
ಮೂಲ: ಜಾರ್ಜ್ ಲೂಯಿ ಬೊರ್ಹೆಸ್
ಕನ್ನಡಕ್ಕೆ : ಎಂ.ಆರ್ .ಕಮಲ
ತತ್ ಕ್ಷಣಗಳು!
ಮತ್ತೊಮ್ಮೆ ಈ ಬದುಕನ್ನು ಬದುಕುವಂತಿದ್ದರೆ-
ಎಲ್ಲವನ್ನು ಒಪ್ಪಗೊಳಿಸದೆ
ಹೆಚ್ಚು ಹೆಚ್ಚು ತಪ್ಪುಗಳನ್ನು ಮಾಡುತ್ತಿದ್ದೆ
ಮತ್ತಷ್ಟು ನಿರಾಳವಾಗಿರುತ್ತಿದ್ದೆ
ಬಹುಶಃ ಈಗಿರುವುದಕ್ಕಿಂತ ಹೆಚ್ಚು ಪರಿಪೂರ್ಣವಾಗಿರುತ್ತಿದ್ದೆ.
ನಿಜವೆಂದರೆ ಕೆಲವೇ ಕೆಲವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದೆ
ಆರೋಗ್ಯದ ಬಗ್ಗೆ ಕಡಿಮೆ ನಿಗಾ ವಹಿಸುತ್ತಿದ್ದೆ
ಮತ್ತಷ್ಟು ಅಪಾಯ ಮೈಮೇಲೆ ಎಳೆದುಕೊಳ್ಳುತ್ತಿದ್ದೆ
ಹೆಚ್ಚು ಪ್ರವಾಸ ಮಾಡುತ್ತಿದ್ದೆ
ಹೆಚ್ಚು ಸೂರ್ಯಾಸ್ತಗಳನ್ನು ನೋಡುತ್ತಿದ್ದೆ
ಪರ್ವತಗಳನ್ನು ಏರುತ್ತಿದ್ದೆ
ನದಿಗಳಲ್ಲಿ ಈಜುತ್ತಿದ್ದೆ
ನಾನೆಂದೂ ನೋಡದ ಜಾಗಗಳಿಗೆ ಹೋಗುತ್ತಿದ್ದೆ
ತರಕಾರಿಗಳಿಗಿಂತ ಹೆಚ್ಚು ಐಸ್ ಕ್ರೀಮ್ ತಿನ್ನುತ್ತಿದ್ದೆ

ಕಲ್ಪನೆಯ ಕಷ್ಟಗಳಿಗಿಂತ ನೈಜವಾದದ್ದನ್ನೇ ಎದುರಿಸುತ್ತಿದ್ದೆ
ಪ್ರತಿ ನಿಮಿಷ ಅರ್ಥಪೂರ್ಣ, ವಿವೇಕದ ಬದುಕ
ನಡೆಸಿದವರಲ್ಲಿ ನಾನೂ ಒಬ್ಬನಾಗಿರುತ್ತಿದ್ದೆ
ನನಗೂ ಹಲವಷ್ಟು ಸಂತೋಷದ ಗಳಿಗೆಗಳಿದ್ದವು
ಈಗ ಮತ್ತೆ ಮರಳಿ ಹೋಗಿ, ಬದುಕು ನಡೆಸುವಂತಿದ್ದರೆ
ಒಳ್ಳೆಯ ಗಳಿಗೆಗಳು ಮಾತ್ರ ಇರುತ್ತಿದ್ದವು
ನಿಮಗೆ ಗೊತ್ತಿಲ್ಲದಿದ್ದರೆ ತಿಳಿಯಿರಿ-ಬದುಕು ಹೀಗೆಯೇ ರೂಪುಗೊಂಡಿರುವುದು
-ವರ್ತಮಾನವನ್ನು ಕಳೆದುಕೊಳ್ಳಬೇಡಿ
ಥರ್ಮಾಮೀಟರ್, ಬಿಸಿನೀರಿನ ಬಾಟಲ್
ಬಿಚ್ಚಿಕೊಳ್ಳುವ ಕೊಡೆಯಿಲ್ಲದೆ
ಹೊರಗೆ ಹೋಗದವರಲ್ಲಿ ನಾನೂ ಒಬ್ಬ!
ಮತ್ತೊಮ್ಮೆ ಈ ಬದುಕನ್ನು ಬದುಕುವಂತಿದ್ದರೆ
ಇವೆಲ್ಲವನ್ನು ಎಸೆದು ಹಗುರಾಗಿ ಪ್ರವಾಸ ಮಾಡುತ್ತಿದ್ದೆ
ಮತ್ತೊಮ್ಮೆ ಈ ಬದುಕನ್ನು ಬದುಕುವಂತಿದ್ದರೆ
ವಸಂತದಿAದ ಹೇಮಂತದವರೆಗೂ ಬರಿಗಾಲಲ್ಲಿ ಕೆಲಸ ಮಾಡುತ್ತಿದ್ದೆ
ಗಾಡಿ ಹೊಡೆಯುತ್ತಿದ್ದೆ.
ಸೂರ್ಯೋದಯವನ್ನು ಮತ್ತಷ್ಟು ನೋಡುತ್ತಿದ್ದೆ, ಮಕ್ಕಳೊಂದಿಗೆ ಆಟವಾಡುತ್ತಿದ್ದೆ
ಮತ್ತೊಮ್ಮೆ ಈ ಬದುಕನ್ನು ಬದುಕುವಂತಿದ್ದರೆ-ಆದರೆ ನನಗೀಗ ೮೫ ವರ್ಷ,
-ಸಾಯುತ್ತೇನೆ ಎಂದು ತಿಳಿದಿದೆ
0 Comments