ಎಂ ಎಸ್ ಶ್ರೀರಾಮ್ ಕಂಡಂತೆ ಬದಲಾಗುತ್ತಿರುವ ಪುಸ್ತಕ ವ್ಯಾಪಾರ

ಪ್ರೀಮಿಯರ್ ಶಾನ್‌ಭಾಗ್‌ ನೆನಪು: ಬದಲಾಗುತ್ತಿರುವ ಪುಸ್ತಕ ವ್ಯಾಪಾರ

ಎಂ ಎಸ್ ಶ್ರೀರಾಮ್

ಈ ಲೇಖನ ಈ ಮೊದಲು ‘ಆಂದೋಲನ’ದಲ್ಲಿ ಪ್ರಕಟವಾಗಿದೆ

ಟಿ.ಎಂ.ಕೃಷ್ಣ ಬರೆದಿರುವ (ಸುಮಂಗಲಾ ಅನುವಾದದ) ಇತ್ತೀಚೆಗೆ ಕನ್ನಡದಲ್ಲೂ ಪ್ರಕಟಗೊಂಡ ಮೃದಂಗ ಶಿಲ್ಪಿಗಳ ಕಿರುಚರಿತೆಯ ಓದಿನ ಸಂದರ್ಭದಲ್ಲಿ ಈ ಪ್ರಶ್ನೆ ಉದ್ಭವಿಸಿತು. ಒಬ್ಬ ಶ್ರೇಷ್ಠ ಮೃದಂಗ ವಾದಕನ ಶ್ರೇಯಸ್ಸಿನಲ್ಲಿ ವಾದಕನ ಕಲೆ ಎಷ್ಟು ಮತ್ತು ವಾದ್ಯ ಶಿಲ್ಪಿಯ ಕಲೆಯೆಷ್ಟು? ಆ ಕಲೆಗೆ ವಾದ್ಯಶಿಲ್ಪಿಗೆ ಕೂಲಿಯನ್ನೂ, ವಾದಕರಿಗೆ ಸಂಭಾವನೆಯನ್ನೂ ಕೊಡುವ, ಅರ್ಥಿಕವಾಗಿ ಕಲೆಯನ್ನು ಗುರುತಿಸುವುದರಲ್ಲೂ ಇರುವ ದೊಡ್ಡ ತಾರತಮ್ಯ ನಮ್ಮೆದುರಿಗೆ ನಿಂತಿತು. ಅದೇ ಪ್ರಶ್ನೆ ರೈತರ ಸಂದರ್ಭದಲ್ಲೂ ಕೇಳಬಹುದು.

ತೊಗರಿ ಬೇಳೆಯ ಪ್ರತಿ ಕಿಲೋಗೆ ಗ್ರಾಹಕ ಕೊಡುವ ಸುಮಾರು ನೂರೈವತ್ತು ರೂಪಾಯಿಯ ಬೆಲೆಯಲ್ಲಿ ರೈತರಿಗೆ ಸಲ್ಲುವುದು ಎಷ್ಟು? ರೈತರಿಂದ ಗ್ರಾಹಕರಿಗೆ ಬೇಳೆ ತಲುಪಬೇಕಾದರೆ ಅದರ ಸಂಸ್ಕರಣೆ, ದಾಸ್ತಾನು, ರವಾನೆ, ದೊಡ್ಡ ವ್ಯಾಪಾರಿ, ಚಿಲ್ಲರೆ ವ್ಯಾಪಾರಿಗಳ ಸರಣಿಗೂ ಖರ್ಚಿರುತ್ತದೆ.

ಆದರೆ ಮೂಲ ಬೆಳೆಯನ್ನು ಬೆಳೆದವನಿಗೆಷ್ಟು ದುಡ್ಡು ಮತ್ತು ಅದರ ವ್ಯಾಪಾರದ ಕೊಂಡಿಗಳನ್ನು ನಿಭಾಯಿಸಿದವರಿಗೆಷ್ಟು ಎನ್ನುವುದ್ನು ಅರ್ಥ ಮಾಡಿಕೊಳ್ಳಬೇಕಾದರೆ ನೋಡಬೇಕಾದ್ದು ಎರಡೇ ಅಂಶಗಳನ್ನು– ಆಹಾರ ಪದಾರ್ಥಗಳ ವ್ಯಾಪಾರವನ್ನೇ ಮಾಡುವ ಅಗ್ರಿ ಬಿಸಿನೆಸ್ ಕಂಪನಿಗಳ ಲಾಭದಾಯಕತೆ ಮತ್ತು ರೈತನ ಮನೆಯನ್ನು ನಿಭಾಯಿಸಲಾಗದ ಅಸಹಾಯಕತೆಯನ್ನು ಕಂಡರೆ ವ್ಯಾಪಾರದಲ್ಲಿರುವ ಹೆಚ್ಚಿನಂಶ ಲಾಭವನ್ನು ಯಾರು ಪಡೆಯುತ್ತಿದ್ದಾರೆ ಎನ್ನುವುದು ವೇದ್ಯವಾಗುತ್ತದೆ.

ಇದೇ ತರ್ಕ ಪುಸ್ತಕ ಪ್ರಕಾಶನಕ್ಕೂ ಅನ್ವಯಿಸುತ್ತದೆ. ಗ್ರಾಹಕ ಕೊಡುವ ಮೊತ್ತದ ಶೇಕಡಾ ಹತ್ತರಷ್ಟು ಲೇಖಕರಿಗೆ ಸಲ್ಲುತ್ತದೆ. ಕನ್ನಡದ ಸಂದರ್ಭದಲ್ಲಿ ಪುಸ್ತಕ ಪ್ರಕಟವಾದ ಕೂಡಲೇ ಸಾವಿರ ಪ್ರತಿಗಳ ಬೆಲೆಯ ಶೇಕಡಾ ಹತ್ತರಷ್ಟುಲೇಖಕರಿಗೆ ಕೊಟ್ಟು ಪ್ರಕಾಶಕರು ಕೈತೊಳೆದುಕೊಳ್ಳುತ್ತಾರೆ. ಇಂಗ್ಲೀಷಿನಲ್ಲಿ ಇದು ಭಿನ್ನ. ಪುಸ್ತಕ ಮಾರಾಟದಿಂದ ವ್ಯಾಪಾರಿಗಳ ಕಮಿಷನ್ ತೆಗೆದ ನಂತರ ಪ್ರಕಾಶಕರಿಗೆ ಸಂದ ನಿವ್ವಳ ಆದಾಯದಲ್ಲಿ ಶೇಕಡಾ ಹತ್ತರಷ್ಟು ಲೇಖಕರಿಗೆ ಕೊಡಲಾಗುತ್ತದೆ. ಹೀಗಾಗಿ ಗ್ರಾಹಕ ಕೊಡುವ ಬೆಲೆಯ ಮೇಲೆ ಶೇಕಾಡಾವಾರು ಕಟ್ಟಿದರೆ ಲೇಖಕರಿಗೆ ದೊರೆಯುವುದು ಇನ್ನೂ ಕಮ್ಮಿ.

ಪುಸ್ತಕದ ಮಾರಾಟ ಆಗುವುದೇ ಅದರೊಳಗಿರುವ ಸಾಹಿತ್ಯದಿಂದಾಗಿ ಎಂದು ನಾವು ನಂಬುವುದಾದರೆ ಅದನ್ನು ಸೃಷ್ಟಿಸಿದ ಬರಹಗಾರನಿಗೆ ಅಷ್ಟು ಕಡಿಮೆಯೇ ಅನ್ನುವ ಪ್ರಶ್ನೆಯನ್ನು ನಾನು ಲೇಖಕನಾಗಿ ಕೇಳಿಕೊಂಡಿದ್ದೇನೆ. ಆದರೆ ಪುಸ್ತಕ ಪ್ರಕಾಶಕ-ಮುದ್ರಕ-ವ್ಯಾಪಾರಿಯ ದೃಷ್ಟಿಯಿಂದ ನೋಡಿ. ಪುಸ್ತಕದ ವಿನ್ಯಾಸ, ಅಕ್ಷರ ದೋಷಗಳನ್ನು ತಿದ್ದಿ ಒಟ್ಟಾರೆ ಅಂತರಂಗದ ತರ್ಕವನ್ನು ಕಾಯ್ದುಕೊಳ್ಳುವ ಸಂಪಾದಕೀಯ ಕೆಲಸವಿದೆ; ನಮ್ಮ ಪುಸ್ತಕವನ್ನು ಅಚ್ಚುಹಾಕಲು ಕಾಗದ ಶಾಯಿ ಮತ್ತು ವೇತನವೆಂದು ಖರ್ಚಾಗುತ್ತದೆ; ಬಿಡುಗಡೆಯಾದ ಪುಸ್ತಕ ಒಂದು ಅಂಗಡಿಯಲ್ಲಿ ಕೂತು ಅಲ್ಲಿನ ಸ್ಥಳವನ್ನಾಕ್ರಮಿಸುತ್ತದೆ.

ಒಂದು ಅಂಗಡಿಯಲ್ಲಿ ಅನೇಕ ಪುಸ್ತಕಗಳ ಆಯ್ಕೆಯಿದ್ದಷ್ಟೂ ಆ ಪುಸ್ತಕದಂಗಡಿ ಗ್ರಾಹಕರಿಗೆ ಆಕರ್ಷಕವಾಗಿರುತ್ತದೆ. ಅಲ್ಲಿ ತೀವ್ರಗತಿಯಲ್ಲಿ ಮಾರಾಟವಾಗುವ ಪುಸ್ತಕಗಳ ನಡುವೆ ಮಂದಗತಿಯ ಪುಸ್ತಕಗಳೂ, ಮಾರಾಟವೇ ಆಗದ ಪುಸ್ತಕಗಳೂ ಕೂತಿರುತ್ತವೆ. ಹೀಗಾಗಿ ಅದನ್ನು ಕಾಪಿರಿಸುವ ಖರ್ಚೂ ವ್ಯಾಪಾರಿಯ ಮೇಲೇ ಬೀಳುತ್ತದೆ. ಈ ನಿಟ್ಟಿನಲ್ಲಿ ನೋಡಿದಾಗ ಗ್ರಾಹಕರು ನೀಡುವ ಹಣದ ಶೇಕಡಾ ಹತ್ತು ಸರಿಯಾದ ಮೊತ್ತವೇ ಇರಬಹುದು. ಹೆಚ್ಚು ಮಾರಾಟವಾಗುವ ಜೋಗಿ, ಜಯಂತ ಕಾಯ್ಕಿಣಿಗಳಿಗೆ ಶೇಕಡಾವಾರು ಕೊಟ್ಟರೂ ಮಂದಗತಿಯ ಲೇಖಕರಿಗಿಂತ ಹೆಚ್ಚೇ ಸಿಗುತ್ತದಲ್ಲದೇ, ಅವರುಗಳ ಮಾರಾಟವೇ ಮಂದಗತಿಯ ಮಾರಾಟದ ಪುಸ್ತಕಗಳ ದಾಸ್ತಾನನ್ನುನಿಭಾಯಿಸುವ ಕೆಲಸವನ್ನೂ ಮಾಡುತ್ತದೆ.

ಆದರೆ ಕೆಲವು ವರ್ಷಗಳಲ್ಲಿ ಪುಸ್ತಕ ಪ್ರಕಾಶನ ಮತ್ತು ಮಾರಾಟದ ರೂಪುರೇಷೆ ಬದಲಾಗಿದೆ. ಅದು ಕ್ರಮೇಣ ಬದಲಾದರೂ, ಆ ಬದಲಾವಣೆ ನಮ್ಮ ಹಳೆಯ ನಂಬಿಕೆಗಳನ್ನೇಪ್ರಶ್ನಿಸುವ ರೀತಿಯಲ್ಲಿ ಬದಲಾಗಿದೆ. ಪುಸ್ತಕ ಒಂದು ಭೌತಿಕ ವಸ್ತು ಎನ್ನುವ, ಪುಟಗಳನ್ನು ತಿರುಗಿಸಿ ಓದುವ, ಅಂಟಿನ ವಾಸನೆಯಿಂದ ಖುಷಿಗೊಳ್ಳುವ, ಆಘ್ರಾಣಿಸುವ ಅನುಭವ ಇರಲೇಬೇಕೆಂದೇನೂ ಇಲ್ಲ, ಅದನ್ನು ಪಿ.ಡಿ.ಎಫ್ ರೂಪದಲ್ಲಿ, ಈ-ಪುಸ್ತಕದ ರೂಪದಲ್ಲಿ, ಯಾವುದೇ ಎಲೆಕ್ಟರಾನಿಕ್ ತಂತ್ರಾಂಶದ ಮೇಲೆ ಓದಬಹುದು.

ಪುಸ್ತಕವನ್ನು ಓದಲು, ಓದಲೇ ಬೇಕು ಎನ್ನುವ ಮಾತೂ ಇಲ್ಲ – ಬೇಕಿದ್ದರೆ ಪುಸ್ತಕವನ್ನು ಕೇಳು ಪುಸ್ತಕವಾಗಿ ಕೇಳಬಹುದು. ಬೇಕಿದ್ದರೆ ಒಂದು ಕಥಾಸಂಕಲನದ ಒಂದೇ ಕಥೆಯನ್ನು ಮಾರಾಟ ಮಾಡುವ, ಕೊಳ್ಳುವ ಸಾಧ್ಯತೆಯಿದೆ. ಎಲ್ಲಕ್ಕಿಂತ ಹೆಚ್ಚು ಮುದ್ರಣದ ತಾಂತ್ರಿಕತೆ ವಿಕಸನಗೊಳ್ಳುತ್ತಿದ್ದಂತೆ ಪುಸ್ತಕವನ್ನು ದಾಸ್ತಾನು ಮಾಡುವ ಅವಶ್ಯಕತೆಯೂ ಇಲ್ಲ. ಬದಲಿಗೆ ಬೇಕಾದಾಗ ಅದನ್ನು ಮುದ್ರಿಸುವ ಪ್ರಿಂಟ್ ಆನ್ ಡಿಮಾಂಡ್ ಕೂಡಾ ಬಂದಿದೆ.

ಹೀಗಾಗಿಯೇ ಛಂದ ಪ್ರಕಾಶನದ ವಸುಧೇಂದ್ರ ಈ ಸಂದೇಶವನ್ನು ಕಳುಹಿಸಲು ಸಾಧ್ಯವಾದದ್ದು: ‘…ನಮ್ಮ ಪ್ರಕಾಶನದಿಂದ ಪ್ರಕಟವಾದ ಎಲ್ಲ ಪುಸ್ತಕಗಳ ಪ್ರತಿಗಳು ಇನ್ನು ಮುಂದೆ ನಮ್ಮ ಓದುಗರಿಗೆ ಲಭ್ಯ. ‘ಪ್ರತಿಗಳು ಲಭ್ಯವಿಲ್ಲ’ ಎನ್ನುವ ಮಾತೇ ಇನ್ನಿಲ್ಲ…’ ಇದರಿಂದ ಏನೆಲ್ಲಾ ಬದಲಾವಣೆಯಾದೀತು ಎನ್ನುವುದನ್ನು ಯೋಚಿಸಿದಾಗ ಹಿಂದಿನ ತಲೆಮಾರುಗಳಿಗಿದ್ದ ಕೆಲ ಸವಲತ್ತುಗಳು ಇಲ್ಲವಾಗುತ್ತವೆ, ಹಾಗೂ ಹೊಸ ಸವಲತ್ತುಗಳು ದೊರೆಯುತ್ತವೆ. ಹಾಗಾದರೆ ನಾವು ಭೌತಿಕ ಪುಸ್ತಕದಂಗಡಿಗಳಿಗೆ ಮಂಗಳ ಹಾಡುತ್ತೇವೆಯೇ… ಇನ್ನೂ ಇಲ್ಲವೆನ್ನಿಸುತ್ತದೆ.

ಪುಸ್ತಕ ಕೊಳ್ಳುವ ಪ್ರಕ್ರಿಯೆಯಲ್ಲಿ ಎರಡು ಭಿನ್ನ ರೀತಿಗಳಿವೆ. ಒಂದು ನಾವುಗಳು ಈಗಾಗಲೇ ಕೊಳ್ಳಬೇಕು, ಓದಬೇಕೆಂದು ಮನಸ್ಸು ಮಾಡಿರುವ ಪುಸ್ತಕಗಳು. ಅವುಗಳು ನಾವು ಮುಟ್ಟಿ, ತಟ್ಟಿ, ಮುಖಪುಟ ನೋಡಿ, ಬ್ಲರ್ಬ್ ಓದಿ, ವಾಸನೆಯನ್ನು ಆಘ್ರಾಣಿಸಿಕೊಳ್ಳಬೇಕಾದ ಪುಸ್ತಕಗಳಲ್ಲ. ಅಂಥ ಪುಸ್ತಕಗಳನ್ನು ನಾವು ಎಲ್ಲೇ ಕೊಳ್ಳಬಹುದು. ಆನ್-ಲೈನ್ ಅಂಗಡಿಗಳಲ್ಲೂ. ಆದರೆ ಪುಸ್ತಕ ಕೊಳ್ಳುವ ಎರಡನೇ ಪ್ರಕ್ರಿಯೆ ಅವುಗಳನ್ನು ಕಂಡುಕೊಳ್ಳುವುದರಲ್ಲಿದೆ.

ಪುಸ್ತಕದಂಗಡಿಗೆ ಹೋಗಿ, ಒಂದೊಂದೇ ಪುಸ್ತಕವನ್ನು ತೆರೆದು ನೋಡಿ, ಅದರ ಒಂದೆರಡು ವಾಕ್ಯಗಳನ್ನು ಓದಿ, ಮುಖಪುಟವನ್ನು ನೋಡಿ, ವಿನ್ಯಾಸವನ್ನು ಅಂತರ್ಗತ ಮಾಡಿಕೊಳ್ಳುತ್ತಲೇ, ಒಬ್ಬ ಹೊಸ ಲೇಖಕನ, ಅಥವಾ ಒಂದು ಹೊಸ ಬರವಣಿಗೆಯು ನಮ್ಮ ಮುಂದೇ ಸಾಕ್ಷಾತ್ಕಾರವಾಗುವ ಪ್ರಕ್ರಿಯೆ. ಇದು ಸದ್ಯಕ್ಕೆ ಹಿಂದೆ ಸರಿಯುವಂತೆ ಕಾಣುತ್ತಿಲ್ಲ. ಇಂದಿಗೂ ಪುಸ್ತಕದಂಗಡಿಗಳಲ್ಲಿ ಇರುವ ಜನ, ಅದರಲ್ಲೂ ಯುವಕರನ್ನು ಕಂಡಾಗ –ಬ್ರೌಸ್-ಅಂಡ್-ಬೈ… ತಿರುವಿಹಾಕಿ ಪುಸ್ತಕ ಕೊಳ್ಳುವ ಪ್ರಕ್ರಿಯೆ ಬಿಟ್ಟು ಹೋಗಿಲ್ಲ ಅನ್ನಿಸುತ್ತದೆ. ಹೀಗಾಗಿ ಭೌತಿಕ ಪುಸ್ತಕದಂಡಿಗಳಿಗೆ ಜಾಗವಿದ್ದೇ ಇದೆ.

ನಾವು ಪುಸ್ತಕಗಳನ್ನು ಗ್ರಹಿಸುವ ಪ್ರಕ್ರಿಯೆ ಬದಲಾಗಿದೆಯೇ? ಇದು ತುಸು ಕಷ್ಟದ ಪ್ರಶ್ನೆ. ಯಶಸ್ವಿ ಪ್ರಕಾಶಕರಾದ ಚಿಕಿ ಸರ್ಕಾರ್ ‘ಜಗರ್‌ನಾಟ್ ಬುಕ್ಸ್’ ಎನ್ನುವ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿದಾಗ ಅದು ಮುಖ್ಯವಾಗಿ ಮೊಬೈಲ್ ಫೋನಿನ ಮೂಲಕ ಓದಬಹುದಾದ ಪುಸ್ತಕ ಪ್ರಕಾಶಕರಾಗಬೇಕೆಂದು ಆಶಿಸಿದ್ದರು. ಆದರೆ ನಿಜಕ್ಕೂ ಕಂಡದ್ದೆಂದರೆ ಎಲೆಕ್ಟ್ರಾನಿಕ್ ತಂತ್ರಾಂಶದಲ್ಲಿ ಯಶಸ್ವಿಯಾದ ಪುಸ್ತಕಗಳ ಮುದ್ರಿತ ಪ್ರತಿಗಳ ಬೇಡಿಕೆಯೂ ಹೆಚ್ಚಾಗುತ್ತಿತ್ತು. ಇದೇ ಒಳನೋಟವನ್ನು ಇನ್ನೂ ಅನೇಕರು ಪಡೆದಿದ್ದರು. ಭೌತಿಕವಾಗಿ ಒಂದು ಪುಸ್ತಕವನ್ನು ಕೈಯಲ್ಲಿ ಹಿಡಿದು ಪುಟಗಳನ್ನು ಹಿಂದೆ ಮುಂದೆ ತಿರುವಿ ಹಾಕಿ, ಪುಟಗಳ ಅಂಚನ್ನು ಮಡಿಸಿ ನಾಯಿ ಕಿವಿ ಮಾಡಿ, ಸಾಲುಗಳನ್ನು ಅಂಡರ್‌ಲೈನ್ ಮಾಡಿ, ಟಿಪ್ಪಣಿ ಹಾಕುವುದರಲ್ಲಿ ಇರುವ ಖುಷಿ ಈ ತಂತ್ರಾಂಶದಲ್ಲಿಲ್ಲ. ಹೀಗಾಗಿ ಈ-ಬುಕ್ಸ್ ಮತ್ತು ಕೇಳು ಪುಸ್ತಕಗಳು ಕೊಡುವ ಅನುಭವವೇ ಬೇರೆ ಮತ್ತು ಭಿನ್ನವಾದದ್ದು. ಅದನ್ನು ಅಲ್ಲಗಳೆಯದೇ ಎರಡೂ ರೀತಿಯಲ್ಲಿ ಪುಸ್ತಕಗಳನ್ನು ನಾವು ಗ್ರಾಹಕರಾಗಿ ಗ್ರಹಿಸುತ್ತಿದ್ದೇವೆ.

ಈ ಎಲ್ಲ ಬದಲಾವಣೆಗಳ ನಡುವೆ ಪುಸ್ತಕದಂಗಡಿಯ ಪಾತ್ರವೇನು ಎನ್ನುವ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕು. ಅದರಲ್ಲಿ ಪುಸ್ತಕದಂಗಡಿಯ ವ್ಯಾಪಾರ ಹೇಗಾಗಬಹುದು ಮತ್ತು –ಗ್ರಾಹಕರಿಂದ ಬರುವ ಮೊತ್ತದಲ್ಲಿ ಪ್ರಕಾಶಕರಿಗೆ-ಲೇಖಕರಿಗೆ ಹೆಚ್ಚಿನ ಪಾಲು ಬರುವ ಸಾಧ್ಯತೆಯತ್ತ ಪುಸ್ತಕ ವ್ಯಾಪಾರ ಸಾಗಿದೆಯೇ ಎನ್ನುವ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕು.

ಬೆಂಗಳೂರಿನಲ್ಲಿ ಹಲವು ದಶಕಗಳ ಕಾಲ ನಡೆದು ಮುಚ್ಚಿದ್ದ ‘ಪ್ರೀಮಿಯರ್ ಬುಕ್ ಶಾಪ್’ ನ ಮಾಲೀಕರಾಗಿದ್ದ ಟಿ.ಎಸ್.ಶಾನ್‌ಭಾಗ್ ಇತ್ತೀಚೆಗೆ ಕೋವಿಡ್‌ನಿಂದಾಗಿ ಅಸುನೀಗಿದರು. ನಾವೆಲ್ಲಾ ಶಾನ್‌ಭಾಗ್ ಅವರ ಪುಸ್ತಕದಂಗಡಿಯಲ್ಲಿ ಶೇಕಡಾ ಹತ್ತರಿಂದ ಇಪ್ಪತ್ತರ ರಿಯಾಯಿತಿಯಲ್ಲಿ ಪುಸ್ತಕಗಳನ್ನು ಕೊಂಡು ಬೆಳೆದವರು. ಓದುಗರಿಗೆ ಬರಹಗಾರರನ್ನು ತುಸು ಅಗ್ಗದ ಬೆಲೆಯಲ್ಲಿ ಕೊಡಮಾಡಿದ, ಅದರಲ್ಲಿ ತಮ್ಮದೇ ಲಾಭವನ್ನು ಕೈಬಿಟ್ಟು ವ್ಯಾಪಾರ ಮಾಡಿದ ಮಹಾನುಭಾವರು ಶಾನ್‌ಭಾಗ್. ಈ ದಿನ ಅವರ ಪುಸ್ತಕದಂಗಡಿ ಯಾವ ರೀತಿಯಲ್ಲಿ ಬದಲಾಗುತ್ತಿತ್ತು ಎಂದು ಊಹಿಸಿ ನೋಡಿದಾಗ ನನ್ನ ಕಣ್ಣಮುಂದೆ ಈ ಚಿತ್ರ ಬಂದು ನಿಲ್ಲುತ್ತದೆ.

ಪ್ರಿಂಟ್ ಆನ್ ಡಿಮಾಂಡ್ ತಂತ್ರ ಬಂದಾಗಿನಿಂದ, ಪುಸ್ತಕಗಳ ದಾಸ್ತನು ಇಡುವ ಅವಶ್ಯಕತೆಯಿಲ್ಲ. ಕೇಳಿದಾಗ ಕೇಳಿದಷ್ಟು ಮುದ್ರಣ ಮಾಡಬಹುದಾದ ಸವಲತ್ತಿರುವುದರಿಂದ ಭೌತಿಕ ಪುಸ್ತಕ ಬೇಕೆಂದರೆ, ತಕ್ಷಣವೇ ಕೆಲವೇ ಪ್ರತಿಗಳನ್ನು ಮುದ್ರಿಸಿ ತರಿಸಿಕೊಡಬಹುದು. ಆದರೆ ಪುಸ್ತಕ ಪ್ರಿಯರು ಪುಸ್ತಕವನ್ನು ನೋಡಿ, ತಿರುವಿ ಹಾಕಿಕೊಳ್ಳಬೇಕೆಂದಾಗ ಅದಕ್ಕೊಂದು ಜಾಗ-ಪುಸ್ತಕದಂಗಡಿ ಬೇಕೇ ಬೇಕು. ಆ ಜಾಗವನ್ನುಶಾನ್‌ಭಾಗ್ ನಡೆಸುತ್ತಿದ್ದ ಪ್ರೀಮಿಯರ್ ರೀತಿಯ ಪುಸ್ತಕದಂಗಡಿ ಮಾಡಬಹುದು.

ಒಂದೇ ಪುಸ್ತಕದ ಹೆಚ್ಚಿನ ಪ್ರತಿಗಳ ದಾಸ್ತಾನಿನ ಅವಶ್ಯಕತೆಯಿಲ್ಲವಾದ್ದರಿಂದ ಹೆಚ್ಚಿನ ಪುಸ್ತಕಗಳ ಕೆಲವೇ ಪ್ರತಿಗಳನ್ನು ಅದೇ ಜಾಗದಲ್ಲಿ ಪ್ರದರ್ಶಿಸಬಹುದು. ಹೂಡಿಕೆಯೂ ಹೆಚ್ಚಿನ ಪುಸ್ತಕಗಳ ಕಡಿಮೆ ಪ್ರತಿಗಳ ಮೇಲೆ ಇರುತ್ತದೆ, ಗ್ರಾಹಕರಿಗೆ ಆಯ್ಕೆ ವಿಸ್ತಾರಗೊಳ್ಳುತ್ತದೆ. ಹಾಗೂ ಬರಹಗಾರರಿಗೆ ತಮ್ಮ ಪುಸ್ತಕ ಪ್ರದರ್ಶಿಸಲು ಖ್ಯಾತನಾಮರ ಪುಸ್ತಕಗಳ ಅನೇಕ ಪ್ರತಿಗಳ ನಡುವೆ ಕುಸ್ತಿ ಮಾಡುವ ಅವಶ್ಯಕತೆಯಿರುವುದಿಲ್ಲ.

ಈ ದಿನ ಪ್ರೀಮಿಯರ್ ಅಂಗಡಿ ಮತ್ತು ಶಾನ್‌ಭಾಗ್ ಇದ್ದಿದ್ದರೆ ಆ ಅಂಗಡಿ ಹಿಂದಿಗಿಂತಲೂ ಹೆಚ್ಚಿನ ಕುತೂಹಲದ ಆಸಕ್ತಿಯ ಅಂಗಡಿಯಾಗಿರುತ್ತಿತ್ತು ಎಂದು ನನಗನ್ನಿಸುತ್ತದೆ. ಯಾಕೆಂದರೆ ಶಾನ್‌ಭಾಗ್ ರೀತಿಯ ಪುಸ್ತಕ ವ್ಯಾಪಾರಿಗಳು ವ್ಯಾಪಾರಕ್ಕಿಂತ ಪುಸ್ತಕ ಪ್ರೀತಿಯನ್ನು ತೋರುವವರಾಗಿದ್ದರು. ಬರಹಗಾರ, ಮುದ್ರಕ, ಪ್ರಕಾಶಕರ ನಡುವಿನ ಸರಪಳಿಯಲ್ಲಿ ದಾಸ್ತಾನಿನ ಖರ್ಚು ಕಡಿಮೆಯಾಗುತ್ತಿರುವುದರಿಂದ ಒಟ್ಟಾರೆ ಲಾಭ ಹೆಚ್ಚಬಹುದು.

ಪುಸ್ತಕದ ಕೆಲ ಪ್ರತಿಗಳನ್ನು ಕೇಳು ಮತ್ತು ಎಲಕ್ಟ್ರಾನಿಕ್ ಪುಸ್ತಕಗಳ ಮೂಲಕ ಒದಗಿಸುವುದರಿಂದ– ಎಲ್ಲರಿಗೂ ಹೆಚ್ಚಿನ ದರ ಬರುವ ಸಾಧ್ಯತೆಯಿದೆ. ಪುಸ್ತಕ ವ್ಯಾಪಾರ ಕ್ರಾಂತಿಕಾರಿಯಾಗಿ ಬದಲಾಗುತ್ತಿದೆ. ಈ ಸಂದರ್ಭದಲ್ಲಿ ಶಾನ್‌ಭಾಗ್ ಸೃಜನಶೀಲವಾಗಿ ತಮ್ಮ ದಾಸ್ತಾನನ್ನು ಸಜ್ಜುಗೊಳಿಸುತ್ತಿದ್ದರು. ಶಾನ್‌ಭಾಗ್ ಇಲ್ಲದಿದ್ದರೂ ಅವರು ಬಿಟ್ಟು ಹೋದ ವಿಚಾರಗಳಿವೆ. ಅದು ಅವರ ಆಚಾರದಿಂದ ಹುಟ್ಟಿದ ವಿಚಾರಗಳು. ಇಂದಿನ ವ್ಯಾಪಾರಿಗಳು ಅದನ್ನು ತಮ್ಮದಾಗಿಸಿಕೊಳ್ಳಬಹುದೆಂದು ಆಶಿಸಬಹುದೇ… ಕಾದು ನೋಡೋಣ.

‍ಲೇಖಕರು Avadhi

May 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ T S SHRAVANA KUMARICancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: