ಎಂ ಕೃಷ್ಣೇಗೌಡ ಕಂಡಂತೆ ‘ಒಟ್ರಾಸಿ ಪ್ರಸಂಗಗಳು’

ಪ್ರೊ ಎಂ ಕೃಷ್ಣೇಗೌಡ

ಪ್ರಿಯ ಮಿತ್ರರಾದ ಶ್ರೀ ಗೋಪಾಲ ತ್ರಾಸಿ ಅವರು ಈ ಒಟ್ರಾಸಿ ಪ್ರಸಂಗಗಳ ಕರಡು ಪ್ರತಿಯನ್ನು ನನ್ನ ಕೈಗಿತ್ತು ಇದಕ್ಕೊಂದು ಮುನ್ನುಡಿ ಬರೆದುಕೊಡಿ ಎಂದು ಕೇಳಿದಾಗ ಅದೊಂದು ಬಗೆಯ ನಿರ್ಲಿಪ್ತಿಯಿಂದಲೇ ಅದನ್ನು ತೆಗೆದುಕೊಂಡೆ. ಯಾಕೋ ಗೊತ್ತಿಲ್ಲ, ಈ ಪ್ರಸಂಗಗಳನ್ನು ಕೂಡಲೇ ಓದಿನೋಡಬೇಕೆಂಬ ಕುತೂಹಲ ಕೂಡಾ ನನಗೆ ಬರಲಿಲ್ಲ. ಆದರೆ ತ್ರಾಸಿ ಅವರ ಒತ್ತಾಯ ಹೆಚ್ಚಾದಾಗ ವಿಧಿಯಿಲ್ಲದೆ ಪುಸ್ತಕ ಓದಲು ಕೈಗೆತ್ತಿಕೊಂಡೆ. ಇದರ ಮೊದಲ ಪ್ರಸಂಗ ‘ ಮೇನಕೆ ಅಲ್ಲ, ವಿಶ್ವಾಮಿತ್ರ ‘ ಓದಿ ಮುಗಿಸುತ್ತಿದ್ದ ಹಾಗೇ ನನ್ನ ಬೇಜವಾಬ್ದಾರಿತನಕ್ಕೆ ನನಗೇ ನಾಚಿಕೆಯಾಯಿತು.

“ಇಲ್ಲಾರಿ, ನಾನೇನೂ ಅಂಥ ಖ್ಯಾತ, ವಿಖ್ಯಾತ, ಪ್ರಖ್ಯಾತ ಲೇಖಕನಲ್ಲ, ಬರವಣಿಗೆಯಲ್ಲಿ ಇನ್ನೂ ಅಂಬೆಗಾಲಿಕ್ಕಲೂ ಶಕ್ಯನಾಗಿಲ್ಲ, ಯಾರಾದರೂ ಕೇಳಿದರೆ ಅಲ್ಲಲ್ಲಿ ಬರೆಯುತ್ತೇನೆ ಅಂತೇನೆ ಅಷ್ಟೆ, ಅವರು ಎಲ್ಲೆಲ್ಲಿ ಅಂತ ಮರುಪ್ರಶ್ನೆ ಹಾಕಿದರೆ ನನಗೆ ನೆಲಮುಗಿಲು ನೋಡದೆ ಬೇರೆ ಗತಿ ಇಲ್ಲ”  ಎಂದು ಹೇಳಿಕೊಂಡು ಬರಹಕ್ಕಿಳಿಯುವ ಗೋಪಾಲ ತ್ರಾಸಿ ಒಳ್ಳೆಯ ಕಸುವಿರುವ ಬರಹಗಾರ ಎಂಬುದು ನನಗೆ ಮೊದಲ ಬರಹದಲ್ಲೇ ಮನದಟ್ಟಾಯಿತು. ಅವರ ಆ ಮಾತು ಅವರ ವಿನಯದ್ದಷ್ಟೇ ಹೊರತು ನಿಜವಲ್ಲ ಎಂಬುದು ಅವರನ್ನು ಓದುತ್ತಾ ಹೋದಂತೆ ದೃಢವಾಗಿಬಿಟ್ಟಿತು. ಆಗಾಗ ” ಭಲರೇ, ಭೂಪ! ಎಂಥ ಭಯಂಕರ ಚಂದ ಬರೆಯುತ್ತೀಯೋ ಮಾರಾಯ!” ಅಂತ ನನ್ನ ಅಂತರಂಗ ಉದ್ಗರಿಸುತ್ತಿತ್ತು.

ವಿಷಯವೇನು ಗೊತ್ತಾ? ಅವರ ಒಟ್ರಾಸಿ ಪ್ರಸಂಗಗಳನ್ನು ಸರಸರ ಓದುವುದಕ್ಕೆ ಆಗಲೇ ಇಲ್ಲ ನನಗೆ! ಅಲ್ಲಲ್ಲಿ ಅನನ್ಯ ಸೌಂದರ್ಯದ ರಸಸ್ಥಾನಗಳಿವೆ. ಅಲ್ಲೊಂದಿಷ್ಟು ಹೊತ್ತು ನಮ್ಮ‌ ಮನಸ್ಸು ನಿಲ್ಲುತ್ತದೆ, ಅವರ ವರ್ಣನೆಯ ಸೊಗಸನ್ನು, ಮುಂಬಯಿ, ಕುಂದಾಪುರದ ಆಡುಮಾತಿನ‌ ಬನಿಯನ್ನು, ಚತುರೋಕ್ತಿಗಳ ಚಮತ್ಕಾರಗಳನ್ನು, ಒಂದಿಷ್ಟು ಚಪ್ಪರಿಸಿ ಮುಂದುವರಿಯಬೇಕು.

ಹೀಗೆ ಓದುತ್ತಾ ಅವರ ಜೋಗದ ಗುಂಡಿ ಪ್ರಸಂಗಕ್ಕೆ ಬರುವ ಹೊತ್ತಿಗೆ ನಾನು ತ್ರಾಸಿ ಅವರ ಅಭಿಮಾನಿಯಾಗಿಬಿಟ್ಟೆ! ಇಡೀ ಸಂಕಲನದ ಶ್ರೇಷ್ಠ ಬರವಣಿಗೆ ಅದು! ಅಹ್! ಅದೇನು ಗದ್ಯದ ಸೊಗಸು! ಗದ್ಯವಲ್ಲ ಅದು, ಗದ್ಯಕಾವ್ಯ! ಪ್ರವಾಸಿ ಗೈಡ್ ನ ಶುಷ್ಕ ನಿರೂಪಣೆಯಾಗಬಹುದಾಗಿದ್ದ ಜೋಗದ ಚೆಲುವನ್ನು ಅದರ ವಿಸ್ತಾರ ವೈಭವವನ್ನು ಕನ್ನಡದ ಮಾತುಗಳಲ್ಲಿ ಬರೆದಿದ್ದಾರಲ್ಲಾ, ಬರೆದಿದ್ದಾರೆ ಅಂದೆನಾ? ಅಲ್ಲ, ಚಿತ್ರಿಸಿದ್ದಾರಲ್ಲಾ ಗೋಪಾಲ ತ್ರಾಸಿ, ಕನ್ನಡ ಪ್ರಬಂಧ ಸಾಹಿತ್ಯ ಪ್ರಕಾರದ ಗಣ್ಯ ಲೇಖನಗಳಲ್ಲೊಂದು ಅದು! ಮೈದುಂಬಿ ಹರಿದು ಬೀಳುವ ಜಲಪಾತವನ್ನು ಅವರು’ ನದಿಗೆ ನದಿಯೇ ಮಗುಚಿಕೊಂಡಂತೆ’ ಕಾಣುವ ಅವರ ದೃಷ್ಟಿ ಅದೊಂದು ಕವಿಯ ದೃಷ್ಟಿ! ಕಲೆಗಾರನ ಸೃಷ್ಟಿ! ಅಷ್ಟು ಭೀಮಸೌಂದರ್ಯದ ಜಲಪಾತವನ್ನು ವಿವಿಧ ಕೋನಗಳಿಂದ ನೋಡಿ ತ್ರಾಸಿ ಬರೆಯುತ್ತಾರಲ್ಲ, ಅದು ಕನ್ನಡ  ಅಕ್ಷರಗಳಲ್ಲಿ, ಭಾಷೆಯಲ್ಲಿ ಆ ಭೀಮಸೌಂದರ್ಯವನ್ನು ಸಶಕ್ತವಾಗಿ ಪ್ರತಿಮಿಸುವ ಯಶಸ್ವಿ ಪ್ರಯತ್ನ! ಅಬ್ಬ! ಹೌದಪ್ಪ! ಬರೆಯಬೇಕಪ್ಪ ಹೀಗೆ! ಅನ್ನುವ ಹಾಗೆ ಬರೆದಿದ್ದಾರೆ ತ್ರಾಸಿ!

ಇನ್ನುಳಿದ ಲೇಖನಗಳೂ ಕೂಡಾ ಓದಿ ಎತ್ತಿಟ್ಟುಬಿಡುವಂಥವಲ್ಲ, ಮರಮರಳಿ ಓದಿ ಚಪ್ಪರಿಸುವಂಥವು! ಅಭಿನಂದನೆಗಳು ತ್ರಾಸಿ ಅವರೆ, ಹೃತ್ಪೂರ್ವಕ ಅಭಿನಂದನೆಗಳು ನಿಮಗೆ!  ಇನ್ನುಳಿದ ಲೇಖನಗಳೇನೂ‌ ಕಡಿಮೆ ಕಸುವಿನವಲ್ಲ, ಇವೇನೂ ಕೇವಲ ಹಾಸ್ಯರಸವೇ ಪ್ರಧಾನವಾದ ಹರಟೆಗಳಲ್ಲ, ಸುಂದರವಾದ ಲಲಿತ ಪ್ರಬಂಧಗಳು. ಪ್ರಬಂಧ ಎನ್ನುವ ಹೆಸರೇ ಹೇಳುವಂತೆ ಇದು ಪ್ರ- ಬಂಧ ಅಂದರೆ ಒಟ್ಟಾಗಿ ಅಥವಾ ಬಿಗಿಯಾಗಿ, ಅಥವಾ ಸೊಗಸಾಗಿ  ಕಟ್ಟಿದ್ದು. ಕಟ್ಟಿದ್ದು ಯಾವುದರಲ್ಲಿ? ನಮ್ಮ ಸಿರಿಗನ್ನಡದ ಶಬ್ದಗಳಲ್ಲಿ!  ಮಾತುಗಳಲ್ಲಿ !

ಇಲ್ಲಿನ‌ ಲೇಖನಗಳನ್ನು ಓದುವಾಗ ತ್ರಾಸಿ ಅವರ ಮೃದುಹಾಸ್ಯ ಗುಣ, ಔಚಿತ್ಯ ಪ್ರಜ್ಞೆ, ಭಾಷಾ ಮಾಧುರ್ಯದ ಲಯ, ಪ್ರಸಂಗ ಸನ್ನಿವೇಶಗಳನ್ನು ವಿವರ ವಿವರವಾಗಿ ಕಡೆದು ಬಿಡಿಸುವ ಕಲಾವಂತಿಕೆ, ಒಂದು ಪ್ರಬುದ್ಧ ದೃಷ್ಟಿಕೋನ ಎಲ್ಲವೂ ಮನಸ್ಸಿಗೆ ತಾಕುತ್ತವೆ.  ಕಡೆಯಲ್ಲಿ ಅವರು ಬರೆದಿರುವ ಯಕ್ಷಗಾನದ ಅಧಿಕ ಪ್ರಸಂಗವಂತೂ ತನ್ನ ಧ್ವನಿರಮ್ಯತೆಯಿಂದಲೇ ವಿಶೇಷ ಆಸ್ವಾದ್ಯವಾಗಿದೆ. ಯಾವುದೋ ರಾಜ ರಾಣಿಯರ ಕತೆಯ ಕ್ಯಾನ್ವಾಸಿನಲ್ಲಿ ವರ್ತಮಾನದ ಪಡಪೋಶಿತನವನ್ನು ವಿಡಂಬಿಸುವ ಸಶಕ್ತ ಬರವಣಿಗೆ ಅದು. ಕಡೆಯಲ್ಲಿ ಯಕ್ಷಗಾನದ ಭಾಗವತನು ” ಅಕಾಲ ಮಳೆಯಿಂದಾಗಿ ಈ ಪ್ರಸಂಗವನ್ನು ನಿಲ್ಲಿಸು”ವುದಾಗಿ ಹೇಳುವುದು, ಲೇಖಕ ಕೂಡಾ ಈ ಪ್ರಸಂಗವನ್ನು ಮುಗಿಸಲಾಗದ ಪಡಪೋಶಿತನಕ್ಕೆ ಓದುಗರ – ಅಥವಾ ಪ್ರೇಕ್ಷಕರ- ಕ್ಷಮೆಯಾಚಿಸುವುದು, ಈ ನಾಟಕೀಯ ಗುಣವೇ ಮತ್ತೊಂದು ಧ್ವನಿಯನ್ನು ಮೀಟುತ್ತದೆ.

ಅಯ್ಯೋ ನಿಮ್ಮ ಖರ್ಮವೇ!

ಈ ರಸಕೃತಿಯನ್ನು ಓದುವುದಕ್ಕೆ ಹೊರಟ ನಿಮಗೆ ಈ‌ ಮುನ್ನುಡಿಯೇಕೆ ಎಡವುಗಲ್ಲಾಗಬೇಕು? ಅಷ್ಟಕ್ಕೂ ಸ್ವತಃ ಒಳ್ಳೆಯ ಲೇಖಕರಾದ ಗೋಪಾಲ ತ್ರಾಸಿ ಅವರಿಗೆ ನನ್ನ ಶಿಫಾರಸು ಯಾಕೆ ಬೇಕು?

ಇನ್ನು ನೀವಿದನ್ನು ಓದುತ್ತಾ ಹೋಗಿ. ಒಂದು ರಸಯಾತ್ರೆ ಗ್ಯಾರಂಟಿ! ನಿಮಗೆ ಸುಖಪ್ರಯಾಣ ಕೋರಿ ನಾನಿನ್ನು ವಿರಮಿಸುತ್ತೇನೆ. ಹಾಗೆಯೇ ವಿಶ್ವಾಸವಿರಿಸಿ ಈ ಚಂದದ ಕೃತಿಗೆ ನನ್ನಿಂದ ಮುನ್ನುಡಿಸಿಕೊಂಡ ತ್ರಾಸಿ ಅವರ ಸೌಜನ್ಯ ವಿಶ್ವಾಸಗಳಿಗೆ ಮನಸಾ ಶುಭಾಶಯಗಳನ್ನು ಸಲ್ಲಿಸುತ್ತೇನೆ.

‍ಲೇಖಕರು avadhi

February 23, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: