ಎಚ್ ಆರ್ ರಮೇಶ ಓದಿದ ‘ಸಾಹಿತ್ಯ ಮತ್ತು ಸಿದ್ದಾಂತಗಳು’

ನಟ್ ಶೆಲ್ ನಲ್ಲಿ  ಸಾಹಿತ್ಯ ಮತ್ತು ಸಿದ್ಧಾಂತಗಳು

ಎಚ್ ಆರ್ ರಮೇಶ 

ಇತ್ತೀಚೆಗಷ್ಟೇ ಪ್ರಕಟಗೊಂಡಿರುವ ರಾಜೇಂದ್ರ ಚೆನ್ನಿ ಅವರ ಸಾಹಿತ್ಯ ಮತ್ತು ಸಿದ್ಧಾಂತಗಳು  ಕೃತಿಯು ಒಂದು ಅದ್ಭುತವಾದ ಪುಸ್ತಕ. ಕನ್ನಡಕ್ಕೆ ಈ ಪುಸ್ತಕ ತುಂಬಾ ಅನಿವಾರ್ಯವಾಗಿತ್ತು. ಅಷ್ಟೇ ಯಾಕೆ, ಭಾರತೀದ ರಾಜಕೀಯ ಮತ್ತು ಸಾಂಸ್ಕøತಿಕ/ಸಾಹಿತ್ಯಕ ಸಂದರ್ಭಕ್ಕೂ ಸಹ ಬಹಳ ಮುಖ್ಯವಾಗಿದ್ದು, ಮಿಂಚಿನಂತಹ ಹೊಳಹುಗಳನ್ನು ಚೆನ್ನಿಯವರು ಕನ್ನಡದ ಮಣ್ಣಿನಲ್ಲಿ ನಿಂತು ಜಾಗತಿಕ ಲಿಟರರಿ ವಿದ್ಯಮಾನಗಳ  ಜೊತೆ ಥಳುಕು ಹಾಕುವ ಕ್ರಮ ಚೇತೋಹಾರಿಯಾಗಿದೆ.

ಈ ಪುಸ್ತಕ ಇಂದಿನ ತಲೆಮಾರಿನವರಿಗೆ ಸಾಹಿತ್ಯ ಮತ್ತು ಸಿದ್ಧಾಂತಗಳನ್ನು ಅರಿಯಲು, ಮುಖಾಮುಖಿಯಾಗಲು ಬೆಳಕಿಂಡಿಯಂತೆ ಇದೆ; ಜೊತೆಗೆ, ನಮ್ಮ ಓದಿನ ಕ್ರಮಕ್ಕೆ ಬಡಿದಿರುವ ಜಿಡ್ಡನ್ನು ಹೋಗಲಾಡಿಸುವ ಗುಣವನ್ನು ಒಳಗೊಂಡಿದೆ. ಅನೇಕ ವಾಗ್ವಾದಗಳಿಗೆ, ಚರ್ಚೆಗಳಿಗೆ, ಗ್ರಹಿಕೆಗಳಿಗೆ ಅವಕಾಶವನ್ನು ಕಲ್ಪಿಸುತ್ತದೆ. ಓದುವಾಗ ಆಗುವ ಅನುಭವ ಎನ್‍ಲೈಟನಿಂಗ್ ಮತ್ತು ಎಕ್ಸೈಟಿಂಗ್.

ಈ ಪುಸ್ತಕದ ಕೊನೆಯಲ್ಲಿ ಈ ಕಾಲಕ್ಕೆ ರಾಜಕೀಯ, ಸಾಂಸ್ಕøತಿಕ ಹಾಗೂ ಸಾಹಿತ್ಯಕ ಸಂಗತಿಗಳಿಗೆ ಪ್ರತಿಸ್ಪಂದಿಸಲು ಜಾಗತಿಕ ಅಕಾಡೆಮಿಕ್ ವಲಯದಲ್ಲಿ ಬಹು ಚರ್ಚಿತವಾಗುತ್ತಿರುವ ಪುಸ್ತಕಗಳ ಒಂದು ಪಟ್ಟಿಯನ್ನು ಕೊಡಲಾಗಿದೆ. ಪ್ರತಿ ಪುಸ್ತಕವೂ ತನ್ನ ಕಾಲವನ್ನು ಅನೇಕ ಆಯಾಮಗಳಲ್ಲಿ ಚಿರ್ಚಿಸಿದೆ ಎಂಬುದನ್ನು ಮನಗಾಣಬಹುದಾಗಿದೆ. ರಾಜಕೀಯ ಮತ್ತು ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸಿರುವವರು ಈ ಪುಸ್ತಕಗಳಿಗೆ ಮುಖಾಮುಖಿಯಾದರೆ ದೇಶಕಾಲದಲ್ಲಿನ ಸಂಘರ್ಷ, ಸೈದ್ಧಾಂತಿಕ ತಿಕ್ಕಾಟಗಳ ಮೂಲ ಸೆಲೆಯನ್ನು ಅರಿಯಲು ಸಹಾಯ ಮಾಡುತ್ತವೆ.

ಜೊತೆಗೆ ನೈತಿಕ ಮತ್ತು ತಾತ್ವಿಕವಾದ ಶಕ್ತಿಯನ್ನು ಧಾರೆ ಎರೆದು ಕೊಡುತ್ತವೆ. ಈ ಎಲ್ಲಾ ಕೃತಿಗಳ ಸಾರವನ್ನು ತುಂಬಾ ವ್ಯವಧಾನದಲ್ಲಿ ಒಂದೊಂದೇ ಹನಿಯನ್ನು ತೊಟ್ಟಿಕ್ಕುಸುವ ಬಗೆಯಲ್ಲಿ ಚೆನ್ನಿಯವರು ಈ ಕೃತಿಯ ಉದ್ದಕ್ಕೂ ಸಾಹಿತ್ಯ ಮತ್ತು ಸಿದ್ಧಾಂತಗಳನ್ನು ವಿಶ್ಲೇಷಿಸುತ್ತ ಹೋಗಿರುವುದು ಓದುಗರನ್ನು ಹಿಡಿದಿಡುತ್ತದೆ ಮತ್ತೂ, ಸಿದ್ಧಾಂತವೆನ್ನುವ ಶುಷ್ಕವೆನ್ನುವ ರೀತಿಯಲ್ಲಿ ಇರುವ ವಿಷಯವನ್ನು ತುಂಬಾ ಆಪ್ತವಾದ ಭಾಷೆಯಲ್ಲಿ ಅದೊಂದು ಅಪ್ಪಟ ಸೃಜನಶೀಲ ಕೃತಿಯಂತೆ ಕೆತ್ತುತ್ತ ಹೋಗುತ್ತಾರೆ. 

ಕೆಲ ಅಕಾಡಮೆಕ್ ವಲಯದಲ್ಲಿನ ಪ್ರೊಫೆಸರ್ ಗಳು ಥಿಯರಿ ಮತ್ತು ಸಿದ್ಧಾಂತಗಳನ್ನು ತಿಣುಕುತ್ತ ಕೇವಲ ಅವುಗಳ ವಾಖ್ಯಾನಗಳನ್ನು ಮತ್ತು ಅವುಗಳ ಗುಣಾವಗುಣಗಳ ಪಟ್ಟಿಯನ್ನು ಕೊಟ್ಟು ಕೈ ತೊಳೆದುಕೊಳ್ಳುವಂತೆ ಮಾಡದೆ, ತುಂಬಾ ಪ್ರೀತಿಯಿಂದ ಅಷ್ಟೇ ಆಸ್ಥೆಯಿಂದ ಪ್ರತಿ ಸಿದ್ಧಾಂತಗಳನ್ನು , ವಿಚಾರಗಳನ್ನು ತಾವು ಓದಿದ ಕೃತಿ ಮತ್ತು ತಮ್ಮ ಕಾಲದಲ್ಲಿ ಜರುಗಿದ ಘಟನೆ, ರಾಜಕೀಯ ಸನ್ನಿವೇಶಗಳ ಜೊತೆ ಇಟ್ಟು ವಿವಿಧ ಆಯಾಮಗಳಲ್ಲಿ ಸಮಚಿತ್ತದಿಂದ ಚರ್ಚಿಸುತ್ತಾರೆ.

ಒಂದು ಕನ್ನಡದ ಮನಸ್ಸು ಜಾಗತಿಕ ವಿದ್ಯಮಾನಗಳ ಕುರಿತು ಈಗಾಗಲೇ ವಿಖ್ಯಾತ ವಿದ್ವಾಂಸರು ಚರ್ಚಿಸಿರುವ ಚಿಂತನೆಗಳನ್ನು ಅಂತರ್ಗತಮಾಡಿಕೊಂಡು ತನ್ನ ನೆಲದಲ್ಲಿನ ವಿದ್ಯಮಾನಗಳನ್ನು ಅರಿಯುವ ಪ್ರಯತ್ನವನ್ನು ಮಾಡಿದ್ದಾರೆ. ಇದು ವಿಶ್ವವಿಖ್ಯಾತ ಕನ್ನಡದ ಚಿಂತಕ ಡಿ.ಆರ್ ನಾಗರಾಜರನ್ನು ನೆನಪಿಸುತ್ತದೆ. ಡಿ.ಆರ್ ಅವರಂತೆ ಇಲ್ಲಿ ಥಿಯರೈಸ್ ಮಾಡದೆ ಚರ್ಚಿಗೆ ಪ್ರಾಧನ್ಯತೆಯನ್ನು ಕೊಡುತ್ತಾರೆ. ಮತ್ತೊಂದು ಗಮನಿಸಬೇಕಾದ ಸಂಗತಿಯೆಂದರೆ ಜಗತ್ತಿನ ಅನೇಕ ಚಿಂತಕರ ಚಿಂತನೆಗಳನ್ನು ಪ್ರಸ್ತಾಪಸಿತ್ತ, ಅವರುಗಳ  ಜೊತೆ ನಮ್ಮ ಡಿ.ಆರ್ ಮತ್ತು ರಹಮತ್ ಅವರನ್ನು ಸೇರಿಸಿಕೊಳ್ಳುತ್ತಾರೆ. ಇದು ಚೆನ್ನಿಯವರ ದೇಶಿವಾದವನ್ನು ತೋರಿಸುತ್ತದೆ. ಈ ಕೃತಿಯ ಉದ್ದೇಶಗಳಲ್ಲಿ ದೇಶಿಯತೆಯನ್ನು ವಿಶ್ವಾತ್ಮಕ ಸಂಗತಿಗಳಲ್ಲಿ ಮಿಳಿತಗೊಳಿಸಿಕೊಂಡು ಅನನ್ಯತೆಯನ್ನು ಕಾಪಾಡಿಕೊಳ್ಳುವುದೇ ಆಗಿದೆ.

ಸಿದ್ಧಾಂತ ಎನ್ನುವ ವಿಷಯವನ್ನು ಡಿಕ್ಷನರಿ ಕಟ್ಟಿನಿಂದ ಬಿಡಿಸಿಕೊಂಡು, ಹೊರ ತಂದು, ಲೋಕದ ಆಗುಹೋಗುಗಳು ಮತ್ತು ಸಾಂಸ್ಕøತಿಕ ಪಠ್ಯಗಳನ್ನು ಅರಿಯಲು ಚೌಕಟ್ಟನ್ನು ನಿರ್ಮಿಸುತ್ತದೆ ಮತ್ತು ನಿರ್ಮಾಣಗೊಂಡದ್ದನ್ನೇ ಪುನಃ ಕೆಡುವುದರ ಅನಿವಾರ್ಯತೆಯನ್ನು ಅನೇಕ ಉದಾಹರಣೆಗಳ ಮೂಲಕಕ ತೋರಿಸಿದ್ದಾರೆ. ಒಂದು ರೀತಿಯ ವಿರಾಟ್ ದರ್ಶನ! ಅದು ಹೇಗೆ ಅಂದರೆ ನಟ್ ಶೆಲ್ ರೀತಿ. ಸಿದ್ಧಾಂತದ ಎಡಬಲವನ್ನು ಚರ್ಚಿಸುತ್ತಲೇ ಸಿದ್ಧಾಂತವೆನ್ನುವುದು ತನ್ನನ್ನು ತಾನು ಛೇಧಿಸಿಕೊಳ್ಳುವುದರ ಮೂಲಕ ಎಷ್ಟರಮಟ್ಟಿಗೆ ಅದು ಆರ್ಬಿಟ್ರರಿಯಾಗಿ ಮತ್ತು ವೈರುಧ್ಯವಾಗಿ ರೂಪುಗೊಳ್ಳುತ್ತದೆ ಎನ್ನುವುದನ್ನು ಅನೇಕ ನಿದರ್ಶನಗಳ ಮೂಲಕ ಮತ್ತು ಅನೇಕ ಚಿಂತಕರ ಚಿಂತನೆಗಳ ಸಹಾಯವನ್ನು ಪಡೆದು ಸಾಬೀತು ಪಡಿಸುತ್ತಾರೆ.

ಯೂರೋ ಕೇಂದ್ರಿತ ಪಾಶ್ಚಿಮಾತ್ಯ ಚಿಂತನೆಗಳನ್ನು ತೀವ್ರವಾಗಿ ಈ ಕೃತಿಯಲ್ಲಿ ವಿಮರ್ಶೆಗೆ ಒಳಪಡಿಸುತ್ತಾರೆ ಮತ್ತು ದೇಶಿಯ ಚಿಂತನೆಗಳೇ ಹೇಗೆ ಹೊಸರೂಪದಲ್ಲಿ ಪಾಶ್ವಿಮಾತ್ಯ ಚಿಂತನೆಗಳಲ್ಲಿ ರೂಪುಗೊಂಡವು ಎನ್ನುವುದನ್ನು ತೋರಿಸುತ್ತಾರೆ. ಕನ್ನಡ ಭಾಷೆ, ಇಲ್ಲಿನ ರಾಜಕೀಯ ಸನ್ನಿವೇಶ, ಚಾತುರ್ವರ್ಣದ ಜಾತಿ ವ್ಯವಸ್ಥೆ, ಭಯೋತ್ವಾದನೆ, ಪರಿಸರವಾದ, ಸ್ತೀವಾದ, ಜಾತ್ಯಾತೀತತೆ, ಫ್ಯಾಸಿಸ್ಟ್ ಚಿಂತನೆಗಳನ್ನು ಚರ್ಚಿಸುತ್ತಲೇ ಸಾಹಿತ್ಯ ಮತ್ತು ವಿಮರ್ಶಾ ಕ್ರಮಗಳನ್ನು ಸಂವಾದಕ್ಕೆ ತರುತ್ತಾರೆ. ವಸಾಹತೋತ್ತರ ಚಿಂತನಾ ಕ್ರಮಗಳು ಬೆಳೆದು ಬಂದಿರುವ ಕ್ರಮಗಳನ್ನು ಮತ್ತು ಅವು ಈಗ ತೆಗೆದುಕೊಳ್ಳುತ್ತಿರುವ ಹಾದಿಗಳನ್ನು, ನಿಲುವುಗಳನ್ನು ತುಂಬಾ ವಿಶಾಲನೆಲೆಯಲ್ಲಿ ಅಲ್ಲದಿದ್ದರೂ ಸ್ಪಷ್ಟವಾಗಿ ಮತ್ತು ಸಮಂಜಸವಾಗಿ ಹೊಸ ಒಳನೋಟಗಳ ಮೂಲಕ ನಿರೂಪಿಸಿರುವುದು ಈ ಕೃತಿಯ ಒಂದು ಗಮನಿಸಬೇಕಾದ ಅಂಶ.

ಇಲ್ಲಿ ಬರುವ ಸಾಹಿತ್ಯಕ ಪಠ್ಯಗಳು ಮತ್ತು ವಿಮರ್ಶಕರು ಸಿದ್ದಾಂತಗಳ ಒಳಗೆ ಹೋಗಿ ಮತ್ತು ಹೊರ ಬಂದು ಮುಕ್ತವಾಗಿ ಮತ್ತು ಬೇರೆ ರೀತಿಯಲ್ಲಿ ಒಳ ಹೋಗುವ ಕ್ರಮವನ್ನು ಓದುತ್ತ ಹೋದಾಗ ಒಂದು ಪುಳಕವಾಗುವ ಅನುಭವವಾಗುತ್ತದೆ. ಮತ್ತು ರಾಜಕೀಯವು ಸಿದ್ದಾಂತವನ್ನು ತನ್ನ ಹಿಡನ್ ಅಜೆಂಡಗಳಿಗೆ ಬಳಸಿಕೊಂಡು ಸಮಾಜದ ಸ್ವಾಸ್ಥ್ಯವನ್ನು ಹೇಗೆ ಹಾಳು ಮಾಡುತ್ತಿವೆ ಎನ್ನುವುದನ್ನು ತುಂಬಾ ಮಾರ್ಮಿಕವಾಗಿ ಅನಾವರಣಮಾಡುತ್ತ ಹೋಗುವ ಬಗೆ ಕನ್ನಡದಲ್ಲಿ ಬಂದಿರುವ ಇತ್ತೀಚಿನ ಬರಹಗಳಲ್ಲಿಯೇ ತುಂಬಾ ಗಮನಸೆಳೆಯುವಂತಹದ್ದು ಮತ್ತು ಆಕರ್ಷಕವಾದದ್ದು ಕೂಡ. ಬಹುಮುಖ್ಯವಾಗಿ ಫಾಸಿಸಮ್ ನ ಕರಾಳ ಮುಖವನ್ನು ವಿಸ್ತøತವಾಗಿ ತೆರೆದಿಡುತ್ತಾರೆ, ಮತ್ತು, ಅದು ಹೇಗೆ ಸಾಮಾನ್ಯರ ಸಂವೇದನೆಯನ್ನೇ ಕದಡುವುದರ ಮೂಲಕ ಮನುಷ್ಯ ಮನುಷ್ಯರ ನಡುವೆ ದ್ವೇಷವನ್ನು ಬಿತ್ತುತ್ತದೆ ಎನ್ನುವುದನ್ನು ತೋರಿಸಿರುವ ಅಧ್ಯಾಯ ಇಂದಿಗೆ ತುಂಬಾ ಪ್ರಸ್ತುತವಾಗಿ ಕಾಣುತ್ತದೆ.

ಇಲ್ಲಿ ಬರುವ ನಿದರ್ಶನಗಳು, ಸಿದ್ದಾಂತಗಳ ಲೇಯರ್ಡ್ ಎನ್ನಬಹುದಾದ ಆಯಾಮಗಳು ಓದುಗರನ್ನು ಸಮ್ಮೋಹನಗೊಳಿಸಿ, ಇನ್ನೂ ಸಾಕಷ್ಟನ್ನು ನಿರೀಕ್ಷಿಸುತ್ತಿರುವಾಗಲೇ ಕೃತಿಕಾರ ಚೆನ್ನಿಯವರು ನಿಲ್ಲಿಸಿ ಓದುಗರಿಗೆ ನಿರಾಸೆಯನ್ನು ಮೂಡಿಸುತ್ತಾರೆ. ಈ ನಿರಾಸೆ ಮತ್ತೊಂದು ಅರ್ಥದಲ್ಲಿ ಮೂಲ ಪಠ್ಯಗಳನ್ನು ಓದಲು ಪ್ರಚೋದನೆ ಕೂಡ ಹೌದು. 

ಡೆರಿಡಾ, ಲೆವಿಸ್ಟ್ರಾಸ್, ಬಾರ್ಥ್ ಮತ್ತು ನಮ್ಮ ದೇಶದವರೇ ಆದ ದೇವಿ ಅವರು ಈ ಕೃತಿಯಲ್ಲಿ ಕಾಣಿಸಿಕೊಳ್ಳದೇ ಇರುವುದು ನಿಜಕ್ಕೂ ಸೋಜಿಗದ ಸಂಗತಿ. ಆದರೂ ಅವರ ವಿಚಾರಗಳು ಇಲ್ಲಿ ಅಂತರ್ಗತವಾಗಿವೆ. ಸತ್ಯೋತ್ತರ ಕಾಲದ ಮತ್ತು ನೋಡುವುದೇ ಸತ್ಯವೆಂದು ಬಿಂಬಿಸುವ ದೃಶ್ಯಮಾಧ್ಯಮದ  ಪೀಳಿಗೆಗೆ ಇಂತಹ ಕೃತಿಗಳಿಗೆ ಮುಖಾಮುಖಿಯಾಗುವ ಅನಿವಾರ್ಯತೆ ತುಂಬಾ ಇದೆ. 

ಥಿಯರಿ (ಸಾಹಿತ್ಯಕ/ಸಾಂಸ್ಕೃತಿಕ) ಮತ್ತು ಸಿದ್ಧಾಂತಗಳು ಹೇಗೆ ಭಿನ್ನ ಮತ್ತು ಎರಡರ ನಡುವೆ ಯಾವೆಲ್ಲ ಸಾಮ್ಯತೆಗಳಿವೆ ಎನ್ನುವುದನ್ನು ಚರ್ಚಿಸಲು ತುಂಬಾ ಸಾಧ್ಯತೆಗಳಿದ್ದವು. ಅಲ್ಲದೆ, ಸಿದ್ಧಾಂತಗಳು ಹೇಗೆ ಥಿಯರಿಗಳಿಗೆ ಪ್ರೇರಣೆ ಮಾ ಮಾಡುತ್ತವೆ, ಮತ್ತು ಅದೇ ಬಗೆಯಲ್ಲಿ ಸಿದ್ಧಾಂತಗಳು ರೂಪುಗೊಳ್ಳಲು ಪಠ್ಯಗಳು, ಕೃತಿಗಳು ಮತ್ತು ರಾಜಕಾರಣ ಸಮಾಜದ ಸಬ್ ಟೆರೇನಿಯನ್ ಲೆವೆಲ್ ನಲ್ಲಿ ಕೆಲಸ ಮೂಡುತ್ತವೆ ಎನ್ನುವುದನ್ನು ತುಸು ವಿಸ್ತೃತವಾಗಿ ಈ ಕೃತಿಯ ವ್ಯಾಪ್ತಿಗೆ ಒಳಪಟ್ಟು ಚರ್ಚಿಸಬಹುದಿತ್ತು ಎನ್ನುವ ನಿರೀಕ್ಷೆಯನ್ನು ಇದು ಕೊನೆಯಲ್ಲಿ ಮೂಡಿಸದೆ ಇರದು.

‍ಲೇಖಕರು Admin

July 29, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: