‘ಊಡ ಐಡಾ’, ಅ ಆ, ಹಾಗು ನಮ್ಮ ಆಂಗ್ಲ ಭಾಷಾ ಪ್ರೇಮ

ಪ್ರನುಷಾ ಕುಲಕರ್ಣಿ

ನಾನು ನಿನ್ನೆ ಅಮೆಜಾನ್ ಪ್ರೈಮ್ ನಲ್ಲಿ ‘ಊಡ ಐಡಾ’ ಅನ್ನೋ ಪಂಜಾಬಿ ಚಲನಚಿತ್ರ ನೋಡಿದೆ. ಈ ಹೆಸರಿನ ಕನ್ನಡ ಅನುವಾದ ‘ಅ ಆ’ ಎಂದಾಗುತ್ತದೆ. ಪಂಜಾಬಿ ಭಾಷೆಯ ಮೊದಲ ಎರಡು ಅಕ್ಷರಗಳನ್ನು ಈ ಚಲನಚಿತ್ರದ ಹೆಸರನ್ನಾಗಿಡಲು ಕಾರಣ ಅದರ ಅರ್ಥವುಳ್ಳ ಕಥೆ. ಹಳ್ಳಿಯಲ್ಲಿ ವಾಸವಾಗಿದ್ದ, ಆಂಗ್ಲ ಭಾಷೆ ಬಾರದ ಒಂದು ಸರಳ ಪರಿವಾರದ ಕಥೆ ಅದು. ಆ ಪರಿವಾರದ ಮನೆಯೊಡತಿಗೆ ಆಂಗ್ಲ ಭಾಷೆಯ ಹುಚ್ಚು. ನನ್ನ ಥರ.

ಅವಳ ಪ್ರಕಾರ, ಅವಳ ಪಂಜಾಬಿ ಮಾಧ್ಯಮದ, ಹಳ್ಳಿಯ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದ ಮಗ, ತುಂಬಾ ದುಬಾರಿಯಾದ, ಅವರ ಮನೆಯಿಂದ ೨೦ ಕಿ.ಮೀ. ದೂರದಲ್ಲಿದ್ದ ಒಂದು ಅಂತರಾಷ್ಟ್ರೀಯ ಆಂಗ್ಲ ಭಾಷಾ ಮಾಧ್ಯಮದ ಶಾಲೆಯಲ್ಲಿ ಓದಿದರೆ ಮಾತ್ರ ಜೀವನದಲ್ಲಿ ಯಶಸ್ಸನ್ನು ಕಾಣುತ್ತಾನೆ. ಈ ಹಂಬಲದಿಂದಾಗಿ ಆ ಮಗುವನ್ನು ಅವನ ತಂದೆ ತಾಯಂದಿರು ಆ ದುಬಾರಿ ಶಾಲೆಗೆ ತುಂಬಾ ಕಷ್ಟಗಳ ನಂತರ ಕಳುಹಿಸುತ್ತಾರೆ. ಆದರೆ, ಆ ಮಗುವಿನ ಪಾಲಿಗೆ ಆ ಹೈಫೈ ಶಾಲೆಯಲ್ಲಿ ಕಷ್ಟಗಳ ಸರಪಣಿಯೇ ಕಾದಿರುತ್ತದೆ.

ಅವನ ಸಹಪಾಠಿಗಳು, ಅವನಿಗೆ ಆಂಗ್ಲ ಭಾಷೆ ಬಾರದನ್ನು ನೋಡಿ, ಅವನನ್ನು ಹೀಯಾಳಿಸತೊಡಗುತ್ತಾರೆ (ನಾನು ಕೂಡ ಶಾಲೆಯಲ್ಲಿ ಓದುತ್ತಿರುವಾಗ ಕನ್ನಡ ಮಾಧ್ಯಮದ ಮಕ್ಕಳನ್ನು ನೋಡಿ ಅವರು ನನಗಿಂತ ಕೆಳ ಮಟ್ಟದವರು ಎಂದು ಭಾವಿಸುತ್ತಿದ್ದೆ.) ಸ್ವಲ್ಪ ಸಮಯದ ನಂತರ, ಆ ಚಲನಚಿತ್ರದಲ್ಲಿ, ಎಲ್ಲ ಮಕ್ಕಳಿಗೆ ಅವರ ತಪ್ಪಿನ ಅರಿವಾಗಿ, ಅವನ ಜೊತೆ ಸ್ನೇಹವನ್ನು ಬೆಳೆಸುತ್ತಾರೆ. ಈ ಸಂದರ್ಭದಲ್ಲಿ, ಈ ಹಳ್ಳಿ ಪೋರ, ಇತರೆ ಶಹರಗಳಲ್ಲೇ ಹುಟ್ಟಿ ಬೆಳೆದ ಮಕ್ಕಳಿಗೆ, ಹಳ್ಳಿಯ ಜನಪ್ರಿಯ ಒಗಟುಗಳು, ಆಟಗಳು, ನಾಟ್ಯಗಳು, ಎಲ್ಲವನ್ನು ಹೇಳಿಕೊಡುತ್ತಾನೆ.

ಈ ಹಳ್ಳಿ ಪೋರನ ಪ್ರಭಾವ ಶಹರದ ಮಕ್ಕಳ ಮೇಲೆ ಎಷ್ಟು ಬೀರುತ್ತದೆಂದರೆ, ಅವರು, ತಮ್ಮ ಆಯ್ಕೆ ಭಾಷೆಯಾದ ಫ್ರೆಂಚ್ಅನ್ನು ತಮ್ಮ ಪೋಷಕರಿಗೆ ತಿಳಿಸದೇ ಬದಲಿಸಿ, ಅವನ ಸಂಗಡ ಪಂಜಾಬಿ ಭಾಷೆಯನ್ನು ಕಲಿಯಲು ಆರಂಭಿಸುತ್ತಾರೆ. ಆ ಹುಡುಗನ ಜೊತೆಗೆ ಅವನ ಹಳ್ಳಿಯ ಕೊಳಕ್ಕೆ ಹೋಗಿ, ಈಜಾಡುತ್ತಾರೆ.

ಇದೆಲ್ಲ ಶಹರದ ಮಕ್ಕಳ ಪೋಷಕರಿಗೆ ಗೊತ್ತಾದಾಗ, ಅವರ ಸಿಟ್ಟು ಹಾಗು ಅಸೂಯೆ ನೆತ್ತಿಗೇರುತ್ತದೆ. ಅವರ ಪ್ರಕಾರ, ಈ ಹಳ್ಳಿ ಹುಡುಗ ಅವರ ಮಕ್ಕಳ ಹೈಫೈ ಜೀವನಶೈಲಿಯ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಅವರು ಶಾಲಾ ವ್ಯವಸ್ಥಾಪಕರಿಗೆ, ಆ ಹಳ್ಳಿ ಹುಡುಗನನ್ನು ಶಾಲೆಯಿಂದ ಹೊರಹಾಕಿ ಎಂದು ಒತ್ತಾಯಿಸುತ್ತಾರೆ.

ಈ ಸಂದರ್ಭದಲ್ಲಿ, ಆ ಹುಡುಗನ ಪೋಷಕರು ಶಾಲೆಗೆ ಬಂದು, ಎಲ್ಲರಲ್ಲಿ ಪಂಜಾಬಿ ಹಾಗು ಆಂಗ್ಲ ಭಾಷೆಗಳನ್ನು ಒಟ್ಟಿಗೆ ಮಕ್ಕಳು ಕಲಿತರೆ, ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬಹುದು ಎಂದು ವಿನಂತಿಸಿಕೊಳ್ಳುತ್ತಾರೆ. ಚಲನಚಿತ್ರದ ಅಂತ್ಯದಲ್ಲಿ, ಆ ಹೈಫೈ ಅಂತಾರಾಷ್ಟ್ರೀಯ ಶಾಲೆಯಲ್ಲಿ ಪಂಜಾಬಿ ಭಾಷೆಯನ್ನು ಆಯ್ಕೆ ಭಾಷೆಯಿಂದ, ಕಡ್ಡಾಯ ಭಾಷೆಯನ್ನಾಗಿ ಶಾಲಾ ಪ್ರಾಂಶುಪಾಲರು ಪರಿವರ್ತಿಸುತ್ತಾರೆ.

ಈ ಚಲನಚಿತ್ರವು, ನಮ್ಮ ಕರ್ನಾಟಕದ ಸಂದರ್ಭಕ್ಕೆ, ಮತ್ತು ನನ್ನ ಜೀವನಕ್ಕೆ, ತುಂಬಾ ಪ್ರಸಕ್ತ ಎಂದು ನನಗೆ ಅನ್ನಿಸಿತು. ಶಹರದೆಲ್ಲೆ ಹುಟ್ಟಿ ಬೆಳೆದ ನನಗೆ, ಕನ್ನಡ ಭಾಷೆಯ ಜ್ಞಾನ ಕೇವಲ ನಾನು ಕಲಿತ ಶಾಲೆಗಳಿಂದ, ಮನೆಯಲ್ಲಿ ಮಾತನಾಡುವುದರಿಂದ, ಹಾಗೂ ಸಂಗೀತ ಕಲಿಕೆಯಿಂದ ಬಂದಿದೆ. ಕನ್ನಡ ಭಾಷೆಯ ಸಾಹಿತ್ಯದ ಜ್ಞಾನ ನನಗೆ ಅಷ್ಟಿಲ್ಲ. ನನ್ನ ಜೀವನದ ಪ್ರಶಸ್ತ ಘಟ್ಟದಲ್ಲಿ ನನಗೆ ಈ ನನ್ನ ಸ್ಥಿತಿಯು ಚಿಂತಾತ್ಮಕ ಎಂದೆನಿಸುತ್ತದೆ. ಯಾಕೆಂದರೆ, ನಾನು ಯೋಚಿಸುವುದು ಆಂಗ್ಲ ಭಾಷೆಯಲ್ಲಿ. ನನ್ನ ಮಾತೃ ಭಾಷೆಯಾದ ಕನ್ನಡದಲ್ಲಲ್ಲ.

ಈ ಲೇಖನ ಬರೆಯುವಾಗಲೂ ಕೂಡ ನಾನು ಆಂಗ್ಲ ಭಾಷೆಯಿಂದ ಹಲವಾರು ಶಬ್ದಗಳನ್ನು ಕನ್ನಡಕ್ಕೆ ಗೂಗಲ್ ಸಹಾಯದಿಂದ ಅನುವಾದ ಮಾಡಿ ಬರೆಯುತ್ತಿದ್ದೇನೆ. ನಾನು ಆಂಗ್ಲ ಭಾಷೆಯಲ್ಲಿ ಕನ್ನಡಕ್ಕಿಂತ ತ್ವರಿತವಾಗಿ ಯೋಚಿಸಬಲ್ಲೆ. ಇದೆಲ್ಲ ನನ್ನ ವ್ಯಾಸಂಗ ಹಾಗು ಉದ್ಯೋಗಕ್ಕೆ ಪ್ರಯೋಜನಕಾರಿ ಆಗಿರಬಹುದು. ಆದರೆ, ನನ್ನ ವಯಕ್ತಿಕ ವ್ಯಕ್ತಿತ್ವಕ್ಕೆ ಇದು ದುಷ್ಪರಿಣಾಮ ಬೀರುತ್ತಿದೆ ಎಂದು ನನಗೆ ಅನಿಸುತ್ತಿದೆ. ಯಾಕೆಂದರೆ, ಬೇರಿಲ್ಲದ ಮರವು ಎಷ್ಟು ಎತ್ತರಕ್ಕೆ ಬೆಳೆಯಬಹುದು? ಇಡೀ ಜಗತ್ತೇ ನನ್ನ ಬೇರಾಗಲು ಸಾಧ್ಯವೇ? ಈ ಪ್ರಶ್ನೆಗೆ ಸಮಂಜಸ ಉತ್ತರ ನನ್ನ ಹತ್ತಿರ ಪ್ರಸ್ತುತದಲ್ಲಿ ಇಲ್ಲ.

ಈ ಸಮಸ್ಯೆಯು ನನ್ನ ವಯಕ್ತಿಕ ಸಮಸ್ಯೆ ಅಲ್ಲ. ಕರ್ನಾಟಕದ ಶಹರದಲ್ಲಿ ವಾಸಮಾಡುತ್ತಿದ್ದ ಎಷ್ಟು ಪೋಷಕರು ಕನ್ನಡವನ್ನು ಪೂರ್ವಭಾವಿಯಾಗಿ ತಮ್ಮ ಮಕ್ಕಳಿಗೆ ಕಲಿಸಲು ಇಷ್ಟಪಡುತ್ತಾರೆ? ಆಂಗ್ಲ ಭಾಷಾ ಶಾಲೆಗಳಲ್ಲಿ ಓದಿದ ಎಷ್ಟು ಮಕ್ಕಳಿಗೆ ಕನ್ನಡದಲ್ಲಿ ಸರಳವಾಗಿ ಓದಲು, ಬರೆಯಲು ಬರುತ್ತದೆ? ಎಷ್ಟು ವೈಜ್ಞಾನಿಕ ಹಾಗು ಆಧುನಿಕ ಆವಿಷ್ಕಾರಗಳ ಮತ್ತು ಪ್ರಗತಿಗಳ ಅನುವಾದ ಕನ್ನಡದಲ್ಲಿ ಮಾಡಲಾಗುತ್ತದೆ? ಅನುವಾದವಷ್ಟೇ ಅಲ್ಲ. ಕನ್ನಡ ಭಾಷೆಯಲ್ಲಿ ಆಧುನಿಕ ಜಗತ್ತಿನ ಎಲ್ಲ ವಸ್ತುಗಳಿಗೆ ಹೆಸರುಗಳಿವೆಯೇ?

ಒಂದು ಉದಾಹರಣೆ. ನಾನು ದುಬೈ, ಇಂಡೋನೇಷ್ಯಾ ಹಾಗು ಥೈಲ್ಯಾಂಡ್ ಗೆ ಹೋದಾಗ, ಅಲ್ಲಿ ಕಂಡಿದ್ದೇನೆಂದರೆ, ಅಲ್ಲಿಯ ಜನರು, ಅತ್ಯಂತ ಸಣ್ಣ ಶಬ್ದವನ್ನೂ ಸಹ, ತಮ್ಮ ಭಾಷೆಯಲ್ಲೇ ಮೊದಲು ಉಪಯೋಗಿಸುತ್ತಾರೆ. ಇಂಡೋನೇಷ್ಯಾ ದ ಒಂದು ಮಾಲ್ ನಲ್ಲಿ ನನಗೆ ‘ಎಕ್ಸಿಟ್’ ಬೋರ್ಡ್ ಕಾಣದೆ ನಾನು ಕಂಗಾಲಾಗಿದ್ದೆ!

ನಾನು ಭಾಷಾ ಮತಾಂಧತೆಯ ಬಗ್ಗೆ ಮಾತನಾಡುತ್ತಿಲ್ಲ. ಆದರೆ, ಈ ಪ್ರಶ್ನೆಯನ್ನು ಕೇಳುತ್ತಿದ್ದೇನೆ: ಈಗಿನ ಆಂಗ್ಲ ಭಾಷಾ ಮಾಧ್ಯಮದ ಶಾಲೆಗಳಲ್ಲಿ ಕನ್ನಡವನ್ನು ಆಂಗ್ಲ ಭಾಷೆಯೊಡನೆ ಸಮಾನತೆಯಿಂದ ನೋಡಲಾಗುತ್ತದೆಯೇ?

ನನ್ನ ಅನುಭವದ ಪ್ರಕಾರ ಇದಾಗುತ್ತಿಲ್ಲ. ಕೆಲವು ಘಟನೆಗಳು ಉದಾಹರಣೆಗಳಾಗಿ ನೆನಪಿಗೆ ಬರುತ್ತಿವೆ. ನಾನು ಓದಿದ ಆಂಗ್ಲ ಮಾಧ್ಯಮ ಶಾಲೆಗಲ್ಲಿ ಕನ್ನಡದಲ್ಲಿ ಮಾತನಾಡುವುದು ನಿಷಿದ್ಧವಾಗಿತ್ತು. ಯಾರಾದರೂ ಕನ್ನಡದಲ್ಲಿ ಮಾತಾಡಿದರೆ, ಅವರಿಗೆ ಶಿಕ್ಷೆಯಾಗುತ್ತಿತ್ತು. ಇನ್ನು, ನಾನು ಎಂಟನೇ ತರಗತಿಯಲ್ಲಿ ಓದುತ್ತಿದ್ದಾಗ, ನನ್ನ ಕನ್ನಡ ಶಿಕ್ಷಕ ನಮ್ಮ ಶಿಕ್ಷಾ ಕೊಠಡಿಯಲ್ಲಿ ಹೀಗೆ ಹೇಳಿದರು: ‘ನೀವು ಯಾರೂ ಹತ್ತನೇ ತರಗತಿಯ ನಂತರ, ಕನ್ನಡ ಪುಸ್ತಕಗಳನ್ನು ಓದುವುದಿಲ್ಲ. ಕನ್ನಡ ಭಾಷೆಯನ್ನು ಆಯ್ದುಕೊಳ್ಳುವುದಿಲ್ಲ. ಅದು ನನಗೆ ಗೊತ್ತಿದೆ. ಈಗಲಾದರೂ ತರಗತಿಯಲ್ಲಿ ಲಕ್ಶ್ಯವಹಿಸಿ.’ ಬೇರೆಯವರ ಬಗ್ಗೆ ನನಗೆ ಗೊತ್ತಿಲ್ಲ, ಆದರೆ, ಅವರ ಈ ಮಾತುಗಳು ನನ್ನ ಜೀವನದಲ್ಲಂತೂ ನಿಜವಾಯಿತು.

ನಾನು ಪ್ರಿ-ಯೂನಿವರ್ಸಿಟಿ ಕಾಲೇಜಿನಲ್ಲಿ ಹಿಂದಿ ಭಾಷೆಯನ್ನು ಆಯ್ಕೆ ಮಾಡಿಕೊಂಡೆ. ನಾನು ಕೊಟ್ಟ ಕಾರಣ – ಭವಿಷ್ಯದಲ್ಲಿ, ರಾಷ್ಟ್ರ ಮಟ್ಟದ ವ್ಯಾಸಂಗ ಹಾಗು ಉದ್ಯೋಗಾವಕಾಶಗಳಿಗೆ ಹಿಂದಿ ಸಹಾಯವಾಗುತ್ತದೆ.
ತದನಂತರ, ನಾನು ಕಾನೂನು ಕಲಿಯುವಾಗ, ನನ್ನ ವಿಶ್ವವಿದ್ಯಾಲಯದಲ್ಲಿ ಒಂದು ನಿಯಮ ನನಗೆ ಮತ್ತು ಇತರೆ ಆಂಗ್ಲ ಭಾಷಾ ಶಾಲೆಗಳಲ್ಲಿ ಓದಿದ್ದ ನನ್ನ ಸಹಪಾಠಿಗಳಿಗೆ ಕಂಟಕವೆಂದು ಕಾಣಿಸಿತು. ಆ ನಿಯಮವೇನೆಂದರೆ, ‘ಕರ್ನಾಟಕದಲ್ಲಿ ಹತ್ತನೇ ತರಗತಿಯವರೆಗೆ ಓದಿದ ಎಲ್ಲ ವಿದ್ಯಾರ್ಥಿಗಳಿಗೆ, ಕಾನೂನು ಕಲಿಕೆಯಲ್ಲಿ ಕನ್ನಡ ಓದುವುದು ಕಡ್ಡಾಯ.’ ಕೆಲವೊಬ್ಬರು, ತಮ್ಮ ಶಾಲೆಗಳಲ್ಲಿ ಫ್ರೆಂಚ್ ಭಾಷೆಯನ್ನು ಕಲಿತಿದ್ದರು. ಅವರುಗಳು, ನಮ್ಮ ಕಾನೂನು ವಿಶ್ವವಿದ್ಯಾಲದಲ್ಲಿ ಫ್ರೆಂಚ್ ಆಯ್ಕೆ ಭಾಷೆಯಾಗಿ ಯಾಕೆ ಲಭ್ಯವಿಲ್ಲ ಎಂದು ಗೋಗರೆದಿದ್ದರು.

ಈ ರೀತಿ, ಆಂಗ್ಲ ಭಾಷಾ ಶಾಲೆಗಳಲ್ಲಿ ಓದಿದ ಬಹಳಷ್ಟು ಜನರಿಗೆ, ಕನ್ನಡ ಒಂದು ಕಿರಿಕಿರಿಯ ವಸ್ತು. ಈ ತರಹದ ಬಹಳಷ್ಟು ಜನರಿಗೆ ಕನ್ನಡ ಎಂದರೆ ‘ಕೆಳ ವರ್ಗದವರು ಮಾತನಾಡುವ’ ಭಾಷೆಯೇ ಹೊರತು, ಒಂದು ಅನನ್ಯ ಸಂಸ್ಕೃತಿ, ಸಾಹಿತ್ಯ ಹಾಗು ಪಾಕಪದ್ಧತಿಯ ಪ್ರತಿನಿಧಿ ಅಲ್ಲ. ಈ ಪರಿಸ್ಥಿತಿಯನ್ನು ಬದಲಾಯಿಸಲು ನಾವು ಏನು ಮಾಡಬಹುದು? ಇದು ನಮ್ಮ ಮನೋವೃತ್ತಿಯ ಸಮಸ್ಯೆ. ಕನ್ನಡವೆಂದರೆ ಅಸಹ್ಯ ಪಡುವ ದುರಭ್ಯಾಸದ ಸಮಸ್ಯೆ. ನಮ್ಮ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡದಲ್ಲಿ ಸಂಪನ್ಮೂಲಗಳಿಲ್ಲದಿರುವ ಸಮಸ್ಯೆ.

ಆದ್ದರಿಂದ, ಚಿಕ್ಕಂದಿನಿಂದಲೇ ಕನ್ನಡದ ಶ್ರೀಮಂತ ಪರಂಪರೆಯನ್ನು ಮಕ್ಕಳಿಗೆ ಪರಿಚಯಿಸಿದರೆ, ನಮ್ಮ ಭಾಷೆ ಇತರೆ ಭಾಷೆಗಳಂತೆ ಸಾಯುವ ಸ್ಥಿತಿಯಲ್ಲಿ ಇರುವುದಿಲ್ಲ ಎಂದು ನನ್ನ ಅನಿಸಿಕೆ. ಚಿಕ್ಕಂದಿನಿಂದಲೇ ನಮ್ಮ ಶಾಲೆಗಳಲ್ಲಿ ಕನ್ನಡ ಸಾಹಿತ್ಯದ ಉನ್ನತ ಕೃತಿಗಳನ್ನು, ಕಾದಂಬರಿಗಳನ್ನು, ಸಣ್ಣ ಕಥೆಗಳನ್ನು ಮಕ್ಕಳಿಗೆ ಪರಿಚಯಿಸಿದರೆ, ಅವರ ಕನ್ನಡದ ಪ್ರತಿ ಪ್ರೀತಿ ಹೆಚ್ಚುತ್ತದೆ. ಹಾಗು, ಶಾಲೆಗಳು, ಕನ್ನಡದಲ್ಲಿ ಮಾತನಾಡಿದರೆ ದಂಡ ಹಾಕುವುದು, ಅಥವಾ, ಶಿಕ್ಷಿಸುವುದು, ನಿಲ್ಲಿಸಬೇಕು. ಇಲ್ಲದಿದ್ದರೆ, ಆಂಗ್ಲ ಭಾಷೆಯಲ್ಲಿ ಕಲಿತಿದ್ದ ಎಲ್ಲ ಕನ್ನಡಿಗರು, ಬರೀ ಹೆಸರಿಗೆ ಮಾತ್ರ ಕನ್ನಡಿಗರಾಗಿ ಉಳಿಯುತ್ತಾರೆ

‍ಲೇಖಕರು Avadhi

June 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: