ಎಂ.ಆರ್.ದತ್ತಾತ್ರಿ ಓದಿದ ‘ಪ್ರೀತಿಯ ರೀತಿ’

ಹೊರಗಣ್ಣ ಕವಿತೆಗಳಲ್ಲಿ ಒಳಗಣ್ಣ ನೋಟಗಳು

ಎಂ.ಆರ್. ದತ್ತಾತ್ರಿ

**

ಬಿ.ಆರ್.ಲಕ್ಷ್ಮಣರಾವ್ ಅವರು ಜನಪ್ರಿಯ ಕವಿಗಳು ಮತ್ತು ವಿಶೇಷವಾಗಿ ಪ್ರೇಮಕವಿ ಎಂದರೆ ನಾನು ಕನ್ನಡಿಗರಿಗೆ ಏನೂ ಹೊಸದು ಹೇಳಿದಂತಾಗುವುದಿಲ್ಲ. ಐದು ದಶಕಗಳಿಂದ ತಮ್ಮ ನಿರಂತರ ಕಾವ್ಯ ಕೃಷಿಯಿಂದ ಕನ್ನಡ ರಸಿಕರ ಮನಸ್ಸನ್ನು ಗೆದ್ದವರು ಅವರು. ಅಬ್ಬರದ ಸಾಹಿತ್ಯ ಚಳುವಳಿಗಳು ಮತ್ತು ಪಂಥಗಳ ನಡುವೆಯೂ ತಮ್ಮ ದನಿ ಮತ್ತು ಅನನ್ಯತೆಯನ್ನು ಉಳಿಸಿಕೊಂಡವರು ಜೀವನೋತ್ಸಾಹ ಮತ್ತು ರಸಿಕತೆ ತುಂಬಿದ ಕಾವ್ಯ ಸೃಷ್ಟಿಯಲ್ಲಿ ಕಾಲನ ಪರೀಕ್ಷೆಯನ್ನು ಗೆದ್ದವರು. ಸಂಗೀತದ ಸಂಗಾತದೊಡನೆ ಬಂದ ಭಾವಗೀತೆಗಳು ಹೆಚ್ಚು ಜನರನ್ನು ತಲುಪುತ್ತವೆ ಮತ್ತು ಹೆಚ್ಚು ಕಾಲ ಕಾವ್ಯಾಸಕ್ತರ ಎದೆಯಲ್ಲಿ ಉಳಿಯುತ್ತವೆ. ಲಕ್ಷ್ಮಣರಾವ್ ಅಂತಹ ಅನೇಕ ಭಾವಗೀತೆಗಳ ಕರ್ತೃ. ಅವರ ‘ಸುಬ್ಬಾಭಟ್ಟರ ಮಗಳೇ’, ‘ಜಾಲಿಬಾರಿನಲ್ಲಿ’, ‘ಅಮ್ಮ ನಿನ್ನ ಎದೆಯಾಳದಲ್ಲಿ’, ‘ನಾನೊಂದು ಜೀವನದಿ’ ಇನ್ನೂ ಹಲವಾರು ಗೀತೆಗಳು ಕಾವ್ಯಪ್ರಿಯರಿಗೆ ಬಾಯಿಪಾಠವಾಗಿವೆ.

’ಪ್ರೀತಿಯ ರೀತಿ’ ಒಂದು ವಿಶೇಷ ಸಂಕಲನ. ಇದರಲ್ಲಿ ಲಕ್ಷ್ಮಣರಾವ್ ಅವರ ನಲವತ್ತೈದು ಪ್ರೀತಿ ಕುರಿತಾದ ಕವಿತೆಗಳಿವೆ. ಪ್ರೀತಿ ಕುರಿತಾದ ಕವಿತೆಗಳು ಎಂದಾಕ್ಷಣವೇ ಅವುಗಳ ಗಾಢತೆಯನ್ನು ಮತ್ತೆ ವಿವರಿಸಬೇಕಾಗಿಲ್ಲ. ಪ್ರೀತಿಯ ಸ್ವರೂಪವೇ ಗಾಢತೆ. ಬಹುಶಃ, ಮನುಷ್ಯ ಭಾವಗಳಲ್ಲೇ ಅತಿ ಸಂಕೀರ್ಣವಾದುದು ಪ್ರೇಮಭಾವ ಮತ್ತು ಅದನ್ನು ಕಾವ್ಯದಲ್ಲಿ ಹಿಡಿದಿಡುವ ಸವಾಲು ಪ್ರತಿಯುಗದಲ್ಲೂ ಕವಿಗಳನ್ನು ಕಾಡಿದ್ದಿದೆ. ಪ್ರೀತಿಯ ವಿಶೇಷವೆಂದರೆ ಅದಕ್ಕೆ ಶಾಶ್ವತ ಮತ್ತು ಕ್ಷಣಿಕ ಎರಡೂ ಗುಣಗಳಿವೆ. ಬದುಕುಪೂರ ಕಾಡಬಲ್ಲುದು ಹಾಗೆಯೇ ಕ್ಷಣಮಾತ್ರದಲ್ಲಿ ಮಿಂಚಿ ಮರೆಯಾಗಲೂ ಬಲ್ಲುದು. ಪ್ರೀತಿಸುವವನಿಗೆ ದ್ವಂದ್ವಗಳಿರಬಾರದು ಎಂದು ಹೇಳುತ್ತಲೇ ತಾನೇ ಒಂದು ದ್ವಂದ್ವವಾಗಿ ನಿಲ್ಲುತ್ತದೆ. ಪ್ರೀತಿಯೆನ್ನುವುದು ಭೌತಿಕವೊ ಅತೀತವೋ ಬಗೆಹರಿಯುವುದಿಲ್ಲ. ದೇಹಜನ್ಯವೊ ಮನೋಜನ್ಯವೊ ಸೃಷ್ಟಿಕರ್ತನಿಗೇ ಗೊತ್ತು. ‘ಆತ್ಮದ ಅಷ್ಟೂ ಗುಟ್ಟು ಪ್ರೀತಿಯೆಂಬ ಭಾಷೆಯಲ್ಲಿದೆ’ ಎನ್ನುವ ಟಾಗೋರರ ಗೀತಾಂಜಲಿಯ ಸಾಲು ಕವಿಗಳನ್ನು ಪ್ರೀತಿಭಾವವು ಕಾಡುವ ಬಗೆಯನ್ನು ಪರಿಣಾಮಕಾರಿಯಾಗಿ ಹೇಳುತ್ತದೆ. ಈ ಬಗೆಯ ಪ್ರೀತಿಯೆಂಬ ವಸ್ತು ಲಕ್ಷ್ಮಣರಾಯರಂತಹ ರಸಿಕಕವಿಯನ್ನು ಕಾಡಿ ಅವರ ಬರಹ ಬದುಕಿನ ಪೂರಾ ನಾನಾಬಗೆಯಲ್ಲಿ ಕಾಲಕ್ಕೆ ತಕ್ಕಂತೆ ಸೃಜನಶೀಲವಾಗಿ ಅಭಿವ್ಯಕ್ತಿಯನ್ನು ಕಂಡಿರುವುದರಲ್ಲಿ ಆಶ್ಚರ್ಯವೇನಿಲ್ಲ. ಶೃಂಗಾರಕ್ಕೆ ದಕ್ಕುವ ರಸಾಭಿವ್ಯಕ್ತಿಯು ಮತ್ಯಾವ ಭಾವಕ್ಕೂ ದಕ್ಕದೇನೋ.

ಪ್ರೀತಿಯ ವೈವಿಧ್ಯಮಯ ಅಭಿವ್ಯಕ್ತಿಯು ಲಕ್ಷ್ಮಣರಾಯರ ಕವಿತೆಗಳಲ್ಲಿ ಕಾಣುವ ಪರಿಗೆ ನಾನು ಬೆರಗಾಗುತ್ತೇನೆ. ಕೆಳಗಿನ ಏಳು ಸಾಲುಗಳು ಹೊತ್ತುತರುವ ಭಾವೋತ್ಕರ್ಷಗಳ ವಿವಿಧತೆಯನ್ನು ನೋಡಿ:

ದೇವರಿಗೆ ನಮಸ್ಕಾರ
ತಾಯಿಗೆ
ಹಾಲು ತುಂಬಿದ ಮೊಲೆ ಕೊಟ್ಟಿದ್ದಕ್ಕೆ,
ನನಗೆ ಹಸಿದ ಬಾಯಿ.
ಜೊತೆಗೆ ಇಂದಿಗೂ
ತುಂಬು ಮೊಲೆಗಳ ಬಗ್ಗೆ ವ್ಯಾಮೋಹ
ಉಳಿಸಿದ್ದಕ್ಕೆ.

ಲಕ್ಷ್ಮಣರಾಯರ ಕವಿತೆಗಳ ಹರಿವಿನ ವಿಸ್ತಾರ ಕಾಣುವುದು ಇಲ್ಲೇ. ಒಂದು ನೆಲೆಯಿಂದ ಮತ್ತೊಂದಕ್ಕೆ, ತಾಯಿ ಮಮತೆಯಿಂದ ಗೆಳತಿಯ ವ್ಯಾಮೋಹಕ್ಕೆ, ಧ್ರುವದಿಂದ ಧ್ರುವಕ್ಕೆ ಹರಿದಂತೆ, ಪ್ರೀತಿಯ ಒಂದು ರೀತಿಯಿಂದ ಮತ್ತೊಂದಕ್ಕೆ ಹೊರಳುತ್ತವೆ. ಹಾಗೆಯೇ, ಈ ವಿಸ್ತಾರ ಹರವಿನಲ್ಲಿ ಪ್ರೀತಿಯ ವಿವಿಧ ಸ್ತರಗಳನ್ನು ನಮಗೆ ದರ್ಶಿಸುತ್ತವೆ. ಆರಂಭದ ರಾಗೋದ್ರೇಕದಿಂದ ಹಿಡಿದು ಪ್ರಜ್ಞೆಯ ಸ್ತರದ ಇಂದ್ರಿಯದಾಚೆಯ ಅನುಭಾವಿ ಪ್ರೀತಿಯವರೆಗೆ ಅವರ ಕಾವ್ಯ ವಿಸ್ತರಿಸುತ್ತದೆ. ತಪಸ್ಸಿನಂತೆ ಪ್ರೀತಿಯನ್ನೇ ಧ್ಯಾನಿಸಿದ್ದರ ಫಲವಿದು. “ಲೇ ನನ್ನ ಹಾವಾಡಿಸುವ ಬಾಲೇ,” ಎನ್ನುವ ನೇರ ದೇಹಾಭಿವ್ಯಕ್ತಿಯ ಸಾಲಿನಿಂದ ಹಿಡಿದು ಕೊನೆಗೆ :

ಇವಳಿದ್ದಾಳೆ:
ನನ್ನಂತೆ ಅಲ್ಲಲ್ಲಿ ಅಪಸ್ವರ,
ಅಪಶ್ರುತಿಗಳೊಂದಿಗೆ
ಕಿಂಚಿದೂನವಾಗಿ,
ಯುಗಳಗಾನವಾಗಿ.

‘ಯುಗಳಗಾನ’ ಕವಿತೆಯು ಮುಟ್ಟುವ ಘಟ್ಟ. ‘ಇವಳಿದ್ದಾಳೆ’ ಎನ್ನುವ ಕವಿತೆಯ ಭಾಗವದು. ಜೀವ ಸಂಗಾತಿಯು ಆತ್ಮಸಂಗಾತಿಯಾಗಿ ಹೊರಹೊಮ್ಮುವ ಪರಿಯದು. ಇದರಲ್ಲಿ ಪ್ರೀತಿಯನ್ನು ವ್ಯಕ್ತಪಡಿಸಲು ನಲ್ಲ ನಲ್ಲೆಯರು ಒಲವಿನ ಮಾತುಗಳನ್ನಾಡಬೇಕಿಲ್ಲ, ಒಬ್ಬರನ್ನೊಬ್ಬರು ರಮಿಸಬೇಕಿಲ್ಲ. ಬದಲಿಗೆ ಬದುಕಿನ ನಿತ್ಯತೆಯು ಪ್ರೀತಿಯ ದರ್ಶನವನ್ನು ಮಾಡಿಸುತ್ತದೆ.

ಇವಳಿದ್ದಾಳೆ:
ಮುಂಜಾನೆಯೇ ಎದ್ದು,
ಮನೆಯ ಅಂಗಳ ತೊಳೆದು,
ರಂಗೋಲಿ ಬಿಡಿಸಿ, ಹೆಗಲ ಬಳಸಿ
ಒಳಕ್ಕೆ ಕರೆತರಲು
ಹೊಚ್ಚ ಹೊಸ ಹಗಲನ್ನು.

ಈ ಸಾಲುಗಳಲ್ಲಿ ದೇಹಭಾಷೆಯೇ ಇಲ್ಲದೆ ಪ್ರೀತಿ ವಿಜೃಂಭಿಸಿದೆ. ಮಾಗಿದ ಪ್ರೀತಿಯು ಜಗತ್ತಿಗೆ ತೋರಿಕೊಳ್ಳುವುದೇ ಹೀಗೆ, ತನ್ನ ನಿತ್ಯಸತ್ಯದಲ್ಲಿ. ದೇಹಭಾವಗಳ ಜಾಗದಲ್ಲಿ ಮನೋಭಾವಗಳು ತುಂಬಿಕೊಳ್ಳುತ್ತವೆ, ಒಬ್ಬರೊಬ್ಬರ ಅವಲಂಬನದಲ್ಲಿ, ಆಶ್ರಯದಲ್ಲಿ, ಈ ಕವಿತೆ ಕೊನೆಯಲ್ಲಿ ಗುರುತಿಸುವಂತೆ ‘ತನ್ನ ಪಾಡಿಗೆ ತಾನು ಕಾಣದ ಪ್ರಾಣವಾಯುವಿನಂತೆ’ ಬದಲಾಗುವುದರಲ್ಲಿ ಪ್ರೀತಿಯಿದೆ.
*
ಲಕ್ಷ್ಮಣರಾಯರ ಪದ್ಯಗಳು ಮೊದಲ ಓದಿಗೆ ಸರಳವೆನ್ನಿಸುತ್ತವೆ. ಬಹುಶಃ ಅದಕ್ಕೆ ಕಾರಣ ಅವರ ಸಹಜ ಭಾಷೆ.

ವಿದ್ಯುತ್ ಹರಿದಾಗ ಮಾತ್ರ
ಧಿಗ್ಗೆಂದು ಹೊತ್ತಿ ಉರಿವ
ಕ್ಷುದ್ರ ವಿದ್ಯುದ್ದೀಪ, ಕಣೆ, ನನ್ನ ಪ್ರೇಮ;
ನಿನ್ನ ಬಾಳ ನಂದಾದೀಪವಲ್ಲ.

ಮೇಲಿನ ನಾಲ್ಕು ಸಾಲುಗಳನ್ನು ಓದಿ. ಮೊದಲ ಓದಿಗೆ ಭಾಷೆಯ ಸ್ತರದಲ್ಲಿ ಮತ್ತು ಕಾವ್ಯಭಾಷೆಯ ಚಮಕಿನಲ್ಲಿ ಹೆಚ್ಚಿನ ಪ್ರಚೋದನೆಯನ್ನು ಕೊಡದ ಸಾಲುಗಳು ನಿಜಕ್ಕೂ ನಮ್ಮನ್ನು ಮೀಟುವುದು ಅವುಗಳ ಅರ್ಥ ವಿಸ್ತಾರದಲ್ಲಿ. ಮುಚ್ಚುಮರೆಯಿಲ್ಲದೆಯೆ ಅವು ದ್ವನಿಸುವ ಪ್ರಾಮಾಣಿಕತೆಯಲ್ಲಿ. ವಿದ್ಯುತ್ ಹರಿದು ದೇಹ ಕಂಪಿಸಿ ಧಿಗ್ಗೆಂದು ಪರಾಕಾಷ್ಟೆಯನ್ನು ಮುಟ್ಟುವುದು ರತಿವಿಲಾಸದಲ್ಲಿ. ಅದೂ ಕೂಡ ಪ್ರೀತಿಯ ವ್ಯಕ್ತರೂಪವೇ ಮತ್ತು ನಂದಾದೀಪಕ್ಕಿಂತ ಧಿಗ್ಗೆಂದು ಹೊತ್ತಿ ಉರಿವುದು ಮನುಷ್ಯ ಸಹಜಗಳಲ್ಲಿ ಒಂದು ಎಂದು ತರ್ಕಿಸಿದಾಗ ಮೇಲಿನ ಸಾಲುಗಳು ನಮಗೆ ಆತ್ಮೀಯವಾಗುತ್ತವೆ. ಮರು ಓದಿನಲ್ಲಿ ಇವು ಮತ್ತೂ ಒಳಜಗತ್ತನ್ನು ಮೀಟುತ್ತವೆ. ಗೋಪಾಲಕೃಷ್ಣ ಅಡಿಗರ “ಕಾಮದ ಕೆಸರಿಂದ ಹುಟ್ಟಿ ಬಂತು ಎಂಥ ವಿಮಲವು, ಪ್ರೀತಿಯೆಂಬ ಕಮಲವು!” ಬಗೆಯಲ್ಲೇ ಈ ನಾಲ್ಕು ಸಾಲುಗಳಲ್ಲಿ ಕಾಮ ಪ್ರೇಮಗಳ ಸಮೀಕರಣವಿದೆ. ಹಾಗೆಯೇ, ಅವೆರಡಕ್ಕೂ ಇರುವ ದ್ವನಿ ಮತ್ತು ನಿರೂಪಣೆಯ ವ್ಯತ್ಯಾಸವನ್ನು ಗಮನಿಸಿ. ಅಡಿಗರ ಕವಿತೆಯಲ್ಲಿ ಅವನು – ಅವಳು ಇಲ್ಲ, ಕಾಮದ ಕೆಸರು ಮತ್ತು ಪ್ರೀತಿಯೆಂಬ ಕಮಲವು ಇವೆ. ಬಿಆರ್‌ಎಲ್ ಕವಿತೆ ನೇರವಾಗಿ “ನನ್ನ ಪ್ರೇಮ” “ನಿನ್ನ ಬಾಳು” – ಎಂದು ಉತ್ತಮ ಮತ್ತು ದ್ವಿತೀಯ ಪುರುಷಗಳಲ್ಲಿ ನಿರೂಪಕನನ್ನು ಮತ್ತು ಓದುಗಳನ್ನು ಸಂಭೋದಿಸುತ್ತದೆ. ಯಾವುದೇ ಸಂಕೋಚವಿಲ್ಲದೆ ತನ್ನ ಬಾಳನ್ನು ಹರವಿಟ್ಟು ನಿರೂಪಕನೆಂಬ ಪುರುಷನು ‘ರತಿ ಕ್ಷಣದಲ್ಲಿ ನನ್ನಲ್ಲಿ ಮಿಂಚುವುದೇ ಪ್ರೇಮ’ ಎನ್ನುತ್ತಾನೆ. ಅದಷ್ಟೇ ನಿನಗೆ ದಕ್ಕುವುದು; ಹಾಗಾಗಿ ಮಿತಿಯೆಂದು ಕರೆಯುವೆಯಾದರೆ ಅದು ಮಿತಿಯೇ ಎಂದು ಯಾವ ಮುಖವಾಡಗಳಿಲ್ಲದೆ ಒಪ್ಪಿಕೊಳ್ಳುತ್ತಾನೆ. ಇದು ನನಗನ್ನಿಸುವಂತೆ ಲಕ್ಷ್ಮಣರಾಯರ ಕಾವ್ಯಮಾರ್ಗ. ಕವಿತೆಯ ಒಡಪಿಗಿಂತ ಭಾವ ಪ್ರಾಮಾಣಿಕತೆ ಅವರ ದ್ರವ್ಯ. ಅದೇ ಅವರ ಶಕ್ತಿ.

ಇದನ್ನು ಯು ಆರ್ ಅನಂತಮೂರ್ತಿಯವರು ‘ಲಿಲ್ಲಿಪುಟ್ಟಿಯ ಹಂಬಲ’ ಸಂಕಲನದ ಮುನ್ನುಡಿಯಲ್ಲಿ ಸೊಗಸಾಗಿ ಗುರುತಿಸಿದ್ದಾರೆ. “ಹಗುರಾಗಿ ಮಾತಾಡಿದಾಗ ನಮ್ಮ ಮಾತು ಸ್ವಂತದ್ದೆಂದೂ ಸಹಜವೆಂದೂ ನಿರಾಯಾಸವಾಗಿ ಅನ್ನಿಸುತ್ತದೆ. ಆದರೆ ಧಾಟಿ ಧೋರಣೆಗಳು ಗಂಭೀರವಾದಾಗ ನಾವು ಬೇರೆ ಯಾರಂತೆಯೋ ಮಾತನಾಡುತ್ತಿದ್ದೇವೆ ಎಂಬ ಅನುಮಾನ ಹುಟ್ಟುತ್ತದೆ. ಸರೀಕರ ಎದುರು ಹಾಗೆ ಮಾತನಾಡುವುದೇ ನಾಚಿಕೆಯದೆನಿಸುತ್ತದೆ; ನಮ್ಮ ಸರೀಕರಂತೂ ಹಿರಿಯರಲ್ಲಿ ಗಂಭೀರವನ್ನು ಒಪ್ಪಿದರೂ ತನ್ನ ಸಮಾನರಲ್ಲಿ ಅದನ್ನು ಸುಲಭವಾಗಿ ಒಪ್ಪುವುದಿಲ್ಲ. ಈ ಸಮಸ್ಯೆ ಕಲೆಯದ್ದೂ ಹೌದು. ಲಘುವಾದದ್ದು, ಸಹಜವಾಗಿಯೇ ಅಂಕುಡೊಂಕಿನ ಮಾತಿನ ಸೊಗಸಿನದು.” ಹೀಗೆ ನಿರಾಯಾಸ ಮಾತಿನ ಕವಿತೆಗಳು ಬಿಆರ್‌ಎಲ್ ಬತ್ತಳಿಕೆಯಲ್ಲಿನ ಮಹದಾಕಾಂಕ್ಷೆಯ ಅಸ್ತ್ರಗಳು. ಗಂಡು ಹೆಣ್ಣಿನೊಂದಿಗೆ ಮತ್ತು ಹೆಣ್ಣು ಗಂಡಿನೊಂದಿಗೆ ಆಡುವ ಸರೀಕ ಮಾತುಗಳವು. ಇಂತಹ ಕವಿತೆಗಳಲ್ಲಿ ಓದುಗ/ಓದುಗಳೂ ಕವಿತೆಯ ಭಾಗವಾಗುತ್ತಾರೆ. ಪ್ರೀತಿ ಮತ್ತು ಕಾಮವನ್ನು ಕಮಲದ ನೆವದಲ್ಲಿ ಹೇಳುವುದು ದೃಷ್ಟಾಂತ; ಅದೇ, ಸಂಭಾಷಣೆಯಲ್ಲಿ ಹೇಳುವುದು ಒಳಗೊಳ್ಳುವಿಕೆ. ಯಾವುದು ಹೆಚ್ಚು ಯಾವುದು ಕಡಿಮೆ ಎಂದಲ್ಲ, ಎರಡಕ್ಕೂ ತಮ್ಮದೇ ಕಾವ್ಯ ಸೌಂದರ್ಯವಿದೆ.
*
ಬಿಆರ್‌ಎಲ್‌ ಅವರ ಅನೇಕ ಕವಿತೆಗಳಲ್ಲಿ ತುಂಟತನ, ಗಂಡಸಿನ ಭೋಳೆತನ, ಮತ್ತು ಗಂಡು-ಹೆಣ್ಣಿನ ಖಾಸಗಿ ಕ್ಷಣಗಳು ಕವಿತೆಯ ಪ್ರವೇಶಕ್ಕೆ ಮಾತ್ರ. ಆಮೇಲೆ ಅವು ಬೇರೆ ಲೋಕವನ್ನೇ ತೆರೆದಿಡುತ್ತವೆ. ಶೀಲ-ಅಶ್ಲೀಲಗಳ ನಡುವೆ ಒಂದು ಮನುಷ್ಯದಾರಿಯನ್ನು ತೋರುತ್ತವೆ. ಹೊರಗಣ್ಣಿನಿಂದ ಪ್ರಾರಂಭವಾಗುವ ಅವರ ಕವಿತೆಗಳು ಅಂತ್ಯದಲ್ಲಿ ಒಳಗಣ್ಣಿನ ನೋಟವನ್ನು ದರ್ಶಿಸುತ್ತವೆ. ಉದಾಹರಣೆಗೆ ಅವರ ಆಳ-ಎತ್ತರ ಕವಿತೆಯನ್ನು ನೋಡಬಹುದು.

ಮೆಲ್ಲಮೆಲ್ಲನೆ ಇಳಿದು ಅವಳ ಆಳಗಳಲ್ಲಿ
ಅವ್ಯಕ್ತಗಳಿಗಾಗಿ ಅವನ ಶೋಧ.
ಅವನ ಮುಚ್ಚಿದ ಕಣ್ಣು, ಅವನ ತಡ, ತಡವರಿಕೆ;
ಅವಳ ಕಣ್ಣುಗಳಲ್ಲಿ ಉರಿವ ಕ್ರೋಧ.

ಈ ಶಯ್ಯಾಗೃಹ ದೃಶ್ಯದಲ್ಲಿ ಶೃಂಗಾರ ಮತ್ತು ಲಜ್ಜೆಯ ಭಾವಗಳು ಹಿಂಸರಿದು ಶೋಧ ಮತ್ತು ಕ್ರೋಧಗಳು ಮುನ್ನೆಲೆಗೆ ಬರುವ ರೀತಿಯನ್ನು ನೋಡಿ! ರತಿಕ್ರೀಡೆಯಲ್ಲಿ ಕ್ರೋಧ ಸಂಚಾರಿಭಾವವೂ ಅಲ್ಲ. ಪ್ರೀತಿ ಮತ್ತು ಕ್ರೋಧ ಒಂದರೊಟ್ಟಿಗೆ ಮತ್ತೊಂದು ಜೊತೆಯಲ್ಲಿರಲು ಸಾಧ್ಯವಿಲ್ಲ. ಕೀಟ್ಸ್ ಹೇಳುವ A thing of beauty is a joy for ever ಬದುಕಿನಲ್ಲಿ ಕವಿಕಲ್ಪನೆ ಮಾತ್ರ. ನಿಜಬದುಕು ಸಾವಿರ ಭಾವಗಳೊಂದಿಗೆ ಹೊರಳುತ್ತದೆ. ಪ್ರೀತಿಯಲ್ಲಿ ಕ್ರೋಧವಿರಬಾರದೆಂದಿಲ್ಲ. ಅಂತಹ ಅಪರೂಪದ ವಸ್ತುವನ್ನು ಈ ಕವಿತೆಯು ಶೋಧಿಸುತ್ತದೆ. ಆಕರ್ಷಣೆಯೊಳಗಿರುವ ವಿಕರ್ಷಣೆ ಇಲ್ಲಿನ ಭಾವ.

‘ಇವನ ಒಳಗಣ್ಣಲ್ಲಿ ಯಾವ ಹೆಣ್ಣಿರಬಹುದು?’
ಶುರುವಾಗುವುದು ಅವಳ ತನಿಖೆ.
ಅವನನ್ನು ಸಂಪೂರ್ಣ ತನ್ನೆಡೆಗೆ ಸೆಳೆದಿಡಲು
ಬಿಗಿಯುವಳು ಕೈಕಾಲ ಕುಣಿಕೆ.

ಕೈಕಾಲ ಕುಣಿಕೆ ಬೇಕಿರುವುದು ಆನಂದಕ್ಕೆ, ಸುಖದ ತಾರಕಕ್ಕೆ. ಆದರಿಲ್ಲಿ ಏನಾಗಿದೆ? ಅವನನ್ನು ತನ್ನ ಬದುಕಿನಲ್ಲಿ ಉಳಿಸಿಕೊಳ್ಳಲು ಅವಳಿಗದು ಬೇಕಿದೆ. ಇದೆಂತಹ ಕ್ರೌರ್ಯ! ಸಂಗಾತಿಯನ್ನು ಉಳಿಸಿಕೊಳ್ಳಲು ತನ್ನ ಲಿಂಗಸ್ಪರ್ಧಿಗಳೊಂದಿಗೆ ಕದನವು ನೈಸರ್ಗಿಕ ಮತ್ತು ಮನುಷ್ಯೇತರ ಜೀವಜಂತುಗಳಲ್ಲಿ ಸಾಮಾನ್ಯ ಎನ್ನುವುದು ನಮ್ಮ ತಿಳುವಳಿಕೆ. ಇಲ್ಲಿ ಇವರಿಬ್ಬರಿರುವ ಬೆಡ್‌ರೂಮಿನಲ್ಲಿ ಮತ್ತೊಂದು ಜೀವಿಯಿಲ್ಲ. ಸ್ಪರ್ಧೆಯಿಲ್ಲ. ಆದರೂ, ಕಳೆದುಕೊಳ್ಳುವ ಭಾವ ಎಷ್ಟು ದಟ್ಟ! ಯಾವ ಕ್ಷಣಕ್ಕಾದರೂ ಈ ಸಂಬಂಧ ಮುಕ್ತಾಯವಾಗಬಹುದು ಎನ್ನುವ ಆತಂಕ! ಆಧುನಿಕ ಬದುಕು ಸಂಬಂಧಗಳಲ್ಲಿ ತೆರೆದುಕೊಳ್ಳುವ ಪರಿಯಿದು.

ಕವಿತೆಯು ಮುಕ್ತಾಯವಾಗುವ ಪರಿ ಹೀಗೆ:

ಒಳಗಣ್ಣ ಬೆಳಕಲ್ಲಿ ಅವನ ತಡಕಾಟ;
ಏದುತ್ತಾ ಕಾಯುವಳು; ‘ಯಾವಾಗ ಸ್ಫೋಟ?’

ತಮ್ಮವಲ್ಲದ ಭಾವದಲ್ಲಿ ಒಂದು ಸಂಯೋಗಕ್ರಿಯೆ ಅಂತ್ಯವಾಗುವುದು ಹೀಗೆ. ಸ್ಫೋಟಲ್ಲಿ ಬಿರಿಯುವ ಮಡಕೆಯಲ್ಲಿ. ಒಂದು ಸುಖಕ್ರಿಯೆ ಏನಾಗಬೇಕೋ ಅದುಬಿಟ್ಟು ಮತ್ತೆಲ್ಲವೂ ಆಗುತ್ತದೆ. ಸಂಬಂಧಗಳು ಅನುಬಂಧವನ್ನಷ್ಟೇ ಅಲ್ಲ ವಿಷಾದವನ್ನೂ ಹೊರಬಲ್ಲವು ಎನ್ನುವ ಸತ್ಯವನ್ನು ಈ ಕವಿತೆಯು ಶೋಧಿಸುತ್ತದೆ. ಪ್ರೀತಿಯ ಇನ್ನೊಂದು ಮಗ್ಗುಲು ಇದು. ವಾಸ್ತವ ಸೌಂದರ್ಯವಿದು. ಪ್ರೇಮದ ಸುಖಭಾವವನ್ನಷ್ಟೇ ಅರಸಿ ತನ್ಮೂಲಕ ಕವಿತೆಯನ್ನು ಅದಕ್ಕಷ್ಟೇ ಸೀಮಿತೆಗೊಳಿಸುವ ಹಠ ಲಕ್ಷ್ಮಣರಾಯರಿಗಿಲ್ಲ. ಪ್ರೀತಿ ತೆರೆದುಕೊಳ್ಳುವ ದಾರಿಗಳಿಗೆಲ್ಲ ಮುಕ್ತರು ಅವರು. ಹಾಗಾಗಿಯೇ, ಆಳ-ಎತ್ತರ ಒಂದು ಒಳ್ಳೆಯ ಪ್ರೇಮಕವಿತೆಯೂ ಹೌದು. ಪ್ರೀತಿಯ ಪರಿಯನ್ನು ಇದ್ದಂತೇ ತೋರಿಸುವ ಪ್ರೇಮಗೀತೆ.

ಇದೇ ಹೊರಭಾವವು ಅವರ ಉಮಾ Vs. ರಮಾ ಕವಿತೆಯಲ್ಲಿ ಕಾಣಿಸಿಕೊಳ್ಳುತ್ತದೆ. ಉಮಾ ಮನೆಯಲ್ಲಿ ಮತ್ತು ತನ್ನ ಮನದಲ್ಲಿ ಬಚ್ಚಿಟ್ಟುಕೊಳ್ಳುವವಳು, ಆದರೆ ರಮಾ ಹೊರ ಜಗತ್ತಿಗೆ ಚಾಚಿಕೊಂಡವಳು. ಉಮಾಳಿಗೆ ರಮಾಳಂತಾಗುವ ಆಸೆ. ಆದರೆ ಅದಕ್ಕೆ ಬೇಕಾದ ಸ್ಥೈರ್ಯವಾಗಲೀ ಛಲವಾಗಲೀ ಇಲ್ಲ.

ಕನ್ನಡಿಯ ಮುಂದೆ ನಿಂತ ಉಮಾ;
ಅವಳ ಮನಸ್ಸಿನ ತುಂಬ ರಮಾ,
ಗೆಳತಿ ರಮಾ;
“ಛೆ, ಬ್ರಾಹ್ಮಣಳಾಗಿ ರಮಾ
ಹೀಗೆ ಮಾಡಬಹುದೆ?
ಯಾವನೋ ಶೂದ್ರನನ್ನು ಕಟ್ಟಿಕೊಂಡು ಓಡಬಹುದೇ?
ನಾನೊಮ್ಮೆ ಪ್ರೀತಿಸಿದ್ದ
ಆಂಟನಿಯ ಆಸೆಗಣ್ಣು
ಈಗ ನೆನಪಿಗೆ ಬಂದು ಕಾಡಬಹುದೆ?”

ಉಮಾ ದೂರುವುದು ರಮಾಳನ್ನು, ಅದಕ್ಕೆ ಬಳಸಿಕೊಳ್ಳುವುದು ಜಾತಿಯೆಂಬ ಅತಿಸುಲಭ ವಿಭಜಕವನ್ನು. ಆದರೆ ಒಳಗೊಳಗೇ ಬಯಸುವುದು ತಾನೂ ರಮಾಳಂತಾಗಬೇಕಿತ್ತು ಎಂದು. ಕನ್ನಡಿಯ ಮುಂದೆ ನಿಂತ ಉಮಾಳ ಈ ದ್ವಂದ್ವವನ್ನು ಇಡೀ ಕವಿತೆ ಪ್ರತಿಫಲಿಸುತ್ತದೆ. ವಿಷಾದವೆಂದರೆ ಉಮಾಳಿಗೆ ಕೊನೆಗೂ ರಮಾಳಂತಾಗಲಾಗುವುದಿಲ್ಲ. ಹಾಗೆಯೇ ಮೇಲ್ನೋಟಕ್ಕೆ ರಮಾಳ ಬದುಕನ್ನು ಒಪ್ಪಲೂ ಆಗುವುದಿಲ್ಲ. ತನ್ನ ಈವರೆಗಿನ ಬದುಕನ್ನು ಉಳಿಸಿಕೊಳ್ಳಲು ಆತ್ಮವಂಚನೆಯು ಆಕೆಗಿಲ್ಲಿ ಅಗತ್ಯ. ಇಡೀ ಬದುಕು ತನ್ನ ನಿಜಮುಖವನ್ನು ಅವಳಿಗೂ ತೋರದೆ ಮುಖವಾಡದಲ್ಲಿಯೇ ಮುಗಿಸಿಬಿಡುತ್ತದೆ. ಕೆ ಎಸ್ ನರಸಿಂಹಸ್ವಾಮಿಯವರ ‘ಭೂತ ಕನ್ನಡಿ’ ಕವಿತೆಯಲ್ಲಿ ಒಬ್ಬ ‘ಕನ್ನಡಿಯ ಕಣ್ಣಪೊರೆಯನು ತೆರೆಯಲಾದೀತೆ’ ಎಂದು ಪ್ರಯತ್ನಿಸುತ್ತಾನೆ. ಬಿಆರ್‌ಎಲ್‌ರ ಉಮಾ ಆ ಬಗೆಯವಳು. ಕನ್ನಡಿಯ ಪ್ರತಿಫಲನದಲ್ಲಿ ಕಣ್ಣಪೊರೆಯನ್ನು ಕಾಣುವವಳು. ಪಾತ್ರದ, ವಿಶೇಷವಾಗಿ ಹೆಣ್ಣಿನ, ಒಳಮನಸ್ಸಿನ ಆಳದಿಂದ ಭಾವಗಳನ್ನು ಗ್ರಹಿಸಲು ಕವಿಗೂ ಅಸಾಧಾರಣ ಧೈರ್ಯವಿರಬೇಕು. ಬಿಆರ್‌ಎಲ್ ಅದನ್ನು ಸಾಧಿಸಿಕೊಂಡಿದ್ದಾರೆ.
*
ಇಲ್ಲಿನ ಪ್ರತಿ ಕವಿತೆಯನ್ನೂ ಎತ್ತಾಡಿ ಅವುಗಳ ವಿಶೇಷಗಳನ್ನು ಪರಿಗಣಿಸಬಹುದು. ಈ ಬರವಣಿಗೆಯಲ್ಲಿ ನನ್ನ ಉದ್ದೇಶ ಅದಲ್ಲ. ಪ್ರೀತಿಯ ರೀತಿ ಒಂದೇಬಗೆಯಲ್ಲ ಎಂದು ಸಾರುವ ಕವಿಯ ಮಾರ್ಗವನ್ನು ನನಗೆ ಕಂಂಡಂತೆ ಗುರುತಿಸುವುದು ನನ್ನ ಉದ್ದೇಶವಾಗಿತ್ತು. ಬಿಆರ್‌ಎಲ್‌ರಂತಹ ಮಾಗಿದ ಕವಿಯ ಕವಿತೆಗಳು ಓದುಗರನ್ನು ಒಂದೇ ಅರ್ಥಕ್ಕೆ ಮಿತಗೊಳಿಸಲಾರವು ಎನ್ನುವ ತಿಳುವಳಿಕೆಯೂ ನನಗಿದೆ. ಪ್ರೀತಿ, ಅದರ ರೀತಿ, ಅದರ ಮೋಡಿ, ಅದರ ಮಜಲುಗಳು, ಅದರ ರೂಪಾಂತರಗಳು, ಬೇಂದ್ರೆಯೆನ್ನುವಂತೆ ಅದರ ‘ಮೂರು ದಿನದ ಆಟ’, ಮತ್ತು ಹೆಣ್ಣುಗಂಡು ಅದನ್ನು ಪರಿಭಾವಿಸುವ ಬಗೆ ಕವಿಗೆ ಕಾಡುವ ತೀವ್ರತೆಯಲ್ಲೇ ಸಾಮಾನ್ಯನಿಗೂ ಕಾಡುವುದರಿಂದ ಪ್ರೀತಿಯ ಮೇಲಿನ ಕವಿತೆಗಳು ಎಲ್ಲರನ್ನು ಮುಟ್ಟುತ್ತವೆ. ವ್ಯಕ್ತ ಮತ್ತು ಅವ್ಯಕ್ತಗಳ ನಡುವಿನ ಕಂದರ ತುಂಬಿದಷ್ಟೂ ಕವಿ ಪ್ರಾಮಾಣಿಕನಾಗುತ್ತಾನೆ. ಆ ಗುಣವೇ ಓದುಗನನ್ನು ಅವನ ಕವಿತೆಗಳೆಡೆಗೆ ಸೆಳೆಯುತ್ತದೆ. ಬಿಆರ್‌ಎಲ್ ಕವಿತೆಗಳ ವಿಶೇಷಗುಣವಿದು. ಅತ್ಯಂತ ಪರಿಚಿತ ಸಂದರ್ಭಗಳನ್ನು ಪರಿಚಿತ ಪ್ರತಿಮೆಯೊಳಗೆ ಪರಿಚಿತ ಭಾಷೆಯಲ್ಲಿ ಕಾವ್ಯವಾಗಿಸುವುದರಿಂದ ಅವರು ಜನಮನವನ್ನು ಗೆದ್ದಿದ್ದಾರೆ.
-+-

‍ಲೇಖಕರು avadhi

December 18, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: