಸಚ್ಚಿದಾನಂದನ್ ಅವರ ‘ಮರೇತಿಟ್ಟ ವಸ್ತುಗಳು’ ಒಂದು ಅಪರೂಪದ ಕಾವ್ಯ. ನಾನು ಈ ಮೊದಲು ಮಲೆಯಾಳಂನಿಂದ ಅನುವಾದಗೊಂಡ ಕಾವ್ಯ, ಕಥೆ, ಕಾದಂಬರಿ ಓದಿದ್ದೇನೆ. ಆದರೆ ಈ ಕವಿತೆಗಳನ್ನು ಓದಿರಲಿಲ್ಲ. ಈ ವಿಶಿಷ್ಟ ಕವಿತೆಗಳನ್ನು ತೇರಳಿ.ಎನ್.ಶೇಖರ ಸಮರ್ಥವಾಗಿ ಮೂಲಕ್ಕೆ ಅಪಚಾರವಾಗದಂತೆ ಅನುವಾದಿಸಿದ್ದಾರೆ. ಮೂಲದ ಸೊಗಸನ್ನು, ಸೊಗಡನ್ನು, ಯಥಾವತ್ತಾಗಿ ತಂದಿದ್ದಾರೆ. ಈ ಕವಿತೆಗಳಲ್ಲಿಯ ಭಾವ, ವಿಷಯ, ವಸ್ತು ವೈವಿಧ್ಯ, ಪ್ರೀತಿ, ದೇವರು, ಬದುಕು, ಸಾವು ಹೀಗೆ ನಾನಾರೀತಿಯ ತುಡಿತಗಳನ್ನು, ಸಾಮಾಜಿಕ ಕಳಕಳಿ, ವ್ಯವಸ್ಥೆಯ ವಿಡಂಬನೆ, ವ್ಯಂಗ್ಯ ಇಲ್ಲಿ ಕಾಣಬಹುದು.

‘ಒಂದು ದಿವಸ’ ಈ ಕವಿತೆ, ಇನ್ನೊಂದು ಭಾಷೆಯ ಅಡಿಯಲ್ಲಿ ಸಿಕ್ಕು ನಶಿಸಿ ಹೋಗುವ ತಾಯಿ ಭಾಷೆಯ ಬಗೆಗಿನ ವಿಡಂಬನೆ ಮತ್ತು ದುರಂತದ ಚಿತ್ರಣವಾಗಿದೆ. ವಿಷಾದವೆಂದರೆ ಕನ್ನಡದ ಸ್ಥಿತಿಯೂ ಅದೇ ಆಗಿದೆ.

‘ಒಂದು ಸ್ವೀಡಿಷ್ ಸಂಜೆಯ ನೆನಪಿಗೆ’ ಕವಿತೆಯಲ್ಲಿ,
‘ತಾವು ನನ್ನ ಬಟ್ಟಲಿಗೆ
ಕೆಂಪಗಿನ ಶರತ್ಕಾಲವನ್ನು
ನಿಲ್ಲಿಸದೆ ತುಂಬುತಿದ್ದೀರಿ’ ಎಂದು ಋತುವನ್ನು ಬಟ್ಟಲಿಗೆ ತುಂಬುವುದು ನನಗೆ ತುಂಬ ಮೋಹಕವಾಗಿ ತೋರಿದೆ.

ಇನ್ನೊಂದು ಕವಿತೆ ‘ಮರಗಳು’ ಎಂಬುದರಲ್ಲಿ,
‘ನೆನಪುಗಳಲ್ಲಿ ವಸಂತ ಇರುವವರೆಗೂ
ಅವು ಮುಪ್ಪನ್ನು ಹಳಿಯುವದಿಲ್ಲ’ ಎಂಬ ಸಾಲು ಎಷ್ಟು ಸತ್ಯ ಮನದಾಳಕ್ಕೆ ಇಳಿಯುತ್ತವೆ. ‘ಒಗಟುಗಳು’ ಕವನದಲ್ಲಿ ಪ್ರಣಯವನ್ನು ಹೊಸರೀತಿಯಲ್ಲಿ ಪರಿಪರಿಯಾಗಿ ವರ್ಣಿಸಿದ್ದಾರೆ.
ಇನ್ನು, ‘ಹತ್ತಿರ ದೂರ’
ಕವಿತೆ ಮನಮಿಡಿಯುತ್ತದೆ.
‘ನೀನು ಅದೆಷ್ಟು ಹತ್ತಿರ
ಆದರೂ ಅದೆಷ್ಟು ದೂರ!’ ಎಂದು ಆರಂಭವಾಗುತ್ತ ನಾನಾಪರಿಯಾಗಿ ಹತ್ತಿರವಾದರೂ ದೂರ, ದೂರವಾದರೂ ಹತ್ತಿರ, ಇದರ ಒಡಲ್ಲಲಿಯ ಅನಂತತೆ, ನೋವು, ಕ್ಷಣಿಕತೆ ಹೇಳುತ್ತ ಹೇಳುತ್ತ ಕೊನೆಗೆ,
‘ಅದೆಷ್ಟು ಹತ್ತಿರವೀ ದೂರ
ಅದೆಷ್ಟು ಅನಂತ ಕ್ಷಣಿಕತೆ
ಅದೆಷ್ಟು ಮಧುರವೀ ಕಹಿ
————-
ನೀನು ಹೀಗೆ
ಮುಟ್ಟಿ ಮುಟ್ಟದೆ
ನಿಕಟವರ್ತಿಯಾಗುವೆ ಕ್ಷಣಿಕ!’ ಮನಮಿಡಿಯುವ ಸಾಲುಗಳೊಂದಿಗೆ ಕವಿತೆಮುಗಿಯುತ್ತದೆ- ಒಂದು ನಿಟ್ಟುಸಿರಿನೊಡನೆ ಕೂಡಾ
‘ಒಂದು ಪ್ರೇತ ಕಥೆ’ಯಲ್ಲಿ ಕವಿಗಳು ಓದಬೇಕಾದುದನ್ನು ಸೂಚ್ಯವಾಗಿ, ವಿಡಂಬನಾತ್ಮಕವಾಗಿ ಬರೆಯಲಾಗಿದೆ. ಇಲ್ಲಿ ಎಲ್ಲ ಕವಿತೆಗಳು ತಮ್ಮ ತಮ್ಮ ವೈವಿಧ್ಯತೆಯಿಂದ ಮನಸೂರೆಗೊಳ್ಳುತ್ತವೆ ಯೋಚಿಸುವಂತೆ ಮಾಡುತ್ತವೆ ಖುಷಿಯನ್ನೂ ಕೊಡುತ್ತವೆ ಹಾಗೆ ಬರೆಯುತ್ತ ಹೋದರೆ ಎಲ್ಲ ಕವಿತೆಗಳ ಬಗೆಗೂ ಬರೆಯಬೇಕಾಗುತ್ತದೆ ಯಾವುದನ್ನೂ ಬಿಡುವಂತೇಯೇ ಇಲ್ಲ.

ಕೊನೆಗೆ ಈ ಸಂಕಲನದ ಹೆಸರಾಗಿರುವ ಕವಿತೆ ‘ಮರೆತಿಟ್ಟ ವಸ್ತುವಗಳು’ ಒಂದು ಕ್ಲಾಸಿಕ್ ಕವಿತೆ. ಅಪರೂಪದ ವಿಶಿಷ್ಟ ಕವಿತೆ ಹಲುವಾರು ರೀತಿಯಲ್ಲಿ ಅದನ್ನು ಪ್ರತಿಯೊಬ್ಬರೂ ತಮ ತಮಗೆ ಅನ್ವಯಿಸಿಕೊಳ್ಳಬಹುದು.

ಒಂದು ತೀರ ಸಹಜ, ನೈಜ ಭಾವ ಇಲ್ಲಿದೆ,
ಇಷ್ಟುಕಾಲವು ಮರೆತಿಟ್ಟಿದ್ದೆಲ್ಲವು
ಈಗ ಒಮ್ಮೆಲೆ ನೆನಪಾಗುತ್ತವೆ
ಬಾಲ್ಯಕಾಲ, ಆ ಮುಗ್ಧತೆ, ಮರೆತಿಟ್ಟ ಛತ್ರಿ, ಪೆನ್ನು, ಅಂಗಿ, ಪುಸ್ತಕ, ತೀರಿಸದ ಸಾಲ, ಜೊತೆಗೆ ಮರೆತ ಸ್ನೇಹಕೂಡ ಅಲ್ಲದೆ ಇದು ಪ್ರೆಮಕ್ಕೂ, ಸೃಷ್ಟಿಗೂ ಅನ್ವಯಿಸುತ್ತದೆ. ಕೊನೆಗೆ ದೇವರೂ ಈ ಭೂಮಿಯನ್ನು ಮರೆತ್ತಿದ್ದಾನೆಂದು ಹೀಗೆ ಹೇಳುವರು,
‘ಈಗ ಅನಿಸುತ್ತಿದೆ
ಈ ಭೂಮಿಯನ್ನು ದೇವರು
ಮರೇತಿಟ್ಟಿದ್ದೆಂದು
ಆದರಲ್ಲಿ ನಮ್ಮನ್ನೂ ಸಹ
ನೆನಪು ಬಂದಂತೆಲ್ಲ
ಅವನು ವಾಪಸ್ಸು ತೆಗೆದುಕೊಳ್ಳುತ್ತಾನೆ.
ನದಿಗಳನ್ನು,
ಕಾಡುಗಳನ್ನು,
ನಮ್ಮನ್ನೂ.’

ಈ ಮರೆವಿನಲ್ಲಿ ಏನಿದೆ? ಏನೆಲ್ಲ ಇದೆ. ನೋವು, ಖುಷಿ, ದುಃಖ, ಏನೆಲ್ಲ ಒಂದು ಜೀವಿತಾವಧಿಯ ಕಥೆ ವ್ಯಥೆ ಬಯಕೆ ಕಂಬನಿ ಪಶ್ಚಾತಾಪ ಏನೆಲ್ಲ.
ತೇರಳಿ.ಎನ್.ಶೇಖರ ಅವರು ತುಂಬ ಶ್ಲಾಘನೀಯ ಕೆಲಸ ಮಾಡಿದ್ದಾರೆ. ಜಾಗತಿಕ ಸಾಹಿತ್ಯ ನಮಗೆ ಓದಲು ಸಿಗುವುದು ಅನುವಾದಗಳಿಂದ ಮಾತ್ರ. ಅನುವಾದಕಾರರು ಅವುಗಳ ಪರಿಚಯವನ್ನು ಮಾಡಿಕೊಡುತ್ತ ಜಗತ್ತಿಗೆ ನಮ್ಮ ಹೃದಯದ ಕಿಟಕಿಗಳನ್ನು ತೆರೆದಿಡುವಂತಹ ಕೆಲಸ ಮಾಡುತ್ತಾರೆ.

ಇವರಿಗೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆ. ಮೂಲವನ್ನೇ ಓದುತ್ತಿರುವಂಥ ಅನುಭೂತಿಯನ್ನು ಖುಷಿಯನ್ನು ಒಬ್ಬ ಸಮರ್ಥ ಅನುವಾದಕ ಮಾತ್ರ ಕೊಡಬಲ್ಲ. ಆ ಕೆಲಸವನ್ನು ಇಲ್ಲಿ ತೇರಳಿ ಶೇಖರ ಮಾಡಿದ್ದಾರೆ. ಅವರು ನಿಜಕ್ಕೂ ಅಭಿನಂದನಾರ್ಹರು. ಇನ್ನೂ ಅವರಿಂದ ಇಂತಹ ಹಲವು ಕೃತಿಗಳು ಹೊರಬರಲೆಂದು ಹಾರೈಸುತ್ತ, ಕೊನೆಗೆ ನನ್ನದೊಂದು ಪುಟ್ಟ ಕವಿತೆ, ಶ್ರಿ ಸಚ್ಚಿದಾನಂದನ್ ಮತ್ತು ಶ್ರೀ ತೇರಳಿ ಶೇಖರ
ಇವರ ಕ್ಷಮೆಕೋರುತ್ತ,
‘ಬದುಕು ಮರೆತಿಟ್ಟ ವಸ್ತುಗಳಲ್ಲಿ,
ಪ್ರೀತಿ ಮರೆತಿಟ್ಟ ವಸ್ತುಗಳಲ್ಲಿ,
ನಾನೂ ಒಂದು
ಅಯ್ಯೋ ದೇವರೆ,
ಆವಕೆಂದು ನನ್ನ ನೆನಪಾಗಲಿಲ್ಲ.
ಇನ್ನು
ಆಶಿಸುತ್ತೇನೆ,
ಸಾವು ಮರೆತಿಟ್ಟ ವಸ್ತುಗಳಲ್ಲಿ,
ನಾನು ಇಲ್ಲವೆಂದು
ನಾನು ಇಲ್ಲವೆಂದು’

‍ಲೇಖಕರು Admin

November 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: