ಎಂಟು ವರ್ಷದ ನಂತರ ಮತ್ತೆ ಕಾಕಾನ ಪ್ರೀತಿಯ ಊಟ..

ಸುಚಿತ್ ಕೋಟ್ಯಾನ್

ಮಂಗಳೂರು ಯೂನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಊಟ ಮಾಡುತ್ತಿದ್ದ ಹೋಟೆಲ್ ಬಗ್ಗೆ ಎರಡು ವರ್ಷದ ಹಿಂದೆ ಬರೆದಿದ್ದೆ.. ಕೊಣಾಜೆ ಲಾಸ್ಟ್ ಸ್ಟಾಪಿನ ಹಳೆಯ ಹೋಟೆಲಿನ ಕಾಕಾ ಮತ್ತೆ ಮತ್ತೆ ನೆನಪಾಗುತ್ತಿದ್ರು.. ಅನೇಕರ ಹತ್ರ ಅವರ ನಂಬರ್ ಸಿಗುತ್ತೋ ನೋಡಿ ಅಂತ ಕೇಳಿಯೂ ಆಗಿತ್ತು.. ಅದೇಕೋ ಕಾಕಾ ಹೋಟೆಲ್ ಕನಸಲ್ಲೂ ಕಾಡಲು ಆರಂಭವಾಗಿತ್ತು..

ಈ ನಡುವೆ ಕಳೆದ ವಾರ ಅಚಾನಕ್ಕಾಗಿ ವಿಶ್ವವಿದ್ಯಾನಿಲಯಕ್ಕೆ ಹೋಗಬೇಕಾಗಿ ಬಂತು.. ಎರಡು ವರ್ಷ ಭರ್ತಿ Day Scholar ಆಗಿ ಬಸ್ಸಿನಲ್ಲಿ ಪ್ರತೀದಿನ ಉಡುಪಿಯಿಂದ ಹೋದವ ನಾನು.. ಎಕ್ಕೂರು, ಮೊಗೇರ್, ಕಲ್ಲಾಪು, ತೊಕ್ಕೊಟ್ಟು, ಚೆಂಬುಗುಡ್ಡೆ, ಪಂಡಿತ್ ಹೌಸ್, ಕುತ್ತಾರ್, ಯೆನಪೊಯ, ಕೆ.ಎಸ್ ಹೆಗ್ಡೆ, ದೇರಳಕಟ್ಟೆ, ಕಣಚೂರು, ಅಸೈಗೋಳಿಗಳೆಲ್ಲಾ ನಿದ್ರೆಯಲ್ಲಿ ಎಬ್ಬಿಸಿ ಕೇಳಿದರೂ ಹೇಳುವಷ್ಟು ಬಾಯಿಪಾಠವಾಗಿತ್ತು.. ಅನೇಕ ವರ್ಷಗಳ ನಂತರ ಹೋಗಿದ್ದರಿಂದ ಎಲ್ಲವನ್ನೂ ಪುಟ್ಟ ಮಗುವಿನಂತೆ ನೋಡುತ್ತಾ ಹೋದೆ.. ವಿ.ವಿ.ಗೆ ಹೋದ ಕಾರ್ಯ 12 ಗಂಟೆಯ ಒಳಗೆ ಮುಗಿಯಿತು.. ಆಗ ನೆನಪಾಗಿದ್ದೇ ಕಾಕ..

ಕೊಣಾಜೆ ಲಾಸ್ಟ್ ಸ್ಟಾಪಿಗೆ ಹೋದೆ.. ಅಂಗಡಿ ಕಂಡಿತು.. ಪಕ್ಕದ ಅಂಗಡಿಯ ಬಾಯಮ್ಮ ಹೊರಗೆ ಕಂಡ್ರು.. ಹತ್ರವಾಗುತ್ತಿದ್ದಂತೆ ಹೋಟೆಲಿನಿಂದ ಕಾಕಾ ಹೊರಗೆ ಬಂದ್ರು.. ಅದೇ ಮುಖ.. ಅದೇ ಒಂದು ಬಟನ್ ಬಿಚ್ಚಿಟ್ಟ ನೀಲಿ ಶರ್ಟು.. ಎರಡೇ ನಿಮಿಷ.. ನಾನು ಹೇಳುವುದರ ಒಳಗಾಗಿ ಅವರೇ ಗುರ್ತು ಹಿಡಿದು ‘ಈರ್ ಉಡುಪಿಡ್ದ್ ಬರೊಂದಿತ್ತರತ..’ ಅಂದರು.. ನನಗೆ ನಿಜಕ್ಕೂ ಕಣ್ಣೀರು ಬಂತು… ಇದು ಎಂಟು ವರ್ಷದ ನಂತರದ ಭೇಟಿ.. ಒಳಗೆ ಕೂತು ಮಾತನಾಡಿದೆವು.. ಕಾಕಾನದ್ದು ಅದೇ ಪ್ರೀತಿ.. ಅದೇ ಆತ್ಮೀಯತೆ..

ಕಾಕಾ ಹೋಟೆಲ್ಲು ಹಾಗೆಯೇ ಇತ್ತು.. ವಾಶ್ ಬೇಸಿನ್ ನಳ್ಳಿ ಈಗಲೂ ಸರಿ ಇರಲಿಲ್ಲ.. ಪಕ್ಕದಲ್ಲೇ ನೀರೆತ್ತಿಕೊಳ್ಳುವ ಬಕೇಟು ಇತ್ತು.. ಬೆಂಚು,ಕುರ್ಚಿ, ಗಲ್ಲಗಳೇನೂ ಬದಲಾಗಿರಲಿಲ್ಲ.. ‘ಕಾಕಾ ಊಟ ಮಾಡಿ ಹೋಗ್ತೇನೆ’ ಅಂದೆ.. ‘ಏನು ಕೊಡ್ಲಿ ಬಿರಿಯಾನಿ ಕೊಡ್ಲಿಯಾ’ ಅಂದರು.. ಎರಡು ವರ್ಷ ಅಲ್ಲಿ ಹೆಚ್ಚು ಉಂಡಿದ್ದು ಬಿಸಿ ಕುಚ್ಚಲಕ್ಕಿ ಅನ್ನ, ಮೀನು ಸಾರು, ತಣ್ಣಗಿನ ಸಲಾಡು, ಮತ್ತೊಂದು ಫ್ರೈ ಆಗಿದ್ದರೂ ಮೊನ್ನೆ ಅವರು ಹೇಳಿದ್ದಕ್ಕೆ ಬಿರಿಯಾನಿ ಉಂಡೆ.. ಜೊತೆಗೊಂದು ಒಳ್ಳೆಯ ಕಬಾಬ್ ಪೀಸು ಮತ್ತು ಮ್ಯಾಂಡೇಟರಿ ಸಾಫ್ಟ್‌ಡ್ರಿಂಕ್ಸ್ ನಮ್ಮ ಕುಡ್ಲದ ಜಾಫಾ.. ಹೊಟ್ಟೆ ತುಂಬಿತು.. ಬಿರಿಯಾನಿ ಗ್ರೇವಿಯ ರುಚಿ ಚೂರೂ ಬದಲಾಗಿಲ್ಲ.. ಅದೆಷ್ಟೋ ವರುಷಗಳ ಕನಸೊಂದು ಪೂರ್ತಿಯಾದಂತೆ ತೃಪ್ತಿಯಾಯಿತು..

‘ಕಾಕಾ ಬಿಲ್ಲೆಷ್ಟಾಯಿತು?’ ಅಂದ್ರೆ ಬಿರಿಯಾನಿ, ಕಬಾಬ್ ಮತ್ತೆ ಸಾಫ್ಟ್‌ಡ್ರಿಂಕ್ಸಿಗೆ ಒಟ್ಟು 75 ರೂಪಾಯಿ ಅಂದ್ರು.. ಕಾಕಾ ಇನ್ನೂ ಬದಲಾಗಿಲ್ಲ.. ಅಲ್ಲಿ ಇನ್ನೂ ಅನ್ನಕ್ಕೆ ಬೆಲೆ ಕಟ್ಟಿಲ್ಲ.. ಲಾಭ ಮಾಡುವ ಉದ್ದೇಶ ಇನ್ನೂ ಕಾಕಾನಿಗೆ ಬಂದಿಲ್ಲ.. ‘ಕಾಕಾ ಮೀನು ಊಟಕ್ಕೆ ಈಗೆಷ್ಟು?’ ಕೇಳಿದ್ರೆ ಎಂಟು ವರ್ಷ ಹಿಂದಿನ ಊಟದ ರೇಟಿಗೆ ಹತ್ತೇ ರೂಪಾಯಿ ಜಾಸ್ತಿ ಸೇರಿಸಿ 40 ಆಗಿದೆ ಅಂದ್ರು.. ಅಲ್ಲೊಂದು ಶಬ್ದಗಳ ಮಿತಿಗೆ ಮೀರಿದ ಪ್ರೀತಿ ಅವರಲ್ಲಿ ಕಂಡಿತು.. ಎರಡು ವರ್ಷ ಅನ್ನ ಕೊಟ್ಟ ಕಾಕಾನಿಗೆ ಮತ್ತೊಮ್ಮೆ ನಮಸ್ಕಾರ ಹೇಳಿ ಹೊರಬಂದಾಗ ಎಂದಿನ ಜೋಶ್‌ನಲ್ಲಿ ಮಹೇಶ್ ಬಸ್ಸು ರೌಂಡ್ ಹಾಕಿ ಬಂತು.. ಹತ್ತಿ ವಾಪಸ್ಸು ಬಂದೆ..

‍ಲೇಖಕರು Admin

November 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: