ಎಚ್ ಆರ್ ಲೀಲಾವತಿ
……………………..
ಎಲ್ಲಿಂದಲೋ ಬಂದವನು
ಕಂಡು ಕೇಳರಿಯದವನು
ಮೊಗೆಮೊಗೆದು ನಗುವ ನಕ್ಷತ್ರಗಳ
ರಾಶಿ ಸುರಿದವನು
ತೆರೆದ ತುಟಿಯಿಂದ
ಜೇನ ಹೊಳೆ ಹರಿಸಿದವನು
ಸೂಜಿಗಲ್ಲಿನಂತೆ ಎದೆಗೆ ಕೈಹಾಕಿದವನು
ತುಟಿಗೆ ತುಟಿ ತಂದವನು
ಬಳಸಿ ಬಿಗಿದಪ್ಪಿದವನು
ಕ್ಷಣ ಕ್ಷಣವು ಕಾಮನನೆ ಹೊದ್ದವನು
ತಣಿವವರೆಗು ಆಟವಾಡಿದವನು
ಇದ್ದಕಿದ್ದೊಲೆಹೇಳಹೆಸರಿಲ್ಲದೊಲು ಓಡಿಹೋದವನು
ಕಾಮದ ಬೇಟಕೆಂದೇ ಬಂದವನು
ಜೀವ ಫಲದ ಬೀಜ ಬಿತ್ತಿ ಪರಾರಿಯಾದವನು
ಅವಳ ಕಣ್ಣೀರಿಗೆ ಕುರುಡಾದವನು
ಬೇಡಿಕೆಗೆ ಕಿವುಡಾದವನು
ನಿಡುಸುಯ್ಲಿನ ಬಿರುಬೆಂಕಿಯಲಿ ಬೆಂದು
ಕಂಬನಿಯ ಅಭಿಷೇಕದಲಿ ಮಿಂದವಳು
ಅವನ ಬೇಟದ ಕಾಯಕಕೆ ಉತ್ತರದಾಯಿಯಾದವಳು
ಅಸಹನೆಯ ಕಲ್ಲೇಟುಗಳಿಗೆ ಎದೆಯೊಡ್ಡಿದವಳು
ಉಬ್ಬಿದುದರವ ನೇವರಿಸುತ್ತ
ಸೆಟೆದೆದ್ದು ನಿಂದವಳು

ಒಂಟಿತನದ ಕಿರುದೋಣಿಯಲಿ
ತಲೆಬಾಗಿ ಬೆನ್ನು ಬಾಗಿ
ಹಗಲಿರುಳು ದುಡಿದವಳು
ಸುಪ್ರಭಾತದ ಕಿರಣಗಳ ತೊಟ್ಟಿಲಲ್ಲಿ
ಮುತ್ತೊಂದ ತೂಗಿದವಳು
ತೊದಲುಲಿಯ ಮುದ್ದಿನಲಿ
ದುಃಖವನು ಮರೆತವಳು
ಮಗುವು ಎದೆಮಟ್ಟ ನಿಂದಾಗ
ಕಣ್ದುಂಬಿಕೊಂಡವಳು
ಸೂರ್ಯ ಚಂದ್ರರ ಮಿಲನ ಮಹೋತ್ಸವದಿ
ಸಜ್ಜನಿಕೆಯ ಸಾಕಾರ ರೂಪದಲಿ
ಅರಳಿದವನ ಕಂಡು
ಗತಕೆ ಗೀಟೆಳೆದು ನಕ್ಕಾಗ
ಹೊಸ ಬಾಳಿಗುಸಿರಾದವಳು.
0 ಪ್ರತಿಕ್ರಿಯೆಗಳು